ಏಸೊಂದು ಮುದವಿತ್ತು : ಪಾಳಿ ಕಡಿದು ಪರೆ ಮಾಡಿ ಇಲಿಮು ಕಟ್ಟುವ ಅಪ್ಪನಿಗೆ ಬುತ್ತಿ ಒಯ್ಯುತ್ತಿರುವ ನೂರುಲ್ಲಾ
‘ಒಮ್ಮೆ ನೀರು ತರಲು ಬಂದಾಗ ಇಲ್ಲಿದ್ದ ಹಳ್ಳದಲ್ಲಿ ಕೆಂಪು ಕಾಲುಗಳಿದ್ದ ಒಂದು ಸಣ್ಣ ಕಪ್ಪೆ ತೇಲುತ್ತಿತ್ತು ನಾನು ಎಷ್ಟು ಓಡಿಸಲು ಪ್ರಯತ್ನಿಸಿದರು ಅದು ಹೊರಗೆ ಜಿಗಿಯುತ್ತಿರಲೇ ಇಲ್ಲ. ಏಕ್ದಂ ಏನೂ ತೋಚದೆ ಅಲ್ಲೆ ಬಿದ್ದಿದ್ದ ಕಲ್ಲಿಂದ ಕಪ್ಪೆ ತೇಲುವಾಗ ಹೊಡದೆ ನೋಡು ಆಗ ಕಪ್ಪೆ ಚಿಲ್ಲನೆ ರಕ್ತಸಿಕ್ತವಾಗಿ ತೇಲಿತು. ಆಮೇಲೆ ಎಂದ. ಆಮೇಲೇನು ಕಪ್ಪೆಯನ್ನು ಹೊರಹಾಕಿ, ರಕ್ತವಾಗಿದ್ದ ನೀರನ್ನು ಬೊಗಸೆಯಲಿ ಎತ್ತಿ ಹಾಕಿ ಅದೇ ನೀರನ್ನು ಒಂದು ಗುಟುಕು ಏರಿಸಿ, ಅರಿವೆ ತುಂಬಿಕೊಂಡು ಹೋದೆ ಎಂದೆ. ಥೂ ಎಂದ ಅಖಿಬ್. ಇನ್ನೇನು ಮಾಡುವುದು ನಡಿ ಆ ಕಡೆ ಹೋಗೋಣ ಎಂದು ಆ ದಿಣ್ಣೆ ಏರಿದೆವು.’ ನೂರುಲ್ಲಾ ತ್ಯಾಮಗೊಂಡ್ಲು
ಈ ಔಷಧ ಎಲ್ಲಿಂದ ಬಂದಿತು, ಯಾರು ಫಾರ್ಮ್ಯುಲಾ ಬರೆದರು, ಈ ಸೂಜಿ, ಕತ್ತರಿ, ನಳಿಕೆ, ಉಪಕರಣ, ದ್ರಾವಣ, ಆಮ್ಲಜನಕ ಯಾರು ತಯಾರಿಸಿದರು, ಹೊತ್ತು ಸಾಗಿಸಿದರು, ನಮ್ಮನ್ನು ಉಪಚರಿಸುವವರ ಮೂಲವೇನು ಹಿನ್ನೆಲೆಯೇನು, ಇಂಥ ಸ್ವಾರ್ಥಪರ ಆಲೋಚನೆಗಳು ಬರುವುದುಂಟೆ? ಜೀವವೇ ಬಾಯಿಗೆ ಬಂದಾಗ ಉಳಿಯುವುದೇನು; ಮೌನ-ಪ್ರಾರ್ಥನೆ. ಎಲ್ಲ ಸ್ವಾರ್ಥ-ಪ್ರಭಾವಗಳ ತಂತು ಕತ್ತರಿಸಿಕೊಂಡು ನಾವೆಂಬ ನಾವಷ್ಟೇ ಶುದ್ಧಾನುಶುದ್ಧವಾಗಿ ಉಳಿಯಲು ಆತ್ಮಾವಲೋಕನದ ಮಹಾಸಂದರ್ಭ ಸೃಷ್ಟಿಯಾಗಿರುವ ಈ ಹೊತ್ತಿನಲ್ಲಾದರೂ ಅರಿವು-ಅನುಕಂಪ ಶಾಶ್ವತವಾಗಿ ನಮ್ಮಲ್ಲಿ ಮನೋಗತವಾಗುವುದೆ? ಯೋಚಿಸಿ, ನರನಾಡಿಗಳಲ್ಲಿ ರಕ್ತವೇರಿಸಿಕೊಳ್ಳುವಾಗ, ಅಂಗಗಳನ್ನು ಕಸಿ ಮಾಡಿಸಿಕೊಳ್ಳುವಾಗ, ಪ್ಲಾಸ್ಮಾ ನಮ್ಮ ದೇಹ ಸೇರುವಾಗ ಹೆಣ್ಣು-ಗಂಡು-ಜಾತಿ-ಮತ-ಪಂಥ-ಗಡಿ-ಪಕ್ಷಗಳೆಂಬ ವಿಷಬೀಜಗಳು ನಮ್ಮನ್ನು ತಾಕಿದ್ದಿದೆಯೇ? ಮನೆಓಣಿಗಳಿಂದ ಹಿಡಿದು ಸಾಮಾಜಿಕ ಜಾಲತಾಣಗಳವರೆಗೆ ಈತನಕವೂ ನಮ್ಮ ‘ಅಸ್ತಿತ್ವ’ ಎನ್ನುವುದಕ್ಕೆ ಎಷ್ಟೆಲ್ಲ ರೂಪದಲ್ಲಿ ಕೃತ್ರಿಮ ಮತ್ತು ಪೊಳ್ಳುತನದ ಎಳೆಗಳನ್ನು ಜೋಡಿಸಿಕೊಳ್ಳುತ್ತಿದ್ದೇವೆ? ಇವೆಲ್ಲವೂ ದಾಖಲೆಯರೂಪದಲ್ಲಿ ಜಗದ್ವ್ಯಾಪಿಯಾಗಿ ನಮ್ಮನ್ನು ಮತ್ತಷ್ಟು ಬೆತ್ತಲೆಗೊಳಿಸುತ್ತವೆ ಎನ್ನುವ ಕನಿಷ್ಟ ಪ್ರಜ್ಞೆಯೂ ಇಲ್ಲದಂತೆ ವರ್ತಿಸುತ್ತಿರುವ ನಾವುಗಳು ಆತ್ಮಸಾಕ್ಷಿಯನ್ನು ಮಾರಿಕೊಂಡು ಹೊರಟಿದ್ದಾದರೂ ಎಲ್ಲಿಗೆ? ಸಹಜವಾಗಿ ನಾವೆಲ್ಲ ಬದುಕಿದ್ದೆವು. ಆದರೆ ಬರುಬರುತ್ತ ಅದು ಸಾಧ್ಯವಾಗುತ್ತಿಲ್ಲವೇಕೆ, ಸಮತೋಲನ ತಪ್ಪಿದ್ದೆಲ್ಲಿ? ನಿಜವಾದ ಜ್ಞಾನವರಸಿ ಹೊರಟಲ್ಲೆಲ್ಲ ರಾಜಕಾರಣದ ಕಮಟು. ಪ್ರೀತಿ-ಸಹಬಾಳ್ವೆಯ ಹಾದಿಯಲ್ಲೆಲ್ಲ ಅನುಮಾನ, ಪ್ರತಿಷ್ಠೆಯ ಅಡ್ಡಗೋಡೆ. ಹೀಗಿರುವಾಗ ಕಂಗೆಡಿಸುತ್ತಿರುವ ವಾಸ್ತವಕ್ಕೆ, ಪರಿಸ್ಥಿತಿಯ ಅಸಹಾಯಕತೆಗೆ ನೆನಪುಗಳೇ ನೇವರಿಕೆ, ಜೀವಕ್ಕೆ ಗುಟುಕು.
