Field Report: ಆನಂದಯ್ಯನ ಕೊರೊನಾ ಔಷಧ ಪರಿಣಾಮ ಬೀರುವುದೇ? ಔಷಧ ಸೇವಿಸಿದ ಕೊಪ್ಪಳದ ಜನರು ಹೇಳುವುದೇನು?
Anandaiah Corona Medicine Effects: ಆನೆಗೊಂದಿಯಲ್ಲಿ ಸುಮಾರು 100 ಕ್ಕೂ ಹೆಚ್ಚು ಜನ ಔಷಧಿ ಸೇವನೆ ಮಾಡಿಲ್ಲ. ಬಹುತೇಕ ಎಲ್ಲರಿಗೂ ಭಯ ಇದೆ. ಜೊತೆಗೆ ದೇಹದ ಮೇಲೆ ಏನಾದ್ರೂ ಪರಿಣಾಮ ಆದರೆ.. ಎಂಬ ಆತಂಕವೂ ಇದೆ. ಹೀಗಾಗಿ ಔಷಧಿ ತೆಗೆದುಕೊಂಡವರ ಸೇವನೆ ಮಾಡಿಲ್ಲ. ಎಲ್ಲರಿಗೂ ವ್ಯಾಕ್ಸಿನ್ ಮೇಲೆ ನಂಬಿಕೆ ಇರುವಷ್ಟು ನಂಬಿಕೆ ಆನಂದಯ್ಯನ ಔಷಧದ ಮೇಲಿಲ್ಲ.
ಕೊಪ್ಪಳ: ಆನಂದಯ್ಯ ಆಂಧ್ರದಲ್ಲಿ ಸಾಕಷ್ಟು ಹೆಸರು ಮಾಡಿದ ವ್ಯಕ್ತಿ. ಸರತಿ ಸಾಲಲ್ಲಿ ನಿಂತು ಆನಂದಯ್ಯನ ಕೊರೊನಾ ಆಯುರ್ವೇದ ಔಷಧಿಯನ್ನು ಜನರು ಕೊಂಡೊಯ್ದಿದ್ದರು. ಆಂಧ್ರದ ಕೃಷ್ಣ ಪಟ್ಟಣದ ಆನಂದಯ್ಯನ ಆಯುರ್ವೇದ ಔಷಧಕ್ಕೆ ಭಾರೀ ಬೇಡಿಕೆ ಸೃಷ್ಟಿಯಾಗಿತ್ತು. ಇದನ್ನು ಕಂಡು ಅಲ್ಲಿನ ಸರ್ಕಾರ ಕೊರೊನಾ ಔಷಧಿ ವಿತರಣೆಗೆ ಗ್ರೀನ್ ಸಿಗ್ನಲ್ ನೀಡಿತ್ತು.ಕೊರೊನಾ ಕಾಲದಲ್ಲಿ ಅದೆಷ್ಟೋ ಜನ ಪ್ರಾಣ ಉಳಿದರೆ ಸಾಕು ಎಂಬ ಕಾರಣಕ್ಕೆ ಆನಂದಯ್ಯನ ಔಷಧಿಗೆ ಮುಗಿಬಿದ್ದಿದ್ದರು. ಯಾವಾಗ ನೆರೆಯ ಆಂಧ್ರದಲ್ಲಿ ಆನಂದಯ್ಯನ ಔಷಧಿಗೆ ಬೇಡಿಕೆ ಹೆಚ್ಚಾಯಿತೋ ಆನಂದಯ್ಯನ ಔಷಧಿ ಕರ್ನಾಟಕಕ್ಕೂ ಲಗ್ಗೆ ಇಟ್ಟಿತ್ತು. ಹಅಗಾದರೆ ಈ ಔಷಧದ ಮೇಲೆ ಕರ್ನಾಟಕದ ಜನರ ನಂಬಿಕೆ ಹೇಗಿದೆ? ಅಷ್ಟಕ್ಕೂ ಆನಂದಯ್ಯನ ಔಷಧ (Anandaiah Corona Medicine) ಎಷ್ಟು ಪರಿಣಾಮ ಬೀರಿದೆ? ಈ ಕುರಿತು ಔಷಧ ಸೇವಿಸಿದವರನ್ನೇ ಮಾತನಾಡಿಸಿದೆ ಟಿವಿ 9 ಕನ್ನಡ ಡಿಜಿಟಲ್. ಈ ಕುರಿತು ನಮ್ಮ ಕೊಪ್ಪಳದ ವರದಿಗಾರ ಶಿವಕುಮಾರ್ ಪತ್ತಾರ್ ಬರೆದ ವಿಶೇಷ ವರದಿ ಇಲ್ಲಿದೆ.
