International Yoga Day: ಯೋಗ ಸನಾತನ ಧರ್ಮದ ಸಾರ, ಪತಂಜಲಿ ರಾಮದೇವ್ ಬಾಬಾ
ಹರಿಯಾಣ ರಾಜ್ಯದ ಕುರುಕ್ಷೇತ್ರದಲ್ಲಿ 11ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಬಾಬಾ ರಾಮದೇವ್ ಅವರ ಮಾರ್ಗದರ್ಶನದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಲಕ್ಷಾಂತರ ಜನರು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ಯೋಗದ ಪ್ರಾಮುಖ್ಯತೆ ಮತ್ತು ಆರ್ಥಿಕ ಪ್ರಭಾವವನ್ನು ಚರ್ಚಿಸಲಾಯಿತು. ಯೋಗವು ಆರೋಗ್ಯ ಮತ್ತು ಸಮೃದ್ಧಿಗೆ ಕಾರಣವಾಗುತ್ತದೆ ಎಂದು ಒತ್ತಿ ಹೇಳಲಾಯಿತು.

ಕುರುಕ್ಷೇತ್ರ, ಜೂನ್ 21: ಬಾಬಾ ರಾಮದೇವ್ (Ramdev Baba) ಅವರ ಮಾರ್ಗದರ್ಶನದಲ್ಲಿ ಹರಿಯಾಣ ರಾಜ್ಯದ ಕುರುಕ್ಷೇತ್ರ ನಗರದಲ್ಲಿ 11 ನೇ ಅಂತರರಾಷ್ಟ್ರೀಯ ಯೋಗ ದಿನವನ್ನು (International Yoga Day) ಅದ್ಧೂರಿಯಾಗಿ ಆಚರಿಸಲಾಯಿತು. ಪತಂಜಲಿ ಯೋಗಪೀಠ, ಹರಿಯಾಣ ಯೋಗ ಆಯೋಗ ಮತ್ತು ಹರಿಯಾಣದ ಆಯುಷ್ ಇಲಾಖೆ ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದವು. ಹರಿಯಾಣದ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ, ಸ್ವಾಮಿ ರಾಮದೇವ್ ಬಾಬಾ ಮತ್ತು ಆಚಾರ್ಯ ಬಾಲಕೃಷ್ಣ ಅವರು ಐತಿಹಾಸಿಕ ಬ್ರಹ್ಮ ಸರೋವರದಲ್ಲಿ ಯೋಗ ಸೆಷನ್ನ ನಡೆಸಿದರು. ಒಂದು ಲಕ್ಷಕ್ಕೂ ಹೆಚ್ಚು ಯೋಗ ಪಟುಗಳು ಒಟ್ಟಾಗಿ ಯೋಗಾಸನ ಮಾಡುವ ಮೂಲಕ, ಹೊಸ ಮೈಲಿಗಲ್ಲಿಗೆ ಸಾಕ್ಷಿಯಾದರು.
ಪತಂಜಲಿ ಯೋಗ ಸಮಿತಿಯು ಭಾರತದಾದ್ಯಂತ 650 ಜಿಲ್ಲೆಗಳಲ್ಲಿ ಉಚಿತ ಯೋಗ ತರಬೇತಿ ತರಗತಿಗಳನ್ನು ನಡೆಸಿದೆ ಎಂದು ಬಾಬಾ ರಾಮದೇವ್ ಹೇಳಿದರು. ಈ ವರ್ಷದ ಯೋಗ ದಿನದ ಥೀಮ್ “ಒಂದು ಭೂಮಿ, ಒಂದು ಆರೋಗ್ಯ”.
“ಯೋಗವು ಜಾಗತಿಕ ಆಂದೋಲನವಾಗಿ ಮಾರ್ಪಟ್ಟಿದ್ದು, ಪ್ರಪಂಚದಾದ್ಯಂತ ಎರಡು ಬಿಲಿಯನ್‌ಗೂ ಹೆಚ್ಚು ಜನರು ಯೋಗ ಅಭ್ಯಾಸ ಮಾಡುತ್ತಿದ್ದಾರೆ. ಯೋಗವು ನಮ್ಮ ಸಂಪ್ರದಾಯಗಳು ಮತ್ತು ಪ್ರಕೃತಿಯಲ್ಲಿ ಬೇರೂರಿರುವ ಸನಾತನ ಧರ್ಮದ ಸಾರವಾಗಿದೆ. ಜಾಗತಿಕವಾಗಿ ಯೋಗವನ್ನು ಉತ್ತೇಜಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ‘ಯೋಗಿ ಯೋಧ’ ಎಂದು ಹಾಡಿ ಹೊಗಳಿದರು.
ಭಾರತದ ಪ್ರಧಾನಿಗಳು, ರಾಷ್ಟ್ರಪತಿ, ಗೃಹ ಸಚಿವರು ಮತ್ತು ರಕ್ಷಣಾ ಸಚಿವರು ಎಲ್ಲರೂ ಯೋಗವನ್ನು ಅಭ್ಯಾಸ ಮಾಡುತ್ತಾರೆ. ಇದು ರಾಷ್ಟ್ರೀಯ ನಾಯಕರ ಜೀವನಶೈಲಿಯಾಗಿದೆ. ಯೋಗವು ದೇಶದ ಆರೋಗ್ಯ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಪ್ರಸ್ತುತ ವಾರ್ಷಿಕವಾಗಿ 10 ಲಕ್ಷ ಕೋಟಿ ರೂ.ಗಳಷ್ಟಿದೆ. “ದೇಶದಲ್ಲಿ ಪ್ರತಿಯೊಬ್ಬರೂ ಯೋಗವನ್ನು ಅಭ್ಯಾಸ ಮಾಡಿದರೆ, ಆರೋಗ್ಯ ಬಜೆಟ್ ಅನ್ನು ಶೂನ್ಯಕ್ಕೆ ಇಳಿಸಬಹುದು” ಎಂದು ಅವರು ಹೇಳಿದರು.
