ಏಸೊಂದು ಮುದವಿತ್ತು : ಅನಿಶ್ಚಿತ ಅಲೆಗಳನ್ನು ಎದುರಿಸಲು ಕುಟುಂಬದಲ್ಲಿಯೂ ಪ್ರಜಾಪ್ರಭುತ್ವ ಸಮನ್ವಯಗೊಳ್ಳಬೇಕಿದೆ

‘ನನ್ನ ಗೆಳತಿ ಮತ್ತವಳ ಗಂಡ ಬೇರೆ ಬೇರೆ ಧರ್ಮಕ್ಕೆ ಸೇರಿದವರಾಗಿದ್ದರು. ಇಬ್ಬರ ವೃದ್ಧ ತಾಯಿಯರೂ ಅವರೊಂದಿಗೆ ಒಟ್ಟಿಗಿದ್ದರು. ಅವಳ ಮಕ್ಕಳು ಒಬ್ಬ ಅಜ್ಜಿಯ ಕೋಣೆಯಲ್ಲಿ ಒಂದು ಪ್ರಾರ್ಥನೆಯನ್ನು ಹೇಳಿ ಇನ್ನೊಂದು ಕೋಣೆಯಲ್ಲಿ ಮತ್ತೊಂದು ಪ್ರಾರ್ಥನೆಯನ್ನು ಹೇಳಬೇಕಾಗುತ್ತಿತ್ತು. ಆ ಮಕ್ಕಳು ಒಮ್ಮೊಮ್ಮೆ ಆಟಕ್ಕೆ ಹೋಗುವ ಅವಸರದಲ್ಲಿ ಈ ಕೋಣೆಯಲ್ಲಿ ಆ ದೇವರ ಪ್ರಾರ್ಥನೆಯನ್ನೂ ಆ ಕೋಣೆಯಲ್ಲಿ ಈ ದೇವರ ಪ್ರಾರ್ಥನೆಯನ್ನೂ ಹೇಳಿ ಓಡುತ್ತಿದ್ದರು. ನಗುತ್ತಾ ಅವಳು ‘ಬಿಡಿ, ಮೇಲೆಲ್ಲೋ ಅವರಿಬ್ಬರೂ ಪರಸ್ಪರ ಅಡ್ಜಸ್ಟ್ ಮಾಡಿಕೊಳ್ಳುತ್ತಾರೆ, ನೀವು ಅದೃಷ್ಟವಂತರು, ನಿಮಗೆ ಎರಡೆರಡು ದೇವರುಗಳಿವೆ’ ಅನ್ನುತ್ತಿದ್ದಳು.’ ಜಯಶ್ರೀ ಜಗನ್ನಾಥ

ಏಸೊಂದು ಮುದವಿತ್ತು : ಅನಿಶ್ಚಿತ ಅಲೆಗಳನ್ನು ಎದುರಿಸಲು ಕುಟುಂಬದಲ್ಲಿಯೂ ಪ್ರಜಾಪ್ರಭುತ್ವ ಸಮನ್ವಯಗೊಳ್ಳಬೇಕಿದೆ
ಲೇಖಕಿ ಜಯಶ್ರೀ ಜಗನ್ನಾಥ
Follow us
ಶ್ರೀದೇವಿ ಕಳಸದ
|

