Corona Warriors: ‘ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ’ : ಕೊಡಗಿನ ಶವಾಗಾರದ ಈ ಸಹಾಯಕರಿಬ್ಬರು ವರ್ಷದಿಂದ ಮನೆಗೇ ಹೋಗಿಲ್ಲ!

‘ಕೋವಿಡ್ ರೋಗಿಗಳು ಸಾವನ್ನಪ್ಪಿದ ಸಂದರ್ಭದಲ್ಲಿ ಮೃತದೇಹಗಳ ಪ್ಯಾಕಿಂಗ್ ಮಾಡಲು ನಾವಿರಲೇಬೇಕು. ಯಾಕೆಂದರೆ ಹೆಚ್ಚು ಸಿಬ್ಬಂದಿ ಇಲ್ಲ. ಆದ್ದರಿಂದ ಕುಟುಂಬಕ್ಕೆ ಸಂಬಂಧಿಸಿದ ಯಾವುದೇ ಸಮಾರಂಭಗಳು, ಹಬ್ಬ, ಹರಿದಿನಗಳಿಗೂ ನಾವು ಹೋಗುತ್ತಿಲ್ಲ. ಒಂದು ವೇಳೆ, ಆ ಕ್ಷಣದಲ್ಲಿ ಆ ಸ್ಥಳದಲ್ಲಿ ಇಲ್ಲದೇ ಹೋದರೆ ರೋಗಿಯ ಕಡೆಯವರಿಗೆ ಮಾಧ್ಯಮದವರ ಕೆಂಗಣ್ಣಿಗೆ ಗುರಿಯಾಬೇಕಾಗುತ್ತದೆ. ಜೊತೆಗೆ ಈ ರೀತಿಯ ಕೆಲಸಗಳನ್ನು ನಿರ್ವಹಿಸಿ ಮನೆಗೆ ಹೋಗಿ, ನಮ್ಮಿಂದಾಗಿ ಮನೆಯವರಿಗೆ ಏನಾದರೂ ಆದರೆ ಯಾರು ಹೊಣೆ?’ ರಾಬರ್ಟ್ ರಾಡ್ರಿಗಾಸ್ 

Corona Warriors: ‘ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ’ : ಕೊಡಗಿನ ಶವಾಗಾರದ ಈ ಸಹಾಯಕರಿಬ್ಬರು ವರ್ಷದಿಂದ ಮನೆಗೇ ಹೋಗಿಲ್ಲ!
ಕೊಡಗು ಜಿಲ್ಲೆಯ ಡಿ ದರ್ಜೆ ನೌಕರರಾದ ಶುಶ್ರೂಷಕಿ ದಿಲ್ಷಾದ್ ಮತ್ತು ಶವಾಗಾರ ಸಹಾಯಕರಾದ ರಾಬರ್ಟ್ ರಾಡ್ರಿಗಾಸ್, ಸಯ್ಯದ್ ಹುಸೇನ್
Follow us
ಶ್ರೀದೇವಿ ಕಳಸದ
| Updated By: Digi Tech Desk

Updated on:May 14, 2021 | 1:22 PM

ನಮ್ಮ ಒಂದು ಧ್ವನಿ ಲಕ್ಷಾಂತರ ಧ್ವನಿಗಳನ್ನು ಪ್ರತಿನಿಧಿಸುತ್ತಿರುತ್ತದೆ. ಮರ್ಯಾದೆ, ವ್ಯವಸ್ಥೆ ಎನ್ನುವ ಮಹಾಸಂಕೋಲೆಯನ್ನು ಕಳಚಿ ಮುಕ್ತವಾಗಿ ಸಂಕಟಗಳನ್ನು ಹೊರಹಾಕುವುದನ್ನು ಕಲಿಯದಿದ್ದರೆ, ನಾವಷ್ಟೇ ಅಲ್ಲ ನಮ್ಮ ಮುಂದಿನ ಪೀಳಿಗೆಯವರು ಉಸಿರಾಡುವುದೂ ಕಷ್ಟವಾಗುತ್ತದೆ; ಸಹನೆಯೇ ನಮ್ಮ ಮೂಲಗುಣ, ಕೆಲಸವೇ ದೇವರು, ಕುಟುಂಬವೇ ಪ್ರಧಾನ ಅಸ್ತಿತ್ವ ಎಂದು ಸಾರಿಕೊಂಡು ಬಂದ ಮಹಾನ್ ದೇಶ ನಮ್ಮದು. ಆದರೆ ಇದನ್ನು ಜೀವನದೊಂದಿಗೆ ಜೀವವನ್ನೂ ಒತ್ತೆ ಇಡುವಂಥ ಪರಿಸ್ಥಿತಿಯಲ್ಲಿರುವ ಆರೋಗ್ಯ ಸೇವಾಕ್ಷೇತ್ರಗಳಲ್ಲಿರುವವರ ದೃಷ್ಟಿಯಲ್ಲಿ ಯೋಚಿಸಿ. ಗಂಟಲಿನ ಪಡಕಗಳತನಕ ಬಂದುಕುಳಿತ ನೋವುಗಳಿಗೆ ಸಮಸ್ಯೆಗಳಿಗೆ ಮುಕ್ತಿ ಕೊಟ್ಟರೆ ಮಾತ್ರ ಮುಂದಿನ ಹೆಜ್ಜೆಗಳನ್ನಿಡಲು ತ್ರಾಣ ದಕ್ಕುವುದು, ವಾಸ್ತವ ಸಂಗತಿಗಳಿಗೆ ಪರಿಹಾರ ಸಿಗುವುದು. ಈ ಹಿನ್ನೆಲೆಯಲ್ಲಿ ರೂಪಿಸಿರುವ ‘ಟಿವಿ9 ಕನ್ನಡ ಡಿಜಿಟಲ್ : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ’ ಸರಣಿಯಲ್ಲಿ ವೈದ್ಯರುಗಳ, ಶುಶ್ರೂಷಕರ, ಪ್ರಯೋಗಾಲಯ ಸಿಬ್ಬಂದಿ, ಸಹಾಯಕರ ಹೀಗೆ ಆರೋಗ್ಯ ಸೇವಾಕ್ಷೇತ್ರಗಳಲ್ಲಿರುವವರ ಬದುಕು ಬವಣೆ ಮತ್ತು ಅಂತರಂಗದ ತುಣುಕುಗಳು ಇಲ್ಲಿರುತ್ತವೆ.

