Art With Heart : ಆನ್​ಲೈನ್​ ತರಗತಿಗಳಿಗೆಂದೇ ವೈಜ್ಞಾನಿಕ ರಂಗಪಠ್ಯ ರೂಪಿಸಿದ ‘ರಂಗರಥ‘

Theatre : ಒಳ್ಳೆಯ ವ್ಯಕ್ತಿ ಮಾತ್ರ ಒಳ್ಳೆಯ ಕಲಾವಿದನಾಗಬಲ್ಲ, ಒಬ್ಬ ಸೃಜನಶೀಲ ನಟನಾಗಬಲ್ಲ. ಅನುಮಾನಗಳು, ರಾಗದ್ವೇಷಗಳು, ಅಸಹನೆ, ಅಸಹಿಷ್ಣುತೆ, ಅಹಂಕಾರ, ಮತಾಂಧತೆ ಇಂತಹ ಋಣಾತ್ಮಕ ಭಾವನೆಗಳನ್ನು ಮೈಮನದೊಳಗೆ ಪೋಷಿಸುವ ವ್ಯಕ್ತಿ ಎಂದೂ ಒಳ್ಳೆಯ ಕಲಾವಿದನಾಗಲಾರ. ನಮ್ಮ ರಂಗರಥದ ಗುರಿಯೇ ಇಂತಹ ವಿನಾಶಕಾರಿ ಮನೋಭಾವನೆಗಳನ್ನು ನಿರ್ಮೂಲನಗೊಳಿಸುವುದು. ಇದು ಸಾಧ್ಯವಾದರೆ ಮಾತ್ರ ‘ವೈಜ್ಞಾನಿಕ ರಂಗಶಿಕ್ಷಣ’ ಸಾರ್ಥಕವಾಗುತ್ತದೆ.’ ಆಸೀಫ್ ಕ್ಷತ್ರಿಯ

Art With Heart : ಆನ್​ಲೈನ್​ ತರಗತಿಗಳಿಗೆಂದೇ ವೈಜ್ಞಾನಿಕ ರಂಗಪಠ್ಯ ರೂಪಿಸಿದ ‘ರಂಗರಥ‘
‘ರಂಗರಥ’ದ ರೂವಾರಿಗಳಾದ ಆಸೀಫ್ ಕ್ಷತ್ರಿಯ, ಶ್ವೇತಾ ಶ್ರೀನಿವಾಸ್
Follow us
|

Updated on:Jul 11, 2021 | 3:40 PM

ಟಿವಿ9 ಕನ್ನಡ ಡಿಜಿಟಲ್ : ‘ಆರ್ಟ್ ವಿಥ್ ಹಾರ್ಟ್ (Art With Heart) ಪ್ರತೀ ಭಾನುವಾರ ಪ್ರಕಟವಾಗುವ ಈ ಸರಣಿಯಲ್ಲಿ ಆನ್​ಲೈನ್​ ಮೂಲಕ ಪ್ರದರ್ಶನ ಕಲೆಗಳನ್ನು ಹೇಳಿಕೊಡುತ್ತಿರುವ ವಿವಿಧ ಕಲಾಕ್ಷೇತ್ರಗಳ ಪರಿಣತರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಮಕ್ಕಳ ರಂಗಭೂಮಿಯ ಮೂಲಕ ಈ ಸರಣಿ ಪ್ರವೇಶ. ರಂಗಭೂಮಿಯಂಥ ‘ಅಪ್ಪಟ’ ಪ್ರದರ್ಶನ ಕಲೆಯನ್ನು ಆನ್​ಲೈನ್​ನಲ್ಲಿ, ಅದರಲ್ಲೂ ಮಕ್ಕಳಿಗಾಗಿ ಕಲಿಸುವುದು ಸುಲಭವೆ? ಎದುರಾದ ಸವಾಲುಗಳಿಗೆ ನಮ್ಮ ರಂಗನಿರ್ದೇಶಕರು ‘ಟ್ರೆಂಡ್ ಮತ್ತು ತಂತ್ರಜ್ಞಾನ’ಕ್ಕನುಸಾರವಾಗಿ ಯಾವ ರೀತಿ ರಂಗಪಠ್ಯವನ್ನು ಯೋಜಿಸಿಕೊಳ್ಳುತ್ತಿದ್ದಾರೆ. ಈ ದುರಿತ ಕಾಲದಲ್ಲಿ ಕೌಟುಂಬಿಕ, ಸಾಮಾಜಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮಕ್ಕಳಿಗಾಗಿ ಕಲೆಯ ಅಂಶಗಳನ್ನು ಅರುಹುವಲ್ಲಿ ಏನೆಲ್ಲ ಪ್ರಯತ್ನ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಿದ್ದಾರೆ; ಫಲಾಫಲಗಳೇನು? ‘ತಾಲೀಮು’ ನಿರೀಕ್ಷಿಸುವ ಇಂಥ ಪ್ರದರ್ಶನ ಕಲೆಯು ಸದ್ಯದ ಉಸಿರುಗಟ್ಟಿದ ವಾತಾವರಣದಲ್ಲಿ ಮತ್ತು ಆನಂತರದ ಸಮಯದಲ್ಲಿಯೂ ಮಕ್ಕಳ ಮನೋವಿಕಾಸಕ್ಕೆ ಯಾವ ರೀತಿ  ಸಹಕಾರಿಯಾಗಬಲ್ಲುದು? ಈ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಬೆಂಗಳೂರಿನ ‘ರಂಗರಥ’ದ ಆಸೀಫ್ ಕ್ಷತ್ರಿಯ ಮತ್ತು ಶ್ವೇತಾ ಶ್ರೀನಿವಾಸ್