Updated on:May 07, 2021 | 12:26 PM

ಈ ಔಷಧ ಎಲ್ಲಿಂದ ಬಂದಿತು, ಇದಕ್ಕೆ ಯಾರು ಫಾರ್ಮ್ಯುಲಾ ಬರೆದರು, ಈ ಸೂಜಿ, ಕತ್ತರಿ, ನಳಿಕೆ, ಉಪಕರಣ, ದ್ರಾವಣ, ಆಮ್ಲಜನಕ ಯಾರು ತಯಾರಿಸಿದರು, ಯಾರು ಹೊತ್ತು ಸಾಗಿಸಿದರು, ನಮ್ಮನ್ನು ಉಪಚರಿಸುವವರ ಮೂಲವೇನು ಹಿನ್ನೆಲೆಯೇನು, ಇಂಥ ಸ್ವಾರ್ಥಪರ ಆಲೋಚನೆಗಳು ಬರುವುದುಂಟೆ? ಜೀವವೇ ಬಾಯಿಗೆ ಬಂದಾಗ ಉಳಿಯುವುದೇನು; ಮೌನ-ಪ್ರಾರ್ಥನೆ. ಎಲ್ಲ ಸ್ವಾರ್ಥ-ಪ್ರಭಾವಗಳ ತಂತು ಕತ್ತರಿಸಿಕೊಂಡು ನಾವೆಂಬ ನಾವಷ್ಟೇ ಶುದ್ಧಾನುಶುದ್ಧವಾಗಿ ಉಳಿಯಲು ಆತ್ಮಾವಲೋಕನದ ಮಹಾಸಂದರ್ಭ ಸೃಷ್ಟಿಯಾಗಿರುವ ಈ ಹೊತ್ತಿನಲ್ಲಾದರೂ ಅರಿವು-ಅನುಕಂಪ ಶಾಶ್ವತವಾಗಿ ನಮ್ಮಲ್ಲಿ ಮನೋಗತವಾಗುವುದೆ? ಯೋಚಿಸಿ, ನರನಾಡಿಗಳಲ್ಲಿ ರಕ್ತವೇರಿಸಿಕೊಳ್ಳುವಾಗ, ಅಂಗಗಳನ್ನು ಕಸಿ ಮಾಡಿಸಿಕೊಳ್ಳುವಾಗ, ಪ್ಲಾಸ್ಮಾ ನಮ್ಮ ದೇಹ ಸೇರುವಾಗ ಹೆಣ್ಣು-ಗಂಡು-ಜಾತಿ-ಮತ-ಪಂಥ-ಗಡಿ-ಪಕ್ಷಗಳೆಂಬ ವಿಷಬೀಜಗಳು ನಮ್ಮನ್ನು ತಾಕಿದ್ದಿದೆಯೇ? ಮನೆಓಣಿಗಳಿಂದ ಹಿಡಿದು ಸಾಮಾಜಿಕ ಜಾಲತಾಣಗಳವರೆಗೆ ಈತನಕವೂ ನಮ್ಮ ‘ಅಸ್ತಿತ್ವ’ ಎನ್ನುವುದಕ್ಕೆ ಎಷ್ಟೆಲ್ಲ ರೂಪದಲ್ಲಿ ಕೃತ್ರಿಮ ಮತ್ತು ಪೊಳ್ಳುತನದ ಎಳೆಗಳನ್ನು ಜೋಡಿಸಿಕೊಳ್ಳುತ್ತಿದ್ದೇವೆ? ಇವೆಲ್ಲವೂ ದಾಖಲೆಯರೂಪದಲ್ಲಿ ಜಗದ್ವ್ಯಾಪಿಯಾಗಿ ನಮ್ಮನ್ನು ಮತ್ತಷ್ಟು ಬೆತ್ತಲೆಗೊಳಿಸುತ್ತವೆ ಎನ್ನುವ ಕನಿಷ್ಟ ಪ್ರಜ್ಞೆಯೂ ಇಲ್ಲದಂತೆ ವರ್ತಿಸುತ್ತಿರುವ ನಾವುಗಳು ಆತ್ಮಸಾಕ್ಷಿಯನ್ನು ಮಾರಿಕೊಂಡು ಹೊರಟಿದ್ದಾದರೂ ಎಲ್ಲಿಗೆ? ಸಹಜವಾಗಿ ನಾವೆಲ್ಲ ಬದುಕಿದ್ದೆವು. ಆದರೆ ಬರುಬರುತ್ತ ಅದು ಸಾಧ್ಯವಾಗುತ್ತಿಲ್ಲವೇಕೆ, ಸಮತೋಲನ ತಪ್ಪಿದ್ದೆಲ್ಲಿ? ನಿಜವಾದ ಜ್ಞಾನವರಸಿ ಹೊರಟಲ್ಲೆಲ್ಲ ರಾಜಕಾರಣದ ಕಮಟು. ಪ್ರೀತಿ-ಸಹಬಾಳ್ವೆಯ ಹಾದಿಯಲ್ಲೆಲ್ಲ ಅನುಮಾನ, ಪ್ರತಿಷ್ಠೆಯ ಅಡ್ಡಗೋಡೆ. ಹೀಗಿರುವಾಗ ಕಂಗೆಡಿಸುತ್ತಿರುವ ವಾಸ್ತವಕ್ಕೆ, ಪರಿಸ್ಥಿತಿಯ ಅಸಹಾಯಕತೆಗೆ ನೆನಪುಗಳೇ ನೇವರಿಕೆ, ಜೀವಕ್ಕೆ ಗುಟುಕು.  

