IPL 2025: ಸತತ ಸೋಲುಗಳಿಂದ ಕಂಗೆಟ್ಟು ದೇವರ ಮೊರೆ ಹೋದ ಸಿಎಸ್‌ಕೆ ತಂಡ; ಗೈರಾದ ಧೋನಿ
Chennai Super Kings: ಚೆನ್ನೈ ಸೂಪರ್ ಕಿಂಗ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಮುಖ್ಯ ಪಂದ್ಯಕ್ಕೂ ಮುನ್ನ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಹನುಮಾನ್ ಗರ್ಹಿ ದೇವಸ್ಥಾನಕ್ಕೆ ಭೇಟಿ ನೀಡಿದೆ. ತಂಡದ ಕೆಲವು ಆಟಗಾರರು ಮತ್ತು ಮಾಲೀಕರು ಗೆಲುವಿಗಾಗಿ ಪ್ರಾರ್ಥಿಸಿದ್ದಾರೆ. ಈ ಸೀಸನ್‌ನಲ್ಲಿ ಸತತ ಸೋಲುಗಳನ್ನು ಎದುರಿಸುತ್ತಿರುವ ಸಿಎಸ್‌ಕೆ ಈ ಪಂದ್ಯದಲ್ಲಾದರೂ ಗೆಲ್ಲುತ್ತಾ? ಕಾದು ನೋಡಬೇಕಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈ ಸೀಸನ್‌ನಲ್ಲಿ ತನ್ನ 7ನೇ ಲೀಗ್ ಪಂದ್ಯವನ್ನು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡುತ್ತಿದೆ. ಈ ಪಂದ್ಯ ಲಕ್ನೋದ ತವರು ಮೈದಾನವಾದ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಹೀಗಾಗಿ ಈ ಪಂದ್ಯಕ್ಕೂ ಮುನ್ನ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೆಲವು ಆಟಗಾರರು ರುತುರಾಜ್ ಗಾಯಕ್ವಾಡ್ ಅವರೊಂದಿಗೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಹನುಮಾನ್ ಗರ್ಹಿ ದೇವಸ್ಥಾನಕ್ಕೆ ಭೇಟಿ ನೀಡಿ ಮುಂದಿನ ಪಂದ್ಯದಲ್ಲಿ ಗೆಲುವಿಗಾಗಿ ಪ್ರಾರ್ಥಿಸಿದ್ದಾರೆ.
ದೇವರ ಮೊರೆ ಹೋದ ಸಿಎಸ್‌ಕೆ
ಸಿಎಸ್‌ಕೆ ತಂಡದ ನಿಯಮಿತ ನಾಯಕ ರುತುರಾಜ್ ಗಾಯಕ್ವಾಡ್ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮೊಣಕೈ ಮುರಿತಕ್ಕೆ ಒಳಗಾಗಿದ್ದರು. ಹೀಗಾಗಿ ಅವರನ್ನು ಇಡೀ ಟೂರ್ನಿಯಿಂದ ಹೊರಗಿಡಲಾಗಿದೆ. ಆದಾಗ್ಯೂ ತಂಡದಲ್ಲಿಯೇ ಉಳಿದಿರುವ ರುತುರಾಜ್ ಇದೀಗ ತಂಡದ ಕೆಲವು ಸದಸ್ಯರು ಹಾಗೂ ಮಾಲೀಕರೊಂದಿಗೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಹನುಮಾನ್ ಗರ್ಹಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಇಂದು ಪಂದ್ಯವಿದ್ದ ಕಾರಣ ಅಭ್ಯಾಸ ನಡೆಸುವ ಸಲುವಾಗಿ ತಂಡದ ಎಲ್ಲಾ ಆಟಗಾರರು ದೇವಸ್ಥಾನಕ್ಕೆ ಭೇಟಿ ನೀಡಿಲ್ಲ. ಇದೇ ಕಾರಣಕ್ಕಾಗಿಯೇ ನಾಯಕ ಧೋನಿ ಕೂಡ ದೇವಸ್ಥಾನಕ್ಕೆ ಬಂದಿಲ್ಲ ಎಂದು ತೊರುತ್ತದೆ.
ಈ ಸೀಸನ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸತತ ಸೋಲುಗಳಿಂದ ಕಂಗೆಟ್ಟಿದೆ. ಕಳೆದ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ತಂಡವು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಎಂಟು ವಿಕೆಟ್‌ಗಳ ಹೀನಾಯ ಸೋಲನ್ನು ಅನುಭವಿಸಿತು. ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಸಿಎಸ್‌ಕೆ, ಆರು ಪಂದ್ಯಗಳಿಂದ ಕೇವಲ ಎರಡು ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.