Bookmark: ‘ಪುಸ್ತಕೋದ್ಯಮ ಪೂರ್ಣಪ್ರಮಾಣದ ಉದ್ಯಮವಾಗಿಲ್ಲ ಎನ್ನುವುದು ಅಭಿನಂದನೀಯ’

Publications : ‘ಸಂಸ್ಕೃತಿ ಮತ್ತು ಉದ್ಯಮ ಎರಡೂ ಜೊತೆಯಾಗಿ ಮುನ್ನಡೆದರೆ ಅದು ಪ್ರಕಾಶಕರಿಗೂ, ಮಾರಾಟಗಾರರಿಗೂ, ಓದುಗರಿಗೂ ಅನುಕೂಲಕರ. ಆದರೆ, ಯಾವುದೇ ಕಾರಣಕ್ಕೂ ‘ಉದ್ಯಮ’ವು ‘ಸಂಸ್ಕೃತಿ’ಯನ್ನು ಹಿಮ್ಮೆಟ್ಟದಂತೆ ನೋಡಿಕೊಳ್ಳಬೇಕಾದ್ದು ಅತ್ಯವಶ್ಯಕ.’ ಎ. ರಮೇಶ ಉಡುಪ

Bookmark: ‘ಪುಸ್ತಕೋದ್ಯಮ ಪೂರ್ಣಪ್ರಮಾಣದ ಉದ್ಯಮವಾಗಿಲ್ಲ ಎನ್ನುವುದು ಅಭಿನಂದನೀಯ’
ನವಕರ್ನಾಟಕ ಪ್ರಕಾಶನ ಪ್ರೈವೇಟ್ ಲಿಮಿಟೆಡ್ ನ ಕಾರ್ಯನಿರ್ವಾಹಕ ನಿರ್ದೇಶಕ ಎ. ರಮೇಶ ಉಡುಪ
Follow us
ಶ್ರೀದೇವಿ ಕಳಸದ
|

Updated on:Jul 09, 2021 | 5:32 PM

ಎಲ್ಲ ಅಸ್ತವ್ಯಸ್ತಗಳ ನಡುವೆಯೂ ನಮ್ಮ ಮನಸ್ಸನ್ನು ಉಲ್ಲಸಿತಗೊಳಿಸಿಕೊಳ್ಳುವುದು ನಮ್ಮಲ್ಲಿ ಅಂತರ್ಗತವಾಗಿರುವ ಅಭಿರುಚಿಗಳ ಮೂಲದಿಂದಲೇ. ಅಂಗಡಿಗಳು ಮುಚ್ಚಿದರೇನಂತೆ ಆನ್​ಲೈನ್​ ಇದೆಯಲ್ಲ ಎಂದು ಉತ್ಸಾಹದಿಂದ ಪುಸ್ತಕಗಳನ್ನೂ ತರಿಸಿಕೊಂಡೆವು. ಆದರೆ ಕೆಲ ತಿಂಗಳುಗಳ ನಂತರ ನಮ್ಮೆಲ್ಲರ ಸ್ಥಿತಿ, ಪಕ್ಷಿಯ ಕಾಲುಗಳನ್ನು ಗಟ್ಟಿಹಿಡಿದು ‘ಹಾರು ನೋಡೋಣ’ ಎಂಬಂತಾಗುತ್ತ ಬಂದಿತು. ನಮ್ಮ ಸುತ್ತಮುತ್ತಲಿನ ಪರಿಸರ ನೋವನ್ನೇ ನೇಯ್ದು ನೋವನ್ನೇ ತೊಟ್ಟುಕೊಳ್ಳುತ್ತಿರುವಾಗ ಮನಸ್ಸು ಚಿತ್ತೈಸುವುದಾದರೂ ಹೇಗೆ, ಏಕಾಂತಕ್ಕೆ ತೆರೆದುಕೊಳ್ಳದೆ ಬೌದ್ಧಿಕ ಹಸಿವು ತಣಿಯುವುದಾದರೂ ಹೇಗೆ?; ಅಂತೂ ಇದೆಲ್ಲ ಒಂದು ಹಂತಕ್ಕೆ ಮುಗಿದು ಪುಸ್ತಕದ ಅಂಗಡಿಗಳು ಮೆಲ್ಲಗೆ ಕಣ್ಬಿಟ್ಟಿವೆ. ಮತ್ತೆ ವಾರಾಂತ್ಯಕ್ಕೆ ಪುಸ್ತಕದಾತರನ್ನೂ ಮತ್ತವರ ಬಳಗವನ್ನೂ ಎದುರುಗೊಳ್ಳುತ್ತ ಬೇಕಾದ ಪುಸ್ತಕ ಖರೀದಿಸಬಹುದಾಗಿದೆ. ಮರಳಿ ಬರುವಾಗ ಅಚಾನಕ್ಕಾಗಿ ಬಾಗಿಲೊಳಗೆ ಸಿಕ್ಕ ಪರಿಚಿತರು ಮತ್ತು ಆ ಕ್ಷಣಗಳು ಆಪ್ತವಾಗುವ ಗಳಿಗೆಗಳನ್ನೂ ಸವಿಯಬಹುದಾಗಿದೆ.  

