ಏಸೊಂದು ಮುದವಿತ್ತು : ಮತ್ತ್ಯಾವ ಪ್ರಗತಿ ಸಾಧಿಸಲು ಜನ ಬದಲಾದರು?

‘ಊರಿನ ಎಲ್ಲಾ ಜನರು ಒಂದೆಡೆ ಶಾಲೆಯ ಆವರಣದಲ್ಲಿ ಇದ್ದ ಧ್ವಜಸ್ತಂಭದ ಹತ್ತಿರ ಸೇರಿದರು. ಅಲ್ಲಿ ಎಲ್ಲರೂ ಮಾತನಾಡಿ ಚಲನಚಿತ್ರ ನೋಡಿಕೊಂಡು ಬರಲು ತೀರ್ಮಾನಿಸಿದ್ದರು. ಎಲ್ಲ ಮನೆಗಳಿಗೆ ಸುದ್ದಿ ಹೋಯಿತು. ಒಂದು ದಿನ ಸಂಜೆ ನಾಲ್ಕು ಎತ್ತಿನ ಗಾಡಿಗಳಲ್ಲಿ ಊರಿನ ಮುದುಕರು ಕೆಲವರನ್ನು ಬಿಟ್ಟು ಎಲ್ಲರೂ ಚಿತ್ರ ನೋಡಲು ಹೊರಟರು. ಬೇಡರ ನಾರಾಯಣಪ್ಪ, ಗೌಡರ ಕೃಷ್ಣಪ್ಪ, ಹೊಲೆಯರ ಶಾಮಣ್ಣ, ಗೊಲ್ಲರ ರಾಮಣ್ಣ, ರಾಮಾಚಾರಿ, ಮಾದಿಗರ ಪಾಪಣ್ಣ, ತಿಗಳರ/ಪಳ್ಳಿಗರ ಕದಿರಪ್ಪ, ಫಯಾಸ ಖಾನ್, ಆಸ್ಪತ್ರೆಯ ಕಾಂಪೌಂಡರ್ ಜೇಕಬ್ ಹೀಗೆ ಹಲವಾರು ಕುಟುಂಬಗಳ ಪ್ರಯಾಣ ಪೇಟೆಯೆಡೆಗೆ ನಾಲ್ಕು ಗಾಡಿಗಳಲ್ಲಿ ಹೊರಟಿತ್ತು. ನಾವು ಪುಟ್ಟಪುಟ್ಟ ಮಕ್ಕಳೆಲ್ಲಾ ಯಾರ ಯಾರ ತೊಡೆಯ ಮೇಲೆ ಕುಳಿತಿದ್ದೆವೋ ಗೊತ್ತಿಲ್ಲ.’ ವಿಶಾಲಾ ಆರಾಧ್ಯ

  • ಶ್ರೀದೇವಿ ಕಳಸದ
  • Published On - 16:46 PM, 4 May 2021
ಏಸೊಂದು ಮುದವಿತ್ತು : ಮತ್ತ್ಯಾವ ಪ್ರಗತಿ ಸಾಧಿಸಲು ಜನ ಬದಲಾದರು?
ಲೇಖಕಿ ವಿಶಾಲಾ ಆರಾಧ್ಯ