ಇದೋ ‘ಟಿವಿ9 ಕನ್ನಡ ಡಿಜಿಟಲ್ : ಏಸೊಂದು ಮುದವಿತ್ತು’ ಸರಣಿ ನಿಮ್ಮ ಓದಿಗೆ. ನಿಮ್ಮನ್ನು ವಿಚಲಿತಗೊಳಿಸುತ್ತಿರುವ ವರ್ತಮಾನದ ಯಾವ ಸಂಗತಿಗಳೂ ನಿಮ್ಮ ಬಾಲ್ಯವನ್ನು, ಕಳೆದ ಪರಿಸರವನ್ನು, ಪ್ರವಾಸಕ್ಕೆ ಹೋದ ಊರುಗಳ ವಾತಾವರಣವನ್ನು, ಇದಿರಾದ ವ್ಯಕ್ತಿಗಳ ಒಡನಾಟವನ್ನು, ಪ್ರಸಂಗಗಳನ್ನು ನೆನಪಿಸುತ್ತಿರಬಹುದು. ತಡ ಯಾಕೆ? ನಿಮ್ಮ ಬರಹದೊಂದಿಗೆ ಆಲ್ಬಮ್ಮಿಗಂಟಿರುವ ಫೋಟೋಗಳನ್ನು ಮೆಲ್ಲಗೆ ಹಾಳೆಗಳಿಂದ ಬಿಡಿಸಿ ಇಲ್ಲಿ ತೂರಿಬಿಡಿ ಇ ಮೇಲ್ : tv9kannadadigital@gmail.com
ಕಚೇರಿಗೆ ಬಿಡುವು ಸಿಕ್ಕಿರುವುದರಿಂದ ಕವಿ ನೂರುಲ್ಲಾ ತ್ಯಾಮಗೊಂಡ್ಲು ತಮ್ಮ ಊರಿಗೆ ಮರಳಿದ್ದಾರೆ. ಈಗಲೂ ಕ್ವಾರೆ ಕೆಲಸದಲ್ಲಿಯೇ ಕಷ್ಟಸುಖ ಕಾಣುತ್ತಿರುವ ತಮ್ಮ ತಂದೆಗೆ ದಿನವೂ ಬುತ್ತಿ ಕೊಡಲು ಹೋಗುತ್ತಿದ್ದಾರೆ. ಈ ಸಂದರ್ಭದಲ್ಲಿ ಈ ಸರಣಿಗಾಗಿ ಬಾಲ್ಯದ ನೆನಪುಗಳನ್ನು ಜೀಕಿದ್ದಾರೆ.
*
ಈ ಬದುಕಿನ ಯಾವುದೇ ಒಂದು ಜೀವಚಲನವನ್ನು ದಾಖಲಿಸಬೇಕಾದುದು ನಮ್ಮ ಕರ್ತವ್ಯ. ಹಾಗಂದ ಮಾತ್ರಕೆ ಎಲ್ಲವೂ ದಾಖಲೆಯಾಗುತ್ತದೆ ಎಂದೇ, ಹಾಗೊಂದು ವೇಳೆ ದಾಖಲೆಯಾಗುವುದಾದರೆ ಯಾವ ಜೀವ ಸಂಚಲನದ ದಾಖಲೆ, ಮನುಷ್ಯನದೇ , ಮನುಷ್ಯನೊಂದಿಗೆ ಸಂಘಿಯಾಗುವ ಪಶು ಪಕ್ಷಿಗಳದೇ, ಇಲ್ಲವೆ ಡಾರ್ವನ್ನ ಥಿಯರಿಯಂತೆ ಕಾಡು ಮೃಗಗಳದ್ದೇ, ಹಾಗಾದರೆ ಯಾರ ದಾಖಲೆ, ಯಾವ ಯಾವ ಜೀವ ಸಂಕುಲದ ಚಲನೆಯ ಕುರಿತು ದಾಖಲಿಸಬೇಕಾದುದು? ಈ ಭೂಮಿಯ ಮೇಲಿನ ಯಾವ ಚರಾಚರವೂ ಅಷ್ಟೇ, ತಮ್ಮದೊಂದು ಸಂಸಾರವನ್ನು ಕಟ್ಟಿಕೊಂಡಿರುತ್ತವೆ. ಆದರೆ ಅವಕ್ಕೆ ಯಾವ ಪೂರ್ವ ಪ್ರಜ್ಞಾ-ಫಲವೂ ಆಪೇಕ್ಷಣಿಯವಲ್ಲ. ಸುಮ್ಮನೆ ನೋಡಿ ಹಕ್ಕಿಗಳು ಗೂಡು ಕಟ್ಟಿ ತಮ್ಮ ಮುಂದಿನ ಸಂತಾನವನ್ನು ಕಾಪಾಡುತ್ತವೆ. ಹಾಗೆ ನೋಡಿದರೆ ಎಲ್ಲ ಜಲಚರ, ಪ್ರಾಣಿ-ಪಕ್ಷಿಗಳು ಕೇವಲ ಒಂದು ನಿರ್ದಿಷ್ಟ ಕಾಲಕ್ಕಾದರೂ ಬದುಕನ್ನು ಕಟ್ಟಿಕೊಂಡು ಸಂತಾನ ವೃದ್ಧಿಗೆ ಶ್ರಮಿಸುತ್ತವೆ. ಈ ನಡೆ ಭೂಮಿಯ ಮೇಲಿನ ನೈಸರ್ಗಿಕ ಕ್ರಿಯೆ ಆಗಿದೆ. ಹೀಗೆಯೇ ಮನುಷ್ಯನೂ ಸಹ ಈ ನಿಸರ್ಗದ ಸಂಘದಲ್ಲಿ ಪೂರ್ಣ ಪ್ರಜ್ಞೆ ತಾಳಿದ ಸತೃಪ್ತ ಸಂಘಜೀವಿ. ಆದರೆ ಪಶು ಪಕ್ಷಿಗಳ ಜೀವ, ಜೀವನ ಗೌಣವಾಗಿಸಿದ್ದಾನೆ ಮನುಷ್ಯ. ಇರಲಿ.