ಇಂಥ ಹೊತ್ತಿನಲ್ಲಿ ಕನ್ನಡದ ಪ್ರಮುಖ ಪ್ರಕಾಶಕರೊಂದಿಗೆ ನಡೆಸುವ ಮಾತುಕತೆಗಳು, ಪ್ರತೀ ಶುಕ್ರವಾರ ‘ಟಿವಿ9 ಕನ್ನಡ ಡಿಜಿಟಲ್ : ಬುಕ್​ಮಾರ್ಕ್​ – Bookmark’ ಸರಣಿ ಮೂಲಕ ನಿಮ್ಮನ್ನು ತಲುಪಲಿವೆ.

*

ಖ್ಯಾತ ಪ್ರಕಾಶನ ಸಂಸ್ಥೆ ‘ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೇಟ್ ಲಿಮಿಟೆಡ್​’ ಈಗ 60ರ ಸಂಭ್ರಮದಲ್ಲಿದೆ.  ಕಾರ್ಯನಿರ್ವಾಹಕ ನಿರ್ದೇಶಕ ಎ. ರಮೇಶ ಉಡುಪ ಅವರು, ‘ಪುಸ್ತಕೋದ್ಯಮ ಎನ್ನುವುದು ಪೂರ್ಣಪ್ರಮಾಣದ ಉದ್ಯಮವಾಗಿಲ್ಲ ಎನ್ನುವುದು ಅಭಿನಂದನೀಯ’ ಎಂದು ಹೇಳುತ್ತಿರುವುದರ ಹಿಂದಿರುವ ವಿಚಾರಧಾರೆಯೇನು? ಓದಿ.

*

ಕೊರೊನಾ ಆರಂಭದಲ್ಲಿ ಪರಿಸ್ಥಿತಿ ಹೇಗಿತ್ತು, ನಿಮ್ಮ ದೈನಂದಿನ ವ್ಯವಹಾರಗಳನ್ನು ನಿಭಾಯಿಸುವಲ್ಲಿ ಯಾವ ರೀತಿಯ ಕಷ್ಟಗಳು ಎದುರಾದವು, ಹೇಗೆ ನಿಭಾಯಿಸಿದಿರಿ?

ಕೊರೊನಾ ಹಾವಳಿಗೆ ಮೊದಲೇ ನಾನಾ ಕಾರಣಗಳಿಂದಾಗಿ ಪುಸ್ತಕೋದ್ಯಮ ಸಂಕಷ್ಟಕ್ಕೀಡಾಗಿತ್ತು. ಕಚ್ಚಾವಸ್ತುಗಳ ವಿಪರೀತ ಬೆಲೆ ಏರಿಕೆ; ಅವೈಜ್ಞಾನಿಕ ಮತ್ತು ಅಸಮರ್ಪಕ ಜಿ.ಎಸ್.ಟಿ. ನೀತಿ (ಉದಾಹರಣೆಗೆ, ಲೇಖಕರಿಗೆ ನೀಡುವ ರಾಯಧನದ ಮೇಲೂ ಪ್ರಕಾಶಕರು ಶೇ 12 ಜಿ.ಎಸ್.ಟಿ. ಕಟ್ಟುವಂತಾಗಿದ್ದು- ಇದು ಹಿಂದೆ ಯಾವತ್ತೂ ಇರಲಿಲ್ಲ. ಇಂತಹ ಹಲವು ಸಮಸ್ಯೆಗಳಿವೆ); ಮೊಬೈಲ್, ಇಂಟರ್​ನೆಟ್ ಮುಂತಾದ ವಿದ್ಯುನ್ಮಾನ ಮಾಧ್ಯಮಗಳಿಂದಾಗಿ ಇಳಿಮುಖವಾಗುತ್ತಿರುವ ಪುಸ್ತಕಗಳ ಮಾರಾಟ – ಇವೆಲ್ಲವೂ ಕಳೆದ 3-4ವರ್ಷಗಳಿಂದ ಪ್ರಕಾಶಕರನ್ನು ಆತಂಕಕ್ಕೆ ಈಡುಮಾಡಿತ್ತು. ಹಾಗೆಯೇ, ಪುಸ್ತಕ ಮಾರಾಟಗಾರರಿಗೂ ವರ್ಷಂಪ್ರತಿ ಹೆಚ್ಚುತ್ತಿರುವ ಮಳಿಗೆಯ ಬಾಡಿಗೆ, ಉದ್ಯೋಗಿಗಳ ಸಂಬಳ ಇನ್ನಿತರ ನಿರ್ವಹಣ ವೆಚ್ಚಗಳನ್ನು ನಿಭಾಯಿಸುವುದರ ಜೊತೆಗೆ, ಹಾಕಿದ ಬಂಡವಾಳ ಮತ್ತು ಶ್ರಮಕ್ಕೆ ತಕ್ಕಂತೆ ಲಾಭಾಂಶವನ್ನು ಪುಸ್ತಕ ವ್ಯಾಪಾರ ತಂದುಕೊಡುವುದೆಂಬ ಭರವಸೆ ಇಲ್ಲವಾಗಿತ್ತು. ಇಂತಹಾ ಸಂದಿಗ್ಧ ಪರಿಸ್ಥಿತಿಯಲ್ಲಿ 2020ರ ಆರಂಭದಲ್ಲೇ ಕೊರೊನಾ ಎಲ್ಲೆಡೆ ವ್ಯಾಪಿಸಿ ಪುಸ್ತಕೋದ್ಯಮವನ್ನೂ ನೆಲಕಚ್ಚುವಂತೆ ಮಾಡಿದ್ದಂತೂ ನಿಜ.

