Guru Dutt Birthday : ‘ಪ್ಯಾಸಾ’ದ ನಮ್ಮೆಲ್ಲರ ಖಾಸಾದೋಸ್ತ್ ‘ವಿಜಯ’ ನಿಮಗಿದೋ ಶುಭಾಶಯ!
Indian Cinema : ‘ಕಣ್ಣಲ್ಲೇ ಭಾವಗಳ ವ್ಯಕ್ತಪಡಿಸುವ, ಹಣೆಯ ನಿರಿಗೆಗಳಲಿ ಗಾಢ ವಿಷಾದ ತೋರಿಸುವ, ತುಟಿಯಂಚಿನ ಹೌದೋ ಅಲ್ಲವೋ ಎನ್ನುವ ಮುಗುಳ್ನಗೆಯಲ್ಲಿ ತುಂಟತನ, ಪ್ರೀತಿ ಎಲ್ಲವನ್ನೂ ವ್ಯಕ್ತ ಪಡಿಸುವ ಗುರುದತ್ ಅವರ ಅಭಿನಯಕ್ಕೆ ಸಾಟಿಯಾದವರು ನನಗಂತೂ ಮತ್ತೊಬ್ಬರು ಕಂಡಿಲ್ಲ‘ ಶುಭಾ ಎ.ಆರ್.
ವಸಂತಕುಮಾರ ಶಿವಶಂಕರ ಪಡುಕೋಣೆ; ಯಾರಿವರು? ನಮ್ಮವರೇ, ನಮ್ಮ ಕನ್ನಡದ ನೆಲದವರೇ. ನಮ್ಮೆಲ್ಲರಿಗೂ ಖಾಸಾ ಆದ ‘ಪ್ಯಾಸಾ’ದ ಗುರುದತ್ – Guru Dutt! ಈಗ ನಿಮ್ಮ ಕಣ್ಣಮುಂದೆ ಪಿಕ್ನಿಕ್, ಸಾಂಝ್ ಔರ್ ಸವೇರಾ, ಸುಹಾಗನ್, ಬಹೂರಾಣಿ, ಭರೋಸಾ, ಸಾಹಿಬ್ ಬೀವಿ ಔರ್ ಗುಲಾಮ್, ಸೌತೇಲಾ ಭಾಯೀ, ಚೌದ್ವೀ ಕಾ ಚಾಂದ್, ಕಾಗಝ್ ಕೇ ಫೂಲ್… ಪಟಪಟನೇ ಸಿನೆಮಾ ರೀಲುಗಳು ಬಿಚ್ಚಿಕೊಳ್ಳುತ್ತಿರಬಹುದು. ಭಾರತೀಯ ಸಿನೆಮಾ ಕಂಡ ಅಪ್ರತಿಮ ನಟ, ನಿರ್ದೇಶಕ, ನೃತ್ಯ ನಿರ್ದೆಶಕ, ನಿರ್ಮಾಪಕ ಗುರುದತ್ ಅವರ ಕಲಾವಂತಿಕೆಯ ಮೋಡಿಯೇ ಅಂಥದ್ದು. ಅವರು ಬದುಕಿದ್ದರೆ ಇಂದಿಗೆ 86 ವರ್ಷಗಳಾಗುತ್ತಿದ್ದವು. ಇಂದಿಗೂ ಜಗತ್ತಿನಾದ್ಯಂತ ಸಾಕಷ್ಟು ಸಿನೆಮಾಪ್ರಿಯರು ಅವರ ನಟನೆಯ ಕೌಶಲವನ್ನು, ಕಲಾತ್ಮಕ ನಿರ್ದೇಶನದ ಸಿನೆಮಾಗಳನ್ನು ನೋಡುತ್ತ ಹಾಡಿಗೆ ಕಿವಿಯಾಗುತ್ತ ಭಾವಕೋಶಗಳನ್ನು ಚಿಗುರಿಸಿಕೊಳ್ಳುತ್ತಿರುತ್ತಾರೆ. ಇದು ಕಲೆಯ ಮತ್ತು ಕಲಾವಿದನ ಸಾರ್ಥಕ್ಯ. ಈ ಸಂದರ್ಭದಲ್ಲಿ ಲೇಖಕಿ ಎ. ಆರ್. ಶುಭಾ ಅವರು ಗುರುದತ್ ಅವರನ್ನು ನೆನಪಿಸಿಕೊಂಡಿದ್ಧಾರೆ.
