Art With Heart : ಸಿರಿಗದ್ದೆಯಿಂದ ಸಿಂಗಪೂರದವರೆಗೆ ಅಂಬಲಜೀರಳ್ಳಿಯಿಂದ ಅಮೆರಿಕಾದವರೆಗೆ
Children‘s Theatre : ‘ಮನೆಯಂದೊಡನೆ ಮಗುವಿಗೆ ಸದರ ಶುರುವಾಗುತ್ತದೆ. ನಾವು ಆ ಭಂಡ ಧೈರ್ಯವನ್ನೇ ಶಿಸ್ತಿಗೊಳಪಡಿಸಿ ಆ ಮನೆಯ ವಾತಾವರಣದಲ್ಲಿ ಆತ್ಮವಿಶ್ವಾಸವನ್ನಾಗಿ ಪರಿವರ್ತಿಸುವುದಕ್ಕೆ ಕೆಲಕಾಲ ಹಿಡಿಯಿತು. ಗೆದ್ದೆವು! ಅವಕ್ಕೆ ಪ್ರೀತಿಬೇಕು ಅಷ್ಟೇ. ಜಾಸ್ತಿ ಆದರೇ ಅದೂ ಕಷ್ಟವೇ.’ ಮಂಡ್ಯ ರಮೇಶ
ಟಿವಿ9 ಕನ್ನಡ ಡಿಜಿಟಲ್ : ‘ಆರ್ಟ್ ವಿಥ್ ಹಾರ್ಟ್ (Art With Heart) ಪ್ರತೀ ಭಾನುವಾರ ಪ್ರಕಟವಾಗುವ ಈ ಸರಣಿಯಲ್ಲಿ ಆನ್‌ಲೈನ್ ಮೂಲಕ ಪ್ರದರ್ಶನ ಕಲೆಗಳನ್ನು ಹೇಳಿಕೊಡುತ್ತಿರುವ ವಿವಿಧ ಕಲಾಕ್ಷೇತ್ರಗಳ ಪರಿಣತರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಮಕ್ಕಳ ರಂಗಭೂಮಿಯ ಮೂಲಕ ಈ ಸರಣಿ ಪ್ರವೇಶ. ರಂಗಭೂಮಿಯಂಥ ‘ಅಪ್ಪಟ’ ಪ್ರದರ್ಶನ ಕಲೆಯನ್ನು ಆನ್ಲೈನ್ನಲ್ಲಿ, ಅದರಲ್ಲೂ ಮಕ್ಕಳಿಗಾಗಿ ಕಲಿಸುವುದು ಸುಲಭವೆ? ಎದುರಾದ ಸವಾಲುಗಳಿಗೆ ನಮ್ಮ ರಂಗನಿರ್ದೇಶಕರು ‘ಟ್ರೆಂಡ್ ಮತ್ತು ತಂತ್ರಜ್ಞಾನ’ಕ್ಕನುಸಾರವಾಗಿ ಯಾವ ರೀತಿ ರಂಗಪಠ್ಯವನ್ನು ಯೋಜಿಸಿಕೊಳ್ಳುತ್ತಿದ್ದಾರೆ. ಈ ದುರಿತ ಕಾಲದಲ್ಲಿ ಕೌಟುಂಬಿಕ, ಸಾಮಾಜಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮಕ್ಕಳಿಗಾಗಿ ಕಲೆಯ ಅಂಶಗಳನ್ನು ಅರುಹುವಲ್ಲಿ ಏನೆಲ್ಲ ಪ್ರಯತ್ನ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಿದ್ದಾರೆ; ಫಲಾಫಲಗಳೇನು? ‘ತಾಲೀಮು’ ನಿರೀಕ್ಷಿಸುವ ಇಂಥ ಪ್ರದರ್ಶನ ಕಲೆಯು ಸದ್ಯದ ಉಸಿರುಗಟ್ಟಿದ ವಾತಾವರಣದಲ್ಲಿ ಮತ್ತು ಆನಂತರದ ಸಮಯದಲ್ಲಿಯೂ ಮಕ್ಕಳ ಮನೋವಿಕಾಸಕ್ಕೆ ಯಾವ ರೀತಿ ಇದು ಸಹಕಾರಿಯಾಗಬಲ್ಲುದು? ಈ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಮೈಸೂರಿನ ‘ನಟನ’ದ ಮಂಡ್ಯ ರಮೇಶ.