ನಾನು ಮೇಲೆ ಹೇಳಿದಂತೆ ನಮ್ಮ ಬದುಕಿನಲ್ಲಿ ನಾವು ಕಂಡ, ಅನುಭವಿಸಿದ ಚಿರ-ಅಚಿರ ಸಂಗತಿಗಳು, ಕ್ಷಣಗಳು, ದಿನಗಳು ಇಲ್ಲವೆ ಯಾವುದೇ ಸಂದಿಗ್ಧತೆಗೆ ಸಿಕ್ಕು ನಲುಗಿ ಕಳೆದುಕೊಂಡ ಕನಸುಗಳು ಅಥವಾ ಭರವಸೆಗಳು ಹೀಗೆ ನಮ್ಮ ಮನಸ್ಸಿನ ಅಂಗಳದಲ್ಲಿ ಮೂಡಿಸಿದ ಹೆಜ್ಜೆ ಗುರುತುಗಳನ್ನು ಮೆಲಕು ಹಾಕುವುದು ಮನುಷ್ಯನ ಸಹಜ ಚೇತೋಹಾರಿ ನಡಾವಳಿ. ಇದು ಮನಸ್ಸಿನಲ್ಲಿ ಮೂಡಬೇಕಾದರೆ ಆ ಹಿಂದಿನ ಪರಿಸದಲ್ಲಿ ಮತ್ತೆ ಒಂದಾಗಬೇಕು ಅಥವಾ ಆ ಪರಿಸರದ ಸ್ಮೃತಿ ಮರುಕಳಿಸಬೇಕು. ಆಗ ಮಾತ್ರ ನೆನಪಿನ ರೆಕ್ಕೆಗಳು ಮೂಡುತ್ತವೆ.
ಈ ಇಷ್ಟು ಏಕೆ ಪೀಠಿಕೆಯಾಗಿಸಿದೆ ಎಂದರೆ, ಈ ಕೊರೋನಾದಿಂದಾಗಿ ಕಚೇರಿಗೆ ಬಿಡುವು ಸಿಕ್ಕು ಮತ್ತೆ ಆ ಪರಿಸರದ ಬಾಹುಗಳಲಿ ಸೇರಿದ್ದೆನಾದ್ದರಿಂದ. ಸುಮಾರು ನನಗಾಗ ವಯಸ್ಸು ಹತ್ತು ಹನ್ನೆರಡು ಇರಬೇಕು. ಆಗಿನಿಂದ ನಾನು ಪೊಲೀಸ್ ಕೆಲಸಕ್ಕೆ ಸೇರುವವರೆಗೂ ಅಪ್ಪನಿಗೆ ಅರೆ (ಕ್ವಾರೆ ಅಥವಾ ಬಂಡೆ) ಮೇಲೆ ಬುತ್ತಿ ಹೊತ್ತಿದ್ದೇನೆ. ಅಪ್ಪ, ಅಮ್ಮ ಸೇರಿದಂತೆ ನಾವು ಐದು ಜನರ ಒಂದು ಚಿಕ್ಕ ಕುಟುಂಬ. ನಾನು ಮೊದಲ ಮಗ ನಂತರ ಇಬ್ಬರು ತಂಗಿಯರು. ಈ ಒಂದು ಸಂಸಾರವನ್ನು ಹೆಗಲಿಗೇರಿಸಿದ ಅಪ್ಪ ದಿನವೂ ನಡದೇ ಸುಮಾರು ಮೂರು ಮೈಲಿ ದೂರದ ಬಂಡೆಗೆ ಹೋಗುತ್ತಿದ್ದರು. ನಾನು ಮೇಲೆ ಹೇಳಿದಂತೆ ಆ ನನ್ನ ಸಣ್ಣವಯಸ್ಸಿನಲ್ಲಿ ಅಪ್ಪನಿಗೆ ಬುತ್ತಿ ಹೊತ್ತು ನಡೆಯುತ್ತಿದ್ದೆ. ಈ ನಡುವೆ ನಾನು ಹಲವು ವರುಷ ನಡುವೆ ಒಮ್ಮೊಮ್ಮೆ ಅಪರೂಪಕ್ಕೆ ಬುತ್ತಿ ಹೊತ್ತಿದ್ದೇನೆ. ಆದರೆ ಇವತ್ತು ಒಂದು ವಿಶೇಷವೆಂದರೆ ಅಪ್ಪನಿಗೆ ಬುತ್ತಿ ಹೊತ್ತು ನಡೆಯುತ್ತಿರುವುದು ನಾನೊಬ್ಬನೇ ಅಲ್ಲ ಜೊತೆಗೆ ಮಗ ಅಖಿಬನೂ ಇದ್ದಾನೆ.
ನಮ್ಮೂರು ತ್ಯಾಮಗೊಂಡ್ಲುವಿನಿಂದ ಸುಮಾರು ಮೂರು ಮೈಲಿ ದೂರದಲ್ಲಿದ್ದ ಗುಡ್ಡದಂಥ ನಿಡಿದಾದ ಬಂಡೆಗೆ ಬುತ್ತಿ ಹೊತ್ತು, ಕಲ್ಲು ರಸ್ತೆ ತುಳಿದು ನಡೆದು ಹೋಗುತ್ತಿದ್ದೆ. ಹೀಗೆ ಮೊದಮೊದಲು ಕೆಲ ದಿನಗಳು ನಡೆದು ಹೋಗುತ್ತಿದ್ದೆ. ಇಲ್ಲವೆ, ಚಪ್ಪಡಿಕಲ್ಲು ತರಲು ಹೋಗುತ್ತಿದ್ದ ಎರಡು ಜೋಡೆತ್ತಿನ ಗಾಡಿ ಸಿಕ್ಕರೆ ಅದನ್ನು ಏರಿ ಹೋಗುತ್ತಿದ್ದೆ. ಈ ಜೋಡೆತ್ತಿನ ಗಾಡಿಗಳು ಆಗ ನಾಲ್ಕೈದು ಇದ್ದವು. ನಂತರ ಅಪ್ಪ ಹಳೆ ಸೈಕಲ್ ಕೊಂಡರು, ಮಗ ಬರುವಾಗ ಸೈಕಲ್ ತುಳಿದು ಬರಲೆಂದು. ನಾನು ಸೈಕಲ್ ಏರಿ ಜಲ್ಲಿಕಲ್ಲು ರಸ್ತೆಯಲಿ ಸರ್ಕಸ್ ಮಾಡಿ ಬಂಡೆಗೆ ತಲುಪುತ್ತಿದ್ದೆ. ಆದರೆ ಇವತ್ತು ಹಾಗೆ ನನ್ನದೇ ಫ್ಯಾಶನ್ ಪ್ರೊ ದ್ವಿಚಕ್ರ ಬೈಕಲ್ಲಿ ಮಗನ ಜೊತೆ ಹೋಗುವಾಗ ಕಾಲ ಹೇಗೆ ಬದಲಾಯಿತಲ್ಲ ಎಂದು ನೆನೆದಾಗ ಹೃದಯ ಕಂಪಿಸಿತು.
