Corona Warriors : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ : ಸರಸಕ್ಕೋ ವಿನೋದಕ್ಕೋ ಇರುವ ಪಾತ್ರಧಾರಿಗಳಲ್ಲ ಶುಶ್ರೂಷಕಿಯರೆಂದರೆ

‘ಮಕ್ಕಳಿಲ್ಲ, ಗಂಡ ಹೆಂಡತಿ ಇಬ್ಬರೇ. ಪರಸ್ಪರ ಅಪಾರ ಪ್ರೇಮ. ಒಟ್ಟಾಗಿಯೇ ತಡವಾಗಿಯೇ ದಾಖಲಾದರು ಆದರೆ ಬೇರೆ ಬೇರೆ ವಾರ್ಡ್. ಬಂದದ್ದೇ ಒಂದೇ ಕೋರಿಕೆ ನನ್ನ ಹೆಂಡತಿಯನ್ನ ಚೆನ್ನಾಗಿ ನೋಡಿಕೊಳ್ಳಿ ಅಂತ ಗಂಡ, ನನ್ನ ಗಂಡನ್ನ ಚೆನ್ನಾಗಿ ನೋಡಿಕೊಳ್ಳಿ ಅಂತ ಹೆಂಡತಿ. ಅತ್ತ ಹೆಂಡತಿ ತೀರಿಕೊಂಡರು. ಗಂಡ ಒಂದೇ ಸಮ ಹೆಂಡತಿಯ ಬಗ್ಗೆ ಕೇಳುತ್ತಿದ್ದಾರೆ. ಕುಟುಂಬಸ್ಥರು ಯಾವ ಕಾರಣಕ್ಕೂ ಆಕೆ ತೀರಿಕೊಂಡ ವಿಚಾರ ತಿಳಿಸಬೇಡಿ, ಆಕ್ಷಣವೇ ಹೃದಯ ಒಡೆದು ಸತ್ತರೂ ಸತ್ತು ಹೋಗುತ್ತಾನೆ ಅನ್ನುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ನಾವೇನು ಮಾಡಬೇಕು?’ ಶಾಂತಿ ಕೆ. ಅಪ್ಪಣ್ಣ

Corona Warriors : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ : ಸರಸಕ್ಕೋ ವಿನೋದಕ್ಕೋ ಇರುವ ಪಾತ್ರಧಾರಿಗಳಲ್ಲ ಶುಶ್ರೂಷಕಿಯರೆಂದರೆ
ಶುಶ್ರೂಷಕಿ, ಲೇಖಕಿ ಶಾಂತಿ ಕೆ. ಅಪ್ಪಣ್ಣ
Follow us
ಶ್ರೀದೇವಿ ಕಳಸದ
|

Updated on:May 14, 2021 | 2:16 PM

ನಮ್ಮ ಒಂದು ಧ್ವನಿ ಲಕ್ಷಾಂತರ ಧ್ವನಿಗಳನ್ನು ಪ್ರತಿನಿಧಿಸುತ್ತಿರುತ್ತದೆ. ಮರ್ಯಾದೆ, ವ್ಯವಸ್ಥೆ ಎನ್ನುವ ಮಹಾಸಂಕೋಲೆಯನ್ನು ಕಳಚಿ ಮುಕ್ತವಾಗಿ ಸಂಕಟಗಳನ್ನು ಹೊರಹಾಕುವುದನ್ನು ಕಲಿಯದಿದ್ದರೆ, ನಾವಷ್ಟೇ ಅಲ್ಲ ನಮ್ಮ ಮುಂದಿನ ಪೀಳಿಗೆಯವರು ಉಸಿರಾಡುವುದೂ ಕಷ್ಟವಾಗುತ್ತದೆ; ಸಹನೆಯೇ ನಮ್ಮ ಮೂಲಗುಣ, ಕೆಲಸವೇ ದೇವರು, ಕುಟುಂಬವೇ ಪ್ರಧಾನ ಅಸ್ತಿತ್ವ ಎಂದು ಸಾರಿಕೊಂಡು ಬಂದ ಮಹಾನ್ ದೇಶ ನಮ್ಮದು. ಆದರೆ ಇದನ್ನು ಜೀವನದೊಂದಿಗೆ ಜೀವವನ್ನೂ ಒತ್ತೆ ಇಡುವಂಥ ಪರಿಸ್ಥಿತಿಯಲ್ಲಿರುವ ಆರೋಗ್ಯ ಸೇವಾಕ್ಷೇತ್ರಗಳಲ್ಲಿರುವವರ ದೃಷ್ಟಿಯಲ್ಲಿ ಯೋಚಿಸಿ. ಗಂಟಲಿನ ಪಡಕಗಳತನಕ ಬಂದುಕುಳಿತ ನೋವುಗಳಿಗೆ ಸಮಸ್ಯೆಗಳಿಗೆ ಮುಕ್ತಿ ಕೊಟ್ಟರೆ ಮಾತ್ರ ಮುಂದಿನ ಹೆಜ್ಜೆಗಳನ್ನಿಡಲು ತ್ರಾಣ ದಕ್ಕುವುದು, ವಾಸ್ತವ ಸಂಗತಿಗಳಿಗೆ ಪರಿಹಾರ ಸಿಗುವುದು. ಈ ಹಿನ್ನೆಲೆಯಲ್ಲಿ ರೂಪಿಸಿರುವ ‘ಟಿವಿ9 ಕನ್ನಡ ಡಿಜಿಟಲ್ : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ’ ಸರಣಿಯಲ್ಲಿ ವೈದ್ಯರುಗಳ, ಶುಶ್ರೂಷಕರ, ಪ್ರಯೋಗಾಲಯ ಸಿಬ್ಬಂದಿ, ಸಹಾಯಕರ ಹೀಗೆ ಆರೋಗ್ಯ ಸೇವಾಕ್ಷೇತ್ರಗಳಲ್ಲಿರುವವರ ಬದುಕು ಬವಣೆ ಮತ್ತು ಅಂತರಂಗದ ತುಣುಕುಗಳು ಇಲ್ಲಿರುತ್ತವೆ.