ತುಣುಕುಗಳು ಎಂದು ಹೇಳಲು ಕಾರಣವಿದೆ; ನಮಗಾದ ಅನ್ಯಾಯ, ನೋವು ನಿರೀಕ್ಷೆಗಳನ್ನು ವ್ಯಕ್ತಪಡಿಸಿ ರಾತ್ರೋರಾತ್ರಿಯೇ ಪರಿಹಾರೋಪಾಯಗಳನ್ನು ಪಡೆದುಕೊಳ್ಳುವಂಥ ಅಭಿವೃದ್ಧಿ ಹೊಂದಿದ ದೇಶದಲ್ಲಿ ನಾವಿನ್ನೂ ಇಲ್ಲ. ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿಯ ದುಡಿಮೆಯಲ್ಲಿ ಹತ್ತಾರು ಕೈಗಳು ಹೇಗೆ ಉಣ್ಣುತ್ತಿವೆಯೋ ಹಾಗೆ ವ್ಯವಸ್ಥೆಯ ಪರಿಧಿಯಲ್ಲಿ ದೊಡ್ಡ ದೊಡ್ಡ ತಿಮಿಂಗಲಗಳು ಸ್ವಾರ್ಥದ ಬಾಯಿಗಳನ್ನು ತೆರೆದಿಟ್ಟುಕೊಂಡೇ ಈಜಾಡುತ್ತಿವೆ, ಇಂಥ ಸಂಕಷ್ಟಮಯ ಸಂದರ್ಭದಲ್ಲಿಯೂ. ಹೀಗಿರುವಾಗ ಸಾಕಷ್ಟು ವಿಷಯಗಳನ್ನು ಅದುಮಿಟ್ಟುಕೊಂಡೇ ಬದುಕುವ ಅನಿವಾರ್ಯ ಹಲವರಿಗಿದೆ ಬಂದೊದಗಿದೆ. ಆದರೂ ಸಂವೇದನಾಶೀಲ, ಪ್ರಾಮಾಣಿಕ ಮನಸ್ಸುಗಳು ತಮ್ಮ ಮನಸಿನ ಮಾತುಗಳನ್ನು ಹಂಚಿಕೊಳ್ಳಲು ಇಲ್ಲಿ ಪ್ರಯತ್ನಿಸಿದ್ದಾರೆ. ಸಾಮಾಜಿಕ ಕಳಕಳಿಯುಳ್ಳ ಇನ್ನೂ ಕೆಲವರು ಇತರರ ಒಳತೋಟಿಗಳನ್ನು ಅಕ್ಷರಕ್ಕೆ ಹಿಡಿದಿಡಲು ಸಹಾಯ ಮಾಡಿದ್ದಾರೆ. ಓದುಗರಾದ ನಿಮಗೂ ನಿಮ್ಮ ನಿಮ್ಮ ಊರುಗಳಲ್ಲಿ ಸಾರ್ವಜನಿಕ ಸೇವಾಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರ ಆಂತರ್ಯಕ್ಕೆ ಅಕ್ಷರಗಳ ಮೂಲಕ ಧ್ವನಿಯಾಗುವ ಅವಕಾಶವೂ ಇಲ್ಲಿದೆ. ಇ ಮೇಲ್ : tv9kannadadigital@gmail.com 

ಕೊಡಗು ಜಿಲ್ಲೆಯ ‘ಡಿ ದರ್ಜೆ’ ನೌಕರರ ಬೇಗುದಿಗಳನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ ಲೇಖಕ, ಸಮಾಜ ಸೇವಕ ನೌಶಾದ್ ಜನ್ನತ್.
*

