ಶಾಲಾ ಶುಲ್ಕವಾಯ್ತು, ಇದೀಗ ಶಾಲಾ ವಾಹನ ಶುಲ್ಕ ಏರಿಕೆ ಸರದಿ: ಕೇಳೋರಿಲ್ಲ ಪೋಷಕರ ಗೋಳು!
ರಾಜ್ಯದಲ್ಲಿ ಕೆಲ ಖಾಸಗಿ ಶಾಲೆಗಳು ಶೇಕಡಾ 15 ರಿಂದ 20 ಫೀಸ್ ಏರಿಕೆ ಮಾಡಿವೆ. ಇದರ ಬೆನ್ನಲ್ಲೇ ಇದೀಗ ಶಾಲಾ ಬಸ್‌ಗಳ ದರ ಏರಿಕೆಗೆ ಮುಂದಾಗಿದ್ದು, ಇದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮುಂದಿಟ್ಟುಕೊಂಡು ಖಾಸಗಿ ಶಾಲಾ ಬಸ್ ಸಂಘಟನೆಗಳು ದರ ಏರಿಕೆಗೆ ಮುಂದಾಗಿವೆ.

ಬೆಂಗಳೂರು, ಏಪ್ರಿಲ್ 10: ಕರ್ನಾಟಕದಲ್ಲಿ ನಂದಿನಿ ಹಾಲು ಸೇರಿದಂತೆ ಮೆಟ್ರೋ, ವಿದ್ಯುತ್, ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಬೆನ್ನಲೆ ಇದೀಗ ಖಾಸಗಿ ಶಾಲೆಗಳ (Private Schools) ಬಸ್ ದರ ಏರಿಕೆಗೆ ಮುಂದಾಗಿದ್ದು, ಪೋಷಕರ (Parents) ಪರದಾಟಕ್ಕೆ ಕಾರಣವಾಗಿದೆ. ಈಗಾಗಲೇ ಖಾಸಗಿ ಶಾಲೆಗಳಲ್ಲಿ 15 ರಿಂದ 20% ಫೀಸ್ ಏರಿಕೆ ಮಾಡಲಾಗಿದೆ. ಡೀಸೆಲ್ ಬೆಲೆ ಹೆಚ್ಚಳದಿಂದಾಗಿ ಪ್ರತಿ ವಿದ್ಯಾರ್ಥಿಗೆ 500 ರಿಂದು 600 ರೂ. ಹೆಚ್ಚುವರಿ ಹೊರೆಯಾಗಲಿದ್ದು, ಶಾಲಾ ಬೆಲೆ ಏರಿಕೆ ವಿರುದ್ಧ ಪೋಷಕರು ಗರಂ ಆಗಿದ್ದಾರೆ.
ಸುನಾಮಿಯೇ ಬರಲಿ ಖಾಸಗಿ ಶಾಲೆಗಳು ಮಾತ್ರ ಶುಲ್ಕದ ವಿಚಾರದಲ್ಲಿ ಸುಮ್ಮನೆ ಕೂರುವುದಿಲ್ಲ. ಒಂದಲ್ಲ ಒಂದು ರಣತಂತ್ರಗಳ ಮೂಲಕ ಪೋಷಕರಿಗೆ ಹೊರೆಯಾಗುವಂತೆ ಮಾಡುತ್ತಾರೆ. ಈ ವರ್ಷವೂ ಖಾಸಗಿ ಶಾಲೆಗಳ ವಾಹನಗಳ ಮಾಲೀಕರು ದರ ಹೆಚ್ಚಳಕ್ಕೆ ಮುಂದಾಗಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಮುಂದಿಟ್ಟುಕೊಂಡು ಶಾಲಾ ವಾಹನಗಳ ದರ ಹೆಚ್ಚಳಕ್ಕೆ ಮುಂದಾಗಿದ್ದು, ಇದು ಪೋಷಕರ ಸಂಕಷ್ಟಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಬೆಲೆ ಏರಿಕೆಯ ಪರ್ವಕಾಲ: ಏಕಾಏಕಿ ಮಕ್ಕಳ ಶಾಲಾ ಫೀಸ್ನಲ್ಲಿ ಶೇ 50 ರಷ್ಟು ಏರಿಕೆ
ಹೌದು! ಡಿಸೇಲ್ ಹೆಚ್ಚಳ ಹಿನ್ನಲೆ ಶಾಲಾ ವಾಹನದ ಶುಲ್ಕ ಹೆಚ್ಚಳಕ್ಕೆ ಖಾಸಗಿ ಶಾಲಾ ಬಸ್ ಸಂಘಟನೆ ಮುಂದಾಗಿದೆ. ರಾಜ್ಯ ಹಾಗೂ ಕೇಂದ್ರದಿಂದ ಲೀಟರ್ಗೆ ತಲಾ 2 ಏರಿಕೆ ಇದರಿಂದ ಶಾಲಾ ವಾಹನದ ಶುಲ್ಕ ಹೆಚ್ಚಿಸಲು ಖಾಸಗಿ ಶಾಲಾ ವಾಹನ ಸಂಘ ಮುಂದಾಗಿದೆ. ಇದರಿಂದ ಪ್ರತೀ ಕುಟುಂಬಕ್ಕೆ ತಿಂಗಳಿಗೆ 500 ರಿಂದ 600 ರೂ ಹೆಚ್ಚುವರಿ ಹೊರೆಯಾಗುವ ಆತಂಕ ಎದುರಾಗಿದೆ. ಸದ್ಯ ತಿಂಗಳಿಗೆ 2000 ದಿಂದ 2100 ರೂ ಇರುವ ಶುಲ್ಕ 2500 ರಿಂದ 3000 ರೂ ಆಗುವ ಸಾಧ್ಯತೆಯಿದೆ. ಆ ಮೂಲಕ ಶಾಲಾ ವಾಹನದಲ್ಲಿ ಓಡಾಡುವುದು ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ಕಷ್ಟವಾಗಲಿದೆ.
ಸರ್ಕಾರದ ನೀತಿಗಳಿಂದ ದರ ಹೆಚ್ಚಳ ಅನಿವಾರ್ಯ ಎಂದ ಅಧ್ಯಕ್ಷ ಷಣ್ಮುಗಮ್
ಇನ್ನು ಇದೇ ವರ್ಷದಿಂದ ನೂತನ ದರ ಜಾರಿಯಾಗಲಿದೆ. ಸದ್ಯ ಬೆಂಗಳೂರಲ್ಲಿ 7000 ಶಾಲಾ ವಾಹನಗಳು ಇದ್ದು, ಈ ಬಗ್ಗೆ ಮಾತನಾಡಿರುವ ಖಾಸಗಿ ಅನುದಾರಹಿತ ಶಾಲಾ ಬಸ್ ಸಂಘಟನೆಯ ಅಧ್ಯಕ್ಷ ಷಣ್ಮುಗಮ್, ಸರ್ಕಾರದ ನೀತಿಗಳಿಂದ ದರ ಹೆಚ್ಚಳ ಅನಿವಾರ್ಯವಾಗಿದೆ. ರಾಜ್ಯ ಮತ್ತು ಕೇಂದ್ರದಿಂದ ಲೀಟರ್ಗೆ ತಲಾ 2 ರೂ. ಏರಿಕೆಯಾಗಿದೆ. ಬಸ್ ಬಿಡಿ ಬಾಗಗಳ ದರ ಹೆಚ್ಚಾಗಿದೆ. ಇನ್ಶೂರೆನ್ಸ್ ಕೂಡ ಹೆಚ್ಚಾಗಿದೆ. ಹೀಗಾಗಿ ಶಾಲಾ ವಾಹನದ ಶುಲ್ಕ ಹೆಚ್ಚಿಸುವುದು ಅನಿವಾರ್ಯ. ಆದರೆ ಎಷ್ಟು ಹೆಚ್ಚಳ ಮಾಡಬೇಕು ಅಂತಾ ಇನ್ನೂ ಚರ್ಚೆ ಮಾಡಬೇಕು. ಪೋಷಕರಿಗೆ ಹೊರೆ ಮಾಡುವುದು ನಮ್ಮ ಉದ್ಸೇಶವಲ್ಲ. ಪೋಷಕರಿಗೆ ಹೊರೆಯಾಗದ ರೀತಿ ಹೆಚ್ಚಳ ಮಾಡಲು ಚಿತಂನೆ ಇದೆ ಎಂದಿದ್ದಾರೆ.
ಇದನ್ನೂ ಓದಿ: ಹಾಸನ: ದ್ವಿತೀಯ ಪಿಯುಸಿಯಲ್ಲಿ ಶೇ 79 ಅಂಕ ಬಂದಿದ್ರೂ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ
ಇನ್ನು ಶಾಲಾ ವಾಹನದ ಶುಲ್ಕ ಹೆಚ್ಚಳಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದು, ಶಾಲಾ ಶುಲ್ಕ ಆಯ್ತು, ಬುಕ್ಸ್ ದರ ಏರಿಕೆ ಆಯ್ತು, ಈಗ ಶಾಲಾ ವಾಹನದ ಶುಲ್ಕ ಏರಿಕೆ ಯಾಕೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಪೋಷಕರಿಗೆ ಇದು ಆರ್ಥಿಕ ಹೊರೆಯಾಗುತ್ತದೆ. ಈಗಾಗಲೇ ಸಾಕಷ್ಟು ಸಮಸ್ಯೆ ಇದೆ. ಈ ನಡುವೆ ಶಾಲಾ ವಾಹನಗಳ ಶುಲ್ಕ ಏರಿಕೆ ಸರಿಯಾದ ಕ್ರಮವಲ್ಲ ಎಂದು ಪೋಷಕರಾದ ಶೀತಲ್ ಎಂಬುವವರು ಹೇಳಿದ್ದಾರೆ. ಒಂದಡೇ ಖಾಸಗಿ ಶಾಲೆಗಳಿಂದ ಶಾಲ್ಕ ಹೆಚ್ಚಳ, ಮತ್ತೊಂದೆಡೆ ಪೆಟ್ರೋಲ್ ಡಿಸೇಲ್ ನೆಪವೊಡ್ಡಿ ಶಾಲಾವಾಹನ ಶುಲ್ಕ ಏರಿಕೆಯ ಹೊರ ಪೋಷರಿಗೆ ತಟ್ಟಿದ್ದು, ಪೋಷಕರು ಪರದಾಡುವ ಸ್ಥಿತಿ ಎದುರಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:10 am, Thu, 10 April 25