ಈ ಔಷಧ ಎಲ್ಲಿಂದ ಬಂದಿತು, ಇದಕ್ಕೆ ಯಾರು ಫಾರ್ಮ್ಯುಲಾ ಬರೆದರು, ಈ ಸೂಜಿ, ಕತ್ತರಿ, ನಳಿಕೆ, ಉಪಕರಣ, ದ್ರಾವಣ, ಆಮ್ಲಜನಕ ಯಾರು ತಯಾರಿಸಿದರು, ಯಾರು ಹೊತ್ತು ಸಾಗಿಸಿದರು, ನಮ್ಮನ್ನು ಉಪಚರಿಸುವವರ ಮೂಲವೇನು ಹಿನ್ನೆಲೆಯೇನು, ಇಂಥ ಸ್ವಾರ್ಥಪರ ಆಲೋಚನೆಗಳು ಬರುವುದುಂಟೆ? ಜೀವವೇ ಬಾಯಿಗೆ ಬಂದಾಗ ಉಳಿಯುವುದೇನು; ಮೌನ-ಪ್ರಾರ್ಥನೆ. ಎಲ್ಲ ಸ್ವಾರ್ಥ-ಪ್ರಭಾವಗಳ ತಂತು ಕತ್ತರಿಸಿಕೊಂಡು ನಾವೆಂಬ ನಾವಷ್ಟೇ ಶುದ್ಧಾನುಶುದ್ಧವಾಗಿ ಉಳಿಯಲು ಆತ್ಮಾವಲೋಕನದ ಮಹಾಸಂದರ್ಭ ಸೃಷ್ಟಿಯಾಗಿರುವ ಈ ಹೊತ್ತಿನಲ್ಲಾದರೂ ಅರಿವು-ಅನುಕಂಪ ಶಾಶ್ವತವಾಗಿ ನಮ್ಮಲ್ಲಿ ಮನೋಗತವಾಗುವುದೆ? ಯೋಚಿಸಿ, ನರನಾಡಿಗಳಲ್ಲಿ ರಕ್ತವೇರಿಸಿಕೊಳ್ಳುವಾಗ, ಅಂಗಗಳನ್ನು ಕಸಿ ಮಾಡಿಸಿಕೊಳ್ಳುವಾಗ, ಪ್ಲಾಸ್ಮಾ ನಮ್ಮ ದೇಹ ಸೇರುವಾಗ ಹೆಣ್ಣು-ಗಂಡು-ಜಾತಿ-ಮತ-ಪಂಥ-ಗಡಿ-ಪಕ್ಷಗಳೆಂಬ ವಿಷಬೀಜಗಳು ನಮ್ಮನ್ನು ತಾಕಿದ್ದಿದೆಯೇ? ಮನೆಓಣಿಗಳಿಂದ ಹಿಡಿದು ಸಾಮಾಜಿಕ ಜಾಲತಾಣಗಳವರೆಗೆ ಈತನಕವೂ ನಮ್ಮ ‘ಅಸ್ತಿತ್ವ’ ಎನ್ನುವುದಕ್ಕೆ ಎಷ್ಟೆಲ್ಲ ರೂಪದಲ್ಲಿ ಕೃತ್ರಿಮ ಮತ್ತು ಪೊಳ್ಳುತನದ ಎಳೆಗಳನ್ನು ಜೋಡಿಸಿಕೊಳ್ಳುತ್ತಿದ್ದೇವೆ? ಇವೆಲ್ಲವೂ ದಾಖಲೆಯರೂಪದಲ್ಲಿ ಜಗದ್ವ್ಯಾಪಿಯಾಗಿ ನಮ್ಮನ್ನು ಮತ್ತಷ್ಟು ಬೆತ್ತಲೆಗೊಳಿಸುತ್ತವೆ ಎನ್ನುವ ಕನಿಷ್ಟ ಪ್ರಜ್ಞೆಯೂ ಇಲ್ಲದಂತೆ ವರ್ತಿಸುತ್ತಿರುವ ನಾವುಗಳು ಆತ್ಮಸಾಕ್ಷಿಯನ್ನು ಮಾರಿಕೊಂಡು ಹೊರಟಿದ್ದಾದರೂ ಎಲ್ಲಿಗೆ? ಸಹಜವಾಗಿ ನಾವೆಲ್ಲ ಬದುಕಿದ್ದೆವು. ಆದರೆ ಬರುಬರುತ್ತ ಅದು ಸಾಧ್ಯವಾಗುತ್ತಿಲ್ಲವೇಕೆ, ಸಮತೋಲನ ತಪ್ಪಿದ್ದೆಲ್ಲಿ? ನಿಜವಾದ ಜ್ಞಾನವರಸಿ ಹೊರಟಲ್ಲೆಲ್ಲ ರಾಜಕಾರಣದ ಕಮಟು. ಪ್ರೀತಿ-ಸಹಬಾಳ್ವೆಯ ಹಾದಿಯಲ್ಲೆಲ್ಲ ಅನುಮಾನ, ಪ್ರತಿಷ್ಠೆಯ ಅಡ್ಡಗೋಡೆ. ಹೀಗಿರುವಾಗ ಕಂಗೆಡಿಸುತ್ತಿರುವ ವಾಸ್ತವಕ್ಕೆ, ಪರಿಸ್ಥಿತಿಯ ಅಸಹಾಯಕತೆಗೆ ನೆನಪುಗಳೇ ನೇವರಿಕೆ, ಜೀವಕ್ಕೆ ಗುಟುಕು.  

ಇಂದಿನಿಂದ ಶುರುವಾಗುವ ‘ಏಸೊಂದು ಮುದವಿತ್ತು’ ಸರಣಿ ನಿಮ್ಮ ಓದಿಗೆ. ನಿಮ್ಮನ್ನು ವಿಚಲಿತಗೊಳಿಸುತ್ತಿರುವ ವರ್ತಮಾನದ ಯಾವ ಸಂಗತಿಗಳೂ ನಿಮ್ಮ ಬಾಲ್ಯವನ್ನು, ಕಳೆದ ಪರಿಸರವನ್ನು, ಪ್ರವಾಸಕ್ಕೆ ಹೋದ ಊರುಗಳ ವಾತಾವರಣವನ್ನು, ಇದಿರಾದ ವ್ಯಕ್ತಿಗಳ ಒಡನಾಟವನ್ನು, ಪ್ರಸಂಗಗಳನ್ನು ನೆನಪಿಸುತ್ತಿರಬಹುದು. ತಡ ಯಾಕೆ? ನಿಮ್ಮ ಬರಹದೊಂದಿಗೆ ಆಲ್ಬಮ್ಮಿಗಂಟಿರುವ ಫೋಟೋಗಳನ್ನು ಮೆಲ್ಲಗೆ ಹಾಳೆಗಳಿಂದ ಬಿಡಿಸಿ ಇಲ್ಲಿ ತೂರಿಬಿಡಿ  ಇ ಮೇಲ್ tv9kannadadigital@gmail.com

ಬೆಂಗಳೂರಿನಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ವಿಶಾಲಾ ಆರಾಧ್ಯ ಅವರು ಮಾಲೂರಿನಲ್ಲಿ ಭಕ್ತ ಸಿರಿಯಾಳ ಸಿನೆಮಾ ನೋಡಲು ಹೋದಾಗಿನ ಪ್ರಸಂಗದಿಂದ ಚಿನ್ನಮ್ಮನ ಸೊಪ್ಪಿನ ಪ್ರಸಂಗವನ್ನು ನೆನಪಿಸಿಕೊಳ್ಳಲು ಕಾರಣವೇನು? ಓದಿ.