*
ರಂಗಭೂಮಿಯಂಥ ಮುಖಾಮುಖಿ ಕಲೆಯನ್ನು ಮಿನ್ಕಾಣ್ಕೆಯಲ್ಲಿ (Online) ಕಲಿಸುವುದು ಖಂಡಿತವಾಗಿಯೂ ಸುಲಭ ಸಾಧ್ಯವಲ್ಲ! ಇಡೀ ಜಗತ್ತು ತತ್ತರಿಸುತ್ತಿರುವ ಈ ಘಳಿಗೆಗಳಲ್ಲಿ ಅನ್ನ, ನೀರು, ಗಾಳಿ ಎಲ್ಲವೂ ಎಷ್ಟು ಮುಖ್ಯವೋ ಅಷ್ಟೇ ಬೌದ್ಧಿಕ ಹಸಿವನ್ನೂ ನಿವಾರಿಸಿಕೊಳ್ಳವುದರ ಮೂಲಕ ಸ್ವಸ್ಥ ಮನಸ್ಥಿತಿ ಮತ್ತು ಆರೋಗ್ಯಪೂರ್ಣ ಸಮಾಜದತ್ತ ಮುಖ ಮಾಡುವುದು ತೀವ್ರ ಅವಶ್ಯವಾಗಿದೆ. ಖಿನ್ನರಾಗಿ ಕೊರಗುವುದಕ್ಕಿಂತ ಭಿನ್ನ ಚಿಂತನೆಗಳಿಂದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂದಿನ ತಲೆಮಾರನ್ನು ತೊಡಗಿಸಬೇಕೆಂಬ ತೀವ್ರತೆಯಿಂದ ‘ನಟನ ಮಿನ್ಕಾಣ್ಕೆ ಶಿಬಿರ’ ಯೋಜನೆ ರೂಪುಗೊಂಡಿದೆ.
ಖಂಡಿತವಾಗಿಯೂ ಇದು ತಾತ್ಕಾಲಿಕ! ಮುಂದಿನ ದಿನಗಳಲ್ಲಿ ಜಗತ್ತು ಪೂರ್ಣ ಸಹಜಸ್ಥಿತಿಗೆ ಬಂದೊಡನೆ ಎಂದಿನಂತೇ ನಮ್ಮ ಸಾಂಘಿಕ ಶಕ್ತಿ ಗರಿಗೆದರುತ್ತದೆ. ತಾಲೀಮು, ತರಬೇತಿ, ಪ್ರಾತ್ಯಕ್ಷಿಕೆ, ಪ್ರಯೋಗ, ಪ್ರದರ್ಶನ ಎಲ್ಲವೂ ಉತ್ಸಾಹದಿಂದ ಪ್ರೇಕ್ಷಕರ ನಡುವಿನಲ್ಲೇ ಜರಗುತ್ತದೆ. ಇದು ಶತಃಸಿದ್ಧ!
‘ನಟನ’ ಇಡೀ ವರ್ಷ ಯುವಕ-ಯುವತಿಯರಿಗೆ, ಮಕ್ಕಳಿಗೆ ಶಿಬಿರ ಮಾತ್ರವಲ್ಲ ಇಡೀ ವರ್ಷ ರಂಗಶಾಲೆಯನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿತ್ತು. ಮಾತ್ರವಲ್ಲದೇ ‘ರಜಾಮಜಾ’ ಹೆಸರಿನಲ್ಲಿ ವಾರ್ಷಿಕ ರಂಗಕೇಂದ್ರಿತ ಬೇಸಿಗೆ ಮಕ್ಕಳ ಶಿಬಿರ ತುಂಬಾ ಕ್ರಿಯಾಶೀಲವಾಗಿ ನಡೆಯುತ್ತಿತ್ತು. ಪ್ರತೀ ವರ್ಷ 350-400 ಜನ ವಿದ್ಯಾರ್ಥಿಗಳು ಈ ವಿಸ್ಮಯದ ಲೋಕದಲ್ಲಿ ಪದಾರ್ಪಣೆಗೊಂಡು, ತಮ್ಮ ಅಂರ್ತಗತ ಅಭಿರುಚಿ ಗುರುತಿಸಿಕೊಂಡು ಎಷ್ಟೋ ವರುಷಗಳವರೆಗೆ ಹಾಡುತ್ತಲೇ, ನಟಿಸುತ್ತಲೇ, ಕುಣಿಯುತ್ತಲೇ, ನಿರೂಪಿಸುತ್ತಲೇ ತಮ್ಮ ಬದುಕನ್ನು ಕಟ್ಟಿಕೊಂಡ ಮಕ್ಕಳ ಮೊದಲ ಮೆಟ್ಟಿಲುಗಳಾಗಿತ್ತು. ಎರಡು ದಶಕಗಳ ಈ ಸ್ವಚ್ಛಂದಯಾನ ಕಳೆದ ವರ್ಷದಿಂದ ಕೊರೋನಾ ಲಾಕ್‌ಡೌನ್‌ಗೆ ಬಲಿಯಾಗಿ ಸ್ಥಗಿತಗೊಂಡಾಗ ಆ ಪೋಷಕರು- ಮಕ್ಕಳು ಮರುಗಿದ ರೀತಿಗೆ ನನ್ನಲ್ಲಿ ಉತ್ತರವಿರಲಿಲ್ಲ! ಅನಿವಾರ್ಯವಾಗಿ, ಒತ್ತಡಗಳಿಂದ ನಟನ ಮಿನ್ಕಾಣ್ಕೆ ಶಿಬಿರ ಆರಂಭಿಸಲಾಯ್ತು.
ಪೋಷಕರ ಮತ್ತು ಮಕ್ಕಳ ಪ್ರತಿಕ್ರಿಯೆ ನೋಡಿ ಬೆರಗಾಗಿ ಹೋಗಿದ್ದೇವೆ. ಅಷ್ಟು ಚಂದ. ಹಸಿದವರ ಮುಂದೆ ಮೃಷ್ಟಾನ್ನ ಸಿಕ್ಕಾಗ ಆಗುವ ಪರಿಯಂತೇ ಅವರ ಖುಷಿ ಕಂಡೆವು. ರಂಗಭೂಮಿ ಕೇಂದ್ರಿತ ಶಿಬಿರವಾದ್ದರಿಂದ ನಟ-ನಟಿಯರ ಮೂಲ ಶಕ್ತಿಯ ವಿಕಸನಕ್ಕೆ ಬೇಕಾದ ದೇಹ-ಧ್ವನಿ-ಮನಸ್ಸುಗಳನ್ನು ಅರಳಿಸುವತ್ತಲೇ ನಮ್ಮ ಗಮನವಾಗಿದೆ. ಅದಕ್ಕೊಂದು ಆಕರ್ಷಕ ರೂಪ ಕೊಟ್ಟು ಮಕ್ಕಳನ್ನು ಸಿದ್ಧಗೊಳಿಸುತ್ತಿದ್ದೇವೆ. ರಂಗಶಿಕ್ಷಣದ ವೈಜ್ಞಾನಿಕ ಕ್ರಮಗಳನ್ನೇ ಮತ್ತಷ್ಟು ಆಶುವಿಸ್ತರಿಸಿ ಪ್ರತೀಕ್ಷಣವೂ, ಪ್ರತಿ ಮಗುವೂ ಅದರಲ್ಲೇ ಶಿಸ್ತಿನಿಂದ ತೊಡಗಿಕೊಳ್ಳುವಂತೆ ಪ್ರಚೋದಿಸಲಾಗುತ್ತಿದೆ. ಕನ್ನಡ ಭಾಷೆಯನ್ನು ರಂಗಭೂಮಿಯ ಮೂಲಕ ಮತ್ತಷ್ಟು ಕಾವ್ಯದ್ರವ್ಯ ಬಳಸುವ ಮೂಲಕ ವೃದ್ಧಿಸುವ ಮತ್ತು ಭಾಷಾಪ್ರೇಮವನ್ನು ಜತನದಿಂದ ಕಾಯ್ದುಕೊಳ್ಳುವಂತೆ ಮಾಡಲಾಗುತ್ತಿದೆ.
