Humanity; ಅಪ್ಪನಾಗುವುದೆಂದರೆ: ‘ಹುಟ್ಟಿಸಿದವರನೆಲ್ಲ ಓದಿಸುತ್ತೇನೆಂದು ಬರೆದುಕೊಟ್ಟಿದ್ದೇನೇನು?’ ಅಪ್ಪ ಅಪರಿಚಿತನೇ ಆಗಿಬಿಟ್ಟ…

Humanity; ಅಪ್ಪನಾಗುವುದೆಂದರೆ: 'ಹುಟ್ಟಿಸಿದವರನೆಲ್ಲ ಓದಿಸುತ್ತೇನೆಂದು ಬರೆದುಕೊಟ್ಟಿದ್ದೇನೇನು?' ಅಪ್ಪ ಅಪರಿಚಿತನೇ ಆಗಿಬಿಟ್ಟ...
ಹಸಿರು ಹೊನ್ನೂರಿನಲ್ಲಿ ಅಲೆಮಾರಿಗಳಿಗಾಗಿ ಕಟ್ಟಿದ ಮನೆಗಳೊಂದಿಗೆ, ಮಗುವಿನೊಂದಿಗೆ ಸ. ರಘುನಾಥ

‘ಇಪ್ಪತ್ತೆಂಟು ವರ್ಷಗಳಲ್ಲಿ ‘ನಮ್ಮ ಮಕ್ಕಳು’ ಅಪ್ಪಿಕೊಂಡ ಮಕ್ಕಳ ಸಂಖ್ಯೆ ಹೇಳಿದರೆ ಪ್ರಚಾರಕ್ಕಾಗಿ ಎಂದಾಗಿಬಿಡಬಹುದೆಂಬ ಭಯದಿಂದಾಗಿ ನಾನು ಹೇಳುವುದಿಲ್ಲ. ಈಗಿರುವ ಹದಿಮೂರು ಮಕ್ಕಳ ಪರಿಚಯವನ್ನೂ ಹೇಳಲಾರೆ. ಮಕ್ಕಳು ತಮ್ಮ ಕಾಲಮೇಲೆ ತಾವು ನಿಂತ ನಂತರ ಅವರ ಸಂಪರ್ಕವನ್ನೂ ಕಡಿಕೊಂಡುಬಿಡುತ್ತೇನೆ. ಅವರು ತಂದೆಯೆಂದೇ ಭಾವಿಸಿರುವುದರಿಂದ ನನ್ನಿಂದಲೇ ಅವರು ಈ ಸ್ಥಿತಿಗೆ ತಲುಪಿದ್ದಾರೆ ಎಂಬ ಅಹಂಭಾವ ಬರಬಾರದೆಂಬ ಎಚ್ಚರಿಕೆ ನನ್ನದು. ಯಾವ ತಂದೆ ತನ್ನ ಮಕ್ಕಳ ಉದ್ಧಾರಕನೆಂದು ಅಹಂಕಾರ ತಳೆಯುತ್ತಾನೆ?‘ ಸ. ರಘುನಾಥ

ಶ್ರೀದೇವಿ ಕಳಸದ | Shridevi Kalasad

| Edited By: ganapathi bhat

Feb 24, 2021 | 7:20 PM

ಪ್ರಿಯ ಅಪ್ಪಂದಿರೇ, ಎರಡು ತಲೆಮಾರುಗಳ ಮಧ್ಯೆ ನೀವಿದ್ದೀರಿ. ಬೆನ್ನ ಹಿಂದೆ ನಿಮ್ಮ ಅಪ್ಪ-ಅಮ್ಮ, ಕಣ್ಣ ಮುಂದೆ ನಿಮ್ಮದ ಮಕ್ಕಳು-ಕುಟುಂಬ. ನೀವು ಸಾಗಿಬಂದ, ಸಾಗಿಬರುತ್ತಿರುವ ಹಾದಿಯಲ್ಲಿ ಯಾವುದೇ ನೆನಪುಗಳು ಕೈಮಾಡಿ ನಿಲ್ಲಿಸಬಹುದು. ವಾಸ್ತವ ಸಂಗತಿಗಳು ಕಾಲಿಗೆ ಚಕ್ರ ಕಟ್ಟಲು ನೋಡಬಹುದು. ಈ ಎರಡರ ಮಧ್ಯೆ ಹೃದಯ-ಮೆದುಳು ಗುದ್ದಾಟಕ್ಕೆ ಬಿದ್ದಿರಬಹುದು, ಬಿದ್ದರೂ ನಾವು ನಡೆದಿದ್ದೇ ಹಾದಿ ಎಂದೂ ಸಾಗುತ್ತಿರಲೂಬಹುದು. ಹೀಗೆ ನೀವು ಸಾಕಷ್ಟು ವಿಧದಲ್ಲಿ ಆಂತರಿಕವಾಗಿ ಬೆಳೆದಿದ್ದೀರಿ, ಬೆಳೆಯುತ್ತಲೂ ಇದ್ದೀರಿ. ಹಾಗಿದ್ದರೆ ಅಪ್ಪನಾಗುತ್ತಿದ್ದಂತೆ ನಿಮ್ಮೊಳಗಿನ ನೀವು ರೂಪಾಂತರಕ್ಕೆ ಒಳಗಾದಿರೇ? ಅಪ್ಪನಾಗುವುದೆಂದರೆ ಅನುಭವವೇ, ಅವಕಾಶವೇ, ಆದರ್ಶವೇ, ಅನಿವಾರ್ಯವೇ, ಜವಾಬ್ದಾರಿಯೇ, ಸಹಜ ಪ್ರಕ್ರಿಯೆಯೆ ಅಥವಾ ಇದ್ಯಾವುದೂ ಅಲ್ಲವಾಗಿದ್ದರೆ ಇನ್ನೂ ಏನೇನು? ಒಮ್ಮೆ ಹಿಂತಿರುಗಿ ನೋಡಬಹುದೆ ಎಂದು ಕೆಲ ಅಪ್ಪಂದಿರಿಗೆ ‘ಟಿವಿ9 ಕನ್ನಡ ಡಿಜಿಟಲ್’ ಕೇಳಿತು. ಇದೋ ಹೊಸ ಸರಣಿ ‘ಅಪ್ಪನಾಗುವುದೆಂದರೆ’ ಇಂದಿನಿಂದ ಪ್ರಾರಂಭ.

ನಿಮಗೂ ಈ ಸರಣಿಯಲ್ಲಿ ಪಾಲ್ಗೊಳ್ಳಬೇಕು ಎನ್ನಿಸಿದರೆ ದಯವಿಟ್ಟು ಬರೆಯಿರಿ. ಕನಿಷ್ಟ 1000 ಪದಗಳಿರಲಿ, ನಾಲ್ಕೈದು ಭಾವಚಿತ್ರಗಳು ಮತ್ತು ಸ್ವವಿವರವೂ ಇರಲಿ. ಇ- ಮೇಲ್ tv9kannadadigital@gmail.com ಪರಿಕಲ್ಪನೆ: ಶ್ರೀದೇವಿ ಕಳಸದ

