Corona Warrior : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ : 85ರ ಅಜ್ಜಿಯ ನಗುವೂ ಮತ್ತು ಬೆಡ್​ ಒಂದರ ಕಥೆಯೂ

‘ಎಲ್ಲ ರೋಗಿಗಳ ಮುಖದಲ್ಲೂ ಭಯದ ಛಾಯೆ. ಹಿಂದಿನ ದಿನ ಅದೇ ಬೆಡ್‌ನಲ್ಲಿದ್ದ ಇಬ್ಬರ ಪರಿಸ್ಥಿತಿಯೂ ಗಂಭೀರಕ್ಕೆ ತಲುಪಿ ಒಬ್ಬ ವ್ಯಕ್ತಿ ಮಧ್ಯಾಹ್ನದ ಹೊತ್ತಿಗೆ ಸಾವನ್ನಪ್ಪಿದ್ದರಿಂದ ಒಟ್ಟಾರೆಯಾಗಿ ಈಗ ಆ ಬೆಡ್​ಗೆ ಕಳಂಕ ಹತ್ತಿಬಿಟ್ಟಿತು. ಒಬ್ಬರಂತೂ ಆ ಬೆಡ್‌ನಲ್ಲಿರುವವರಿಗೆ ಬೇರೆ ಕಡೆ ಶಿಫ್ಟ್ ಮಾಡಿಸಿ ಎಂದು ಒತ್ತಾಯಿಸಿದರು. ಒಂದೆರಡು ಗಂಟೆ ಇದೇ ರೀತಿಯ ಪ್ರಕ್ಷುಬ್ಧ ವಾತಾವರಣ.‘ ಡಾ. ಸಾಮಂತ್ರಿ ಜ್ಯೋತಿ

Corona Warrior : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ : 85ರ ಅಜ್ಜಿಯ ನಗುವೂ ಮತ್ತು ಬೆಡ್​ ಒಂದರ ಕಥೆಯೂ
ಡಾ. ಸಾಮಂತ್ರಿ ಜ್ಯೋತಿ
Follow us
ಶ್ರೀದೇವಿ ಕಳಸದ
|

Updated on:May 23, 2021 | 3:01 PM

ನಮ್ಮ ಒಂದು ಧ್ವನಿ ಲಕ್ಷಾಂತರ ಧ್ವನಿಗಳನ್ನು ಪ್ರತಿನಿಧಿಸುತ್ತಿರುತ್ತದೆ. ಮರ್ಯಾದೆ, ವ್ಯವಸ್ಥೆ ಎನ್ನುವ ಮಹಾಸಂಕೋಲೆಯನ್ನು ಕಳಚಿ ಮುಕ್ತವಾಗಿ ಸಂಕಟಗಳನ್ನು ಹೊರಹಾಕುವುದನ್ನು ಕಲಿಯದಿದ್ದರೆ, ನಾವಷ್ಟೇ ಅಲ್ಲ ನಮ್ಮ ಮುಂದಿನ ಪೀಳಿಗೆಯವರು ಉಸಿರಾಡುವುದೂ ಕಷ್ಟವಾಗುತ್ತದೆ; ಸಹನೆಯೇ ನಮ್ಮ ಮೂಲಗುಣ, ಕೆಲಸವೇ ದೇವರು, ಕುಟುಂಬವೇ ಪ್ರಧಾನ ಅಸ್ತಿತ್ವ ಎಂದು ಸಾರಿಕೊಂಡು ಬಂದ ಮಹಾನ್ ದೇಶ ನಮ್ಮದು. ಆದರೆ ಇದನ್ನು ಜೀವನದೊಂದಿಗೆ ಜೀವವನ್ನೂ ಒತ್ತೆ ಇಡುವಂಥ ಪರಿಸ್ಥಿತಿಯಲ್ಲಿರುವ ಆರೋಗ್ಯ ಮತ್ತು ಸಾರ್ವಜನಿಕ ಸೇವಾ ಕ್ಷೇತ್ರಗಳ ದೃಷ್ಟಿಯಲ್ಲಿ ಯೋಚಿಸಿ. ಗಂಟಲಿನ ಪಡಕಗಳತನಕ ಬಂದುಕುಳಿತ ನೋವುಗಳಿಗೆ ಸಮಸ್ಯೆಗಳಿಗೆ ಮುಕ್ತಿ ಕೊಟ್ಟರೆ ಮಾತ್ರ ಮುಂದಿನ ಹೆಜ್ಜೆಗಳನ್ನಿಡಲು ತ್ರಾಣ ದಕ್ಕುವುದು, ವಾಸ್ತವ ಸಂಗತಿಗಳಿಗೆ ಪರಿಹಾರ ಸಿಗುವುದು. ಈ ಹಿನ್ನೆಲೆಯಲ್ಲಿ ರೂಪಿಸಿರುವ ‘ಟಿವಿ9 ಕನ್ನಡ ಡಿಜಿಟಲ್ : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ’ ಸರಣಿಯಲ್ಲಿ ವೈದ್ಯರುಗಳ, ಶುಶ್ರೂಷಕರ, ಪ್ರಯೋಗಾಲಯ ಸಿಬ್ಬಂದಿ, ಸಹಾಯಕರ ಮತ್ತು ಕೋವಿಡ್ ನಿರ್ವಹಣೆಯಲ್ಲಿ ತೊಡಗಿಕೊಂಡವರ ಬದುಕು ಬವಣೆ ಮತ್ತು ಅಂತರಂಗದ ತುಣುಕುಗಳು ಇಲ್ಲಿರುತ್ತವೆ.