ಆಗಿನ್ನೂ ನನಗೆ ಹಿಂದಿ ಭಾಷೆಯ ಓದು ಬರಹ ಆರಂಭವಾಗಿರಲಿಲ್ಲ. ಹಿಂದಿ ಚಿತ್ರಗಳ ಬಗ್ಗೆಯಂತೂ ಏನೂ ಗೊತ್ತಿರಲಿಲ್ಲ. ಒಳ್ಳೊಳ್ಳೆಯ ಕನ್ನಡ ಚಿತ್ರಗಳು ಬಂದಾಗ ಅಮ್ಮ ಕರೆದುಕೊಂಡು ಹೋಗುತ್ತಿದ್ದುದರಿಂದ ರಾಜ್ ಕುಮಾರ್, ಶ್ರೀನಾಥ್ , ವಿಷ್ಣುವರ್ಧನ್, ಅಶೋಕ್, ರಾಜೇಶ್ರಂತಹ ಹೀರೋಗಳೂ ಆರತಿ, ಭಾರತಿ, ಕಲ್ಪನಾ, ಮಂಜುಳಾ, ಬಿ. ಸರೋಜಾದೇವಿ, ಜಯಂತಿಯಂತಹ ಹೀರೋಯಿನ್ಗಳ ಮುಖ ಮಾತ್ರ ಪರಿಚಯವಿತ್ತೆ ಹೊರತು ಹಿಂದಿ ಚಲನಚಿತ್ರಗಳ ಬಗ್ಗೆ ಎಬಿಸಿಡಿ ಸಹ ತಿಳಿದಿರಲಿಲ್ಲ. ಆಗ ಮನೆಗೆ ವೃತ್ತಪತ್ರಿಕೆಯೂ ಬರುತ್ತಿರಲಿಲ್ಲ. ನಾನು ಐದನೇ ಕ್ಲಾಸಿನಲ್ಲಿದ್ದಾಗ ಮನೆಯಲ್ಲಿದ್ದ ಪುಟ್ಟ ರೇಡಿಯೋ ಮೊದಲು ಹಿಂದಿಯನ್ನು ಪರಿಚಯಿಸಿದ್ದು. ರಾತ್ರಿ ಹೊತ್ತು ಮಲಗುವ ಮುನ್ನ ಭೂಲೆ ಬಿಸರೆ ಗೀತ್, ಬೇಲಾ ಕೆ ಫೂಲ್ ಕಾರ್ಯಕ್ರಮಗಳನ್ನು ಕೇಳುತ್ತಾ ಮಲಗುವ ರೂಢಿ ಮನೆಯವರೆಲ್ಲರಿಗೂ.
ಭಾಷೆ ಅರ್ಥವಾಗದಿದ್ದರೂ ಭಾವ ಮನಸ್ಸನ್ನು ಗಾಢವಾಗಿ ತಟ್ಟುತ್ತಿದ್ದುದರಿಂದ ಹಿಂದಿ ಚಿತ್ರಗೀತೆಗಳು ಬಹಳ ಅಪ್ಯಾಯಮಾನವಾಗುತ್ತಿದ್ದವು.
