Corona Warriors : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ ; ‘ನಕೋ ಸಾಬ್‘ ಎನ್ನುವ ನಮ್ಮ ದೇಶದ ಶ್ರಮಿಕ ಅದೆಷ್ಟು ಸ್ವಾಭಿಮಾನಿ

‘ಆ್ಯಂಬುಲೆನ್ಸ್ ಡ್ರೈವರ್​ಗೆ ಕಾಫಿ ಕುಡಿಯಲೆಂದು ನೂರು ರೂಪಾಯಿ ಕೊಡಲು ಹೋದೆ. ಸುತರಾಂ ತೆಗೆದುಕೊಳ್ಳಲಿಲ್ಲ. ನಾನು ಮತ್ತು ಡಾ. ರವಿಚಂದ್ರ ಆ ಕಾರ್ಮಿಕ ಕುಟುಂಬಕ್ಕೆ ಧೈರ್ಯ ಹೇಳುತ್ತಿರುವಾಗ ಆ್ಯಂಬುಲೆನ್ಸ್​ನ ಡ್ರೈವರ್ ಹಿರಿಯ ಸದಸ್ಯನ ಕೈಗೆ ಐದುನೂರು ರೂಪಾಯಿಯ ನೋಟು ಕೊಡುತ್ತಿದ್ದುದು ಕಾಣಿಸಿತು. ಆಗ ನಾನೆಷ್ಟು ಚಿಕ್ಕವನು ಎನ್ನುವುದು ಅರ್ಥವಾಗಿತ್ತು. ಮಾನವೀಯತೆಗೆ ಅಂತಸ್ತಿನ ಹಂಗಿಲ್ಲ.‘ ಡಾ. ಶಿವು ಅರಕೇರಿ

Corona Warriors : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ ; ‘ನಕೋ ಸಾಬ್‘ ಎನ್ನುವ ನಮ್ಮ ದೇಶದ ಶ್ರಮಿಕ ಅದೆಷ್ಟು ಸ್ವಾಭಿಮಾನಿ
ಡಾ. ಶಿವು ಅರಕೇರಿ
Follow us
ಶ್ರೀದೇವಿ ಕಳಸದ
|

Updated on:May 21, 2021 | 4:23 PM

ನಮ್ಮ ಒಂದು ಧ್ವನಿ ಲಕ್ಷಾಂತರ ಧ್ವನಿಗಳನ್ನು ಪ್ರತಿನಿಧಿಸುತ್ತಿರುತ್ತದೆ. ಮರ್ಯಾದೆ, ವ್ಯವಸ್ಥೆ ಎನ್ನುವ ಮಹಾಸಂಕೋಲೆಯನ್ನು ಕಳಚಿ ಮುಕ್ತವಾಗಿ ಸಂಕಟಗಳನ್ನು ಹೊರಹಾಕುವುದನ್ನು ಕಲಿಯದಿದ್ದರೆ, ನಾವಷ್ಟೇ ಅಲ್ಲ ನಮ್ಮ ಮುಂದಿನ ಪೀಳಿಗೆಯವರು ಉಸಿರಾಡುವುದೂ ಕಷ್ಟವಾಗುತ್ತದೆ; ಸಹನೆಯೇ ನಮ್ಮ ಮೂಲಗುಣ, ಕೆಲಸವೇ ದೇವರು, ಕುಟುಂಬವೇ ಪ್ರಧಾನ ಅಸ್ತಿತ್ವ ಎಂದು ಸಾರಿಕೊಂಡು ಬಂದ ಮಹಾನ್ ದೇಶ ನಮ್ಮದು. ಆದರೆ ಇದನ್ನು ಜೀವನದೊಂದಿಗೆ ಜೀವವನ್ನೂ ಒತ್ತೆ ಇಡುವಂಥ ಪರಿಸ್ಥಿತಿಯಲ್ಲಿರುವ ಆರೋಗ್ಯ ಮತ್ತು ಸಾರ್ವಜನಿಕ ಸೇವಾ ಕ್ಷೇತ್ರಗಳ ದೃಷ್ಟಿಯಲ್ಲಿ ಯೋಚಿಸಿ. ಗಂಟಲಿನ ಪಡಕಗಳತನಕ ಬಂದುಕುಳಿತ ನೋವುಗಳಿಗೆ ಸಮಸ್ಯೆಗಳಿಗೆ ಮುಕ್ತಿ ಕೊಟ್ಟರೆ ಮಾತ್ರ ಮುಂದಿನ ಹೆಜ್ಜೆಗಳನ್ನಿಡಲು ತ್ರಾಣ ದಕ್ಕುವುದು, ವಾಸ್ತವ ಸಂಗತಿಗಳಿಗೆ ಪರಿಹಾರ ಸಿಗುವುದು. ಈ ಹಿನ್ನೆಲೆಯಲ್ಲಿ ರೂಪಿಸಿರುವ ‘ಟಿವಿ9 ಕನ್ನಡ ಡಿಜಿಟಲ್ : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ’ ಸರಣಿಯಲ್ಲಿ ವೈದ್ಯರುಗಳ, ಶುಶ್ರೂಷಕರ, ಪ್ರಯೋಗಾಲಯ ಸಿಬ್ಬಂದಿ, ಸಹಾಯಕರ ಮತ್ತು ಕೋವಿಡ್ ನಿರ್ವಹಣೆಯಲ್ಲಿ ತೊಡಗಿಕೊಂಡವರ ಬದುಕು ಬವಣೆ ಮತ್ತು ಅಂತರಂಗದ ತುಣುಕುಗಳು ಇಲ್ಲಿರುತ್ತವೆ.