ತುಣುಕುಗಳು ಎಂದು ಹೇಳಲು ಕಾರಣವಿದೆ; ನಮಗಾದ ಅನ್ಯಾಯ, ನೋವು ನಿರೀಕ್ಷೆಗಳನ್ನು ವ್ಯಕ್ತಪಡಿಸಿ ರಾತ್ರೋರಾತ್ರಿಯೇ ಪರಿಹಾರೋಪಾಯಗಳನ್ನು ಪಡೆದುಕೊಳ್ಳುವಂಥ ಅಭಿವೃದ್ಧಿ ಹೊಂದಿದ ದೇಶದಲ್ಲಿ ನಾವಿನ್ನೂ ಇಲ್ಲ. ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿಯ ದುಡಿಮೆಯಲ್ಲಿ ಹತ್ತಾರು ಕೈಗಳು ಹೇಗೆ ಉಣ್ಣುತ್ತಿವೆಯೋ ಹಾಗೆ ವ್ಯವಸ್ಥೆಯ ಪರಿಧಿಯಲ್ಲಿ ದೊಡ್ಡ ದೊಡ್ಡ ತಿಮಿಂಗಲಗಳು ಸ್ವಾರ್ಥದ ಬಾಯಿಗಳನ್ನು ತೆರೆದಿಟ್ಟುಕೊಂಡೇ ಈಜಾಡುತ್ತಿವೆ, ಇಂಥ ಸಂಕಷ್ಟಮಯ ಸಂದರ್ಭದಲ್ಲಿಯೂ. ಹೀಗಿರುವಾಗ ಸಾಕಷ್ಟು ವಿಷಯಗಳನ್ನು ಅದುಮಿಟ್ಟುಕೊಂಡೇ ಬದುಕುವ ಅನಿವಾರ್ಯ ಹಲವರಿಗಿದೆ ಬಂದೊದಗಿದೆ. ಆದರೂ ಸಂವೇದನಾಶೀಲ, ಪ್ರಾಮಾಣಿಕ ಮನಸ್ಸುಗಳು ತಮ್ಮ ಮನಸಿನ ಮಾತುಗಳನ್ನು ಹಂಚಿಕೊಳ್ಳಲು ಇಲ್ಲಿ ಪ್ರಯತ್ನಿಸಿದ್ದಾರೆ. ಸಾಮಾಜಿಕ ಕಳಕಳಿಯುಳ್ಳ ಇನ್ನೂ ಕೆಲವರು ಇತರರ ಒಳತೋಟಿಗಳನ್ನು ಅಕ್ಷರಕ್ಕೆ ಹಿಡಿದಿಡಲು ಸಹಾಯ ಮಾಡಿದ್ದಾರೆ. ಓದುಗರಾದ ನಿಮಗೂ ನಿಮ್ಮ ನಿಮ್ಮ ಊರುಗಳಲ್ಲಿ ಕೋವಿಡ್ ನಿರ್ವಹಣೆಯಲ್ಲಿ ತೊಡಗಿಕೊಂಡಿರುವ ಯಾರ ಆಂತರ್ಯಕ್ಕೂ ಅಕ್ಷರಗಳ ಮೂಲಕ ಧ್ವನಿಯಾಗುವ ಅವಕಾಶ ಕೂಡ ಇಲ್ಲಿದೆ. ಇ ಮೇಲ್ : tv9kannadadigital@gmail.com