ಕಳೆದ ಒಂದು ವರ್ಷದಿಂದ ನಾವೆಲ್ಲರೂ ಯಾವ ಹೆಸರನ್ನು ಕೇಳಿದರೆ ಭಯದಿಂದ ನಡುಗಿ ಹೋಗುತ್ತಿದ್ದೇವೋ, ಅಂತಹ ಹೆಸರಿನ ಜೊತೆಗೆ ದಿನದ 24 ಗಂಟೆಯೂ ದುಡಿಯುತ್ತಿರುವವರ ನಿತ್ಯದ ಕಥೆಗಳಿಗೆ ನಾನು ಧ್ವನಿಯಾಗಲು ಇಚ್ಛಿಸಿದ್ದೇನೆ. ಹೌದು. ವರ್ಷಕ್ಕೂ ಮಿಗಿಲಾಗಿ ನಮ್ಮನ್ನು ಸತತವಾಗಿ ಕಾಡುತ್ತಾ, ಪರಸ್ಪರರನ್ನು ದೂರದಿಂದಲೇ ನೋಡುತ್ತಾ, ಹಲವು ಪ್ರೀತಿಸುವ ಮನಸ್ಸುಗಳನ್ನು ಕಳೆದುಕೊಳ್ಳಲು ಮುಖ್ಯ ಕಾರಣವಾದ ಕೋವಿಡ್ 19 ಎಂಬ ವೈರಸ್  ಮತ್ತು  ಈ ವೈರಾಣುವಿನಿಂದ ನಮ್ಮನ್ನು ಕಾಪಾಡುವ ಸಲುವಾಗಿ ತಮ್ಮೆಲ್ಲ ವೈಯುಕ್ತಿಕ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ ಕರ್ತವ್ಯ ನಿಷ್ಠೆ ಮೆರೆಯುತ್ತಿರುವ ನಿಜವಾದ ಕೊರೋನಾ ಯೋಧರ  ಬಗ್ಗೆ. ಯಾವುದೇ ಅಪಪ್ರಚಾರ, ನಿಂದನೆಗೆ ಕಿವಿಗೊಡದೆ ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅವರಿಗೆ ಕೃತಜ್ಞತೆ ಸಲ್ಲಿಸಬೇಕಿರುವುದು ನಮ್ಮ ಕರ್ತವ್ಯ.

ಕೊಡಗು ಎಂಬ ಪುಟ್ಟ ಜಿಲ್ಲೆಯ, ಜಿಲ್ಲಾಸ್ಪತ್ರೆಯಲ್ಲಿ ದಿನವೊಂದಕ್ಕೆ ಸಾವಿರಾರು ರೋಗಿಗಳು ಬರುತ್ತಾರೆ. ಆದರೆ ಇವರುಗಳನ್ನು ಶುಶ್ರೂಷೆ ಮಾಡಲು ಬೆರಳೆಣಿಕೆಯ ವೈದ್ಯರ ಜೊತೆಗೆ ಕೇವಲ 42 ಡಿ ದರ್ಜೆ ಸಿಬ್ಬಂದಿಗಳು ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ. ನೂರಾರು ಜನರು ಮಾಡಬೇಕಾದ ಕೆಲಸವನ್ನು ಈ ಬೆರಳೆಣಿಕೆಯ ಸಿಬ್ಬಂದಿಗಳು ಮಾಡುವುದನ್ನು ನೋಡಿದರೆ ನಿಜವಾಗಿಯೂ ಆಶ್ಚರ್ಯವಾಗುತ್ತದೆ. ಜೊತೆಗೆ ಕಳೆದ ಒಂದು ವರ್ಷಗಳಿಂದ ಕೋವಿಡ್ ಬಂದ ನಂತರದಲ್ಲಿ ಇವರ ಪರಿಪಾಟಲಗಳನ್ನು ಬರೆದರೆ ಸಾಲದು, ಅದನ್ನು ನೋಡಿಯೇ ಮನದಟ್ಟುಮಾಡಿಕೊಳ್ಳಬೇಕು .

​ಶುಶ್ರೂಷಕಿ ದಿಲ್ಷಾದ್. ದಕ್ಷಿಣ ಕನ್ನಡ ಜಿಲ್ಲೆಗೆ ಅಂಟಿಕೊಂಡಂತಿರುವ ಜೋಡುಪಾಲದ ನಿವಾಸಿ. ಗಂಡ ಹೃದಯಾಘಾತಕ್ಕೆ ಒಳಗಾಗಿ ಇಹಲೋಕ ತ್ಯಜಿಸಿ ಹಲವು ವರ್ಷಗಳಾದವು. ಇವರಿಗೆ ಮೂವರು ಮಕ್ಕಳು. ಕುಟುಂಬದ ಆಧಾರ ಸ್ತಂಭವೇ ಇವರಾಗಿದ್ದು ದುಡಿದು ಮಕ್ಕಳನ್ನು ಸಾಕಬೇಕಾದ ಅನಿವಾರ್ಯತೆ ಇದೆ. ಕಳೆದ ಹದಿನೆಂಟು ವರ್ಷಗಳಿಂದ ಕೊಡಗಿನ ಜಿಲ್ಲಾಸ್ಪತ್ರೆ ಮಡಿಕೇರಿಯಲ್ಲಿ ‘ಡಿ ದರ್ಜೆ’ ನೌಕರರಾಗಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಧಾರಣವಾಗಿ ‘ಡಿ ದರ್ಜೆ’ ನೌಕರರಾಗಿರುವವರು ಆಸ್ಪತ್ರೆಗಳಲ್ಲಿ ಏನು ಕೆಲಸ ಮಾಡುತ್ತಾರೆ ಎಂಬುದು ನಿಮಗೆ ತಿಳಿದಿರಬಹುದು. ಇವರು ಆಸ್ಪತ್ರೆಯ ವಾತಾವರಣವನ್ನು ಶುಚಿಯಾಗಿಡುವ ಸಲುವಾಗಿ ಆಸ್ಪತ್ರೆಯ ಕಸ ಗುಡಿಸುವುದರಿಂದ ಮೊದಲಾಗಿ, ಒರೆಸುವುದು, ಗುಂಯ್ ಗುಂಯ್ ಎಂದು ಸೈರನ್ ಹಾಕಿಕೊಂಡು ಸಾವುಬದುಕಿನ ಮಧ್ಯೆ ಹೋರಾಡುತ್ತ ತುರ್ತು ಚಿಕಿತ್ಸೆಗಾಗಿ ಬಂದಿಳಿಯುವ ರೋಗಿಗಳನ್ನು, ವೀಲ್​ಚೇರ್​ಗಳ ಮೂಲಕ ಕರೆದುಕೊಂಡು ಹೋಗುವುದರಿಂದ ಹಿಡಿದು, ಆಸ್ಪತ್ರೆಯ ಶೌಚಾಲಯಗಳನ್ನು ಶುಚಿ ಮಾಡುವವರೆಗೂ ಇವರ ಪಾತ್ರ ಪ್ರಮುಖವಾಗಿರುತ್ತದೆ.