*

ಕೆಲದಿನಗಳ ಹಿಂದೆ ಯಾವುದೋ ಲಿಂಕ್​ನಲ್ಲಿ ಓದಿದೆ. ಒಂದು ಹುಡುಗಿ ಒಬ್ಬ ಹುಡುಗನನ್ನು ಪ್ರೇಮಿಸಿ ಮದುವೆಯಾಗುವ ವಿಷಯದಲ್ಲಿ ತನ್ನ ಅಣ್ಣ ಅಡ್ಡಿಪಡಿಸಿದ ಎಂದು ಪ್ರೇಮಿಯೊಡಗೂಡಿ ತನ್ನ ಒಡಹುಟ್ಟಿದ ಅಣ್ಣನನ್ನು ಕೊಲೆಮಾಡಿ ಕಾರಿನಲ್ಲಿ ತುಂಡು ತುಂಡು ಮಾಡಿ ಎಸೆದ ಹೃದಯ ವಿದ್ರಾವಕ ಘಟನೆ. ಇಂಥದ್ದೇ ಇನ್ನೊಂದು ಪ್ರಕರಣ, ಅನ್ಯಧರ್ಮದ ಹುಡುಗನನ್ನು ಪ್ರೀತಿಸಿದ್ದ ತನ್ನ ತಂಗಿಯ ಪ್ರೇಮಕ್ಕೆ ಅಡ್ಡಿಪಡಿಸಿದ ಎಂಬ ಕಾರಣಕ್ಕೆ ಆ ಅನ್ಯ ಧರ್ಮದವನು ಪ್ರೇಯಸಿಯ ಅಣ್ಣನ ತಲೆಯನ್ನು ಹಾಡುಹಗಲೇ ನಡುರಸ್ತೆಯಲ್ಲಿ ಕತ್ತರಿಸಿದ ಅಮಾನವೀಯ ಘಟನೆ. ಇಂಥ ಸಾಲುಸಾಲು ಘಟನೆಗಳು ನಮ್ಮ ದೇಶದ ಯಾವುದ್ಯಾವುದೋ ಊರುಗಳಲ್ಲಿ ನಡೆಯುತ್ತಲೇ ಇರುವುದನ್ನು ಓದುತ್ತಲೂ ಇದ್ದೇವೆ, ನೋಡುತ್ತಲೂ ಇದ್ದೇವೆ. ಸಾಕಷ್ಟು ಪ್ರೇಮಪ್ರಕರಣಗಳಲ್ಲಿ ಹುಡುಗಿಯೇ ಮನೆಯವರಿಂದ ಹತ್ಯೆಗೊಳಗಾದ ಉದಾಹರಣೆಗಳಿವೆ. ಹಾಗೆ ಹುಡುಗನೂ. ಕೆಲವೊಮ್ಮೆ ಇಬ್ಬರೂ. ಇಂಥದನ್ನೆಲ್ಲಾ ಓದಿದಾಗ ಎದೆ ನಡುಗುತ್ತದೆ. ಇಂತಹ ಘಟನೆಗಳಿಗೆ ಈ ಕಾಲದಲ್ಲಿಯೂ ಕೊನೆಯೇ ಇಲ್ಲವೆ ಎಂದು ಬಹಳ ಬೇಸರವಾಗುತ್ತದೆ. ಕೊಲೆ ಮಾಡುವ ಮಟ್ಟಕ್ಕೆ ಮನಸ್ಸಿನಲ್ಲಿ ದ್ವೇಷ, ರೋಷ ಉಕ್ಕುತ್ತದೆ ಎಂದರೆ ಅದರ ಹಿಂದಿರುವ ಒತ್ತಡಗಳೇನು, ಎಡವಿದ್ದೆಲ್ಲಿ? ಎನ್ನುವುದು ಇದನ್ನು ಓದುತ್ತಿರುವ ನಿಮಗೂ ಅರ್ಥವಾಗುತ್ತದೆ ಎಂದು ಭಾವಿಸುವೆ.

ಮನುಷ್ಯನಿಗೆ ಆಗ ಹೆಚ್ಚು ವಿದ್ಯಾಭ್ಯಾಸವಿರಲಿಲ್ಲ. ತಿಳಿದವನೂ ಆಗಿರಲಿಲ್ಲ. ಬದುಕು ಪ್ರಶಾಂತವಾಗಿತ್ತು. ಈಗ ಪದವಿಗಳ ಮೇಲೆ ಪದವಿ ಪಡೆದರೂ ಮನುಷ್ಯ ಮನುಷ್ಯನಾಗಿ ಬದುಕಲು ಸಾಧ್ಯವಾಗುತ್ತಿಲ್ಲ. ಅವಿದ್ಯಾವಂತರ ವರ್ತನೆಗಳು ಒಂದು ರೀತಿ. ವಿದ್ಯಾವಂತರ ವರ್ತನೆಗಳೂ ಇದಕ್ಕೆ ಹೊರತಾಗಿಲ್ಲ.

Yesondu mudavittu

ಭಕ್ತಸಿರಿಯಾಳದಲ್ಲಿ ಆರತಿ, ಲೋಕೇಶ್.                                                  ಸೌಜನ್ಯ: ಸೈಬರ್​ಸ್ಕೇಪ್​ ಅಂಡ್ ಟೈಮ್

ನನಗಿನ್ನೂ ನೆನಪಿದೆ. ಭಕ್ತ ಸಿರಿಯಾಳ ಚಲನಚಿತ್ರವನ್ನು ಮಾಲೂರಿನಲ್ಲಿ ಹಾಕಿದ್ದರು. ಅದರ ಪ್ರಚಾರಕ್ಕೆ ಒಂದು ವ್ಯಾನ್ ತರಹ ಗಾಡಿ ಸುತ್ತಲೂ ಚಿತ್ರದ ಬ್ಯಾನರ್ ಕಟ್ಟಿಕೊಂಡು ಮುಂದೆ ಒಬ್ಬರು ಮೈಕ್ ಹಿಡಿದು ಕೂಗುತ್ತಿದ್ದರು. ‘ಅಕ್ಕ ತಂಗಿಯರೇ ಅಣ್ಣ ತಮ್ಮಂದಿರೇ, ನಿಮ್ಮ ನೆಚ್ಚಿನ ಚಿತ್ರಮಂದಿರದಲ್ಲಿ ಅದ್ಭುತ ನಟ ಲೋಕೇಶ್ ಮತ್ತು ಆರತಿ, ಬೇಬಿ ರೇಖಾ ನಟಿಸಿರುವ ಭಕ್ತ ಸಿರಿಯಾಳ ಚಿತ್ರ ಬಂದಿದೆ. ಮನೆ ಮಂದಿಯೆಲ್ಲಾ ಬಂದು ನೋಡಲು ಮರೆಯದಿರಿ. ಮರೆತು ನಿರಾಶರಾಗದಿರಿ…’ ಆಟದ ಬಯಲಿನಲ್ಲಿ ಆಟವಾಡುತ್ತಿದ್ದ ನಾವೆಲ್ಲಾ ನೊಣಗಳಂತೆ ಗಾಡಿಯ ಬಳಿಗೆ ಹಾರಿದೆವು. ಅವರು ಕೊಟ್ಟ/ಎಸೆದ ಭಿತ್ತಿಚಿತ್ರಗಳು ಹಿಡಿದು ಕುಣಿದಾಡಿದೆವು. ಕೆಲವರು ಮನೆಗಳಿಗೆ ಎತ್ತಿಕೊಂಡು ಒಯ್ದು ಕೊಟ್ಟರು. ಹಳ್ಳಿಯ ಬೀದಿ ಬೀದಿ ಹಂಚಿದ ಮೇಲೆ ಗಾಡಿ ಹೊರಟು ಹೋಗಿತ್ತು.