* ಬಳ್ಳಾರಿಯ ವೈದ್ಯೆ ಡಾ. ಸಾಮಂತ್ರಿ ಜ್ಯೋತಿ, ರೋಗಿಗಳ ಆರೈಕೆ ಮಾಡುತ್ತಲೇ ಅಲ್ಲಿಯ ಚಿತ್ರಣವನ್ನು ಅದೆಷ್ಟು ಹೃದಯಸ್ಪರ್ಶಿಯಾಗಿ ಕಟ್ಟಿಕೊಟ್ಟಿದ್ದಾರೆ! * ಅದು ಕೊರೋನಾ ಕರ್ತವ್ಯದ ಮೂರನೇ ದಿನ. ಎಂದಿನಂತೆ ಎಲ್ಲರ ಆಮ್ಲಜನಕ ಹಾಗೂ ನಾಡಿಬಡಿತವನ್ನು ಪರೀಕ್ಷಿಸಿ, ರಕ್ತಪರೀಕ್ಷೆ ಮುಂತಾದವುಗಳ ಮಾಹಿತಿ ಪಡೆಯಲು ರೋಗಿಗಳ ಬಳಿ ಹೋಗುತ್ತಿದ್ದೆ. ರಾತ್ರಿ ಸುಮಾರು  8.30. ಪ್ರತಿಯೊಬ್ಬರೂ ಮೊಬೈಲ್‌ ಇಲ್ಲವೆ ಸಂಬಂಧಿಕರೊಡನೆ ಬಿಝಿ ಇದ್ದರು. ನಾನು ಹೋದ ಕೂಡಲೇ ಅವಶ್ಯ ಮಾಹಿತಿಗಳನ್ನ ನೀಡಿ ತಮ್ಮ ತಮ್ಮ ಕೆಲಸದಲ್ಲಿ ಮುಳುಗಿದರು. ಆದರೆ 13 ನೇ ಬೆಡ್‌ನ ಅಜ್ಜಿ ಅದಾಗಲೇ ಮಲಗಿ ನಿದ್ರಿಸುತ್ತಿದ್ದರು. ಈ ಹಾಳು ರೋಗದಿಂದ ನಿದ್ರೆ ಬರದಿರುವುದೇ ಹೆಚ್ಚು (ಸಾಕಷ್ಟು ಜನ ರಾತ್ರಿಯ ಹೆಚ್ಚು ಹೊತ್ತು ಎದ್ದೇ ಕೂತಿರುತ್ತಿದ್ದರು) ಅಂಥದರಲ್ಲಿ ಮಲಗಿರುವ ಜೀವವನ್ನು ಎಬ್ಬಿಸುವುದೇಕೆ ಎಂದು, ಅವರಿಗೆ ಎಚ್ಚರವಾಗದಂತೆ ಮೆಲ್ಲ ಬೆರಳು ಹಿಡಿದು ಪಲ್ಸ್​ ಆಕ್ಸಿಮೀಟರಿನೊಳಗಡೆ ಬೆರಳು ಇರಿಸಿದೆ. ಅಜ್ಜಿ ಕಣ್ತೆರೆದು ನಸುನಕ್ಕರು. ಅದೊಂಥರ ಮಿಂಚಿನ ಅನುಭವ. ಬೇರೆ ಯಾರೂ ನಕ್ಕು ಪ್ರತಿಕ್ರಿಯಿಸಲಿಲ್ಲವೆಂದಲ್ಲ; 85 ವರ್ಷದ ಚಿಲುಮೆ ತನಗೊದಗಿ ಬಂದಿರುವ ವಿಪತ್ತಿನ ಎಲ್ಲ ಮಗ್ಗುಲುಗಳಿಗೆ ಬೆನ್ನು ಮಾಡಿ ಏನೇನೂ ಆಗಿಲ್ಲವೆಂಬಂತೆ ನಿರಾಳವಾಗಿ ಚೈತನ್ಯ ಸೂಸಿ ನಗುವುದಿದೆಯಲ್ಲ, ಅದು ನನ್ನನ್ನು ಬೆರಗುಗೊಳಿಸಿದ್ದು. ಎಷ್ಟೋ ಹರೆಯದವರು ತಮಗೆ ಕೋವಿಡ್‌ ಇರುವುದು ಖಾತ್ರಿಯಾಗುತ್ತಲೇ ಖಿನ್ನತೆಗೊಳಗಾದ, ಭಯಗೊಂಡು ಗಂಭೀರ ಸ್ಥಿತಿಗೆ ಜಾರಿದ ಅಥವಾ ಜೀವವನ್ನೇ ಕಳೆದುಕೊಂಡ ಘಟನೆಗಳು ನಡೆದಿರುವಾಗ, ಆ ನಗು ತುಂಬಾ ವಿಶೇಷ ಎನಿಸಿತ್ತು. ನಾನು ಮರುನಗುತ್ತಲೇ ಮುಂದಿನ ಬೆಡ್‌ಗೆ ಹೋದೆ.