nimma dhwanige namma dhwaniyu

ಶವ ಸಾಗಿಸುತ್ತಿರುವ ಸಿಬ್ಬಂದಿ

ಸದ್ಯ ಕೋವಿಡ್​ನ ಎರಡನೇ ಅಲೆ ದೇಶದಲ್ಲಿ ಅಬ್ಬರಿಸುತ್ತಿದೆ. ಇದರ ಭಾಗವಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ 29/04/21 ರ ವರದಿಯ ಪ್ರಕಾರ ಸುಮಾರು 135 ಕ್ಕೂ ಅಧಿಕ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ನೇಹಿತರೊಬ್ಬರ ಸಂಬಂಧಿ ಕೋವಿಡ್ ಸೆಂಟರ್​ನಲ್ಲಿ ದಾಖಲಾಗಿದ್ದು ಅವರಿಗೆ ತಡರಾತ್ರಿ ಬಿಸಿನೀರು ಕುಡಿಯಬೇಕೆನ್ನಿಸಿತು. ಮಡಿಕೇರಿಯ ಸಮಾಜ ಸೇವಕರೊಬ್ಬರಿಗೆ ಕರೆಮಾಡಿ, ನನಗೆ ಬಿಸಿನೀರು ಬೇಕು ಎಂದು ಕೇಳಿದರು. ಅವರು ಆ ಮಧ್ಯರಾತ್ರಿಯಲ್ಲಿ ಇದೇ ದಿಲ್ಷಾದ್​ರವರನ್ನು ಸಂಪರ್ಕಿಸಿ ವಿಷಯ ತಿಳಿಸಿದಾಗ ತಡರಾತ್ರಿಯಲ್ಲಿಯೂ ಆ ರೋಗಿಗೆ ಬಿಸಿನೀರಿನ ವ್ಯವಸ್ಥೆ ಮಾಡಿಕೊಟ್ಟರು.

ಈ ವಿಚಾರವಾಗಿ ಮರುದಿನ ನಾನು ಅವರನ್ನು ಮಾತಿಗೆಳೆದಾಗ, ‘ನಾನು ಹದಿನೆಂಟು ವರ್ಷಗಳಿಂದ ಆಸ್ಪತ್ರೆಯಲ್ಲಿ ರೋಗಿಗಳ ಸೇವೆ ಸಲ್ಲಿಸುತ್ತಿದ್ದೇನೆ. ಎಂದಿಗೂ ನನ್ನ ಕರ್ತವ್ಯದ ವಿಚಾರವಾಗಿ ಬೇಸರ ಮಾಡಿಕೊಂಡಿಲ್ಲ. ಕೋವಿಡ್ ಬಾಧಿತರಾಗಿ ICU ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೆಲವು ರೋಗಿಗಳು ಹಾಸಿಗೆಯ ಮೇಲೆಯೇ ಮಲಮೂತ್ರ ವಿಸರ್ಜನೆ ಮಾಡಿಕೊಳ್ಳುತ್ತಾರೆ. ನಾವು ಅದನ್ನು ಹೇಸಿಗೆ ಪಟ್ಟುಕೊಳ್ಳದೆ ಶುಚಿ ಮಾಡುತ್ತೇವೆ. ನಮಗಿಲ್ಲಿ ರೋಗಿಯ ಶುಚಿತ್ವ ಮುಖ್ಯವಾಗಿರುತ್ತದೆ. ಹೀಗಿರುವಾಗ ಅವರಿಗೆ ಮಧ್ಯರಾತ್ರಿ ನೀರು ವ್ಯವಸ್ಥೆ ಮಾಡಿಕೊಡೋದು ಕಷ್ಟವಾ?’ ಎಂದು ನಗುತ್ತಾ ನಮ್ಮ ಬಳಿ ಮರುಪ್ರಶ್ನೆ ಎಸಗಿದರು. ಮಾತು ಮುಂದುವರೆಸಿ,ಕೆಲವೊಮ್ಮೆ ನೂರಕ್ಕು ಹೆಚ್ಚು ಕೆ. ಜಿ. ತೂಗುವ ರೋಗಿಗಳನ್ನು ನೂಕುಬಂಡಿಗಳಲ್ಲಿ ಮಲಗಿಸಿ ನಾಲ್ಕನೇ ಮಹಡಿಗೆ ತಳ್ಳಿ ಸಾಗಿಸುವಾಗ ನಮ್ಮ ಸೊಂಟವೇ ಮುರಿದುಹೋಗುವ ಹಾಗೆ ಭಾಸವಾಗುತ್ತದೆ ಆದರೆ ಏನು ಮಾಡುವುದು ಕೆಲಸ ಮಾಡಲೇಬೇಕಲ್ಲ ಎಂದರು.