ದಾರಿಯಲ್ಲಿ ಹೋಗುವಾಗ ನೆನಪು ರಸ್ತೆಯ ಇಕ್ಕೆಲಗಳಲ್ಲಿ ಮಾಸಲು ಬಿದ್ದ ತರಗೆಲೆಗಳಿಂದ ಹಾರಿಹಾರಿ ಬರುತ್ತಿತ್ತು. ಆ ಬಾಲ್ಯದ ಅನುಭವವನ್ನು ತಂಬೆಲರು ಹಾಡಿದಂತಾಯಿತು. ದಾರಿ ದಿಕ್ಸೂಚಿ ಒಂದೇ ನೇರವಾದರೂ ಆ ಹಿಂದಿನ ನಿಸರ್ಗ ಈಗಿಲ್ಲ. ಎಲ್ಲವೂ ಬದಲಾಗಿದೆ. ಅಲ್ಲಲ್ಲಿ ಹೊಲಮಾಳುಗಳಲ್ಲಿ ಮನೆಗಳು ಎದ್ದಿವೆ. ಆ ಕೊರಕಲು ಕೋರೆಗಳಿಲ್ಲ. ನನ್ನ ನಡಿಗೆಗೆ ನೆರಳು ನೀಡುತ್ತಿದ್ದ ಆ ಮರಗಳು ಇಲ್ಲ. ರಸ್ತೆಯು ಕರಿ ಹೆಬ್ಬಾವು ಮಲಗಿದಂತೆ ರಸ್ತೆಗೆ ಟಾರು ಬಿದ್ದಿದೆ. ದಣಿವು ಬಾಯರಿಕೆಯಾದರೆ ಪಂಪ್ಸೆಟ್ಗಳ ನೀರು ದಾರಿ ಹೋಕರಿಗೆ, ದನ ಕರುಗಳಿಗೆ ದಣಿವು ಆರಿಸುತ್ತಿತ್ತು. ಈಗ ಅವಿಲ್ಲ. ಒಂದೇ ಒಂದು ಮಾತ್ರ ಜೀವ ಉಳಿಸಿಕೊಂಡಿದೆ.
ನೀ ಬರುವ ದಾರಿಯಲಿ ಹಗಲು ತಂಪಾಗಿ ಬೇಲಿಗಳ ಸಾಲಿನಲಿ ಹಸಿರು ಕೆಂಪಾಗಿ ಪಯಣ ಮುಗಿಯುವ ತನಕ ಎಳಬಿಸಿಲ ಮಣಿ ಕನಕ ಸಾಲು ಮರಗಳ ಮೇಲೆ ಸೊಬಗ ಸುರಿದಿರಲಿ!
ಕೆ.ಎಸ್.ನ. ಈ ಕವಿವಾಣಿಯಂತೆ ಕಂಡ ಆ ನನ್ನ ಬಾಲ್ಯದ ನಿಸರ್ಗವೇ ಇರಲಿಲ್ಲ. ಬಹುಶಃ ಈ ಹಾಡನ್ನು ಆಕಾಶವಾಣಿಯಲ್ಲಿ ಕೇಳಿದ ಮೇಲೆ, ನಾನು ಹಾಗೆ ಸೈಕಲ್ಲೇರಿ ಪಯಣಿಸುವಾಗ ಆ ಮೈ ನವಿರೇಳಿಸುವ ಸೊಬಗು ಕಂಡಿದ್ದೆ. ಮತ್ತೆ ಅಷ್ಟೇ ಕಾಕತಾಳಿಯವಾಗಿ ತೋಟನ ಹಳ್ಳಿ ದಾಟಿದರೆ ಆ ಸೊಬಗು ಸ್ವಲ್ಪ ಬದಲಾಗಿತ್ತು. ಈಗ ತೋಟನ ಹಳ್ಳಿಗೆ ಹತ್ತಿರವಾದಂತೆ ಮಗ ಕೇಳಿದ ಅಪ್ಪ ಯಾವೂರಿದು? ಇದು ತೋಟ್ನಳ್ಳಿ ಎಂದೆ. ಹೌದಾ ಅದಕ್ಕೆ ಇಲ್ಲಿ ಮಾವಿನ ತೆಂಗಿನ ಅಡಿಕೆ ತೋಟಗಳಿರುದು ಅಲ್ವ ಎಂದ. ಹ್ಞು ಇಲ್ಲಿ ತೋಟಗಳಿರುವುದರಿಂದ ಈ ಹೆಸರು ಬಂದಿರಬೇಕು ಎಂದು ಹೇಳಿದೆ. ತೋಟ್ನಳ್ಳಿ ದಾಟಿದರೆ ನೀಲಗಿರಿ ತೋಪು, ಬಿದಿರು ಮೆಳೆ, ಪೊದೆ ಹೊದರು ಜಾಡು ಮುಳ್ಳುಕಂಟಿಗಳು ತರ ತರದ ಮರಗಳು ಇದ್ದವು. ನಮ್ಮ ಬಯಲುಸೀಮೆ ಜನಕ್ಕೆ ಇಂಥ ವಾತಾವರಣ ಕಾಡು ಕಂಡಂತೆ ಭಾಸವಾಗುತ್ತಿತ್ತೊ ಇಲ್ಲವೊ ನನಗಂತು ಕಾನಿನಂತೆ ಕಾಣುತ್ತಿತ್ತು. ಈ ಅಕ್ಕ ಪಕ್ಕದ ಕಾಡಿನಂಥ ಪರಿಸರದ ನಡುವೆ ದಾರಿಯಲಿ ಸೀಳಿ ಹೋಗುತ್ತಿದ್ದರೆ, ಮೈ ಒಂದು ಕ್ಷಣ ನಡುಗುತ್ತಿತ್ತು. ತೋಟ್ನಳ್ಳಿ ತಿರುವು ಪಡೆದಾಗ ಅಲ್ಲಿ ಯಾರೊ ಭೂತವಾಗಿ ಸಂಚರಿಸುವ ಕತೆ ಕೇಳಿದ್ದ ನನಗೆ ಆಗ ಭಯ ಒಂದು ಕ್ಷಣ ಆವರಿಸಿ ಹೋಗುತ್ತಿತ್ತು. ಆಗ ದೇವರ ಜಪ ಮಾಡಿ ಸೈಕಲನ್ನು ಜೋರಾಗಿ ತುಳಿಯುತ್ತಿದ್ದೆ. ನಂತರದ ಒಂದೆರಡು ವರುಷಗಳ ತರುವಾಯ ಈ ಭಯ ಕರಗಿಬಿಟ್ಟಿತ್ತು.