ಮಾರನೇ ದಿನ ಮುಂಜಾನೆ ಅಜ್ಜಿಯ ಮಗ ಬಂದು, ಗ್ಲುಕೋಸ್‌ ಚೆಕ್‌ ಮಾಡಿ, ಸಿಸ್ಟರ್‌ಗೆ ಹೇಳಿ ಇನ್ಸುಲಿನ್‌ ಕೊಡಿಸಿ, ಅಜ್ಜಿಗೆ ತಿಂಡಿ ತಿನ್ನಿಸಿ ಮಧ್ಯಾಹ್ನ ಬರುವುದಾಗಿ ಹೇಳಿ ಹೋದರು. ಇದೆಲ್ಲವನ್ನು ದೂರದಿಂದಲೇ ನೋಡಿ, ಆಸ್ಪತ್ರೆಯಿಂದ ಆ ಜೀವಕ್ಕೆ ಆದಷ್ಟು ಬೇಗ ಬಿಡುಗಡೆ ಸಿಗಲಿ ಎಂದು ಮನದೊಳಗೆ ಬೇಡಿಕೊಂಡಿದ್ದೆ. 8 ಗಂಟೆಗೆ ಡ್ಯೂಟಿ ಮುಗಿದಿದ್ದರಿಂದ, ಮತ್ತೊಮ್ಮೆ ಅವರನ್ನು ಮಾತನಾಡಿಸಲು ಸಾಧ್ಯವಾಗದೆ ಹಾಗೇ ಹೊರಟು ಬಂದಿದ್ದೆ.

