Corona Warriors : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ : ‘ಸ್ವತಃ ವೈದ್ಯೆಯಾಗಿಯೂ ಆ್ಯಂಬುಲೆನ್ಸ್ ಹಿಂದೆ ಹುಚ್ಚಿಯಂತೆ ಓಡಿದ್ದೆ’
‘ನಮ್ಮಿಬ್ಬರಿಗೂ ತೊಂದರೆ ಆದರೆ ಮಕ್ಕಳ ಗತಿ ಏನು? ಸಾಕಷ್ಟು ಸಲ ಡೈರಿಯೊಳಗೆ ಮಕ್ಕಳಿಗಾಗಿ ಎಲ್ಲ ವಿವರವನ್ನೂ ಬರೆದಿಟ್ಟರಾಯಿತು ಎಂದು ಪ್ರಯತ್ನಿಸಿದೆ. ಆದರೆ ಅದಕ್ಕೂ ಧೈರ್ಯ ಸಾಲದೆ ಹಾಗೇ ಇಟ್ಟುಬಿಟ್ಟೆ. ಅದು ಆಗಸ್ಟ್ ತಿಂಗಳು ಬೇರೆ. ನಿರಂತರವಾದ ಮಳೆ, ಮುಸುಕಿದ ಮೋಡ. ಯಾವಾಗಲೂ ಕತ್ತಲು ಕವಿದಂತಹ ವಾತಾವರಣ. ಒಬ್ಬಳೇ ಮನೆಯಲ್ಲಿ ಇದ್ದುದರಿಂದ ಮಾನಸಿಕವಾಗಿ ಕುಗ್ಗಿ ಹೋದೆ. ‘ನರಕ ಎಂದರೆ ಇದೇನಾ?’ ಅನಿಸಲು ಶುರುವಾಗಿತ್ತು.‘ ಡಾ. ಶಕುಂತಲಾ ಪಾಟೀಲ
ನಮ್ಮ ಒಂದು ಧ್ವನಿ ಲಕ್ಷಾಂತರ ಧ್ವನಿಗಳನ್ನು ಪ್ರತಿನಿಧಿಸುತ್ತಿರುತ್ತದೆ. ಮರ್ಯಾದೆ, ವ್ಯವಸ್ಥೆ ಎನ್ನುವ ಮಹಾಸಂಕೋಲೆಯನ್ನು ಕಳಚಿ ಮುಕ್ತವಾಗಿ ಸಂಕಟಗಳನ್ನು ಹೊರಹಾಕುವುದನ್ನು ಕಲಿಯದಿದ್ದರೆ, ನಾವಷ್ಟೇ ಅಲ್ಲ ನಮ್ಮ ಮುಂದಿನ ಪೀಳಿಗೆಯವರು ಉಸಿರಾಡುವುದೂ ಕಷ್ಟವಾಗುತ್ತದೆ; ಸಹನೆಯೇ ನಮ್ಮ ಮೂಲಗುಣ, ಕೆಲಸವೇ ದೇವರು, ಕುಟುಂಬವೇ ಪ್ರಧಾನ ಅಸ್ತಿತ್ವ ಎಂದು ಸಾರಿಕೊಂಡು ಬಂದ ಮಹಾನ್ ದೇಶ ನಮ್ಮದು. ಆದರೆ ಇದನ್ನು ಜೀವನದೊಂದಿಗೆ ಜೀವವನ್ನೂ ಒತ್ತೆ ಇಡುವಂಥ ಪರಿಸ್ಥಿತಿಯಲ್ಲಿರುವ ಆರೋಗ್ಯ ಸೇವಾಕ್ಷೇತ್ರಗಳಲ್ಲಿರುವವರ ದೃಷ್ಟಿಯಲ್ಲಿ ಯೋಚಿಸಿ. ಗಂಟಲಿನ ಪಡಕಗಳತನಕ ಬಂದುಕುಳಿತ ನೋವುಗಳಿಗೆ ಸಮಸ್ಯೆಗಳಿಗೆ ಮುಕ್ತಿ ಕೊಟ್ಟರೆ ಮಾತ್ರ ಮುಂದಿನ ಹೆಜ್ಜೆಗಳನ್ನಿಡಲು ತ್ರಾಣ ದಕ್ಕುವುದು, ವಾಸ್ತವ ಸಂಗತಿಗಳಿಗೆ ಪರಿಹಾರ ಸಿಗುವುದು. ಈ ಹಿನ್ನೆಲೆಯಲ್ಲಿ ರೂಪಿಸಿರುವ ‘ಟಿವಿ9 ಕನ್ನಡ ಡಿಜಿಟಲ್ : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ’ ಸರಣಿಯಲ್ಲಿ ವೈದ್ಯರುಗಳ, ಶುಶ್ರೂಷಕರ, ಪ್ರಯೋಗಾಲಯ ಸಿಬ್ಬಂದಿ, ಸಹಾಯಕರ… ಹೀಗೆ ಆರೋಗ್ಯ ಸೇವಾಕ್ಷೇತ್ರಗಳಲ್ಲಿರುವವರ ಬದುಕು ಬವಣೆ ಮತ್ತು ಅಂತರಂಗದ ತುಣುಕುಗಳು ಇಲ್ಲಿರುತ್ತವೆ.