ಬಾಬಾ ರಾಮ್‌ದೇವ್ ಅವರು ಯೋಗವನ್ನು ಭಾರತದ ಆರ್ಥಿಕಕ್ಕೆ ಲಿಂಕ್ ಮಾಡಿದ್ದಾರೆ. 1765 ಮತ್ತು 1900 ರ ನಡುವೆ ವಿದೇಶಿ ಕಂಪನಿಗಳು ಭಾರತದಿಂದ 100 ಟ್ರಿಲಿಯನ್‌ಗಿಂತಲೂ ಹೆಚ್ಚು ಲೂಟಿ ಮಾಡಿವೆ. ನಾಗರಿಕರು ದೈನಂದಿನ ಜೀವನದಲ್ಲಿ ಸ್ವದೇಶಿ ಉತ್ಪನ್ನಗಳನ್ನು ಬಳಸುವಂತೆ ಮನವಿ ಮಾಡಿದರು. ಪತಂಜಲಿ ತನ್ನ ‘ಪ್ರಾಸ್ಪರಿಟಿ ಫಾರ್ ಚಾರಿಟಿ’ ಮಿಷನ್ ಅಡಿಯಲ್ಲಿ ತನ್ನ ಲಾಭದ ಶೇ 100 ರಷ್ಟು ಕೊಡುಗೆ ರಾಷ್ಟ್ರಕ್ಕೆ ನೀಡುತ್ತದೆ ಎಂದು ಹೇಳಿದರು.
ಪತಂಜಲಿ ಸಂಸ್ಥೆಯು ಪತಂಜಲಿ ಗುರುಕುಲಂ ಮತ್ತು ಆಚಾರ್ಯಕುಲಂನಂತಹ ಸಂಸ್ಥೆಗಳನ್ನು ಪ್ರಾರಂಭಿಸಿದೆ. ದೇಶವನ್ನು ವಸಾಹತುಶಾಹಿ ಶಿಕ್ಷಣ ವ್ಯವಸ್ಥೆಯಿಂದ ಮುಕ್ತಗೊಳಿಸಲು ಮತ್ತು ಸದೃಢ ವ್ಯಕ್ತಿತ್ವದ ನಾಯಕರನ್ನು ನಿರ್ಮಿಸಲು ಭಾರತೀಯ ಶಿಕ್ಷಾ ಮಂಡಳಿಯೊಂದಿಗೆ (BSB) ಒಪ್ಪಂದ ಮಾಡಿಕೊಂಡಿದೆ ಎಂದರು.
ದಿನನಿತ್ಯ 30 ರಿಂದ 60 ನಿಮಿಷಗಳ ಯೋಗ ಮಾಡುವುದರಿಂದ ರೋಗನಿರೋಧಕ ಶಕ್ತಿಯನ್ನು ಸುಧಾರಿಸಬಹುದು. ರೋಗಗಳನ್ನು ಹಿಮ್ಮೆಟ್ಟಿಸಬಹುದು ಮತ್ತು ಆರೋಗ್ಯಕರ ಮತ್ತು ಸಂತೋಷದ ಜೀವನಕ್ಕೆ ಕಾರಣವಾಗಬಹುದು ಎಂದು ಆಚಾರ್ಯ ಬಾಲಕೃಷ್ಣ ಹೇಳಿದರು. ಪತಂಜಲಿ ಸಂಶೋಧನಾ ಪ್ರತಿಷ್ಠಾನವು ನಿಯತಕಾಲಿಕೆಗಳಲ್ಲಿ ಯೋಗದ ಕುರಿತು ನೂರಾರು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದೆ.
ಹರಿಯಾಣದಾದ್ಯಂತ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ 11 ಲಕ್ಷಕ್ಕೂ ಹೆಚ್ಚು ಜನರು ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದರು. ಬ್ರಹ್ಮ ಸರೋವರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಒಟ್ಟಾಗಿ ಯೋಗಾಭ್ಯಾಸ ಮಾಡಿದರು. ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ, ಸಚಿವೆ ಆರತಿ ರಾವ್, ಸಂಸದ ನವೀನ್ ಜಿಂದಾಲ್, ಆಯುಷ್ ಡಿಜಿ ಸಂಜೀವ್ ವರ್ಮಾ ಮತ್ತು ಪತಂಜಲಿ ಮತ್ತು ಹರಿಯಾಣ ಯೋಗ ಆಯೋಗದ ಪ್ರತಿನಿಧಿಗಳು ಭಾಗವಹಿಸಿದ್ದರು.
ಇದನ್ನೂ ಓದಿ: ಯೋಗ, ಸೂರ್ಯ ನಮಸ್ಕಾರದಲ್ಲಿ 2 ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ ಆಂಧ್ರಪ್ರದೇಶ
ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರು ಯೋಗವನ್ನು ರಾಜ್ಯಾದ್ಯಂತ ಹರಡಲು ಮತ್ತು ಹರಿಯಾಣವನ್ನು ವ್ಯಸನ ಮತ್ತು ಒತ್ತಡದಿಂದ ಮುಕ್ತಗೊಳಿಸಲು ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