ಯಹ್ ಮಹಲೋಂ, ಯಹ್ ತಖ್ತೋಂ ಯಹ್ ತಾಜೋಂ ಕಿ ದುನಿಯಾ…
ವಕ್ತ್ ನೇ ಕಿಯಾ ಕ್ಯಾ ಹಸೀ ಸಿತಮ್ ಹಮ್ ರಹೇ ನ ತುಮ್ ಹಮ್ ರಹೇ ನ ಹಮ್
ಚೌದವೀಂ ಕಾ ಚಾಂದ್ ಹೋ…
ಒಂದಲ್ಲ ಎರಡಲ್ಲ. ಇಂತಹುದೆ ಮಧುರವಾದ ಗೀತೆಗಳನ್ನ ಕನ್ನಡದಲ್ಲಿ ಬರೆದುಕೊಂಡು ಕಲಿಯುತ್ತಿದ್ದ ಕಾಲ. ಆರನೇ ಕ್ಲಾಸಿಗೆ ಬರುವ ಹೊತ್ತಿಗೆ ಮನೆಗೆ ಲೂಮಿನೇರ್ ಎಂಬ ಕಂಪನಿಯ ಎರಡು ಷಟರ್ ಬಾಗಿಲುಗಳುಳ್ಳ ದೊಡ್ಡ ಕಪ್ಪು ಬಿಳುಪು ಟಿವಿ ಬಂದಿತು. ಆಗಿನ್ನೂ ಕನ್ನಡದಲ್ಲಿ ದೂರದರ್ಶನ ಪ್ರಸಾರ ಆರಂಭವಾಗಿರಲಿಲ್ಲ. ಪ್ರತೀ ಭಾನುವಾರ ಸಂಜೆ ಒಂದು ಹಿಂದಿ ಚಲನಚಿತ್ರ ಹಾಗೂ ಮಧ್ಯಾಹ್ನದ ಹೊತ್ತು ಪ್ರಶಸ್ತಿ ವಿಜೇತ ವಿವಿಧ ಭಾಷೆಗಳ ಚಲನಚಿತ್ರಗಳು ಪ್ರಸಾರವಾಗುತ್ತಿದ್ದವು. ಕಥೆ ಇಷ್ಟವಾದರೆ ಪೂರಾ ನೋಡುತ್ತಿದ್ದೆ ಇಲ್ಲದಿದ್ದರೆ ಅರ್ಧಕ್ಕೆದ್ದು ಆಟಕ್ಕೆ ಓಡುತ್ತಿದ್ದೆ. ಹೀಗೇ ಒಂದು ಭಾನುವಾರ ಮಧ್ಯಾಹ್ನ ಪ್ಯಾಸಾ ಎಂಬ ಚಲನಚಿತ್ರ ಪ್ರಸಾರವಾಯಿತು. ಹುಡುಗಾಟದ ವಯಸ್ಸು ಕಥೆ ಅರ್ಥವಾಗದೆ ಇನ್ನೇನು ಏಳಬೇಕೆನ್ನುವಷ್ಟರಲ್ಲಿ ಯಹ್ ಮಹಲೋಂ, ಯಹ್ ತಖ್ತೋ ಯಹ್ ತಾಜೋಂ ಕಿ ದುನಿಯಾ ಎಂಬ ಹಾಡು ಆರಂಭವಾಯಿತು. ಅರೆರೇ… ಇದು ನಾನು ಬಹಳ ಸಲ ಕೇಳಿರುವ ಹಾಡು ಎಂದು ಮತ್ತೆ ಕುಳಿತೆ. ದುಂಡುಮೊಗದ ಚಿಗುರು ಮೀಸೆಯ ನಾಯಕ ಕಡುವಿಷಾದವನ್ನ ಕಣ್ಣುಗಳಲ್ಲಿ ತುಂಬಿಕೊಂಡು ಹಾಡುತ್ತಿದ್ದುದು ಕಣ್ಣಿಗೆ ಈಗಲೂ ಕಟ್ಟಿದಂತಿದೆ. ಅಷ್ಟು ಹೊತ್ತಿಗಾಗಲೇ ಹಲವಾರು ಹಿಂದಿ ಚಲನಚಿತ್ರಗಳನ್ನು ನೋಡಿದ್ದರೂ ಸಹಾ ಯಾವ ಮುಖವೂ, ಯಾರ ಅಭಿನಯವೂ ಮನಸ್ಸಿಗೆ ಇಷ್ಟೊಂದು ಆಪ್ತವಾಗಿರಲಿಲ್ಲ.
