‘ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ’ : ಆರೋಗ್ಯ ಸೇವಾಕ್ಷೇತ್ರದವರ ಅಂತರಂಗದ ತುಣುಕುಗಳು ನಾಳೆಯಿಂದ ನಿಮ್ಮ ಓದಿಗೆ

ನಾವು ಒಳಗೊಳಗೆ ಎಷ್ಟೇ ಗಟ್ಟಿಯಾಗಿದ್ದೇವೆಂದರೂ ಹೊರಗಿನ ಅವ್ಯವಸ್ಥೆಗಳು ನಮ್ಮ ಒಳಪದರಗಳನ್ನು ನಮಗರಿವಿಲ್ಲದೇ ಸುಲಿಯುತ್ತಿರುತ್ತವೆ. ಅದು ಗೊತ್ತಾಗುವ ಹೊತ್ತಿಗೆ ಪರಿಸ್ಥಿತಿ ನಮ್ಮ ಕೈಮೀರಿ ಹೋಗಿರುತ್ತದೆ. ಈಗ ಒದಗುತ್ತಿರುವ, ಒದಗಿದ ಪರಿಸ್ಥಿತಿಯೇ ಇದಕ್ಕೆ ಕನ್ನಡಿ. ಇನ್ನಾದರೂ ನಾವು ನಮ್ಮ ಒಳ-ಹೊರ ಜಗತ್ತಿಗೆ ಅಡ್ಡಿಯುಂಟು ಮಾಡುತ್ತಿರುವ ವಾಸ್ತವಾಂಶಗಳನ್ನು ಬಿಚ್ಚಿಡುವುದನ್ನು ಕಲಿಯಬೇಕು. ನೆನಪಿರಲಿ, ನಮ್ಮ ಒಂದು ಧ್ವನಿ ಲಕ್ಷಾಂತರ ಧ್ವನಿಗಳನ್ನು ಪ್ರತಿನಿಧಿಸುತ್ತಿರುತ್ತದೆ. ಮರ್ಯಾದೆ ಮತ್ತು ವ್ಯವಸ್ಥೆ ಎನ್ನುವ ಮಹಾಸಂಕೋಲೆಯನ್ನು ಕಳಚಿ ಮುಕ್ತವಾಗಿ ನಮ್ಮ ಸಂಕಟಗಳನ್ನು ಹೊರಹಾಕುವುದನ್ನು ಕಲಿಯದಿದ್ದರೆ, ನಾವಷ್ಟೇ ಅಲ್ಲ ನಮ್ಮ ಮುಂದಿನ ಪೀಳಿಗೆಯವರು ಉಸಿರಾಡುವುದೂ ಕಷ್ಟವಾಗುತ್ತದೆ; ಸಹನೆಯೇ ನಮ್ಮ ಮೂಲಗುಣ, ಕೆಲಸವೇ ದೇವರು, ಕುಟುಂಬವೇ ಪ್ರಧಾನ ಅಸ್ತಿತ್ವ ಎಂದು ಸಾರಿಕೊಂಡು ಬಂದ ಮಹಾನ್ ದೇಶ ನಮ್ಮದು. ಆದರೆ ಇದನ್ನು ಜೀವನದೊಂದಿಗೆ ಜೀವವನ್ನೂ ಒತ್ತೆ ಇಡುವಂಥ ಪರಿಸ್ಥಿತಿಯಲ್ಲಿರುವ ಆರೋಗ್ಯ ಸೇವಾಕ್ಷೇತ್ರಗಳಲ್ಲಿರುವವರ ದೃಷ್ಟಿಯಲ್ಲಿ ಯೋಚಿಸಿ.

‘ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ’ : ಆರೋಗ್ಯ ಸೇವಾಕ್ಷೇತ್ರದವರ ಅಂತರಂಗದ ತುಣುಕುಗಳು ನಾಳೆಯಿಂದ ನಿಮ್ಮ ಓದಿಗೆ
ಸೌಜನ್ಯ : ಐಸ್ಟಾಕ್
Follow us
ಶ್ರೀದೇವಿ ಕಳಸದ
|

