ಗುಟ್ಟಾಗಿ ಶುಲ್ಕ ಹೆಚ್ಚಿಸುತ್ತಿರುವ ಖಾಸಗಿ ಶಾಲೆಗಳು, ಶುಲ್ಕ ವಿವರ ಪ್ರಕಟಿಸದೆ ಉದ್ಧಟತನ: ಶಿಕ್ಷಣ ಇಲಾಖೆ ಆದೇಶಕ್ಕೂ ಡೋಂಟ್ ಕೇರ್
ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಬೆಲೆ ಏರಿಕೆ ಪರ್ವ ಶುರುವಾಗಿದೆ. ಖಾಸಗಿ ಶಾಲೆಗಳು ಗುಟ್ಟಾಗಿ ಶುಲ್ಕ ಏರಿಕೆ ಮಾಡಿಕೊಂಡಿವೆ. ಮನಸಿಗೆ ಬಂದಹಾಗೆ ಶುಲ್ಕ ಏರಿಕೆ ಮಾಡಿಕೊಂಡು ಪೋಷಕರ ಸಂಕಷ್ಟಕ್ಕೆ ಕಾರಣವಾಗಿವೆ. ಶುಲ್ಕ ಪಟ್ಟಿ ನೀಡುವಂತೆ ಪೋಷಕರು ಹಾಗೂ ಶಿಕ್ಷಣ ಇಲಾಖೆ ಹೇಳಿದರೂ ಖಾಸಗಿ ಶಾಲೆಗಳು ಕ್ಯಾರೇ ಎನ್ನುತ್ತಿಲ್ಲ.

ಬೆಂಗಳೂರು, ಏಪ್ರಿಲ್ 15: ಬೆಂಗಳೂರಿನಲ್ಲಿ ಈಗಾಗಲೇ ಬೆಲೆ ಏರಿಕೆಯ ಪರ್ವ ಶುರುವಾಗಿದೆ. ಹಾಲು, ಕಾಫಿ- ಚಹಾ , ವಿದ್ಯುತ್ ಹೀಗೆ ಎಲ್ಲವುಗಳ ಬೆಲೆ ಏರಿಕೆಯಾಗಿದೆ. ಈ ನಡುವೆ ಪ್ರತಿ ವರ್ಷವೂ ಖಾಸಗಿ ಶಾಲೆಗಳು (Private School Fee) ವರ್ಷದಿಂದ ವರ್ಷಕ್ಕೆ ಶುಲ್ಕ ಏರಿಕೆ (School Fee Hike) ಮಾಡಿ ಬರೆ ಎಳೆಯಲು ಮುಂದಾಗಿವೆ. ಈ ವರ್ಷವೂ ರಾಜ್ಯದಲ್ಲಿ ಖಾಸಗಿ ಶಾಲೆಗಳು ಸದ್ದಿಲ್ಲದೇ ಶೇ 10 ರಿಂದ 15 ರಷ್ಟು ಶಾಲಾ ಶುಲ್ಕ ಏರಿಕೆಗೆ ಮುಂದಾಗಿವೆ. ಶುಲ್ಕ ವಿವರವನ್ನು ಶಾಲೆಗಳಲ್ಲಿ ಪ್ರಕಟಿಸಬೇಕು, ವೆಬ್ಸೈಟ್ನಲ್ಲಿ ಪ್ರಕಟ ಮಾಡಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ (Education Department) ನಿರ್ದೇಶನವಿದೆ. ಆದರೆ, ಖಾಸಗಿ ಶಾಲೆಗಳು ಮಾತ್ರ ಕ್ಯಾರೇ ಎನ್ನುತ್ತಿಲ್ಲ ಎಂದು ಪೋಷಕರು ದೂರಿದ್ದಾರೆ.