ಇಂದಿನಿಂದ ಶುರುವಾಗುವ ‘ಏಸೊಂದು ಮುದವಿತ್ತು’ ಸರಣಿ ನಿಮ್ಮ ಓದಿಗೆ. ನಿಮ್ಮನ್ನು ವಿಚಲಿತಗೊಳಿಸುತ್ತಿರುವ ವರ್ತಮಾನದ ಯಾವ ಸಂಗತಿಗಳೂ ನಿಮ್ಮ ಬಾಲ್ಯವನ್ನು, ಕಳೆದ ಪರಿಸರವನ್ನು, ಪ್ರವಾಸಕ್ಕೆ ಹೋದ ಊರುಗಳ ವಾತಾವರಣವನ್ನು, ಇದಿರಾದ ವ್ಯಕ್ತಿಗಳ ಒಡನಾಟವನ್ನು, ಪ್ರಸಂಗಗಳನ್ನು ನೆನಪಿಸುತ್ತಿರಬಹುದು. ತಡ ಯಾಕೆ? ನಿಮ್ಮ ಬರಹದೊಂದಿಗೆ ಆಲ್ಬಮ್ಮಿಗಂಟಿರುವ ಫೋಟೋಗಳನ್ನು ಮೆಲ್ಲಗೆ ಹಾಳೆಗಳಿಂದ ಬಿಡಿಸಿ ಇಲ್ಲಿ ತೂರಿಬಿಡಿ ಇ ಮೇಲ್ : tv9kannadadigital@gmail.com

ಬಂದೆರಗುತ್ತಿರುವ ಆಪತ್ತು ಮತ್ತು ಅದರ ಪರಿಣಾಮಗಳಿಗೆ ಅನುಗುಣವಾಗಿ ನಾವು ಸರಳವಾಗಿ ಬದುಕುವುದನ್ನು ಈಗಿನಿಂದಲೇ ರೂಢಿಸಿಕೊಳ್ಳಬೇಕಾದ ತುರ್ತು ಇದೆ. ನಮ್ಮ ಮುಂದಿನ ಪೀಳಿಗೆಯನ್ನೂ ಇದಕ್ಕಾಗಿ ತಯಾರು ಮಾಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಅವರವರ ಆಶೋತ್ತರಗಳನ್ನು ಗೌರವಿಸಬೇಕೆಂದರೆ ನಮ್ಮ ಸ್ಪಂದನೆ ಯಾವುದಕ್ಕೆ ಹೇಗಿರಬೇಕು, ಎಂಥ ವಿಷಯಗಳನ್ನು ಮುಕ್ತವಾಗಿ ಚರ್ಚಿಸಬೇಕು, ನಾಳೆಯ ನೆಮ್ಮದಿಗಳಿಗಾಗಿ ರೂಢಿಸಿಕೊಳ್ಳಬೇಕಾದ ಹೊಸ ಕ್ರಮಗಳೇನು? ಎಂಬುದನ್ನೆಲ್ಲ ಹಂಚಿಕೊಂಡರೆ ಮುಂಬರುವ ದಿನಗಳಲ್ಲೂ ಮುದವಾಗಿಯೇ ಬದುಕಬಹುದು ಎನ್ನುತ್ತಿದ್ದಾರೆ ಲೇಖಕಿ, ಅನುವಾದಕಿ ಜಯಶ್ರೀ ಜಗನ್ನಾಥ. 

*

‘ನಮ್ಮ ಮನೆಯಲ್ಲಿ ಎಲ್ಲರೂ ಯಾವಾಗ ಎಷ್ಟು ಚಾಕೊಲೇಟ್, ಐಸ್ಕ್ರೀಮ್ ತಿನ್ನಬೇಕು, ಅಥವಾ ಯಾವ ಹಣ್ಣು ತಿನ್ನಬೇಕು ಎಂದು ನಿರ್ಧರಿಸುವವಳು ನಮ್ಮ ಎಂಟು ವರ್ಷದ ಮಗಳು ಫ಼ೇ.’

ಕ್ಯಾಲಿಫೋರ್ನಿಯಾದಲ್ಲಿ ನನ್ನ ಮಗಳ ಮನೆಗೆ ಹೋಗಿದ್ದಾಗ ಅವರ ಪಕ್ಕದ ಮನೆಯ ಹೆಣ್ಣು ಮಗಳು ಹೀಗೇ ಮಾತನಾಡುತ್ತಾ ನನ್ನ ಬಳಿ ಹೇಳಿದಾಗ ನನಗೆ ಆಶ್ಚರ್ಯವಾಯಿತು.