Updated on:May 07, 2021 | 11:19 AM

ನಮ್ಮ ಗಂಟಲಿನ ಪಡಕಗಳತನಕ ಬಂದು ಕುಳಿತ ನೋವುಗಳಿಗೆ, ಸಮಸ್ಯೆಗಳಿಗೆ ಮುಕ್ತಿ ಕೊಟ್ಟರೆ ಮಾತ್ರ ಮುಂದಿನ ಹೆಜ್ಜೆಗಳನ್ನಿಡಲು ತ್ರಾಣ ದಕ್ಕುವುದು? ವಾಸ್ತವ ಸಂಗತಿಗಳಿಗೆ ಪರಿಹಾರ ಸಿಗುವುದು? ಈ ಹಿನ್ನೆಲೆಯಲ್ಲಿ ರೂಪಿಸಿರುವ ‘ಟಿವಿ9 ಕನ್ನಡ ಡಿಜಿಟಲ್ : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ’  ಸರಣಿಯಲ್ಲಿ ವೈದ್ಯರುಗಳ, ಶುಶ್ರೂಷಕರ, ಪ್ರಯೋಗಾಲಯ ಸಿಬ್ಬಂದಿ, ಸಹಾಯಕರ ಹೀಗೆ ಆರೋಗ್ಯ ಸೇವಾಕ್ಷೇತ್ರಗಳಲ್ಲಿರುವವರ ಬದುಕು ಬವಣೆ ಮತ್ತು ಅಂತರಂಗದ ತುಣುಕುಗಳನ್ನು ನೀವು ಓದಲಿದ್ದೀರಿ. ತುಣುಕುಗಳು ಎಂದು ಹೇಳಲು ಕಾರಣವಿದೆ. ನಮ್ಮ ಹಕ್ಕು, ನಮ್ಮ ನೋವು, ನಮ್ಮ ನಿರೀಕ್ಷೆಗಳನ್ನು ವ್ಯಕ್ತಪಡಿಸಿ ರಾತ್ರೋರಾತ್ರಿಯೇ ಪರಿಹಾರೋಪಾಯಗಳನ್ನು ಪಡೆದುಕೊಳ್ಳುವಂಥ ಅಭಿವೃದ್ಧಿ ಹೊಂದಿದ ದೇಶದಲ್ಲಿ ನಾವಿಲ್ಲ. ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿಯ ದುಡಿಮೆಯಲ್ಲಿ ಹತ್ತಾರು ಕೈಗಳು ಹೇಗೆ ಉಣ್ಣುತ್ತಿವೆಯೋ ಹಾಗೆ ವ್ಯವಸ್ಥೆಯ ಪರಿಧಿಯಲ್ಲಿ ದೊಡ್ಡ ದೊಡ್ಡ ತಿಮಿಂಗಲಗಳು ಸ್ವಾರ್ಥದ ಬಾಯಿಗಳನ್ನು ತೆರೆದಿಟ್ಟುಕೊಂಡೇ ಈಜಾಡುತ್ತಿವೆ, ಇಂಥ ಸಂಕಷ್ಟಮಯ ಸಂದರ್ಭದಲ್ಲಿಯೂ. ಹೀಗಿರುವಾಗ ಸಾಕಷ್ಟು ವಿಷಯಗಳನ್ನು ಅದುಮಿಟ್ಟುಕೊಂಡೇ ಬದುಕುವ ಅನಿವಾರ್ಯ ಹಲವರಿಗಿದೆ ಬಂದೊದಗಿದೆ. ಆದರೂ ಸಂವೇದನಾಶೀಲ, ಪ್ರಾಮಾಣಿಕ ಮನಸ್ಸುಗಳು ತಮ್ಮ ಮನಸಿನ ಮಾತುಗಳನ್ನು ಹಂಚಿಕೊಳ್ಳಲು ಪ್ರಯತ್ನಿಸಿದ್ದಾರೆ. ಸಾಮಾಜಿಕ ಕಳಕಳಿಯುಳ್ಳ ಇನ್ನೂ ಕೆಲವರು ಇತರರ ಒಳತೋಟಿಗಳನ್ನು ಅಕ್ಷರಕ್ಕೆ ಹಿಡಿದಿಡಲು ಸಹಾಯ ಮಾಡಿದ್ದಾರೆ. ಓದುಗರಾದ ನಿಮಗೂ ನಿಮ್ಮ ನಿಮ್ಮ ಊರುಗಳಲ್ಲಿ ಸಾರ್ವಜನಿಕ ಸೇವಾಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರ ಆಂತರ್ಯಕ್ಕೆ ಅಕ್ಷರಗಳ ಮೂಲಕ ಧ್ವನಿಯಾಗುವ ಅವಕಾಶ ಇಲ್ಲಿದೆ. ಇ ಮೇಲ್ : tv9kannadadigital@gmail.com 