ಊರಿನ ಎಲ್ಲಾ ಜನರು ಒಂದೆಡೆ ಶಾಲೆಯ ಆವರಣದಲ್ಲಿ ಇದ್ದ ಧ್ವಜಸ್ತಂಭದ ಹತ್ತಿರ ಸೇರಿದರು. ಅಲ್ಲಿ ಎಲ್ಲರೂ ಮಾತನಾಡಿ ಚಲನಚಿತ್ರ ನೋಡಿಕೊಂಡು ಬರಲು ತೀರ್ಮಾನಿಸಿದ್ದರು. ಎಲ್ಲ ಮನೆಗಳಿಗೆ ಸುದ್ದಿ ಹೋಯಿತು. ಒಂದು ದಿನ ಸಂಜೆ ನಾಲ್ಕು ಎತ್ತಿನ ಗಾಡಿಗಳಲ್ಲಿ ಊರಿನ ಮುದುಕರು ಕೆಲವರನ್ನು ಬಿಟ್ಟು ಎಲ್ಲರೂ ಚಿತ್ರ ನೋಡಲು ಹೊರಟರು. ಬೇಡರ ನಾರಾಯಣಪ್ಪ, ಗೌಡರ ಕೃಷ್ಣಪ್ಪ, ಹೊಲೆಯರ ಶಾಮಣ್ಣ, ಗೊಲ್ಲರ ರಾಮಣ್ಣ, ರಾಮಾಚಾರಿ, ಮಾದಿಗರ ಪಾಪಣ್ಣ, ತಿಗಳರ/ಪಳ್ಳಿಗರ ಕದಿರಪ್ಪ, ಫಯಾಸ ಖಾನ್, ಆಸ್ಪತ್ರೆಯ ಕಾಂಪೌಂಡರ್ ಜೇಕಬ್ ಹೀಗೆ ಹಲವಾರು ಕುಟುಂಬಗಳ ಪ್ರಯಾಣ ಪೇಟೆಯೆಡೆಗೆ ನಾಲ್ಕು ಗಾಡಿಗಳಲ್ಲಿ ಹೊರಟಿತ್ತು. ನಾವು ಪುಟ್ಟಪುಟ್ಟ ಮಕ್ಕಳೆಲ್ಲಾ ಯಾರ ಯಾರ ತೊಡೆಯ ಮೇಲೆ ಕುಳಿತಿದ್ದೆವೋ ಗೊತ್ತಿಲ್ಲ. ಚಲನಚಿತ್ರ ನೋಡುವಾಗ ನಮಗೆಲ್ಲಾ ಯಾವುದೊ ಲೋಕಕ್ಕೆ ಹೋದ ಅನುಭವ. ಚಲನಚಿತ್ರ ನೋಡಿ ಎಲ್ಲರೂ ಅತ್ತಿದ್ದರು. ಭಕ್ತಿ ಪರವಶರಾಗಿದ್ದರು. ಚಿತ್ರ ನೋಡಿ ಬರುವಾಗ ಹಳ್ಳಿಯ ದಾರಿಯಲ್ಲಿ ಎತ್ತಿನ ಗಾಡಿಗಳು ಸಾಲು ಸಾಲು ಹೊರಟಿದ್ದವು. ಹಿಂದಿನ ಗಾಡಿಯಲ್ಲಿ ಕುಳಿತಿದ್ದ ಶಾಮಣ್ಣನ ಹಾಡು ಜೋರಾಗಿತ್ತು. ಮತ್ತೊಂದು ಗಾಡಿಯಲ್ಲಿ ನಗೆ ಚಟಾಕಿಗಳು… ನಾವು ಕುಳಿತಿದ್ದ ಗಾಡಿಯಲ್ಲಿ ಹಿರಿಯರು ತಾವು ಯಾವಾಗಲೋ ಕತ್ತಲೆಯಲ್ಲಿ ಪಯಣಿಸಿದಾಗ ದೆವ್ವಗಳನ್ನು ಕಂಡಿದ್ದರೆಂದೂ… ಅವುಗಳ ತಮ್ಮ ತಮ್ಮ ಅನುಭವಗಳನ್ನು ಒಬ್ಬರಿಗಿಂತ ಒಬ್ಬರು ರೋಚಕವಾಗಿ ಹಂಚಿಕೊಳ್ಳುತ್ತಿದ್ದರು. ಒಬ್ಬರು ‘ನಾನು ಕತ್ತಲೆಯಲ್ಲಿ ಬರುವಾಗ ಮರದ ಮೇಲೆ ಕಾಲು ಇಳಿ ಬಿಟ್ಟು ಕುಳಿತಿದ್ದ’ ಪಿಶಾಚಿಯ ಬಗ್ಗೆ ಹೇಳಿದರೆ, ಇನ್ನೊಬ್ಬರು ತಾನು ಮಧ್ಯರಾತ್ರಿ ಊರಿಂದ ಬರುವಾಗ ಸಹ ಪ್ರಯಾಣಿಕನಂತೆ ಬಂದು ಇದ್ದಕ್ಕಿದ್ದಂತೆ ಮಾಯವಾದ ಬಗ್ಗೆ, ಮತ್ತೊಬ್ಬರು ಒಂದು ಹೆಣ್ಣು ‘ಅಣ್ಣಾ ಸೌದೆ ಹೊರೆ ಹೊರೆಸು ಬಾ ತುಂಬಾ ಭಾರವಾಗಿದೆ’ ಎಂದು ಕರೆದುಕೊಂಡು ಹೋಗಿ ಮಾಯವಾದ ಬಗ್ಗೆ ಹೇಳುತ್ತಿದ್ದರೆ… ನಾನು ನನ್ನ ತಂಗಿ ಅಣ್ಣ, ತಮ್ಮ, ಭಯದಿಂದ ಮುದುರಿ ಮಲಗಿದ್ದೆವು. ನಾನೆಂಬ ಹಮ್ಮಿಲ್ಲದ, ನೀನೆಂಬ ಕೀಳಿಲ್ಲದವರು. ಊರಿಗೂರೇ ಹೊರಗೆ ಹೋದರೂ ಕಳ್ಳತನದ ಭಯವಿರಲಿಲ್ಲ. ಎಲ್ಲರೂ ಅವರವರ ಮನೆತನಕ್ಕೆ ಬಂದ ಕಸುಬುಗಳನ್ನು ಶ್ರದ್ಧೆಯಿಂದ ಪರಸ್ಪರ ಗೌರವಿಸುತ್ತಾ ಸಾಗುತ್ತಿದ್ದ ಆ ಹೃದಯವಂತರು ಎತ್ತ ಹೋದರು?