-ಹಾಗಿದ್ದರೆ ಮೂರೂ ಹೊತ್ತೂ ಚಾಕೊಲೇಟೇನಾ?

ನಾನು ಕೇಳಿದೆ. ಅವಳು ನಕ್ಕು, ‘ಇಲ್ಲ ಇಲ್ಲ. ನಾವು ಮಕ್ಕಳಿಗೆ ಪೌಷ್ಟಿಕಾಂಶಗಳ ಬಗ್ಗೆ ಪುಸ್ತಕಗಳು ಕಿರುಚಿತ್ರಗಳನ್ನೆಲ್ಲಾ ತೋರಿಸುತ್ತೇವೆ. ರುಚಿ, ಆಹಾರಾಂಶಗಳು ಅವುಗಳ ಉತ್ಪಾದನೆಗಳ ಬಗ್ಗೆ ಎಲ್ಲರೂ ಸೇರಿ ಮಾತನಾಡುತ್ತೇವೆ. ಹೊಲಗದ್ದೆಗಳಿಗೆ ಮಕ್ಕಳನ್ನು ವಾರಾಂತ್ಯದಲ್ಲಿ ಕರೆದೊಯ್ದು ಆಹಾರ ಹೇಗೆ ಎಲ್ಲಿಂದ ಬರುತ್ತದೆ ಎಂದು ತಿಳಿಸುತ್ತೇವೆ. ರಜೆಯಲ್ಲಿ ಬೇರೆ ದೇಶಗಳಿಗೆ ಕರೆದೊಯ್ದು ಅಲ್ಲಿನ ತೋಟಗದ್ದೆಗಳಿಗೆ ಭೇಟಿ ನೀಡುತ್ತೇವೆ. ಹೀಗೆ ಚಿಕ್ಕಂದಿನಿಂದಾ ಮಾಡುತ್ತ ಬಂದಿದ್ದೇವೆ. ಅವರು ಏನು ತಿನ್ನಬೇಕು ಎಂಬುದನ್ನು ನಿರ್ಧರಿಸುವ ಆಯ್ಕೆಯನ್ನು ಅವರಿಗೇ ಬಿಡುತ್ತಾ ಬಂದಿದ್ದೇವೆ. ಆರೋಗ್ಯಕ್ಕಾಗಿ ಯಾವುದನ್ನೂ ತ್ಯಜಿಸಬೇಕಾಗಿಲ್ಲವೆಂದೂ ಅವುಗಳ ಬಳಕೆಯನ್ನು ಅರಿವಿನ ಆಯ್ಕೆಯಿಂದ ಮಾಡಬೇಕೆಂದೂ ತಿಳಿಸಿದ್ದೇವೆ. ಈಗ ಚಾಕೊಲೇಟ್ ತರುತ್ತೇವೆ ಆದರೆ ಅದನ್ನು ಎಂದೂ ಕಾಣದವರಂತೆ ಮೇಲೆ ಬಿದ್ದು ನಮ್ಮ ಮಕ್ಕಳು ತಿನ್ನುವುದಿಲ್ಲ. ಅದನ್ನು ಸುಖಿಸಿ ತಿನ್ನುತ್ತಾರೆ ಅಲ್ಲದೆ ಅವರನ್ನು ಅಂಕೆಯಲ್ಲಿಡುವ ತೊಂದರೆ ಕೂಡಾ ನಮಗೆ ಇಲ್ಲ.’

Yesondu mudavittu

ಫೋಟೋಗ್ರಫಿ : ಸೌಮ್ಯಾ ಬೀನಾ

ಅವಳ ಮಾತುಗಳನ್ನು ಕೇಳಿ ಅರವತ್ತರ ದಶಕದ ಒಂದು ಕನ್ನಡ ಚಿತ್ರ ‘ನಮ್ಮ ಮಕ್ಕಳು’ ನೆನಪಿಗೆ ಬಂತು. ಆ ಚಿತ್ರದಲ್ಲಿ ಅದು ಬೇಕು ಇದು ಬೇಕು ಎಂದು ಕೊಳ್ಳುಬಾಕರಂತೆ ಮಕ್ಕಳು ಹಠ ಮಾಡಿದಾಗ, ತಂದೆತಾಯಿಯರು ಅವರಿಗೇ ತಿಂಗಳ ಸಂಬಳವನ್ನು ಕೊಟ್ಟು ಖರ್ಚು ವೆಚ್ಚಗಳನ್ನು ನೋಡಿಕೊಳ್ಳಲು ಹೇಳಿ ಹೇಗೆ ಆ ಕುಟುಂಬ ಸುಖೀ ಕುಟುಂಬವಾಗುತ್ತದೆ ಎಂದು. ಜವಾಬ್ದಾರಿ ಮೈಮೇಲೆ ಬಿದ್ದರೆ ಉತ್ತಮ ಆಯ್ಕೆಗಳು ತಾನಾಗಿಯೇ ಆರಿಸಲ್ಪಡುತ್ತವೆ.

