ದ್ವಿತೀಯ ಪಿಯುಸಿ ಫಲಿತಾಂಶ: ಕರ್ನಾಟಕದಲ್ಲಿ ಐವರು ವಿದ್ಯಾರ್ಥಿಗಳು ಆತ್ಮಹತ್ಯೆ
Karnataka 2nd PUC Results 2025: ಕರ್ನಾಟಕದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಅಲ್ಲಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗುತ್ತಿವೆ. ಒಟ್ಟಾರೆಯಾಗಿ ರಾಜ್ಯದಲ್ಲಿ ಅನುತ್ತೀರ್ಣರಾದ ಅಥವಾ ನಿರೀಕ್ಷಿತ ಅಂಕ ಪಡೆಯದ ಐವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ನಡೆದಿದೆ. ಶಿಕ್ಷಣ ಸಚಿವರು ಉತ್ತೀರ್ಣರಾಗದ ವಿದ್ಯಾರ್ಥಿಗಳಿಗೆ ಪುನಃ ಪರೀಕ್ಷೆಗೆ ಉಚಿತ ಅವಕಾಶ ನೀಡುವ ಭರವಸೆ ನೀಡಿದ ಹೊರತಾಗಿಯೂ ಈ ದುರಂತ ಸಂಭವಿಸಿದೆ.

ಬೆಂಗಳೂರು, ಏಪ್ರಿಲ್ 9: ಕರ್ನಾಟಕ ದ್ವಿತೀಯ ಪಿಯು ಪಿಯುಸಿ ಪರೀಕ್ಷೆ ಫಲಿತಾಂಶ (Second PU Result) ಮಂಗಳವಾರ ಪ್ರಕಟಗೊಂಡಿದ್ದು ಒಟ್ಟಾರೆಯಾಗಿ ಶೇಕಡ 73.45 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಮತ್ತೊಂದೆಡೆ, ಉತ್ತೀರ್ಣರಾಗದ ವಿದ್ಯಾರ್ಥಿಗಳಿಗೆ ಎರಡು ಹಾಗೂ ಮೂರನೆಯ ಪರೀಕ್ಷೆಗೆ ಶುಲ್ಕರಹಿತ ವ್ಯವಸ್ಥೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಭರವಸೆ ನೀಡಿದ್ದಾರೆ. ಇಷ್ಟಾದರೂ, ಅನುತ್ತೀರ್ಣಗೊಂಡ (PUC Result) ಹಾಗೂ ನಿರೀಕ್ಷಿಸಿದ ಅಂಕ ಬಂದಿಲ್ಲವೆಂದು ನೊಂದ ಐವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಲವು ಜಿಲ್ಲೆಗಳಲ್ಲಿ ನಡೆದಿದೆ.
ಒಟ್ಟಾರೆಯಾಗಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆದ ಹಾಗೂ ಫೇಲ್ ಆಗುವ ಭಯದಲ್ಲಿ ಕರ್ನಾಟಕದಾದ್ಯಂತ ಐವರು ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೈಸೂರು ಜಿಲ್ಲೆಯ ಒಂಟಿಕೊಪ್ಪಲ್ಲಿನ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿ ಐಶ್ವರ್ಯಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನೊಂದು ಕಡೆ, ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಅಗಸನೂರು ಎಂಬಲ್ಲಿ ವಿಜಯಲಕ್ಷ್ಮಿ ಸಿರಗುಪ್ಪದ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫೇಲಾದ ವಿಷಯ ತಿಳಿದು ಆಘಾತಕ್ಕೊಳಗಾದ, ಕೃಪಾ ಎಂಬ ವಿದ್ಯಾರ್ಥಿನಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆ ದಾವಣಗೆರೆ ಖಾಸಗಿ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದಳು.
ಹಾವೇರಿಯ ಹಂಸಬಾವಿ ಠಾಣಾ ವ್ಯಾಪ್ತಿಯ ಪಿಯುಸಿ ವಿದ್ಯಾರ್ಥಿ ಕಾವ್ಯ ಬಸಪ್ಪ ಲಮಾಣಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ, ಘಟನೆ ಸಂಬಂಧಪಟ್ಟ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಫಲಿತಾಂಶ ಪ್ರಕಟವಾಗುವುದಕ್ಕೂ ಮೊದಲೇ ವಿದ್ಯಾರ್ಥಿನಿ ಆತ್ಮಹತ್ಯೆ
ಬೆಂಗಳೂರಿನಲ್ಲಿ ವಿದ್ಯಾರ್ಥಿನಿಯೊಬ್ಬಳು ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗುವುದಕ್ಕೂ ಕೆಲವೇ ಗಂಟೆಗಳ ಮುನ್ನ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿದ್ಯಾರಣ್ಯಪುರದ ಸಪ್ತಗಿರಿ ಲೇಔಟ್‌ನ ಅಪಾರ್ಟ್ಮೆಂಟ್ ಒಂದರಲ್ಲಿ ಈ ಘಟನೆ ಸಂಭವಿಸಿದೆ. ಅಪಾರ್ಟ್ಮೆಂಟ್ ಮಾಡಿಯಿಂದ ಹಾರಿ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪಿಯುಸಿ ಫಲಿತಾಂಶದಲ್ಲಿ ಅನುತ್ತೀರ್ಣಗೊಳ್ಳಬಹುದು ಎಂಬ ಭಯದಿಂದ ವಿದ್ಯಾರ್ಥಿನಿ ಕೃತ್ಯ ಎಸಗಿದ್ದಾಳೆ ಎನ್ನಲಾಗಿದೆ. ವಿದ್ಯಾರಣ್ಯಪುರ ಪೊಲೀಸರು ಅಸಾಹಜ ಸಾವು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಮಂಗಳವಾರ ಪ್ರಕಟಗೊಂಡ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಒಟ್ಟಾರೆಯಾಗಿ ಬಾಲಕಿಯರೇ ಮೇಲುಗೈ ಸಾಧಿಸಿದ್ದರು. ಉಡುಪಿ ಜಿಲ್ಲೆ ಪ್ರಥಮ ಸ್ಥಾನಗಳಿಸಿದ್ದರೆ, ದಕ್ಷಿಣ ಕನ್ನಡ ದ್ವಿತೀಯ ಹಾಗೂ ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ ಪಡೆದಿತ್ತು.
ಇದನ್ನೂ ಓದಿ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ಯಾರು ಟಾಪರ್ಸ್? ಇಲ್ಲಿದೆ ವಿವರ
ವಿಜ್ಞಾನ ವಿಷಯದಲ್ಲಿ ಮಂಗಳೂರಿನ ಅಮೂಲ್ಯ ಕಾಮತ್ ಮೊದಲ ಸ್ಥಾನ ಪಡೆದಿದ್ದಾರೆ. ಕಾಮರ್ಸ್ ವಿಭಾಗದಲ್ಲಿ ದಕ್ಷಿಣ ಕನ್ನಡದ ದೀಪಶ್ರೀ ಮೊದಲ ರಾಂಕ್ ಹಾಗೂ ಕಲಾವಿ ಭಾಗದಲ್ಲಿ ಬಳ್ಳಾರಿ ಜಿಲ್ಲೆಯ ಸಂಜನಾಬಾಯಿ ಮೊದಲ ಸ್ಥಾನ ಪಡೆದಿದ್ದಾರೆ.
ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:09 am, Wed, 9 April 25