ಮುಖ್ಯ ಸವಾಲೆಂದರೆ ಬ್ರಹ್ಮಾಂಡ ರಂಗಸ್ಥಳದಲ್ಲಿ ಮನಬಿಚ್ಚಿ – ಮೈಚೆಲ್ಲಿ ಮುಕ್ತವಾಗಿ ದೇಹಭಾಷೆಯ ತಯಾರಿ ನಡೆಸುತ್ತಿದ್ದವರಿಗೆ, ಮೊಬೈಲ್‌ಗಳಲ್ಲಿ, ಲ್ಯಾಪ್‌ಟಾಪ್ ಮುಂದೆ ಕುರ್ಚಿಯಲ್ಲಿ ಮುದುಡಿ ಕುಳಿತು ಹೇಳುವ-ಕೇಳುವ ಸಂಕಷ್ಟ, ಇರಿಕಿನಲ್ಲಿ ಸಿಕ್ಕಸಿದಂತಾಗಿತ್ತು! ಕ್ರಮೇಣ ಈಗ ನಾವೇ ಕೈಕಾಲು ಆಡಿಸಿಕೊಳ್ಳುವ ಮತ್ತು ಮಕ್ಕಳಿಗೆ ಅದನ್ನು ಬಿಡಿಸಿಹೇಳಿ ಅರ್ಥ ಮಾಡಿಸಿ ನಮ್ಮ ‘ಹದ’ಕ್ಕೆ ತೆಗೆದುಕೊಂಡಿದ್ದೇವೆ. ಮನೆಯಂದೊಡನೆ ಅಪ್ಪ- ಅಮ್ಮ-ಅಣ್ಣ-ತಂಗಿಯ ಮಧ್ಯೆ ಕುಳಿತೊಡನೆ ಮಗುವಿಗೆ ಸದರ ಶುರುವಾಗುತ್ತದೆ. ನಾವು ಆ ಭಂಡ ಧೈರ್ಯವನ್ನೇ ಶಿಸ್ತಿಗೊಳಪಡಿಸಿ ಆ ಮನೆಯ ವಾತಾವರಣದಲ್ಲಿ ಆತ್ಮವಿಶ್ವಾಸವನ್ನಾಗಿ ಪರಿವರ್ತಿಸುವುದಕ್ಕೆ ಕೆಲಕಾಲ ಹಿಡಿಯಿತು… ಆದರೆ ಗೆದ್ದೆವು. ಅವಕ್ಕೆ ಪ್ರೀತಿಬೇಕು ಅಷ್ಟೇ. ಜಾಸ್ತಿ ಆದರೇ ಅದೂ ಕಷ್ಟವೇ. ಎಲ್ಲ ಮಕ್ಕಳು ಶಿಸ್ತಾಗಿ ಕುಳಿತು ನಗುತ್ತಾ ರಂಗಶಿಕ್ಷಣವನ್ನು ಆಸ್ವಾದಿಸುವಾಗ ಬಂಗಲೆಯ ಭೂಪನೊಬ್ಬ ಬೆಡ್ ಮೇಲೆ ಮಲಗಿ ಏನೂ ಮಾಡದೇ ಟೈಂ ಪಾಸ್ ಮಾಡುತ್ತಿದ್ದ. ಅವನನ್ನು ತಕ್ಷಣವೇ ನಿರ್ಗಮಿಸುವಂತೆ ಸೂಚಿಸಲಾಯಿತು. ಅರ್ಥಾತ್ ಕಿತ್ತೆಸಲಾಯಿತು! ಪ್ರವೇಶಕ್ಕೆ ಅನುಮತಿ ಕೊಡಲಿಲ್ಲ ಅಷ್ಟೇ.