ಗುರುದತ್ ಒಬ್ಬ ನಿರ್ದೇಶಕನಾಗಿ, ನಿರ್ಮಾಪಕನಾಗಿ ನಾಯಕನಾಗಿ ಆ ಕಾಲದ ಹಿಂದಿ ಚಲನಚಿತ್ರ ಅಭಿಮಾನಗಳ ಮನಸ್ಸಿನಲ್ಲಿ ಹೃದಯದಲ್ಲಿ ಚಿರಕಾಲ ನಿಂತುಬಿಟ್ಟಿರುವುದಂತೂ ಸತ್ಯ. ಕಡುಬಡತನ, ಶೋಷಣೆಗಳ ಬಗ್ಗೆ ಸಿರಿವಂತಿಕೆ ಅಹಂಕಾರ ದೌರ್ಜನ್ಯಗಳ ವಿರುದ್ಧ ಸಿಡಿದೆದ್ದು ಅದೇ ಕಡು ವಿಷಾದ ಮತ್ತು ಪ್ರತಿಭಟನೆಯನ್ನ ತನ್ನ ಕವಿತೆಗಳಲ್ಲಿ ಹೊಮ್ಮಿಸುತ್ತಾ ಮನೆಯವರ, ಸಮಾಜದ ಉಳ್ಳವರ ಅಪಹಾಸ್ಯಕ್ಕೆ ತುತ್ತಾಗುವ ಕವಿ, ಬೀದಿಬದಿಯ ಹೆಣ್ಣೊಬ್ಬಳ ಅಪಾರ ಗೌರವ, ಆರಾಧನೆಗೆ ಒಳಗಾಗುವ ಬದುಕಿದ್ದರೂ ಸನ್ನಿವೇಶದ ನಾಟಕೀಯತೆಗೊಳಗಾಗಿ ಸತ್ತ ಎನಿಸಿಕೊಂಡು ಮತ್ತೆ ತನ್ನ ಅಸ್ತಿತ್ವಕ್ಕಾಗಿ ತೊಳಲಾಡುವ ವಿಜಯನ ಪಾತ್ರ ಒಮ್ಮೆ ನೋಡಿದವರೆಂದಾದರೂ ಮರೆಯಲಾದೀತೆ.
ದ ಗ್ರೇಟೆಸ್ಟ್ ಫಿಲ್ಮ್ ಎವರ್ ಮೇಡ್ ಎಂದೇ ಹೆಸರಾದ ‘ಪ್ಯಾಸಾ’ದ ಈ ಅದ್ಭುತ ನಟ, ನಿರ್ದೇಶಕ, ನಿರ್ಮಾಪಕ ಎಲ್ಲವೂ ಗುರುದತ್ ಎಂಬ ವಿಸ್ಮಯ! ಪ್ಯಾಸಾ ಒಂದು ರೊಮ್ಯಾಂಟಿಕ್ ಚಿತ್ರವೂ ಹೌದು. ಪ್ರೇಮದ ಮಧುರ ಅನುಭೂತಿಗಳನ್ನ ಅದ್ಭುತವಾಗಿ ಚಿತ್ರಿಸಲ್ಪಟ್ಟ ಕಾಗಜ್ ಕೆ ಫೂಲ್, ಚೌದವೀ ಕಾ ಚಾಂದ್ ಗಳೂ ಸಹಾ ಇಂದಿಗೂ ಕ್ಲಾಸಿಕ್ ಚಿತ್ರಗಳ ಮನಸ್ಸನ್ನು ಸೂರೆಗೊಳ್ಳುತ್ತವೆಂದರೆ ಅದಕ್ಕೆ ಗುರುದತ್ರ ಪ್ರತಿಭೆಯೇ ಮುಖ್ಯ ಕಾರಣ. ಹಳೆಯ ಲಕ್ನೋದ ಇಸ್ಲಾಮಿಕ್ ಸಂಸ್ಕೃತಿಯಲ್ಲಿ ಜಮೀಲಾ (ವಹೀದಾ ರೆಹಮಾನ್) ಳನ್ನು ಇಬ್ಬರು ಆಪ್ತ ಸ್ನೇಹಿತರಲ್ಲೊಬ್ಬನಾದ ಅಸ್ಲಂನ ಪಾತ್ರದಲ್ಲಿ ಗುರುದತ್ ಅಭಿನಯ ಅವಿಸ್ಮರಣೀಯರು.