*

ಮೊದಮೊದಲು ರಂಗಕಲೆಯನ್ನು ಆನ್‌ಲೈನ್ ಮುಖಾಂತರ ಬೋಧಿಸುವುದರ ಬಗ್ಗೆ ಕೊಂಚ ಗೊಂದಲವಿತ್ತು. ಕ್ರಮೇಣ ಒಳದಾರಿಗಳು ಗೋಚರವಾಗತೊಡಗಿದವು. ಯಾವುದೇ ಕೆಲಸವನ್ನು ನಾವು ನಮ್ಮ ಅನುಭವಗಳ ಆಧಾರದ ಮೇಲೆಯೇ ಕಾರ್ಯರೂಪಕ್ಕೆ ತರುತ್ತೇವೆ. ಆನ್‌ಲೈನ್ ಪಾಠ ನಮಗೆಲ್ಲ ಹೊಸದು. ಜೊತೆಗೆ, ಪ್ರದರ್ಶನ ಕಲೆಗಳನ್ನು ಆನ್‌ಲೈನ್‌ನಲ್ಲಿ ಪಾಠ ಮಾಡಲು ಅಸಾಧ್ಯ ಎನ್ನುವ ಅನ್ಯರ ಅನಿಸಿಕೆ ಮತ್ತು ಉಪದೇಶಗಳು, ನಮಗೆ ಆನ್‌ಲೈನ್ ಪಠ್ಯಕ್ರಮದ ನವೀನ ವಿಧಾನಗಳನ್ನು ಸೃಜಿಸಲು ಪ್ರೇರೇಪಿಸಿತು.

ನಮ್ಮ ರಂಗತಂಡವಾದ ‘ರಂಗರಥ’ದ ಉದ್ದೇಶವೇ, ವಿಭಿನ್ನ ರಂಗಪ್ರಯೋಗಗಳ ಮುಖಾಂತರ, ವಿಶೇಷವಾಗಿ ಮಕ್ಕಳಲ್ಲಿ, ಬದುಕಿನ ಸತ್ವಯುತ ಒಳತಿರುಳನ್ನು ರೂಪಿಸುವುದು ಹಾಗೂ ‘ರಂಗಮನೋಧರ್ಮ’ವನ್ನು ಬೆಳೆಸುವುದು. ಇದನ್ನು ನಾವು ನಮ್ಮ ಸಾಮಾಜಿಕ ಜವಾಬ್ದಾರಿಯೆಂದು ನಂಬಿ, ಇದಕ್ಕೆ ಪೂರಕವಾದಂಥ ರಂಗಪ್ರಯೋಗಗಳನ್ನು ಆಯ್ಕೆ ಮಾಡಿ, ಪ್ರದರ್ಶಿಸುವ ಜೊತೆಗೆ, ಮಕ್ಕಳ ರಂಗಶಿಕ್ಷಣಕ್ಕೆ, ಚರ್ವಿತಚರ್ವಣ ವಿಧಾನಗಳನ್ನು ಬಿಟ್ಟು ಒಂದು ಹೊಸ ರೀತಿಯ ಪಠ್ಯಕ್ರಮವನ್ನು ರಚಿಸಿದ್ದೇವೆ. ಬೇರೆಬೇರೆ ವಿಷಯಗಳ ವಸ್ತು ಮತ್ತು ಅವುಗಳ ಗ್ರಹಿಕೆಯ ವಿಧಾನಗಳನ್ನು ಮನೋವೈಜ್ಞಾನಿಕ ಹಾಗೂ ಸಾಮಾಜಿಕ ನೆಲೆಗಟ್ಟಿನಲ್ಲಿ ಸಂಶೋಧಿಸಿ, ವಿಶ್ಲೇಷಿಸಿ, ಆನ್‌ಲೈನ್‌ಗೆಂದೇ ತಯಾರು ಮಾಡಿದ ನಮ್ಮ ವಿನೂತನ ಪಠ್ಯಕ್ರಮದಲ್ಲಿ ಸ್ಪೀಚ್ ಸೈನ್ಸ್, ಜೆಸ್ಚರ್ ಎಂಜಿನಿಯರಿಂಗ್, ಮೈಂಡ್ ಮೂವ್‌ಮೆಂಟ್ ಮುಂತಾದ ವಿಷಯಗಳನ್ನು ಅಳವಡಿಸಿದ್ದೇವೆ.

