Corona Warriors: ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ ; ಇಡೀ ಊರಿಗೆ ಬಂದದ್ದು ತನಗೆ ಬರಲಿಕ್ಕಿಲ್ಲ ಎಂಬ ಭಾವನೆ ಇನ್ನೂ ಹಲವರಲ್ಲಿದೆ

‘ಯಾರನ್ನೇ ಕೇಳಿದರೂ, `ಈ ಕೋವಿಡ್ ಗೀವಿಡ್ ಎಲ್ಲ ಸುಳ್ಳಂತೆ. ವೈದ್ಯರಿಗೆ ಆಸ್ಪತ್ರೆಗೆ ಕೋವಿಡ್ ಎಂದು ದಾಖಲು ಮಾಡಿಕೊಂಡ ಪ್ರತಿ ರೋಗಿಗೆ ಇಂತಿಷ್ಟು ಅಂತ ದುಡ್ಡು ಬರ್ತದಂತೆ’ ಎನ್ನುವ ಗುಲ್ಲು. ಗಹನ ರೋಗಲಕ್ಷಣವಿಲ್ಲದ ರೋಗಿಗಳು ನಮ್ಮಲ್ಲಿ ಉಳಿದು ಹದಿನಾಲ್ಕು ದಿನಗಳ ಉಪಚಾರ ಪಡೆದು ಗುಣಮುಖರಾಗಿ ಹೋದವರೂ ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದುದು ಸೋಜಿಗ. ಹೊರರೋಗಿ ವಿಭಾಗದಲ್ಲಿ ಮಾಸ್ಕ್ ಸರಿಯಾಗಿ ಧರಿಸಿ ಎಂದು ಗದರಿದರೆ ಕುಹಕದ ನಗೆಯಿಂದ, ಮಾತಿನಿಂದ ಸವಾಲು ಹಾಕುವವರೇ ಹೆಚ್ಚಾಗಿದ್ದರು.’ ಡಾ. ಕೃಷ್ಣ ಜಿ.

Corona Warriors: ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ ; ಇಡೀ ಊರಿಗೆ ಬಂದದ್ದು ತನಗೆ ಬರಲಿಕ್ಕಿಲ್ಲ ಎಂಬ ಭಾವನೆ ಇನ್ನೂ ಹಲವರಲ್ಲಿದೆ
ಡಾ. ಕೃಷ್ಣ ಜಿ.
Follow us
ಶ್ರೀದೇವಿ ಕಳಸದ
| Updated By: Digi Tech Desk

Updated on:May 14, 2021 | 1:20 PM

ನಮ್ಮ ಒಂದು ಧ್ವನಿ ಲಕ್ಷಾಂತರ ಧ್ವನಿಗಳನ್ನು ಪ್ರತಿನಿಧಿಸುತ್ತಿರುತ್ತದೆ. ಮರ್ಯಾದೆ, ವ್ಯವಸ್ಥೆ ಎನ್ನುವ ಮಹಾಸಂಕೋಲೆಯನ್ನು ಕಳಚಿ ಮುಕ್ತವಾಗಿ ಸಂಕಟಗಳನ್ನು ಹೊರಹಾಕುವುದನ್ನು ಕಲಿಯದಿದ್ದರೆ, ನಾವಷ್ಟೇ ಅಲ್ಲ ನಮ್ಮ ಮುಂದಿನ ಪೀಳಿಗೆಯವರು ಉಸಿರಾಡುವುದೂ ಕಷ್ಟವಾಗುತ್ತದೆ; ಸಹನೆಯೇ ನಮ್ಮ ಮೂಲಗುಣ, ಕೆಲಸವೇ ದೇವರು, ಕುಟುಂಬವೇ ಪ್ರಧಾನ ಅಸ್ತಿತ್ವ ಎಂದು ಸಾರಿಕೊಂಡು ಬಂದ ಮಹಾನ್ ದೇಶ ನಮ್ಮದು. ಆದರೆ ಇದನ್ನು ಜೀವನದೊಂದಿಗೆ ಜೀವವನ್ನೂ ಒತ್ತೆ ಇಡುವಂಥ ಪರಿಸ್ಥಿತಿಯಲ್ಲಿರುವ ಆರೋಗ್ಯ ಸೇವಾಕ್ಷೇತ್ರಗಳಲ್ಲಿರುವವರ ದೃಷ್ಟಿಯಲ್ಲಿ ಯೋಚಿಸಿ. ಗಂಟಲಿನ ಪಡಕಗಳತನಕ ಬಂದುಕುಳಿತ ನೋವುಗಳಿಗೆ ಸಮಸ್ಯೆಗಳಿಗೆ ಮುಕ್ತಿ ಕೊಟ್ಟರೆ ಮಾತ್ರ ಮುಂದಿನ ಹೆಜ್ಜೆಗಳನ್ನಿಡಲು ತ್ರಾಣ ದಕ್ಕುವುದು, ವಾಸ್ತವ ಸಂಗತಿಗಳಿಗೆ ಪರಿಹಾರ ಸಿಗುವುದು. ಈ ಹಿನ್ನೆಲೆಯಲ್ಲಿ ರೂಪಿಸಿರುವ ‘ಟಿವಿ9 ಕನ್ನಡ ಡಿಜಿಟಲ್ : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ’ ಸರಣಿಯಲ್ಲಿ ವೈದ್ಯರುಗಳ, ಶುಶ್ರೂಷಕರ, ಪ್ರಯೋಗಾಲಯ ಸಿಬ್ಬಂದಿ, ಸಹಾಯಕರ ಹೀಗೆ ಆರೋಗ್ಯ ಸೇವಾಕ್ಷೇತ್ರಗಳಲ್ಲಿರುವವರ ಬದುಕು ಬವಣೆ ಮತ್ತು ಅಂತರಂಗದ ತುಣುಕುಗಳು ಇಲ್ಲಿರುತ್ತವೆ.