ಕಣ್ಣಲ್ಲೇ ಭಾವಗಳ ವ್ಯಕ್ತಪಡಿಸುವ, ಹಣೆಯ ನಿರಿಗೆಗಳಲಿ ಗಾಢ ವಿಷಾದ ತೋರಿಸುವ, ತುಟಿಯಂಚಿನ ಹೌದೋ ಅಲ್ಲವೋ ಎನ್ನುವ ಮುಗುಳ್ನಗೆಯಲ್ಲಿ ತುಂಟತನ, ಪ್ರೀತಿ ಎಲ್ಲವನ್ನೂ ವ್ಯಕ್ತ ಪಡಿಸುವ ಗುರುದತ್ ಅಭಿನಯಕ್ಕೆ ಸಾಟಿಯಾದವರು ನನಗಂತೂ ಮತ್ತೊಬ್ಬರು ಕಂಡಿಲ್ಲ. ನಿರ್ದೇಶಕನಾಗಿ ಅತ್ಯಂತ ರೊಮ್ಯಾಂಟಿಕ್ ಹಾಗೂ ಮೆಲೋಡಿಯಸ್ ಎನಿಸುವ ಚಿತ್ರಗಳನ್ನ ಕೊಟ್ಟು ತನ್ನ ಅಭಿನಯದಿಂದ ಭಾಷೆಯ ಅರಿವೇ ಇಲ್ಲದ ಕಾಲದಲ್ಲೂ ನನ್ನ ಮನಸ್ಸು ಗೆದ್ದವರು ಈ ಗುರುದತ್.
ಗುರುದತ್ ಇಂದು ಇದ್ದಿದ್ದರೆ? 97 ವರ್ಷಗಳು ಎಂದು ಒಣ ಲೆಕ್ಕಾಚಾರ ಹಾಕುವುದಕ್ಕಿಂತ ಆತ್ ಇನ್ನಷ್ಟು ವರ್ಷ ಜೀವಿಸಿದ್ದಿದ್ದರೆ ಇನ್ಮೂ ಅದೆಂತಹ ಮನಸೂರೆಗೊಳ್ಳುವ ಚಿತ್ರಗಳ ದಾಖಲೆಗೆ ಖಂಡಿತಾ ಸಾಕ್ಷಿಯಾಗುತ್ತಿದ್ದರು. ಕಾಲ ಕಳೆದಂತೆ ಅವರ ಮತ್ತಷ್ಟು ಚಿತ್ರಗಳನ್ಮ ನೋಡುವ ಅವಕಾಶ ದೊರಕಿ ನಾನಂತೂ ಅಕ್ಷರಶಃ ಗುರುದತ್ ರ ಅಭಿಮಾನಿಯಾಗಿಬಿಟ್ಟೆ. ಬಾಜ್, ಸಿಐಡಿ, ಸಾಹಿಬ್ ಬೀವೀ ಔರ್ ಗುಲಾಮ್ ಇವುಗಳೂ ಸಹಾ ಗುರುದತ್ರ ಶ್ರೇಷ್ಠ ಚಿತ್ರಗಳು.