ನನಗೆ ಸೈಕಲ್ ತುಳಿಯಲು ಕಲಿಸಿದ್ದು ಸೋದರ್ ಇಲಿಯಾಸ್. ನನಗೆ ಬಟ್ಟೆ ತೊಳೆಯಲು ಕಲಿಸಿದ ಮುನ್ನಾ ಹೊಲಗೇರಿಯ ಹುಡುಗಿಯಾಗಿದ್ದಳು. ಅವಳು ಬಟ್ಟೆ ತೊಳೆಯಲು ಕೆರೆಗೆ ಹೋದಾಗ ನನ್ನನ್ನೂ ಒಣಹಾಕಲು ಕರೆದುಕೊಂಡು ಹೋಗುತ್ತಿದ್ದಳು. ಕೆಲಸ ಆದ ನಂತರ ಬಟ್ಟೆ ಒಣಗುವವರೆಗೂ ಕೆರೆಯ ಏರಿಯ ಮೇಲೆ ನನ್ನನ್ನು ಬೆನ್ನ ಮೇಲೆ ಉಪ್ಪು ಕೂಸು ಮಾಡಿಕೊಂಡು ಓಡುತ್ತಾ ನನಗೆ ಭಯಪಡಿಸಿ ತಾನೂ ನಗುತ್ತಿದ್ದಳು. ರಜೆಯಿದ್ದಾಗ ಎಮ್ಮೆ ಕಾಯಲು ಅವಳೊಡನೆ ನನ್ನನ್ನು ಕರೆದುಕೊಂಡು ಹೋಗಿ ಎಮ್ಮೆಯ ಮೇಲೆ ಕೂಡಿಸಿಕೊಂಡು ಸವಾರಿ ಮಾಡಿಸುತ್ತಿದ್ದಳು. ಡಾ. ರಾಜ್ಕುಮಾರ್ ಹಾಡು ‘ಯಾರೇ ಕೂಗಾಡಲು… ಊರೇ ಹೋರಾಡಲಿ’ ಎಂದು ಜೋರಾಗಿ ಹಾಡಿತೋರಿಸಿ ‘ನಿಂಗ್ ಈ ಹಾಡು ಗೊತ್ತಿತ್ತಾ?’ ಅಂತ ಕೇಳುತ್ತಿದ್ದಳು. ನನ್ನ ಪಾಲಿಗೆ ಅವಳೇ ಹೀರೋಯಿನ್ ಆಗಿದ್ದಳು. ಟೆಂಟ್ನಲ್ಲಿ ಸಿನೇಮಾ ನೋಡಿಕೊಂಡು ಬಂದು ಪೂರ ಕಥೆ ಹೇಳುತ್ತಿದ್ದಳು. ಮನೆಯಲ್ಲಿ ನಾವೆಲ್ಲರೂ ಅವಳು ಹೇಳುವ ಸ್ಟೋರಿ ಆಸಕ್ತಿಯಿಂದ ಕೇಳುತ್ತಿದ್ದೆವು. ಪೇಟೆಯಿಂದ ಹೊಸ ಬಳೆ, ಕಿವಿಓಲೆ ತಂದು ಹಾಕಿಕೊಂಡು ತೋರಿಸುತ್ತಿದ್ದಳು. ಮನೆಯಲ್ಲಿ ಮಾತು ಮಾತಿಗೂ ಮುನ್ನಾ ಮುನ್ನಾ ಅಂತ ಕರೆಯುತ್ತಾ ಆಕೆ ಮನೆ ಮಗಳಂತೆ ಹೊಂದಿಕೊಂಡಿದ್ದಳು.