‘ನಮ್ಮ ಮಕ್ಕಳು’ ಈ ಆಪ್ತಅಂಗಳದಲ್ಲಿ ಈ ತನಕ ಆಡಿ ಬೆಳೆದು ತಂತಮ್ಮ ಬದುಕು ಕಟ್ಟಿಕೊಂಡವರು ಒಟ್ಟು 129 ಜನ; ಈ ಅಂಕಿ ಸಂಖ್ಯೆಯನ್ನೆಲ್ಲ ಹೇಳುವುದು ಬೇಡವೆಂದು ವಿನಂತಿಸಿಕೊಂಡ ಶಿಕ್ಷಕ, ಸಮಾಜಜೀವಿ, ಲೇಖಕ, ಅನುವಾದಕ ಮತ್ತು ಮೊನ್ನೆಯಷ್ಟೇ ಮಾಸ್ತಿ ಪ್ರಶಸ್ತಿಗೆ ಆಯ್ಕೆಯಾದ ಸ. ರಘುನಾಥ ಅವರ ಮಾತನ್ನು ಈ ಸರಣಿಯಲ್ಲಿ ‘ಮುದ್ದಾಮ್’ ಮುರಿಯಲಾಗಿದೆ. ಸದ್ಯ ಚಿಕ್ಕಬಳ್ಳಾಪುರದಲ್ಲಿ ವಾಸಿಸುತ್ತಿರುವ ಅವರು, ‘ಕಾಯಂ ವಿಳಾಸ ಬೇಕೆಬೇಕೆ?’ ಎಂದು ವಿನಮ್ರವಾಗಿ ಪ್ರಶ್ನಿಸುವ ಹಿನ್ನೆಲೆ ಏನಿರಬಹುದು? ಓದಿ…

ಹುಟ್ಟಿದ ಮೂರು ತಿಂಗಳಿಗೇ ಅಜ್ಜಿ ತಾತನ (ತಾಯಿಯ ತಂದೆ, ತಾಯಿ) ಮಡಿಲುಸೇರಿ, ಇವನು ಅಪ್ಪ ಎಂದು ಗುರುತಿಸುವ ವಯಸ್ಸು ಬರುವ ಕಾಲಕ್ಕೆ ಅಪ್ಪನಿರಬೇಕಿದ್ದ ಮನಸ್ಸಿನಲ್ಲಿ ತಾತನನ್ನು ತುಂಬಿಕೊಂಡವನು ನಾನು. ಇದೀಗ ನಡೆದಂತೆ ಎದೆಯಲ್ಲಿ ಆ ದೃಶ್ಯವಿದೆ. ಆಗ ನನಗೆ ಮೂರು ನಾಲ್ಕು ವರ್ಷವಿದ್ದೀತು. ರಾತ್ರಿ ಇಬ್ಬರು ಮನೆಗೆ ಬಂದರು. ಅಡುಗೆ ಮನೆಯಲ್ಲಿ ಕುಳಿತರು. ಅವರಿಗೆ ಕೊಂಚ ದೂರದಲ್ಲಿ ತಾತ. ಅಜ್ಜಿ ಅಡುಗೆ ಮಾಡುತ್ತಿದ್ದಳು. ನಾನು ತಾತನ ಪಕ್ಕದಲ್ಲಿದ್ದೆ. ನಿನ್ನ ಅಪ್ಪ ಅಮ್ಮ ಇವರು, ಹೋಗು ಎಂದಳು ಅಜ್ಜಿ. ನಾನು ಹೋಗಿ ಅಜ್ಜಿಯ ಬೆನ್ನಹಿಂದೆ ನಿಂತೆ. ಅಜ್ಜಿ ಹೇಳಿದ ಅಪ್ಪನಾಗಲಿ ಅಮ್ಮನಾಗಲಿ ಬಳಿಗೆ ಕರೆಯಲಿಲ್ಲ. ಮುಂದೆಂದೂ ನನಗೆ ಅಪ್ಪನ ಸ್ಪರ್ಶವಾಗಲೇ ಇಲ್ಲ.

ದಿನಗಳೆದಂತೆ, ನನ್ನ ಅಪ್ಪ ಇವನೇ ಎಂದು ಮನವರಿಕೆಯಾದರೂ ಆತ ನನ್ನ ಮನಸ್ಸಿನ ಒಂದು ಕಿರುಮೂಲೆಯಲ್ಲಿಯೂ ಅಪ್ಪನಾಗಿ ಸ್ಥಾಪಿತನಾಗಲಿಲ್ಲ. ಏಕೆಂದರೆ ಅವನ ಪ್ರವೇಶಕ್ಕೆ ಕಿಂಚಿತ್ತೂ ಎಡೆಯಿಲ್ಲದಂತೆ ತಾತ ಆವರಿಸಿಕೊಂಡಿದ್ದ. ಅಮ್ಮನಿಗೂ ಅಷ್ಟೇ. ಅಜ್ಜಿಯನ್ನು ಕೊಂಚವಾದರೂ ಪಕ್ಕಕ್ಕೆ ಸರಿಸಿ ಅಮ್ಮನಿಗೆ ಜಾಗ ಮಾಡಿಕೊಡಲು ನನ್ನಿಂದಾಗಲೇ ಇಲ್ಲ.

ತಾತ ಮರಣಿಸಿ, ಅಜ್ಜಿ ಮಗನ ಆಶ್ರಯಕ್ಕೆ ಹೋದ ನಂತರ ಅನಾಥನೇ ಆದೆ. ಫೇಲಾಗಿ ಫೇಲಾಗಿ ಹತ್ತನೆಯ ಇಯತ್ತೆ ಪಾಸು ಅನ್ನಿಸಿಕೊಂಡು, ಅನಿವಾರ್ಯವಾಗಿ ಅಪ್ಪನಲ್ಲಿಗೆ ಹೋಗಿ ಮುಂದಕ್ಕೆ ಓದಿಸುವಂತೆ ಕೇಳಿದಾಗ, ‘ಹುಟ್ಟಿಸಿದವರನೆಲ್ಲ ಓದಿಸುತ್ತೇನೆಂದು ಬರೆದುಕೊಟ್ಟಿದ್ದೇನೇನು?’ ಅಂದ ಅಪ್ಪ ಅಪರಿಚಿತನೇ ಅಗಿಬಿಟ್ಟ. ಅಲ್ಲಿಗೆ ನನ್ನ ವಿದ್ಯಾಭ್ಯಾಸ ನಿಂತಿತು. ಊರಿನಲ್ಲಿ ಬೀದಿ ಹುಡುಗನಾಗಿ ತುತ್ತು ಕೊಟ್ಟವರಿಗೆ ಕೃತಜ್ಞನಾದೆ.

ತಾತ ಒಬ್ಬ ಅಪ್ಪನಿಗಿಂತ ಅಧಿಕವೇ ನನ್ನನ್ನು ಪ್ರೀತಿಸಿದ. ಅವನಲ್ಲಿ ತಂದೆ ತಾಯಿ ಇದ್ದೂ ಅನಾಥನಾದವನು ಎಂಬ ಭಾವ ಬೆಳೆದಿತ್ತು ಅನ್ನಿಸುತ್ತದೆ. ಸಾಕಿ ಸಲಹಿದ. ಅಕ್ಷರ ಕಲಿಸಿದ. ನನ್ನ ತಂದೆಯಾದವನು ಕ್ಷಮಿಸಲಾಗದಂತಹ ತಪ್ಪುಗಳನ್ನು ಮಾಡಿದಾಗಲೂ ಹೊಟ್ಟೆಯಲ್ಲಿ ಹಾಕಿಕೊಂಡ. ಅಜ್ಜಿಯೂ ಇದಕ್ಕೆ ಪೂರಕವಾಗಿದ್ದಳು. ಅಪ್ಪ, ತಾತ ಎರಡೂ ಆಗಿದ್ದ ಅವನ ಪ್ರೀತಿ ಎಷ್ಟು ಅಗಾಧವಾಗಿತ್ತೆಂದರೆ, ನನ್ನ ಸೋದರಮಾವಂದಿರು, ಅವರ ಮಕ್ಕಳು ನನ್ನಲ್ಲಿ ಅಸೂಯೆ ತಳೆಯುವಷ್ಟು. ಈ ಕಾರಣಕ್ಕಾಗಿಯೂ ಅವರು ಇವರನ್ನು ಆಕ್ಷೇಪಿಸುತ್ತಿದ್ದರು ಮತ್ತು ವಿರೋಧಿಸುತ್ತಿದ್ದರು. ಅವರು ನನ್ನ ತಪ್ಪುಗಳನ್ನು ಹುಡುಕಿ ಹುಡುಕಿ ನನ್ನ ಮೇಲೆ ಕೈಮಾಡಲು ಮುಂದಾಗಲೆಲ್ಲ, ‘ನಿಮ್ಮ ಮಕ್ಕಳನ್ನು ಅವನ ಜೊತೆಗೆ ಬಿಡಬೇಡಿ’ ಎಂದು ತಾಕೀತು ಮಾಡುತ್ತಿದ್ದರು. ಅವರ ಅಸೂಯೆಯ ನೆರಳೂ ಬೀಳದಂತೆ ತಾತ ನನಗೆ ರಕ್ಷಾಕವಚವಾಗಿದ್ದ. ಅಂಥವರಿಗೆ ನನ್ನ ಹಸಿತನದಿಂದಾಗಿ ಕಷ್ಟ ಅವಮಾನ ತಂದ ನಾನು ಇಂದಿಗೂ ಮನದಲ್ಲೇ ಕ್ಷಮೆಯಾಚಿಸುತ್ತಲೇ ಇದ್ದೇನೆ. ಹಾಗೆಯೇ ಅಜ್ಜಿಯಲ್ಲಿಯೂ ಸಹ. ಆದ್ದರಿಂದ ಅವರು ಹೆಮ್ಮೆಪಡುವಂತೆ ಬದುಕು ಕಟ್ಟಿಕೊಂಡು ಅವರ ಕ್ಷಮೆ ಸಿಕ್ಕಿದೆಯೆಂದು ಸಮಾಧಾನಗೊಂಡಿದ್ದೇನೆ.