ತುಣುಕುಗಳು ಎಂದು ಹೇಳಲು ಕಾರಣವಿದೆ; ನಮಗಾದ ಅನ್ಯಾಯ, ನೋವು ನಿರೀಕ್ಷೆಗಳನ್ನು ವ್ಯಕ್ತಪಡಿಸಿ ರಾತ್ರೋರಾತ್ರಿಯೇ ಪರಿಹಾರೋಪಾಯಗಳನ್ನು ಪಡೆದುಕೊಳ್ಳುವಂಥ ಅಭಿವೃದ್ಧಿ ಹೊಂದಿದ ದೇಶದಲ್ಲಿ ನಾವಿನ್ನೂ ಇಲ್ಲ. ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿಯ ದುಡಿಮೆಯಲ್ಲಿ ಹತ್ತಾರು ಕೈಗಳು ಹೇಗೆ ಉಣ್ಣುತ್ತಿವೆಯೋ ಹಾಗೆ ವ್ಯವಸ್ಥೆಯ ಪರಿಧಿಯಲ್ಲಿ ದೊಡ್ಡ ದೊಡ್ಡ ತಿಮಿಂಗಲಗಳು ಸ್ವಾರ್ಥದ ಬಾಯಿಗಳನ್ನು ತೆರೆದಿಟ್ಟುಕೊಂಡೇ ಈಜಾಡುತ್ತಿವೆ, ಇಂಥ ಸಂಕಷ್ಟಮಯ ಸಂದರ್ಭದಲ್ಲಿಯೂ. ಹೀಗಿರುವಾಗ ಸಾಕಷ್ಟು ವಿಷಯಗಳನ್ನು ಅದುಮಿಟ್ಟುಕೊಂಡೇ ಬದುಕುವ ಅನಿವಾರ್ಯ ಹಲವರಿಗಿದೆ ಬಂದೊದಗಿದೆ. ಆದರೂ ಸಂವೇದನಾಶೀಲ, ಪ್ರಾಮಾಣಿಕ ಮನಸ್ಸುಗಳು ತಮ್ಮ ಮನಸಿನ ಮಾತುಗಳನ್ನು ಹಂಚಿಕೊಳ್ಳಲು ಇಲ್ಲಿ ಪ್ರಯತ್ನಿಸಿದ್ದಾರೆ. ಸಾಮಾಜಿಕ ಕಳಕಳಿಯುಳ್ಳ ಇನ್ನೂ ಕೆಲವರು ಇತರರ ಒಳತೋಟಿಗಳನ್ನು ಅಕ್ಷರಕ್ಕೆ ಹಿಡಿದಿಡಲು ಸಹಾಯ ಮಾಡಿದ್ದಾರೆ. ಓದುಗರಾದ ನಿಮಗೂ ನಿಮ್ಮ ನಿಮ್ಮ ಊರುಗಳಲ್ಲಿ ಕೊರೋನಾ ಯೋಧರಾಗಿ ಕೆಲಸ ಮಾಡುತ್ತಿರುವವರ ಆಂತರ್ಯಕ್ಕೆ ಅಕ್ಷರಗಳ ಮೂಲಕ ಧ್ವನಿಯಾಗುವ ಅವಕಾಶವೂ ಇಲ್ಲಿದೆ. ಇ ಮೇಲ್ : tv9kannadadigital@gmail.com

ಚೆನ್ನೈನ ರೈಲ್ವೇ ಇಲಾಖೆಯಲ್ಲಿ ಶುಶ್ರೂಷಕಿಯಾಗಿರುವ ಕಥೆಗಾರ್ತಿ ಶಾಂತಿ ಕೆ. ಅಪ್ಪಣ್ಣ ಮೂಲತಃ ಕೊಡಗಿನವರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಮತ್ತು ಸಾಕಷ್ಟು ಪ್ರಶಸ್ತಿಗಳನ್ನು ಪಡೆದ ಇವರ ಕಥಾಸಂಕಲನಗಳು  ‘ಮನಸು ಅಭಿಸಾರಿಕೆ’ ಮತ್ತು ‘ಒಂದು ಬಾಗಿಲು ಮತ್ತು ಮೂರು ಚಿಲ್ಲರೆ ವರ್ಷಗಳು’. ಸದ್ಯ ಕಾದಂಬರಿಯೊಂದರ ಬರೆವಣಿಗೆಯಲ್ಲಿ ತೊಡಗಿಕೊಂಡಿದ್ದಾರೆ. ಜ್ವರ ಬಂದು ಸುಸ್ತಾದಾಗೆಲ್ಲ ಪರೀಕ್ಷೆ ಮಾಡಿಕೊಳ್ಳುವುದು, ಸದ್ಯ ನೆಗೆಟಿವ್ ಬಂತು ಎಂದು ಜೀವ ತಂದುಕೊಂಡು ಕಾರ್ಯೋನ್ಮುಖರಾಗುವ ಸದ್ಯದ ದಿನಚರಿ ಇವರದ್ದು. ಕರ್ತವ್ಯ ಎನ್ನುವ ಕಟ್ಟಪ್ಪಣೆಯಲ್ಲಿ ಎಷ್ಟೊಂದು ಜೀವಕಾರುಣ್ಯ ಸಂಗತಿಗಳಿಗೆ ಶುಶ್ರೂಷಕಿಯರು ಸಾಕ್ಷಿಯಾಗುತ್ತಾರೆ ಎನ್ನುವುದು ಓದಿ…

* ಇದೀಗ ಇದನ್ನು ಬರೆಯಲು ಕುಳಿತಿರುವ ಹೊತ್ತಿಗೆ ನಾನೊಂದು ದೊಡ್ಡ ನಿದ್ರೆ ಮುಗಿಸಿ ಇದೇ ಈಗಿನ್ನೂ ಎದ್ದಿದ್ದೇನೆ. ಕಣ್ಣುಗಳು ಇನ್ನೂ ಉರಿಯುತ್ತಿವೆ. ಎಷ್ಟು ನೀರು ಕುಡಿದರೂ ಇಂಗದ ದಾಹವೊಂದು ಗಂಟಲಿಗೆ ಅಂಟಿಕೊಂಡಿದೆ. ದೇಹದಲ್ಲಿ ಇನ್ನೂ ನೆರೆದಿರುವ ಆಲಸ್ಯ, ಕೈಕಾಲುಗಳಲ್ಲಿ ಸೋಲು, ಸೆಳೆಯುವ ಸೊಂಟ ಮತ್ತು ಬೆನ್ನು, ಸಣ್ಣಗೆ ಜಿವ್ಗುಡುತ್ತ ನೋಯುತ್ತಲೇ ಇರುವ ತಲೆ ಮತ್ತು ಅದರಾಚೆಗೆ ನನ್ನ ಗಮನವನ್ನು ತಮ್ಮತ್ತ ಸೆಳೆಯುತ್ತಿರುವ ರಾಶಿ ಬಿದ್ದ ಮನೆಕೆಲಸಗಳು. ಬೆಳಗ್ಗೆ ಬಂದವಳೇ, ನೇರ ಬಾತ್ರೂಂ ಸೇರಿ, ಧರಿಸಿದ್ದ ಯೂನಿಫಾರ್ಮ್, ಕಲರ್ ಡ್ರೆಸ್, ಬ್ಯಾಗು, ನೀರಿನ ಬಾಟಲಿ ಎಲ್ಲವನ್ನೂ ಟಬ್‍ನಲ್ಲಿ ಸೋಪಿನಪುಡಿಯೊಂದಿಗೆ ನೆನೆಯಲಿಕ್ಕಿಟ್ಟು, ನಿನ್ನೆ ನೆನೆಯಲ್ಲಿಟ್ಟಿದ್ದವನ್ನೆಲ್ಲ ತೊಳೆದು ಹಾಕಿ, ನಂತರ ಸ್ನಾನ ಮುಗಿಸಿ, ಮನೆ ಕಸ ಹೊಡೆದು, ನಾಯಿ ಬೆಕ್ಕುಗಳಿಗೆ ಊಟಕ್ಕಿಟ್ಟು, ಬ್ರೇಕ್ಫಾಸ್ಟ್ ತಯಾರಿಸಿ ತಿಂದು ಮಲಗಿದ್ದೇ ಗೊತ್ತು, ಆಮೇಲಿಂದ ಸಾಕ್ಷಾತ್ ಯಮನೇ ಬಂದು ಕರೆದೊಯ್ದರೂ ಕಮಕ್ ಕಿಮಕ್ ಅನ್ನದಷ್ಟು… ದೇಹ ಮತ್ತು ಮನಸಿಗೆ ಆಗಿರುವ ದಣವಿನ ಪರಿ ಅಂಥದ್ದು.