ತುಣುಕುಗಳು ಎಂದು ಹೇಳಲು ಕಾರಣವಿದೆ; ನಮಗಾದ ಅನ್ಯಾಯ, ನೋವು ನಿರೀಕ್ಷೆಗಳನ್ನು ವ್ಯಕ್ತಪಡಿಸಿ ರಾತ್ರೋರಾತ್ರಿಯೇ ಪರಿಹಾರೋಪಾಯಗಳನ್ನು ಪಡೆದುಕೊಳ್ಳುವಂಥ ಅಭಿವೃದ್ಧಿ ಹೊಂದಿದ ದೇಶದಲ್ಲಿ ನಾವಿನ್ನೂ ಇಲ್ಲ. ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿಯ ದುಡಿಮೆಯಲ್ಲಿ ಹತ್ತಾರು ಕೈಗಳು ಹೇಗೆ ಉಣ್ಣುತ್ತಿವೆಯೋ ಹಾಗೆ ವ್ಯವಸ್ಥೆಯ ಪರಿಧಿಯಲ್ಲಿ ದೊಡ್ಡ ದೊಡ್ಡ ತಿಮಿಂಗಲಗಳು ಸ್ವಾರ್ಥದ ಬಾಯಿಗಳನ್ನು ತೆರೆದಿಟ್ಟುಕೊಂಡೇ ಈಜಾಡುತ್ತಿವೆ, ಇಂಥ ಸಂಕಷ್ಟಮಯ ಸಂದರ್ಭದಲ್ಲಿಯೂ. ಹೀಗಿರುವಾಗ ಸಾಕಷ್ಟು ವಿಷಯಗಳನ್ನು ಅದುಮಿಟ್ಟುಕೊಂಡೇ ಬದುಕುವ ಅನಿವಾರ್ಯ ಹಲವರಿಗಿದೆ ಬಂದೊದಗಿದೆ. ಆದರೂ ಸಂವೇದನಾಶೀಲ, ಪ್ರಾಮಾಣಿಕ ಮನಸ್ಸುಗಳು ತಮ್ಮ ಮನಸಿನ ಮಾತುಗಳನ್ನು ಹಂಚಿಕೊಳ್ಳಲು ಇಲ್ಲಿ ಪ್ರಯತ್ನಿಸಿದ್ದಾರೆ. ಸಾಮಾಜಿಕ ಕಳಕಳಿಯುಳ್ಳ ಇನ್ನೂ ಕೆಲವರು ಇತರರ ಒಳತೋಟಿಗಳನ್ನು ಅಕ್ಷರಕ್ಕೆ ಹಿಡಿದಿಡಲು ಸಹಾಯ ಮಾಡಿದ್ದಾರೆ. ಓದುಗರಾದ ನಿಮಗೂ ನಿಮ್ಮ ನಿಮ್ಮ ಊರುಗಳಲ್ಲಿ ಸಾರ್ವಜನಿಕ ಸೇವಾಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರ ಆಂತರ್ಯಕ್ಕೆ ಅಕ್ಷರಗಳ ಮೂಲಕ ಧ್ವನಿಯಾಗುವ ಅವಕಾಶವೂ ಇಲ್ಲಿದೆ. ಇ ಮೇಲ್ : tv9kannadadigital@gmail.com