ಕರ್ನಾಟಕದಲ್ಲಿ ಕೊರೊನಾ ಸೋಂಕು ಮೊದಲು ಪತ್ತೆಯಾದದ್ದು ಕಲಬುರಗಿಯಲ್ಲಿ, 2020ರ ಮಾರ್ಚ್ ಮೊದಲ ವಾರದಲ್ಲಿ. ಆ ಸಂದರ್ಭದಲ್ಲಿ ಅಲ್ಲಿ ಎರಡು ವಾರಗಳ ಕರ್ಫ್ಯೂ ಜಾರಿ ಮಾಡಿದ್ದರಿಂದಾಗಿ ಅಲ್ಲಿದ್ದ ನಮ್ಮ ಪುಸ್ತಕ ಮಳಿಗೆಯನ್ನೂ ಮುಚ್ಚಬೇಕಾಗಿ ಬಂದದ್ದರಿಂದಾಗಿ ನಮಗೆ ಆಗಲೇ ಮೊದಲ ಬಾರಿ ಸಮಸ್ಯೆಯ ಬಿಸಿ ತಟ್ಟಿತ್ತು. ಸುಮಾರು ಎರಡು ತಿಂಗಳುಗಳ ಕಾಲ ನಮ್ಮೆಲ್ಲ ವ್ಯವಹಾರಗಳು ಸಂಪೂರ್ಣವಾಗಿ ಸ್ಥಗಿತಗೊಂಡು ಆರ್ಥಿಕ ಪರಿಸ್ಥಿತಿ ಗಂಭೀರವಾಯಿತು. ಮುಂದಿನ ಕೆಲವು ತಿಂಗಳುಗಳ ಕಾಲ ಮಳಿಗೆಗಳನ್ನು ತೆರೆದಿದ್ದರೂ ಗ್ರಾಹಕರ ಕೊರತೆಯಿಂದಾಗಿ ವ್ಯಾಪಾರ ಕುಂಟುತ್ತಾ ಸಾಗಿತ್ತು. ಹೀಗಾಗಿ 2020-21 ಆರ್ಥಿಕ ವರ್ಷ ವಿಪರೀತ ನಷ್ಟದಿಂದ ಕೊನೆಗೊಂಡಿತ್ತು. 2020-21ರ ಹೊಸ ಆರ್ಥಿಕ ವರ್ಷ ಇದೇ ಏಪ್ರಿಲ್ 1ರಿಂದ ಆರಂಭಗೊಳ್ಳುತ್ತಿದ್ದಂತೆ ಕೊರೊನಾ ಎರಡನೇ ಅಲೆ ಹರಡಲಾರಂಭಿಸಿತು. ರಾಜ್ಯದ ಒಂದೊಂದೇ ಕಡೆ ಕರ್ಫ್ಯೂ ಮುಂತಾದ ನಿರ್ಬಂಧಗಳನ್ನು ಹೇರಿಯೂ ಪರಿಸ್ಥಿತಿ ಸುಧಾರಿಸದಾದಾಗ ತಿಂಗಳ ಕೊನೆಯಲ್ಲಿ ಮತ್ತೆ ಲಾಕ್​ಡೌನ್​ ಘೋಷಿಸಲಾಗಿ ಎರಡು ತಿಂಗಳ ಕಾಲ ಎಲ್ಲ ವ್ಯವಹಾರಗಳೂ ಮತ್ತೆ ಸ್ಥಗಿತಗೊಂಡವು. ಇನ್ನು ಕೆಲವೇ ತಿಂಗಳಲ್ಲಿ ಮೂರನೇ ಅಲೆಯ ಭೀತಿಯೂ ಇರುವುದರಿಂದ ಈ ವರ್ಷವೂ (2021-22) ಆರ್ಥಿಕ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ. ಪುಸ್ತಕೋದ್ಯಮದ ಎರಡು ಪ್ರಮುಖ ಭಾಗಗಳಾದ ಪುಸ್ತಕ ಪ್ರಕಟಣೆ ಮತ್ತು ಪುಸ್ತಕ ಮಾರಾಟ – ಈ ಎರಡೂ ಕಡೆ ಸಕ್ರಿಯವಾಗಿ ತೊಡಗಿಕೊಂಡಿರುವ ಸಂಸ್ಥೆ ನಮ್ಮದು. ಪ್ರಕಟಣೆ ಇಲ್ಲದೆ ಮಾರಾಟವಿಲ್ಲ ; ಮಾರಾಟವಿಲ್ಲದೆ ಪ್ರಕಟಣೆಗೆ ಬೇಕಾದ ಬಂಡವಾಳ ಇರುವುದಿಲ್ಲ. ಹೀಗಾಗಿ ನಾವು ಕಳೆದ ಒಂದೂವರೆ ವರ್ಷದಿಂದ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಅಕ್ಷರಶಃ ಒದ್ದಾಡಬೇಕಾಯಿತು.