ಇಲ್ಲಿ ಒಂದು ಮಾತು ಹೇಳಬೇಕು ನಿಮಗೆ, ನಿಜ ಹೇಳಬೇಕೆಂದರೆ ಹೊರಗಿನ ಜಗತ್ತಿಗೆ ನಿಜಕ್ಕೂ ಗೊತ್ತಿಲ್ಲ, ಅಸಲು ಶುಶ್ರೂಷಕಿಯರ ಕೆಲಸ ಏನು ಎಂಬುವುದು. ಸಿನಿಮಾಗಳಲ್ಲಿ ತೋರಿಸುವಂತೆ, ಜೋಲು ಮುಖ ಹೊತ್ತುಕೊಂಡು ಟ್ರೇ ಹಿಡಿದುಕೊಂಡು ಅವಸರದಿಂದ ಓಡಾಡುವುದು, ಡಾಕ್ಟರ್ ಪಾತ್ರಧಾರಿ ‘ನರ್ಸ್’ ಎಂದು ಗುಟುರು ಹಾಕಿ ಕರೆಯುವಾಗ ಪ್ಯಾಲಿಪ್ಯಾಲಿಯಂತೆ ಓಡೋಡಿ ಬಂದು ನಿಲ್ಲುವುದು, ಆಗ ಆ ಡಾಕ್ಟರ್ ಪಾತ್ರಧಾರಿ ತೀರ ಜನ್ಮಾಂತರದ ಎದುರು ನಿಂತಿದ್ದಾರೋ ಎಂಬಂತೆ, ಎದುರಿಗೆ ನಿಂತ ನರ್ಸ್‍ಗೆ ಗುಟುರು ಹಾಕುತ್ತಾ ಏನೋ ಒಂದು ‘ಆರ್ಡರ್’ ಕೊಡುವುದು!

ಆದರೆ ವಸ್ತುಸ್ಥಿತಿ ಹೀಗಿರುವುದಿಲ್ಲ. ಇನ್ನೂ ಸರಿಯಾಗಿ ವಿವರಿಸಿ ಹೇಳಬೇಕೆಂದರೆ, ಒಂದು ಮನೆಯಲ್ಲಿ ಅಮ್ಮನ ಪಾತ್ರವನ್ನು ನೀವು ಹೇಗೆ ವಿವರಿಸುತ್ತೀರಿ? ಅವಳು ಮಾಡುವ ಅಷ್ಟೂ ಕೆಲಸಗಳು ಹೇಗೆ ಗಣನೆಗೇ ಬಾರದೆ ನಿರ್ದಯವಾಗಿ ನಡೆದುಹೋಗಿಬಿಡುತ್ತವೆ? ಅಮ್ಮ ಇರುವುದೇ ಆ ಅಷ್ಟೂ ಕೆಲಸಗಳನ್ನ ಮಾಡಲು ಅಥವಾ ಅವಳಿಗೆ ದಣಿವಾಗದು ಅಥವಾ ಅಮ್ಮನಲ್ಲದೆ ಬೇರ್ಯಾರು ಮಾಡಬೇಕು? ಇತ್ಯಾದಿ ಇತ್ಯಾದಿ ಧೋರಣೆಗಳು. ಅಷ್ಟೆಲ್ಲ ಮಾಡಿದರೂ, ಮನೆ ಸುಸೂತ್ರ ನಡೆಯುತ್ತಿದ್ದರೂ ಕಡೆಗೆ ಅಮ್ಮ ಏನು ಮಾಡುತ್ತಾಳೆ, ಏನು ಅವಳ ಕೆಲಸ ಅಂದರೆ ಸ್ವತಃ ಅಮ್ಮನಿಂದಲೇ ಅದನ್ನು ವಿವರಿಸಿ ಹೇಳಲು ಸಾಧ್ಯವಾಗದು! ಒಂಚೂರು ಅಡಿಗೆ, ಒಂದಷ್ಟು ಮನೆಕೆಲಸ ಇನ್ನೇನು, ಅಷ್ಟೇ ಅಲ್ಲವೇ? ಆದರೆ ಅವಳ ದೇಹ, ಮನಸಿನ ದಣಿವು ಕೇವಲ ಅವಳ ಅಂದಾಜಿಗೇ ಮಾತ್ರವೇ ಸಿಗುವಂಥದ್ದು. ಈ ಶುಶ್ರೂಷಕ ಕೆಲಸವೂ ಹಾಗೆಯೇ. ಕೆಲವು ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಕಮ್ಮಿ ಇರುತ್ತದೆ, ಅದನ್ನು ಹೊರತುಪಡಿಸಿ, ಆದರೆ ಉಳಿದೆಲ್ಲ ಕಡೆಯೂ ಶುಶ್ರೂಷಕರ ಪಾತ್ರ ಇದೇ! ಅಮ್ಮನದ್ದೇ ಪಾತ್ರ. ಮನೆಯಲ್ಲಿ ಒಂದು ವಸ್ತು ತಕ್ಷಣಕೆ ಸಿಗಲಿಲ್ಲವೇ? ಅಮ್ಮಾ… ಅದೆಲ್ಲಿ, ಅಡುಗೆಯಲಿ ಏರುಪೇರೆ? ಅಮ್ಮ ಇದೇಕೆ ಹೀಗೆ? ಆದರೆ ಅಷ್ಟೇ ಪ್ರಮಾಣದ ಅಪ್ರಿಸಿಯೇಷನ್? ಉಹೂಂ ಅದು ಕಷ್ಟ. ಅಮ್ಮ ಇರುವುದೇ ಇದಕ್ಕಲ್ಲವೇ? (ಈಗ ಕಾಲ ಬದಲಾವಣೆಯ ಗಾಳಿ ಕುಡಿದು, ಮನೆಯಲ್ಲಿ ಗಂಡು ಹೆಣ್ಣು ಇಬ್ಬರೂ ಜವಾಬ್ದಾರಿ ತೆಗೆದುಕೊಳ್ಳುತ್ತಿರುವುದನ್ನು ಕಾಣಬಹುದಾದರೂ, ಅಮ್ಮನ ಈ ಪಾತ್ರ ನಮ್ಮೆಲ್ಲರಿಗೂ ಗೊತ್ತಿರುವಂಥದ್ದೇ ಅಲ್ಲವೇ? ಹಾಗಾಗಿ ಇಲ್ಲಿ ರೂಪಕವಾಗಿಸಿದೆ.)