ತುಣುಕುಗಳು ಎಂದು ಹೇಳಲು ಕಾರಣವಿದೆ; ನಮಗಾದ ಅನ್ಯಾಯ, ನೋವು ನಿರೀಕ್ಷೆಗಳನ್ನು ವ್ಯಕ್ತಪಡಿಸಿ ರಾತ್ರೋರಾತ್ರಿಯೇ ಪರಿಹಾರೋಪಾಯಗಳನ್ನು ಪಡೆದುಕೊಳ್ಳುವಂಥ ಅಭಿವೃದ್ಧಿ ಹೊಂದಿದ ದೇಶದಲ್ಲಿ ನಾವಿನ್ನೂ ಇಲ್ಲ. ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿಯ ದುಡಿಮೆಯಲ್ಲಿ ಹತ್ತಾರು ಕೈಗಳು ಹೇಗೆ ಉಣ್ಣುತ್ತಿವೆಯೋ ಹಾಗೆ ವ್ಯವಸ್ಥೆಯ ಪರಿಧಿಯಲ್ಲಿ ದೊಡ್ಡ ದೊಡ್ಡ ತಿಮಿಂಗಲಗಳು ಸ್ವಾರ್ಥದ ಬಾಯಿಗಳನ್ನು ತೆರೆದಿಟ್ಟುಕೊಂಡೇ ಈಜಾಡುತ್ತಿವೆ, ಇಂಥ ಸಂಕಷ್ಟಮಯ ಸಂದರ್ಭದಲ್ಲಿಯೂ. ಹೀಗಿರುವಾಗ ಸಾಕಷ್ಟು ವಿಷಯಗಳನ್ನು ಅದುಮಿಟ್ಟುಕೊಂಡೇ ಬದುಕುವ ಅನಿವಾರ್ಯ ಹಲವರಿಗಿದೆ ಬಂದೊದಗಿದೆ. ಆದರೂ ಸಂವೇದನಾಶೀಲ, ಪ್ರಾಮಾಣಿಕ ಮನಸ್ಸುಗಳು ತಮ್ಮ ಮನಸಿನ ಮಾತುಗಳನ್ನು ಹಂಚಿಕೊಳ್ಳಲು ಇಲ್ಲಿ ಪ್ರಯತ್ನಿಸಿದ್ದಾರೆ. ಸಾಮಾಜಿಕ ಕಳಕಳಿಯುಳ್ಳ ಇನ್ನೂ ಕೆಲವರು ಇತರರ ಒಳತೋಟಿಗಳನ್ನು ಅಕ್ಷರಕ್ಕೆ ಹಿಡಿದಿಡಲು ಸಹಾಯ ಮಾಡಿದ್ದಾರೆ. ಓದುಗರಾದ ನಿಮಗೂ ನಿಮ್ಮ ನಿಮ್ಮ ಊರುಗಳಲ್ಲಿ ಕೋವಿಡ್ ನಿರ್ವಹಣೆಯಲ್ಲಿ ತೊಡಗಿಕೊಂಡಿರುವ ಯಾರ ಆಂತರ್ಯಕ್ಕೂ ಅಕ್ಷರಗಳ ಮೂಲಕ ಧ್ವನಿಯಾಗುವ ಅವಕಾಶ ಕೂಡ ಇಲ್ಲಿದೆ. ಇ ಮೇಲ್ : tv9kannadadigital@gmail.com