ಚೊಚ್ಚಲ ಆನ್‌ಲೈನ್ ಮಕ್ಕಳ ರಂಗತರಬೇತಿ ಶಿಬಿರವನ್ನು ಪ್ರಚುರಪಡಿಸಿದಾಗ ಸಾಕಷ್ಟು ಪಾಲಕರು, ಇದರ ಸಾಧ್ಯತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದುಂಟು. ಆದರೂ, ನಮ್ಮ ಶೈಕ್ಷಣಿಕ ಹಿನ್ನೆಲೆ, ದಶಕಗಳ ಅನುಭವ, ನಮ್ಮ ನೂತನ ಪಠ್ಯಕ್ರಮದ ಆಧಾರದ ಮೇಲೆ, ಸಾಕಷ್ಟು ಮಕ್ಕಳು ನಮ್ಮ ಆನ್‌ಲೈನ್ ಕೋರ್ಸ್​ಗಳಿಗೆ  ನೋಂದಾಯಿಸಲ್ಪಡುತ್ತಿದ್ದಾರೆ. ನಮ್ಮ ಪಠ್ಯಕ್ರಮದಲ್ಲಿ, ಮಾನವೀಯತೆಯ ಅಂತಃಸತ್ವಗಳಾದ ಕರುಣೆ, ಪ್ರೀತಿ, ಸಹಾನುಭೂತಿ ಮತ್ತು ಸಕಾರಾತ್ಮಕ ಗುಣಗಳಾದ ಸೃಜನಶೀಲತೆ, ಧೈರ್ಯ, ಸಾಮಾಜಿಕ ಜವಾಬ್ದಾರಿ ಇತ್ಯಾದಿಗಳನ್ನು ರಂಗಾಟಗಳು, ಚಟುವಟಿಕೆಗಳು ಹಾಗೂ ಕಿರುಪ್ರಯೋಗಗಳ ಮುಖಾಂತರ ತಿಳಿಸಿಕೊಡುವ ವಿಧಾನಗಳಿವೆ.

art with heart rangaratha

‘ರಂಗರಥ’ದ ಆನ್​ಲೈನ್ ಕ್ಲಾಸಿನಲ್ಲಿ ತೆನಾಲಿರಾಮ ನಾಟಕದ ದೃಶ್ಯ

ಪ್ರದರ್ಶನ ಕಲೆಯನ್ನು ಆನ್‌ಲೈನ್ ಮೂಲಕ ಮಕ್ಕಳಿಗೆ ಕಲಿಸುವಾಗ ನಮಗೆ ಕ್ಲಿಷ್ಟವಾದ ಸಮಸ್ಯೆಗಳೇನೂ ಎದುರಾಗಲಿಲ್ಲ. ಕಾರಣ, ನಮಗೆ ಮಕ್ಕಳ ಜೊತೆಗಿನ ಸಂವಹನೆಯ ವಿಷಯ ಮತ್ತು ವಿಚಾರಗಳು ಮುಖ್ಯವಾಗಿದ್ದವೇ ಹೊರತು ತಂತ್ರಗಳು ಮುಖ್ಯವಾಗಿರಲಿಲ್ಲ! ಆಟಗಳೇ ಆಗಿರಲಿ, ಸಂಭಾಷಣೆಗಳ ತಾಲೀಮೇ ಆಗಿರಲಿ, ಭಾವನೆಗಳ ‘ಸ್ವರೂಪ ಮತ್ತು ಬಳಕೆ’ಯ ತಾಲೀಮೇ ಆಗಿರಲಿ, ಇವ್ಯಾವುದಕ್ಕೂ ಆನ್‌ಲೈನ್ ತಂತ್ರಜ್ಞಾನ ಅಡಚಣೆ ಆಗಲೇ ಇಲ್ಲ. ಬಹುಶಃ, ನಾವು ಚಲನಚಿತ್ರ ಕಲಾವಿದರೂ ಹಾಗೂ ನಿರ್ದೇಶಕರೂ ಆಗಿರುವ ಕಾರಣ ನಮಗೆ, ಕಂಪ್ಯೂಟರ್ ಪರದೆಯ ಮೇಲೆ ಒಬ್ಬೊಬ್ಬರ ಫ್ರೇಮ್‌ಗಳನ್ನು, ಪರಸ್ಪರ ಸಂಬಂಧ ಕಲ್ಪಿಸಿ, ಒಟ್ಟಾರೆ ಚಿತ್ರಣವನ್ನು ಒಂದು ‘ವಿಷುಯಲ್’ ರಂಗಪ್ರಕ್ರಿಯೆಯಾಗಿ ಗ್ರಹಿಸಲು ಸಹಾಯವಾಯಿತು.