nimma dhwanige namma dhwaniyu

ಸೌಜನ್ಯ : ದಿ ವರ್ಲ್ಡ್

ನಿಜ, ಒಂದು ಆಸ್ಪತ್ರೆ ವ್ಯವಸ್ಥೆಯಲ್ಲಿ ಶುಶ್ರೂಷಕರದ್ದು ಅಮ್ಮನದ್ದೇ ಪಾತ್ರ. ಇದಿಷ್ಟೇ, ಇಂತಿಷ್ಟೇ ಕೆಲಸವೆಂಬ ಯಾವ ನಿಗದಿತ ವ್ಯಾಪ್ತಿಯೂ ಇಲ್ಲದೆ, ಆಸ್ಪತ್ರೆಯ, ನಾವು ಕೆಲಸ ಮಾಡುವ ವಾರ್ಡಿನ ಸುರಳೀತ ನಿರ್ವಹಣೆಯ ಸಕಲ ಜವಾಬ್ದಾರಿಯೂ ಶುಶ್ರೂಷಕರದ್ದೇ! ಅದರಲ್ಲೂ ಈಗ ಕೋವಿಡ್ ಸಮಯ. ಆ ಜವಾಬ್ದಾರಿ, ಕೆಲಸ, ಆಯಾಸ ಎಲ್ಲವೂ ದುಪ್ಪಟ್ಟಾಗಿರುವ ಸಮಯ. ಸಾಲದ್ದಕ್ಕೆ ಪಿಪಿಇ ಕಿಟ್ ಧರಿಸಿ ಕೆಲಸ ಮಾಡಬೇಕು.ಇಡೀ ಮೈಯ ರಕ್ತವೂ ನೀರೂ ಬೆವರಾಗಿ ಹರಿಸಿ ತೊಯ್ದು ತೊಪ್ಪೆಯಾಗದೇ ವಿಧಿಯಿಲ್ಲ. ನಡುವೆ ನೀರು ಸಹಾ ಕುಡಿಯುವುದು ಸಾಧ್ಯವಿಲ್ಲ. ಒಣಗುವ ಗಂಟಲು, ಅಂಟುವ ಮೈ, ಬೆವರು ಮತ್ತು ಉಸಿರ ಹಬೆ ತಾಕಿ ಮಂಜಾಗುವ ಗಾಗಲ್ಸ್ ಹಾಗೂ ಫೇಸ್ ಶೀಲ್ಡ್, ಮಾಸ್ಕಿನ ಎಲಾಸ್ಟಿಕ್ ಎಳೆ ಕಿವಿಯ ಮೇಲೆ ಒತ್ತಿಒತ್ತೀ ಆಗುವ ಅಸಹನೀಯ ನೋವು, ಮೈಮುರಿವಷ್ಟು ಕೆಲಸ, ಮಾನಸಿಕ ಒತ್ತಡ, ಮಾಸ್ಕಿನೊಳಗೆ ಬಿಗಿಗೊಳ್ಳುವ ಉಸಿರು, ಪಿಪಿಇಯೊಳಗಿನ ಬೇಗೆ ಸೆಖೆ, ಅದರಲ್ಲೂ ಮದರಾಸಿನ ಬಿರುಬಿಸಿಲಿಗೆ ಹೇಳುವುದೇ ಬೇಡ. ಕೆಲವೊಮ್ಮೆ ಬೆವರು ಜಾರಿ ಕಣ್ಣೊಳಗೆ ಹೋಗುತ್ತದೆ. ಕಣ್ಣು ಭಗಭಗ ಉರಿದು ನೀರಾಡುತ್ತದೆ ಒರೆಸಿಕೊಳ್ಳುವಂತಿಲ್ಲ, ತಲೆಯಲ್ಲೋ ಮೂಗಿನ ತುದಿಯಲ್ಲೋ, ಕಣ್ಣ ಕೊನೆಯಲ್ಲೋ, ಕಿವಿಯಲ್ಲೋ ನವೆಯಾಗುತ್ತದೆ ಸಹಿಸದೇ ವಿಧಿಯಿಲ್ಲ. ವಿಪರೀತ ದಾಹವಾಗುತ್ತದೆ ಎಂಜಲು ನುಂಗಿಕೊಳ್ಳಬೇಕು. ನೇಚರ್ ಕಾಲ್, ಪೋಸ್ಟ್ಪೋನ್ ಮಾಡಲೇಬೇಕು. ಅಂದಂತೆ, ಇದೆಲ್ಲ ಅರ್ಧಘಂಟೆಯ ಪಡಿಪಾಡಲಲ್ಲ. ಸತತ ಆರೇಳು ಗಂಟೆಗಳ ಹೋರಾಟ. (ಹಾಗೆಂದು ಇಲ್ಲಿ ಯಾರ ಮೇಲೂ ಕಂಪ್ಲೇಂಟ್ ಇಲ್ಲ. ಇದರ ಬಗ್ಗೆ ಬೇಸರವಿಲ್ಲ. ಗೊಣಗಾಟವಿಲ್ಲ. ಯಥಾರ್ಥ ಸಂಗತಿಯನ್ನು ದಾಖಲಿಸುತ್ತಿದ್ದೇನಷ್ಟೇ.)

ಇನ್ನು ನಿನ್ನೆಯ ರಾತ್ರಿಯ ಪಾಳಿ ಕೂಡ ಅಂಥದ್ದೇ ಒಂದು ಬ್ಯುಸೀ ರಾತ್ರಿ. ಹಾಗೆ ನಿದ್ರೆ ಕಟ್ಟಿ, ತೀರ ನೀರು ಕುಡಿಯಲೂ ಸಮಯವಿಲ್ಲದೆ, ಕೂರಲಿಕ್ಕೂ ಸಮಯವಿಲ್ಲದೆ, ಯಾವುದೋ ಒಂದು ಹೊತ್ತಿನಲಿ ಗಡಿಯಾರದತ್ತ ಕಣ್ಣು ಹಾಯಿಸಿ ‘ಅಯ್ಯೋ ಆಗಲೇ ಬೆಳಗಿನ ಐದೂವರೆಯಾಗಿಹೋಯ್ತಾ!’ ಎಂದು ಗಡಬಡಿಸಿ ಇನ್ನುಳಿದ ಕೆಲಸಗಳತ್ತ ಹಾಯುತ್ತಿರುವಾಗ ಒಬ್ಬಳು ಹೆಣ್ಣುಮಗಳು ಬಂದು ಅಬ್ಬರಿಸಿದಳು. “ಕೊಂದುಬಿಟ್ರಾ? ಕಡೆಗೂ ನಮ್ಮಪ್ಪನನ್ನು ಕೊಂದುಬಿಟ್ರಾ?” ರಾತ್ರಿ ಬೇರೆ ಅಷ್ಟೊಂದು ಸಾವುಗಳು! ಈಗ ಬಂದು ನಿಂತಿರುವ ಆಕೆ ಯಾವ ಪೇಷಂಟ್ ಅಟೆಂಡೆಂಟ್ ಅಂತಲೂ ತಕ್ಷಣಕ್ಕೆ ಗೊತ್ತಾಗಲಿಲ್ಲ. ಇನ್ನು ಬಂದ ಹೆಣ್ಣುಮಗಳಿಗೋ ಯಾವುದನ್ನೂ ಕೇಳಿಸಿಕೊಳ್ಳುವ ಕಿಂಚಿತ್ ವ್ಯವಧಾನವೂ ಇಲ್ಲ. ಒಟ್ಟು ಬಯ್ಯುತ್ತಿದ್ದಾಳೆ.

“ಪರದೇಸಿಗಳೇ, ನಾಯಿಗಳೇ, ನಮ್ಮಪ್ಪನನ್ನು ಅನ್ಯಾಯವಾಗಿ ಕೊಂದುಬಿಟ್ಟಿರಲ್ಲ, ನೀವೆಲ್ಲ ಹೇಗೆ ಚೆನ್ನಾಗಿರ್ತೀರಾ? ಅನಾಥ ನಾಯಿ ಥರ ಸಾಯ್ತೀರ ನೋಡಿ ನೀವು ಒಬ್ಬೊಬ್ಬರೂ, ನನ್ನ ಹೊಟ್ಟೆಉರಿ ನಿಮ್ಮನ್ನ ಸುಮ್ನೆ ಬಿಡಲ್ಲ, ನೀವೆಲ್ಲ ಡಾಕ್ಟರ್​ಗಳಾ, ನರ್ಸ್‍ಗಳಾ? ಪರದೇಸಿಗಳೇ, ಹೋಗಿ ನಿಮ್ಮ ಮುಖ ನೋಡ್ಕೊಳ್ಳಿ, ಛೀ..ಥೂ.. ಜೊತೆಗೆ ಮತ್ತೊಂದಷ್ಟು ಪದಪ್ರಯೋಗಗಳು, ಬಯ್ಗುಳ, ಶಾಪ ನೋವಿನ ನಿಟ್ಟುಸಿರು ಕಣ್ಣೀರು ಆಕ್ರೋಶ. ಇದು, ಇಡೀ ರಾತ್ರಿ ನಿಲ್ಲಲೂ ಸಮಯವಿಲ್ಲದೆ ಓಡಿಓಡಿ ದುಡಿದದ್ದಕ್ಕೆ ಬೆಳ್ಳಂಬೆಳಗ್ಗೆ ಸಿಗುವ ಬಹುಮಾನ!