ಆಹಾರವಷ್ಟೇ ಅಲ್ಲ, ನಮ್ಮ ಆದಾಯ ವೆಚ್ಚಗಳ ಬಗ್ಗೆಯೂ ಮಕ್ಕಳೊಂದಿಗೆ ಮುಕ್ತವಾಗಿ ಚರ್ಚೆ ಮಾಡಬೇಕಾದ ಕಾಲ ಬಂದಿದೆ ಎನ್ನಿಸುತ್ತದೆ. ಇದು ಮಾಹಿತಿಯುಗ. ಮಕ್ಕಳಿಗೆ ಬೇಕಾದ ಬೇಡದ ಮಾಹಿತಿಗಳೆಲ್ಲಾ ದೊರೆಯುತ್ತಿರುತ್ತವೆ. ಆದರೆ ಮನೆಯ ಹಿರಿಯರಿಗೆ ಇನ್ನೂ ಈ ಬದಲಾವಣೆಗಳಿಗೆ ಹೊಂದಿಕೊಳ್ಳಲು ಆಗುತ್ತಿಲ್ಲ. ಹಿಂದಿನ ತಲೆಮಾರಿನವರಿಗೆ ಕುಟುಂಬದ ಎಲ್ಲಾ ಜವಾಬ್ದಾರಿಗಳನ್ನೂ ತಾವೇ ಹೊತ್ತುಕೊಂಡು ಕಿರಿಯರನ್ನು ನೋಡಿಕೊಳ್ಳುವ ಕ್ರಮದ ಅಭ್ಯಾಸವಿತ್ತು. ಈಗ ಅದು ಬದಲಾಗಬೇಕಾಗಿದೆ. ನಲ್ಮೆಯಿಂದ ವಿನಯದಿಂದ ಹಿರಿಯರ ಮನವೊಲಿಸಿ ಅವರ ಅನುಭವದ ಸಾರವನ್ನು ಕಿರಿಯರು, ಕುಟುಂಬ ವ್ಯವಸ್ಥೆಯ ನವೀನ ಮಾದರಿಗೆ ಅಡಿಪಾಯವನ್ನಾಗಿ ಮಾಡಿಕೊಳ್ಳಬೇಕಾಗಿದೆ. ಆರ್ಥಿಕತೆ, ಆಚರಣೆಗಳು ಮತ್ತು ಆರೋಗ್ಯಗಳಲ್ಲಿ ಕುಟುಂಬದ ಮಟ್ಟದಲ್ಲಿ ದೊಡ್ಡ ಬದಲಾವಣೆಯಾಗಬೇಕಾದ ಪರಿಸ್ಥಿತಿಯಿದೆ.

ಕೋವಿಡ್​ನಿಂದ ಕಲಿತ ಮುಖ್ಯ ಪಾಠವೆಂದರೆ ಅದು ಈ ಜೀವನದ ಅನಿಶ್ಚಿತತೆ. ಇದ್ದಕ್ಕಿದ್ದಂತೆ ಸಿಡಿಲಿನಂತೆರಗಬಹುದಾದ ಅನಾರೋಗ್ಯ, ಸಾವು. ಎಷ್ಟೋ ಕುಟುಂಬಗಳ ಸದಸ್ಯರುಗಳಿಗೆ ಕುಟುಂಬದ ಹಿರಿಯರು ಎಲ್ಲಿ ಹೇಗೆ ತಮ್ಮ ಆಸ್ತಿಪಾಸ್ತಿಗಳನ್ನು ಇರಿಸಿದ್ದಾರೆ ಎಂಬುದೇ ತಿಳಿಯದೆ, ಜೀವನ ಅತಂತ್ರವಾಗುತ್ತಿದೆ. ಕೆಲವು ಆಗುಹೋಗುಗಳು ನಮ್ಮ ಕೈಯಲ್ಲಿಲ್ಲ, ನಿಜ ಆದರೆ ಯಾವುದೇ ಆಘಾತಗಳಾದರೂ ಎದೆಗೆಡದೆ ನಮ್ಮ ಜೀವನಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ತಂದುಕೊಂಡು ಪರಿಸ್ಥಿತಿಯ ವಿಕೋಪವನ್ನು ನಿಯಂತ್ರಿಸಬಹುದು. ಜೀವನದಲ್ಲಿ ನಗು, ಹಾಸ್ಯ, ಸಂಗೀತ ಸಾಹಿತ್ಯಗಳು ಹರಿದಾಡಿ ಸರಳತೆಯಿಂದ ಸುಖವನ್ನರಸಬಹುದು.