ಹಲವರು ಹೇಳುವ ಹಾಗೆ, ಮಕ್ಕಳನ್ನು ಆನ್‌ಲೈನ್ ತರಗತಿಯಲ್ಲಿ ಸರಾಗವಾಗಿ ಸಾಕಷ್ಟು ಹೊತ್ತು ನಿರತರಾಗಿಸಲು ಕಷ್ಟಸಾಧ್ಯ. ನಾವು ಪ್ರತಿ ವಿಷಯವನ್ನು ಹೇಳುವಾಗ ವಿನೋದ ಮತ್ತು ಹಾಸ್ಯದ ಲೇಪದಲ್ಲಿ ಹೇಳುವುದಲ್ಲದೇ ಅವರ ದೈನಂದಿನ ಚಟುವಟಿಕೆಗಳಿಂದ ಆಯ್ದ ಕಾರ್ಯಗಳನ್ನೇ ವಿಷಯಗಳನ್ನಾಗಿ ಪರಿವರ್ತಿಸಿ ಅವರಿಂದಲೇ ಹೇಳಿಸಿ, ಮಾಡಿಸಿ ನಮ್ಮ ವಿಷಯ ಮತ್ತು ವಿಚಾರಗಳನ್ನು ಅವರಿಗೆ ಮನವರಿಕೆ ಮಾಡಿಸುತ್ತಿದ್ದುದರಿಂದಲೇ ಎರಡು ಮೂರು ತಾಸುಗಳು ಕಳೆದರೂ ಮಕ್ಕಳಿಗೆ ಬೇಸರವಾಗುತ್ತಿರಲಿಲ್ಲ. ಇದರ ಬಗ್ಗೆ ನಮಗೆ ಹೆಮ್ಮೆ ಇದೆ.

ಈ ಆನ್‌ಲೈನ್ ಟ್ರೆಂಡ್‌ಗೆ ನಮ್ಮನ್ನು ನಾವು ಅಳವಡಿಸಿಕೊಳ್ಳುವ ಮುನ್ನ ಆಫ್​ಲೈನ್ ತರಬೇತಿ ಅಥವಾ ರಂಗತಾಲೀಮಿನ ವಿಧಾನವನ್ನು ಒಮ್ಮೆ ಅವಲೋಕಿಸಿದೆವು. ರಂಗದ ಮೇಲೆ ಕಾರ್ಯನಿರತ ನಟ-ನಟಿಯರ ಮಧ್ಯೆ ಕಾಲ್ಪನಿಕ ಗೆರೆಗಳನ್ನು ಬರೆದು ಅನೇಕ ಫ್ರೇಮ್‌ಗಳನ್ನು ಸೃಷ್ಟಿಸಿ ನೋಡಿದೆವು. ಅದೊಂಥರ ಆನ್‌ಲೈನ್ ಕ್ಲಾಸ್‌ನ ಕಂಪ್ಯೂಟರ್ ಪರದೆಯ ಥರಾನೇ ಕಾಣಿಸಿತು. ಒಂದು ಕುರ್ಚಿಯ ಮೇಲೆ ಕುಳಿತು, ನಿರ್ದೇಶನ ಮಾಡುವ, ನಮ್ಮ ಮತ್ತು ರಂಗದ ಮೇಲೆ ಇರುವ ನಟರ ಮಧ್ಯೆ, ಒಂದು ಕಾಲ್ಪನಿಕ ಗೋಡೆ ಯಾವುತ್ತೂ ಇರುತ್ತದೆ. ಆನ್‌ಲೈನ್‌ನಲ್ಲೂ ಹಾಗೇ! ಇಂತಹ ಅಂಶಗಳಿಂದಲೇ ನಮಗೆ, ಆನ್‌ಲೈನ್ ತರಗತಿ ಮಾಡುವುದು ಅಷ್ಟು ಕಷ್ಟದ ಕೆಲಸವೇನಲ್ಲ ಎಂದೆನಿಸಿತು.