Bookmark Navakarnataka publications

ನವಕರ್ನಾಟಕದ ಪ್ರಕಟಣೆ

ಪರಿಸ್ಥಿತಿಯನ್ನು ನಿಭಾಯಿಸುವುದು ಅಷ್ಟೇನೂ ಸುಲಭವಿರಲಿಲ್ಲ. ನಮ್ಮ ಮೊದಲ ಆದ್ಯತೆ ಸಿಬ್ಬಂದಿಗಳಿಗೆ ಪೂರ್ತಿ ಸಂಬಳವನ್ನು ಸಕಾಲಕ್ಕೆ ನೀಡುವುದಾಗಿತ್ತು. ಕಾಗದ ಮತ್ತು ಪುಸ್ತಕಗಳ ಖರೀದಿ, ಮಳಿಗೆಗಳ ಬಾಡಿಗೆ, ನಿರ್ವಹಣಾ ವೆಚ್ಚಗಳನ್ನು ಕಂತುಗಳಲ್ಲಿ ಪಾವತಿಸಬೇಕಾಯಿತು. ಮಳಿಗೆಗಳ ಮಾಲಿಕರು ಸ್ವಲ್ಪ ರಿಯಾಯಿತಿಯನ್ನೂ ನೀಡಿ ಸಹಕರಿಸಿದ್ದರು ಕೂಡ. ಹೀಗೆ ಅತ್ಯಗತ್ಯವಾದ ದೈನಂದಿನ ಖರ್ಚು-ವೆಚ್ಚಗಳನ್ನು ನಿಭಾಯಿಸುವ ಸಲುವಾಗಿ ನಮ್ಮ ಪ್ರಕಟಣ ಯೋಜನೆಗಳನ್ನು ಗಣನೀಯವಾಗಿ ಕಡಿತಗೊಳಿಸಬೇಕಾಯಿತು. ಮುಖ್ಯವಾಗಿ, ಸಂಸ್ಥೆಯ 60ರ ಸಂಭ್ರಮದ (1960-2020) ಹಲವು ಯೋಜನೆಗಳನ್ನು ಮೊಟಕುಗೊಳಿಸಬೇಕಾಗಿ ಬಂದದ್ದು ನಮಗೆ ತುಂಬಾ ಬೇಸರದ ಸಂಗತಿ.

ಆನ್‌ಲೈನ್ ಮಾರಾಟ ಹೇಗಿತ್ತು, ಇ-ಬುಕ್ ಮತ್ತು ಆಡಿಯೋ ಬುಕ್‌ಗಳಿಗೆ ಬೇಡಿಕೆ ಹೇಗಿತ್ತು? ಆಸಕ್ತ ಓದುಗರು ಆನ್‌ಲೈನ್ ಮೂಲಕ ಮುದ್ರಿತ ಪುಸ್ತಕಗಳನ್ನು ಖರೀದಿಸಲು ಸಾಧ್ಯವಾಯಿತು, ಕೊರೊನಾಗೆ ಹಿಂದಿನ ಅವಧಿಗೆ ಹೋಲಿಸಿದರೆ, ಲಾಕ್​ಡೌನ್ ಕಾಲದಲ್ಲಿ ಆನ್‌ಲೈನ್ ಮಾರಾಟ 2-3 ಪಟ್ಟು ಹೆಚ್ಚಾಯಿತು. ಇಷ್ಟಾಗಿಯೂ, ಇದು ನಮ್ಮ ವಾರ್ಷಿಕ ವಹಿವಾಟಿನ ಶೇ. 5ರಷ್ಟು ಮಾತ್ರವೇ ಇತ್ತು. ಆದ್ದರಿಂದ ನಮ್ಮ ಆರ್ಥಿಕ ಮುಗ್ಗಟ್ಟಿಗೆ ಇದು ಪರಿಹಾರ ಒದಗಿಸುವುದು ಸಾಧ್ಯವಾಗಲಿಲ್ಲ.

ಇ-ಬುಕ್ ಮತ್ತು ಆಡಿಯೋ ಬುಕ್‌ಗಳಿಗೆ ಸದ್ಯದಲ್ಲಿ ದೊಡ್ಡ ಬೇಡಿಕೆ ಇಲ್ಲ. ಕಾರಣ, ನಮ್ಮ ಓದುಗರು ಇನ್ನೂ ಮುದ್ರಿತ ಪುಸ್ತಕಗಳನ್ನೇ ಹೆಚ್ಚು ಇಷ್ಟಪಡುತ್ತಿದ್ದಾರೆ. ಆದರೆ, ತಂತ್ರಜ್ಞಾನದ ಈ ಹೊಸ ಓದಿಗೆ ಕ್ರಮೇಣ ಬೇಡಿಕೆ ಹೆಚ್ಚಲಿದೆ. ಅದರ ಮುನ್ಸೂಚನೆ ಕಂಡುಬರುತ್ತಿದೆ.

‘ಪುಸ್ತಕ ಸಂಸ್ಕೃತಿ’ ಮತ್ತು ‘ಪುಸ್ತಕೋದ್ಯಮ’ ಜೊತೆಯಾಗಿ ಮುನ್ನಡೆಯಲು ಸಾಧ್ಯವೆ? ಅಥವಾ ‘ಉದ್ಯಮ’ ‘ಸಂಸ್ಕೃತಿ’ಯನ್ನು ಹಿಮ್ಮೆಟ್ಟಿಸುವುದೆ? ಪುಸ್ತಕ ಸಂಸ್ಕೃತಿಯ ಉಳಿವು ಮತ್ತು ವಿಕಾಸ ಹೇಗೆ?