ಯಾವ ಸಂದರ್ಭದಲ್ಲಿಯೂ ಪರಸ್ಪರ ಆತುಕೊಳ್ಳುತ್ತ ಅರಿತುಕೊಳ್ಳುತ್ತ ಬದುಕಿನ ಬಗ್ಗೆ ಭರವಸೆ ಬೆಳೆಸಿಕೊಂಡಂಥ ಭಾವನಾತ್ಮಕ ಬುನಾದಿಯುಳ್ಳ ನೆಲ ನಮ್ಮದು. ಆದರೇನು ಮಾಡುವುದು? ಬಿಟ್ಟ ಬಾಣಗಳಿಗೆಲ್ಲ ರೂಪಾಂತರಗೊಳ್ಳುತ್ತ ದೈತ್ಯಗೊಳ್ಳುತ್ತಲೇ ಇರುವ ಕೋವಿಡ್​ನಿಂದಾಗಿ ಸ್ಪರ್ಶರಾಹಿತ್ಯವಾಗಿ ವಿಚಿತ್ರ ಸ್ವಾರ್ಥಮಯ ಕಾಲಘಟ್ಟದಲ್ಲಿ ಬದುಕುತ್ತಿದ್ದೇವೆ. ಹುಟ್ಟಿಕೊಳ್ಳುತ್ತಿರುವ ಹೊಸ ಸಮಸ್ಯೆಗಳು, ಕೈಗೆಟುಕದ ಪರಿಹಾರೋಪಾಯಗಳು, ಬಂದು ಬೀಳುವ ಮಾಹಿತಿಗಳ ಮಹಾಪೂರದಲ್ಲಿ ಮುಳುಗೇಳುತ್ತ ನಿಚ್ಚಳ ಸೆಳವು ಕಾಣದೆ ಅಸಹಾಯಕರಾಗುತ್ತಿದ್ದೇವೆ. ಅದೆಷ್ಟು ಮನೋಸ್ಥೈರ್ಯ ತಂದುಕೊಂಡರೂ ಈ ವೈರಾಣು ಬಗ್ಗಿಸದೆ ಬಿಡುತ್ತಿಲ್ಲ. ಹೀಗಿರುವಾಗ ಚಿಕಿತ್ಸೆ ಪಡೆಯುತ್ತಿರುವವರ ಸ್ಥಿತಿ ಒಂದೆಡೆಯಾದರೆ, ಚಿಕಿತ್ಸೆ ನೀಡುತ್ತಿರುವವರ ಪರಿಸ್ಥಿತಿ ಹೆಚ್ಚು ಆತಂಕಕಾರಿಯಾಗಿದೆ. ಇಂಥ ಸಂದರ್ಭದಲ್ಲಿಯೂ ರಾಜಕೀಯ ಅಸ್ತಿತ್ವದ ಮೇಲಾಟಗಳು ಮತ್ತು ಅವುಗಳ ಬೆನ್ನಹಿಂದೆಯೇ ಹೊರಬೀಳುತ್ತಿರುವ ಸಾಕ್ಷ್ಯಗಳಿಂದಾಗಿ ಜನಪ್ರತಿನಿಧಿಗಳು ದಿನೇದಿನೆ ಬೆತ್ತಲಾಗುತ್ತಿರುವುದನ್ನು ನೋಡಿ ಜನಸಾಮಾನ್ಯರು ಪ್ರಜಾಪ್ರಭುತ್ವದ ಬಗೆಗೆ ನಂಬಿಕೆಯನ್ನೇ ಕಳೆದುಕೊಳ್ಳುತ್ತಿದ್ದಾರೆ.