ಇವರು ಹೊಟ್ಟೆಪಾಡಿಗಾಗಿ ದಶಕಗಳಿಂದ ಗುತ್ತಿಗೆ ಆಧಾರದ ಮೇಲೆ ಕೇವಲ 9200 ರೂಪಾಯಿಗೆ ಜಿಲ್ಲಾಸ್ಪತ್ರೆಯಲ್ಲಿ ದುಡಿಯುತ್ತಿದ್ದಾರೆ. ಕೆಲವೊಮ್ಮೆ ದಿನದ 24 ಗಂಟೆಯೂ ದುಡಿಯಬೇಕಾಗುತ್ತದೆ. ಕೋವಿಡ್ ಬಾಧಿತ ರೋಗಿಗಳ ಶುಶ್ರೂಷೆ ಮಾಡಿ ಮನೆಗೆ ಮರಳುವಾಗ ಮಕ್ಕಳು ಬಳಿ ಬರುತ್ತಾರೆ. ಅಂತಹ ಸಂದರ್ಭದಲ್ಲಿ ಸಂಕಟವಾಗುತ್ತದೆ ಎಂದು ಹೇಳುತ್ತ ವ್ಯವಸ್ಥೆಯ ಪರಿಧಿಯಲ್ಲಿ ಹೇಳಿಕೊಳ್ಳಲಾಗದ ದುಗುಡವನ್ನು ಮನದಲ್ಲಿ ಅದುಮಿ, ಕಣ್ಣಲ್ಲಿ ನೀರುತುಂಬಿಕೊಂಡು ಪಕ್ಕದ ರೋಗಿಯ ಬಳಿ, ಏನಾದರೂ ಬೇಕಾ? ಎಂದು ನಗುತ್ತಾ ಹೋದರು.

ಕೊರೋನಾ ಸೋಂಕು ತಗುಲಿ ನಾವೇನಾದರೂ ಸಾವನ್ನಪ್ಪಿದರೆ, ಬದುಕಿದ್ದಷ್ಟು ವರ್ಷಗಳ ಕಾಲ ನಾವು ಜೀವ ತೇಯ್ದು ಸಾಕಿದ ನಮ್ಮ ಮಕ್ಕಳು, ಮಡದಿ, ಕುಟುಂಬ ಹೀಗೆ ಪ್ರತಿಯೊಬ್ಬರೂ ಬಳಿ ಬಂದು ನಮ್ಮ ದೇಹವನ್ನು ಮುಟ್ಟಲಾಗಲಿ, ಅಂತ್ಯಕ್ರಿಯೆಯನ್ನು ಮಾಡಲಾಗಲಿ ಒಮ್ಮೆ ಯೋಚಿಸುತ್ತಾರೆ. ಒಂದು ವೇಳೆ ಅವರು ದೊಡ್ಡ ಮನಸ್ಸು ಮಾಡಿ ಮುಂದಾದರೂ, ಬದುಕಿರುವವರ ಸುರಕ್ಷೆಯ ನೆಪವೊಡ್ಡಿ ನಮ್ಮ ವ್ಯವಸ್ಥೆ ಅದಕ್ಕೆ ಒಪ್ಪುವುದಿಲ್ಲ. ಈ ರೀತಿಯಾಗಿ ಸತ್ತವರನ್ನು ಜೆಸಿಬಿಗಳಲ್ಲಿ ನೂಕಿ, ಹಗ್ಗ ಕಟ್ಟಿ ಎಳೆದು ಮಣ್ಣುಮಾಡುವ ಕಾಲಘಟ್ಟದಲ್ಲಿ ನಾವಿಂದು ಬದುಕಿದ್ದೇವೆ. ‘ದುರಹಂಕಾರ ಬೇಡ ಮಗು, ಹೋಗುವಾಗ ಯಾರು, ಏನು ತೆಗೆದುಕೊಂಡು ಹೋಗಲ್ಲ’ ಎಂಬ ಮಾತನ್ನು ಈ ಮೊದಲು ಹಿರಿಯರ ಬಾಯಿಂದ ಕೇಳಿದ್ದೆವು. ಆದರೆ ಈಗ ‘ಎಚ್ಚರ ತಪ್ಪಿದರೆ ಹೆಣ ಮುಟ್ಟಲು ಕೂಡ ಯಾರು ಮುಂದೆ ಬರಲ್ಲ ಮಗು’ ಎಂಬ ಮಾತನ್ನು ಕೇಳುವ ಪರಿಸ್ಥಿತಿಯಲ್ಲಿದ್ದೇವೆ.