ಮರುದಿನ ರಾತ್ರಿ ಹೋದಾಗ, ಅಜ್ಜಿ ಬಾಗಿಲೆಡೆ ದೃಷ್ಟಿ ನೆಟ್ಟಿದ್ದರು. ರೌಂಡ್ಸ್‌ ನ ನಿಯಮದಂತೆ ಎಲ್ಲರ ಬಳಿ ಹೋಗಿ ವಿಚಾರಿಸಿ, ಇನ್ನೇನು ಅಜ್ಜಿಯ ಬಳಿ ಹೋಗಬೇಕು, ಅಷ್ಟರಲ್ಲಿ ಅವರ ಹಿಂದಿನ ಬೆಡ್‌ನಲ್ಲಿದ್ದ ವ್ಯಕ್ತಿಯ ಆಕ್ಸಿಜನ್‌ ಲೆವೆಲ್‌ 75 ತೋರಿಸುತ್ತಿತ್ತು. ಅವರು ಒಂದೇ ಸಮ ಏದುಸಿರು ಬಿಡುತ್ತಿದ್ದರು. ನಾರ್ಮಲ್‌ಗೆ ತರಲು ಏನೆಲ್ಲ ಪ್ರಯತ್ನಿಸಿದರೂ ಸಾಧ್ಯವಾಗುತ್ತಿರಲಿಲ್ಲ. ಅವರ ಸಂಬಂಧಿ ಹೆಣ್ಣುಮಗಳು ಗಾಬರಿಯಿಂದ ಅಳತೊಡಗಿದರು. ಆ ವ್ಯಕ್ತಿಯಲ್ಲಿ ಚಡಪಡಿಕೆ ಹೆಚ್ಚುತ್ತಿತ್ತು. ಪರಿಣಾಮವಾಗಿ ಎಲ್ಲ ರೋಗಿಗಳ ಮುಖದಲ್ಲೂ ಭಯದ ಛಾಯೆ. ಹಿಂದಿನ ದಿನ ಅದೇ ಬೆಡ್‌ನಲ್ಲಿದ್ದ ಇಬ್ಬರ ಪರಿಸ್ಥಿತಿಯೂ ಗಂಭೀರಕ್ಕೆ ತಲುಪಿ ಒಬ್ಬ ವ್ಯಕ್ತಿ ಮಧ್ಯಾಹ್ನದ ಹೊತ್ತಿಗೆ ಸಾವನ್ನಪ್ಪಿದ್ದರಿಂದ ಒಟ್ಟಾರೆಯಾಗಿ ಈಗ ಆ ಬೆಡ್​ಗೆ ಕಳಂಕ ಹತ್ತಿಬಿಟ್ಟಿತು. ಒಬ್ಬರಂತೂ ಆ ಬೆಡ್‌ನಲ್ಲಿರುವವರಿಗೆ ಬೇರೆ ಕಡೆ ಶಿಫ್ಟ್ ಮಾಡಿಸಿ ಎಂದು ಒತ್ತಾಯಿಸಿದರು. ತಲೆಗೊಬ್ಬರಂತೆ ಆತಂಕ ವ್ಯಕ್ತಪಡಿಸಿದರು. ಒಂದೆರಡು ಗಂಟೆ ಇದೇ ರೀತಿಯ ಪ್ರಕ್ಷುಬ್ಧ ವಾತಾವರಣ. ಕೊನೆಗೆ ಎಲ್ಲರೂ ಮಂಕು ಬಡಿದವರಂತೆ ಕಂಡರು. ವಿಶೇಷ ರೀತಿಯ ಮಾಸ್ಕ್‌, ಪ್ರೋನ್‌ ಪೊಸಿಷನ್‌, ಚೂರು ಕೌನ್ಸೆಲಿಂಗ್‌ನ ನಂತರ ಅವರೆಲ್ಲರಲ್ಲಿಯೂ ಸ್ವಲ್ಪ ಚೇತರಿಕೆ ಕಂಡುಬಂದಿತು. ಅಷ್ಟೊತ್ತಿಗೆ ಆ ವ್ಯಕ್ತಿಯ ಆಕ್ಸಿಜನ್‌ ಲೆವೆಲ್ 85ಕ್ಕೆ ಬಂದಿತು. ಮುಂಜಾನೆಯ ಹೊತ್ತಿಗೆ ಅವರನ್ನು ಐಸಿಯುಗೆ ವರ್ಗಾಯಿಸಲಾಯಿತು.

nimma dhwanige namma dhwaniyu

ಸೌಜನ್ಯ : ವಯೊಲೆಟ್​ಕೈಪಾ

ಮರುದಿನ ಬೆಳಿಗ್ಗೆ ಸುಮಾರು 7.30 ರ ಹೊತ್ತಿಗೆ ಮತ್ತೊಮ್ಮೆ ಎಲ್ಲರ ಬಳಿ ಹೋದಾಗ, ಅಜ್ಜಿಯ ಮಗ ಅದಾಗಲೇ ಬಂದಿದ್ದರು. ನಸುನಗುತ್ತಲೇ ‘ತಿಂಡಿ ಆಯ್ತಾ ಅಜ್ಜಿ’ ಎಂದು ಕೇಳಿದೆ. ಎಂಥಾ ನಗು!  ‘ಏನ್‌ ತಿಂದ್ರಿ’, ಮತ್ತದೆ ನಗು. ಅವರ ಮಗ, ‘ಸ್ವಲ್ಪ ಜೋರಾಗಿ ಮಾತಾಡಿ ಅವರಿಗೆ ಕಿವಿ ಕೇಳಲ್ಲ’ ಎಂದರು.