‘ಚುನಾವಣೆಯ ದಿನ ಅಪ್ಪ ಅಮ್ಮ ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ, ದೇವರಿಗೆ ದೀಪ ಹಚ್ಚಿ ಕೈಮುಗಿದು, ನಮಗೆ ಒಳ್ಳೆಯ ಪ್ರತಿನಿಧಿಯನ್ನು ಕೊಡು ಎಂದು ಮತ ಚಲಾಯಿಸಲು ಹೋಗುತ್ತಿದ್ದರು. ನಾವೂ ಅದನ್ನೇ ಪರಿಪಾಲಿಸಿಕೊಂಡು ಇಷ್ಟು ವರ್ಷ ಮತ ಹಾಕಿದೆವು. ಆದರೀವತ್ತು ಕ್ಷಣಕ್ಷಣಕ್ಕೂ ಸಾವು ಎನ್ನುವುದು ನಮ್ಮ ಬಂಧುಬಳಗ ನೆರೆಹೊರೆಯವರನ್ನೆಲ್ಲ ಎಳೆದುಕೊಳ್ಳುವುದನ್ನು ನೋಡುತ್ತಿದ್ದರೆ ಕೈಕಾಲು ನಡುಗುತ್ತಿವೆ. ನಮ್ಮಂಥ ಸಾಮಾನ್ಯರು ಯಾರ ಪ್ರಭಾವವನ್ನು ಬಳಸಿಕೊಂಡು ಚಿಕಿತ್ಸೆ ಪಡೆದುಕೊಳ್ಳಬೇಕು? ಇಲ್ಲ, ಇನ್ನೆಂದೂ ನಾನು ಮತ ಹಾಕುವುದಿಲ್ಲ. ನನ್ನ ಮಕ್ಕಳಿಗೂ ಹಾಕಬೇಡಿ ಎಂದೇ ಹೇಳಿದ್ದೇನೆ.’ ಮೊನ್ನೆಯಷ್ಟೇ ಅಪರಾತ್ರಿಯಲ್ಲಿ ಗದ್ಗದಿತರಾದರು ಬೆಂಗಳೂರಿನ ಶಿಕ್ಷಕಿ ಮಾಧುರಿ ಕೆರೂರ.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಡಾ. ಚನ್ನಬಸವ ಕಳೆದ ವರ್ಷ, ‘ರಾತ್ರಿ ಪಾಳಿ ಮುಗಿಸಿ ಬಂದರೂ ಕಣ್ಣಿಗೆ ಕಣ್ಣು ಹತ್ತದೇ ಆತಂಕವಾಗುತ್ತದೆ, ಸಾವಿನ ಭಯ ಕಾಡುತ್ತದೆ. ಮನೆಗೆ ಬಂದರೆ ಅಪ್ಪ, ಅಮ್ಮ, ತಮ್ಮಂದಿರು, ಹೆಂಡತಿ ಮಕ್ಕಳು ಯಾರೊಬ್ಬರೂ ಮುಖಕೊಟ್ಟು ಮಾತನಾಡುವುದಿಲ್ಲ. ಸಂಬಂಧಿಕರು ಸ್ನೇಹಿತರು ಫೋನ್ ಮಾಡಿದರೂ ಸರಿಯಾಗಿ ಮಾತನಾಡುವುದಿಲ್ಲ. ಖಿನ್ನತೆಗೆ ಜಾರುತ್ತಿದ್ದೇನೆ ಎನ್ನಿಸುತ್ತಿದೆ. ನಾನು ವೈದ್ಯನಾಗಿ ಹೀಗೆಲ್ಲ ಹೇಳಿಕೊಳ್ಳಬಾರದು. ಕ್ಷಮಿಸಿ, ನಿಮಗೆ ತೊಂದರೆ ಕೊಟ್ಟೆ.’ ಕಳೆದ ವರ್ಷ ಬಿಕ್ಕುತ್ತ ಫೋನಿಟ್ಟಿದ್ದರು. ಮತ್ತೆ ಕಳೆದ ವಾರ ಅವರಿಗೆ ಫೋನ್ ಮಾಡಿದರೆ, ಎಷ್ಟೋ ಅಷ್ಟು ತಡಬಡಿಸಿ ಮಾತು ಮುಗಿಸಿದರು, ಕೆಲಸದ ಒತ್ತಡ ಈ ವರ್ಷ ಮತ್ತಷ್ಟು ಹೆಚ್ಚಿದೆ. ನೆರೆಯ ರಾಜ್ಯದಲ್ಲಿ ಶುಶ್ರೂಷಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಶಾಂತಿ ಕೆ. ಅಪ್ಪಣ್ಣ, ‘ಏನು ಮಾಡಬೇಕು ಎಂದು ತೋಚದಂಥ ಸಂದಿಗ್ಧ. ಕೊನೆಗೂ ಎಪ್ಪತ್ತರ ರೋಗಿಗೆ ಕೊಟ್ಟಿದ್ದ ಆಮ್ಲಜನಕವನ್ನು ಸ್ಥಗಿತಗೊಳಿಸಿ ನಲವತ್ತರ ರೋಗಿಗೆ ವರ್ಗಾಯಿಸಿದೆ. ಸದ್ಯ, ಇಬ್ಬರೂ ಬದುಕಿದರು. ನಾನು ಕೂಡ ನಾಲ್ಕು ದಿನಗಳಿಂದ ಜ್ವರದಿಂದ ಬಳಲುತ್ತಿದ್ದೇನೆ. ಸದ್ಯ ರಿಪೋರ್ಟ್ ನೆಗೆಟಿವ್, ಆದರೂ ಡ್ಯೂಟಿಗೆ ಹೋಗುವ ಅನಿವಾರ್ಯ.’ ಮೂರುದಿನಗಳ ಹಿಂದೆ ತಮ್ಮ ಪರಿಸ್ಥಿತಿ ಹಂಚಿಕೊಂಡರು.