ಕಳೆದ ಒಂದು ವರ್ಷಗಳಿಂದ ಒಂದು ರಜೆಯನ್ನು ತೆಗೆದುಕೊಳ್ಳದೆ ಅಗತ್ಯ ಮತ್ತು ಅನಿವಾರ್ಯ ಕಾರಣಗಳಿಗಾಗಿ ಮಾತ್ರ ಮನೆಗೆ ಹೋಗುತ್ತಾ, ಉಳಿದಂತೆ ದಿನದ 24 ಗಂಟೆಯೂ ಆಸ್ಪತ್ರೆಗಳಲ್ಲಿ ಈ ಕ್ಷಣಕ್ಕೂ ದುಡಿಯುವ ಅಪರೂಪದ ವ್ಯಕ್ತಿಗಳು ನಮ್ಮಗಳ ನಡುವೆಯೇ ಇದ್ದಾರೆ. ಅವರಲ್ಲಿ ಮುಖ್ಯವಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಸೋಂಕು ತಗುಲಿ ಮರಣ ಹೊಂದುವ ರೋಗಿಗಳ ಮೃತದೇಹಕ್ಕೆ ಕೊನೆಯ ಬಾರಿ ಸರಿಯಾದ ಹೊದಿಕೆಯನ್ನು ಹಾಕಿ, ಹತ್ತಿಯಿಂದ ಮೃತದೇಹದ ಕಿವಿ, ಮೂಗು ಬಾಯಿಗಳನ್ನು ಸರಿಯಾಗಿ ಮುಚ್ಚಿ ಪ್ಯಾಕಿಂಗ್ ಮಾಡಿ ಅವರ ಅಂತ್ಯಕ್ರಿಯೆಗೆ ಕಳುಹಿಸುವ, ತುಂಬಾ ಸೂಕ್ಷ್ಮವಾದ ಕೆಲಸವನ್ನು ನಿರ್ವಹಿಸುತ್ತಿರುವ ರಾಬರ್ಟ್ ರಾಡ್ರಿಗಾಸ್ ಮತ್ತು ಸಯ್ಯದ್ ಹುಸೇನ್.

nimma dhwanige namma dhwaniyu

ಕೋವಿಡ್ ರೋಗಿಯ ಶವಸಂಸ್ಕಾರ

ಕಳೆದ 13 ತಿಂಗಳುಗಳಿಂದ ಒಂದು ರಜೆಯನ್ನು ಪಡೆಯದೇ ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸುತ್ತಿರುವ ಇವರು ಇದುವರೆಗೆ 95ಕ್ಕೂ ಹೆಚ್ಚು ಹೆಣಗಳ ಅಂತಿಮ ಪ್ಯಾಕಿಂಗ್ ಕಾರ್ಯವನ್ನು ಮಾಡಿದ್ದಾರೆ. ಕೊರೋನಾದಿಂದ ಸಾವನ್ನಪ್ಪಿದ್ದಾರೆ ಎಂದಾಗ ಸ್ವಂತ ರಕ್ತಸಂಬಂಧಿಗಳು ಕೂಡ ಮುಟ್ಟಲು ಭಯಪಡುವಾಗ ಕರ್ತವ್ಯನಿಷ್ಠೆಗಾಗಿ ಪಿ.ಪಿ.ಇ. ಕಿಟ್​ಗಳನ್ನು ಧರಿಸಿ, ಆ ಮೃತ ದೇಹಗಳನ್ನು ಮುಟ್ಟಿ ಪ್ಯಾಕ್ ಮಾಡುವ ಇವರ ಮನೋಸ್ಥೈರ್ಯ ಹೇಗಿರಬೇಡ ನೀವೇ ಹೇಳಿ.

ದಿನದ ಬಹುಪಾಲು ಸಮಯವು ಇವರಿಬ್ಬರೂ ಆಸ್ಪತ್ರೆಯಲ್ಲೇ ಕಳೆಯುತ್ತಾರೆ. ಈ ವಿಚಾರವಾಗಿ ಅವರನ್ನು ಮಾತನಾಡಿಸಿದರೆ, ಯಾವ ಸಂದರ್ಭದಲ್ಲಿ ಸೋಂಕು ತಗುಲಿದ ವ್ಯಕ್ತಿ ಅಸುನೀಗುತ್ತಾರೆ ಎಂದು ಹೇಳುವುದು ಅಸಾಧ್ಯ  ಮತ್ತು ನಾವೇನಾದರೂ ಹೊರಗಿರುವ ಸಂದರ್ಭದಲ್ಲಿ ಈ ರೀತಿಯ ಅನಾಹುತ ಸಂಭವಿಸಿದರೆ, ಮೃತದೇಹಗಳನ್ನು ಪ್ಯಾಕಿಂಗ್ ಮಾಡುವ ಈ ಕೆಲಸವನ್ನು ಮಾಡಲು ಬೇರೆ ಯಾರೂ ನಮ್ಮ ಆಸ್ಪತ್ರೆಯಲ್ಲಿ ಇಲ್ಲ. ಆದ್ದರಿಂದ ಕುಟುಂಬಕ್ಕೆ ಸಂಬಂಧಿಸಿದ ಯಾವುದೇ ಸಮಾರಂಭಗಳು, ಹಬ್ಬ, ಹರಿದಿನಗಳಿಗೂ ನಾವು ಹೋಗುವುದಿಲ್ಲ. ಒಂದು ವೇಳೆ, ಆ ಕ್ಷಣದಲ್ಲಿ ನಾವು ಆ ಸ್ಥಳದಲ್ಲಿ ಇಲ್ಲದೇ ಹೋದರೆ ರೋಗಿಯ ಕಡೆಯವರು, ಮಾಧ್ಯಮದವರು ಇನ್ನೂ ಹೆಣವನ್ನು ಪ್ಯಾಕ್ ಮಾಡಿಲ್ಲ, ನಮಗೆ ಕೊಟ್ಟಿಲ್ಲ, ಬೇಜವಾಬ್ದಾರಿಯ ಸಿಬ್ಬಂದಿಗಳು ಎಂದು ನಮ್ಮ ಮೇಲೇ ಗಲಾಟೆ ಮಾಡುವುದರೊಂದಿಗೆ ಮರುದಿನ ಪತ್ರಿಕೆ ಮಾಧ್ಯಮಗಳಲ್ಲಿ ಬಂದು ಮೇಲಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಜೊತೆಗೆ ಈ ರೀತಿಯ ಕೆಲಸಗಳನ್ನು ನಿರ್ವಹಿಸಿ ಮನೆಗೆ ಹೋಗಿ, ನಮ್ಮಿಂದಾಗಿ ಮನೆಯವರಿಗೆ ಏನಾದರೂ ಆದರೆ ಯಾರು ಹೊಣೆ? ಅದಕ್ಕಾಗಿ ಹೋಗುವ ಮನಸ್ಸಿದ್ದರೂ ನಾವು ಹೋಗುತ್ತಿಲ್ಲ ಎಂದು ಸುಮಾರು 14 ವರ್ಷಗಳಿಂದ ಮಡಿಕೇರಿಯ ಜಿಲ್ಲಾಸ್ಪತ್ರೆಯ ‘ಡಿ ದರ್ಜೆ’ ನೌಕರನಾಗಿ ಕೆಲಸ ನಿರ್ವಹಿಸುತ್ತಿರುವ 32 ವರ್ಷದ ರಾಬರ್ಟ್ ರಾಡ್ರಿಗಾಸ್ ನೋವಿನಿಂದ ಹೇಳುತ್ತಾರೆ.