ಹಿಂದಿ ಚಿತ್ರ ಎಂದರೆ ನನ್ನ ತಲೆಮಾರಿನವರಿಗೆ, ನನಗೂ ಹಿರಿಯರಿಗೆ ನೆನಪಾಗುವ ಐಕಾನ್ಗಳಲ್ಲಿ ಗುರುದತ್ರೂ ಮೊದಲನೆಯವರೆಂದರೆ ಉತ್ರ್ಪೇಕ್ಷೆಯಲ್ಲ. ನಿನ್ನೆ ಏಕೋ ಗೊತ್ತಿಲ್ಲ ಬಹಳ ವರ್ಷಗಳ ನಂತರ ಸಿಐಡಿ ಚಿತ್ರದ ಎವರ್ ಗ್ರೀನ್ ಹಾಡು ‘ವೊ ಲೇಕೆ ಪೆಹಲಾ ಪೆಹಲಾ ಪ್ಯಾರ್ ಭರ್ ಕೇ ಆಂಖೋಂಮೆ ಖುಮಾರ್’ ನೆನಪಾಗಿ ಹಾಡಿದ್ದೆ. ಮನದಲ್ಲಿ ಗುರುದತ್ ಎಂಬ ನನ್ನ ಬಾಲ್ಯ ಕಾಲದ ಅಚ್ಚುಮೆಚ್ಚಿನ ನಟ ಬಹಳ ನೆನಪಾಗಿದ್ದರು. ಹಾಡಿದ ಕೆಲವೇ ನಿಮಿಷಗಳಲ್ಲಿ ಅವರ ಬಗ್ಗೆ ಕಿರುಬರಹ ಬರೆಯಲು ಅವಕಾಶ ಸಿಕ್ಕಿತು. ವಯಸ್ಸಲ್ಲದ ವಯಸ್ಸಿನಲ್ಲಿ ಅಕಾಲ ಮೃತ್ಯುವಿಗೀಡಾದರೂ ಇಂದಿಗೂ ಎಂದೆಂದಿಗೂ ಅಳಿಸದ ಛಾಪಿದೆ ಹಿಂದಿ ಚಿತ್ರರಂಗದಲ್ಲಿ, ಅವರ ಅಭಿಮಾನಿಗಳಲ್ಲಿ. ಕ್ಲಾಸಿಕ್ ಚಿತ್ರಪ್ರಿಯರಲ್ಲಿ ಸದಾ ಗುರುದತ್ ಜೀವಂತ.
ಜಾನೆ ವೊ ಕೈಸೆ ಲೋಗ್ ಥೆ ಜಿನ್ ಕೆ ಪ್ಯಾರ್ ಕೊ ಪ್ಯಾರ್ ಮಿಲಾ ಹಮ್ ನೆ ತೊ ಜಬ್ ಕಲಿಯಾಂ ಮಾಂಗೀ ಕಾಟೋಂ ಕಾ ಹಾರ್ ಮಿಲಾ
ಎಂದು ಇನ್ನೂ ಹಾಡುತ್ತಿರುವಂತಲೇ ಇದೆ. ಅದೇ ಕಡು ವಿಷಾದದ ಕಣ್ಣುಗಳು , ಅದ್ಭುತ ಪ್ರತಿಭೆಯ ಹೊಳಹಿನಲ್ಲೂ ದುರಂತ ಅಂತ್ಯ ಕಂಡ ಗುರುದತ್. ಬಣ್ಣದ ಲೋಕದದಲ್ಲಿ ಸೃಜನಶೀಲತೆಗೆ ಮತ್ತೊಂದು ಹೆಸರು. ಅಭಿಮಾನಿಗಳ ಹೃದಯದಲ್ಲಿ ನೆನಪು ನಗು ನಟನೆ ಎಲ್ಲ ಸದಾ ಹಸಿರು.
ಇದನ್ನೂ ಓದಿ : M. Balamuralikrishna Birthday : ಕಾರ್ಟೂನು, ಫೈಟಿಂಗ್ ಸೀನ್ ನೋಡೂದಂದ್ರ ಬಾಲಮುರಳಿಯವರಿಗೆ ಅಗದೀ ಜೀವ!
Published On - 2:00 pm, Fri, 9 July 21