appanaguvudendare

ಇಲ್ಲಿ ಹಕ್ಕಿಗೂ ಮುಲಾಮು ಸಿಗುವುದೆ?

ತಾತ ಅಪ್ಪನಾಗಿ ತೋರಿದ ಪ್ರೀತಿ, ನನಗೆ ಮದುವೆಯಾಗಿ ಮಗಳು ಹುಟ್ಟಿದಾಗ ಅವನಂತೆ ಪ್ರೀತಿಸಬೇಕೆಂದು ನಿರ್ಣಯಿಸಿಕೊಂಡಂತೆಯೇ ನಡೆದುಕೊಂಡಿರುವೆ. ಇಲ್ಲಿ ಒಂದು ಮಾತನ್ನು ಮುಚ್ಚುಮರೆಯಿಲ್ಲದೆ ಹೇಳಬೇಕು. ಏಕೆಂದರೆ ನನ್ನ ಜೀವನದಲ್ಲಿ ನಾನು ಯಾವುದನ್ನೂ ಮುಚ್ಚಿಟ್ಟವನಲ್ಲ, ಹಾಗಾಗಿ ಹೇಳುತ್ತೇನೆ. ಮದುವೆಯಾದ ಕೆಲತಿಂಗಳಿಗೆ ಮಡದಿ ಬಸುರಾದಳು. ನನ್ನ ಅಂದಿನ ಆರ್ಥಿಕ ಪರಿಸ್ಥಿತಿಯಲ್ಲಿ ನಾನು ಮಗುವನ್ನು ಸರಿಯಾಗಿ ನೋಡಿಕೊಳ್ಳಲಾರೆ ಅನಿಸಿದ್ದರಿಂದ ಅಪ್ಪನಾಗುತ್ತಿರುವೆನೆಂಬ ಸಂಭ್ರಮ ನನ್ನಲ್ಲಿ ಮೂಡಿದ್ದಿಲ್ಲ. ಗರ್ಭಪಾತ ಮಾಡಿಸಿದೆ. ನಾನು ಮುಂದಾಲೋಚನೆ ಇಲ್ಲದೆಯೇ ತಪ್ಪು ಮಾಡಿ ಪಶ್ಚಾತ್ತಾಪಪಟ್ಟ ಪ್ರಸಂಗಗಳು ಅವೆಷ್ಟೋ. ಅವುಗಳಲ್ಲಿ ಪ್ರಮುಖವಾದವುಗಳಲ್ಲಿ ಇದೂ ಒಂದು. ಇದಾದ ಮರುವರುಷವೇ ಮಡದಿ ಮತ್ತೆ ಬಸುರಾದಳು, ಅದಕ್ಕಾಗಿ ಸಂಭ್ರಮಿಸಿದೆ. ಹೆಣ್ಣುಮಗುವಾಗಲೆಂದು ಹಂಬಲಿಸಿದೆ. ಹಾಗೆಯೇ ಆಯಿತು. ಕೂಸು ಹುಟ್ಟಿದ್ದು ಚೈತ್ರಮಾಸದಲ್ಲಿ. ಅಪ್ಪನಾಗಿ ಪ್ರೀತಿಯ ಚೆಲುವು ಬಂದುದು ಆ ಕೂಸಿನ ಪ್ರವೇಶದಿಂದ. ನನ್ನಲ್ಲಿ ಮಾರ್ದವತೆ ತಂದ ಆ ಕೂಸಿಗೆ ಚೈತ್ರ ಎಂದು ಹೆಸರಿಟ್ಟೆ, ಪ್ರೀತಿಸಿದೆ. ನಾನು ಪಡೆಯಲಾಗದುದನೆಲ್ಲ ಕೊಟ್ಟೆ. ಬಾಲ್ಯದಿಂದಲೇ ಅವಳಿಗೆ ಎಲ್ಲ ಸ್ವಾತಂತ್ರ್ಯ ನೀಡಿದೆ. ಅಪ್ಪನ ಪ್ರೀತಿ ಹಂಚಿಕೆಯಾಗಬಾರದೆಂದು ಇನ್ನೊಂದು ಮಗುವನ್ನು ಬಯಸಲಿಲ್ಲ. ಆದರೆ ಹಾಗಾಲಿಲ್ಲ. ನಾದಿನಿಯರ ಮಕ್ಕಳನ್ನು ಮಡಿಲಿನಲ್ಲಿ ಇರಿಸಿಕೊಳ್ಳಬೇಕಾಯಿತು. ಅವರೂ ನನ್ನ ಮಕ್ಕಳೇ ಎಂದು ಜನ ಭಾವಿಸುವಂತೆ ಮಗಳಿಗೆ ಸಮನಾಗಿ ಅವರನ್ನು ಪ್ರೀತಿಸಿದೆ. ಅಪ್ಪನಾಗಿ, ಅಪ್ಪನಂತಾಗಿದ್ದ ದಿನಗಳಲ್ಲಿ ‘ನಮ್ಮ ಮಕ್ಕಳು’ ನನ್ನವಾಗಿ ಮಡಿಲಿಗೆ ಬಂದವು.