ಖಾಸಗಿ ಕಂಪೆನಿಯೊಂದರಲ್ಲಿ ಅಕೌಂಟೆಂಟ್ ಆಗಿರುವ ಅವಿವಾಹಿತ ಸಂತೋಷ್, ‘ಕೋವಿಡ್​ ಪೀಡಿತನಾದಾಗ, ಸರಕಾರದಿಂದ ಸಾಲುಸಾಲಾಗಿ ಸಂದೇಶ ಮತ್ತು ಬಣ್ಣಬಣ್ಣದ ಪ್ರಮಾಣಪತ್ರ ದೊರೆಯಿತು. ಮೆಣಸು, ಬಜೆಬೇರು, ಹಿಪ್ಪಲಿ ಮುಂತಾದ ಮಸಾಲೆ ಪದಾರ್ಥಗಳನ್ನು ಸೇವಿಸಿ ಎಂಬ ಉದ್ದ ಪಟ್ಟಿಯ ಸಂದೇಶವೂ ಬಂದಿತು. ಇದೆಲ್ಲವನ್ನೂ ರೋಗಿಗೆ ತಯಾರು ಮಾಡುಕೊಳ್ಳಲು ಶಕ್ತಿ ಇರುತ್ತದೆಯೇ? ಒಟ್ಟಾಗಿ ಸಿಗುವ ಔಷಧ ಯಾವುದು, ಎಲ್ಲಿ ಸಿಗುತ್ತದೆ ಎಂದಿದ್ದಕ್ಕೆ, ಅಂಗಡಿಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸಿಗುತ್ತಿರುವ ಔಷಧಿಗಳಲ್ಲಿ ಕಲಬೆರಕೆ ಇರುತ್ತದೆ. ಹಾಗಾಗಿ ನೀವೇ ಮನೆಯಲ್ಲೇ ಮಾಡಿಕೊಂಡು ಸೇವಿಸಿ ಎಂಬ ಉಚಿತ ಸಲಹೆಯೂ ದೊರೆಯಿತು. ನನಗಷ್ಟೇ ಅಲ್ಲ ನನ್ನ ಸಾಕಷ್ಟು ಸ್ನೇಹಿತರಿಗೆ, ಸಂಬಂಧಿಕರಿಗೆ ಸರ್ಕಾರ ಕೊಡಮಾಡುವ ಐಸೋಲೇಶನ್ ಕಿಟ್ ದೊರೆತೇ ಇಲ್ಲ. ಆದರೆ ಪರಿಹಾರಕ್ಕೆ ಒದಗದ ಅಂತರ್ಜಾಲ ಸಂದೇಶ, ಸೇವೆಗಳು ಮಾತ್ರ ಸರಕಾರದಿಂದ ಧಾರಾಳವಾಗಿ ದೊರೆಯುತ್ತಿವೆ. ಹೀಗಾಗಿ ನಮ್ಮ ವೈದ್ಯಸ್ನೇಹಿತರಿಂದಲೇ ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಳ್ಳುತ್ತಿದ್ದೇವೆ. ಆದರೆ ಬಡವರೇನು ಮಾಡಬೇಕು?’ ಹೀಗೆಂದು ಪ್ರಶ್ನಿಸಿದರು. ದಾಖಲೆಗಳಲ್ಲಿ ನಮೂದಾಗಿರುತ್ತದೆ. ಆದರೆ ರೋಗಿಗಳ ತನಕ ತಲುಪುತ್ತಿಲ್ಲವೇಕೆ?