ಕಾಯಿಲೆಯ ಇಂಟೆನ್ಸಿಟಿ ಮನುಷ್ಯರನ್ನು ಅದೆಷ್ಟು ಮೆತ್ತಗಾಗಿಸಿಬಿಡುತ್ತದೆಯೆಂದರೆ, ನಡುರಾತ್ರಿಯ ಆ ನೀರವತೆ, ಉಸಿರಿಗಾಗಿ ಕಷ್ಟಪಡುವ ಮತ್ತದರಿಂದ ಹೊಮ್ಮುವ ಶಬ್ದ ಇದೆಯಲ್ಲ, ಅದು ವಿವರಿಸಲಾಗದ ದೊಡ್ಡ ವ್ಯಥೆ. ಜಾತಿ ಧರ್ಮ ಲಿಂಗ ವಯಸ್ಸಿನ ಹಂಗಿಲ್ಲದೆ ತನಗಿಷ್ಟ ಬಂದಂತೆ ಆಳ್ವಿಕೆ ನಡೆಸುತ್ತಿರುವ ಕ್ಷುದ್ರಜೀವಿಗೆ ಮನುಷ್ಯರ ಮೇಲೆ ಅದೆಂಥ ದ್ವೇಷವೆಂಬ ಯೋಚನೆ ಹುಟ್ಟಿಬಿಡುತ್ತದೆ. ಆ ನರಳುವ ಸದ್ದು ಎಂಥ ಆರೋಗ್ಯವಂತರನ್ನೂ ದಿಕ್ಕೆಡಿಸಿಬಿಡುತ್ತದೆ. ಇವೆಲ್ಲವೂ ಇರದೆಯೂ ಮನೆಯಲ್ಲಿಯೇ ಐಸೋಲೇಟ್‌ ಆದವರು ಅಥವಾ ಆರೋಗ್ಯವಂತರೂ ಕೂಡ ಗೂಗಲ್‌, ಫೇಸ್ಬುಕ್, ಯೂಟೂಬ್‌ಗಳಂತಹ ತಾಣಗಳಲ್ಲಿ ವಿವಿಧ ಮೂಲಗಳಿಂದ ಬಿತ್ತರಿಸಲ್ಪಟ್ಟ ಸುದ್ದಿಗಳನ್ನು ತಲೆಯೊಳಗೆಳೆದುಕೊಂಡು ತಮಗೂ ತಮ್ಮವರಿಗೂ ತೊಂದರೆ ತಂದುಕೊಳ್ಳುತ್ತಿದ್ದಾರೆ. ಯಾರೋ ಹರಿಬಿಟ್ಟ ತಳಬುಡಗಳಿಲ್ಲದ ವಿಚಾರಗಳಿಂದ ಪ್ರಭಾವಿತಗೊಂಡು ಕಳೆದ ಒಂದು ವರ್ಷದಿಂದ ಪಿಪಿಇ ಕಿಟ್​ಗಳಲ್ಲೇ ಜೀವನ ನಡೆಸುತ್ತಿರುವ ಆರೋಗ್ಯ ಸಿಬ್ಬಂದಿ ಹಾಗೂ ಜೀವನವನ್ನೇ ಪಣವಾಗಿಟ್ಟು ಹೋರಾಡುತ್ತಿರುವ ಎಲ್ಲ ಕೋವಿಡ್‌ ಯೋಧರ ಪ್ರಯತ್ನವನ್ನು ಅರ್ಥವಿಲ್ಲದಂತೆ ಮಾಡುತ್ತಿದ್ದಾರೆ.

ಇಂಥ ಬೇಡದ ಸದ್ದುಗಳನ್ನು ಕೇಳದಂತಾದರೆ ಕಾಣದ ಮನಸಿನ ಭಯ ಸಾಕಷ್ಟು ತಗ್ಗುವುದಂತೂ ಸತ್ಯ. ಪಕ್ಕದಲ್ಲೇ ಸಾವುಗಳಾಗುತ್ತಿದ್ದರೂ, ತನಗಿಂತ ಸಣ್ಣ ವಯಸ್ಸಿನವರು ತೀರಾ ಕಷ್ಟಪಡುತ್ತಿದ್ದರೂ ತನಗೆ ಕೇಳಿಸುವುದಿಲ್ಲ ಎಂಬ ಒಂದೇ ಕಾರಣಕ್ಕೆ ಅಜ್ಜಿಯ ಆರೋಗ್ಯ ವಿಚಲಿತವಾಗಲಿಲ್ಲ. ಅಂದುಕೊಂಡ ದಿನಗಳಿಗಿಂತ ಮುಂಚೆಯೇ ಅವರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಹೊರನಡೆದಿದ್ದರು, ಎಲ್ಲರಿಗೂ ಒಂದು ಮಹತ್ತರ ಸಂದೇಶವನ್ನು ನಗುತ್ತಲೇ ಕೊಟ್ಟು!

ಇದನ್ನೂ ಓದಿ : Corona Warriors : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ ; ‘ನಕೋ ಸಾಬ್‘ ಎನ್ನುವ ನಮ್ಮ ದೇಶದ ಶ್ರಮಿಕ ಅದೆಷ್ಟು ಸ್ವಾಭಿಮಾನಿ

Published On - 2:59 pm, Sun, 23 May 21

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್