‘ನಮ್ಮ ಮಕ್ಕಳು’ ಸಂಸ್ಥೆ ಪ್ರಾರಂಭವಾಗಲು ಮೂಲ ಒಬ್ಬ ತುಂಬು ಬಸುರಿಯಾಗಿದ್ದ ಒಬ್ಬೊಂಟಿ ಭಿಕ್ಷುಕಿ. ಅವಳ ಆರೈಕೆಗೆ ಮನವಾದುದುದಕ್ಕೆ ಪ್ರೇರಣೆ ನನ್ನ ತಾತ ಮತ್ತು ಅಜ್ಜಿಯೆಂಬುದು ಇಂದಿಗೂ ಬೇರೂರಿರುವ ನಂಬಿಕೆ. ಅವಳ ಆರೈಕೆಯಲ್ಲಿರುವಾಗ ‘ಹುಟ್ಟುವ ಮಗುವಿಗೆ ವಿದ್ಯಾಭ್ಯಾಸ ಮಾಡಿಸುವಂತೆ ವಚನ ತೆಗೆದುಕೊಂಡೆ. ಇದಾದ ನಲವತ್ತು ವರ್ಷಗಳ ನಂತರ ಶ್ರೀನಿವಾಸಪುರದ ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ನನ್ನನ್ನು ಗುರುತಿಸಿ, (ನನ್ನ ಕುಂಟು ಮತ್ತು ಉಬ್ಬಿದ ಹಲ್ಲುಗಳಿಂದ ನನ್ನ ಗುರುತು ಮಾಸದು) ಆನಂದದಿಂದ ಬಳಿಗೆ ಬಂದು, ಮಗನನ್ನು ಓದಿಸಿ, ನಿನ್ನಂತೆ ಮೇಷ್ಟ್ರು ಮಾಡಿದ್ದೇನೆ. ನೀನಂದು ಅಪ್ಪನಾಗಿ ನೋಡಿಕೊಂಡೆ ಎಂದುದಲ್ಲದೆ, ಅಲ್ಲೇ ನಿಂತಿರಲು ಹೇಳಿ ಹೋಗಿ, ಬೊಗಸೆ ತುಂಬ ದ್ರಾಕ್ಷಿಹಣ್ಣು ತಂದುಕೊಟ್ಟು ತನ್ನೆದುರೇ ತಿನ್ನಲು ಒತ್ತಾಯಿಸಿದಳು. ಅವಳ ಪ್ರೀತಿ ಹಣ್ಣನ್ನು ರೋಗಾಣುಮುಕ್ತ ಮಾಡುವುದೆಂದು ಅವಳಿಗೂ ಕೊಟ್ಟು ತಿಂದೆ. ಭಿಕ್ಷೆ ಬೇಡುವುದನ್ನು ಬಿಟ್ಟಿದ್ದೇನೆ. ಮಗ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ ಎಂದು ಹೇಳಿದಳು ಧನ್ಯನ ಮಾಡಿದೆ ತಾಯಿ ಎಂದು ಕೈ ಮುಗಿದು ಬೀಳ್ಕೊಟ್ಟೆ.

appanaguvudendare

ದತ್ತು ತೆಗೆದುಕೊಂಡ ಗ್ರಾಮಸ್ಥರಿಗಾಗಿ ಆಯುರ್ವೇದ ಔಷಧಿ ತಯಾರಿಕೆ ಮತ್ತು ಆಸಕ್ತರಿಗೆ ಆ  ಬಗ್ಗೆ ವಿವರಣೆ.

‘ನಮ್ಮ ಮಕ್ಕಳು’ ಮಡಿಲಿಗೆ ಮೊದಲು ಬಂದುದು ಒಬ್ಬ ಭಿಕ್ಷುಕ ಬಾಲಕ. ನಂತರ ಅವನ ಅಕ್ಕ, ತಮ್ಮ. ಶಾಲಾ ದಾಖಲಾತಿಗಾಗಿ ಮಕ್ಕಳ ಗಣತಿಗೆ ಹೊರಟಾಗ ಊರಿನ ಆಚೆ ಒಂದು ಹತ್ತು ಗುಡಾರಗಳು ಕಂಡವು. ಅಲ್ಲಿ ಹೋಗಿ ವಿವರಣೆ ಪಡೆಯುವಾಗ ಅವರು ಚಿಂದಿ ಆರಿಸುವ ಮತ್ತು ಭಿಕ್ಷೆ ಬೇಡುವವರೆಂದು ತಿಳಿಯಿತು. ಅವರು ಆಂಧ್ರದಿಂದ ವಲಸೆ ಬಂದ ಅಲ್ಪಸಂಖ್ಯಾತರಲ್ಲಿ ಕೆಳವರ್ಗಕ್ಕೆ ಸೇರಿದವರಾಗಿದ್ದರು. ನನ್ನ ಕಾರ್ಯ ಇರುವುದು ಇಲ್ಲಿ ಎನಿಸಿತು. ಮಕ್ಕಳನ್ನು ಶಾಲೆಗೆ ದಾಖಲಿಸಿಕೊಂಡು ಬಂದೆನಾದರೂ ಅವರು ಶಾಲೆಗೆ ಹಾಜರಾಗುವುದಿಲ್ಲ ಎಂದರು. ಅವರ ಹಿಂದೆ ಬಿದ್ದಾಗ ಅವರು ಸಿಕ್ಕಿದ್ದು ಪಕ್ಕದ ಊರಿನ ಮದುವೆಮನೆಯ ಮುಂಭಾಗದಲ್ಲಿ. ಅಲ್ಲಿಂದ ಅವರನ್ನು ಕರೆತರುವುದು ಮತ್ತು ಅವರು ಚಿಂದಿ ಆರಿಸಲು ಮತ್ತು ಭಿಕ್ಷೆಗೆ ಹೋಗದಿರಲು ಕಾವಲಿದ್ದು, ಶಾಲೆಗೆ ಕರೆತರಬೇಕಾಯಿತು. ಜೊತೆಗೆ ಪೋಷಕರಿಗೆ ಏನಾದರೂ ಒಂದು ಕೊಟ್ಟು, ಸುಮುಖರನ್ನಾಗಿ ಮಾಡಿಕೊಳ್ಳಬೇಕಿತ್ತು. ಈ ಎಲ್ಲದರ ಪರಿಣಾಮ ದಿನಕಳೆದಂತೆ ಆ ಮಕ್ಕಳ ಸಂಖ್ಯೆ ಇಪ್ಪತ್ತಕ್ಕೇರಿತು. ಇದು ನನಗೆ ಒಂದು ಸಾಮಾಜಿಕ ಪವಿತ್ರ ಕರ್ತವ್ಯ ಎನಿಸಿದ್ದು ಈ ಹಂತದಲ್ಲಿ. ಇದನ್ನು ಬಲ್ಲ ಕೆಲ ಸ್ನೇಹಿತರು ಹೀಗೆ ಶಾಲೆಯಿಂದ ದೂರ ಉಳಿಯುವ ಮಕ್ಕಳ ಸುಳಿವನ್ನು ಕೊಡತೊಡಗಿದರು.

ಹೀಗೆ ಬಂದ ಹೆಣ್ಣುಮಗಳೊಬ್ಬಳು ಶಾಲೆಯನ್ನು ಏಳನೇ ತರಗತಿಗೆ ನಿಲ್ಲಿಸಿದ್ದಳು. ಅವಳೊಡನೆ ಮಾತನಾಡಿದಾಗ ಆಕೆ ಬುದ್ಧಿವಂತಳು ಮತ್ತು ಶಿಕ್ಷಣದಲ್ಲಿ ಆಸಕ್ತಳು ಎಂದು ಗೊತ್ತಾಯಿತು. ಈಗ ಅವಳು ಎಂ.ಕಾಮ್​ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುವಂತಾಗಿದೆ. ಹಾಗೆಯೇ ಹುಡುಗನೊಬ್ಬನನ್ನು ಅವನು ಏಳನೇ ತರಗತಿಯಲ್ಲಿ ಓದುತ್ತಿದ್ಧಾಗ ಇಂಗ್ಲಿಷ್ ಕಲಿಯಲಿ ಎಂದು ಒಂದು ಮೆಡಿಕಲ್​ ಸ್ಟೋರ್​ ಗೆ ಸೇರಿಸಿ ಬಿಡುವಿನಲ್ಲಿ ಹೋಗಲು ಸೂಚಿಸಿದ್ದೆ. ಅವನು ಔಷಧಿಗಳ ಹೆಸರನ್ನು ಓದುತ್ತ ಓದುತ್ತ ಪಿಯೂಸಿಗೆ ಬರುವ ವೇಳೆಗೆ ವೈದ್ಯನಾಗುವ ಕನಸು ಕಂಡ. ಅಂತೆಯೇ ಅವನಿಗೆ ವೈದ್ಯಕೀಯದಲ್ಲಿ ಸೀಟು ಸಿಕ್ಕಿತು. ಅವನು ಮಾಸ್ಟರ್ ಆಫ್​ ಸರ್ಜರಿ ಮುಗಿಸಿ, ಒಳ್ಳೆಯ ಸರ್ಜನ್ ಎನಿಸಿ ಹೈದರಾಬಾದಿನ ಆಸ್ಪತ್ರೆಯೊಂದರಲ್ಲಿ ಇದ್ದಾನೆ.

appanaguvudendare

ಎಲ್ಲ ಗೊಂಬೆಗಳಿಗೂ ಅಕಾಡೆಮಿಗಳ ಮೆಟ್ಟಿಲು ಹತ್ತಲಾಗುವುದೆ?