ತುಣುಕುಗಳು ಎಂದು ಹೇಳಲು ಕಾರಣವಿದೆ; ನಮಗಾದ ಅನ್ಯಾಯ, ನೋವು ನಿರೀಕ್ಷೆಗಳನ್ನು ವ್ಯಕ್ತಪಡಿಸಿ ರಾತ್ರೋರಾತ್ರಿಯೇ ಪರಿಹಾರೋಪಾಯಗಳನ್ನು ಪಡೆದುಕೊಳ್ಳುವಂಥ ಅಭಿವೃದ್ಧಿ ಹೊಂದಿದ ದೇಶದಲ್ಲಿ ನಾವಿನ್ನೂ ಇಲ್ಲ. ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿಯ ದುಡಿಮೆಯಲ್ಲಿ ಹತ್ತಾರು ಕೈಗಳು ಹೇಗೆ ಉಣ್ಣುತ್ತಿವೆಯೋ ಹಾಗೆ ವ್ಯವಸ್ಥೆಯ ಪರಿಧಿಯಲ್ಲಿ ದೊಡ್ಡ ದೊಡ್ಡ ತಿಮಿಂಗಲಗಳು ಸ್ವಾರ್ಥದ ಬಾಯಿಗಳನ್ನು ತೆರೆದಿಟ್ಟುಕೊಂಡೇ ಈಜಾಡುತ್ತಿವೆ, ಇಂಥ ಸಂಕಷ್ಟಮಯ ಸಂದರ್ಭದಲ್ಲಿಯೂ. ಹೀಗಿರುವಾಗ ಸಾಕಷ್ಟು ವಿಷಯಗಳನ್ನು ಅದುಮಿಟ್ಟುಕೊಂಡೇ ಬದುಕುವ ಅನಿವಾರ್ಯ ಹಲವರಿಗಿದೆ ಬಂದೊದಗಿದೆ. ಆದರೂ ಸಂವೇದನಾಶೀಲ, ಪ್ರಾಮಾಣಿಕ ಮನಸ್ಸುಗಳು ತಮ್ಮ ಮನಸಿನ ಮಾತುಗಳನ್ನು ಹಂಚಿಕೊಳ್ಳಲು ಇಲ್ಲಿ ಪ್ರಯತ್ನಿಸಿದ್ದಾರೆ. ಸಾಮಾಜಿಕ ಕಳಕಳಿಯುಳ್ಳ ಇನ್ನೂ ಕೆಲವರು ಇತರರ ಒಳತೋಟಿಗಳನ್ನು ಅಕ್ಷರಕ್ಕೆ ಹಿಡಿದಿಡಲು ಸಹಾಯ ಮಾಡಿದ್ದಾರೆ. ಓದುಗರಾದ ನಿಮಗೂ ನಿಮ್ಮ ನಿಮ್ಮ ಊರುಗಳಲ್ಲಿ ಕೊರೋನಾ ಯೋಧರಾಗಿ ಕೆಲಸ ಮಾಡುತ್ತಿರುವವರ ಆಂತರ್ಯಕ್ಕೆ ಅಕ್ಷರಗಳ ಮೂಲಕ ಧ್ವನಿಯಾಗುವ ಅವಕಾಶವೂ ಇಲ್ಲಿದೆ. ಇ ಮೇಲ್ : tv9kannadadigital@gmail.com
ತಮ್ಮ ಕೌಟುಂಬಿಕ ಜಗತ್ತನ್ನು ಈ ಸಣ್ಣ ವೈರಸ್ ಹೇಗೆ ಅಲ್ಲಾಡಿಸಿತು, ಸುಧಾರಿಸಿಕೊಂಡ ನಂತರ ರೋಗಿಗಳ ದೇಹವನ್ನಷ್ಟೇ ಅಲ್ಲ ಮನಸ್ಥಿತಿಯನ್ನೂ ಅರ್ಥ ಮಾಡಿಕೊಂಡು ಪೂರಕ ಚಿಕಿತ್ಸೆ ನೀಡಲು ಈ ಸ್ವಾನುಭವ ಹೇಗೆ ಸಹಾಯವಾಯಿತು ಎನ್ನುವುದನ್ನು ತಿಳಿಸಿದ್ದಾರೆ ಬೆಂಗಳೂರಿನಲ್ಲಿ ಆಯುರ್ವೇದ ವೈದ್ಯರಾಗಿರುವ ಡಾ. ಶಕುಂತಲಾ ಪಾಟೀಲ.