ಮತ್ತೊಂದು ಮಗು ಮಾತಿಗೆ ಮುಂಚೆ ‘ಪರದೆ’ ಬಿಟ್ಟು ಅಪ್ಪನ ಕಡೆಗೋ, ಅಮ್ಮನತ್ತಲೋ ನೋಡುತ್ತಾ ಕುಳಿತುಕೊಳ್ಳುತ್ತಿತ್ತು. ಆ ಮಕ್ಕಳನ್ನು ಪೂರ್ಣವಾಗಿ ನಮ್ಮೆಡೆಗೆ ಸೆಳೆದುಕೊಳ್ಳಲು, ಅವರ ಗಮನ ಕೇಂದ್ರೀಕರಿಸಲು ನಾನು ಮತ್ತು ನನ್ನ ತಂಡ ಅಗತ್ಯಕ್ಕಿಂತ ಹತ್ತುಪಟ್ಟು ಹೆಚ್ಚು ದೈಹಿಕ ಶಕ್ತಿಯನ್ನು ಬಳಸಬೇಕು. ನಮ್ಮ ದೇಹ-ಧ್ವನಿ-ಮನಸ್ಸುಗಳನ್ನು ಪೂರ್ಣವಾಗಿ ಅವರಿಗಾಗಿ ಕೊಟ್ಟು ಚಿತ್ತ ಚಂಚಲವಾಗದಂತೆ ಜಾಗ್ರತೆ ವಹಿಸುವಾಗ ತರಗತಿ ಮುಗಿಸಿದಾಗ ಬೆವರಿಳಿದು ದೀರ್ಘ ಉಸಿರೆಳೆದುಕೊಳ್ಳುತ್ತಿದ್ದೆವು. ಆದರೆ ಮಕ್ಕಳ ಪ್ರತಿಕ್ರಿಯೆಯಿಂದ ಅಪಾರ ಸಂತಸವಾಗುತ್ತಿತ್ತು.
…ಎಲ್ಲ ಮಕ್ಕಳು ಒಟ್ಟಾಗಿ ಮಾತನಾಡಲು ಶುರು ಮಾಡಿ, ಯಾರ ಮಾತೂ ಕೇಳಿಸದಿದ್ದಾಗ ಅನಿವಾರ್ಯವಾಗಿ ಧ್ವನಿ ಎತ್ತರಿಸಿ, ಎಲ್ಲರ ಮೈಕ್‌ಗಳನ್ನ ಮ್ಯೂಟ್ ಮಾಡಿಸಿ ಮತ್ತೆ ಒಬ್ಬೊಬ್ಬರನ್ನೇ ಕೈ ಎತ್ತಲು ಹೇಳಿ, ಮೆಸೇಜ್ ಬಾಕ್ಸ್ನಲ್ಲಿ ಉತ್ತರಿಸಿ-ಪ್ರಶ್ನಿಸಿ ಅಂತ ಸಲಹೆಗಳನ್ನು ಕೊಟ್ಟು, ಅಭಿಪ್ರಾಯ ಗಮನಿಸಿ… ಒಟ್ಟಿನಲ್ಲಿ ಅವರೊಂದಿಗೆ ಈ ತಂತ್ರಜ್ಞಾನವನ್ನು ನಾವೂ ಕಲಿಯಲೇಬೇಕಾಯ್ತು. ಮಕ್ಕಳಿಗೆ ‘ವಿಡಿಯೋ ಆನ್ ಇರಲಿ, ಮೈಕ್ ಮ್ಯೂಟ್ ಮಾಡಿ’ ಅಂತಾ ತುಂಬಾ ಸಲ ಹೇಳಿದ್ದಿದೆ. ಪುಟ್ಟ ಹಳ್ಳೀ ಮನೆಯ ಕೊಟ್ಟಿಗೆಯ ಬಳಿ, ಗುಡ್ಡದಲ್ಲಿ ಕುಳಿತು ಆಸಕ್ತಿಯಿಂದ ಅಭಿನಯ ಕಲಿತವರಿಂದ ಹಿಡಿದು ಸಿಂಗಾಪೂರ್- ಅಮೇರಿಕಾದ ಪಿಟ್ಸ್ಬರ್ಗ್ಟ್ಸ್ಬವರೆಗಿನ ಸರ್ವ ಸುಸಜ್ಜಿತ ಬಂಗಲೆಯಲ್ಲಿ ಕುಳಿತ ಪುಟ್ಟಿ ಕನ್ನಡ ಮಾತನಾಡಿ, ಪದ್ಯ ಹಾಡುವಾಗ… ಕೇಳುವಾಗಿನ ಸಂತಸ ಅದ್ಭುತ! ಈ ಕಾರಣಕ್ಕಾಗಿ ಅಲ್ಲಿಯವರೆಗೆ ‘ನಟನ’ದ ಶಕ್ತಿ ದಾಟಿದ್ದು, ಲಾಕ್‌ಡೌನ್ ಅದಕ್ಕೆ ಅವಕಾಶ ಮಾಡಿಕೊಟ್ಟದ್ದು ಇತ್ಯಾತ್ಮಕ ಅಂಶವೇ.