ನಾವು ಎಷ್ಟೇ ‘ಪುಸ್ತಕೋದ್ಯಮ’ ಎಂಬ ಹೆಸರಿನಿಂದ ಕರೆದರೂ ಅದು ಇನ್ನೂ ಉದ್ಯಮದ ಮಟ್ಟಕ್ಕೆ ತಲುಪಿಲ್ಲ; ಹೆಸರಿಗಷ್ಟೇ ಉದ್ಯಮ. ಬಹುತೇಕ ಪ್ರಕಾಶಕರು (‘ಗ್ರಂಥಾಲಯ’ ಪ್ರಕಾಶಕರನ್ನು ಹೊರತುಪಡಿಸಿ) ಇಂದಿಗೂ ಪುಸ್ತಕ ಪ್ರಕಟಣೆಯನ್ನು ಸಾಂಸ್ಕೃತಿಕ ದೃಷ್ಟಿಯಿಂದಲೇ ನೋಡುತ್ತಿರುವುದು ಅಭಿನಂದನೀಯ. ಹಾಗಾಗಿ, ಪುಸ್ತಕ ಸಂಸ್ಕೃತಿಯ ಬೇರುಗಳು ಇನ್ನೂ ಗಟ್ಟಿಯಾಗಿಯೇ ಇವೆ. ಈ ಪುಸ್ತಕಗಳು ಓದುಗರ ಕೈಸೇರಬೇಕಾದಲ್ಲಿ ಮಾರಾಟದ ವ್ಯವಸ್ಥೆಯನ್ನು ಉದ್ಯಮದ ರೀತಿಯಲ್ಲೇ ನಡೆಸಿಕೊಂಡು ಹೋಗುವುದೇ ಸೂಕ್ತ. ಆದ್ದರಿಂದ ‘ಸಂಸ್ಕೃತಿ’ ಮತ್ತು ‘ಉದ್ಯಮ’ ಎರಡೂ ಜೊತೆಯಾಗಿ ಮುನ್ನಡೆದರೆ ಅದು ಪ್ರಕಾಶಕರಿಗೂ, ಮಾರಾಟಗಾರರಿಗೂ, ಓದುಗರಿಗೂ ಅನುಕೂಲಕರ. ಆದರೆ, ಯಾವುದೇ ಕಾರಣಕ್ಕೂ ‘ಉದ್ಯಮ’ ‘ಸಂಸ್ಕೃತಿ’ಯನ್ನು ಹಿಮ್ಮೆಟ್ಟದಂತೆ ನೋಡಿಕೊಳ್ಳಬೇಕಾದ್ದು ಅತ್ಯವಶ್ಯಕ. ಸದಭಿರುಚಿಯ ಓದನ್ನು ಬೆಳೆಸುವಲ್ಲಿ ಪ್ರಕಾಶಕರ ಮತ್ತು ಪುಸ್ತಕ ಮಾರಾಟಗಾರರ ಜೊತೆ ‘ಕನ್ನಡ ಪುಸ್ತಕ ಪ್ರಾಧಿಕಾರ’ ಮತ್ತು ‘ಕನ್ನಡ ಅಭಿವೃದ್ಧಿ ಪ್ರಾಧಿಕಾರ’ಗಳು ಕೈಜೋಡಿಸುವುದರ ಮೂಲಕ ನಾಡಿನಲ್ಲಿ ‘ಪುಸ್ತಕ ಸಂಸ್ಕೃತಿ’ಯನ್ನು ಇನ್ನಷ್ಟು ಗಟ್ಟಿಗೊಳಿಸಬೇಕಾದದ್ದು ಇಂದಿನ ಅಗತ್ಯ. ಹಾಗೆಯೇ, ಸರಕಾರದ ವಿವಿಧ ಇಲಾಖೆಗಳ ಪುಸ್ತಕ ಖರೀದಿಯಲ್ಲಿ ಗುಣಮಟ್ಟವನ್ನು ಕಾಪಾಡಿಕೊಳ್ಳುವುದು ಕೂಡ ಬಹಳ ಮುಖ್ಯ. ಎಲ್ಲದಕ್ಕೂ ಮುಖ್ಯವಾಗಿ, ಶಾಲೆಗಳಲ್ಲಿ ವಾರಕ್ಕೆ ಒಂದು ಗಂಟೆಯಾದರೂ ಗ್ರಂಥಾಲಯ ಪುಸ್ತಕಗಳ ವಾಚನಕ್ಕೆ ಅನುವು ಮಾಡಿಕೊಟ್ಟು ಎಳವೆಯಲ್ಲೇ ಪುಸ್ತಕಗಳ ಅಭಿರುಚಿ ತುಂಬುವುದು ಬಹಳ ಪರಿಣಾಮಕಾರಿಯಾಗಬಹುದು ; ಹಾಗೂ ಮುಂದಿನ ಪೀಳಿಗೆಯವರಿಗೂ ಪುಸ್ತಕ ಸಂಸ್ಕೃತಿಯನ್ನು ಉಳಿಸುವಲ್ಲಿ ಮಹತ್ವದ ಹೆಜ್ಜೆಯಾಗಬಹುದು.