ಸುಮಾರು ನೂರು ಮೀಟರ್ ದೂರದಿಂದಲೇ ಅಪ್ಪನನ್ನು ಗಮನಿಸಿದ ಅಖಿಬ್ ಅಬ್ಬ ಅಲ್ನೋಡಿ “ಹಾಪು ಅಬ್ಬ” (ನನ್ನ ತಂಗಿಯರ ಮಕ್ಕಳು ಮತ್ತು ನನ್ನ ಇಬ್ಬರು ಮಕ್ಕಳು ಅಜ್ಜನನ್ನು ‘ಹಾಪು’ ಎಂದೇ ಸಂಬೋಧಿಸುತ್ತಿದ್ದರು. ಆದರೆ ಈ ಪದಕ್ಕೆ ಯಾವ ಅರ್ಥವೂ ಇಲ್ಲ. ಈ ಶಬ್ದ ಹುಟ್ಟಿದ ಕತೆಯೇ ವಿನೋದವಾದುದು) ಎಂದ. ಅಪ್ಪ ಬೆಂಕಿಗೆ ಎದುರಾಗಿ ನಿಂತಿದ್ದರು. ಹ್ಞು ಬೆಂಕಿ ಹಾಕಿದ್ದಾರೆ ಎಂದೆ. ಅಪ್ಪನಿಗೆ ಹತ್ತಿರವಾದೆವು. ನಾನು ಬೈಕನ್ನು ನಿಲ್ಲಿಸುವ ತಡ ಅಖಿಬ್ ತರಾತುರಿಯಾಗಿ ಇಳಿದು ಅಪ್ಪನ ಬುತ್ತಿಯನ್ನು ಹಿಡಿದು ಓಡಿದ. ಆಗ ನಾನು ಮೊದಲ ಬಾರಿಗೆ ಅಪ್ಪನಿಗೆ ಬುತ್ತಿ ತಂದ ನೆನಪು ಅಪ್ಪನ ಎದುರು ಏಳುತ್ತಿದ್ದ ಹೊಗೆಯಲಿ ತೇಲಿತು. ಆಗ ಅಪ್ಪ ‘ಪಾಳಿ’ ಕಡೆದು ಒಂದು ಕಡೆ ‘ಪರೆ’ ಮಾಡಿ ಇನ್ನೊಂದು ಕಡೆ ಹೊಂಡ ತೋಡಿ ‘ಇಲಿಮು’ಗಳನ್ನು ಕಟ್ಟುತ್ತಿದ್ದ ನೆನಪು.
ಅಪ್ಪ ಮೊಮ್ಮಗ ಓಡಿ ಬರುತ್ತಿರುವುದು ಗಮನಿಸಿ ಅಲ್ಲೇ ನೆರಳಲ್ಲೆ ಇಡು ಮಗ ಅಲ್ಲೇ ಬರ್ತೀನಿ ಎಂದರು. ಏನಪ್ಪ ಇಷ್ಟೊತ್ತಿಗೆ ಹೇಳೋದ, ಬೆಳಗ್ಗೆ ತಿಂಡಿನೂ ಇಲ್ಲ, ಈಗ ಹೇಳೋದ ಊಟ ತಗೊಂಡ್ ಬರ್ರಿ ಅಂತ ಎಂದ. ನೋಡು ಈಗ ಎರಡೂವರೆ ಆಗೈತೆ, ಬನ್ನಿ ಊಟ ಮಾಡಿ ಎಂದನು. ಇರೋ ಬರ್ತೀನಿ. ಈ ಹಾಳ್ ನನ್ಮಗಂತ್ ಮೈದಾನ ಬೇಗ ಹೋಗಲೇ ಇಲ್ಲ ಎಂದು ಕೈಯಲ್ಲಿ ಹಿಡ್ಕೊಂಡಿದ್ದ ‘ಚೀಬತ್ತಿ’ ಕೆಳಕ್ಕೆ ಹಾಕಿದರು. ಹಾಪು ಅಬ್ಬ ಏಕೆ ಬೆಂಕಿ ಹಾಕಿರೋದು ಎಂದ. ಅಪ್ಪ ಬೆಂಕಿ ಹಾಕಿದ್ರೇನೆ ಕಣೋ ಮೈದಾನ ಸುಡೋದು. ಈ ಬೆಂಕಿಗೆ ಮೈದಾನ ಹೆಬ್ಕೊಂಡು ಏಳೋದು ಆಮೇಲೆ ಕಟ್ಟು ಹಾಕಿ, ಮಂಡು ಹಾಕಿ, ಚಪ್ಪಡಿಗಳು ಸಿಗಿಯೋದು ಎಂದು ಹೇಳಿದರು. ಅಖಿಬನಿಗೆ ಈ ಅರೆ ಮೇಲಿನ ಭಾಷೆ ಅರ್ಥವಾಗಲಿಲ್ಲ ಅನಿಸಿತು. ವ್ಞೂ ಬನ್ನಿ ಈಗ ಹೊತ್ತಾಯ್ತು ಎಂದು ಕೈ ಹಿಡಿದ. ಆಗ ಇರು ಇರು ಕೈತೊಳೆದು ಬರ್ತೀನಿ ಎಂದು ಬಂಡೆ ಕೊರೆದು ತಗ್ಗಾಗಿದ್ದ ಹಳ್ಳದಲ್ಲಿ ಕೈ ತೊಳೆದುಕೊಂಡು ಬಂದರು. ಆಗ ಮೂವರು ಸುಡುವ ಬೆಂಕಿಗೆ ಎದುರಾಗಿ ನಿಂತಿದ್ದೆವು ಈ ನಿಂತಿರುವ ಸ್ಥಳ ಸಂಗಮವೇ ನನಗೆ ಅಪರೂಪವೆನಿಸಿತು. ಮತ್ತು ಅಷ್ಟೇ ವಿಶೇಷವೆನಿಸಿತು. ಈ ಸಮಯದಲ್ಲಿ ಮೂವರರ ಮನದಲ್ಲಾದ ಸಂಭ್ರಮ, ಸಂಕಟ ಅನಿರ್ವಚನೀಯ ಎನಿಸಿತು. ಧಗಧಗ ಸುಡುತ್ತಿರುವ ಬಿಸಿಲಿಗೆ ಅಲ್ಲಿದ್ದ ‘ಆರೆಕೋಲು’ ಕಾದು ಹಣ್ಣಾಗಿದೆ. ಹೊತ್ತು ಮೂಡುವ ಮೊದಲೇ ಬೆಂಕಿ ಹಾಕಿದ್ದರೂ ದೊಡ್ಡ ಮೈದಾನವಾದ್ದರಿಂದ ಏಕೊ ಹಿಡಿದಿದೆ. ಕಂಟುಗಿಂಟು ಇದ್ದವೆ? ಎಂದೆ. ಅಪ್ಪ ಹ್ಞು ಅಲ್ಲೊಂದು ಕಂಟು ತೇಲಕೆ ಬಿಡ್ಲಿಲ್ಲ ಈಗ ಹೋಗಿದೆ ಎಂದರು. ಒಂದ್ ಫೋನ್ ಮಾಡಿದ್ರೆ ಬೇಗ ತರ್ತಿದ್ವಲ್ಲ ಎಂದಾಗ ಏಯ್ ನಡಿಲಾ ಅತ್ತ ಹಸಿವೇ ಆಗ್ಲಿಲ್ಲ ಎಂದರು.