ನಮ್ಮ ಇತ್ತೀಚಿನ ಬದುಕಿನ ರೀತಿ, ನೀತಿ, ದೃಷ್ಟಿಕೋನಗಳಲ್ಲಿ ಗಮನಾರ್ಹ ಬದಲಾವಣೆ ಕಂಡಿದ್ದು, ಈ ಕೊರೋನಾ ಕಾಲದಲ್ಲೇ. ಕೌಟುಂಬಿಕ ಅಸಹನೆ ಹೊಗೆಯಾಡಿದ್ದು, ಸಂಬಂಧಗಳು ಬಲಗೊಂಡಿದ್ದೂ ಮತ್ತು ಸಾಮಾನ್ಯ ದಿನಚರಿಗೆ ಹೊಂದಿಕೊಂಡ ಮಕ್ಕಳ ಮನಸ್ಸುಗಳು ಅತಂತ್ರವಾಗಿದ್ದೂ ಈ ಕಾಲದಲ್ಲೇ. ಹಾಗೆ ನೋಡಿದರೆ ಇತ್ತೀಚಿನ ದಶಕದಲ್ಲಿ ಮಕ್ಕಳು ಟಿವಿ ಮತ್ತು ಮೊಬೈಲ್‌ಗೆ ಅಂಟಿಕೊಂಡದ್ದು ಸಹಜವೆನಿಸಿದರೂ ಇದು ಆಘಾತಕಾರಿ ಬೆಳವಣಿಗೆ. ಮಕ್ಕಳ ಅವಿಶ್ರಾಂತ ಮನಸ್ಸು, ಆಕ್ರೋಶ, ಮೊಂಡುತನ ಇಂತಹ ಬೆಳವಣಿಗೆಗಳಿಗೆ ನಾವು ಟಿವಿ ಮತ್ತು ಮೊಬೈಲ್‌ಗಳನ್ನು ಆರೋಪಿಸಿದರೆ ತಪ್ಪಾಗಲಾರದು. ಪ್ರತಿ ಮೂರು ಸೆಕೆಂಡುಗಳಿಗೆ ಬದಲಾಗುವ ಟಿವಿ ಪರದೆ ಮೇಲಿನ ದೃಶ್ಯಾವಳಿಗಳು, ಅಬ್ಬರದ ಸಂಗೀತ, ಪ್ರಖರವಾದ ಬಣ್ಣಗಳ ನಿರಂತರ ಚಲನೆ, ಇವೆಲ್ಲವೂ ಮಕ್ಕಳ ಮೆದುಳಿನ ಮೇಲೆ ವ್ಯತಿರಿಕ್ತ ಪ್ರಭಾವವನ್ನು ಬೀರುತ್ತವೆ. ಇದಕ್ಕೆ ಹೊಂದಿಕೊಳ್ಳುತ್ತಿರುವ ಮಕ್ಕಳಿಗೆ ನಮ್ಮ ಸಾಮಾನ್ಯ ಹಾಗೂ ಸಹಜ ಬದುಕು ನೀರಸ ಎನಿಸುತ್ತದೆ. ಹಾಗಾಗಿ ಅವರ ಮನಸ್ಸು ಒಂದು ಕಡೆ ಕೇಂದ್ರೀಕೃತವಾಗಲು ಸಾಧ್ಯವಾಗದೇ ಚಂಚಲವಾಗುತ್ತದೆ.

ಇದರ ಹೊರತಾಗಿ ಪಾಲಕರಿಗೆ ಅನಿವಾರ್ಯವಾಗಿರುವ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್‌ಗಳ ನಿರಂತರ ಬಳಕೆಯಿಂದ, ಅವುಗಳೇ ಬದುಕಿಗೆ ಅನಿವಾರ್ಯ ಎಂಬ ಸೂಚನೆ ಮಕ್ಕಳ ಮನಸ್ಸಿಗೆ ರವಾನಿಸಲ್ಪಡುತ್ತದೆ. ಮಕ್ಕಳಿಗೆ ಬೇಕಾಗಿರುವುದು ಒಂದು ಬಯೋ-ಎಮೋಷನಲ್ ಬೆಳವಣಿಗೆ. ಇದಕ್ಕೆ ಪಾಲಕರ ಮತ್ತು ಮಕ್ಕಳ ಮಧ್ಯೆ ಹೆಚ್ಚು ಹೆಚ್ಚು ಸಂವಹನ ಮುಖ್ಯ. ಈ ಘಟ್ಟ ಪಾಲಕರಿಗೆ ಅಗ್ನಿಪರೀಕ್ಷೆಯೇ ಸರಿ.