ಕುಟುಂಬದಲ್ಲೊಂದು ಪ್ರಜಾಪ್ರಭುತ್ವ ಬರಬೇಕಿದೆ. ಮಕ್ಕಳಿಗೆ ಕ್ರಮೇಣ ಆದಾಯ, ವೆಚ್ಚ, ಸಾಲ, ಇಎಮ್‍ಐ ಈ ಎಲ್ಲಾ ಕ್ರಮಗಳ ಬಗೆಗೂ ತಿಳಿಸಿ, ಕುಳಿತು ಚರ್ಚಿಸಿ ಅವರಿಗೇ ಇಂಟರ್​​ನೆಟ್​ನಲ್ಲಿ ಮಾಹಿತಿಗಳನ್ನು ಸಂಗ್ರಹಿಸಲು ಹೇಳಿಕೊಡಬೇಕು. ಆಡಂಬರದ ತೋರಿಕೆಗಾಗಿ ಕೊಳ್ಳುವ ನಿರ್ಜೀವ ವಸ್ತುಗಳಿಗೆ ಈ ಬದುಕಿನಲ್ಲಿ ಎಷ್ಟರ ಮಟ್ಟಿಗೆ ಬೆಲೆಯಿಲ್ಲವೆಂಬುದನ್ನು ಈ ವೈರಸ್ ತೋರಿಸಿಕೊಟ್ಟಿದೆ. ಅದನ್ನು ಮರೆಯದೆ ಮಂತ್ರದಂತೆ ಮನೆಯವರೆಲ್ಲಾ ನೆನಪಿಡಬೇಕು.

ನನ್ನ ಒಬ್ಬ ಗೆಳತಿಯೊಬ್ಬಳ ಮನೆಯಲ್ಲಿ ಹಬ್ಬಗಳಲ್ಲಿ ಬಾಗಿಲಿಗೆ ತೋರಣ ಕಟ್ಟಿ ಪಾಯಸ ಮಾಡುವುದರ ಜೊತೆಗೇ ಆ ಹಬ್ಬದ ಹಿಂದಿನ ಕತೆ, ಕ್ಷೇತ್ರಗಳು ಸ್ಥಳ ಪುರಾಣಗಳ ಬಗ್ಗೆ ಮುಕ್ತವಾಗಿ ಚರ್ಚಿಸಲೂ ಅವಕಾಶವಿರುತ್ತಿತ್ತು. ಪದ್ಧತಿ ಆಚರಣೆಗಳನ್ನು ಪ್ರಶ್ನಿಸುವ ಮತ್ತು ಅರ್ಥವಿಲ್ಲ ಎನಿಸಿದ ಆಚರಣೆಗಳನ್ನು ಬಿಟ್ಟುಬಿಡುವುದಕ್ಕೂ ಸ್ವಾತಂತ್ರ್ಯವಿತ್ತು. ಆದರೆ ಆ ಕುಟುಂಬದವರು ಮಕ್ಕಳನ್ನು ಚಾರಿತ್ರಿಕ, ಧಾರ್ಮಿಕ ಕ್ಷೇತ್ರಗಳಿಗೆ ಕರೆದೊಯ್ದು ಅಲ್ಲಿಯ ಸ್ಥಳ ಪುರಾಣ, ಊಟ ಉಪಚಾರ, ಸಂಗೀತ ಸಾಹಿತ್ಯಗಳು, ನಡೆನುಡಿಗಳ ಬಗ್ಗೆ ಪ್ರಾತ್ಯಕ್ಷಿಕ ಅರಿವು ಮೂಡಿಸುತ್ತಿದ್ದರು. ಹೀಗಾಗಿ ನಮ್ಮ ಆಚರಣೆಗಳ ಸಂಭ್ರಮವನ್ನೂ ಕಳೆದುಕೊಳ್ಳದೆ, ನಮ್ಮ ಪದ್ಧತಿಗಳ ಸೊಗಸನ್ನೂ ಬಿಟ್ಟುಕೊಡದೆ ಅವರ ಕುಟುಂಬ, ವಿಶಿಷ್ಟ ದಿನಗಳನ್ನು ಹೊಸಬಗೆಯಲ್ಲಿ ಆಚರಿಸತೊಡಗಿತು. ನನಗೆ ತಿಳಿದ ಮಟ್ಟಿಗೆ ನಮ್ಮ ಗಣರಾಜ್ಯದಿನದಂದು ತೋರಣ ಕಟ್ಟಿ ಪಾಯಸ ಮಾಡಿ ದೇಶಭಕ್ತಿಗೀತೆಗಳನ್ನು ಹಾಡಿ ಸಂಭ್ರಮಿಸುತ್ತಿದ್ದ ಕುಟುಂಬ ಅದೊಂದೇ ಆಗಿತ್ತು. ಅತಿ ಆಡಂಬರದ ಮದುವೆ ಮುಂಜಿಗಳನ್ನು ಆ ಮನೆಯ ಮಕ್ಕಳು ದೂರವಿಡಲಾರಂಭಿಸಿದರು. ಎಲ್ಲರೂ ಭಾಗವಹಿಸುವ ಸರಳಸುಂದರ ನಲ್ಮೆಯ ಸಮಾರಂಭಗಳನ್ನು ಬೆಂಬಲಿಸಿದರು.