ಖಾಸಗಿ ಶಾಲೆಗಳು ಶುಲ್ಕದ ವಿವರವನ್ನು STATS ನಲ್ಲಿ ಅಪ್ಲೋಡ್ ಮಾಡಬೇಕು. ಎಷ್ಟು ಶುಲ್ಕ ಏರಿಕೆ ಮಾಡಿವೆ? ಎಷ್ಟು ಟ್ಯೂಷನ್ ಫೀಸ್? ಡೋನೆಷನ್ ಎಷ್ಟು ಎಂದು ಡಿಟೇಲ್ ವಿವರ ಅಪ್ಲೋಡ್ ಮಾಡಬೇಕು. ಆದರೆ ಯಾವ ಶಾಲೆಗಳೂ ಇದನ್ನು ಪಾಲಿಸುತ್ತಿಲ್ಲ. ಶೇ 10 ರಷ್ಟು ಶಾಲೆಗಳು ಮಾತ್ರ ಶುಲ್ಕದ ವಿವವರಗಳನ್ನು ಅಪ್ಲೋಡ್ ಮಾಡಿವೆ ಹಾಗೂ ಶಾಲೆಗಳಲ್ಲಿ ನಾಮಫಲಕದಲ್ಲಿ ಅಳವಡಿಸಿವೆ. ಉಳಿದ ಯಾವ ಶಾಲೆಗಳೂ ಈ ಮಾಹಿತಿಯನ್ನು ಅಳವಡಿಸುತ್ತಿಲ್ಲ. ಹೀಗಾಗಿ ಪೋಷಕರು ಗರಂ ಆಗಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಪೋಷಕರು ತಿರುಗಿ ಬಿದ್ದಿದ್ದಾರೆ. ಮಾಹಿತಿ ನೀಡುವ ವರೆಗೂ ಶುಲ್ಕ ಪಾವತಿಸುವುದಿಲ್ಲ ಎಂದು ಪೋಷಕರ ಸಮಮ್ವಯ ಸಮಿತಿ ಎಚ್ಚರಿಕೆ ನೀಡಿದೆ.
ಖಾಸಗಿ ಶಾಲೆಗಳ ಶುಲ್ಕ ಏರಿಕೆ: ದಾಖಲಾತಿ ಶುರು
ಇನ್ನು 2025-26ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಶಾಲೆಗಳ ಆರಂಭಕ್ಕೂ ಮುನ್ನವೇ ಖಾಸಗಿ ಶಾಲೆಗಳು ಶುಲ್ಕ ಏರಿಕೆ ಮಾಡಿಕೊಂಡು ದಾಖಲಾತಿ ಶುರು ಮಾಡಿವೆ. ಶುಲ್ಕ ಏರಿಕೆಯ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ ಹಾಗೂ ಶುಲ್ಕ ದರ ಪಟ್ಟಿಯನ್ನ ಶಾಲೆಗಳಲ್ಲಿ ಅಳವಡಿಸಿಲ್ಲ. ಇದಕ್ಕೆ ಶಿಕ್ಷಣ ಇಲಾಖೆ ಕಡಿವಾಣ ಕೂಡಾ ಹಾಕುತ್ತಿಲ್ಲ. ಹೀಗಾಗಿ ಶಾಲೆಗಳ ನೋಟಿಸ್ ಬೊರ್ಡ್ಗಳಲ್ಲಿ ಶುಲ್ಕದ ಪಟ್ಟಿ ಅಳವಡಿಸುವಂತೆ ಪೋಷಕರಿಂದ ಒತ್ತಾಯ ಕೇಳಿ ಬಂದಿದೆ. ಇದನ್ನು ಪಾಲಿಸದ ಶಾಲೆಗಳ ವಿರುದ್ಧ ಶಿಕ್ಷಣ ಇಲಾಖೆ ಕ್ರಮ ತಗೆದುಕೊಳ್ಳಬೇಕೆಂಬ ಒತ್ತಾಯ ಕೇಳಿ ಬಂದಿದೆ.
ನಿಯಮ ಪಾಲಿಸದ ಶಾಲೆಗಳ ಪರವಾನಗಿ ನವೀಕರಿಸಬಾರದು: ಪೋಷಕರ ಆಗ್ರಹ
ಯಾವ ಶಾಲೆಗಳು ಶುಲ್ಕದ ವಿವರವನ್ನು SATS PORT ವೆಬ್ ಸೈಟ್ ಹಾಗೂ ಶಾಲೆಯಲ್ಲಿ ಅಳವಡಿಸುವುದಿಲ್ಲವೋ ಆ ಶಾಲೆಗಳ RR ನವೀಕರಣ ಮಾಡದಂತೆ ರಾಜ್ಯದ ಎಲ್ಲ BEO ಹಾಗೂ DDPI ಗಳಿಗೆ ಕಡಕ್ ಸೂಚನೆ ನೀಡಲಾಗಿದೆ. ಅಷ್ಟಾದರೂ ಯಾವುದೇ ಖಾಸಗಿ ಶಾಲೆಗಳು ಅದನ್ನು ಪಾಲಿಸುತ್ತಿಲ್ಲ. ಹೀಗಾಗಿ ಇತಂಹ ಶಾಲೆಗಳ ಆರ್ಆರ್ ನವೀಕರಿಸಬಾರದು ಎಂದು ಪೋಷಕರ ವಲಯದಲ್ಲಿ ಒತ್ತಾಯ ಕೇಳಿ ಬಂದಿದೆ.
ಇದನ್ನೂ ಓದಿ: ಶಾಲಾ ವಾಹನ ಶುಲ್ಕ ಏರಿಕೆ ಸರದಿ: ಕೇಳೋರಿಲ್ಲ ಪೋಷಕರ ಗೋಳು!