ಹೀಗೆ ಹೇಳಿ, ಎಲ್ಲವನ್ನೂ ಸರಕಾರಕ್ಕೆ ಬಿಟ್ಟುಕೊಡುವುದಲ್ಲ. ಪ್ರಕಾಶಕರು ಮತ್ತು ಮಾರಾಟಗಾರರು ರಾಜ್ಯಾದ್ಯಂತ ಪುಸ್ತಕ ಪ್ರದರ್ಶನ, ಪುಸ್ತಕ ಕುರಿತ ಚರ್ಚೆ, ಶಾಲೆ-ಕಾಲೇಜುಗಳಲ್ಲಿ ವಿಮರ್ಶಾ ಸ್ಪರ್ಧೆ ಮತ್ತಿತರ ಸಾಹಿತ್ಯಕ ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಮೂಲಕ ಜಾಗೃತಿ ಮೂಡಿಸುವುದೂ ಬಹಳ ಮುಖ್ಯ.

ಪ್ರಸ್ತುತ ರಾಜಕೀಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಿನ್ನೆಲೆಯಲ್ಲಿ ಪುಸ್ತಕೋದ್ಯಮದ ಭವಿಷ್ಯದ ಬಗ್ಗೆ ನಿಮ್ಮ ವಿಚಾರ, ಅನಿಸಿಕೆ. ರಾಜಕೀಯ ಮತ್ತು ಸೈದ್ಧಾಂತಿಕ ಕಾರಣಗಳಿಗಾಗಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿರುವುದು ಅತ್ಯಂತ ಖಂಡನೀಯ. ಇದು ಹಿಂದಿನಿಂದಲೂ ಆಳುವವರು ನಡೆಸಿಕೊಂಡು ಬಂದಿರುವ ದೌರ್ಜನ್ಯ. ಹಿಂದೆ ತೆರೆಮರೆಯಲ್ಲಿ ಸಣ್ಣ ಮಟ್ಟದಲ್ಲಿ ಇದ್ದ ಈ ಕುತಂತ್ರ ಈಗ ಗಂಭೀರ ಸ್ವರೂಪ ಪಡೆದಿದೆ. ಈವರೆಗೆ ಹೆಚ್ಚಾಗಿ ರಾಜಕೀಯ ವಿರೋಧಿಗಳ ಮೇಲೆ ಅಸ್ತ್ರವಾಗಿ ಬಳಸಿಕೊಂಡು ಬಂದಿರುವ ಈ ಪ್ರಯೋಗವನ್ನು ಇತ್ತೀಚಿನ ವರ್ಷಗಳಲ್ಲಿ ಕೆಲವು ಭಿನ್ನ ಚಿಂತನೆಯ ಕೃತಿಗಳನ್ನು ನಿಷೇಧಿಸುವುದಕ್ಕೆ, ಭಿನ್ನಮತದ ಸಾಹಿತಿಗಳಿಗೆ ಬಹಿಷ್ಕಾರ ಹಾಕುವುದಕ್ಕೆ, ಸರಕಾರದ ಪುಸ್ತಕ ಖರೀದಿ ಸಂದರ್ಭದಲ್ಲಿ ಭಿನ್ನಮತೀಯರ ಕೃತಿಗಳನ್ನು ತಡೆಹಿಡಿಯುವುದಕ್ಕೆ ಬಳಸಿಕೊಂಡಿರುವುದು ಎಲ್ಲರಿಗೂ ತಿಳಿದ ಸಂಗತಿ.

ಇದರಿಂದ ಪ್ರೇರಿತರಾಗಿ, ಕೆಲವು ದ್ವೇಷಪೂರಿತ ವ್ಯಕ್ತಿಗಳು ಹಾಗೂ ಸಂಘಟನೆಗಳು ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿಕೊಂಡಿರುವ ನಿದರ್ಶನಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಸಂಭವಿಸಿವೆ. ಕಲಬುರ್ಗಿ ಮತ್ತು ಗೌರಿ ಲಂಕೇಶ್ ಅವರ ಹತ್ಯೆ, ಭಗವಾನ್ ಮೇಲಿನ ಹಲ್ಲೆ ಮುಂತಾದವು ಇದಕ್ಕೆ ಉದಾಹರಣೆಗಳು. ಪುಸ್ತಕಗಳ ಮೂಲಕ ವ್ಯಕ್ತಪಡಿಸುವ ಚಿಂತನೆಗಳಿಗೆ, ವಿರೋಧ ಉಳ್ಳವರು ಪ್ರತ್ಯುತ್ತರವನ್ನು ಪುಸ್ತಕಗಳ ಮೂಲಕವೇ ನೀಡಬೇಕಲ್ಲದೆ ಹಿಂಸಾಚಾರಕ್ಕೆ ಎಡೆ ಮಾಡಿಕೊಡುವುದು ಅವರ ಬೌದ್ಧಿಕ ದಿವಾಳಿತನವನ್ನಷ್ಟೇ ಸಾಬೀತುಪಡಿಸುತ್ತದೆ. ಪ್ರಭುತ್ವ ಮತ್ತದರ ಹಿಂಬಾಲಕರ ಇಂತಹ ನಿರಂಕುಶ ಪ್ರವೃತ್ತಿಗಳಿಗೆ ಕಡಿವಾಣ ಹಾಕದಿದ್ದಲ್ಲಿ ಮುಕ್ತ ಅಭಿವ್ಯಕ್ತಿಗೆ, ವಿಚಾರಗಳ ವೈವಿಧ್ಯಕ್ಕೆ, ಬಹುಮುಖೀ ಸಂಸ್ಕೃತಿಗೆ, ಒಟ್ಟಾರೆಯಾಗಿ ಪ್ರಜಾತಂತ್ರದ ಮುನ್ನಡೆಗೆ ಧಕ್ಕೆಯಾಗಲಿದೆ. ಪುಸ್ತಕ ಸಂಸ್ಕೃತಿಗೂ ಇದು ಮಾರಕವಾಗಲಿದೆ.