ಡಾ. ಶಿವು ಅರಕೇರಿ ಅವರು ಬಳ್ಳಾರಿಯ ತಾರಾನಾಥ ಸರಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸ್ನಾತಕೋತ್ತರ ಶಲ್ಯ ತಂತ್ರ ವಿಭಾಗದ ಮುಖ್ಯಸ್ಥರು. ಕಳೆದ ವರ್ಷ ಚಿಕಿತ್ಸೆಗೆಂದು ಬಂದಿಳಿದು ಹೋದ ವಲಸೆ ಕಾರ್ಮಿಕರ ಕುಟುಂಬದವರಿನ್ನೂ ಅವರ ಮನಸ್ಸಿನಿಂದ ಸರಿದಂತಿಲ್ಲ. ಈತನಕದ ಸಾಕಷ್ಟು ವಿಷಯಗಳು ಕಣ್ಣಲ್ಲೇ ಹೆಪ್ಪುಗಟ್ಟಿ ಕುಳಿತಿದ್ದರೂ ಸದ್ಯದ ಪರಿಸ್ಥಿತಿ, ಕರ್ತವ್ಯ ಅವರ ಕೈಗಳನ್ನು ಬರೆಯದಂತೆ ಕೈಕಟ್ಟಿಹಾಕಿದೆ.

*

ಅಂದು 2020ರ ಮೇ ಭಾನುವಾರದ ಬೆಳಗ್ಗೆ 8 ರಿಂದ ಮಧ್ಯಾಹ್ನ 2ರವರೆಗೆ ಕ್ವಾರಂಟೈನ್ ಡ್ಯೂಟಿ. ಈ ಕೊರೋನಾ ಬಂದಾಗಿನಿಂದ ಭಾನುವಾರ ಯಾವುದು ಸೋಮವಾರ ಯಾವುದು ಒಂದೂ ಗೊತ್ತಾಗುತ್ತಿಲ್ಲ. ಇಡೀ ದೇಶ ಸುಮಾರು ಎರಡು ತಿಂಗಳುಗಳ ಕಾಲ ಲಾಕ್​ಡೌನ್. ಎಲ್ಲಾ ದಿನಗಳೂ ಭಾನುವಾರವೇ! ನಮ್ಮ ಹೆಣ್ಣುಮಕ್ಕಳ ಪಾಲಿಗೆ ತುಂಬಾ ಬಿಝಿ ದಿನಗಳಿವು. ಥರಥರದ ತಿಂಡಿಗಳನ್ನು ಮಾಡಿ ಅದನ್ನು ಚೆಂದವಾಗಿ ಜೋಡಿಸಿ, ಅದಕ್ಕಿಷ್ಟು ಸಿಂಗಾರ ಮಾಡಿ, ಇಂದಿನ ವಿಶೇಷ! ಹೋಮ್ ಮೇಡ್ ಪಾನೀ ಪೂರಿ, ಹೋಮ್ ಮೇಡ್ ಹಲ್ವಾ, ಹೋಮ್ ಮೇಡ್ ಕೇಕ್, ಹೋಮ್ ಮೇಡ್ ಡೋಕ್ಳಾ ಹೀಗೆ ಏನಾದರೊಂದು ವಿಶೇಷ ತಿಂಡಿ ಮಾಡಿ ಅದನ್ನು ಫೇಸ್​ಬುಕ್​ ಮತ್ತು ವಾಟ್ಸಪ್​ ಸ್ಟೇಟಸ್ ಹಾಕುವ ಪ್ರಯತ್ನ ಅವರದ್ದು. ನನ್ನ ಪರಿಚಯದವರು ಒಬ್ಬರು ಕೂಡಾ ಹಾಕಿದ್ದರು. ಹೋಮ್ ಮೇಡ್ ಚಪಾತಿ, ಆಲೂಗಡ್ಡೆ ಪಲ್ಯ. ಅದೇನು ಬಾವಲಿ ಸೂಪೇ, ಚೀನಾದ ರೆಸ್ಟೋರೆಂಟಿನಲ್ಲಿ ಸಿಗಲಿಕ್ಕೆ?