ಗಡಿ ಭಾಗಗಳಾದ ಬಳ್ಳಾರಿ ಮತ್ತು ಕೊಪ್ಪಳದಲ್ಲಿ ಆನಂದಯ್ಯನ ಔಷಧಿ ವಿತರಣೆಯಾಗಿತ್ತು. ಹಂಪಿ ಮೂಲದ ಗೋವಿಂದಾನಂದ ಸರಸ್ವತಿ ಬಳ್ಳಾರಿಯ ಹಂಪಿ ಹಾಗೂ ಕೊಪ್ಪಳದ ಆನೆಗೊಂದಿ ಭಾಗದಲ್ಲಿ ಆನಂದಯ್ಯನ ಔಷದಿ ವಿತರಣೆ ಮಾಡಿದ್ದರು. ಕಳೆದ ತಿಂಗಳು 27 ರಂದು ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗೊಂದಿ ಭಾಗದಲ್ಲಿ ಸ್ವತಃ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಸುಮಾರು 200 ಜನರಿಗೆ ಕೊರೊನಾ ಔಷಧಿ ವಿತರಣೆ ಮಾಡಿದ್ದರು. ಕರ್ನಾಟಕ ಸರ್ಕಾರ ಔಷಧಿ ವಿತರಣೆ ಮಾಡಲು ಅನುಮತಿ ಕೊಡದೆ ಇದ್ದರೂ ಗೋವಿಂದಾನಂದ ಸರಸ್ವತಿ ಔಷಧಿ ವಿತರಣೆ ಮಾಡಿದ್ದರು.
ಅಷ್ಟಕ್ಕೂ ಔಷಧಿ ತಗೆದುಕೊಂಡವರೆಷ್ಟು? ಬಿಟ್ಟವರೆಷ್ಟು? ಈ ಬಗ್ಗೆ ಟಿವಿ9 ಆನೆಗೊಂದಿ ಭಾಗದಲ್ಲಿ ಔಷಧಿ ತಗೆದುಕೊಂಡವರಲ್ಲಿ ಆದ ಬದಲಾವಣೆಗಳೇನು, ಯಾವ ಯಾವ ನಿಯಮಗಳ ಪ್ರಕಾರ ಔಷಧಿ ತೆಗೆದುಕೊಂಡವರು? ಎಷ್ಟು ಪ್ರಮಾಣದ ಔಷಧಿ ಸೇವಿಸಿದರು ಎಂಬ ಮಾಹಿತಿಯನ್ನು ಟಿವಿ9 ಕನ್ನಡ ಡಿಜಿಟಲ್ ಕಲೆ ಹಾಕಿದೆ.