*
ಕಳೆದ ವರ್ಷ ಲಾಕ್ಡೌನ್ ಘೋಷಿಸಿದಾಗ, ಹದಿನೈದು ದಿನಗಳವರೆಗೆ ನಾನು ಕ್ಲಿನಿಕ್ ತೆರೆಯಲಿಲ್ಲ. ಇದರ ಮಧ್ಯೆ ವೈದ್ಯ ಮಿತ್ರರಾದ ದಿಲೀಪ್, ದೀಪಾ ಕುಲಕರ್ಣಿ, ಗೀತಾ ಪುತ್ತೂರು, ಲತಾ ದಿಲೀಪ್, ರಾಗಿಣಿ ಎಲ್ಲರೂ ಕೂಡಿ ಚರ್ಚಿಸಿ, ಆಯುರ್ವೇದದಲ್ಲಿ ಕೋವಿಡ್ ಕಾಯಿಲೆಯ ಗುಣಲಕ್ಷಣಗಳನ್ನು ಆಧರಿಸಿ, ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಬೇಕಾದ ಔಷಧಿಪಟ್ಟಿಯನ್ನು ತಯಾರಿಸಿ ಆಯುಷ್ ಇಲಾಖೆಗೆ ಪಿಡಿಎಫ್ ಪ್ರತಿ ಕಳುಹಿಸಿದೆವು. ಇದೇ ರೀತಿ ಅನೇಕ ಆಯುರ್ವೇದ ವೈದ್ಯರಿಂದ ಸುಮಾರು ೨೦೦೦ ದಷ್ಟು ಪಿಡಿಎಫ್ ಪ್ರತಿಗಳು ಈ ಇಲಾಖೆಗೆ ಬಂದಿದ್ದವು. ತಜ್ಞರ ಸಮಿತಿಯಡಿ ಈ ಕಾಯಿಲೆಗೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಬೇಕಾಗುವ ಔಷಧಿಗಳ ಒಂದು ಪಟ್ಟಿ ಬಿಡುಗಡೆಗೊಂಡಿತು.
ಹದಿನೈದು ದಿನಗಳ ನಂತರ ಕ್ಲಿನಿಕ್ಗೆ ಹೊರಟಾಗ ಒಳಗಡೆ ಒಂದು ಸಣ್ಣಗೆ ನಡುಕ. ಹೇಗೋ ಏನೋ ಎನ್ನುವ ಆತಂಕದೊಂದಿಗೆ ಹೊಸ ಬದಲಾವಣೆಗೆ ತೆರೆದುಕೊಳ್ಳಲಾರಂಭಿಸಿದೆ. ಕ್ಲಿನಿಕ್ನಲ್ಲಿ ಸಾಕಷ್ಟು ಬದಲಾವಣೆ ಮಾಡಿದೆ. ಹ್ಯಾಂಡ್ ಸ್ಯಾನಿಟೈಸರ್, ಕ್ಲಿನಿಕ್ ಸ್ಯಾನಿಟೈಸರ್, ಮಾಸ್ಕ್, ಫೇಸ್ ಶೀಲ್ಡ್, ಗ್ಲೋವ್ಸ್, ಪ್ಲಾಸ್ಟಿಕ್ ಏಪ್ರಾನ್ ಅಥವಾ ಗೌನ್ ಇವಲ್ಲೆವೂ ಸೇರಿ ನಮ್ಮ ಪಿಪಿಇ ಕಿಟ್ ಆಯಿತು. ಕೆಮ್ಮು, ಜ್ವರ, ನೆಗಡಿ ಅಂತ ಬಂದ ರೋಗಿಗಳನ್ನು ಬೇರೆಯಾಗಿ ತಪಾಸಣೆ ಮಾಡುವ ವ್ಯವಸ್ಥೆ ಮಾಡಿಕೊಂಡೆವು. ಒಬ್ಬರಾದ ಮೇಲೆ ಇನ್ನೊಬ್ಬ ರೋಗಿಯನ್ನು ಒಳಗೆ ಕರೆಯುತ್ತಿದ್ದೆವು. ಪ್ರತಿಯೊಬ್ಬರ ಚೆಕಪ್ ಆದ ಮೇಲೆ, ಆ ಜಾಗವನ್ನು ಸ್ಯಾನಿಟೈಸರ್ ಮೂಲಕ ಸ್ವಚ್ಛ ಮಾಡಲಾಗುತ್ತಿತ್ತು. ಕೆಲವೊಂದು ವೈದ್ಯಮಿತ್ರರು ಕ್ಲಿನಿಕ್ನಲ್ಲಿ ಧೂಪವನ್ನು ಹಾಕುತ್ತಿದ್ದರು.