art with heart

ಆನ್​ಲೈನ್ ಕ್ಲಾಸಿನಲ್ಲಿ ಆಸೀಫ್ ಮತ್ತು ಶ್ವೇತಾ

ನಮ್ಮ ಆನ್‌ಲೈನ್ ತರಬೇತಿಯಲ್ಲಿ ನಾವು ಕಂಡಿದ್ದು ಇದೇ. ನಮ್ಮ ಬೇರುಮಟ್ಟದ ಪ್ರಯತ್ನ, ಮಕ್ಕಳ ಅವಿಶ್ರಾಂತ ಮನಸ್ಸುಗಳನ್ನು ಶಾಂತಗೊಳಿಸುವುದು. ಮಕ್ಕಳು ಯಾವ ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಯಿಂದ ಬಂದರೂ ಸರಿ ಮೂಲತಃ ಎಲ್ಲರೂ ಮುಗ್ಧರು, ತುಂಟರು, ಕುತೂಹಲಿಗಳು. ಮಕ್ಕಳು ಬೆಳೆದು ಬಂದ ಪರಿಸರ, ಅವರಿಗೆ ದೊರೆತ ಸಂಸ್ಕಾರದ ಕಾರಣ, ಪ್ರತಿಯೊಬ್ಬರ ನಡವಳಿಕೆ, ಗ್ರಹಿಕೆ ಮತ್ತು ಅಭಿವ್ಯಕ್ತಿ ವಿಭಿನ್ನವಾಗಿರುತ್ತವೆ. ಮನೋವೈಜ್ಞಾನಿಕ ನೆಲೆಗಟ್ಟಿನಲ್ಲಿ ಬೋಧಕರಾದ ನಾವು ಮಕ್ಕಳ ವಿಶ್ವಾಸವನ್ನು ಪಡೆದರೆ, ಅವರು ಪೂರ್ಣ ಪ್ರಮಾಣದ ವಿಧೇಯ ಶಿಷ್ಯರಾಗಿ ನಮ್ಮೊಂದಿಗೆ ಸೇರಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಇಲ್ಲಿಯವರೆಗೂ ನಮಗೆ ಯಾವ ಮಕ್ಕಳೂ ಅವಿಧೇಯತೆ ತೋರಿಸಿಲ್ಲ. ಇವರ ವಿನಯ, ಶಿಸ್ತು, ಶ್ರದ್ಧೆ, ಸಂಯಮಗಳನ್ನು ಕಂಡು ನಾವು ಅನೇಕ ಸಲ ಚಕಿತಗೊಂಡಿದ್ದೂ ಇದೆ.

ನಮ್ಮಲ್ಲಿ ರಂಗತರಬೇತಿ ಪಡೆದ ಅನೇಕ ಮಕ್ಕಳಲ್ಲಿ ಆದ ಸಕಾರಾತ್ಮಕ ಬದಲಾವಣೆಗಳನ್ನು ಕಂಡು ಪಾಲಕರು ಬೆರಗಾಗಿ, ಅತ್ಯಂತ ಹರ್ಷದಿಂದ ನಮ್ಮ ‘ವೈಜ್ಞಾನಿಕ ರಂಗಶಿಕ್ಷಣ’ದ ಪಠ್ಯಕ್ರಮ ಮತ್ತು ಬೋಧನಾ ವಿಧಾನಗಳನ್ನು ಮೆಚ್ಚಿ ಹರಸಿದ್ದಾರೆ. ಇವರ ಇಂತಹ ಅನೇಕ ಅಭಿಪ್ರಾಯಗಳನ್ನು ‘ರಂಗರಥ’ದಲ್ಲಿ ಪ್ರಕಟಿಸಲಾಗಿದೆ.