ಹಂಪಿ ಬಸವ ಎಂಬ ವ್ಯಕ್ತಿಯೋರ್ವರು ಜೂನ್ 27 ರಂದು ಆನಂದಯ್ಯನ ಔಷಧಿ ಪಡೆದುಕೊಂಡಿದ್ದರು. ಆದರೆ ಕಳೆದ ಒಂದು ವಾರದಿಂದ ಆನಂದಯ್ಯನ ಔಷಧಿ ಸೇವನೆ ಮಾಡುತ್ತಿದ್ದಾರೆ. ಆನಂದಯ್ಯನ ಔಷಧಿ ಸೇವನೆಗೆ ಕೆಲವೊಂದು ಕಟ್ಟು ನಿಟ್ಟಿನ ನಿಯಮಗಳಿಗೆ. ಬೆಳಗಿನ ಜಾವ ಒಂದು ಚಾಕೊಲೇಟ್ ನಷ್ಟು ಆನಂದಯ್ಯನ ಔಷಧಿಯನ್ನು ಸೇವನೆ ಮಾಡಬೇಕು. ಸೇವನೆ ಮಾಡಿದ ನಂತರ ಮೂರು ಗಂಟೆ ಮಲಗಬಾರದು ಎಂಬ ನಿಯಮವಿದೆ. ಇದಲ್ಲದೇ ಔಷಧಿ ಸೇವನೆ ಮಾಡಿದ ಒಂದು ವಾರದ ಬಳಿಕ ಯಾವುದೇ ತರಹದ ಮಾಂಸಾಹಾರ ಸೇವನೆ ಹಾಗೂ ಮದ್ಯ ಸೇವನೆ ಮಾಡುವಂತಿಲ್ಲ. ಔಷಧಿ ವಿತರಣೆ ಮಾಡುವಾಗಲೂ ಸ್ವಾಮೀಜಿ ಇದೇ ಮಾತು ಹೇಳಿ ಔಷಧಿ ನೀಡಿದ್ದರು. ಈ ಎಲ್ಲ ನಿಯಮಗಳನ್ನು ಪಾಲಿಸಿ ಹಂಪಿ ಬಸವ ಎಂಬ ವ್ಯಕ್ತಿ ಕಳೆದ ಒಂದು ವಾರದಿಂದ ಆನಂದಯ್ಯನ ಔಷಧಿ ಸೇವನೆ ಮಾಡುತ್ತಿದ್ದಾರೆ. ಔಷಧಿ ತಗೆದುಕೊಂಡ ಬಳಿಕ ಟಿವಿ9 ನೊಂದಿಗೆ ಮಾತನಾಡಿದ ಹಂಪಿ ಬಸವ, ‘ದೇಹದಲ್ಲಿ ಅಷ್ಟೇನೂ ಬದಲಾವಣೆ ಆಗಿಲ್ಲ. ಒಂದು ವಾರದಿಂದ ಮಾಂಸಾಹಾರ ಮುಟ್ಟಿಲ್ಲ, ಔಷಧಿ ತೆಗೆದುಕೊಂಡ ಬಳಿಕ ಹೊಟ್ಟೆ ಹಸಿವಾಗುತ್ತಿದೆ. ತೀರಾ ಅಂತಹ ಬದಲಾಣೆ ಏನೂ ಆಗಿಲ್ಲ. ಆದರೆ ನಮಗೇನೋ ಒಂದು ನೆಮ್ಮದಿ ನಮ್ಮ ದೇಹದಲ್ಲಿ ಹ್ಯೂಮಿನಿಟಿ ಪವರ್ ಜಾಸ್ತಿಯಾಗಿದೆ ಎಂಬ ಅನುಭವವಾಗುತ್ತಿದೆ. ಸಾಮಾನ್ಯವಾಗಷ್ಟೇ ಅಲ್ಲ, ನಮ್ಮೂರಲ್ಲಿ ಬಹಳ ಜನ ಆನಂದಯ್ಯನ ಔಷಧಿ ಸೇವನೆ ಮಾಡಿದ್ದಾರೆ. ಜನರಲ್ಲಿ ಅಂತಹ ಬದಲಾವಣೆಯಾಗಲಿ ಅಥವಾ ಅಡ್ಡ ಪರಿಣಾಮಗಳಾಗಲಿ ಯಾವುದೂ ಆಗಿಲ್ಲ. ಇಡೀ ಆನೆಗೊಂದಿ ಗ್ರಾಮದಲ್ಲಿ ಈವರೆಗೂ ಅಂತಹ ಮಾತು ಕೇಳಿ ಬಂದಿಲ್ಲ. ಔಷಧಿ ವಿತರಣೆ ಮಾಡಿದವರೆಲ್ಲ ಸಾಮಾನ್ಯವಾಗಿ ಇದ್ದೇವೆ’ ಎಂದು ತಿಳಿಸಿದ್ದಾರೆ.