ನಮ್ಮ ಬಳ್ಳಾರಿಯ ಸೀನಿಯರ್ ಉಷಾ ಮೇಡಂ ಪ್ರತೀ ದಿನ ಅವರ ಕೈತೋಟದಲ್ಲಿ ಬೆಳೆದ ಹೂಗಳನ್ನು ಚೆಂದವಾಗಿ ಜೋಡಿಸಿ ಪೋಸ್ಟ್ ಮಾಡುತ್ತಿದ್ದರು. ತುಂಬಾ ಚೆಂದದ ಪೋಸ್ಟ್​ಗಳು. ಇನ್ನು ಕೆಲವರು ಕೊರೋನಾಕ್ಕೆ ಸಂಬಂಧಿಸಿದ ಪೋಸ್ಟ್​ಗಳು ಪ್ರತಿಯೊಬ್ಬರೂ ವಿಜ್ಞಾನಿಗಳೇ ಎನ್ನುವಂತೆ ಭಾಸವಾಗುತ್ತಿತ್ತು. ನನ್ನ ಮಗಳೂ ಹಾಕಿದ್ದಳು Hand wash technique. ಪಾಪ! ಅವಳಿಗೇನು ಗೊತ್ತು? ಅವರಪ್ಪ ಮತ್ತು ಅವರಪ್ಪನ ವಯೋಮಾನದವರು ಕೈ ತೊಳೆಯುತ್ತಿದ್ದುದು ಎರಡೇ ಸಲ. ಉಂಡ ಮೇಲೆ ಮತ್ತು ಅದಕ್ಕೆ ಹೋಗಿ ಬಂದ ಮೇಲೆ. ಆದರೂ ನಾವು ಆಸ್ಪತ್ರೆಗೆ ಹೋಗುತ್ತಿದ್ದುದೇ ಅಪರೂಪ. ಇಂಜೆಕ್ಷನ್ ಎಂದರೆ ಶಾಲೆಯಲ್ಲಿ ದಾಯಮ್ಮ ಹಾಕ್ತಿದ್ರಲ್ಲ ಅದೊಂದೇ. ಇನ್ನು ಯಾರಿಗಾದರೂ ಗ್ಲೂಕೋಸ್ ಹಾಕಿದರೆ, ಊರ ಜನರೆಲ್ಲಾ ನೋಡೋದಕ್ಕೆ ಬರಲು ಶುರು.  ಹೆಚ್ಚೂ ಕಡಿಮೆ ಗೇಟ್ ಪಾಸ್ ತಗೊಂಡಾಗಿದೆ ಎಂಬರ್ಥದಲ್ಲಿ!

nimma dhwanige namma dhwaniyu

ಬಳ್ಳಾರಿಯ ಫಿವರ್ ಕ್ಲಿನಿಕ್

ದೂರದಲ್ಲೇ ಮುಖಕ್ಕೆ ಸೆರಗು ಮುಚ್ಚಿಕೊಂಡು ಮುಸಿಮುಸಿ ಅತ್ತು ಕಣ್ಣೀರು ಸುರಿಸಿ ಹೊರಟು ಹೋಗುತ್ತಿದ್ದರು. ಅಲ್ಲಿಗೆ ಅರ್ಧ ಅಂತಿಮ ದರ್ಶನ ಪಡೆದ ಕೃತಜ್ಞತೆ ಅವರದು. ಎಷ್ಟು ಬಾಟಲಿ ಗ್ಲೂಕೋಸ್ ಹಾಕಿದಾರೆ ಅನ್ನುವುದರ ಮೇಲೆ ಕಾಯಿಲೆಯ ಗಂಭೀರತೆ. ಆ ದಿನಗಳೇ ಬೇರೆ ಬಿಡಿ. ಆದರೆ ಈಗ? ನಮ್ಮ ದೇಶದಲ್ಲಿ ಕೊರೋನಾ ಸೋಂಕಿಗಿಂತ ಅದರ ಭಯಕ್ಕೆ ಸತ್ತವರೇ ಜಾಸ್ತಿ. ಪುಣ್ಯ ಭೂಮಿ ನನ್ನದಾದರೂ ವರ್ಷದ ಹೊತ್ತಿಗೆ ಇಂಥ ಪರಿಸ್ಥಿತಿಗೆ ತಲುಪುತ್ತೇವೆ ಎಂಬ ಕಿಂಚಿತ್ ಸುಳಿವೂ ಇರಲಿಲ್ಲ.