ನಾವು ರಂಗಮನೋಧರ್ಮವನ್ನು ಪಠ್ಯಕ್ರಮದಲ್ಲಿ ಕಲಿಸದೇ ಮಕ್ಕಳಿಗೆ ಎಷ್ಟೇ ನಟನೆಯ ತಂತ್ರಗಳನ್ನು, ರಂಗಗೀತೆಗಳನ್ನು ಕಲಿಸಿದರೂ ಅದು ಬರಿಯ ಮೇಲ್ಮೈ ಕಲಿಕೆಯಾಗುತ್ತದೆ ಅಷ್ಟೇ. ಆಗಲೇ ಹೇಳಿದ ಹಾಗೆ ನಮ್ಮ ಉದ್ದೇಶವೇ, ಮಕ್ಕಳಲ್ಲಿ ರಂಗಮನೋಧರ್ಮವನ್ನ ಬೆಳೆಸುವುದು; ಅಂದರೆ, ಬದುಕಿನ ಸಹಜ ಕ್ರಿಯೆ ಮತ್ತು ಸಂವಹನೆಗಳಿಗೆ ಸ್ಪಂದಿಸುವ ಆಯಾಮ ಮತ್ತು ಸಾಧ್ಯತೆಯನ್ನು ಬಿತ್ತುವುದು ಎಂದರ್ಥ. ಈ ತಳಹದಿಯ ಮೇಲೆ  ರಂಗತಂತ್ರಗಳಾದ ಪಾತ್ರಪೋಷಣೆ, ರಸೋತ್ಪತ್ತಿಗಾಗಿ ಭಾವಾಭಿನಯ, ಮೈ-ಮನಸ್ಸಿನ ಚಲನಾ ವಿಧಾನ, ಸನ್ನೆ-ಸಂವಹನ, ಪರ್ಯಾಯ ದೃಷ್ಟಿಕೋನ ಇಂತಹ ಹಲವು ವೈಜ್ಞಾನಿಕ ಅಂಶಗಳನ್ನು ಕಲಿಸಿದರೆ, ಇವೇ ರಂಗತತ್ವಗಳಾಗಿ ಪರಿಣಮಿಸಿ ಮುಂದೊಂದು ದಿನ ಮಕ್ಕಳನ್ನು, ಅವರ ಆಯ್ಕೆಯ ಮೇರೆಗೆ ರಂಗಕರ್ಮಿಗಳನ್ನಾಗಿಯೋ ಅಥವ ಬೇರೆ ಯಾವುದಾದರೂ ಕ್ಷೇತ್ರದಲ್ಲಿ ಸಫಲರನ್ನಾಗಿಸಲು ಸಹಾಯ ಮಾಡುತ್ತವೆ ಎಂಬುದೇ ನಮ್ಮ ನಂಬಿಕೆ. ಈ ನಿಟ್ಟಿನಲ್ಲೇ ನಮ್ಮ ನೂತನ ಪಠ್ಯಕ್ರಮವಿರುವುದು.

ನಾವು ನಮ್ಮ ಆನ್‌ಲೈನ್ ತರಗತಿಗಳ ಮೂಲಕ ಮಕ್ಕಳ ಮನಸ್ಸುಗಳನ್ನು ಮುಟ್ಟಲು, ಸ್ಪಂದಿಸಲು ಪೂರಕವಾಗುವ ಹಾಗೆ ಪರದೆಯ ಮೇಲೆ ಹತ್ತು ಮಕ್ಕಳಿಗಿಂತ ಹೆಚ್ಚು ಇರಬಾರದೆಂದು ನಿರ್ಧರಿಸಿ ಒಂದು ಬ್ಯಾಚ್​ಗೆ ಗರಿಷ್ಟ 10 ಮಕ್ಕಳಿಗೆ ಮಾತ್ರ ಪ್ರವೇಶ ಮಿತಿಗೊಳಿಸಿದ್ದೇವೆ. ಪರದೆಯ ಮೇಲೆ ಮಕ್ಕಳು ಅಂಚೆ ಚೀಟಿಗಳಂತೆ ಕಂಡಾಗ ಆ ಆಪ್ತತೆ ಮೂಡಲು ಹೇಗೆ ಸಾಧ್ಯ? ಒಂದಿಷ್ಟು ಡೈಲಾಗ್, ಒಂದಿಷ್ಟು ನವರಸಗಳನ್ನು ಅನುಕರಣೆ ಮಾಡಿಸುವ ಕ್ರಿಯೆ, ಒಂದೆರಡು ರಂಗಗೀತೆ, ಸ್ವಲ್ಪ ವ್ಯಾಯಾಮ ಇಂಥವುಗಳನ್ನು ಔಪಚಾರಿಕವಾಗಿ ಕಲಿಸುವುದು ನಿಜವಾದ ಅರ್ಥದಲ್ಲಿ ರಂಗಶಿಕ್ಷಣ ಅಲ್ಲ. ನಟನೆಯ ಪ್ರಕ್ರಿಯೆಯನ್ನು ವ್ಯಕ್ತಿಯ (ಮಕ್ಕಳ) ಮನಸ್ಸಿನಲ್ಲಿ ಅವರ ದೈಹಿಕ ಮತ್ತು ಮಾನಸಿಕ ಚಲನೆಯನ್ನಾಧರಿಸಿದ ಅಭಿವ್ಯಕ್ತಿಯನ್ನು ಅವರಲ್ಲಿ ಉದ್ದೀಪನಗೊಳಿಸಿ ಮೂಡಿಸುವುದು, ರಂಗಶಿಕ್ಷಣದ ವಿಧಾನವಾಗಬೇಕು.