‘ಒಟ್ಟಾರೆ ಕೋವಿಡ್ ಪ್ಯಾಂಡೆಮಿಕ್‍ಗೆ ಜನರು ಹೊಂದಿಕೊಳ್ಳುತ್ತ ಹೋಗುತ್ತಿರುವಂತೆ ಕಾಣುತ್ತಿದೆ. ವೈದ್ಯಕೀಯ ಸೇವಾ ಸೌಲಭ್ಯದ ಅಸಮತೋಲನ ಹಾಗೂ ಕೊರತೆ ಗಹನವಾಗಿದೆ. ದಣಿವು ಕಾಣಿಸತೊಡಗಿದೆ. ಇದು ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವ ಎಲ್ಲರಿಗೂ ದೊಡ್ಡ ಸವಾಲೇ ಸರಿ. ಇದನ್ನು ಹೇಗೆ ಮತ್ತು ಎಷ್ಟು ಸಮರ್ಥವಾಗಿ ನಿಭಾಯಿಸುತ್ತೇವೆ ಎನ್ನುವುದನ್ನು ಕಾದು ನೋಡಬೇಕಿದೆ.’ ಡಾ. ಕೃಷ್ಣ ಜಿ. ಸ್ತ್ರೀರೋಗ ತಜ್ಞ, ಹೊನ್ನಾವರ ತಾಲೂಕು ಆಸ್ಪತ್ರೆ.

* ತ್ತೀಚಿನ ತಲೆಮಾರು ಇಂತಹ ವಿಶ್ವವ್ಯಾಪಿ ಸಾಂಕ್ರಾಮಿಕವನ್ನು ನೋಡಲೇ ಇಲ್ಲ ಎನ್ನಬಹುದು. 20ನೇ ಶತಮಾನದ ಉತ್ತರಾರ್ಧದಿಂದ ನಾವು ಬಹಳಷ್ಟು ಕಾಯಿಲೆಗಳನ್ನು ಗೆಲ್ಲುತ್ತ ಬಂದಿದ್ದೇವೆ. ಸಿಡುಬು, ಪೋಲಿಯೋಗಳ ನಿರ್ಮೂಲನ ಮಾಡಿದ್ದೇವೆ. ಕ್ಷಯ, ಮಲೇರಿಯಾ ಮುಂತಾದ ರೋಗಗಳನ್ನು ಹತೋಟಿಗೆ ತಂದಿದ್ದೇವೆ. ನಮ್ಮ ಶೌಚ ಅಭ್ಯಾಸಗಳು, ಪರಿಸರ ಸ್ವಚ್ಛತೆಯ ಕುರಿತ ಕಿಂಚಿತ್ ಕಾಳಜಿಯಿಂದ ಕಾಲರಾ, ಜಾಂಡೀಸ್‍ಗಳನ್ನೂ ಹತೋಟಿಗೆ ತಂದೆವು. ಲಸಿಕೆಯಿಂದ ತಡೆಗಟ್ಟುವ ರೋಗಗಳನ್ನು ಸಮರ್ಪಕವಾದ ರಾಷ್ಟ್ರೀಯ ಚುಚ್ಚುಮದ್ದು ಕಾರ್ಯಕ್ರಮದಿಂದ ನಿಯಂತ್ರಣಕ್ಕೆ ತಂದೆವು. ಇದೆಲ್ಲವೂ ಸ್ವಾತಂತ್ರ್ಯೋತ್ತರದಲ್ಲಿ ಹಾಕಿಕೊಂಡ ರಾಷ್ಟ್ರೀಯ ಕಾರ್ಯಕ್ರಮಗಳು ಮತ್ತು ಸಮುದಾಯ ಆರೋಗ್ಯಕ್ಕೆ ಒತ್ತು ನೀಡುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಜಾಲದಿಂದ ಸಾಧ್ಯವಾಯಿತು. ಹಾಗೆ ನೋಡಿದರೆ 20ನೇ ಶತಮಾನ ಮುಗಿಯುತ್ತಿದ್ದಂತೆ ನಾವು ಆರೋಗ್ಯ ಕ್ಷೇತ್ರದಲ್ಲಿ ಬಹಳ ಮುಂದುವರೆಯುತ್ತಿದ್ದೇವೆ ಎಂಬ ಭಾವನೆ ಬಂದಿತ್ತು.