ಈ ಜಾತಿ ಧರ್ಮಗಳ ನಡುವಿನ ವೈಮನಸ್ಯ, ಮೇಲುಕೀಳು ಎಂಬ ಭಾವನೆಗಳ ಬಗೆಗೂ ಕುಟುಂಬದವರೆಲ್ಲಾ ಆಗಾಗ ಮಾತನಾಡುತ್ತಿರಬೇಕು. ಮಾನವ ಜಾತಿಯ ಬಗ್ಗೆ ಕರುಣೆ, ಎಲ್ಲಾ ಜನರ ಕ್ಷೇಮವೇ ಎಲ್ಲಾ ತತ್ವಗಳ ಮೂಲ ಎಂಬುದನ್ನು ಹೇಳಿಕೊಡುವ ಪ್ರಾಮಾಣಿಕತೆಯಿರಬೇಕು. ಇದು ಅಷ್ಟು ಸುಲಭವಲ್ಲ. ಕುಟುಂಬದಲ್ಲಿ ಅಂಥ ವಿಷಯಗಳ ಬಗ್ಗೆ ಚರ್ಚಿಸುವಾಗ ಬಿಸಿಬಿಸಿ ಮಾತುಗಳಾಗಬಹುದು. ಆದರೆ ಸೌಮ್ಯವಾಗಿ ದ್ವೇಷವಿಲ್ಲದೆ, ಉದ್ವೇಗವಿಲ್ಲದೆ ಚರ್ಚಿಸುವ, ಮತ್ತೊಬ್ಬರ ವಿಚಾರಗಳನ್ನು ಕಿವಿಯಿಟ್ಟು ಕೇಳುವ ಅಭ್ಯಾಸವನ್ನಾದರೂ ಬೆಳಸಿಕೊಳ್ಳಬಹುದು.

Yesondu mudavittu

ಸಾಂದರ್ಭಿಕ ಚಿತ್ರ , ಫೋಟೋಗ್ರಫಿ : ಸೌಮ್ಯಾ ಬೀನಾ

ನನ್ನ ಗೆಳತಿ ಮತ್ತವಳ ಗಂಡ ಬೇರೆ ಬೇರೆ ಧರ್ಮಕ್ಕೆ ಸೇರಿದವರಾಗಿದ್ದರು. ಇಬ್ಬರ ವೃದ್ಧ ತಾಯಿಯರೂ ಅವರೊಂದಿಗೆ ಒಟ್ಟಿಗಿದ್ದರು. ಅವಳ ಮಕ್ಕಳು ಒಬ್ಬ ಅಜ್ಜಿಯ ಕೋಣೆಯಲ್ಲಿ ಒಂದು ಪ್ರಾರ್ಥನೆಯನ್ನು ಹೇಳಿ ಇನ್ನೊಂದು ಕೋಣೆಯಲ್ಲಿ ಮತ್ತೊಂದು ಪ್ರಾರ್ಥನೆಯನ್ನು ಹೇಳಬೇಕಾಗುತ್ತಿತ್ತು. ಆ ಮಕ್ಕಳು ಒಮ್ಮೊಮ್ಮೆ ಆಟಕ್ಕೆ ಹೋಗುವ ಅವಸರದಲ್ಲಿ ಈ ಕೋಣೆಯಲ್ಲಿ ಆ ದೇವರ ಪ್ರಾರ್ಥನೆಯನ್ನೂ ಆ ಕೋಣೆಯಲ್ಲಿ ಈ ದೇವರ ಪ್ರಾರ್ಥನೆಯನ್ನೂ ಹೇಳಿ ಓಡುತ್ತಿದ್ದರು. ನಗುತ್ತಾ ಅವಳು ‘ಬಿಡಿ, ಮೇಲೆಲ್ಲೋ ಅವರಿಬ್ಬರೂ ಪರಸ್ಪರ ಅಡ್ಜಸ್ಟ್ ಮಾಡಿಕೊಳ್ಳುತ್ತಾರೆ, ನೀವು ಅದೃಷ್ಟವಂತರು, ನಿಮಗೆ ಎರಡೆರಡು ದೇವರುಗಳಿವೆ’ ಅನ್ನುತ್ತಿದ್ದಳು.