ಕೆಲವೊಂದು ಸರ್ತಿ ಕೋವಿಡ್ ಭಯಕ್ಕೆ ಸ್ವಲ್ಪ ಆರೋಗ್ಯದಲ್ಲಿ ಏರುಪೇರಾದರೂ ಜನ ಓಡೋಡಿ ಬರುತ್ತಿದ್ದರು. ಮತ್ತೆ ಕೆಲವರು ಮುಂಜಾಗ್ರತೆಗಾಗಿ ಆಯುರ್ವೇದದಲ್ಲಿ ಏನು ಮಾಡಿದರೆ ಒಳ್ಳೆಯದು ಅಂತ ಕೇಳಿಕೊಂಡು ಬರುತ್ತಿದ್ದರು. ವಾಟ್ಸ್ಆಪ್ನಲ್ಲಿ ಬರುವ ವಿಡಿಯೋಗಳಲ್ಲಿ ಬರುವ ಔಷಧಿಗಳ ಬಗ್ಗೆ ವಿಚಾರಿಸಲು ಕೆಲವೊಂದು ಸಲ ಬಂದರೆ, ಕೆಲವು ಸಲ ಅವುಗಳಿಂದಾಗಿ ಅಡ್ಡಪರಿಣಾಮಗಳುಂಟಾದ ಮೇಲೆ ಬರುತ್ತಿದ್ದರು. ಇದೆಲ್ಲದರೊಂದಿಗೆ ಎಷ್ಟು ಸಲ ಹೇಳಿದರೂ ಜನ ಮಾಸ್ಕ್ ಧರಿಸದೇ ಒಳಗಡೆ ಬರುವುದು, ಉಸಿರು ಕಟ್ಟುತ್ತಿದೆ ಎಂದು ತಕ್ಷಣವೇ ಮಾಸ್ಕ್ ತೆಗೆದುಬಿಡುತ್ತಿದ್ದರು. ಈ ಎರಡು ನಿಮಿಷ ನೀವುಗಳು ಅದನ್ನು ರೂಢಿಸಿಕೊಳ್ಳದಿದ್ದರೆ ಮುಂದೆ ನಿಜವಾಗಿ ಉಸಿರಾಡುವುದು ಕಷ್ಟ ಎಂದು ತಮಾಷೆ ಮಾಡಿದರೂ ಇಂದಿಗದು ನಿಜವೇ ಆಗಿದೆ. ಆರಂಭದಲ್ಲಿ ಅವರಿಗೆ ಹೊಂದಿಕ್ಕೊಳ್ಳಲು ಕಷ್ಟವಾದರೂ ಬರುಬರತ್ತಾ ‘ಇರಲಿ ಬಿಡಿ ನೀವು ನಮ್ಮ ಒಳ್ಳೇಯದಕ್ಕೆ ಅಲ್ವ ಹೇಳೋದು’ ಎಂದು ಹೇಳುತ್ತಾ ಮಾಸ್ಕ್ ತೆಗೆಯದೆ ಇರುವುದನ್ನು ರೂಢಿಸಿಕೊಂಡರು. ಇಷ್ಟು ಕಾಳಜಿ ವಹಿಸಿದರೂ ನನ್ನ ಒಳಗಡೆ ಒಂದು ಸಣ್ಣ ಭಯ ಇದ್ದೇ ಇತ್ತು. ನನ್ನಿಂದಾಗಿ ನಮ್ಮ ಮನೆಯವರಿಗೂ ಕೂಡ ತೊಂದರೆ ಎನ್ನುವ ಭಯ. ಎಲ್ಲೆಡೆ ಬರೀ ಅಂಥಹ ಸುದ್ಧಿಗಳನ್ನೇ ಕೇಳುತಿದ್ದೆ. ಅದಕ್ಕೆ ಮುಂಜಾಗ್ರತೆಯಾಗಿ ಮನೆಗೆ ಬಂದ ತಕ್ಷಣ ಸ್ನಾನ, ನಂತರ ಸ್ಟೀಮ್ ತೆಗೆದುಕ್ಕೊಳುವುದು. ನಂತರ ಬೇರೆ ಕೆಲಸ ಎಂದು ನಿರ್ಧರಿಸಿ ಪಾಲಿಸತೊಡಗಿದೆ. ದಿನವೂ ಮೂರು ಸಲ ಸ್ನಾನ ಮಾಡುವುದು ಕಷ್ಟವಾದರೂ ಅದು ಅನಿವಾರ್ಯವಾಗಿತ್ತು. ಮಕ್ಕಳ ಆನ್ಲೈನ್ ಕ್ಲಾಸ್, ಪತಿಯ ಕೆಲಸಕ್ಕೆ ತೊಂದರೆ ಆಗಿ ಬದುಕು ಪೂರ್ತಿಯಾಗಿ ಬುಡಮೇಲಾಯಿತು. ಅರಿಯದ, ಕಣ್ಣಿಗೆ ಕಾಣದ ಒಂದು ಸಣ್ಣ ಕ್ರಿಮಿ ನಮ್ಮ ಕೌಟುಂಬಿಕ ಜಗತ್ತನ್ನೂ ಅಲ್ಲಾಡಿಸಿಬಿಟ್ಟಿತು.
ಈ ಮಧ್ಯೆ ನಮ್ಮ ವಾರ್ಡಿನಲ್ಲಿ ಒಂದು ಕೋವಿಡ್ ಕೇಸ್ ಪತ್ತೆಯಾಯಿತು. ಆಗ ಮಕ್ಕಳು ಮತ್ತು ಅತ್ತೆಯವರನ್ನು ಸುರಕ್ಷತೆಯ ದೃಷ್ಟಿಯಿಂದ ಊರಿಗೆ ಕಳುಹಿಸಿಬಿಟ್ಟೆವು. ಅದೊಂದು ದಿನ ಪತಿಯ ಕಂಪನಿಯಲ್ಲಿ ಒಬ್ಬರಿಗೆ ಕೋವಿಡ್ ತಗಲಿ ಅದು ಇವರಿಗೂ ವರ್ಗಾವಣೆಯಾಯಿತು. ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಬೇರೆ. ಈ ವೈರಸ್ ಹೃದಯ ಕಾಯಿಲೆ ಉಳ್ಳವರಿಗೆ ಜಾಸ್ತಿ ತೊಂದರೆ ಕೊಡುತ್ತದೆಯಾದ್ದರಿಂದ ಭಯ ಶುರುವಾಯಿತು. ಇವರಿಗೆ ಜ್ವರ ಬಂದ ಎರಡು ದಿನದ ನಂತರ ನನಗೂ ಜ್ವರ. ಇಬ್ಬರೂ Self quarantine ಆದೆವು. ಎರಡು ದಿನಗಳ ನಂತರ ಸ್ವಯಂವೈದ್ಯದಿಂದಾಗಿ ಜ್ವರವೇನೋ ಬಿಟ್ಟಿತು. ಆದರೆ ವಿಪರೀತ ಸುಸ್ತು. ನಿಂತುಕೊಳ್ಳಲೂ ಆಗುತ್ತಿರಲಿಲ್ಲ. ಎಷ್ಟು ಧೈರ್ಯ ತಂದುಕೊಂಡರೂ ಏನೇನೋ ಆಲೋಚನೆಗಳು. ಭಯ ಹೆಚ್ಚಿಸುವಂಥ ಸುದ್ದಿಗಳ ಮಹಾಪೂರ. ಇಂಥದರಲ್ಲಿ ನಮ್ಮ ಪರಿಚಯದ ಹುಡುಗನೊಬ್ಬ ಮದುವೆಗೆ ಒಂದು ತಿಂಗಳು ಇರುವಾಗ ವ್ಯಾಪಾರಕ್ಕೆಂದು ಬೇರೆ ಊರಿಗೆ ಹೋದಾಗ ಕೊರೋನಾ ತಗುಲಿ, ಅದು ಅವನ ತಾಯಿಗೂ ವರ್ಗಾವಣೆ ಆಗಿ, ಸ್ವಲ್ಪ ದಿನಗಳಾದ ಮೇಲೆ ಅವರಿಬ್ಬರೂ ಇಲ್ಲವಾದ ಸುದ್ದಿ ಕೇಳಿ ಕಾಲಲ್ಲಿನ ಶಕ್ತಿ ಕುಸಿದು ಹೋಯಿತು. ದಿನ ಬೆಳಗಾದರೆ ಇಂಥ ಹತ್ತು ಹಲವಾರು ಸುದ್ದಿಗಳನ್ನು ಕೇಳುವುದೇ ಕೆಲಸ ಎನ್ನುವಂತೆ ಆಯಿತು.