bookmark navakarnataka publications

ನವಕರ್ನಾಟಕ ಪ್ರಕಟಣೆ

‘ನವಕರ್ನಾಟಕ-60’ ಸಂಭ್ರಮಕ್ಕೆ ಏನೇನು ಯೋಜನೆಗಳನ್ನು ಹಮ್ಮಿಕೊಂಡಿದ್ದಿರಿ? ನವಕರ್ನಾಟಕ-60ರ ಸಂಭ್ರಮವನ್ನು 2020ರ ಪೂರ್ತಿ ವರ್ಷ ಅರ್ಥಪೂರ್ಣವಾಗಿ ಆಚರಿಸಬೇಕೆಂದು ಕಳೆದ ಮೂರು ವರ್ಷಗಳಿಂದ ತಯಾರಿ ನಡೆಸಿದ್ದೆವು. ಅವುಗಳಲ್ಲಿ ಮುಖ್ಯವಾದ ಯೋಜನೆಗಳಿವು- 1. ರಾಜ್ಯಾದ್ಯಂತ ಹಲವು ಬೃಹತ್ ಪುಸ್ತಕೋತ್ಸವಗಳನ್ನು ಏರ್ಪಡಿಸುವುದು. ಎಲ್ಲ ಪ್ರಕಾಶಕರ ಮತ್ತು ಲೇಖಕರ ಸದಭಿರುಚಿಯ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟದ ಜೊತೆ ವಿವಿಧ ಸಾಹಿತ್ಯಕ ಕಾರ್ಯಕ್ರಮಗಳನ್ನು ಅಲ್ಲಿ ಆಯೋಜಿಸುವುದು.

2. ನವಕರ್ನಾಟಕ-60ರ ನೆನಪಿಗೆ ‘ಅಕ್ಷರ ಪಯಣ-60’ ಮಾಲಿಕೆಯಡಿ ಹಲವು ಉತ್ಕೃಷ್ಟ ಕೃತಿಗಳ ಪ್ರಕಟಣೆ. 3. ಪುಸ್ತಕೋತ್ಸವಗಳಲ್ಲಿ ಈ ಕೃತಿಗಳ ಲೋಕಾರ್ಪಣೆಯ ಜೊತೆಯಲ್ಲಿ ‘ಲೇಖಕರೊಂದಿಗೆ ಸಂವಾದ’, ‘ವಿಚಾರ ಸಂಕಿರಣಗಳು’, ವಿದ್ಯಾರ್ಥಿಗಳಿಂದ ‘ಪುಸ್ತಕ ಪರಿಚಯ’ (ಸ್ಪರ್ಧೆ) ಮುಂತಾದ ಹಲವು ಸಾಹಿತ್ಯಕ ಕಾರ್ಯಕ್ರಮಗಳನ್ನು ಏರ್ಪಡಿಸುವುದು.

ಆದರೆ, ನಿರಂತರ ಲಾಕ್​ಡೌನ್, ಕರ್ಫ್ಯೂ ಮುಂತಾದ ನಿರ್ಬಂಧಗಳಿಂದಾಗಿ ಬಹುತೇಕ ಕಾರ್ಯಕ್ರಮಗಳನ್ನು ಕೈಬಿಡಬೇಕಾಗಿ ಬಂದದ್ದು ವಿಷಾದನೀಯ. 2020ರ ಲಾಕ್​ಡೌನ್​ಗೆ ಮುಂಚಿತವಾಗಿಯೇ ಬೆಂಗಳೂರು, ಮೈಸೂರು ಮತ್ತು ಶಿವಮೊಗ್ಗ ನಗರಗಳಲ್ಲಿ 60ರ ಸಂಭ್ರಮದ ಪುಸ್ತಕ ಲೋಕಾರ್ಪಣೆ, ಪುಸ್ತಕ ಪ್ರದರ್ಶನ ಮತ್ತು ಕೆಲವು ಸಾಹಿತ್ಯಕ ಕಾರ್ಯಕ್ರಮಗಳನ್ನು ಮಾಡಲು ಸಾಧ್ಯವಾಯಿತು. ನಂತರದ ಅವಧಿಯಲ್ಲಿ ಯಾವುದೇ ಕಾರ್ಯಕ್ರಮವನ್ನು ಆಯೋಜಿಸಲು ಸರಕಾರ ವಿಧಿಸಿದ ನಿರ್ಬಂಧಗಳಿಂದಲೂ ನಮ್ಮ ಆರ್ಥಿಕ ಸಮಸ್ಯೆಗಳಿಂದಲೂ ಸಾಧ್ಯವಾಗಲಿಲ್ಲ.