ಇನ್ನು ತೊಗಲುಗೊಂಬೆ ಕಲಾವಿದರ ಕುಟುಂಬಗಳೊಂದಿಗೆ ನಿಕಟ ಸಹವಾಸ ನಲವತ್ತು ವರುಷಗಳದ್ದು. ಅವರಲ್ಲಿ ಒಬ್ಬ ಹುಡುಗ ಈಗ ಬಿಕಾಂ ಅಂತಿಮ ವರ್ಷಕ್ಕೆ ಬಂದಿದ್ದಾನೆ. ದೇವಸ್ಥಾನಗಳಲ್ಲಿ ಮತ್ತು ತಿಥಿ, ವಾರಗಳಲ್ಲಿ ಭಜನೆಗೆ ಪಕ್ಕವಾದ್ಯವಾಗಿ ತಬಲಾ ನುಡಿಸುತ್ತಿದ್ದ ಬಡಕಲಾವಿದನ ಮಗಳು ಕೂಲಿ ಮಾಡುವವಳಾಗಿದ್ದಳು. ಅವಳನ್ನು ‘ನಮ್ಮ ಮಕ್ಕಳು’ ತೆಗೆದುಕೊಂಡು ಶಿಕ್ಷಣ ಮುಂದುವರಿಸಲು ಬೆಂಬಲವಾಗಿ ನಿಂತಿದ್ದರಿಂದ ಈಗ ಆಕೆ ಶ್ರೀನಿವಾಸಪುರದ ಕಾಲೇಜೊಂದರಲ್ಲಿ ಅಂತಿಮ ಬಿಕಾಂ ಓದುತ್ತಿದ್ದಾಳೆ. ಚಿತ್ರದುರ್ಗಕ್ಕೆ ಸೇರಿದ ಪ್ರತಿಭಾವಂತ ಹುಡುಗ ಶಿಕ್ಷಣ ಮುಂದುವರಿಸಲು ಒದ್ದಾಡುತ್ತಿದ್ದಾಗ ‘ನಮ್ಮ ಮಕ್ಕಳು’ ಒಳಕ್ಕೆ ಬಂದ. ಬೆಂಗಳೂರಿನ ಪ್ರತಿಷ್ಠಿತ ವಿಶ್ವವಿದ್ಯಾಲಯವೊಂದರಲ್ಲಿ ಡಿ. ಫಾರ್ಮ್ ಅಂತಿಮ ವರ್ಷವನ್ನು ತಲುಪಿದ್ದಾನೆ.

ಕುಡುಕ ಮತ್ತು ಸಾಂಸಾರಿಕವಾಗಿ ಹೊಣೆಯಿಂದ ದೂರವೇ ಇದ್ದ ಮತ್ತು ಅಸಹಾಯಕಳಾದ ತಾಯಿಯ ಮಗ ‘ನಮ್ಮ ಮಕ್ಕಳು’ ಒಳಗೆ ಬಂದಾಗ, ಅವನ ಕೈಬೆರಳುಗಳಲ್ಲಿ ಚಿತ್ರಕಲೆ ಇರುವುದನ್ನು ಗುರುತಿಸಿ ಪ್ರೋತ್ಸಾಹಿಸಿದ್ದರಿಂದ ಇಂದವನು ಬೆಂಗಳೂರಿನ ಕಲಾಮಂದಿರದಲ್ಲಿ ಚಿತ್ರಕಲೆಯ ಪದವಿಯ ಎರಡನೇ ವರ್ಷದಲ್ಲಿ ಬಂದಿದ್ದಾನೆ. ಹೀಗೆ ನಮ್ಮ ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆದರೆ, ಸಂಗೀತಗಾರನೊಬ್ಬನ(ಳ)ನ್ನು ನಾಡಿಗೆ ಕೊಡಬೇಕೆಂಬ ಕನಸು ಕನಸಾಗಿಯೇ ಇದೆ. ಅದು ನೆರವೇರುವುದು ಕಾಲದ ಕೃಪೆಯಲ್ಲಿ.

ಈ ಎಲ್ಲವೂ ನನ್ನೊಳಗೆ ತೆರೆದ ಸಾಮಾಜಿಕತೆ ಹಲವು ಕಷ್ಟಗಳನ್ನೂ ಸಹ ಮೈಮೇಲೆ ಎಳೆಯಿತು. ಅದರಲ್ಲಿ ಪ್ರಧಾನವಾದುದು ಭಾರತೀಯ ಪ್ರಜೆಗಳು ಅನ್ನಿಸದೆಯೇ ಕಾಡುಮೇಡುಗಳಲ್ಲಿ, ಅಲೆಮಾರಿಗಳಾಗಿ ಬದುಕುತ್ತಿದ್ದ ಎಂಟು ಕುಟುಂಬಗಳಿಗಾಗಿ ‘ಹಸಿರು ಹೊನ್ನೂರು’ ಎಂಬ ಎಂಟು ಮನೆಗಳ ಪುಟ್ಟ ಊರನ್ನು ನಿರ್ಮಿಸಿದ್ದು. 32 ಜನಸಂಖ್ಯೆಯ ಈ ಕುಟುಂಬಗಳನ್ನು ಒಂದು ನೆಲೆಗೆ ತಂದು, ಅವರಿಗಾಗಿ ಮತ್ತು ಅವರ ಮಕ್ಕಳಿಗಾಗಿ ‘ಕಲಿಕೆಯ ಮಡಿಲು’ ಪ್ರಾರಂಭಿಸಿ ಅವರದೇ ಆದ ಭಾಷೆಯಲ್ಲಿ ಕನ್ನಡವನ್ನು ಕಲಿಸಿ, ಕನ್ನಡ ದಾಖಲಾಗಿಸಲು ಅಣಿಗೊಳಿಸುವ ಕಾರ್ಯ ಕೈಗೊಂಡಿತ್ತು. ಈ ಎಲ್ಲವೂ ಅಲ್ಲಿನ ರಾಜಕೀಯ ವಲಯದಲ್ಲಿ ಕಣ್ಣು ಕೆಂಪಗೆ ಮಾಡಿತ್ತು. ಅಲ್ಲದೆ, ಇದನ್ನು ಪ್ರಚಾರಕ್ಕೆ ಬಳಸಿಕೊಳ್ಳಲು ಅಡ್ಡಿಯಾದದ್ದು ಕಿರುಕುಳಗಳಿಗೆ ಕಾರಣವಾಯಿತು. ಹೀಗಾಗಿ ಮತ್ತು ಅವರ ಜೀವನದಲ್ಲಿ ಆರ್ಥಿಕ ಸ್ವಾವಲಂಬನೆಗಾಗಿ ಕುರಿ ಸಾಕಾಣಿಕೆಗೆ ಅಣಿಗೊಳಿಸಿದ್ದು ಮತ್ತಷ್ಟು ಕಣ್​ಕಿಸಿರಿಗೆ ಕಾರಣವಾಯಿತು. ಕೋಲಾರ ಜಿಲ್ಲಾ ಪಂಚಾಯತಿಗೆ ಸಿಇಒ ಆಗಿದ್ದ ಲತಾಕುಮಾರಿ ಅವರು ಇದರಿಂದ ಪ್ರೇರಿತರಾಗಿ, ಕುಡಿಯುವ ನೀರು, ಕುರಿ ಸಾಕಾಣಿಕೆಗೆ ಶೆಡ್ಡು ನಿರ್ಮಾಣಕ್ಕೆ ಮತ್ತು ಅವರಿಗೆ ಶೌಚಾಲಯ ನಿರ್ಮಿಸಲು ಮಂಜೂರಾತಿ ನೀಡಿದರು. ಸಹ ಪಕ್ಷ ರಾಜಕೀಯದ ಸಣ್ಣತನದಿಂದಾಗಿ ಅರೆಬರೆಯಾಯಿತು. ಕೊನೆಗೆ ಲತಾಕುಮಾರಿಯವರನ್ನು ವಿವಿಧ ಕಾರಣಗಳಿಂದಾಗಿ ಕೋಲಾರದಿಂದ ಎತ್ತಂಗಡಿಯನ್ನೂ ಮಾಡಲಾಯಿತು. ಆದರೆ ಆ ತಾಯಿಯ ಅಕ್ಕರೆಯ ಫಲವಾಗಿ ಕುಡಿಯುವ ನೀರು ಪೂರೈಕೆಯಾಗುವಂಥಾದದ್ದು ಒಂದು ಪುಣ್ಯ.