ಇವರೊಬ್ಬರೇ ಅಲ್ಲ, ಅನೇಕರು ಇನ್ನೂ ಔಷಧಿ ಸೇವನೆ ಮಾಡಿಲ್ಲ ಆನೆಗೊಂದಿಯಲ್ಲಿ ಸುಮಾರು 100 ಕ್ಕೂ ಹೆಚ್ಚು ಜನ ಔಷಧಿ ಸೇವನೆ ಮಾಡಿಲ್ಲ. ಬಹುತೇಕ ಎಲ್ಲರಿಗೂ ಭಯ ಇದೆ. ಜೊತೆಗೆ ದೇಹದ ಮೇಲೆ ಏನಾದ್ರೂ ಪರಿಣಾಮ ಆದರೆ.. ಎಂಬ ಆತಂಕವೂ ಇದೆ. ಹೀಗಾಗಿ ಔಷಧಿ ತೆಗೆದುಕೊಂಡವರ ಸೇವನೆ ಮಾಡಿಲ್ಲ. ಎಲ್ಲರಿಗೂ ವ್ಯಾಕ್ಸಿನ್ ಮೇಲೆ ನಂಬಿಕೆ ಇರುವಷ್ಟು ನಂಬಿಕೆ ಆನಂದಯ್ಯನ ಔಷಧದ ಮೇಲಿಲ್ಲ. ಇದೇ ಕಾರಣಕ್ಕೆ ಆನಂದಯ್ಯನ ಔಷಧಿ ಮನೆಯ ಮೂಲೆ ಸೇರಿದೆ. ಮೊದಲು ಹುರುಪಿನಿಂದ ಔಷಧಿ ತಗೆದುಕೊಂಡ ಜನ ಇದೀಗ ಹೆದರುತ್ತಿದ್ದಾರೆ. ಔಷಧಿ ಕೊಡುವಾಗಲೇ ಅನುಸರಿಸಲು ಹೇಳಿದ್ದ ಕೆಲ ನಿಯಮಗಳನ್ನು ಪಾಲಿಸಲು ಕೆಲವರು ಹಿಂದೇಟು ಹಾಕಿದ್ದಾರೆ ಎಂಬ ಮಾಹಿತಿಯೂ ಇದೆ.
ಆನೆಗೊಂದಿಯಲ್ಲಿ ಸುಮಾರು 200 ಜನರಿಗೆ ಔಷಧಿ ವಿತರಣೆ ಮಾಡಲಾಗಿತ್ತು. ಇಲ್ಲಿ ಕಳೆದ ತಿಂಗಳು 27 ರಂದು 200 ಕ್ಕೂ ಅಧಿಕ ಜನ ಅನಂದಯ್ಯನ ಔಷದಿ ತಗೆದುಕೊಂಡಿದ್ದಾರೆ. ಆದರೆ ಇದುವರೆಗೂ ಸೇವನೆ ಮಾಡಿದವರ ಸಂಖ್ಯೆ ಕಡಿಮೆ. ಆನೆಗೊಂದಿಯಲ್ಲಿನ ಜನ ಔಷಧಿ ತಗೆದುಕೊಂಡಿದ್ದರೂ, ಔಷಧಿ ಸೇವನೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಸುಮಾರು 100 ಕ್ಕೂ ಹೆಚ್ಚು ಜನ ಇದುವರೆಗೂ ಔಷಧಿ ಸೇವನೆ ಮಾಡಿಲ್ಲ. ಮನೆಯಲ್ಲಿ ಔಷಧಿ ಇದ್ದರೂ ಸೇವನೆ ಮಾಡೋಕೆ ಹಿಂದೇಟು ಹಾಕುತ್ತಿದ್ದಾರೆ.