‘ನಮ್ಮೂರಿನ ಸರಕಾರಿ ಆಸ್ಪತ್ರೆಯಲ್ಲಿ ರೋಗಿಯೊಬ್ಬ ಪರಿಚಾರಕರಿಗೆ ಕಾಯ್ದು ಕಾಯ್ದು ತನ್ನ ಮಲವನ್ನು ಗೋಡೆಗೆ ಎರಚಿ ಹೊರಳಿ ಮಲಗಿಬಿಟ್ಟ. ನರ್ಸ್​ ಅಸಹಾಯಕರಾಗಿ ನಿಂತು ನೋಡುತ್ತಿದ್ದರು.’ ಕೊಡಗಿನ ಸಮಾಜ ಸೇವಕ ನೌಶಾದ್ ಜನ್ನತ್ ನಾಲ್ಕು ದಿನಗಳ ಹಿಂದೆ ವಾಸ್ತವ ತೆರೆದಿಟ್ಟರು. ‘ಡಿ ದರ್ಜೆ ನೌಕರರು ಅದೆಷ್ಟೋ ವರ್ಷಗಳಿಂದ ಹೆಚ್ಚು ಅಪಾಯಕ್ಕೆ ಒಡ್ಡಿಕೊಂಡು ಕೆಲಸ ಮಾಡುತ್ತಿದ್ದಾರೆ. ಅವರಿಗೂ ಮೂಲಸೌಕರ್ಯಗಳು ಬೇಡವಾ? ಕುಟುಂಬದ ಹೊರತಾಗಿ ಅವರು ಬದುಕುತ್ತಿದ್ಧಾರಾ? ಅವರಿಗೆ ಯಾವ ರೀತಿಯ ಆರೋಗ್ಯ, ಜೀವನಭದ್ರತೆ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ? ಇನ್ನು ಆಸ್ಪತ್ರೆಗಳಲ್ಲಿ ಇಲ್ಲದ ಸೌಕರ್ಯಗಳನ್ನು ಜನರಿಗೆ ಹೇಗೆ ಒದಗಿಸುವುದು? ಅಲ್ಲಿ ನಡೆಯುವ ಘರ್ಷಣೆಗಳಿಗೆ ಯಾರು ಜವಾಬ್ದಾರಿ?’ ಅಸಹಾಯಕತೆ ತೋಡಿಕೊಳ್ಳುತ್ತಾ ಸಾಂಕ್ರಾಮಿಕ ರೋಗಗಳ ಮಾದರಿ ಸಂಗ್ರಹಕ್ಕೆ ಹೋಗುವ ನೌಕರರ ಅವಸ್ಥೆಗಳ ಚಿತ್ರಣಗಳನ್ನು ಮತ್ತು ಪೂರಕ ಬೇಡಿಕೆಗಳ ಪಟ್ಟಿಯನ್ನು ಬಿಚ್ಚಿಟ್ಟರು ಕರ್ನಾಟಕ ರಾಜ್ಯ ಆರೋಗ್ಯ ಸಹಾಯಕರ ಮತ್ತು ಮೇಲ್ವಿಚಾರಕರ ಕೇಂದ್ರ ಸಂಘದ ಕಾರ್ಯದರ್ಶಿ ಮಲ್ಲಿಕಾರ್ಜುನಗೌಡ.

‘ನನ್ನ ತಾಯಿ ಹೆಸರು ಮರೇವ್ ಹಾಕಬ್ಯಾಡ್ರಿ ಮೇಡಮ್, ಅವ್ರ ನೌಕರಿ ಹೋದ್ರ ನಾವು ಉಪವಾಸ ಬೀಳಬೇಕಾಗ್ತೇತಿ ಅನ್ನೂಕಿಂತ ಮ್ಯಾಲಿನ ಅಧಿಕಾರಿಗಳ ಕಿರಿಕಿರಿ ತಡ್ಯಾಕ ಆಗೂದಿಲ್ರೀ’ ಹೀಗೆಂದು ಬಾಗಲಕೋಟ ಜಿಲ್ಲೆಯ ಹಳ್ಳಿಯೊಂದರಲ್ಲಿ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರೊಬ್ಬರ ಮಗ ತನ್ನ ತಾಯಿಯ ಕಷ್ಟಗಳಿಗೆ ಅಕ್ಷರರೂಪದಲ್ಲಿ ಧ್ವನಿಯಾದುದನ್ನು ಕಳಿಸುತ್ತ ಅಸಹಾಯಕತೆ ತೋಡಿಕೊಂಡ.