appanaguvudendare

ಆತುಕೂತು ಮಾತನಾಡಿದರೆ…

ಅನ್ಯಧರ್ಮೀಯರಾದ ನನ್ನ ಹಳೆಯ ವಿದ್ಯಾರ್ಥಿಗಳು ಹಸಿರು ಹೊನ್ನೂರು ಕಾರ್ಯಗಳಿಗೆ ಕೈಜೋಡಿಸಿದ್ದು ಅಲ್ಲಿದ್ದ ಕೆಲವರಿಗೆ ಇಷ್ಟವಾಗಲಿಲ್ಲ. ಹಾಗೆಯೇ ಕಲಿಕೆಯ ಮಡಿಲಿಗೆ ಶಿಕ್ಷಕಿಯಾಗಿದ್ದ ಅನ್ಯಧರ್ಮೀಯ ಅಂಗವಿಕಲೆಯನ್ನೂ ಸಹ ಅಲ್ಲಿಂದ ಹೊರಹಾಕುವ ಹುನ್ನಾರವೂ ನಡೆಯಿತು. ಈ ಎಲ್ಲವೂ ‘ನಮ್ಮ ಮಕ್ಕಳು’ ಹೃದಯಕ್ಕೆ ವಿರುದ್ಧವಾಗಿದ್ದು ಇದೂ ಒಂದು ಕಾರಣವಾಗಿ, ತಲೆಯ ಮೇಲೆ ಬಿದ್ದ ಆರ್ಥಿಕ ಹೊರೆ, ಕೆಲವರ ಮನಸ್ಸಿಗೆ ಹಿಡಿದಿದ್ದ ಪ್ರಚಾರದ ಹುಚ್ಚು, ಕೈಜೋಡಿಸುತ್ತೇವೆಂದು ಬಂದವರಲ್ಲಿ ಹುಟ್ಟಿಕೊಂಡ ಸನ್ಮಾನ ಮತ್ತು ಪ್ರಶಸ್ತಿಗಳ ಆಸೆಯಿಂದಾಗಿ ಈ ಯೋಜನೆಗಳು ಅರೆಬರೆ ಸಫಲಗೊಂಡವು. ಆರ್ಥಿಕ ಹೊರೆಯೂ ಬಿದ್ದು, ಆ ಸಾಲವನ್ನು ತೀರಿಸಲು ನಲವತ್ತೈದು ವರ್ಷಗಳ ಕಾರ್ಯಕ್ಷೇತ್ರವಾಗಿದ್ದ ಶ್ರೀನಿವಾಸಪುರವನ್ನು ಶಾಶ್ವತವಾಗಿ ತೊರೆದು ಚಿಕ್ಕಬಳ್ಳಾಪುರಕ್ಕೆ ಬರಬೇಕಾಯಿತು. ಇದು ಒಂದು ವಿಷಾದಗಾಥೆಯಾಗಿ ಉಳಿದಿದೆ.

ಈ ತನಕ ‘ನಮ್ಮ ಮಕ್ಕಳು’ ಯಾವ ರಾಜಕೀಯ ವ್ಯಕ್ತಿಗಳು, ಸರ್ಕಾರಿ ಇಲಾಖೆಯ ಸಹಾಯ ಪಡೆದುಕೊಂಡಿಲ್ಲ. ನನ್ನ ಅನುಭವದ ದಾರಿಯಲ್ಲಿ ನಾನು ಗೆಲುವಿನ ಕನಸಿನೊಂದಿಗೆ ಸೋಲಿನಿಂದ ಸೋಲಿಗೆ ನಡೆಯುತ್ತಲೇ ಇದ್ದೇನೆ. ಆದರೆ, ಕುಗ್ಗಿದ್ದಿಲ್ಲ. ಇಲ್ಲಿ ನೆನಪಾಗುವ ಇನ್ನೊಂದು ಪ್ರಸಂಗವೆಂದರೆ, ಹಕ್ಕಿಪಿಕ್ಕಿ ಜನಾಂಗದವರಿಗೆ ತರಬೇತಿ ಕೊಟ್ಟು, ಅವರನ್ನು ಬೃಹತ್ ಕೈಗಾರಿಕೆಯಲ್ಲಿ ತೊಡಗಿಸಲು ಮಾಡಿದ ಪ್ರಯತ್ನ. ಈ ನಿಟ್ಟಿನಲ್ಲಿ ಸೋಪಿನ ಪುಡಿ, ನೆಲ್ಲಿ, ಪರಂಗಿ ಮುಂತಾದ ಹಣ್ಣುಗಳಿಂದ ಮಾಡಿದ ತಿನಿಸುಗಳನ್ನು ಮಾರಲು ಹೋದಾಗ ಅವರ ಸಾಮಾಜಿಕ ಕೆಳಸ್ತರದಿಂದಾಗಿ ಗ್ರಾಹಕರು ತಿರಸ್ಕಾರದಿಂದ ನೋಡಿದರು, ತೀರಾ ಕಡಿಮೆ ಬೆಲೆಗೆ ಮಾರಲು ಒತ್ತಾಯಿಸಿದರು. ಅದರ ಜೊತೆಗೆ ಆ ಜನ ತಮ್ಮ ಕೆಲವು ಚಟಗಳಿಂದಾಗಿ ಅದನ್ನು ಪೂರೈಸಿಕೊಳ್ಳಲು ಈ ವಸ್ತುಗಳನ್ನು ಕೇಳಿದ ಬೆಲೆಗೆ ಮಾರಿದ್ದು, ಅವರನ್ನು ನಮ್ಮ ಯೋಜನೆಗೆ  ಬದ್ಧರನ್ನಾಗಿಸುವಲ್ಲಿ ವಿಫಲನಾದುದು ಸೇರಿ ಇನ್ನೊಂದು ದೊಡ್ಡ ನಷ್ಟವನ್ನು ಅನುಭವಿಸಿದ್ದು ಇದನ್ನು ಮುಚ್ಚುಮರೆಯಿಲ್ಲದೆ, ಹೇಳಿಕೊಂಡಿದ್ದರಿಂದ ಅನೇಕ ಆಪ್ತರು ಇವನು ನಷ್ಟದ ಬಾಬತ್ತಿನವನು ಎಂದು ದೂರ ಉಳಿದರು. ಹಾಗೆಯೇ ಕುಟುಂಬದಲ್ಲಿ ಅಸಮಾಧಾನದ ಕುದಿಯೂ ಎದ್ದಿದ್ದು ಈ ಹಂತದಲ್ಲಿಯೇ. (ಅವರು ಮತ್ತು ಅವರಂತೆ ಇದ್ದವರ ಹೆಸರು ಹೇಳಿ, ಇಂದು ಗೌರವಾನ್ವಿತರಾಗಿ ಬಾಳುತ್ತಿರುವವರಲ್ಲಿ ಕೀಳರಿಮೆ ತರುವ ಹಕ್ಕು ನನಗಿಲ್ಲ.) ನಂತರ ಸರಿಹೋಯಿತು.