ಆದರೆ ಇದರಲ್ಲಿ ಅವಳದ್ದೂ ತಪ್ಪಿಲ್ಲ. ಅವಳ ನೋವು ಅವಳದ್ದು. ಆಗಿರುವ ನಷ್ಟ ಅವಳ ಸ್ವಂತದ್ದು, ಅವಳ ಸಂಕಟದ ಆಳವನ್ನು ನಾವು ಅರಿತುಕೊಳ್ಳಬಹುದು ಆದರೆ ಅನುಭವಿಸುತ್ತಿರುವವಳು ಅವಳು. ಅದು ಅವಳ ಖಾಸಗೀ ನೋವು, ಅವಳ ಅಸಹಾಯಕತೆ ಆಕ್ರೋಶವಾಗಿ ಬದಲಾಗಿದೆ ಅದನ್ನು ನಮ್ಮೆಡೆಗೆ ತೂರುತ್ತಿದ್ದಾಳೆ ಅವಳ ಮಟ್ಟಿಗೆ ಅದೇ ನ್ಯಾಯ, ಇರಲಿ ನಾವು ಅವಳೊಂದಿಗೆ ಚರ್ಚೆ, ವಾಗ್ವಾದ ಎರಡನ್ನೂ ಮಾಡಬಾರದು, ಅವಳ ಅಪ್ಪನನ್ನು ಉಳಿಸಿಕೊಳ್ಳಲು ನಾವು ಏನೆಲ್ಲ ಮಾಡಿದೆವು ಎಂಬುವುದರ ಅರಿವಿಲ್ಲದೇ ಆಕೆ ಮಾತಾಡುತ್ತಿದ್ದಾಳೆ ಅದನ್ನೀಗ ನಾವು ಮಾತಾಡಿ ವಿವರಿಸುವುದೂ ಸಾಧ್ಯವಿಲ್ಲ. ದುಃಖಗ್ರಸ್ಥ ಮನಸಿಗೆ ಯಾವುದೂ ಒಳಹೋಗುವುದಿಲ್ಲ. ಒಂದು ಹಂತದಲ್ಲಿ ಅವಳಷ್ಟೇ ನಾವೂ ಅಸಹಾಯಕರೇ ಆಗಿದ್ದೇವೆಂದು ಅವಳಿಗೆ ಹೇಗೆ ಮನವರಿಕೆ ಮಾಡಿಸುವುದು?

ಯಾಕೆ ಅಸಹಾಯಕರೆಂದು ಹೇಳುತ್ತಿದ್ದೇನೆಂದರೆ ಇದು ಕೋವಿಡ್! ಕೋವಿಡ್‍ನ ಸ್ವರೂಪ ಹಾಗಿದೆ. ಇದು ಅನ್ ಪ್ರಿಡಿಕ್ಟೇಬಲ್ ಆಗಿ ವರ್ತಿಸುತ್ತಿದೆ. ಕೊರೋನಾ ಯಾರಿಗೆ ಯಾವಾಗ ಹೇಗೆ ಏನು ಮಾಡುತ್ತದೆಯೆಂಬುವುದನ್ನು ಇದೇ ಹೀಗೇ ಎಂದು ನಿರ್ದಿಷ್ಟವಾಗಿ ಹೇಳುವುದು ಇದುವರೆಗೂ ಯಾರಿಂದಲೂ ಸಾಧ್ಯವಾಗಿಲ್ಲ. ಇಂದು ಕೊರೋನಾ ನಮ್ಮ ಯಾರ ನಿಯಂತ್ರಣಕ್ಕೂ ಸಿಗದೆ ತಲೆಯ ಮೇಲೇರಿ ಸವಾರಿ ಮಾಡುತ್ತಿರುವುದಕ್ಕೂ ಇದುವೇ ಕಾರಣ. ನಾವು ಎಷ್ಟೆಲ್ಲ ಪ್ರಯತ್ನಪಟ್ಟರೂ ಅನೇಕಾನೇಕ ರೋಗಿಗಳನ್ನು ಕಾಪಾಡಲಾರದೇ ಹೋಗುತ್ತಿದ್ದೇವೆ, ಬದುಕು ಅವರಿಗೆ ಮತ್ತೊಂದು ಅವಕಾಶ ಕೊಡದೇ ನಿರ್ದಯವಾಗಿ ಅವರಿಂದ ಬೇರ್ಪಡುತ್ತಿದೆ. ಯಾರದೋ ಅಮ್ಮ, ಯಾರದೋ ಅಪ್ಪ, ಮತ್ಯಾರದೋ ಗಂಡ, ಹೆಂಡತಿ, ಮಗ… ಆಸ್ಪತ್ರೆಯ ಬೆಡ್ಡಿನಲಿ ಕೋವಿಡ್ ಪೇಷಂಟ್ ಎಂಬ ಹಣೆಪಟ್ಟಿಯೊಡನೆ ದಾಖಲಾಗಿದ್ದಾರೆ. ಅದರಲ್ಲೂ ಐಸಿಯು!

nimma dhwanige namma dhwaniyu

ಸೌಜನ್ಯ : ಮಿಚಿಗನ್ ಹೆಲ್ಥ್ ಲ್ಯಾಬ್

ನಾನು ಕೆಲಸ ಮಾಡುವುದು ಐಸಿಯುವಿನಲ್ಲಿ. ಕಳೆದ ಮಾರ್ಚ್ ತಿಂಗಳಿನಿಂದಲೂ ಅಲ್ಲೇ ಕೆಲಸ ಮಾಡುತ್ತಿದ್ದೇನೆ. ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಈ ವರ್ಷ ಕೋವಿಡ್ ಮತ್ತಷ್ಟು ಕಠೋರ ನಿಲುವು ತಳೆದು, ನಮ್ಮನ್ನು ಅಭ್ಯಸಿಸಿ ಅರ್ಥ ಮಾಡಿಕೊಂಡಿದೆಯೇನೋ ಎಂಬಂತೆ ಮತ್ತಷ್ಟು ಹೊಸ ತಾಕತ್ತನ್ನು ಮೈಗೂಡಿಸಿಕೊಂಡು ನಮ್ಮನ್ನು ತಾಕುತ್ತಿರುವುದನ್ನು ಕಾಣುತ್ತಿದ್ದೇನೆ. ಈ ಐಸಿಯು ನಿಜಕ್ಕೂ ಒಂದು ನರಕ. ಯಾರು ಎಷ್ಟೇ ಅಕ್ಕರೆ ಇಟ್ಟು ಮುತುವರ್ಜಿ ವಹಿಸಿ ನೋಡಿಕೊಳ್ಳಲಿ ಆದರೂ ಈ ಕೋವಿಡ್ ಐಸಿಯುವಿನ ಬದುಕು ರೋಗಿಗಳ ಪಾಲಿಗೆ ನರಕ. ನಮಗೂ ಸಹಾ ಅಷ್ಟೇ ಮಾನಸಿಕ ಒತ್ತಡ ಮತ್ತು ನೋವು. ಯಾವುದೇ ಒಂದು ಜೀವ, ಉಸಿರಿಗಾಗಿ ಹಂಬಲಿಸಿ ತಹತಹಿಸುವುದಿದೆಯಲ್ಲ, ಅದಕ್ಕಿಂತ ಘೋರ ಅನುಭವ ಮತ್ತೊಂದಿರಲಾರದು.