Yesondu mudavittu

ಸೌಜನ್ಯ : ಅನ್​ಸ್ಪ್ಲ್ಯಾಶ್​

ಅಪ್ಪ ಎಂದರೆ ಊರಿನ ಎಲ್ಲರೂ ಗೌರವಿಸುತ್ತಿದ್ದರು. ಶಾಲೆಯ ಎಲ್ಲಾ ಮಾಸ್ಟರಗಳೂ ಊರಿಗೆ ಅಚ್ಚುಮೆಚ್ಚಾಗಿದ್ದರು. ‘ಅನೇಕತಾ ಮೇ ಏಕತಾ’ ಎಂಬಂತೆ ಊರಿನ ಮನಸ್ಸುಗಳಿದ್ದವು. ನಮ್ಮ ಊರೊಂದೇ ಅಲ್ಲ ಎಲ್ಲ ಹಳ್ಳಿಗಳೂ ಒಂದೇ ಪರಿಸರವನ್ನು ಹೊಂದಿದ್ದವು. ರಾಜಕೀಯವಾಗಿ ಎರಡೇ ಪಕ್ಷಗಳಿದ್ದವು. ಒಂದು ಜನತಾ ಮತ್ತೊಂದು ಕಾಂಗ್ರೆಸ್, ಅಷ್ಟೇ. ಎರಡೂ ಪಕ್ಷಗಳು ಭ್ರಾತೃಗಳಂತಿದ್ದವು. ಕಚ್ಚಾಟವಿಲ್ಲ, ಹೊಡೆದಾಟವಿಲ್ಲ, ಓಲೈಕೆಯಿಲ್ಲ, ಒಬ್ಬರಿಗೊಬ್ಬರು ಬೆನ್ನು ತಟ್ಟುತ್ತಾ ಪರಸ್ಪರ ಪ್ರೋತ್ಸಾಹಿಸೋ ಗುಣಗಳಿದ್ದವು.

ಒಮ್ಮೆ ಮುನ್ನಾ ಅವರ ಮನೆಯ ಹಿತ್ತಲಿನಲ್ಲಿ ಸೊಪ್ಪು ಬೆಳೆದಿರುವ ವಿಷಯ ಮುನ್ನಾಳ ಅಮ್ಮನಿಂದ ನಮ್ಮಮ್ಮನಿಗೆ ಗೊತ್ತಿತ್ತು ನನಗೆ ದುಡ್ಡು ಕೊಟ್ಟು ಸೊಪ್ಪು ತರಲು ಕಳಿಸುತ್ತಿದ್ದಳು. ಸೊಪ್ಪು ತರಲು ಅವರ ಮನೆಯ ಹತ್ತಿರ ಹೋದೆನು. ಮನೆಯ ಬಾಗಿಲಲ್ಲಿ ನಿಂತು ಒಳಗೆ ಇಣುಕಿದೆ. ಮುನ್ನಾ ಎಂದೆ. ಯಾರದೂ? ಎಂದಳು ಒಳಗಿನಿಂದ. ‘ನಾನು’ ಎಂದೆ. ಕಣಜದ ಪಕ್ಕದಿಂದ ಬಾಗಿಲೆಡೆ ಇಣುಕಿದ ಅವಳು ’ಏನು ಅಮ್ಮಣ್ಣಿ’ ಎಂದಳು. ನಾನು ’ಸೊಪ್ಪು ಬೇಕು’ ಅಂದೆನು. ’ಇರು ನಮ್ಮಮ್ಮನು ಎಲ್ಲೋ ಹೋಗವ್ಳೆ ಬತ್ತಾಳೆ’ ಎಂದಳು. ‘ನೀನು ಏನ್ ಮಾಡ್ತಿದೀಯ’ ಎಂದು ಒಳಗೆ ನಡೆದೆ. ಅವಳು ನಿಲ್ಲು… ಬರಬೇಡ ಎಂದಳು. ನಾನು ಕಾಲು ತಡೆದೆ ಸುತ್ತಮುತ್ತ ನೋಡಿದೆ. ಯಾಕೆ ಎಂದೆ. ’ಹುಹೂ ಬರಕೂಡದು’ ಎಂದಳು. ನಾನೂ ಬಿಡದೆ ಒಳಗೆ ಹೋದೆ. ಅವಳು ಊಟ ಮಾಡುತ್ತಿದ್ದಳು ಬಿಸಿ ಬಿಸಿ ಮುದ್ದೆ ಮತ್ತು ಮಸ್ಸೊಪ್ಪು. ನಾನು ಯಾಕೆ ಬರಕೂಡದೇಂದಿದ್ದು ಎಂದೆ. ಅವಳು ಊಟ ಮಾಡಿದ ಕೈ ನೆಕ್ಕುತ್ತಾ ಗೊತ್ತಿಲ್ಲ ಬರಕೂಡದಷ್ಟೇ. ನಮ್ಮಮ್ಮ ಯಾರನ್ನೂ ಸೇರಸಲ್ಲ ಎಂದಳು. ನನಗೆ ಹಸಿವಾಗಿತ್ತು ‘ನಾನೂ ಊಟ ಮಾಡಲೇನೇ ಮುನ್ನ’ ಎಂದೆ. ಅಷ್ಟರಲ್ಲಿ ಅವರ ಅಮ್ಮ ಬರುವ ಸದ್ದಾಗಿತ್ತು. ‘ನೀ ಆಚೆ ಹೋಗು ಹೋಗು’ ಎಂದಳು ನಾನು ಬೇಸರ ಮತ್ತು ಅನುಮಾನದಿಂದ ನಿಧಾನವಾಗಿ ಹೊರಗಡೆ ಬರುವುದಕ್ಕೂ ಅವರ ಅಮ್ಮ ಎದುರು ಬರುವುದಕ್ಕೂ ಸರಿಯಾಗಿತ್ತು. ನನ್ನನ್ನು ಕಂಡು ಅವರ ಅಮ್ಮ ಬಾಯಿಬಡಿದುಕೊಂಡು ‘ಲೇ ಮುನ್ನಾ ಎಲ್ಲಿದ್ದೀಯೇ? ಅಂದು ‘ಅಮ್ಮಣ್ಣಿ ಯಾಕ್ ಒಳಕ್ ಬಂದಿದ್ದು? ಅಯ್ಯೋ ಕರ್ಮ’ ಎಂದಳು. ನಾನು ಏನೂ ಅರಿಯದೆ ‘ಯಾಕೆ ಏನಾಯಿತು ಚಿನ್ನಮ್ಮ ? ಸೊಪ್ಪು ಬೇಕೆಂದು ಅಮ್ಮ ಹೇಳಿದ್ದಾಳೆ’ ಎಂದೆ. ‘ಬಾ ತಾಯಿ’ ಎಂದು ಕರೆದು ಕೈತೋಟಕ್ಕೆ ನಡೆದಳು. ನಾನೂ ಅವಳ ಹಿಂದೆ ನಡೆದೆ. ಸೊಪ್ಪಿನ ಮಡಿಗಳ ಬಳಿ ಕೂತು ಕುಡಗೋಲಿನಿಂದ ಸೊಪ್ಪು ಎಡಗೈಲಿಡಿದು ಬಲಗೈಯ್ಯಲ್ಲಿ ಕುಂಯ್ಯುತ್ತಾ … ‘ನಾವೂ ಹಾಳೂ ಮೂಳು ತಿನ್ನವ್ರೂ ನೀವು ಒಳಗಡೀಕೆ ಬರಬಾರದು. ನಮಗೂ ಒಳ್ಳೇದಲ್ಲಾ ನಿಮಗೂ ಒಳ್ಳೇದಲ್ಲಾ’ ಎಂದಳು. ನನಗೇ ಅರ್ಥವಾಗದೆ ‘ನಾವೂ ಸೊಪ್ಪು ತಿಂತೀವಲ್ಲಾ ಅಂದೆ’ ಆಕೆ ತಲೆ ಚಚ್ಚಿಕೊಂಡಳು. ಸೊಪ್ಪನ್ನು ಕುಯ್ದು ತನ್ನ ಸೆರಗಿನ ಮಡಿಲಿಗೆ ಹಾಕಿಕೊಳ್ಳುತ್ತಿದ್ದಳು. ತುಂಬಾ ಕುಯ್ದನಂತರ ‘ನಡೀ ನಾನೂ ಬತ್ತೀನಿ’ ಎಂದು ನನ್ನೊಡನೆ ಮನೆಗೆ ಬಂದಳು.