ಇದಾದ ಇಪ್ಪತ್ತೆಂಟು ವರ್ಷಗಳಲ್ಲಿ ‘ನಮ್ಮ ಮಕ್ಕಳು’ ಅಪ್ಪಿಕೊಂಡ ಮಕ್ಕಳ ಸಂಖ್ಯೆ ಹೇಳಿದರೆ ಪ್ರಚಾರಕ್ಕಾಗಿ ಎಂದಾಗಿಬಿಡಬಹುದೆಂಬ ಭಯದಿಂದಾಗಿ ಹೇಳುವುದಿಲ್ಲ. ಈಗಿರುವ ಹದಿಮೂರು ಮಕ್ಕಳ ಪರಿಚಯಯವನ್ನೂ ಹೇಳಲಾರೆ. ಈ ಮಕ್ಕಳು ತಮ್ಮ ಕಾಲಮೇಲೆ ತಾವು ನಿಂತ ನಂತರ ಅವರ ಸಂಪರ್ಕವನ್ನೂ ಕಡಿಕೊಂಡುಬಿಡುತ್ತೇನೆ. ಅವರು ತಂದೆಯೆಂದೇ ಭಾವಿಸಿರುವುದರಿಂದ ನನ್ನಿಂದಲೇ ಅವರು ಈ ಸ್ಥಿತಿಗೆ ತಲುಪಿದ್ದಾರೆ ಎಂಬ ಅಹಂಭಾವ ಬರಬಾರದೆಂಬ ಎಚ್ಚರಿಕೆ ನನ್ನದು. ಯಾವ ತಂದೆ ತನ್ನ ಮಕ್ಕಳ ಉದ್ಧಾರಕನೆಂದು ಅಹಂಕಾರ ತಳೆಯುತ್ತಾನೆ?

appanaguvudendare

ಕಲಿಕೆಯ ಮಡಿಲಲ್ಲಿ…

ಸಾಕಷ್ಟು ಮಕ್ಕಳ ಅಪ್ಪಂದಿರೆಲ್ಲರೂ ಕುಡುಕರೇ. ಕೌಟುಂಬಿಕ ಪ್ರೀತಿಯ ಕೊರತೆ. ಹಿಡಿದುಕೊಳ್ಳಲು ಬೆರಳಿಲ್ಲ. ತಲೆ, ಬೆನ್ನು ನೇವರಿಸುವ ಅಕ್ಕರೆಯ ಕೈಯಿಲ್ಲ. ‘ನಮ್ಮ ಮಕ್ಕಳು’ ಶಾಲೆಗೆ ಬರಲು ಬೆರಳು ಚಾಚಿತು. ತಲೆ ಬೆನ್ನು ನೇವರಿಸಿತು. ಕಂದಾ ಎಂದು ಕರುಳಿನಿಂದ ಕರೆಯಿತು. ಅವು ತಮ್ಮ ಬದುಕಿನ ದಾರಿಯಲ್ಲಿ ಬೆಳಕನ್ನು ಕಂಡವು, ನಡೆದವು, ಬೆಳೆಯುತ್ತ, ಕಲಿಯುತ್ತ ಆ ಮಕ್ಕಳು ಒಟ್ಟಿಗೆ ಕುಳಿತು ನಗುತ್ತ ಕೈತುತ್ತು ಉಂಡವು. ಹಂಚಿಕೊಂಡು ತಿನ್ನುವುದನ್ನು ಕಲಿತವು. ನನ್ನಿಂದ ಇದನ್ನು ಮಾಡಿಸಿದವರಲ್ಲಿ, ನನ್ನ ಕಾರ್ಯವನ್ನು ಅಕ್ಕರೆಯಿಂದ ಕಂಡ ಹೃದಯಸಿರಿವಂತರು ಗುಪ್ತವಾಗಿದ್ದಾರೆ.

ಮಕ್ಕಳು ಸಾಲಾಗಿ ಕುಳಿತು ಉಣ್ಣುವಾಗ ಅವರ ಮುಖಗಳಲ್ಲಿ ನನ್ನ ಮಗಳ ನಗೆಮುಖ ಕಂಡಿದೆ. ಅವರೇ ಅವಳಾದಂತೆ ನನ್ನ ಬಾಯಿಗೆ ತುತ್ತಿಟ್ಟಾಗಲೆಲ್ಲ ಆ ಕೈಗಳು ನನ್ನ ಮಗಳ ಕೈಗಳೆನಿಸುತ್ತವೆ. ತಂದೆಯೊಬ್ಬ ತನ್ನ ಮಕ್ಕಳಿಂದ ಅನುಭವಿಸುವ ನಿಂದೆಗಳು ನನಗೂ ಸಿಕ್ಕಿವೆ. ಮುನಿದಿದ್ದೇನೆ, ಬಡಿದಿದ್ದೇನೆ. ಇದನ್ನು ಅವು ಮರೆತಿವೆ. ನನ್ನಲ್ಲಿಯೂ ಮರೆಸಿವೆ. ಇವರಲ್ಲಿ ದಾರಿ ತಪ್ಪಿದವರುಂಟು, ತಿದ್ದಿಕೊಂಡವರುಂಟು, ತಪ್ಪು ಮಾಡುತ್ತಲೇ ಕೆಟ್ಟವರುಂಟು. ಅಂತಹವರೂ ‘ನಮ್ಮ ಮಕ್ಕಳು’ ತಾನೆ? ಸರಿ ಹೋದಾರೆಂಬ ಭರವಸೆ ತಂದೆಯದಲ್ಲವೆ? ಇದು ಬಹುಮಕ್ಕಳ ಕುಟುಂಬ. ಈ ಸದಸ್ಯರು ವಿದ್ಯೆ, ಆತ್ಮಗೌರವ, ಸಾಮಾಜಿಕ ಮರ್ಯಾದೆ, ಸ್ಥಾನಮಾನ ತಂದುಕೊಡುವುದೆಂದು ಮನಗಂಡಂತೆಲ್ಲ ಅದನ್ನು ದಕ್ಕಿಸಿಕೊಂಡರು.

ಒಂದು, ಎರಡು ಮೂರು ಮಕ್ಕಳುಳ್ಳವರು ತಮ್ಮ ಮಕ್ಕಳು ಅದಾಗಿದ್ದಾರೆ, ಇದಾಗಿದ್ದಾರೆ ಎಂದು ಹೇಳಿಕೊಂಡು ಹೆಮ್ಮೆಪಡುವಂತೆ ಈ ಮೂಲಕ ನಾನೂ ಹೆಮ್ಮಿಗನಾಗಿರುವೆ. ಈ ಮಕ್ಕಳು ಶಿಕ್ಷಕರು, ವೈದ್ಯರು, ವ್ಯಾಪಾರಿಗಳು, ಕೃಷಿಕರು, ಕಾರ್ಮಿಕರು, ಕೂಲಿಕಾರರು, ಉಪಕಾರಿಗಳು ಆಗಿರುವರೆಂದು ಹೇಳಿಕೊಳ್ಳುವ ಹೆಮ್ಮೆಯ ಭಾಗ್ಯವಂತ ನಾನಾಗಿರುವೆ. ಮಕ್ಕಳಿಂದ ತಂದೆಗೆ ಕೀರ್ತಿ. ತಂದೆಯ ಸ್ಥಾನದಲ್ಲಿಟ್ಟು ನನಗೆ ಆ ಕೀರ್ತಿತಂದ ಇವರಿಗೆ ನಾನು ಧನ್ಯತಾಭಾವದಿಂದ ಶರಣು ಹೇಳುವೆ.