ಅಂದು ಡ್ಯೂಟಿ ಮುಗಿಸಿ ಇನ್ನೇನು ಹೊರಡಬೇಕು. ಜೊತೆಗೆ ಡಾ. ರವಿಚಂದ್ರ ಇದ್ದರು. ಆಗ ಸುಮಾರು ಎಂಟು ಜನರನ್ನು ಹೊತ್ತು ತಂದ ಆ್ಯಂಬುಲೆನ್ಸ್ ನಮ್ಮ ಕ್ವಾರಂಟೈನ್ ಸೆಂಟರ್ ಮುಂದೆ ಬಂದು ನಿಂತಿತು. ಅವರ ಜೊತೆ ಇಬ್ಬರು ಕಾನ್​ಸ್ಟೇಬಲ್​ಗಳು. ನಮ್ಮ ಹಲಕುಂದಿ ಚೆಕ್​ಪೋಸ್ಟ್​ನಲ್ಲಿ ನಡೆದುಕೊಂಡು ಬರುತ್ತಿದ್ದ ಆ ಎಂಟು ಜನ ಕೂಲಿ ಕಾರ್ಮಿಕರನ್ನು ತಡೆದು ಕ್ವಾರಂಟೈನ್ ಸೆಂಟರ್​ಗೆ ತರಲಾಗಿತ್ತು. ನಾಲ್ಕು ಚಿಕ್ಕಮಕ್ಕಳು, ಇಬ್ಬರು ಹೆಣ್ಣು ಮಕ್ಕಳು ಮತ್ತು ಇಬ್ಬರು ಗಂಡಸರು. ಅವರೆಲ್ಲಾ ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆಯವರು. ಚೆನ್ನೈನಲ್ಲಿ ಕೂಲಿ ಕೆಲಸಕ್ಕೆ ಅಂತ ಹೋದವರು. ಲಾಕ್ಡೌನ್ ಪ್ರಾರಂಭವಾದ ನಂತರ ಇದ್ದಬದ್ದ ಹಣವೆಲ್ಲಾ ಖಾಲಿಯಾದ ಮೇಲೆ ಮೀಡಿಯಾಗಳಲ್ಲಿ ಕೊರೋನಾ ಬಗ್ಗೆ ತೋರಿಸುವ ಚಿತ್ರವಿಚಿತ್ರ ಆರ್ಭಟಗಳಿಗೆ ಹೆದರಿ ನಡೆದುಕೊಂಡೇ ಊರಿಗೆ ಹೊರಟು ನಿಂತವರು. ಬಸ್, ಟ್ರೇನು ಯಾವುದೂ ಇಲ್ಲದೇ ನಡೆದುಕೊಂಡೇ ಇಲ್ಲಿಯವರೆಗೂ ಬಂದು ನಿಂತವರನ್ನ ಹಲಕುಂದಿ ಚೆಕ್ಪೋಸ್ಟ್​ನಿಂದ ಕರೆತರಲಾಗಿತ್ತು. ಎಲ್ಲಿಯ ಚೆನ್ನೈ, ಎಲ್ಲಿಯ ಬಳ್ಳಾರಿ, ಎಲ್ಲಿಯ ಉಸ್ಮಾನಾಬಾದ್!

