ಮುಂದುವರಿದ ಇಂಡಿಗೋ ವಿಮಾನಗಳ ಹಾರಾಟ ವ್ಯತ್ಯಯ: ಇವತ್ತು ಎಷ್ಟು ಫ್ಲೈಟ್ಗಳು ಕ್ಯಾನ್ಸಲ್?
ಇಂಡಿಗೋ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಮುಂದುವರಿದಿದ್ದು, ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇಂದು ನೂರಾರು ವಿಮಾನಗಳು ರದ್ದುಗೊಂಡಿವೆ, ಹಲವು ವಿಳಂಬವಾಗಿವೆ. ಇದರಿಂದ ಪ್ರಯಾಣಿಕರು ತೀವ್ರ ಆಕ್ರೋಶಗೊಂಡಿದ್ದು, ಏರ್‌ಪೋರ್ಟ್‌ನ ಆಗಮನ ದ್ವಾರಗಳು ಖಾಲಿಯಾಗಿವೆ. ವಿಮಾನಗಳಿಲ್ಲದ ಕಾರಣ ಟ್ಯಾಕ್ಸಿ ಹಾಗೂ ಬಿಎಂಟಿಸಿ ಬಸ್ ಚಾಲಕರು ಆದಾಯವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಏರ್‌ಪೋರ್ಟ್‌ನಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ದೇವನಹಳ್ಳಿ, ಡಿಸೆಂಬರ್ 05: ಇಂಡಿಗೋ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಸತತವಾಗಿ ಮುಂದುವರಿದಿದ್ದು, ಬೆಂಗಳೂರಿನ ಕೇಂಪೇಗೌಡ ವಿಮಾನ ನಿಲ್ದಾಣದಲ್ಲಿಯೇ ಇಂದು 102 ವಿಮಾನಗಳ ಸಂಚಾರ ರದ್ದಾಗಿದೆ. 50 ಡಿಪಾರ್ಚರ್ ಹಾಗೂ 52 ಅರೈವಲ್ ವಿಮಾನಗಳು ಕ್ಯಾನ್ಸಲ್ ಆಗಿದ್ದು, 30ಕ್ಕೂ ಹೆಚ್ಚು ವಿಮಾನಗಳ ಹಾರಾಟ ವಿಳಂಬಗೊಂಡಿದೆ. ಇದರಿಂದಾಗಿ ರೊಚ್ಚಿಗೆದ್ದ ಪ್ರಯಾಣಿಕರು ಇಂಡಿಗೋ ಕೌಂಟರ್ ಬಳಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಅರೈವಲ್ ಗೇಟ್ ಖಾಲಿ ಖಾಲಿ
ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಹಿನ್ನೆಲೆ ಕೆಂಪೇಗೌಡ ಏರ್‌ಪೋರ್ಟ್‌ನ ಅರೈವಲ್ ಗೇಟ್ ಖಾಲಿ ಖಾಲಿ ಇರೋ ದೃಶ್ಯಗಳು ಕಂಡುಬಂದಿವೆ. ಹೊರ ರಾಜ್ಯಗಳಿಂದಲೂ ಇಂಡಿಗೋ ವಿಮಾನಗಳು ಬಾರದ ಹಿನ್ನಲೆ, ಪ್ರಯಾಣಿಕರಿಲ್ಲದೆ ಆಗಮನದ ದ್ವಾರಗಳು ಬಿಕೋ ಎನ್ನುತ್ತಿವೆ. ಪ್ರಯಾಣಿಕರಿಲ್ಲದ ಕಾರಣ ಟ್ಯಾಕ್ಸಿ ಚಾಲಕರೂ ಬಾಡಿಗೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇದನ್ನೂ ಓದಿ: 550 ಇಂಡಿಗೋ ವಿಮಾನಗಳ ಸಂಚಾರ ರದ್ದು, ಬೆಂಗಳೂರು ಸೇರಿ ಹಲವೆಡೆ ಪ್ರಯಾಣಿಕರ ಒದ್ದಾಟ
ಟರ್ಮಿನಲ್ 1ರಲ್ಲಿ ಬಿಗಿ ಭದ್ರತೆ
ವಿಮಾನಗಳ ಹಾರಾಟದಲ್ಲಿ ವ್ಯತ್ಯಯದ ಕಾರಣ ಪ್ರಯಾಣಿಕರು ತೀವ್ರ ಆಕ್ರೋಶಗೊಂಡಿದ್ದಾರೆ. ಹೀಗಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಏರ್‌ಪೋರ್ಟ್‌ನಲ್ಲಿ ಮುಂಜಾಗೃತೆ ವಹಿಸಲಾಗಿದೆ. ಭದ್ರತೆಗೆ ಟರ್ಮಿನಲ್ 1ರಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪೊಲೀಸರ ಬಳಿಯೇ ಬಂದು ಪ್ರಯಾಣಿಕರು ಅಸಮಾಧಾನ ಹೊರಹಾಕ್ತಿರುವ ಪ್ರಸಂಗಗಳೂ ನಡೆಯುತ್ತಿವೆ.
ಏರ್ಪೋರ್ಟ್ ಬಸ್ಗಳು ಖಾಲಿ ಖಾಲಿ
ಒಂದೆಡೆ ಇಂಡಿಗೋ ಪ್ಲೈಟ್ಗಳಿಲ್ಲದೆ ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರು ಪರದಾಟ ನಡೆಸುತ್ತಿದ್ದರೆ, ಮತ್ತೊಂದೆಡೆ ಪ್ರಯಾಣಿಕರಿಲ್ಲದೆ ಏರ್ಪೋರ್ಟ್ ಬಸ್ಗಳು ಖಾಲಿ ಖಾಲಿಯಾಗಿವೆ. ಕೆಂಪೇಗೌಡ ವಿಮಾನ ನಿಲ್ದಾಣದಿಂದ ವಿವಿಧ ಭಾಗಗಳಿಗೆ ಸಂಚರಿಸುವ ಬಸ್ಗಳು ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿವೆ. ಪ್ರಯಾಣಿಕರಿಗಾಗಿ ಬಿಎಂಟಿಸಿಯ ವಾಯುವಜ್ರ ಮತ್ತು ಕೆಎಸ್ಆರ್ಟಿಸಿಯ ಫ್ಲೈ ಬಸ್ಗಳ ಚಾಲಕರು ಕಾದು ಕುಳಿತಿದ್ದಾರೆ. ಕಳೆದ ಮೂರು ದಿನಗಳಿಂದ ಬಿಎಂಟಿಸಿ ಕಲೆಕ್ಷನ್ ಸಂಪೂರ್ಣ ಕುಸಿತ ಕಂಡಿದ್ದು, ಪ್ರಯಾಣಿಕರಿಲ್ಲದ ಕಾರಣ ಬಸ್ಗಳು ಖಾಲಿಯಾಗಿ ಸಂಚರಿಸಬೇಕಾದ ಸ್ಥಿತಿ ಉದ್ಭವವಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:54 am, Fri, 5 December 25