ನಮ್ಮ ಗಂಟಲಿನ ಪಡಕಗಳತನಕ ಬಂದು ಕುಳಿತ ನೋವುಗಳಿಗೆ, ಸಮಸ್ಯೆಗಳಿಗೆ ಮುಕ್ತಿ ಕೊಟ್ಟರೆ ಮಾತ್ರ ಮುಂದಿನ ಹೆಜ್ಜೆಗಳನ್ನಿಡಲು ತ್ರಾಣ ದಕ್ಕುವುದು? ಹಾಗಿದ್ದರೆ ವಾಸ್ತವ ಸಂಗತಿಗಳೇನು ಎನ್ನುವುದು ಪರಸ್ಪರ ತಿಳಿಯಲಿ. ನಾವು ಒಳಗೊಳಗೆ ಎಷ್ಟೇ ಗಟ್ಟಿಯಾಗಿದ್ದೇವೆಂದರೂ ಹೊರಗಿನ ಅವ್ಯವಸ್ಥೆಗಳು ನಮ್ಮ ಒಳಪದರಗಳನ್ನು ನಮಗರಿವಿಲ್ಲದೇ ಸುಲಿಯುತ್ತಿರುತ್ತವೆ. ಅದು ಗೊತ್ತಾಗುವ ಹೊತ್ತಿಗೆ ಪರಿಸ್ಥಿತಿ ನಮ್ಮ ಕೈಮೀರಿ ಹೋಗಿರುತ್ತದೆ. ಈಗ ಒದಗುತ್ತಿರುವ, ಒದಗಿದ ಪರಿಸ್ಥಿತಿಯೇ ಇದಕ್ಕೆ ಕನ್ನಡಿ. ಇನ್ನಾದರೂ ನಾವು ನಮ್ಮ ಒಳ-ಹೊರ ಜಗತ್ತಿಗೆ ಅಡ್ಡಿಯುಂಟು ಮಾಡುತ್ತಿರುವ ವಾಸ್ತವಾಂಶಗಳನ್ನು ಬಿಚ್ಚಿಡುವುದನ್ನು ಕಲಿಯಬೇಕು. ನೆನಪಿರಲಿ, ನಮ್ಮ ಒಂದು ಧ್ವನಿ ಲಕ್ಷಾಂತರ ಧ್ವನಿಗಳನ್ನು ಪ್ರತಿನಿಧಿಸುತ್ತಿರುತ್ತದೆ. ಮರ್ಯಾದೆ ಮತ್ತು ವ್ಯವಸ್ಥೆ ಎನ್ನುವ ಮಹಾಸಂಕೋಲೆಯನ್ನು ಕಳಚಿ ಮುಕ್ತವಾಗಿ ನಮ್ಮ ಸಂಕಟಗಳನ್ನು ಹೊರಹಾಕುವುದನ್ನು ಕಲಿಯದಿದ್ದರೆ, ನಾವಷ್ಟೇ ಅಲ್ಲ ನಮ್ಮ ಮುಂದಿನ ಪೀಳಿಗೆಯವರು ಉಸಿರಾಡುವುದೂ ಕಷ್ಟವಾಗುತ್ತದೆ; ಸಹನೆಯೇ ನಮ್ಮ ಮೂಲಗುಣ, ಕೆಲಸವೇ ದೇವರು, ಕುಟುಂಬವೇ ಪ್ರಧಾನ ಅಸ್ತಿತ್ವ ಎಂದು ಸಾರಿಕೊಂಡು ಬಂದ ಮಹಾನ್ ದೇಶ ನಮ್ಮದು. ಆದರೆ ಇದನ್ನು ಜೀವನದೊಂದಿಗೆ ಜೀವವನ್ನೂ ಒತ್ತೆ ಇಡುವಂಥ ಪರಿಸ್ಥಿತಿಯಲ್ಲಿರುವ ಆರೋಗ್ಯ ಸೇವಾಕ್ಷೇತ್ರಗಳಲ್ಲಿರುವವರ ದೃಷ್ಟಿಯಲ್ಲಿ ಯೋಚಿಸಿ ನೋಡಿ.