ಆರೋಗ್ಯದ ವಿಷಯದಲ್ಲಿಯಂತೂ ನಾವೆಲ್ಲರೂ ಜಾಗೃತರಾಗುವ ಕಾಲ ಬಂದಿದೆ. ಕುಟುಂಬದವರೆಲ್ಲರೂ ಸೇರಿ ವ್ಯಾಯಾಮ, ಯೋಗ ಮಾಡುವ ಪದ್ಧತಿ ಅದೆಷ್ಟು ಚೆನ್ನ. ತಂದೆ ತಾಯಿಯರೊಡನೆ ಓಡುತ್ತಿರುವ ಮಕ್ಕಳನ್ನೂ ತಂದೆತಾಯಿಯರು ಮಾಡುವ ಸೂರ್ಯನಮಸ್ಕಾರಗಳನ್ನು ಎಣಿಸುತ್ತಿರುವ ಮಕ್ಕಳನ್ನೂ ನಾನು ಸೂರ್ಯೋದಯದ ಹೊತ್ತಿಗೆ ನಡೆಯುವಾಗ ಕಾಣುತ್ತೇನೆ. ಆರೋಗ್ಯ ಪದ್ಧತಿಗಳು ಮತ್ತವುಗಳ ಒಳಿತು ಕೆಡುಕುಗಳನ್ನೂ ಆಗಾಗ ಮಕ್ಕಳಿಗೆ ತಿಳಿಸುತ್ತಿರಬೇಕು. ಲಸಿಕೆಗಳಿಗಾಗಿ ಆಧುನಿಕ ಆಸ್ಪತ್ರೆಗಳಿಗೆ ಹೋಗಬೇಕಾಗುವ ನಾವು ಮನೆಮದ್ದುಗಳ ಬಗ್ಗೆಯೂ ಅರಿವಿಟ್ಟುಕೊಂಡು ಸುಕಾಸುಮ್ಮನೆ ಆಸ್ಪತ್ರೆಗಳಲ್ಲಿ ದುಡ್ಡು ಸುರಿದು ಬೇಡದ ಟೆಸ್ಟುಗಳನ್ನು ಮಾಡಿಸಿಕೊಂಡು ಒದ್ದಾಡಬೇಕಾಗಿಲ್ಲ. ಎಲ್ಲಾರೂ ಕುಳಿತು ಚರ್ಚಿಸಿ ನಿರ್ಣಯಗಳನ್ನು ತೆಗೆದುಕೊಂಡರೆ ಒಳಿತು.

ಆರೋಗ್ಯ, ಆಚರಣೆ ಮತ್ತು ಆರ್ಥಿಕತೆಯಲ್ಲಿ ಆಡಂಬರಗಳನ್ನು ಬಿಟ್ಟು ಮುಕ್ತ ಮನಸ್ಸಿನಿಂದ ಆಯ್ಕೆಗಳನ್ನು ಮಾಡಿಕೊಂಡರೆ ಮುಂಬರುವ ದಿನಗಳತ್ತ ಮನೋ ಸ್ಥೈರ್ಯದಿಂದ ಮುನ್ನಡೆಯಬಹುದು.

ಇದನ್ನೂ ಓದಿ :ಏಸೊಂದು ಮುದವಿತ್ತು : ಮತ್ತ್ಯಾವ ಪ್ರಗತಿ ಸಾಧಿಸಲು ಜನ ಬದಲಾದರು?

Published On - 12:42 pm, Wed, 5 May 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