ಈಗ ವೈದ್ಯಕೀಯ ಕ್ಷೇತ್ರದಲ್ಲಿ ದುಡಿಯುತ್ತಿರುವ ನಾವು ಪ್ಯಾಂಡೆಮಿಕ್ ಹೋಗಲಿ, ಪ್ಲೇಗ್ ಕಾಲರಾದಂತಹ ಎಪಿಡೆಮಿಕ್‍ಗಳನ್ನೂ ನೋಡಿದವರಲ್ಲ. ಆರಾಮದಲ್ಲಿ ಕೂತವರ ಮೇಲೆ ಹಾವನ್ನು ಎಸೆದಂತೆ ಈ ಕೊರೋನಾ ಬಂದೆರಗಿತು. ದೇಶದ ಸಮುದಾಯ ಆರೋಗ್ಯ ತಜ್ಞರಿಗೂ ಈ ಸುನಾಮಿಯನ್ನು ಎದುರಿಸುವ ವಿಷಯದಲ್ಲಿ ಪ್ರತ್ಯಕ್ಷ ಅನುಭವ ಇರಲಿಲ್ಲ. ಇದು ವೈದ್ಯಕೀಯ ವಲಯದಲ್ಲಿ ತೀರಾ ಆತಂಕದಿಂದ ಕೂಡಿದ ಗೊಂದಲವನ್ನು ಸೃಷ್ಟಿಸಿತು. ಇದನ್ನು ತಡೆಗಟ್ಟುವ ಮಾರ್ಗದರ್ಶಿ ಸೂತ್ರಗಳಲ್ಲಿ ಮತ್ತು ಚಿಕಿತ್ಸಾ ಕ್ರಮದಲ್ಲಿ ನಿಖರತೆಯ ಕೊರತೆ ಕಂಡಿತು. ವೈದ್ಯಕೀಯ ಸಿಬ್ಬಂದಿಗಳಿಗೆ ತಮ್ಮ ರೋಗಿಗಳು ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ತಿಳಿಸಿ ಹೇಳಿ ಒಪ್ಪಿಸುವ ದೊಡ್ಡ ಸವಾಲೇ ಎದುರಾಯಿತು. ಕೆಲವು ವೈದ್ಯರೂ ರೋಗಿಗಳಂತೆಯೇ ಸೋಂಕಿಗೆ ಹೆದರಿ ಆತಂಕಕ್ಕೊಳಗಾದರು.

nimma dhwanige namma dhwaniyu

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಜಿ.

ನನಗೆ ನನ್ನ ಬಳಿ ಬರುವ ರೋಗಿಗಳಿಗೆ ಕೊರೋನಾ ಎನ್ನುವ ಕಾಯಿಲೆ ಇದೆ, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ನನಗೂ ನಿಮಗೂ ಅಪಾಯ ಎನ್ನುವುದನ್ನು ಮನವರಿಕೆ ಮಾಡಿಕೊಡಲು ಇಂದಿಗೂ ಸಾಧ್ಯವಾಗಿದೆಯೇ ಎನ್ನುವುದೇ ಸಂಶಯ. ಕೊರೋನಾ ವಿಷಯದಲ್ಲಿ ಹುಟ್ಟಿಕೊಂಡ ಮೂಢನಂಬಿಕೆಗಳು, ವೈದ್ಯಕೀಯ ಕ್ಷೇತ್ರದ ಮೇಲಿನ ಅಪನಂಬಿಕೆಗಳು ಅಪಪ್ರಚಾರಗಳು ನಿತ್ಯ ವೈದ್ಯಕೀಯ ಸೇವೆ ನೀಡುವ ನಮ್ಮನ್ನು ದಂಗು ಬಡಿಯುವಂತೆ ಮಾಡಿದವು. ಜನರು ಹೀಗೂ ವಿಚಾರ ಮಾಡಿಯಾರೇ? ಬೌದ್ಧಿಕವಾಗಿ ಇಷ್ಟು ಅಪಕ್ವರಿರಲು ಸಾಧ್ಯವೇ ಎಂದು ಅಶ್ಚರ್ಯ ಪಡುವಂತೆ ಆಯಿತು.