ಕೆಮ್ಮು, ಉಬ್ಬಸ, ಸಹಜವಾಗಿ ಉಸಿರಾಡಲು ಸಾಧ್ಯವಾಗದೆ ಇರುವ ಆ ಪರಿಸ್ಥಿತಿಯಲ್ಲಿ ಆಕ್ಸಿಜನ್ಅನ್ನು ಮೂಗು ನಳಿಕೆಯ ಮುಖಾಂತರ, ಹೈ ಫ್ಲೋ ಆಕ್ಸಿಜನ್ ಮಶೀನಿನ ಮುಖಾಂತರ, ಸಿಪ್ಯಾಪ್, ಬೈಪ್ಯಾಪ್ ಮುಖಾಂತರ ಕಡೆಗೆ ಇದ್ಯಾವುದೂ ಸಹಕರಿಸದೇ  ಹೋದಾಗ ಶ್ವಾಸನಾಳಕ್ಕೆ ನಳಿಕೆ ತೂರಿಸಿ ವೆಂಟಿಲೇಟರ್ ಮೂಲಕ ಕೃತಕ ಉಸಿರಾಟ ವ್ಯವಸ್ಥೆ ಮಾಡಬೇಕಾಗುತ್ತದೆ ಆದರೆ ಈ ಎಲ್ಲ ಹಂತಗಳೂ ಕಷ್ಟಕರವೇ. ಅದರಲ್ಲೂ ದೇಹಕ್ಕೆ ಆಕ್ಸಿಜನ್ ಕಡಿಮೆಯಾಗಿರುವಾಗ ಬುದ್ಧಿ ಸಹಾ ಕೈ ಕೊಡುತ್ತದೆ. ನಾವು ಎಷ್ಟೇ ಅರ್ಥ ಮಾಡಿಸಿ ಮೂಗು ನಳಿಕೆ, ಆಕ್ಸಿಜನ್ ಮಾಸ್ಕ್ ತೆಗೆಯಬೇಡಿರಿ ಕೊಂಚ ಸಹನೆಯಿಂದಿರಿ ಎಂದು ಕೇಳಿಕೊಂಡರೂ, ಬಹುತೇಕ ಪೇಷಂಟ್‍ಗಳು ಪ್ಯಾನಿಕ್ ಆಗಿ, ಟ್ರೀಟ್ಮೆಂಟ್‍ಗೆ ಸಹಕರಿಸದೆ ಹೋಗುತ್ತಾರೆ. ಆಗಾಗ ಮಾಸ್ಕ್ ಕಿತ್ತೆಸೆಯುತ್ತಾರೆ. ಬೆಡ್ಡಿನಿಂದ ಇಳಿಯಲು ಯತ್ನಿಸುತ್ತಾರೆ, ತುಂಬ ವಯಲೆಂಟ್ ಆಗಿ ವರ್ತಿಸುತ್ತಾರೆ. ಆಕ್ಸಿಜನ್ ಮಾಸ್ಕ್ ಕಿತ್ತೆಸದು ಉಸಿರಾಡಲು ಆಗುತ್ತಿಲ್ಲ ಕಾಪಾಡಿ ಎಂದು ಬೊಬ್ಬಿರಿಯುತ್ತಾರೆ, ಅವರನ್ನು ಸಮಾಧಾನಿಸಿ ಅವರಿಗೆ ಸರಿಯಾಗಿ ಆಕ್ಸಿಜನ್ ತಲುಪುವಂತೆ ನೋಡಿಕೊಳ್ಳುವುದು ಸವಾಲೆನಿಸಿ ಬಿಡುತ್ತದೆ.

ಅದೆಲ್ಲದರಾಚೆ ಪೇಷಂಟ್‍ಗಳ ಮಾನಸಿಕ ಒತ್ತಡವನ್ನು ನಿಭಾಯಿಸುವುದು ಮತ್ತೊಂದು ಸವಾಲು. ವಾರ್ಡಿನಲ್ಲಿರುವ ಪೇಷಂಟುಗಳು, ಸ್ವಲ್ಪ ಸ್ಟೇಬಲ್ ಕಂಡೀಷನ್ನಿರುವ ಪೇಷಂಟ್‍ಗಳ ಪರಿಸ್ಥಿತಿ ಸ್ವಲ್ಪ ಪರವಾಗಿಲ್ಲ, ಈಗ ಲಭ್ಯ ಇರುವ ಫೋನು, ವಾಟ್ಯ್ಯಾಪು, ಸೋಷಿಯಲ್ ಮೀಡಿಯಾದ ಸಹವಾಸದಲ್ಲಿ ಹೇಗೋ ತಂತಮ್ಮ ಪ್ರೀತಿಪಾತ್ರರೊಂದಿಗೆ ಕುಟುಂಬ ವರ್ಗದೊಂದಿಗೆ ಸಂಪರ್ಕ ಇರಿಸಿಕೊಳ್ಳಬಹುದು ಅದು ಅವರ ಒತ್ತಡವನ್ನು ಬಹುಮಟ್ಟಿಗೆ ಕಡಿಮೆ ಮಾಡುತ್ತದೆ ಆದರೆ ಆರೋಗ್ಯ ಬಹುವಾಗಿ ಹದಗೆಟ್ಟಿರುವ, ಕೈಯಲ್ಲಿ ಫೋನ್ ಇದ್ದರೂ ಬಳಸಲಾರದ ಪರಿಸ್ಥಿತಿಯಲ್ಲಿರುವ, ನಿರಂತರವಾಗಿ ತಮ್ಮ ಆರೋಗ್ಯದ ಕುರಿತೂ, ಹೊರಗೆ ಇರುವ ಕುಟುಂಬವರ್ಗದ ಕುರಿತು ಚಿಂತೆಯಲಿ ಬೇಯುವ ಜೀವಗಳಿಗೆ ಯಾವ ಸಂತೈಕೆಯ ಮಾತುಗಳು ತಾನೇ ಈಡಾದೀತು? ಅವರ ಕೈ ಹಿಡಿದುಕೊಂಡು ಅವರನ್ನು ಸಮಾಧಾನಿಸುವಾಗ, ಈ ಮೈ ಮುಖ ಮುಚ್ಚಿಕೊಂಡ ಕವಚಧಾರಿಯ ಮಾತುಗಳು ಅವರಿಗೆ ಎಲ್ಲಿಯತನಕ ತಲುಪಬಹುದು ಎಂದು ಸಂದೇಹವಾಗುತ್ತದೆ. ಧರಿಸಿಕೊಂಡ ಕೈಗವಸಿನ ಮೂಲಕ ನಮ್ಮ ಬಿಸುಪು, ನಾವು ತಲುಪಿಸಲು ಬಯಸುತ್ತಿರುವ ಚೈತನ್ಯ ನಿಜಕ್ಕೂ ಅವರನ್ನು ತಲುಪುವುದೇ ಎಂಬ ಖೇದವೇಳುತ್ತದೆ.

