Shankaracharya Jayanti 2021: ಇಂದು ಶಂಕರಾಚಾರ್ಯ ಜಯಂತಿ; ಆಧ್ಯಾತ್ಮ ಲೋಕಕ್ಕೆ ಚೈತನ್ಯ ನೀಡಿದ ಆದಿ ಗುರು ಶ್ರೀ ಶಂಕರಾಚಾರ್ಯ
Shankaracharya Jayanti: ಶ್ರೀ ಶಂಕರರು ಜನಿಸಿದ ದಿನ ವೈಶಾಖ ಶುಕ್ಲ ಪಂಚಮಿಯ ದಿನವಾದ್ದರಿಂದ ಪ್ರತೀ ವರ್ಷ ಇದೇ ದಿನದಂದು ಶಂಕರಾಚಾರ್ಯ ದಿನವನ್ನು ಆಚರಿಸಲಾಗುತ್ತದೆ.
ಭಾರತೀಯ ಸಾಂಸ್ಕೃತಿಕ ಇತಿಹಾಸದಲ್ಲಿ ಶ್ರೇಷ್ಠ ಮಹಾಪುರಷರೆಂದು ಗುರುತಿಸಲ್ಪಟ್ಟವರಲ್ಲಿ ಶಂಕರಾಚಾರ್ಯರು ಪ್ರಮುಖರು. ಪ್ರಾಚೀನ ಕಾಲದ ಸಂರ್ಭದಲ್ಲಿ ಪ್ರಯಾಣ ಎಂಬುದು ಕಷ್ಟಕರವಾಗಿತ್ತು. ಆ ಪರಿಸ್ಥಿತಿಯಲ್ಲಿಯೇ ದೇಶಾದ್ಯಂತ ಸಂಚರಿಸಿ ಜನಮನ ಗೆದ್ದರು. ಸನಾತನ ಧರ್ಮ ಮತ್ತು ರಾಷ್ಟ್ರೀಯ ಏಕತೆಗೆ ಭಾರೀ ಅಪಾಯ ಬಂದಿದ್ದ ಕಾಲಘಟ್ಟದಲ್ಲಿ ಹಾಗೂ ಅಂತಹ ದುಃಸ್ಥಿತಿಯ ಸಂದರ್ಭದಲ್ಲಿ ದೇಶವನ್ನು ಸಂರಕ್ಷಿಸಿ, ಧರ್ಮ ಸಂಸ್ಥಾಪನೆ ಮಾಡಲು ಪರಮೆಶ್ವರನೇ ಧರೆಗಿಳಿದು ಬರಬೇಕಾಯಿತು. ಅಂತಹ ಪರಶಿವನ ಪರಮಾವತಾರವೇ ಶ್ರೀಶಂಕರರು.
ಶಿವಗುರು ಮತ್ತು ಆರ್ಯಾಂಬೆ ದಂಪತಿಯರದ್ದು ಒಂದು ಸುಂದರ ಬ್ರಾಹ್ಮಣ ಕುಟುಂಬ . ಅವರು ಶ್ರೀಮಂತರೂ ಜೊತೆಗೆ ಸರಳ ಜೀವಿಗಳು. ಇಬ್ಬರೂ ವಿದ್ವಾಂಸರು. ಆದರೆ ಅವರಿಗೆ ಮಕ್ಕಳಿಲ್ಲವೆಂಬ ಚಿಂತೆ ಗಾಢವಾಗಿ ಕಾಡುತ್ತಿತ್ತು. ಕಂಡ ದೇವರಿಗೆಲ್ಲಾ ಹರಕೆ ಹೊತ್ತದ್ದಾಯಿತು. ಅದಾಗ ಕನಸಿನಲ್ಲಿ ಕಂಡ ವೃಷಾಚಲೇಶ್ವನಲ್ಲಿ ಅಲ್ಪಯುಷಿಯಾದರೂ ವಿಶ್ವ ವಿಖ್ಯಾತಿ ಪಡೆಯುವ ಹಾಗೂ ಸರ್ವಜ್ಞನೂ ಆಗುವ ಮಗ ಬೇಕು ಎಂದು ಬೇಡಿಕೊಂಡರು. ಈ ಕೃಪೆಯಿಂದ, ಶಿವನ ನಿಷ್ಠೆಯ ಆರಾಧನೆಯಿಂದ ಜನಿಸಿದರು ಶಂಕರರು.