ಜ್ವರ ಬಂದ ಒಂದು ವಾರದ ನಂತರ ಪತಿಗೆ ಸಣ್ಣದಾಗಿ ಕೆಮ್ಮು ಶುರುವಾಯಿತು. ಇಬ್ಬರೂ ಟೆಸ್ಟ್ ಮಾಡಿಸಿದಾಗ ಮೂರು ದಿನಗಳ ಅಂತರದಲ್ಲಿ ಇಬ್ಬರಿಗೂ ಪಾಸಿಟಿವ್ ಬಂದಿತು. ರಿಸ್ಕ್ ಬೇಡವೆಂದು ಪತಿಯನ್ನು ಆಸ್ಪತ್ರೆಗೆ ಸೇರಿಸಲು ನಿರ್ಧರಿಸಿದೆ. ಆಗ ಈಗಿನಂತೆ ಬೆಡ್, ಆಕ್ಸಿಜನ್ಗೆ ದುಸ್ತರವಿರಲಿಲ್ಲ. ಆದರೆ ಇವರು ಆ್ಯಂಬುಲೆನ್ಸ್ ಹತ್ತುವಾಗ ಜೀವ ಬಾಯಿಗೆ ಬಂದಂತಾಗಿ ಅವರನ್ನು ತಿರುಗಿ ನೋಡಿತ್ತೇನೋ ಇಲ್ಲವೋ ಎಂದೆನ್ನಿಸಿ ಆ್ಯಂಬುಲೆನ್ಸ್ನ ಹಿಂದೆ ಹುಚ್ಚಿಯಂತೆ ಸ್ವಲ್ಪ ದೂರ ಓಡಿದ್ದೆ. ಕಾಕತಾಳೀಯ ಎಂಬಂತೆ ನಮ್ಮನೆಯಲ್ಲಿ ಬೇರೆ ಬೇರೆ ಕಾರಣಗಳಿಂದ ವರುಷದಿಂದ ಸರಣಿ ಸಾವುಗಳು! ನನಗೆ ಅದನ್ನೇ ಜೀರ್ಣಿಸಿಕ್ಕೊಳ್ಳುವುದು ಕಷ್ಟವಾಗಿತ್ತು. ಸಾವು ಅಂತಿಮ ಸತ್ಯ, ಸಾವನ್ನು ಗೆದ್ದವರು ಯಾರು ಇಲ್ಲ. ಹುಟ್ಟಿದವರು ಸಾಯಲೇಬೇಕು ಈ ಎಲ್ಲ ವಾಕ್ಯಗಳು ವಾಕ್ಯಗಳೇ. ಆದರೆ, ನಮ್ಮವರನ್ನು ಕಳೆದುಕೊಳ್ಳುತ್ತೇವೆ ಎನ್ನುವ ಭಯ ಎದುರಾದಾಗ? ಇವರು ಎಡ್ಮಿಟ್ ಆದ ಮೇಲೆ, `ಒಬ್ಬಳೇ ಮನೆಯಲ್ಲಿ ಇರುವದು ಬೇಡ, ನಮ್ಮ ಮನೆಗೇ ಬಂದುಬಿಡು’ ಎಂದರು ಅಕ್ಕ ಮತ್ತು ಬಾವ. ನನ್ನಿಂದಾಗಿ ಅವರಿಗೆ ತೊಂದರೆ ಬೇಡ ಎಂದು ಮನೆಯಲ್ಲೇ ಉಳಿದೆ. ಆದರೆ ಒಬ್ಬಳೇ ಇರುವಾಗ ಮನಸ್ಸಿನಲ್ಲಿ ನಾನಾ ತರಹದ ವಿಚಾರಗಳು. ನಮ್ಮಿಬ್ಬರಿಗೂ ತೊಂದರೆ ಆದರೆ ಮಕ್ಕಳ ಗತಿ ಏನು? ಸಾಕಷ್ಟು ಸಲ ಡೈರಿಯೊಳಗೆ ಮಕ್ಕಳಿಗಾಗಿ ಎಲ್ಲ ವಿವರವನ್ನೂ ಬರೆದಿಟ್ಟರಾಯಿತು ಎಂದು ಪ್ರಯತ್ನಿಸಿದೆ. ಆದರೆ ಅದಕ್ಕೂ ಧೈರ್ಯ ಸಾಲದೆ ಹಾಗೇ ಇಟ್ಟುಬಿಟ್ಟೆ. ಅದು ಆಗಸ್ಟ್ ತಿಂಗಳು ಬೇರೆ. ನಿರಂತರವಾದ ಮಳೆ, ಮುಸುಕಿದ ಮೋಡ. ಯಾವಾಗಲೂ ಕತ್ತಲು ಕವಿದಂತಹ ವಾತಾವರಣ. ಒಬ್ಬಳೇ ಮನೆಯಲ್ಲಿ ಇದ್ದುದರಿಂದ ಮಾನಸಿಕವಾಗಿ ಕುಗ್ಗಿ ಹೋದೆ. ‘ನರಕ ಎಂದರೆ ಇದೇನಾ?’ ಅನಿಸಲು ಶುರುವಾಗಿತ್ತು. ಆಸ್ಪತ್ರೆ ಸೇರಿದ ಎರಡು ದಿನಗಕ್ಕೇ ಇವರು ಸುಧಾರಿಸತೊಡಗಿದರು. ವಾರದೊಳಗೆ ಡಿಸ್ಚಾರ್ಜ್ ಮಾಡಲಾಗುವುದು ಎಂದು ಡಾಕ್ಟರ್ ಹೇಳಿದರು. ಆದರೆ ನನಗೆ ಐದು ದಿನವಾಗುವಾಗ ಸಣ್ಣದಾಗಿ ಕೆಮ್ಮು. ಮನೆಯಲ್ಲೇ ಒಬ್ಬಳೇ ಇರುವಾಗ ತೊಂದರೆ ಆದರೆ ಹೊರಗಿನವರಿಗೂ ಗೊತ್ತಾಗುವದಿಲ್ಲವೆಂದುಕೊಂಡು ಇವರು ಡಿಸ್ಚಾರ್ಜ್ ಆಗುವ ದಿನವೇ ನಾನೂ ಅದೇ ಆಸ್ಪತ್ರೆಗೆ ಸೇರಿದೆ. ಅವತ್ತೇ ಹದಿನೈದು ದಿನಗಳ ನಂತರ ಹೊಟ್ಟೆ ತುಂಬಾ ಊಟ, ಕಣ್ತುಂಬ ನಿದ್ದೆ ಮಾಡಿದ್ದೆ. ಇವರು ಆರಾಮಾಗಿದ್ದರಿಂದ ಧೈರ್ಯ ಬಂದಿತ್ತು. ವೈದ್ಯರಾದ ನಮ್ಮ ಸ್ಥಿತಿಯೇ ಹೀಗಾದರೆ ಸಾಮಾನ್ಯ ಜನರ ಅವಸ್ಥೆ ಹೇಗೆ ಎಂದು ಸಾಕಷ್ಟು ಸಲ ಅನಿಸುತ್ತದೆ. ಸದ್ಯ ಐದು ದಿನಗಳ ನಂತರ ಆರಾಮಾಗಿ ಮನೆಗೆ ಮರಳಿದೆ.
ವಾರದ ನಂತರ ಪುನಃ ಕ್ಲಿನಿಕ್ಗೆ ಹೊರಟಾಗ ಸ್ವಲ್ಪ ಸುಸ್ತು, ಕ್ರಮೇಣ ಸರಿ ಹೋಯಿತು. ನಾನು ಅನುಭವಿಸಿದ ತಲ್ಲಣ, ಆತಂಕ ಕೋವಿಡ್ ರೋಗಿಗಳ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಸಿತ್ತಾದ್ದರಿಂದ ಅವರ ಬಗೆಗಿನ ಪ್ರತಿ ಧೋರಣೆ ಇನ್ನೂ ಮೃದುವಾಯಿತು. ಈಗ ನಾನು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಮಾಡುವ ರೀತಿ ಸಂಪೂರ್ಣ ಬದಲಾಯಿತು. ಅವರ ಮಾನಸಿಕ ಸ್ಥಿತಿಯನ್ನು ಅರಿತುಕೊಂಡು ಔಷಧಿಯೊಂದಿಗೆ ಆಪ್ತಸಲಹೆಯನ್ನೂ ನೀಡತೊಡಗಿದೆ. ಸಾಮಾನ್ಯವಾಗಿ ವೈದ್ಯರುಗಳು ತುಂಬುಮನಸಿನಿಂದ ಜನಸೇವೆ ಮಾಡಲು ಅವಕಾಶಗಳಿಗಾಗಿ ಕಾಯುತ್ತಿರುತ್ತಾರೆ. ಆದರೆ ದುರಂತವೆಂದರೆ ಇದು ನಮ್ಮ ಮನೆಯವರ ತ್ಯಾಗವನ್ನೇ ಕೇಳುವಂಥ ವೈರಸ್.