nimma dhwanige namma dhwaniyu

ಫೋಟೋ : ಎಸ್. ವಿಷ್ಣುಕುಮಾರ್

ಈ ನೆಲದ ಸೌಲಭ್ಯ ಪಡೆದು, ಓದಿ ಹೊರದೇಶಕ್ಕೆ ಕೆಲಸ ಮಾಡಿ ಫೇಸ್ಬುಕ್​ನಲ್ಲಿ ರಾಷ್ಟ್ರಪ್ರೇಮ ಮೆರೆಯುವ ಧನಿಕರು ಅನಾಯಾಸವಾಗಿ ಗಾಳಿಯಲ್ಲಿ ತೇಲಿ ಬಂದು 5 ಸ್ಟಾರ್ ಹೋಟೆಲ್​ನಲ್ಲಿ ತಣ್ಣಗೆ ಸೇರಿ ಕುಳಿತರು. ಆದರೆ ಇವರು ಬಡವರು. ದುಡಿಮೆಯೇ ದೇವರೆಂದು ನಂಬಿದವರು. ಅನಕ್ಷರಸ್ಥರು. ಭಾಷೆ ಗೊತ್ತಿಲ್ಲ. ಇಲ್ಲಿಯವರೆಗೂ ನಡೆದುಕೊಂಡೇ ಬರುತ್ತಿದ್ದ ಅವರಿಗೆ ವಿದ್ಯೆ ಕಲಿತ ಯಾರೊಬ್ಬರೂ ನಿಲ್ಲಿಸಿ ಮಾತನಾಡಿಸಲಿಲ್ಲವಲ್ಲಾ? ಕೋಟಿ ಕೋಟಿ ಸರಕಾರದ ಸೌಲಭ್ಯಗಳ ಬಗ್ಗೆ ತಿಳಿಸಿ ಹೇಳಲಿಲ್ಲವಲ್ಲಾ ಎನ್ನುವ ನೋವು ಕಾಡತೊಡಗಿತು. ಆ ರಣಬಿಸಿಲಿನಲ್ಲಿ ಆ ಚಿಕ್ಕಚಿಕ್ಕ ಮಕ್ಕಳನ್ನು ಕಟ್ಟಿಕೊಂಡು ಅದು ಹೇಗೆ ನಡೆದಿರಬಹುದು? ನೀರೂ ಸಿಗದ ಈ ಪರಿಸ್ಥಿತಿಯಲ್ಲಿ ದಾರಿಯುದ್ದಕ್ಕೂ ಏನು ತಿಂದಿರಬಹುದು, ಎಲ್ಲಿ ಮಲಗಿರಬಹುದು, ಅವರ ಆ ಸ್ಥಿತಿ ನೋಡಿ ಕರಳು ಚುರುಗುಟ್ಟಿತು.

ತಾಲೂಕಾ ಪಂಚಾಯತ್​ನ ಗೌಡ ಜೊತಿಗಿದ್ದ. ಕೂಡಲೇ ಮಕ್ಕಳನ್ನು ಆ್ಯಂಬ್ಯುಲೆನ್ಸ್ನಿಂದ ಇಳಿಸಿ ಕುಡಿಯಲು ನೀರು ಕೊಟ್ಟೆವು. ಹೆಣ್ಣುಮಕ್ಕಳ ಕಾಲು ನಡೆದು ನಡೆದು ಬೊಬ್ಬೆ ಬಂದು ಒಡೆದು ಹೋಗಿ, ಹಾಗೇ ಒಣಗಿ ಹೋಗಿತ್ತು. ಗೌಡ ಎಲ್ಲರಿಗೂ ತಕ್ಷಣವೇ ಊಟದ ವ್ಯವಸ್ಥೆ ಮಾಡಿದ. ಅನ್ನ ನೀಡುವ ಆತನ ಕೈ ತುಂಬ ದೊಡ್ಡದು. ಆತನ ಹೊಟ್ಟೆ ತಣ್ಣಗಿರಲಿ. ಲಾಕ್ಡೌನ್ ಸಂದರ್ಭದಲ್ಲಿ ಕೆಲವು ಬಾರಿ ಮೆಸ್ ಇಲ್ಲದೇ, ನನಗೂ ಅಡುಗೆ ಮಾಡಿಕೊಳ್ಳಲು ಆಗದೇ ಇದ್ದ ಸಂದರ್ಭದಲ್ಲಿ ತನ್ನ ಮಕ್ಕಳಿಗೆ ಮಾಡಿದ ಊಟವನ್ನೇ ನನಗೂ ಕೊಟ್ಟು ನನ್ನ ಹೊಟ್ಟೆ ತುಂಬಿಸಿದ ಬೈಪಾಸ್ ಆಂಟಿ ನೆನಪಾದರು. ಆ ಅನ್ನದ ಋಣವನ್ನು ಈಗ ಹೀಗೆ ತೀರಿಸುವ ಸಂದರ್ಭ ಒದಗಿತ್ತು. ಕ್ವಾರಂಟೈನ್ ಸೆಂಟರ್​ಗೆ ಬಂದಿದ್ದ ಗುಡ್ಲೈಫ್ ಹಾಲಿನ ಪಾಕೆಟ್ಟು, ರಾತ್ರಿಗೆ ಊಟ, ನೀರು ಎಲ್ಲವನ್ನೂ ಕಾರ್ಮಿಕ ಕುಟುಂಬಕ್ಕೆ ಪ್ಯಾಕ್ ಮಾಡಿ ಕೊಟ್ಟೆವು. ಸಾವಿರಾರು ವಾಟ್ಸಪ್​ಗಳ ವಿಶೇಷ ತಿಂಡಿಗಳ ಸ್ಟೇಟಸ್ಗಳು ಒಂದು ಕ್ಷಣ ಕಣ್ಣ ಮುಂದೆ ಬಂದು ಸರಿದವು. ಹೊರಡುವಾಗ ಪರ್ಸ್ ತೆಗೆದು ನನ್ನಲ್ಲಿ ಇದ್ದಷ್ಟು ಹಣವನ್ನು ಕೈಯಲ್ಲಿಟ್ಟೆ.