ಅಪ್ಪನ ಈ ಉಪೇಕ್ಷಿತ ಮಾತು ಹಲವು ಸಲ ಕೇಳಿದ್ದೇನೆ. ಊಟಕ್ಕಿಂತ ನೀರೇ ಹೆಚ್ಚು ಜೀವ ದ್ರವ್ಯವಾಗಿದೆ ಅಪ್ಪನಿಗೆ ಎಂದು ಅಂದುಕೊಂಡಾಗ ಕರುಳು ಚುರುಕ್ ಎಂದಿತು. ಅಪ್ಪ ನಾನು ಮಗ ಮೂವರು ಅದೆಂಥದೋ ಕಾಡು ಮರದ ನೆರಳಿಗೆ ಬಂದೆವು. ಅಖಿಬನಿಗೆ ಹೇಳಿದೆ ನೋಡು ಇದು ಅಪ್ಪ ಉಣ್ಣುವಾಗ ಕೈ ನೀರು ತೊಳೆದು, ಊಟವಾದ ಮೇಲೆ ನೀರು ಹಾಕುತಿದ್ದರು. ಅದಕ್ಕೆ ಇದು ಇಷ್ಟು ದೊಡ್ಡದಾಗಿ ಬೆಳೆದಿದೆ ಎಂದೆ. ಅಖಿಬ್ ಹೌದಾ ಹಾಪು ಎಂದ. ವ್ಞೂ ಕಣೊ ಎಂದರು. ಅವರ ಈ ಉಂಕಾರದಲ್ಲಿ ಎರಡು ಅರ್ಥಗಳು ಹೊಳೆದವು, ಒಂದು ಅಪ್ಪ ನನ್ನ ಬೆಳೆಸಿದ್ದು ಮತ್ತು ಆ ಮರಕ್ಕೆ ನೀರು ಹಾಕಿ ಬೆಳೆಸಿದ್ದು ಎರಡಕ್ಕೂ ಒಂದೇ ವಾಕ್ಯದಲ್ಲಿ ಉತ್ತರಿಸುತ್ತಿದ್ದರೆಂದೆನಿಸಿತು. ಬನ್ನಿ ಅಪ್ಪ ಹಾಪು ಅಬ್ಬ ಊಟ ಮಾಡುತ್ತಿರಲಿ ಹಾಗೆ ಸುತ್ತಿ ಬರೋಣವೆಂದು ಅಖಿಬ್ ಹೇಳಿದ. ನಡಿ ಹೋಗೋಣವೆಂದು ಇಬ್ಬರು ಹೊರಟೆವು. ಹಾಗೆ ಬಂಡೆಯ ಉತ್ತರ ದಿಕ್ಕಿಗೆ ಹೋಗುತ್ತಿರುವಾಗ ಆಗ ನಾನು ಅರವಿಯಲ್ಲಿ ನೀರು ತರುತ್ತಿದ್ದ ಜಾಗದತ್ತ ಕಾಲು ಹಾಕಿದೆ. ಅಖಿಬನು ಮುಂದೆ ಮುಂದೆ ಸಾಗುತ್ತಿದ್ದ. ಅಲ್ಲಿ ದಿಣ್ಣೆಯಾಕರದ ಕಡೆ ಬಿಳಿಯ ಮಣ್ಣು ಗುಡ್ಡೆ ಕಾಣಿಸುತಿದ್ದೆಯಲ್ಲ ಅಲ್ಲಿಂದ ನಾನು ಅಪ್ಪನಿಗೆ ನೀರು ತರುತ್ತಿದ್ದೆ ಎಂದು ಹೇಳಿದೆ. ಅಖಿಬ್ ಹೌದ, ಎಂದು ಅಲ್ಲಿಗೆ ಚೆಂಗನೆ ಓಡಿದ. ನೋಡು ಇಲ್ಲೊಂದು ಹಳ್ಳವಿತ್ತು. ಆಗ ಬೆಳ್ಳನೆಯ ನೀರು ಯಾವಾಗಲೂ ಇರುತ್ತಿತ್ತು. ಅಪ್ಪನಿಗೆ ನೀರು ತರುತ್ತಿದ್ದ ಜಾಗವಿದು. ಈ ನೀರಿಂದ ಬಂಡೆಯವರೆಲ್ಲರೂ ದಣಿವಾರಿಸಿಕೊಳ್ಳುತಿದ್ರು ಎಂದೆ. ಮತ್ತೇಕೆ ಈಗ ಇಲ್ಲ ಎಂದ. ಅಲ್ನೋಡು ಮೇಲಲ್ಲಿ ಆ ನೀಲಗಿರಿ ಮರಗಳನ್ನು ಬೆಳೆಸಿದರಲ್ಲ ಆವಾಗಿಂದ ಇಲ್ಲಿ ಜರೆ ಬರೋದೊ ನಿಂತೋಯ್ತು ಎಂದೆ. ಜರೆ ಅಂದರೆ ಎಂದ. ಜರೆ ಎಂದರೆ ಗುಡ್ಡದಂಥ ಸ್ಥಳಗಳಿಂದ ನೀರು ಪಜರುತ್ತದೆ, ಅಂದರೆ ನೀರು ನಿಧಾನಕ್ಕೆ ತೆಳುವಾಗಿ ಉಬ್ಬಿ ಹರಿಯುತ್ತದೆ. ನೋಡು ಈ ದಿಣ್ಣೆಯಿಂದ ನೀರು ಪಜರಿ ಬರುತ್ತಿತ್ತು. ಇಲ್ಲಿನ ಬಂಡೆಯವರು ಇಲ್ಲಿ ಹಳ್ಳ ಮಾಡಿ ನೀರು ಸಂಗ್ರಹಿಸಿ ನೀರು ಕುಡಿಯುತ್ತಿದ್ದರು ಎಂದೆ.