ಶ್ರೀ ಶಂಕರರು ಜನಿಸಿದ ದಿನ ವೈಶಾಖ ಶುಕ್ಲ ಪಂಚಮಿಯ ದಿನವಾದ್ದರಿಂದ ಪ್ರತೀ ವರ್ಷ ಇದೇ ದಿನದಂದು ಶಂಕರಾಚಾರ್ಯ ದಿನವನ್ನು ಆಚರಿಸಲಾಗುತ್ತದೆ. ಮನುಷ್ಯನಿಗೆ ಎದುರಾಗುವ ಪ್ರಶ್ನೆಗಳು ಜಗತ್ತು-ಜೀವ-ಈಶ್ವರನಿಗೆ ಸಂಬಂಧಪಟ್ಟ ಚೌಕಟ್ಟಿನಲ್ಲಿಯೇ ಇರುತ್ತದೆ. ಈ ಪ್ರಶ್ನೆಗಳಿಗೆ ಉತ್ತರವಾಗಿ ನಿಂತವರು ಶಂಕರರು. ಆಳವಾದ ಚಿಂತನೆ ನಡೆಸಿ, ತಾತ್ವಿಕ ನೆಲೆಯನ್ನು ಕಂಡುಕೊಳ್ಳಲು ಮಾದರಿಯಾಗಿದ್ದಾರೆ. ಇದನ್ನೇ ಜಗತ್ತು ಅದ್ವೈತ ಸಿದ್ಧಾಂತ ಎಂಬುದಾಗಿ ಸಾರಿದೆ. ಅದೈತ ಎಂದರೆ ಇಡೀ ಸೃಷ್ಟಿಗೆ ಮೂಲ, ಸೃಷ್ಟಿಯಲ್ಲಿರುವುದೆಲ್ಲವೂ ಒಂದೇ ಚೈತನ್ಯವನ್ನು ನೀಡುವಂತದ್ದು ಎಂಬ ಅರ್ಥ ನೀಡುತ್ತದೆ.
ವಿದ್ಯೆ ಮತ್ತು ಅವಿದ್ಯೆಯ ಸಾರವನ್ನು ಶಂಕರಾಚಾರ್ಯರು ಹೇಳಿದ್ದಾರೆ. ಪ್ರಸ್ತುತ ಸಮಯದಲ್ಲಿ ವಿದ್ಯೆ ಮತ್ತು ಅವಿದ್ಯೆಯ ಅರ್ಥವನ್ನು ಅರ್ಥೈಸಿಕೊಳ್ಳುವುದು ಮುಖ್ಯ. ‘ಶಂ ಕರೋತಿ ಇತಿ ಶಂಕರಃ’ ಶಂ ಎಂದರೆ ಒಳಿತು ಮತ್ತು ಕರೋತಿ ಎಂದರೆ ಮಾಡುವವನು ಎಂದರ್ಥ. ಯಾರು ಸಮಸ್ತ ಸೃಷ್ಟಿಗೆ ಒಳಿತು ಮಾಡುತ್ತನೋ ಆತನೇ ಶಂಕರ. ಕೊರೊನಾ ಭೀತಿಯಲ್ಲಿ ದೇಶವೇ ನಡುಗಿದೆ. ಹೀಗಿರುವಾಗ ದ್ವೇಷ-ಅಸೂಯೆಗಳನ್ನು ಬಿಟ್ಟು ವೈರಸ್ ವಿರುದ್ಧವಾಗಿ ಹೋರಾಡಲು ಎಲ್ಲರೂ ಒಂದಾಗಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ ಶ್ರೀಶಂಕರರು ಹೇಳಿರುವ ವಿದ್ಯೆ-ಅವಿದ್ಯೆ, ದ್ವೇಷ-ಅಸೂಯೆಗಳ ಅರ್ಥ ಅರಿಯಲೇಬೇಕು.
ಇದನ್ನೂ ಓದಿ: ನಿಗದಿತ ಸಮಯದಲ್ಲಿ ರಾಮ ಮಂದಿರ ಶಂಕುಸ್ಥಾಪನೆ ಬೇಡ ಅಂದ್ರು ಶಂಕರಾಚಾರ್ಯರು..ಯಾಕೆ?
Published On - 11:03 am, Mon, 17 May 21