ಇನ್ನು ಕೆಲ ವಯಸ್ಸಾದ ಹಿರಿಯರ ಪಾಡು, ಇದೊಂದು ಬಗೆಯ ಕಷ್ಟ. ಕೆಲವರ ಬಳಿ ಫೋನ್ ಕೂಡ ಇರುವುದಿಲ್ಲ ಆದರೆ ಅವರಿಗೆ ತಮ್ಮ ಮೊಮ್ಮಕ್ಕಳನ್ನು ನೋಡುವ ಮಾತಾಡುವ ಚಿಂತೆ ಕಾಡುತ್ತಿರುತ್ತದೆ. ಇವತ್ತಿಗೂ ನೆನಪಿದೆ, ಐಸಿಯುವಿನಲ್ಲಿ ಕಳೆದ ವರ್ಷ ಅಜ್ಜಿಯೊಬ್ಬರು ಅಡ್ಮಿಟ್ ಆಗಿದ್ದರು. 84 ವರ್ಷದ ಅಜ್ಜಿಗೆ ಸದಾ ಮೊಮ್ಮಗಳದ್ದೇ ಚಿಂತೆ. ಯಾವಾಗಲೂ ಏನೋ ಕಳೆದುಕೊಂಡವರಂತೆ ಮುಗುಮ್ಮಾಗೇ ಇರುತ್ತಿದ್ದರು. ಯಾವುದೂ ಮಾತಿಲ್ಲ, ಏನೇ ಮಾತಾಡಿಸಿದರೂ ಅಷ್ಟಕ್ಕಷ್ಟೇ. ಅಜ್ಜಿಯ ಬಳಿ ಫೋನಿರಲಿಲ್ಲ, ವಿಸಿಟರ್ಸ್ ಒಳಬರುವಂತಿಲ್ಲ, ಎಲ್ಲೂ ಯಾರೂ ಕಾಣಸಿಗುವುದಿಲ್ಲ. ಅವರೊಂದಿಗೆ ಮಾತಾಡುವುದು ನಾವು ಮೈಮುಖ ಮುಚ್ಚಿಕೊಂಡ ಗುರುತಿಲ್ಲದವರು. ಅಜ್ಜಿಗೆ ನಮ್ಯಾರ ಮೇಲೂ ವಿಶ್ವಾಸವೇ ಹುಟ್ಟುತ್ತಿರಲಿಲ್ಲ. ಅವರನ್ನು ಅನ್ಯಾಯವಾಗಿ ಕೂಡಿ ಹಾಕಿದ್ದೇವೆ ಎಂಬ ಕೋಪ ಒಂದೆಡೆ. ಇದೆಲ್ಲದರ ನಡುವೆ ಅಜ್ಜಿಯ ಆರೋಗ್ಯ ಬೇರೆ ದಿನೇ ದಿನೇ ಹದಗೆಡುತ್ತಲೇ ಹೋಗುತ್ತಿತ್ತು. ಕಡೆಗೂ ಆಕೆಯನ್ನು ವಿಶ್ವಾಸಕೆ ತೆಗೆದುಕೊಂಡು ಮಾತುಬೆಳೆಸಿ ಮೊಮ್ಮಗಳ ಬಗೆ ತಿಳಕೊಂಡ ಮೇಲೆ ಅವರ ಮನೆಯವರಿಗೆ ವಿಡಿಯೋ ಕಾಲ್ ಮಾಡಿ,ಮೊಮ್ಮಗಳ ಜೊತೆ ಮಾತಾಡಿಸಿದ್ದಾಯ್ತು. ಅಂದು ಅಜ್ಜಿಯ ಕಣ್ಣಲ್ಲಿ ಆನಂದಬಾಷ್ಪ. ಅದರ ಮರುದಿನವೇ ಅಜ್ಜಿ ಬಾರದ ಲೋಕಕ್ಕೆ ತೆರಳಿದ್ದರು. ಆದರೆ ಕೆಲವರಿಗೆ ಈ ಭಾಗ್ಯ ಕೂಡ ಸಿಗುವುದಿಲ್ಲ.

ಇನ್ನೊಬ್ಬ ಪೇಷಂಟ್ ಕಥೆ ಅದಕ್ಕಿಂತಲೂ ದಾರುಣ. ಮಕ್ಕಳಿಲ್ಲ. ಗಂಡ ಹೆಂಡತಿ ಇಬ್ಬರೇ. ಇಬ್ಬರಿಗೂ ಒಬ್ಬರ ಮೇಲೊಬ್ಬರಿಗೆ ಅಪಾರ ಪ್ರೇಮ, ಡಿಪೆಂಡೆನ್ಸಿ. ಕೋವಿಡ್ ಆಸ್ಪತ್ರೆಗೆ ಇಬ್ಬರೂ ಒಟ್ಟಾಗಿ ದಾಖಲಾದರು ಆದರೆ ಬೇರೆ ಬೇರೆ ವಾರ್ಡ್. ಇಬ್ಬರೂ ರೋಗ ಉಲ್ಬಣಗೊಂಡು ಬಹುತಡವಾಗಿ ಆಸ್ಪತ್ರೆಗೆ ಬಂದವರು. ಬಂದದ್ದೇ ಒಂದೇ ಕೋರಿಕೆ ನನ್ನ ಹೆಂಡತಿಯನ್ನ ಚೆನ್ನಾಗಿ ನೋಡಿಕೊಳ್ಳಿ ಅಂತ ಗಂಡ, ನನ್ನ ಗಂಡನ್ನ ಚೆನ್ನಾಗಿ ನೋಡಿಕೊಳ್ಳಿ ಅಂತ ಹೆಂಡತಿ. ಇಂಥದ್ದರಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಹೆಂಡತಿ ತೀರಿಕೊಂಡಿದ್ದಾರೆ, ಇತ್ತ ಗಂಡ ನನ್ನ ಹೆಂಡತಿ ಹೇಗಿದ್ದಾಳೆ ಎಂದು ಕೇಳುತ್ತಿದ್ದಾರೆ. ಅವರ ಕುಟುಂಬಸ್ಥರು ಯಾವ ಕಾರಣಕ್ಕೂ ಹೆಂಡತಿ ತೀರಿಕೊಂಡ ವಿಚಾರ ತಿಳಿಸಬೇಡಿ ಆಕ್ಷಣವೇ ಹೃದಯ ಒಡೆದು ಸತ್ತರೂ ಸತ್ತು ಹೋಗುತ್ತಾನೆ ಅನ್ನುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ನಾವೇನು ಮಾಡಬೇಕು?

ಎಷ್ಟೋ ಜನರು ಹೀಗೆಯೇ ಉಟ್ಟ ಬಟ್ಟೆಯಲಿ ಮನೆಯನ್ನೊಮ್ಮೆ ಮನೆಯವರನ್ನೊಮ್ಮೆ ಕಣ್ತುಂಬಿಕೊಂಡು ಆಂಬ್ಯುಲೆನ್ಸ್ ಏರಿ ಬಂದವರು, ಮತ್ತೆ ಜೀವಂತ ಹೊರಹೋಗುವುದಿಲ್ಲ. ಒಂದು ಕಾಲಕ್ಕೆ ಹೇಗೆಲ್ಲ ಬದುಕಿದವರು, ಸಿರಿ ಸಂಪತ್ತು ಹೊಂದಿದವರು ಕಡೆಗೆ ಯಾರಿಂದಲೂ ಮುಟ್ಟಿಸಿಕೊಳ್ಳದೆ, ಯಾವ ಸಂಪ್ರದಾಯ ಆಚರಣೆಗಳ ಗೊಡವೆಯಿಲ್ಲದೆ ಬರಿಯ ಹೆಣವಷ್ಟೇ ಆಗಿ ಉರಿದುಹೋಗಿಬಿಡುವುದೆಂದರೆ ಕಾಲದ ಆಟದ ಮುಂದೆ ನಾವೆಲ್ಲ ಎಷ್ಟು ಸಣ್ಣವರೆಂಬುವುದು ಮನದಟ್ಟಾಗುತ್ತದೆ. ಇಷ್ಟೆಲ್ಲ ನಡೆಯುತ್ತಿದ್ದರೂ, ಪ್ರಕೃತಿ ನಮ್ಮ ವಿರುದ್ಧ ಯುದ್ಧ ಸಾರಿರುವುದು ತಿಳಿಯುತ್ತಿದ್ದರೂ ಮನುಷ್ಯ ಇನ್ನೂ ಎಚ್ಚೆತ್ತುಕೊಂಡಿಲ್ಲವೆಂದೇ ಅನಿಸುತ್ತದೆ. ಇನ್ನೂ ತನ್ನ ಸಣ್ಣತನ, ದುರಹಂಕಾರ, ಮೇಲರಿಮೆ ಮೌಢ್ಯದಿಂದ ಹೊರಬಂದಿಲ್ಲ. ಬರಲಾರ ಕೂಡ. ಈ ರೀತಿಯ ಸಾವು ನೋವುಗಳನ್ನು ಕಾಣುವಾಗ ಉಂಟಾಗುವ ಅರೆಘಳಿಗೆಯ ಸ್ಮಶಾನವೈರಾಗ್ಯದ ಹೊರತಾಗಿ ಮನುಷ್ಯ ಇಂಥಾ ದುರ್ಬರ ಸನ್ನಿವೇಶಗಳಲ್ಲಿ ಮತ್ತಷ್ಟು ಅಮಾನವೀಯನೂ ನೀಚನೂ ಆಗಿ ವರ್ತಿಸುತ್ತಾನೆ.