ತಾಂಬೂಲ ಮೆಲ್ಲುತ್ತಿದ್ದ ಚಿನ್ನಮ್ಮನ ಸುತ್ತಾ ಅದರದೇ ಘಮಲು. ಈಗಲೂ ತಾಂಬೂಲದ ವಾಸನೆ ಬಂದರೆ ಅವಳೇ ನೆನಪಾಗುತ್ತಾಳೆ. ಮನೆಯ ಅಂಗಳದಲ್ಲಿ ಕೂತು ‘ಹೋಗು ಮೊರ ತತ್ತ’ ಎಂದಳು. ಮೊರ ತಂದು ಆಕೆಯ ಮುಂದೆ ಹಿಡಿದೆ. ಅಮ್ಮ ಹೊರಗೆ ಬಂದು ಸೊಪ್ಪು ಮುಟ್ಟಿ ‘ಎಷ್ಟು ಚೆನ್ನಾಗಿದೆ ಚಿನ್ನಿ ಸೊಪ್ಪು’ ಎಂದು ಮೆಚ್ಚುಗೆ ಸೂಚಿಸಿದಳು. ಚಿನ್ನಮ್ಮ ಆಕಡೆ ಈಕಡೆ ನೋಡಿ ಯಾರೂ ಇಲ್ಲದ್ದು ನೋಡಿ ‘ಅಗಳೀ… ಅಮ್ಮ, ನಿಮ್ಮ ಮಗಳು ನಮ್ಮ ಮನೆ ಒಳೀಕೆ ಬಂದುಬುಟ್ಟಿತ್ತು. ಮುನ್ನಾ ಒಳಗಿದ್ದಳು ಅದಕ್ಕೂ ಗೊತ್ತಿಲ್ಲ. ಇದಕ್ಕೂ ಗೊತ್ತಿಲ್ಲ ನಂದೇನೂ ತಪ್ಪಿಲ್ಲ ನಾನೂ ಇರನಿಲ್ಲಾ’ ಎಂದಳು. ಅಮ್ಮ ನಕ್ಕು ‘ಹೋಗಲಿ ಬಿಡೇ ಚಿನ್ನಮ್ಮ. ಏನಾಗೋಲ್ಲ. ಇವೆಲ್ಲಾ ಜನರು ಮಾಡಿರೋದು’ ಎಂದರು. ‘ಎಲ್ಲೂ ಯೋಳಬ್ಯಾಡಿ ಅಯ್ಯನವರ ಎದುರು ಮದ್ಲೇಳಬ್ಯಾಡಿ ಅಟ್ಟೇಯಾ’ ಅಂತ ಹೊರಟವಳಿಗೆ ಅಮ್ಮ, ‘ಕಸ ಕಡ್ಡಿ ಆರಿಸಿ ಸ್ವಚ್ಛ ಮಾಡಿಕೊಡು ಚಿನ್ನಮ್ಮ. ಬಿಸ್ಲು ಜೋರಿದೆ ಮೊದಲು ನೀರು ಕುಡಿ’ ಎಂದಿದ್ದರು.