nimma dhwanige namma dhwaniyu

ಬಳ್ಳಾರಿಯ ಫಿವರ್ ಕ್ಲಿನಿಕ್

ದುಡ್ಡಿದ್ರೆನೇ ಜೀವ. ಜೀವ ಇದ್ರೆನೇ ಜಗತ್ತು. ಕೈಯಲ್ಲಿ ದುಡ್ಡಿದ್ರೆ ಆ ಧೈರ್ಯವೇ ಬೇರೆ. ದುಡ್ಡು ಕೊಡಲು ಹೋದಾಗ ನಕೋ ಸಾಬ್ ಎನ್ನುವಾಗ ಈ ದೇಶದ ಶ್ರಮಿಕ ಅದೆಷ್ಟು ಸ್ವಾವಲಂಬಿ ಎನಿಸಿತು. ನಂತರದ ಶಿಫ್ಟ್ ಡ್ಯೂಟಿಗೆ ಸುಧೀಂದ್ರ ನವಲೇ ಬಂದರು. ಅವರೂ ಜೇಬಿಗೆ ಕೈ ಹಾಕಿ ಇದ್ದ ಹಣವನ್ನು ಅವರ ಕೈಗೆ ಕೊಟ್ಟು ಧೈರ್ಯ ಹೇಳಿದರು. ಆ್ಯಂಬುಲೆನ್ಸ್ ಡ್ರೈವರ್​ಗೆ ಕಾಫಿ ಕುಡಿಯಲೆಂದು ನೂರು ರುಪಾಯಿ ಕೊಡಲು ಹೋದೆ. ಸುತಾರಾಂ ತೆಗೆದುಕೊಳ್ಳಲಿಲ್ಲ. ರ್ಯಾಪಿಡ್ ರೆಸ್ಪಾನ್ಸ್ ಟೀಮಿನ ಡಾ. ರವಿಚಂದ್ರ ಮುಂದಿನ ಎಲ್ಲ ಸೌಲಭ್ಯಗಳನ್ನು ಅವರಿಗೆ ನೀಡುವ ವ್ಯವಸ್ಥೆ ಮಾಡುತ್ತಿದ್ದರು. ಬಳ್ಳಾರಿಯ ಕೋವಿಡ್ ಕರ್ತವ್ಯದಲ್ಲಿ ತುಂಬಾ ಕೇಳುವ ಹೆಸರು ರವಿಚಂದ್ರ ಅವರದ್ದು. ನಾನು ಮತ್ತು ಅವರು ಆ ಕಾರ್ಮಿಕರಿಗೆ ಧೈರ್ಯ ಹೇಳುತ್ತಿರುವಾಗ ಆ್ಯಂಬುಲೆನ್ಸ್​ನ ಡ್ರೈವರ್ ಆ ಕಾರ್ಮಿಕರ ತಂಡದ ಹಿರಿಯನ ಕೈಗೆ ಐದುನೂರು ರೂಪಾಯಿಯ ನೋಟು ಕೊಡುತ್ತಿದ್ದುದು ಕಾಣಿಸಿತು. ಆಗ ನಾನೆಷ್ಟು ಚಿಕ್ಕವನು ಎನ್ನುವುದು ಅರ್ಥವಾಗಿತ್ತು. ಮಾನವೀಯತೆಗೆ ಅಂತಸ್ತಿನ ಹಂಗಿಲ್ಲ.

ಇದನ್ನೂ ಓದಿ : Corona Warriors : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ ; ‘ಈತನಕ ಇವರು ನನ್ನ ಬಳಿ ಯಾವ ವೈಯಕ್ತಿಕ ಸಹಾಯವನ್ನೂ ಕೇಳಿಕೊಂಡು ಬಂದಿದ್ದಿಲ್ಲ!’

Published On - 2:28 pm, Fri, 21 May 21

‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