ಹಾಸನ: ದ್ವಿತೀಯ ಪಿಯುಸಿಯಲ್ಲಿ ಶೇ 79 ಅಂಕ ಬಂದಿದ್ರೂ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ
ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆ ಎಂದು ಮನನೊಂದು 18 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಎಸ್‌ಎಸ್‌ಎಲ್‌ಸಿಯಲ್ಲಿ 98% ಅಂಕ ಪಡೆದಿದ್ದ ವಿದ್ಯಾರ್ಥಿ, ಪಿಯುನಲ್ಲಿ 79% ಅಂಕ ಪಡೆದುಕೊಂಡಿದ್ದ. ಇದೇ ಆಘಾತದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದೆ.

ಹಾಸನ, ಏಪ್ರಿಲ್ 09: ನಿನ್ನೆ ಪ್ರಕಟವಾದ ಪಿಯುಸಿ ಪರೀಕ್ಷೆಯಲ್ಲಿ (2nd PUC results) ಶೇಕಡಾ 79 ಅಂಕ ಬಂದಿದ್ದರೂ ಕಡಿಮೆ ಎಂದು ಮನನೊಂದು ವಿದ್ಯಾರ್ಥಿಯೋರ್ವ ಆತ್ಮಹತ್ಯೆ (death) ಮಾಡಿಕೊಂಡಿರುವ ಆಘಾತಕಾರಿ ಘಟನೆ ಜಿಲ್ಲೆಯ ಅರಸೀಕೆರೆ ನಗರದಲ್ಲಿ ನಡೆದಿದೆ. ಇಲ್ಲಿನ ಶಿಕ್ಷಕ ಪ್ರಕಾಶ್ ಅವರ ಪುತ್ರ 18 ವರ್ಷದ ಮನೋಜ್ ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿ. ಫಲಿತಾಂಶ ನೋಡಿ ಬಂದ ಮನೋಜ್ ನಿನ್ನೆ ರಾತ್ರಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಅರಸೀಕೆರೆ ತಾಲ್ಲೂಕು ಆಸ್ಪತ್ರೆಗೆ ಸ್ಥಳಾಂತರ ಮಾಡಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.
ಮನೋಜ್ ಅರಸೀಕೆರೆ ನಗರದ ಅನಂತ ಪಿಯು ಕಾಲೇಜಿನಲ್ಲಿ ಪಿಸಿಎಂಬಿ ಸೈನ್ಸ್ ವಿಭಾಗದಲ್ಲಿ ಅಭ್ಯಾಸ ಮಾಡುತ್ತಿದ್ದ. ನಿನ್ನೆ ಪ್ರಕಟವಾದ ಪಿಯು ಫಲಿತಾಂಶದಲ್ಲಿ ಶೇಕಡಾ 79 ಅಂಕ ಬಂದಿತ್ತು. ಕನ್ನಡ-98, ಇಂಗ್ಲೀಷ್- 85, ಫಿಸಿಕ್ಸ್-71, ಕೆಮಿಸ್ಟ್ರಿ- 74, ಮ್ಯಾಥ್ಸ್- 82 ಮತ್ತು ಬಯಾಲಜಿ-64 ಒಟ್ಟು-474 ಅಂಕ ಪಡೆದುಕೊಂಡಿದ್ದ. ಫಲಿತಾಂಶ ನೋಡಿ ಬಂದ ಮನೋಜ್ ರಾತ್ರಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಎಸ್‌ಎಸ್‌ಎಲ್‌ಸಿಯಲ್ಲಿ 98%, ಪಿಯುಸಿಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಆಘಾತ
ಕಾಲೇಜಿನಲ್ಲಿ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಮನೋಜ್, ಹೆಚ್ಚು ಅಂಕ ಗಳಿರುವ ನೆಚ್ಚಿನ ವಿದ್ಯಾರ್ಥಿಗಳ ಪಟ್ಟಿಯಲ್ಲೂ ಇದ್ದ. ತಾನಾಯಿತು ತನ್ನ ಓದಾಯಿತು ಎನ್ನುವಂತಿದ್ದ ಮನೋಜ್ ಓದುವುದರಲ್ಲಿ ಸದಾ ಟಾಪರ್ ಆಗಿದ್ದ. ಎಸ್‌ಎಸ್‌ಎಲ್‌ಸಿಯಲ್ಲಿ ಶೇಕಡಾ 98 ಅಂಕ ಗಳಿಸಿ ಇಡೀ ತಾಲ್ಲೂಕಿನಲ್ಲಿ ಗಮನ ಸೆಳೆದಿದ್ದ.
ಇದನ್ನೂ ಓದಿ: ದ್ವಿತೀಯ ಪಿಯುಸಿ ಫಲಿತಾಂಶ: ಕರ್ನಾಟಕದಲ್ಲಿ ಐವರು ವಿದ್ಯಾರ್ಥಿಗಳು ಆತ್ಮಹತ್ಯೆ
ಅದೇ ರೀತಿಯಾಗಿ ಪಿಸಿಎಂಬಿ ಅಭ್ಯಾಸ ಮಾಡಿ ಉತ್ತಮ ಅಂಕಗಳಿಸುವ ತಯಾರಿ ಮಾಡಿದ್ದ. ಹೆಚ್ಚಿನ ಅಂಕ ಪಡೆಯುವ ನಿಟ್ಟಿನಲ್ಲಿ ಸಾಕಷ್ಟು ಪರಿಶ್ರಮ ಕೂಡ ವಹಿಸಿದ್ದ ಮನೋಜ್, ಫಲಿತಾಂಶ ಪ್ರಕಟವಾದಾಗ ಕಡಿಮೆ ಅಂಕ ಬಂದಿದೆ ಎಂದು ಆಘಾತಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: 2nd PUC Results 2025 Toppers: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ಯಾರು ಟಾಪರ್ಸ್? ಇಲ್ಲಿದೆ ವಿವರ
ವೃತ್ತಿಯಲ್ಲಿ ಶಿಕ್ಷಕರಾಗಿರುವ ಮನೋಜ್ ತಂದೆ ಪ್ರಕಾಶ್, ಮಗನ ಅಭ್ಯಾಸಕ್ಕೆ ಬೆನ್ನೆಲುಬಾಗಿ ನಿಂತಿದ್ದರು. ಆದರೆ ನಿನ್ನೆ ಊಟ ಮಾಡಿ ಕೊಠಡಿ ಸೇರಿಕೊಂಡಿದ್ದ ಮನೋಜ್, ಬೆಳಿಗ್ಗೆ ಎಷ್ಟೊತ್ತಾದರೂ ಹೊರ ಬಂದಿಲ್ಲ. ಏನಾಯ್ತು ಎಂದು ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸದ್ಯ ಮಗನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:30 pm, Wed, 9 April 25