ನಾಗಮಂಗಲ, ಕುಣಿಗಲ್, ಮಲೆನಾಡಿನ ಪುಟ್ಟ ಹಳ್ಳಿಯಿಂದ, ಹೈದರಾಬಾದ್ ದಾಟಿ, ಅಮೆರಿಕಾ ಸಿಂಗಪೂರ್‌ವರೆಗೂ ಆ ಮಕ್ಕಳ- ತಂದೆ-ತಾಯಿಯರ ಅಭಿರುಚಿ- ಬದುಕುವ ಕ್ರಮ, ಭಾಷೆ, ಸಂಸ್ಕಾರ, ಆರ್ಥಿಕಸ್ಥಿತಿಗಳ ಏನೇನೇ ವ್ಯತ್ಯಾಸಗಳಿದ್ದರೂ ಒಂದೇ ಸೂರಿನಡಿಯಲ್ಲಿ, ಒಂದೇ ಸಮಯದಲ್ಲಿ ಒಟ್ಟಾಗಿ ಕುಳಿತು ಕಂಪೆನಿ ನಾಟಕದ ಹಾಡುಗಳನ್ನು ಅಭ್ಯಾಸಮಾಡುವಾಗ, ಅದರಲ್ಲೇ ಕಳೆದು ಹೋಗುವ ಮಕ್ಕಳ ತಾದಾತ್ಮತೆ ಕಂಡಾಗ, ಭಾಷೆ, ಅಭಿನಯ, ರಂಗಗೀತೆಗಳ, ಕರಕುಶಲ ಅಭ್ಯಾಸ ಮಾತ್ರವಲ್ಲದೇ ಸಾಧಕರನ್ನು ಕರೆಸಿ ಸಂವಾದ ಮಾಡಿಸುವಾಗ, ಅವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದು ಅಭಿಮಾನ ಸೂಚಿಸುವಾಗ ಇವೆಲ್ಲಾ ‘ನಮ್ಮ ಕನ್ನಡದ ಮಕ್ಕಳು’ ಅನ್ನುವ ಹೆಮ್ಮೆಯಿಂದ ಬೀಗಿದ್ದೂ ಇದೆ!
ಶಾಲಾಪಠ್ಯದಲ್ಲಿ ಖಂಡಿತವಾಗಿ ‘ರಂಗಭೂಮಿ’ಯನ್ನು ವಿಷಯವನ್ನಾಗಿ ಅಭ್ಯಾಸ ಮಾಡುವ ಯೋಜನೆ ಅಧಿಕೃತವಾಗಿ ಮತ್ತಷ್ಟು ಸ್ಪಷ್ಟವಾಗಿ ರೂಪುಗೊಳ್ಳಬೇಕು ಮತ್ತು ಈ ಸಂವಹನ ತಂತ್ರಗಳನ್ನು ಶಿಕ್ಷಕರಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕಾದ ಅಗತ್ಯವಿದೆ, ಮಾಹಿತಿಗಳೊಂದಿಗೆ ಕೌಶಲವನ್ನು ಸಹಜವಾಗಿ ಮಂಡಿಸುವ ಕಲೆಯನ್ನು ರಂಗಭೂಮಿ ಸಮರ್ಥವಾಗಿ ಅರುಹುವುದರಿಂದಲೇ ಅದಕ್ಕಿಷ್ಟು ಮೌಲ್ಯ. ನಟನದಲ್ಲಿ ಕಲಿತ ಕೆಲ ಮಕ್ಕಳು ಝೂಮ್ಮೀಟ್ನಲ್ಲಿ ತಾಲೀಮು ನಡೆಸಿ, ಲಾಕ್‌ಡೌನ್ ತೆರವುಗೊಳಿಸಿದ ಮೇಲೆ ವೇದಿಕೆಯಲ್ಲಿ ಪ್ರದರ್ಶನ ಮಾಡಿ ಗೆದ್ದ ಉದಾಹರಣೆ ನನ್ನ ಬಳಿ ಇದೆ. ಆದರೆ ಈ ಶಿಬಿರದ ಮಕ್ಕಳಿಗೆ ಆ ಬಗೆಯ ಅವಕಾಶವಿಲ್ಲ! ನಾನು ಪ್ರದರ್ಶನ ಮಾತ್ರ ಪ್ರೇಕ್ಷಕರ ಮುಂದೆಯೇ ಆಗಬೇಕೆನ್ನುವವ. ಅವರ ನೇರ ಪ್ರತಿಕ್ರಿಯೆಯೇ ನಮಗೆ ಮುಖ್ಯ ಮಾನದಂಡ.