ಕೋವಿಡ್ ಸಂಖ್ಯೆಯಲ್ಲಿ ಇಳಿಮುಖ ಕಂಡು ಎಲ್ಲವೂ ಒಂದು ಹಂತಕ್ಕೆ ಬಂದಿದೆ ಎನ್ನುವಾಗ ಜನ ನಿಯಮಗಳನ್ನು ಮರೆತರು. ಸಭೆ ಸಮಾರಂಭದಲ್ಲಿ ಭಾಗವಹಿಸುವುದು ಮೊದಲಿನಂತೆಯೇ ಮುಂದುವರೆಯಿತು. ಹೊರ ರಾಜ್ಯ ಮತ್ತು ಹೊರ ದೇಶಗಳಲ್ಲಿ ರೂಪಾಂತರಗೊಂಡ ವೈರಾಣುವಿನ ಅಬ್ಬರ ಕಂಡೂ ನಾವು ಪಾಠ ಕಲಿಯದಿದ್ದುದಕ್ಕೆ ಮತ್ತೀಗ ಪರಿಸ್ಥಿತಿ ವಿಪರೀತಕ್ಕೆ ಹೋಗಿದೆ. ಎರಡನೇ ಅಲೆಯಲ್ಲಿ ರೂಪಾಂತರಗೊಂಡ ವೈರಾಣು ಹೆಚ್ಚು ಸಾವುನೋವಿಗೆ ನೂಕುತ್ತಿದೆ. ಚೆಕಪ್ಗೆ ಬಂದವರು ಕೂತಲ್ಲೇ ಕುಸಿಯುವ ಸುದ್ದಿಗಳನ್ನು ಕೇಳುತ್ತಿದ್ದೇವೆ ನೋಡುತ್ತಿದ್ಧೇವೆ. ಹೊಟ್ಟೆಯಲ್ಲೇನೋ ತೊಳೆಸಿದಂತಾಗಿ ಒಳಗೂ ಹೊರಗೂ ವಿಚಿತ್ರ ಸ್ಮಶಾನ ಮೌನ. ನಾನೀಗ ಕೋವಿಶೀಲ್ಡ್ ವ್ಯಾಕ್ಸೀನ್ ತೆಗೆದುಕ್ಕೊಂಡಿದ್ದರಿಂದ ಸ್ವಲ್ಪ ಮಟ್ಟಿಗೆ ಧೈರ್ಯ. ಆದರೆ ನಾಳೆಗಳು ಹೇಗೆ, ಏನು ಎತ್ತ ಎನ್ನುವ ಸ್ಪಷ್ಟತೆ ಇಲ್ಲದೆ ದಿನಗಳು ಸಾಗುತ್ತಿವೆ. ಸರ್ಕಾರ ಈಗಲಾದರೂ ವ್ಯವಸ್ಥಿತವಾಗಿ ಕಟ್ಟುನಿಟ್ಟುಗಳನ್ನು ಮಾಡಿದರೆ, ಜನರೂ ಅದನ್ನೂ ಪಾಲಿಸಿದರೆ ಕೋವಿಡ್ ಜಯಿಸಲು ಸಾಧ್ಯ. ನಾವೇ ನಮ್ಮವರಿಗೆ ಕಂಟಕವಾಗುವುದು ಬೇಡ. ವಿನಾಕಾರಣ ಅಲೆಯುವ ಹುಂಬುತನವಂತೂ ಮೊದಲೇ ಬೇಡ.
ಇದನ್ನೂ ಓದಿ : Corona Warriors : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ ; ಆಶಾತಾಯಂದಿರ ಎದೀಗೆ ಹೊಟ್ಟೀಗೆ ಬೇಕಾಗಿರೂದು ಚಪ್ಪಾಳಿ, ಘಂಟಿ ಸಪ್ಪಳಲ್ರೀ
Published On - 2:12 pm, Sun, 16 May 21