ಇಂತಹ ಪರಿಸ್ಥಿತಿಯಲ್ಲಿಯೂ ಕೆಲವೊಂದು ಉತ್ಕೃಷ್ಟ ಕೃತಿಗಳನ್ನು ನವಕರ್ನಾಟಕ-60ರ ಸಂಭ್ರಮದಲ್ಲಿ ಹೊರತಂದೆವೆಂಬುದು ಸಮಾಧಾನಕರ ವಿಷಯ. ಇವುಗಳಲ್ಲಿ ಮುಖ್ಯವಾದವು; ‘ಸಮಗ್ರ ಕರ್ನಾಟಕ ದರ್ಶನ’, ‘ಸ್ವಾತಂತ್ರಕ್ಕಾಗಿ ಭಾರತದ ಹೋರಾಟ’, ‘ಸ್ವಾತಂತ್ರ್ಯೋತ್ತರ ಭಾರತ’, ‘ಕನ್ನಡ ಭಾಷೆ-ಬದುಕು’, ‘ಯಾವ ಜನ್ಮದ ಮೈತ್ರಿ’, ‘ರಸ್ಕಿನ್ ಬಾಂಡ್ ಕತೆಗಳು’, ‘ಆವರ್ತಕ ಕೋಷ್ಟಕ-ಒಂದು ಪರಿಚಯ’, ‘ಸಂತಸ ನನ್ನೆದೆಯ ಹಾಡು ಹಕ್ಕಿ’, ‘ಚಂದ್ರ ಶೋಧನೆ’, ‘ಕೊರೋನ – ಹೆದರದಿರೋಣ’, ‘ಕಾರಂತರ ಕಾದಂಬರಿಗಳಲ್ಲಿ ದುಡಿಮೆ’, ‘ನೂರ್ ಜಹಾನ್’, ‘ಸಾಧಾರಣ ಜನ, ಅಸಾಧಾರಣ ಶಿಕ್ಷಕರು’, ‘ಕಾವೇರಿ ತೀರದ ಪಯಣ’, ‘ಇಂಕ್ವಿಲಾಬ್ ಜಿಂದಾಬಾದ್!’, ‘ಚಿತ್ತಗಾಂಗ್ ವಿಪ್ಲವ ವನಿತೆಯರು’.

ಇನ್ನೊಂದು ಪ್ರಮುಖವಾದ ಕೃತಿ, ನವಕರ್ನಾಟಕ-60ರ ಸಂಭ್ರಮದಲ್ಲಿ ಪ್ರಕಟಿಸಬೇಕೆಂದು ಕಳೆದ ನಾಲ್ಕು ವರ್ಷಗಳಿಂದ ತೊಡಗಿಸಿಕೊಂಡು ಹಲವು ವಿಜ್ಞಾನ ಮತ್ತು ವೈದ್ಯಕೀಯ ಲೇಖಕರಿಂದ ಬರೆಸಿ ಡಾ. ಟಿ. ಆರ್. ಅನಂತರಾಮು ಮತ್ತು ಡಾ. ನಾ. ಸೋಮೇಶ್ವರ ಅವರು ಸಂಪಾದಿಸಿದ ‘ನಮ್ಮ ದೇಹದ ವಿಜ್ಞಾನ’ ಈಗ ಅಚ್ಚಾಗುತ್ತಿದ್ದು ಸದ್ಯದಲ್ಲೇ ಪ್ರಕಟವಾಗಲಿದೆ. ಕೊರೊನಾ ಹಾವಳಿ ಇಲ್ಲದಿದ್ದರೆ ಈ ಕೃತಿ ಒಂದು ವರ್ಷ ಮುಂಚಿತವಾಗಿ ಪ್ರಕಟವಾಗಬೇಕಾಗಿತ್ತು.

ನವಕರ್ನಾಟಕ-60ರ ಸಂಭ್ರಮಕ್ಕೆಂದು ಆಯೋಜಿಸಿದ ಇನ್ನೂ ಹಲವು ಕೃತಿಗಳ ಪ್ರಕಟಣೆಯನ್ನು ಕೊರೋನಾ ಕಾರಣದಿಂದಾಗಿ ಅನಿರ್ದಿಷ್ಟ ಕಾಲ ಮುಂದೂಡಲಾಗಿದೆ. ಆದರೆ, ೬೦ರ ಸಂಭ್ರಮದ ಪುಸ್ತಕೋತ್ಸವ ಕಾರ್ಯಕ್ರಮಗಳನ್ನು ಮುಂದಿನ ವರ್ಷವಾದರೂ ರಾಜ್ಯದ, ಮುಖ್ಯವಾಗಿ ಉತ್ತರ ಕರ್ನಾಟಕದ, ಕೆಲವು ಕಡೆಯಾದರೂ ಆಯೋಜಿಸಲಿದ್ದೇವೆ.

ಇದನ್ನೂ ಓದಿ : New Book ; ಅಚ್ಚಿಗೂ ಮೊದಲು : ತನ್ನ ತಿಳಿವಳಿಕೆಗೆ ಅನ್ಯದ ಮುಖವಾಡ

Published On - 5:10 pm, Fri, 9 July 21

Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