ವ್ಯಾಕ್ಸಿನ್ ಮೇಲೆ ನಂಬಿಕೆ ಇದೆ, ಆದರೆ ಔಷಧಿ ಮೇಲೆ ಇಲ್ಲ ಆನೆಗೊಂದಿಯ ಮನೋಹರ ಎಂಬುವವರಿಗೆ ಕೊರೊನಾ ಎರಡನೇ ಅಲೆ ಆರಂಭದಲ್ಲಿ ಪಾಸಿಟಿವ್ ಆಗಿತ್ತು. ಮನೋಹರ ಮನೆಯಲ್ಲಿ ಕ್ವಾರಂಟೈನ್ ಆಗಿದ್ದರು. ಮನೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖವಾದ ಬಳಿಕ ಆನೆಗೊಂದಿಯಲ್ಲಿ ಆನಂದಯ್ಯನ ಔಷಧಿ ವಿತರಣೆ ಮಾಡಿದ್ದರು. ಮನೋಹರ ಕೂಡಾ ಆನಂದಯ್ಯನ ಔಷಧಿ ತಗೆದುಕೊಂಡಿದ್ದು, ಇದುವರೆಗೂ ಔಷಧಿ ಸೇವನೆ ಮಾಡಿಲ್ಲ. ಈ ಬಗ್ಗೆ ಟಿವಿ9 ನೊಂದಿಗೆ ಮಾತಾನಾಡಿದ ಅವರು ನನಗೆ ಔಷಧಿ ಮೇಲೆ ನಂಬಿಕೆ ಇಲ್ಲ, ಬದಲಿಗೆ ವ್ಯಾಕ್ಸಿನ್ ಮೇಲೆ ನಂಬಿಕೆ ಇದೆ. ಹೀಗಾಗಿ ನಾನು ಔಷಧಿ ಸೇವನೆ ಮಾಡಿಲ್ಲ. ಇದುವರೆಗೂ ಮನೆಯಲ್ಲಿ ಔಷಧಿ ಇದೆ, ಆದರೆ ಔಷಧಿ ಸೇವನೆಗೆ ಭಯ ಆಗುತ್ತಿದೆ. ಹೀಗಾಗಿ ನಾನು ಲಸಿಕೆ ತೆಗೆದುಕೊಳ್ಳುತ್ತೇನೆ’ ಎಂದು ಹೇಳುತ್ತಾರೆ. ಈಗಲೆ ನಾನು ಕೊರೊನಾ ಗೆದ್ದು ಬಂದಿದ್ದೇನೆ, ಮತ್ತೆ ಅಡ್ಡ ಪರಿಣಾಮ ಆದರೆ ಏನು ಮಾಡುವುದೆಂದು ಔಷಧಿ ಸೇವನೆ ಮಾಡೋದನ್ನ ಬಿಟ್ಟಿದ್ದೇನೆ’ ಎಂದು ತಿಳಿಸುತ್ತಾರೆ. ಹೀಗಾಗಿ ಕೊಪ್ಪಳ ಭಾಗದಲ್ಲಿ ಆನಂದಯ್ಯನ ಔಷಧಿ ಕೇವಲ ವಿತರಣೆ ಆಗಿದ್ದು ಮಾತ್ರ ಸುದ್ದಿಯಾಗಿದ್ದು ಬಿಟ್ಟರೆ ಅದರ ಪರಿಣಾಮ ಅಷ್ಟು ಸುದ್ದಿಯಾಗಲೇ ಇಲ್ಲ.
ವಿಶೇಷ ವರದಿ: ಶಿವಕುಮಾರ್ ಪತ್ತಾರ್
ಇದನ್ನೂ ಓದಿ:
ಕೊರೊನಾ ವೈರಸ್ ವಿರುದ್ಧ ನಾಟಿ ಔಷಧ ನೀಡಲು ನೆಲ್ಲೂರು ಆನಂದಯ್ಯಗೆ ಆಂಧ್ರ ಸರ್ಕಾರ ಗ್ರೀನ್ ಸಿಗ್ನಲ್
ಆನಂದಯ್ಯ ನಾಟಿ ಔಷಧ ತಯಾರಿಕೆ ಇಂದಿನಿಂದ ಮತ್ತೆ ಆರಂಭ; ಆನ್ಲೈನ್ ಮೂಲಕವೂ ಔಷಧ ವಿತರಣೆ
(Krishnapatnam Anandaiah Corona Medicine Effects What do drug users says here is the special report of Koppal)
Published On - 6:29 pm, Sat, 10 July 21