ಒಮ್ಮೆ ನೀರು ತರಲು ಬಂದಾಗ ಇಲ್ಲಿದ್ದ ಹಳ್ಳದಲ್ಲಿ ಕೆಂಪು ಕಾಲುಗಳಿದ್ದ ಒಂದು ಸಣ್ಣ ಕಪ್ಪೆ ತೇಲುತ್ತಿತ್ತು ನಾನು ಎಷ್ಟು ಓಡಿಸಲು ಪ್ರಯತ್ನಿಸಿದರು ಅದು ಹೊರಗೆ ಜಿಗಿಯುತ್ತಿರಲೇ ಇಲ್ಲ. ಏಕ್ದಂ ಏನೂ ತೋಚದೆ ಅಲ್ಲೆ ಬಿದ್ದಿದ್ದ ಕಲ್ಲಿಂದ ಕಪ್ಪೆ ತೇಲುವಾಗ ಹೊಡದೆ ನೋಡು ಆಗ ಕಪ್ಪೆ ಚಿಲ್ಲನೆ ರಕ್ತಸಿಕ್ತವಾಗಿ ತೇಲಿತು. ಆಮೇಲೆ ಎಂದ. ಆಮೇಲೇನು ಕಪ್ಪೆಯನ್ನು ಹೊರಹಾಕಿ, ರಕ್ತವಾಗಿದ್ದ ನೀರನ್ನು ಬೊಗಸೆಯಲಿ ಎತ್ತಿ ಹಾಕಿ ಅದೇ ನೀರನ್ನು ಒಂದು ಗುಟುಕು ಏರಿಸಿ, ಅರಿವೆ ತುಂಬಿಕೊಂಡು ಹೋದೆ ಎಂದೆ. ಥೂ ಎಂದ ಅಖಿಬ್. ಇನ್ನೇನು ಮಾಡುವುದು ನಡಿ ಆ ಕಡೆ ಹೋಗೋಣ ಎಂದು ಆ ದಿಣ್ಣೆ ಏರಿದೆವು. ಅಂದಿನ ಆ ನನ್ನ ಬಾಲ್ಯದ ದಿನಗಳಲ್ಲಿ ಅಪ್ಪನಿಗೆ ಬುತ್ತಿ ಕೊಟ್ಟು ಅನತಿ ದೂರದಲ್ಲಿಯೇ ಇದ್ದ ಕಾಡು ಪೊದೆಗಳ ನಡುವೆ ಎತ್ತರೆತ್ತರವಾಗಿದ್ದ ಆನೆಯಂಥ ಗುಂಡುಗಳ ಮೇಲೆ ಸವಾರಿ ಮಾಡುತ್ತಿದ್ದೆ. ಮಳೆಗಾಲದಲ್ಲಿ ಇಲ್ಲಿ ಹರಿಯುತ್ತಿದ್ದ ಜುಳುಜುಳು ನೀರಿನ ರವ ಆಸ್ವಾದಿಸುವುದೇ ಮನಸ್ಸಿಗೆ ಹಿತವಾಗಿತ್ತು. ಅದರ ಜೊತೆ ತರ ತರದ ಹಕ್ಕಿಗಳ ಇಂಚರ ಕೇಳುತಿದ್ದರೆ ಸಂಗೀತಲೋಕವೇ ಮೈವೆತ್ತಂತೆ ಭಾಸವಾಗುತ್ತಿತ್ತು. ಸುಮಾರು ಹೊತ್ತು ಹಾಗೆ ಮನಸ್ಸು ಆಹ್ಲಾದತೆಯಿಂದ ತುಂಬಿದಾಗ ಅಲ್ಲಿಂದ ಮರಳುತ್ತಿದ್ದೆ. ನನಗೆ ಆ ಬಾಲ್ಯಕಾಲದಲ್ಲಿ ಆ ನಿಸರ್ಗದ ಸೆಳೆತ ಬಹಳವಿದ್ದಿತು. ಬಹುಶಃ ಈಗ ಆ ಬಂಡೆಗಳಿಗೆ ಹೆಸರು ಕೊಡುವಂತಿದ್ದರೆ ‘ಕವಿ ಶೈಲ’ವೆಂದು ಹೆಸರಿಸುತ್ತಿದ್ದೆನೇನೊ.
ನಾನು ಕೈಗಳಿಂದ ಮಣ್ಣನ್ನು ಕೆಬರಿ ನೀರು ತರುತ್ತಿದ್ದ ಹೊಂಡ ಕ್ರಮೇಣ ನೀಲಗಿರಿಯ ಬೇರುಗಳ ಹೊಡೆತಕ್ಕೆ ಸಿಕ್ಕು ಬತ್ತಿ ಹೋದಮೇಲೆ ನೀರಿಗಾಗಿ ಮೂರು ಫರ್ಲಾಂಗ್ ದೂರದಲ್ಲಿದ್ದ ಅಡಿಕೆ ತೋಟದ ಮಡುವಿಗೆ ಹೋಗುತ್ತಿದ್ದೆ. ಅರವಿಯನ್ನು ಹೆಗಲಿಗೇರಿಸಿ ಬೇಲಿ ಪೊದರು ಹಳ್ಳಕೊಳ್ಳಗಳನ್ನು ಪಾರು ಮಾಡಿ ಕಿಚಪಿಚವೆನ್ನುವ ಅಡಿಕೆ ತೋಟದ ಕಾಲು ದಾರಿ ಸರಹದ್ದುಗಳನ್ನೇರಿ ಹೋಗುವಾಗ ಒಂದು ಕೌತುಕದ ನಡುವೆಯೂ ಭಯವು ಆವರಿಸುತ್ತಿತ್ತು. ಮೊದಲ ದಿನ ಹೋದಾಗ ನೀರು ನಲ್ಲಿ ಎಲ್ಲಿದೆ ಎಂದು ಗೊತ್ತಾಗದೆ ಪೇಚಾಡಿದೆ. ಆ ಹೊದರು ಪೊದರುಗಳು ತುಂಬಿಕೊಂಡಿದ್ದರಿಂದ ಅದು ಎಲ್ಲಿದೆ ಎಂದು ಹುಡುಕಾಡಿದೆ. ಹಾಗೆ ಗಾವುದಗಾವುದ ಕಾಲು ಚೆಲ್ಲಿದಾಗ ಅಲ್ಲೊಂದು ಕಲ್ಲುಮನೆ ಕಾಣಿಸಿತು, ಬಹುಶಃ ಅದು ಪಂಪ್ಸೆಟ್ ಮನೆ ಇರಬೇಕು. ಅದರ ಪಕ್ಕದಲ್ಲಿಯೇ ಒಂದು ಗಾಳುವಿನಂಥ ಕಂಬದಲ್ಲಿ ಉರಿಯುತ್ತಿರುವ ವಿದ್ಯುತ್ ಬಲ್ಪ್ ಕಂಡಿತು. ಅದರ ಬಲಬಗಲಲ್ಲಿನ ನಲ್ಲಿಯಿದ ನೀರು ಚೀರ್ ಎಂದು ಚಿಮ್ಮುತ್ತಿದ್ದಿದ್ದು ಕಾಣಿಸಿತು. ಅದರ ತಳ ಭಾಗದಲ್ಲಿ ದೊಡ್ಡದೊಂದು ನಾಲೆ ಪೊದೆ ಗಳುಗಳಿಂದ ತುಂಬಿತ್ತು. ಜೀರುಂಡೆಗಳ ಝ್ಯು ಝ್ಯು ಶಬ್ದ, ಕಪ್ಪೆಗಳ ಆರ್ಭಟ, ಯಾವ ಮನುಷ್ಯನ ಚಹರೆಯೂ ಕಾಣಿಸದ ಆ ಗಳಿಗೆಯಲಿ ನನಗೆ ಅದೊಂದು ದಟ್ಟ ಕಾಡಂತೆ ಕಾಣಿಸಿತು. ನಾನು ಆಗತಾನೆ ಕುವೆಂಪುರವರ ಕತೆಗಳನ್ನು ಓದಿದ್ದು. ಆ ಸ್ಥಳವನ್ನು ಮಲೆನಾಡಿನ ಸೆರಗು ಅಂತ ಹಲವು ಬಾರಿ ಮರ್ಮರಿಸಿಕೊಂಡಿದ್ದೇನೆ. ಒಮ್ಮೆ ನನ್ನಷ್ಟೇ ನಿಸರ್ಗಪ್ರೇಮಿಯಾದ ಗೆಳೆಯ ಖಾದರ್ನನ್ನು ಅಲ್ಲಿಗೆ ಕರೆದೊಯ್ದಾಗ ಅವನು ಆ ನಿಸರ್ಗ ಕಂಡು ಅಲ್ಲಿನ ಸೌಂದರ್ಯವನ್ನು ಆಸ್ವಾದಿಸಿ ಖುಷಿ ಪಟ್ಟಿದ್ದ. ಈ ಸಂದರ್ಭದಲ್ಲಿ ಈ ಸೌಂದರ್ಯದಷ್ಟೇ ಸುಖಕರವಾದ ಇನ್ನೊಂದು ಸ್ಥಳವೆಂದರೆ ಅದು ನಮ್ಮೂರಿನ ಕೆರೆಯ ತಟದ್ದು. ಅದು ಮಲೆನಾಡಿನ ಸೆರಗಿನಂಥ ತಾಣವೇ ಹೌದಿತ್ತು ಆಗ. ಇರಲಿ ಅದನ್ನು ಇನ್ನೊಮ್ಮೆ ನೆನೆಯುವ. ಅಖಿಬನಿಗೆ ಈ ಎಲ್ಲ ಸ್ಥಳಗಳನ್ನು ತೋರಿಸಿ ಬಾಲ್ಯದ ನನ್ನ ನೆನಪುಗಳನ್ನು ಮೆಲುಕಿ ಅಲ್ಲಿಂದ ಹಿಂದಿರುಗುವಾಗ ಆಗಲೇ ಹೊತ್ತಾಗಿತ್ತು.