ನಾನು ಹೇಳುವುದಿಷ್ಟೇ. ಮೊದಲಿಗೆ ಸಣ್ಣ ಪುಟ್ಟ ಜ್ವರ ನೆಗಡಿಯೇ ಇರಲಿ, ಅದು ಕೋವಿಡ್ಡೇ ಅಲ್ಲದಿರಲಿ ಆದರೂ ಉದಾಸೀನ ಮಾಡುವುದು ಬೇಡ. ವೈದ್ಯರನ್ನು ಕಂಡು ಅವರ ಸಲಹಾನುಸಾರ ಅಗತ್ಯ ಔಷಧಿಗಳನ್ನು ತೆಗೆದುಕೊಳ್ಳಿ. ಮೊದಲಿಗೆ ಕೋವಿಡ್ ಒಂದು ಅಪರಾಧವಲ್ಲ, ಅದನ್ನು ಮುಚ್ಚಿಡಬೇಡಿ. ಆಸ್ಪತ್ರೆಗೆ ಹೋದರೆ ಏನಾದರೂ ಮಾಡಿಬಿಡುತ್ತಾರೆಂದು ಭಾವಿಸಿಕೊಂಡು ಮನೆಯಲ್ಲೇ ರೋಗ ಉಲ್ಬಣಗೊಳ್ಳುವವರೆಗೆ ಕಾಯಬೇಡಿ. ಶುಂಠಿ ಮೆಣಸು ಅರಸಿನದ ಕಷಾಯ, ವಿಟಮಿನ್ ಸಿಯುಕ್ತ ಆಹಾರ ಸೇವನೆ, ಮೀನು ಮೊಟ್ಟೆ ಮಾಂಸಹಾರ ಬಳಕೆ, ಸೂಪ್ ಕುಡಿಯುವಿಕೆ ಇದನ್ನೆಲ್ಲ ಕ್ವಾರಂಟೇನ್ ಪೀರಿಯಡ್‍ನಲ್ಲಿ ಅಳವಡಿಸಿಕೊಳ್ಳಿ. ಉಳಿದವರು ಸಹಾ ಇದನ್ನು ಪಾಲಿಸಿ, ನಿತ್ಯ ಭ್ರಾಮರಿ, ಬಸ್ತ್ರಿಕಾ, ನಾದ ಪ್ರಾಣಾಯಾಮ, ಕಪಾಲಭಾತಿ, ನಾಡಿಶೋಧನ ಪ್ರಾಣಾಯಾಮ ಮಾಡಿ (ಯೂ ಟ್ಯೂಬಿನಲ್ಲೇ ನೋಡಿ ಕಲಿಯಬಹುದು) ಇದಕ್ಕೆ ಧರ್ಮದ ಲೇಪ ಅಂಟಿಸಿ ಮೂಢರಾಗಬೇಡಿ. ಪ್ರಾಣಾಯಾಮ ಉಸಿರಾಡುವಿಕೆಯ ಒಂದು ಅಭ್ಯಾಸ ಅಷ್ಟೇ. ಚಟುವಟಿಕೆಯಿಂದ ಪ್ರೇಮದಿಂದ ಧೈರ್ಯದಿಂದ ಇರಿ.

nimma dhwanige namma dhwaniyu

ಸೌಜನ್ಯ : ಅನ್​ಸ್ಪ್ಲ್ಯಾಶ್

ಬಹಳಷ್ಟು ಜನ ಭಯದಿಂದಲೇ ಪ್ಯಾನಿಕ್ ಅಟ್ಯಾಕ್ ಆಗಿ, ಸಾಯುತ್ತಿದ್ದಾರೆ. ಕೋವಿಡ್ ಬಂದಾಕ್ಷಣ ಸಾವು ಅಂತಲ್ಲ, ಆದರೆ ಆ ಬಗೆಯ ಯೋಚನೆಗಳು, ಭಯ ಮತ್ತು ಒತ್ತಡಗಳು ನಮ್ಮ ಮೇಲೆ ಬೀರುವ ನಕಾರಾತ್ಮಕ ಪರಿಣಾಮಗಳಿಂದ ಸಾವು ಕೂಡ ಸಂಭವಿಸಬಹುದು. ಭಯ ಮತ್ತು ಒತ್ತಡ ಹೃದಯ ಮತ್ತು ಶ್ವಾಸಕೋಶದ ಮೇಲೆ ಬಹಳಷ್ಟು ಪ್ರಭಾವ ಬೀರುತ್ತದೆ. ನಮ್ಮ ದೇಹದ ಪ್ರತಿಯೊಂದು ಕೋಶವೂ ಭಯ ಮತ್ತು ಒತ್ತಡಕ್ಕೆ ಸಿಲುಕುತ್ತದೆ, ಸೋಲುತ್ತದೆ. ಧೈರ್ಯ, ನಂಬಿಕೆ ಮತ್ತು ಆತ್ಮವಿಶ್ವಾಸ ಇರಲಿ ಮೊದಲಿಗೆ ಭಯ ಬಿತ್ತುವ ನ್ಯೂಸ್ ನೋಡಬೇಡಿ. ಕೋವಿಡ್ ಬಾರದಂತೆ ಮುಂಜಾಗ್ರತೆ ವಹಿಸಿ, ಒಳ್ಳೆಯ ಆಹಾರ ಸೇವಿಸಿ ಖುಷಿಯಾಗಿರಿ. ನಮಗಿಂತ ಕಷ್ಟದಲ್ಲಿರುವವರಿಗೆ ಅದರಲ್ಲೂ ಈ ಲಾಕ್ಡೌನ್ ಕಾಲದಲಿ ಸಹಾಯ ಮಾಡಿ, ಪ್ರಾಣ ಪಕ್ಷಿಗಳಿಗೆ ಸಹಾಯ ಮಾಡಿ ಪ್ರೇಮದಿಂದಿರಿ. ಕೋವಿಡ್‍ನೊಂದಿಗೆ ಬದುಕಲು ಕಲಿಯಿರಿ. ಕೋವಿಡ್ ಬಂದಿರುವುದೇ ನಮ್ಮಲ್ಲಿ ಸುಧಾರಣೆ ತರಲು, ಅಂಥದ್ದೊಂದು ಬೆಳವಣಿಗೆ ಕಂಡರೆ ಅದು ತಾನಾಗಿಯೇ ಹಿಂದೆ ಸರಿಯುತ್ತದೆ. ಅಸಲು ಪ್ರಕೃತಿಯ ಮುಂದೆ ನಾವೂ ತೃಣಮಾತ್ರರೇ ತಾನೆ?

ಇದನ್ನೂ ಓದಿ : Health Workers : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ ; ಅಮೆರಿಕದ ಪರದೆ ಬದುಕಿನ ಒಳಹೊರಗೆ

Published On - 11:29 am, Fri, 14 May 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