ಈ ಹಿನ್ನೆಲೆಯಲ್ಲಿ ರೂಪಿಸುತ್ತಿರುವಂಥ ಸರಣಿ ‘ಟಿವಿ9 ಕನ್ನಡ ಡಿಜಿಟಲ್ : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ’. ಇಲ್ಲಿ ವೈದ್ಯರುಗಳ, ಶುಶ್ರೂಷಕರ, ಪ್ರಯೋಗಾಲಯ ಸಿಬ್ಬಂದಿ, ಸಹಾಯಕರ ಹೀಗೆ ವೈದ್ಯಕೀಯ ಸೇವಾಕ್ಷೇತ್ರಗಳಲ್ಲಿರುವವರ ಬದುಕು, ಬವಣೆ ಮತ್ತು ಅವರ ಸಾಮಾಜಿಕ ಸೂಕ್ಷ್ಮ ದೃಷ್ಟಿಕೋನಗಳೊಂದಿಗೆ ಅಂತರಂಗದ ತುಣುಕುಗಳನ್ನು ಹಂಚಿಕೊಳ್ಳಲಿದ್ದಾರೆ. ತುಣುಕುಗಳು ಎಂದು ಹೇಳಲು ಕಾರಣವಿದೆ. ನಮ್ಮ ಹಕ್ಕು, ನಮ್ಮ ನೋವು, ನಮ್ಮ ನಿರೀಕ್ಷೆಗಳನ್ನು ವ್ಯಕ್ತಪಡಿಸಿ ರಾತ್ರೋರಾತ್ರಿಯೇ ಪರಿಹಾರೋಪಾಯಗಳನ್ನು ಪಡೆದುಕೊಳ್ಳುವಂಥ ಅಭಿವೃದ್ಧಿ ಹೊಂದಿದ ದೇಶದಲ್ಲಿ ನಾವಿಲ್ಲ. ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿಯ ದುಡಿಮೆಯಲ್ಲಿ ಹತ್ತಾರು ಕೈಗಳು ಹೇಗೆ ಉಣ್ಣುತ್ತಿವೆಯೋ ಹಾಗೆ ವ್ಯವಸ್ಥೆಯ ಪರಿಧಿಯಲ್ಲಿ ದೊಡ್ಡ ದೊಡ್ಡ ತಿಮಿಂಗಲಗಳು ಸ್ವಾರ್ಥದ ಬಾಯಿಗಳನ್ನು ತೆರೆದಿಟ್ಟುಕೊಂಡೇ ಈಜಾಡುತ್ತಿವೆ, ಇಂಥ ಸಂಕಷ್ಟಮಯ ಸಂದರ್ಭದಲ್ಲಿಯೂ. ಹೀಗಿರುವಾಗ ಸಾಕಷ್ಟು ವಿಷಯಗಳನ್ನು ಅದುಮಿಟ್ಟುಕೊಂಡೇ ಬದುಕುವ ಅನಿವಾರ್ಯ ಹಲವರಿಗಿದೆ ಬಂದೊದಗಿದೆ. ಆದರೂ ಸಂವೇದನಾಶೀಲ, ಪ್ರಾಮಾಣಿಕ ಮನಸ್ಸುಗಳು ತಮ್ಮ ಮನಸಿನ ಮಾತುಗಳನ್ನು, ಗ್ರಹಿಸಿದ ನೋಟಗಳನ್ನು ಹೇಳಿಕೊಳ್ಳಲು ಪ್ರಯತ್ನಿಸಿದ್ದಾರೆ. ಸಾಮಾಜಿಕ ಕಳಕಳಿಯುಳ್ಳ ಇನ್ನೂ ಕೆಲವರು ಇತರರ ಒಳತೋಟಿಗಳನ್ನು ಅಕ್ಷರಕ್ಕೆ ಹಿಡಿದಿಡಲು ಸಹಾಯ ಮಾಡಿದ್ದಾರೆ. ಓದುಗರಾದ ನಿಮಗೂ ನಿಮ್ಮ ನಿಮ್ಮ ಊರುಗಳಲ್ಲಿ ಸಾರ್ವಜನಿಕ ಸೇವಾಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರ ಆಂತರ್ಯಕ್ಕೆ ಅಕ್ಷರಗಳ ಮೂಲಕ ಧ್ವನಿಯಾಗುವ ಅವಕಾಶವೂ ಇಲ್ಲಿದೆ.

ನಾಳೆಯಿಂದ ಈ ಸರಣಿ ನಿಮ್ಮ ಓದಿಗೆ ಮತ್ತು ಬರಹಕ್ಕೆ ಮತ್ತು ವಿಚಾರಸ್ಫುರಣಗಳಿಗೆ.

ಇದನ್ನೂ ಓದಿ : ಏಸೊಂದು ಮುದವಿತ್ತು : ಅನಿಶ್ಚಿತ ಅಲೆಗಳನ್ನು ಎದುರಿಸಲು ಕುಟುಂಬದಲ್ಲಿಯೂ ಪ್ರಜಾಪ್ರಭುತ್ವ ಸಮನ್ವಯಗೊಳ್ಳಬೇಕಿದೆ

Published On - 8:40 pm, Thu, 6 May 21

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