ಈ ಪ್ಯಾಂಡೆಮಿಕ್‍ನ ಮೊದಲ ಅಲೆಯಲ್ಲಿ ನಮ್ಮಂತಹ ತಾಲೂಕಾ ಆಸ್ಪತ್ರೆಗಳಲ್ಲಿ ಇರುವ ಪರಿಮಿತ ಸಿಬ್ಬಂದಿ, ಮಾನವ ಸಂಪನ್ಮೂಲ, ಸ್ಥಳಾವಕಾಶದಲ್ಲೇ ಕಷ್ಟಪಟ್ಟು ಕೋವಿಡ್ ವಾರ್ಡ್ ತೆರೆದೆವು. ದಿನನಿತ್ಯ ಕೊರೋನಾ ಪರೀಕ್ಷೆ ಮಾಡಿ, ಸೋಂಕಿತರನ್ನು ಗುರುತಿಸಿ, ಒಳರೋಗಿಗಳನ್ನು ದಾಖಲು ಮಾಡಿಕೊಳ್ಳಲು ಶುರುಮಾಡಿದೆವು. ಹೆರಿಗೆ, ಎಮರ್ಜೆನ್ಸಿ ಮೊದಲಾಗಿ ನಮ್ಮ ಉಳಿದ ಜವಾಬ್ದಾರಿಗಳ ಜೊತೆಗೆ ಕೋವಿಡ್ ವಾರ್ಡ್ ಡ್ಯೂಟಿಯನ್ನೂ ನಿಭಾಯಿಸಿದೆವು. ಮನೆಯಲ್ಲಿ ಹಿರಿಯರಿರುವ ಕೆಲವು ವೈದ್ಯರು-ಇತರ ಸಿಬ್ಬಂದಿಗಳು ಆಸ್ಪತ್ರೆಯಲ್ಲೋ, ಹೋಟೆಲುಗಳಲ್ಲೋ ಉಳಿದು ಕರ್ತವ್ಯ ನಿರ್ವಹಿಸಿದೆವು. ನಂನಮ್ಮ ಮನೆಯವರನ್ನು ಸೋಂಕಿನಿಂದ ದೂರ ಇಡುವ ಹೊಣೆ ನಮ್ಮ ಮೇಲೇ ಇತ್ತು. ಆದರೆ ಆ ಸಮಯದ ನಮ್ಮ ಅನುಭವ ಬೇಸರ ಹುಟ್ಟಿಸುವಂಥದ್ದು.

ಸಮಾಜದಲ್ಲಿ ಯಾರನ್ನೇ ಕೇಳಿದರೂ, `ಈ ಕೋವಿಡ್ ಗೀವಿಡ್ ಎಲ್ಲ ಸುಳ್ಳಂತೆ. ವೈದ್ಯರಿಗೆ ಆಸ್ಪತ್ರೆಗೆ ಕೋವಿಡ್ ಎಂದು ದಾಖಲು ಮಾಡಿಕೊಂಡ ಪ್ರತಿ ರೋಗಿಗೆ ಇಂತಿಷ್ಟು ಅಂತ ದುಡ್ಡು ಬರ್ತದಂತೆ’ ಎನ್ನುವ ಗುಲ್ಲು. ಗಹನ ರೋಗಲಕ್ಷಣವಿಲ್ಲದ ರೋಗಿಗಳು ನಮ್ಮಲ್ಲಿ ಉಳಿದು ಹದಿನಾಲ್ಕು ದಿನಗಳ ಉಪಚಾರ ಪಡೆದು ಗುಣಮುಖರಾಗಿ ಹೋದವರೂ ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದುದು ಸೋಜಿಗ. ಹೊರರೋಗಿ ವಿಭಾಗದಲ್ಲಿ ಮಾಸ್ಕ್ ಸರಿಯಾಗಿ ಧರಿಸಿ ಎಂದು ಗದರಿದರೆ ಕುಹಕದ ನಗೆಯಿಂದ, ಮಾತಿನಿಂದ ಸವಾಲು ಹಾಕುವವರೇ ಹೆಚ್ಚಾಗಿದ್ದರು. ಇದುವರೆಗೆ ಸರ್ಕಾರಿ ಆಸ್ಪತ್ರೆಯ ಕಡೆಗೆ ತಲೆ ಹಾಕದವರು ಈಗ ಇದ್ದಕ್ಕಿದ್ದಂತೆ ಬಂದು ಕಾರ್ಪೋರೇಟ್ ಆಸ್ಪತ್ರೆಗಳ ಸೌಲಭ್ಯ, ಸವಲತ್ತು, ವಿಶೇಷ ಕಾಳಜಿಗಳನ್ನು ನಿರೀಕ್ಷಿಸುತ್ತ ಗದ್ದಲ ಎಬ್ಬಿಸಿದರು. ನೂರು ಕೊರತೆಯ ನಡುವೆಯೂ ಪರಿಸ್ಥಿತಿ ನಿಭಾಯಿಸಲು ವ್ಯವಸ್ಥೆ ಮಾಡಿಕೊಂಡೆವಾದರೂ ನಿಂದೆಯ ಮಾತು ಕೇಳಬೇಕಾಗಿ ಬಂದಾಗ ಬೇಸರಗೊಂಡಿದ್ದೂ ಆಯಿತು. ಎಲ್ಲೋ ಅಲ್ಲೊಬ್ಬರು ಇಲ್ಲೊಬ್ಬರು ನಮ್ಮ ಸೇವೆಯನ್ನು ಗುರುತಿಸಿದಾಗ ಸಮಾಧಾನ ಪಡೆದದ್ದೂ ಇತ್ತು.