ಒಬ್ಬ ಒಳ್ಳೆಯ ವ್ಯಕ್ತಿ ಮಾತ್ರ ಒಬ್ಬ ಒಳ್ಳೆಯ ಕಲಾವಿದನಾಗಬಲ್ಲ, ಒಬ್ಬ ಸೃಜನಶೀಲ ನಟನಾಗಬಲ್ಲ. ಅನುಮಾನಗಳು, ರಾಗದ್ವೇಷಗಳು, ಅಸಹನೆ, ಅಸಹಿಷ್ಣುತೆ, ಅಹಂಕಾರ, ಮತಾಂಧತೆ ಇಂತಹ ಋಣಾತ್ಮಕ ಭಾವನೆಗಳನ್ನು ಮೈಮನದೊಳಗೆ ಪೋಷಿಸುವ ವ್ಯಕ್ತಿ ಎಂದೂ ಒಳ್ಳೆಯ ಕಲಾವಿದನಾಗಲಾರ. ನಮ್ಮ ರಂಗರಥದ ಗುರಿಯೇ ಇಂತಹ ವಿನಾಶಕಾರಿ ಮನೋಭಾವನೆಗಳನ್ನು ನಿರ್ಮೂಲನಗೊಳಿಸುವುದು. ಇದು ಸಾಧ್ಯವಾದರೆ ಮಾತ್ರ ‘ವೈಜ್ಞಾನಿಕ ರಂಗಶಿಕ್ಷಣ’ ಸಾರ್ಥಕವಾಗುತ್ತದೆ.

art with heart rangaratha

ಅವರಿಗವರೇ ಕಾಸ್ಟ್ಯೂಮ್, ಮೇಕಪ್ ಮಾಡಿಕೊಂಡು ನಾಟಕಕ್ಕೆ ಸಿದ್ಧವಾಗುವುದು.

ನಮ್ಮ ಸಾಂಪ್ರದಾಯಿಕ ಶಿಕ್ಷಣ ಪದ್ದತಿಯಲ್ಲಿ ಸಮಾಜಶಾಸ್ತ್ರದ ಅಡಿಯಲ್ಲಿ ‘ವೈಜ್ಞಾನಿಕ ರಂಗಶಿಕ್ಷಣ’ ಕಡ್ಡಾಯವಾಗಬೇಕು. ಪ್ರಸ್ತುತ ಪಠ್ಯಕ್ರಮಗಳಿಗನುಸಾರವಾಗಿ ಮಕ್ಕಳು ಮುಂದೆ ಯಾವ ವೃತ್ತಿಯನ್ನು ಆರಿಸಿಕೊಂಡರೂ ಅವರಿಗೆ ವಾಕ್ಚಾತುರ್ಯ, ಸಂವಹನ ಕಲೆ, ಭಾವ, ವಿಭಾವ, ಅನುಭಾವಗಳ ಕಲ್ಪನೆ ಮತ್ತು ಬಳಕೆ ಅನಿವಾರ್ಯವಾಗುತ್ತದೆ. ಇವುಗಳನ್ನೆಲ್ಲಾ ನಾವು ರಂಗಶಿಕ್ಷಣದ ಮುಖಾಂತರ ನಿಚ್ಚಳವಾಗಿ ಕಲಿಯಬಹುದು ಹಾಗೂ ಕಲಿಸಬಹುದು. ಇದನ್ನು ಸಮರ್ಥವಾಗಿ ಬೋಧಿಸಲು ಪ್ರತಿಷ್ಠಿತ ರಂಗಶಾಲೆಗಳ ಪದವೀಧರರು, ಹಿರಿಯ ರಂಗತಜ್ಞರು ಮತ್ತು ಅನುಭವೀ ರಂಗಕರ್ಮಿಗಳನ್ನು ಬೋಧಕರನ್ನಾಗಿ ನೇಮಕಗೊಳಿಸುವ ಕಾನೂನನ್ನು ಜಾರಿಗೊಳಿಸಬೇಕು.

ಇದನ್ನೂ ಓದಿ : Art With Heart : ಸಿರಿಗದ್ದೆಯಿಂದ ಸಿಂಗಪೂರದವರೆಗೆ ಅಂಬಲಜೀರಳ್ಳಿಯಿಂದ ಅಮೆರಿಕಾದವರೆಗೆ 

Published On - 2:36 pm, Sun, 11 July 21

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