ಅದೇ ರೀತಿ ಶವಗಾರದಲ್ಲಿ ಕೆಲಸ ಮಾಡುವ 24 ವರ್ಷದ ಸಯ್ಯದ್ ಹುಸೇನ್ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ, ‘ನಾನು 4 ವರ್ಷದಿಂದ ಗುತ್ತಿಗೆ ಆಧಾರದ ಮೇಲೆ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ಮೊದಮೊದಲು ಪೋಸ್ಟ್ ಮಾರ್ಟಂ ಮಾಡುವ ಕೆಲಸಕ್ಕೆ ಸಹಾಯ ಮಾಡುತ್ತಿದ್ದೆ. ಆದರೆ ಇವಾಗ ಬರೀ ಪ್ಯಾಕಿಂಗ್ ಮಾಡುವ ಕೆಲಸ ಮಾಡುತ್ತೇನೆ. ಬಿಡುವಿನ ಸಮಯದಲ್ಲಿ ಎಲ್ಲೂ ಹೋಗದೆ ಇಲ್ಲೇ ಇರುತ್ತೇವೆ. ಏಕೆಂದರೆ ಮನೆಯಲ್ಲಿ ವಯಸ್ಸಾದ ತಂದೆ, ತಾಯಿ ಇದ್ದಾರೆ. ಕೆಲವೊಂದು ಬಾರಿ ಸುಮ್ಮನೆ ಕುಳಿತಿರುವಾಗ ಸ್ನೇಹಿತರಿಗೆ ಕರೆ ಮಾಡಿ ಭೇಟಿಯಾಗಬೇಕು ಎಂದೆನಿಸುತ್ತೆ. ಆದರೆ ಇತ್ತೀಚಿಗೆ ಯಾರೂ ನನ್ನ ಬಳಿ ಬರುತ್ತಿಲ್ಲ. ನಾನು ಕೋವಿಡ್ ಮೃತದೇಹಗಳನ್ನು ಪ್ಯಾಕ್ ಮಾಡುವುದರಿಂದ ಅವರಿಗೆ ನನ್ನ ಬಳಿ ಬರಲು ಭಯ. ಏನು ಮಾಡುವುದು ಹೇಳಿ. ಅವರಿಗೆಲ್ಲ ಎಷ್ಟೋ ಬಾರಿ ಹೇಳಿದ್ದೀನಿ. ಸರಿಯಾದ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಂಡು ಸಾಮಾಜಿಕ ಅಂತರ ಕಾಯ್ದುಕೊಂಡರೆ ಏನೂ ಆಗುವುದಿಲ್ಲ ಅಂತ. ಆದರೆ, ಈಗೀಗಂತೂ ನನ್ನನ್ನು ನೋಡುತ್ತಿದ್ದಂತೆಯೇ ಓಡಿ ಹೋಗುತ್ತಿದ್ದಾರೆ.’ ಎಂದು ತಮ್ಮ ದುಗುಡವನ್ನು ಹಂಚಿಕೊಂಡರು.

ಅವರಿಬ್ಬರ ಬಳಿ, ನಮ್ಮ ಮೂಲಕ ಸಮಾಜಕ್ಕೆ ಸರ್ಕಾರಕ್ಕೆ ಏನಾದರೂ ಹೇಳಲು ಇದೆಯಾ ಎಂದರೆ, ಅಂಥದ್ದೇನೂ ಇಲ್ಲ. ಆದರೆ ನಮ್ಮ ಕೊರತೆಗಳನ್ನು ಹೇಳಿಕೊಂಡರೆ, ಒಳ್ಳೆಯ ಸಮಯ ನೋಡಿಕೊಂಡು ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪ ಹೊರಿಸಿ, ಇಷ್ಟು ದಿನ ಮಾಡಿದ ಸೇವೆಗೆ ಕಪ್ಪುಚುಕ್ಕೆ ಇಟ್ಟುಬಿಡುತ್ತಾರೆ. ಬದುಕಿದ್ರೆ, ಸಾಯೋವರೆಗೂ ಕರ್ತವ್ಯ ನಿರ್ವಹಿಸುತ್ತೇವೆ ಎಂದು ಅವರಿಬ್ಬರೂ ಮುಖಮುಖ ನೋಡಿಕೊಂಡು ಹೇಳುವಾಗ ಅವರಿಬ್ಬರ ಮನದಾಳದಲ್ಲಿ ಹೇಳಿಕೊಳ್ಳಲಾಗದ ಯಾವುದೋ ದುಗುಡವಿದೆ ಎಂದು ನಮಗೆ ಎದ್ದು ಕಾಣುತ್ತಿತ್ತು.