ಈಗ ಎರಡನೆಯ ಅಲೆ ಬಂದಿದೆ. ಅಲೆ ಬಹಳ ಜೋರಾಗಿಯೇ ಇದೆ. ಜನರ ಅಭಿಪ್ರಾಯವೂ ಸ್ವಲ್ಪ ಬದಲಾದಂತೆ ಕಾಣಿಸುತ್ತಿದೆ. ಆದರೆ ಪೂರ್ತಿ ಅಲ್ಲ. ಇಡೀ ಊರಿಗೆ ಬಂದದ್ದು ತನಗೆ ಬರಲಿಕ್ಕಿಲ್ಲ ಎಂಬ ಭಾವನೆ ಇನ್ನೂ ಹಲವರಲ್ಲಿದೆ. ವೈಜ್ಞಾನಿಕವಲ್ಲದ ಚಿಕಿತ್ಸಾ ವಿಧಾನಗಳ ಕುರಿತಾದ ಮೋಹವೂ ಜೋರಾಗಿದೆ. 65 ವರ್ಷಕ್ಕಿಂತ ಮೇಲ್ಪಟ್ಟ ಜನಸಂಖ್ಯೆಯಲ್ಲಿ ಎರಡನೆಯ ಅಲೆ ಶುರುವಾಗುವ ಮೊದಲು ಲಸಿಕೆ ಪಡೆದವರ ಸಂಖ್ಯೆ ಶೇ. 10ನ್ನೂ ಮೀರಿರಲಿಲ್ಲ. ಆದರೆ ಈಗ ಲಸಿಕೆ ಪಡೆಯಲು ಜನ ಮುಗಿಬಿದ್ದಿದ್ದಾರೆ.

ಒಟ್ಟಾರೆ ಕೋವಿಡ್ ಪ್ಯಾಂಡೆಮಿಕ್‍ಗೆ ಜನರು ಹೊಂದಿಕೊಳ್ಳುತ್ತ ಹೋಗುತ್ತಿರುವಂತೆ ಕಾಣುತ್ತಿದೆ. ವೈದ್ಯಕೀಯ ಸೇವಾ ಸೌಲಭ್ಯದ ಅಸಮತೋಲನ ಹಾಗೂ ಕೊರತೆ ಗಹನವಾಗಿದೆ. ದಣಿವು ಕಾಣಿಸತೊಡಗಿದೆ. ಇದು ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವ ಎಲ್ಲರಿಗೂ ದೊಡ್ಡ ಸವಾಲೇ ಸರಿ. ಇದನ್ನು ಹೇಗೆ ಮತ್ತು ಎಷ್ಟು ಸಮರ್ಥವಾಗಿ ನಿಭಾಯಿಸುತ್ತೇವೆ ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ : Health Workers : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ ; ನಮ್ಮವರನ್ನು ಕಳೆದುಕೊಂಡರೂ ಕರ್ತವ್ಯಕ್ಕೆ ಚ್ಯುತಿ ಬಾರದಂತಿರುವುದು ಅನಿವಾರ್ಯ 

Published On - 9:21 am, Wed, 12 May 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