ಅಪ್ಪನಲ್ಲಿಗೆ ಬಂದೆವು. ಅಪ್ಪ ಊಟ ಮುಗಿಸಿ ಬೆಂಕಿಯನ್ನು ಕಣ್ಗಳಲ್ಲಿ ತುಂಬಿಕೊಂಡು ಎದುರಿದ್ದ ಮೈದಾನವನ್ನು ನೋಡುತ್ತಿದ್ದರು. ಕಾವು ತೀವ್ರವಾಗಿತ್ತು. ಮೈದಾನ ಹೋಗಿಲ್ಲವೆಂಬ ಚಿಂತೆಯ ನಡುವೆ ನೀವು ನಡೀರಿ. ಇನ್ನೊಂದು ತಾಸು ಇದು ಎತ್ಕೊಂಡ ಮೇಲೆ ಬರ್ತೀನಿ. ನಡಿರೀ, ಅಖಿಬ್ ರೋಜ ಇದ್ದಿಯಲ್ಲ ಎಂದರು. ಅಖಿಬ್ ಹ್ಞು ಅಬ್ಬಾ ಎಂದ. ನಡಿನಡಿರಿ ಬಿಸ್ಲು ಸುಟ್ತೈತೆ ಎಂದಾಗ ಅಪ್ಪ ಯಾವತ್ತೂ ಹಾಗೆ ನಾನು ಬುತ್ತಿ ಹೊತ್ತು ಬಂದಾಗ ನಡಿನಡಿ ಬಿಸ್ಲು ಅನ್ನುತ್ತಿದ್ದರು. ನಾನು ಅಪ್ಪನಿಗೆ ಸಹಾಯ ಮಾಡುವ ಇರಾದೆಯಿಂದ ಹ್ಞು ಹ್ಞು ಅನ್ಕೊಂಡೆ ಅಲ್ಲಿ ಉಳಿ ಎತ್ಕೊಂಡಿ ಬೆಟ್ಟಲು ಹೋಗುತ್ತಿದ್ದೆ. ಅಂಥ ಹಲವು ದಿನಗಳನ್ನು ಬೇಸಿಗೆ ರಜೆಯಲ್ಲಿ ಅಪ್ಪನ ಜೊತೆ ಪೂರ ಕಳೆದಿದ್ದೇನೆ. ಆದರೂ ಅಪ್ಪ ನನ್ನ ತಲೆಗೆ ಈ ಕೆಲ್ಸ ಕೊನೆಯಾಗಬೇಕು. ನೀನು ಚೆನ್ನಾಗಿ ಓದ್ಕೊ, ಓದಿ ಬುದ್ದಿವಂತನಾಗಿ ಯಾವುದಾದ್ರೂ ಒಳ್ಳೆ ಕೆಲ್ಸ ಮಾಡಿದ್ರೆ ಅಷ್ಟೇ ಸಾಕು ಎನ್ನುತ್ತಿದ್ದ ಅವರ ನುಡಿಗಳು ಈಗ ಹೇಳಿದಂತಿವೆ.
ಹೌದು ಈಗ ನಾನು ಅಪ್ಪನ ಬಿರುಬಿಸಿಲ ಬೆವರಿಗೆ ತೂಕ ಒದಗಿಸಿದ್ದೇನೆ. ಅವರ ಬೆವರ ಫಲದಂತೆ ನಾನು ಪೊಲೀಸ್ ವೃತ್ತಿ ಪಡೆದೆ. ನಂತರ ಈಗ ನ್ಯಾಯಾಂಗ ಇಲಾಖೆಯಲ್ಲಿ ಸರಕಾರಿ ನೌಕರಿ ಪಡೆದು ಘನವಾಗಲು ಅವರ ಈ ಅರೆ ಮೇಲಿನ ಬೆವರ ಘಮಲೇ ಕಾರಣ- ಪ್ರೇರಣ.
* ಪರಿಚಯ : ನೂರುಲ್ಲಾ ತ್ಯಾಮಗೊಂಡ್ಲು ಅವರು ಸದ್ಯ ತ್ಯಾಮಗೊಂಡ್ಲುವಿನಲ್ಲಿ ವಾಸ. ಕೆಲಕಾಲ ಬೆಂಗಳೂರಿನ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೇಬಲ್ ಆಗಿದ್ದ ಅವರು ನಂತರ ಕೆಪಿಎಸ್ಸಿ ಪರೀಕ್ಷೆ ಬರೆದು ತುಮಕೂರಿನ ನ್ಯಾಯಾಲಯದಲ್ಲಿ ಕ್ಲರ್ಕ್ ಕೆಲಸಕ್ಕೆ ಸೇರಿದರು. ‘ಬೆಳಕಿನ ಬುಗ್ಗೆ, ‘ನನ್ನಪ್ಪ ಒಂದು ಗ್ಯಾಲಕ್ಸಿ’ ಪ್ರಕಟಿತ ಕವನ ಸಂಕಲನಗಳು.
Published On - 1:52 pm, Fri, 7 May 21