nimma dhwanige namma dhwaniyu

ಜಿಲ್ಲಾಧಿಕಾರಿ ಅನಿಸ್ ಕಣ್ಮಣಿ ಜಾಯ್ ಮತ್ತು ಕೊಡಗು ರಕ್ಷಣಾ ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ ಅವರು ಆರೋಗ್ಯ ಸಚಿವ ಸುಧಾಕರ್ ಅವರಿಗೆ ಮನವಿ ಪತ್ರ ಸಲ್ಲಿಸುತ್ತಿರುವುದು

ಜೀವದ ಹಂಗು ತೊರೆದು ಕೆಲಸ ನಿರ್ವಹಿಸುತ್ತಿರುವ ಇಂಥಹ ಅಪರೂಪದ ವ್ಯಕ್ತಿಗಳನ್ನು ಗುತ್ತಿಗೆ ಆಧಾರದ ಮೇಲೆ ನಾಲ್ಕಣೆಯ ಸಂಬಳದೊಂದಿಗೆ ಅದೆಷ್ಟು ವರ್ಷ ದುಡಿಯಬೇಕು? ಈ ರೀತಿಯಾಗಿ ದುಡಿದು ಅವರ ಜೀವಕ್ಕೆ ಏನಾದರೂ ಸಂಭವಿಸಿದರೆ ಹೊಣೆ ಯಾರು, ಅವರಿಗಿರುವ ಭದ್ರತೆಯಾದರು ಏನು? ಈ ವಿಚಾರವಾಗಿ ಕೆಲವು ತಿಂಗಳುಗಳ ಮೊದಲು ಸಾಮಾಜಿಕ ಹೋರಾಟಗಾರ, ವಕೀಲ ಪವನ್ ಪೆಮ್ಮಯ್ಯ ಅವರ ನೇತೃತ್ವದಲ್ಲಿ ಆರೋಗ್ಯ ಸಚಿವರಾದ ಸುಧಾಕರ್ ಅವರಿಗೆ ಮನವಿಯನ್ನು ಸಹ ಮಾಡಲಾಗಿದೆ. ಇನ್ನಾದರೂ ಸಂಬಂಧಪಟ್ಟವರು ಅವರ ಹುದ್ದೆಗಳನ್ನು ಕಾಯಂಗೊಳಿಸಿದಲ್ಲಿ ಆರೋಗ್ಯಸೇವೆಗಳಿಗೆ ಮತ್ತಷ್ಟು ಜನ ತೆರೆದುಕೊಳ್ಳುವ ಸಾಧ್ಯತೆ ಇರುತ್ತದೆ.
*

ಪರಿಚಯ : ನೌಶಾದ್ ಜನ್ನತ್ತ್ ಅವರು ಮಡಿಕೇರಿ ಬಳಿಯ ಬೋಯಿಕೇರಿ ಮೂಲದವರು. ಜನ್ನತ್​ ಟಿಂಬರ್ಸ್​ ಮತ್ತು ಫರ್ನಿಚರ್ಸ್ ​ಮಾಲೀಕರು. ಸಾಮಾಜಿಕ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಸಾಹಿತ್ಯ ಇವರ ಆಸಕ್ತಿ ಕ್ಷೇತ್ರ. ಕಳೆದ ವರ್ಷ ‘ಕಡಮ್ಮಕಲ್ಲು ಎಸ್ಟೇಟ್’ ಕಾದಂಬರಿಯು ಪ್ರಕಟವಾಗಿದೆ, ಕನ್ನಡ ಪ್ರಾಧಿಕಾರದ ಪುಸ್ತಕ ಬಹುಮಾನ ಪ್ರಶಸ್ತಿಯೂ ಇದಕ್ಕೆ ಸಂದಿದೆ. ಇವರ ಎರಡನೇ ಕೃತಿ ‘ಜಲಪ್ರಳಯ’ ಬಿಡುಗಡೆಗೆ ಸಿದ್ದವಾಗಿದೆ. ಇವರ ಸಾಮಾಜಿಕ, ಸಾಂಸ್ಕೃತಿಕ ಅಭಿವ್ಯಕ್ತಿಯನ್ನು ಗುರುತಿಸಿದ ಸರ್ಕಾರ ಮತ್ತು ಸರ್ಕಾರೇತರ ಸಂಘಗಳು ರಾಜ್ಯಮಟ್ಟದ ಪ್ರಶಸ್ತಿಗಳನ್ನು ಇವರಿಗೆ ನೀಡಿ ಗೌರವಿಸಿವೆ.

nimma dhwanige namma dhwaniyu

ಲೇಖಕ ನೌಶಾದ್ ಜನ್ನತ್

Published On - 11:03 am, Sat, 8 May 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