ನನ್ನ ಅನುಭದಲ್ಲಿ ತಂದೆ ಕುಟುಂಬದ ಭಕ್ತ. ಶರಣಾಗತಿ ಭಾವವಿರದೆ ಇವನು ಕೌಟುಂಬಿಕವಾಗಿ ಹಾಗೂ ಸಾಮಾಜಿಕವಾಗಿ ಏನನ್ನೂ ಸಾಧಿಸಲಾರ ಮತ್ತು ಹೊಂದಲಾರ. ನಿರ್ವಹಣೆಗಾಗಿ ತಂದೆಯಲ್ಲಿ ತಾಯಿ ಮನಸ್ಸು ಅರಳಿರಬೇಕು. ತಾಯಿಯೊಬ್ಬಳು ತಂದೆಯೂ ಆಗುವಂತೆ ಇವನೂ ಆಗಬೇಕು. ಇಂಥ ತಂದೆಯ ಜೀವನ ಸಾಮಾಜಿಕವೂ ಆದರೇನೇ ಕುಟುಂಬ ಸಮಾಜಮುಖಿಯಾಗುವುದು. ತನ್ನ ಮಗುವಿಗೆ ಚಾಕೊಲೇಟ್ ಅಥವಾ ತಿನಿಸನ್ನು ಕೊಡಿಸುವಾಗ ತನ್ನತ್ತ ಆಸೆಗಣ್ಣುಗಳಿಂದ ನೋಡುವ ಬೇರೊಂದು ಮಗುವಿಗೂ ಕೊಡಿಸುವ ಮನಸ್ಸು ಇದ್ದವನು ನಿಜತಂದೆ. ಈ ಪಾಠವನ್ನು ‘ನಮ್ಮ ಮಕ್ಕಳು’ ನನಗೆ ಕಲಿಸಿದೆ ಎಂದು ಹೇಳಿಕೊಳ್ಳಲು ಹರ್ಷಿಸುತ್ತೇನೆ. ತಂದೆತನ ಕೊಟ್ಟ ಮಗಳಿಗೆ, ‘ನಮ್ಮ ಮಕ್ಕಳು’ ಒಳಗಿನ ಮಕ್ಕಳಿಗೆ ನಾನು ನಿತ್ಯಕೃತಜ್ಞ.

ವಿಶ್ವಮಾನವ ಧರ್ಮ ರಾಜಕೀಯದೋಳ್ ನೆಲೆಸಿ…

ಪರಿಚಯ: ಸದ್ಯ ಚಿಕ್ಕಬಳ್ಳಾಪುರದಲ್ಲಿ ವಾಸಿಸುತ್ತಿರುವ ಸ. ರಘುನಾಥ ಅವರು 1954ರಲ್ಲಿ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಲಿಯಪ್ಪನಹಳ್ಳಿಯಲ್ಲಿ ಹುಟ್ಟಿದರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸಮಾಜ ಕಾರ್ಯಗಳಲ್ಲಿ ತೊಡಗಿಕೊಂಡು ಬದುಕಿಗೆ ಒಂದು ಗುರಿಯನ್ನು ಕಂಡು, ನಡೆಯುವ ದಾರಿಯಲ್ಲಿ ಒಂದು ಕವಲಾಗಿ ಸ್ವೀಕರಿಸಿದ್ದು ಓದು ಮತ್ತು ಸಾಹಿತ್ಯ ರಚನೆ. ಹಾಗೆಯೇ ಜನರ ಮಧ್ಯದಲ್ಲಿದ್ದು ಕಲಿತದ್ದು ತೆಲುಗು ಭಾಷೆ. ಮಾತೃಭಾಷೆ ಕನ್ನಡದೊಂದಿಗೆ ತೆಲುಗು ಸರಸ್ವತಿ ಒಲಿದಳು. ಪರಿಣಾಮವಾಗಿ ಕನ್ನಡದಲ್ಲಿ ಕಥೆ, ಕಾವ್ಯ, ವಿಮರ್ಶೆ, ಶಿಶುಸಾಹಿತ್ಯ, ಅಂಕಣಬರಹ, ಲೇಖನ ಸಾಹಿತ್ಯ, ಹೀಗೆ ತೊಡಗಿಕೊಂಡದ್ದಲ್ಲದೆ, ಅನುವಾದಕ್ಕೂ ತೊಡಗಿಕೊಂಡರು. ಕನ್ನಡದಿಂದ ತೆಲುಗಿಗೆ, ತೆಲುಗಿಗೆ ಕನ್ನಡಕ್ಕೆ ಅನುವಾದಿಸಿದ್ದಲ್ಲದೆ, ಸ್ವತಃ ತೆಲುಗಿನಲ್ಲಿಯೂ ಬರೆದು ಕೋಲಾರ ತೆಲುಗನ್ನಡದ ಸಣ್ಣ ಕಥೆಗಳ ಪ್ರಥಮ ಲೇಖಕ ಎನಿಸಿಕೊಂಡಿದ್ದು ಇವರ ನಡಿಗೆಯ ಮುಖ್ಯ ಹೆಜ್ಜೆ. ಸದಾ ಜನಸಂಪರ್ಕದಲ್ಲಿಯೇ ಬದುಕುತ್ತಿದ್ದ ರಘುನಾಥ ಜಾನಪದ ಕ್ಷೇತ್ರದಲ್ಲಿಯೂ ಓಡಾಡಿದ್ದು, ಮೊರಸುನಾಡು ಜಾನಪದ ಸಾಹಿತ್ಯವನ್ನು ಸಂಗ್ರಹಿಸಿ ಪರಿಷ್ಕರಿಸಿ ಪ್ರಕಟಿಸಿದರು. ಕನ್ನಡ ತೆಲುಗು ತಮಿಳು ಕಟ್ಟಿದ ಭಾಷೆಗೆ ಮೊರಸುನಾಡು ಕನ್ನಡವೆಂದು ಹೆಸರಿಸಿದ್ದು ಇವರೇ. ಅದಕ್ಕೆ, ಪೂರಕವಾಗಿ ಮೊರಸುನಾಡು ಕನ್ನಡ ಎಂಬ ಪುಸ್ತಕವನ್ನು ಬರೆದುದಲ್ಲದೆ, ಈಗ ಮೊರಸುನಾಡು ಕನ್ನಡ ನಿಘಂಟು ರಚನೆಯಲ್ಲಿ ನಿರತರಾಗಿದ್ದಾರೆ.

ಇವರ ಬರವಣಿಗೆಯ ಸಾಹಿತ್ಯ ಕ್ಷೇತ್ರ ಸುಮಾರು 59 ಕೃತಿಗಳಲ್ಲಿ ವಿಸ್ತರಿಸಿಕೊಂಡಿದೆ. ಈಗ ಮೊರಸುನಾಡು ನಿಘಂಟು ಕನ್ನಡ ರಚನೆಯೊಂದಿಗೆ ಕನ್ನಡದಲ್ಲಿ ಯಾವ ಅನುವಾದಕರೂ ಮುಟ್ಟದಿದ್ದ ವೆಂಕಟರಮಣಸ್ವಾಮಿಯ ಮೇಲೆ 32,000 ಸಾವಿರ ಕೀರ್ತನೆಗಳನ್ನು ರಚಿಸಿರುವ ಅನ್ನಮಾಚಾರ್ಯರ ಆಯ್ದ ಕೀರ್ತನೆಗಳನ್ನು ಮೂಲಸಹಿತವಾಗಿ ಕನ್ನಡಕ್ಕೆ ತರುವ ಕಾರ್ಯದಲ್ಲಿ ನಿರತರಾಗಿದ್ಧಾರೆ.

ಇದನ್ನೂ ಓದಿ : Adoption; ಅಪ್ಪನಾಗುವುದೆಂದರೆ: ಇದರಾಗ ಅಂಥಾ ದೊಡ್ಡಿಸ್ತನಾ ಇಲ್ಲರೀ, ರಗಡ ಮಂದಿಯೊಳಗ ನಾವೂ ಒಬ್ರು

Follow us on

Related Stories

Most Read Stories

Click on your DTH Provider to Add TV9 Kannada