ಕೆಲಮಕ್ಕಳು ಬೇಗ ಗ್ರಹಿಸುತ್ತಾರೆ, ಕೆಲವರು ತಡ. ಆದರೆ ದಿನಗಳೆದಂತೆ ಅವರು ಉದ್ದುದ್ದ ಕನ್ನಡದ ಸಂಭಾಷಣೆಗಳನ್ನು ನಿರರ್ಗಳವಾಗಿ ಆಡುತ್ತಾ, ರಂಗಗೀತೆಗಳನ್ನು ಅಭಿನಯಪೂರ್ಣವಾಗಿ, ಲಯಬದ್ಧವಾಗಿ, ಶೃತಿ ಪೂರ್ಣವಾಗಿ ಹಾಡುತ್ತಾ ಕರಗಿಹೋಗುವ ಅಮೃತ ಘಳಿಗೆಗಳಿಗೆ ನನ್ನ ‘ನಟನ’ ಸಾಕ್ಷಿಯಾದದ್ದಿದೆ. ಶಿಬಿರ ಮುಗಿದ ಮೇಲೂ ‘ಸರ್ ಮುಂದುವರೆಸಿ’ ಅಂತ ದುಂಬಾಲು ಬೀಳುವ ಮಕ್ಕಳನ್ನು ಸಾಂತ್ವನಗೊಳಿಸುವ ನಮ್ಮ ಸಂಪನ್ಮೂಲ ವ್ಯಕ್ತಿಗಳ ಕಣ್ಣಂಚಿನಲ್ಲಿ ನೀರು ಒಸರಿಸಿದ್ದನ್ನು ಗಮನಿಸಿದ್ದೇನೆ.
ನಾನು ‘ಕಂದಮ್ಮಾ’ ಅಂದೊಡನೇ ‘ಹೋ…’ ಎಂದು ಚೀರುವ ಮಕ್ಕಳು, ನಾನು ರೇಗಿದಾಗ ಮೌನವಾಗಿ ನನ್ನನ್ನೇ ನಾಚಿಸುತ್ತವೆ. ಅವರೊಡನೆಯ ಅಭಿನಯ ಅನುಸಂಧಾನದಲ್ಲಿ ಅಂತಃಕರಣವೇ ಪ್ರಧಾನವಾಗಿದ್ದಾಗ ತಾಂತ್ರಿಕ ಸೋಲುಗಳನ್ನು ಮರೆತಿದ್ದೇನೆ. ಇದ್ಯಾವುದೂ ಒಬ್ಬರಿಂದಾದಲ್ಲ, ಪ್ರತಿ ಇಪ್ಪತ್ತೈದು ನಿಮಿಷಕ್ಕೆ ವಿಭಿನ್ನ ಆಸಕ್ತಿಯ, ರಸಪೂರ್ಣ ವಿಷಯಗಳನ್ನು ಹೊತ್ತು ನಮ್ಮ ತಂಡದ ಮೇಘ ಸಮೀರ, ದಿಶಾ, ಮನೋಜ್, ಚೇತನ್, ಲಕ್ಷ್ಮೀ, ರಾಮು ಮುಂತಾದವರು ಅಷ್ಟೇ ಉತ್ಸಾಹದಿಂದ ಹಾಜರಾಗುತ್ತಾರೆ. ನಾವೀಗ ಹೊಂದಿಕೊಂಡಿದ್ದೇವೆ ಆದರೂ, ಎದುರಾಗುವುದನ್ನು ಕಾಯುತ್ತಿದ್ದೇವೆ.
ಇದನ್ನೂ ಓದಿ : ಆನ್‌ಲೈನ್ ರಂಗಭೂಮಿ ತರಬೇತಿ; ರಂಗ ಚಟುವಟಿಕೆ ಆರಂಭಕ್ಕೆ ಮೈಸೂರಿನಲ್ಲಿ ಚಾಲನೆ ನೀಡಿದ ನಟ ಮಂಡ್ಯ ರಮೇಶ್
Published On - 7:00 pm, Sun, 4 July 21