Yesondu mudavittu

ಸೌಜನ್ಯ : ಓಲ್ಡ್​ ಫಾರ್ಮರ್ಸ್​ ಅಲ್ಮನ್ಯಾಕ್

ಆಂಜನೇಯ ಗುಡಿಯ ಹತ್ತಿರ ಆಟವಾಡಲು ಹೋದರೆ ಹುಸೇನ್ ಸಾಬ್ ‘ದೇವಸ್ಥಾನದ ಬಳಿ ಗಲೀಜು ಮಾಡಬೇಡಿ, ಹೋಗಿ ಬೇರೆಡೆ ಆಡಿಕೊಳ್ಳಿ’ ಎಂದು ನಮ್ಮನ್ನು ಅಟ್ಟುತ್ತಿದ್ದರು. ಸಂಜೆ ಮಸೀದಿಯಲ್ಲಿ ಆಝಾನ್ ಕರೆಯುವ ಹೊತ್ತಿಗೆ ಪುಟ್ಟಮಕ್ಕಳನ್ನು ಎತ್ತಿಕೊಂಡು ಮಸೀದಿಯ ವರಾಂಡದ ಗೋಡೆಗೆ ಒರಗಿನಿಂತು ‘ಚೂ…ವ್ ಚೂ..ವ್’ ಎಂದು ಅವರ ಉಸಿರು ತಾಗಿದರೆ ಯಾವುದೇ ದೆವ್ವ, ಕಾಯಿಲೆ ಬರದು ಎಂಬ ನಂಬಿಕೆಯಿಂದ ಮಂತ್ರ ಹಾಕಿಸಿಕೊಂಡು ಬರುತ್ತಿದ್ದೆವು. ನೋಡು ನೋಡುತ್ತಿದ್ದಂತೆ ಜನರಲ್ಲಿ ಏನಾಯಿತು? ಯಾರು ಬಿತ್ತಿದರು ಮೇಲು-ಕೀಳಿನ, ದಲಿತ-ಬಲಿತ, ಧರ್ಮ-ಅಧರ್ಮಗಳೆಂಬ ದ್ವೇಷದ ವಿಷದ ಬೀಜಗಳನ್ನು? ಆಗಲೂ ಉತ್ತಮ ಚಲನೆಯಿತ್ತು. ಮತ್ತ್ಯಾವ ಪ್ರಗತಿ ಸಾಧಿಸಲು ಜನ ಬದಲಾದರು? ಅಂದು ಇದ್ದವರೂ ಮನುಷ್ಯರೇ ಈಗಲೂ ಅದೇ ಮನುಷ್ಯರೇ. ಆದರೆ ಭಾವಗಳೇಕೆ ಭಿನ್ನವಾದವು, ವ್ಯಘ್ರವಾದವು, ಮನಸ್ಸಿನಲ್ಲೇಕೆ ಗೋಡೆಗಳೆದ್ದವು? ಎಲ್ಲಿ ಹೋಯಿತು ಮನದ ಸೇತುವೆ? ಯಾರ ಸ್ವಾರ್ಥದ ಕೊಡಲಿ ಕಡಿಯಿತು ಸೌಹಾರ್ದತೆಯ ಸೇತುವೆಯನ್ನು? ಅಂದಿನ ಜ್ಞಾನ ಏನಾಯಿತು? ಬೆಳೆಸಿದ ವಿಜ್ಞಾನ ಜ್ಞಾನವನ್ನು ನುಂಗಿ ಹಾಕಿತೇ?

*

ಪರಿಚಯ: ಕವಯತ್ರಿಯಾಗಿ ಕನ್ನಡಸಾಹಿತ್ಯದಲ್ಲಿ ಗುರುತಿಸಿಕೊಂಡು ಹಲವು ಪ್ರಾಕಾರದ ಸಾಹಿತ್ಯ ರಚನೆಯಲ್ಲಿ ತೊಡಗಿರುವ ಶಿಕ್ಷಕಿ ವಿಶಾಲಾ ಆರಾಧ್ಯ ಅವರು ಕನ್ನಡ ಎಂ. ಎ. ಪದವೀಧರರು. ಮೂಲತ: ಬೆಂಗಳೂರಿನವರಾದ ಇವರು ಸಮಾಜದ ಸಮಸ್ಯೆಗಳು, ಮನುಷ್ಯನ ಸಂಬಂಧಗಳು, ಮಕ್ಕಳ ಒಳಮನಸ್ಸನ್ನು ಒಳಹೊಕ್ಕು ನೋಡುವ ದೃಷ್ಠಿಯುಳ್ಳವರು. ಮೂವತ್ತು ವರ್ಷಗಳಿಂದ ಅಕ್ಷರಲೋಕದ ಒಡನಾಟದಲ್ಲಿರುವ ಇವರ ಸಾಹಿತ್ಯ ಅನೇಕ ಪತ್ರಿಕೆ, ವಾರಪತ್ರಿಕೆ, ಮಾಸಿಕಗಳಲ್ಲಿ ಪ್ರಕಟವಾಗಿದ್ದರೂ ಅವರ ಮೊದಲ ಪುಸ್ತಕ ಬಿಡುಗಡೆಯಾಗಿದ್ದು 2017 ರಲ್ಲಿ. ಇದುವರೆವಿಗೂ ಐದು ಪುಸ್ತಕಗಳು ಪ್ರಕಟಗೊಂಡಿವೆ. ‘ಕಸಾಪ’ ದ ದತ್ತಿ ಮತ್ತು ‘ಕಲೇಸಂ’ ನ ದತ್ತಿ ಪ್ರಶಸ್ತಿಗಳಿಗೆ ಭಾಜನವಾಗಿವೆ.

ಇದನ್ನೂ ಓದಿ : Women Empowerment; ನಾನೆಂಬ ಪರಿಮಳದ ಹಾದಿಯಲಿ: ಇನ್ನಾದರೂ ನಿಲ್ಲಿಸುವಿರೇ ಹೂ ಅರಳಿದ್ದಕ್ಕೆ ಸಾಕ್ಷಿ ಹುಡುಕುವುದನ್ನು