ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ: ಪ್ರಾಮಾಣಿಕ ಅಭಿವ್ಯಕ್ತಿಯೇ ಸೃಜನಶೀಲತೆ: ಸ್ವಾಮಿ ಪೊನ್ನಾಚಿ

‘ಮೊದಲು ಸಿಕ್ಕಾಪಟ್ಟೆ ಓದುತ್ತಿದ್ದ ಕಾದಂಬರಿಗಳಿಂದ ಸಾಹಿತ್ಯವೆಂದರೆ ಇಷ್ಟೇ ಎಂಬ ತಿಳಿವಳಿಕೆಯಲ್ಲಿದ್ದೆ. ಆ ಪ್ರಕಾರ ಒಂದು ಕಾದಂಬರಿಯನ್ನೂ ಬರೆದಿದ್ದೆ. ಆದರೆ ಯಾವಾಗ ಗೆಳೆಯ ಆರೀಫ್ ರಾಜ ಮೈಸೂರಿನಲ್ಲಿ ಸಹಪಾಠಿಯಾಗಿ ಸಿಕ್ಕರೋ ಅಲ್ಲಿಂದ ಸಾಹಿತ್ಯದ ಬಗ್ಗೆ ಇದ್ದ ಒಂದೊಂದೇ ಭ್ರಮೆಗಳು ಒಡೆಯುತ್ತಾ ಗಟ್ಟಿ ಬರಹ ಅಂದರೇನು ಎನ್ನುವುದು ಅರಿವಾಯಿತು. ಆಗಿನಿಂದ ಬರೆವಣಿಗೆಯನ್ನು ಗಂಭೀರವಾಗಿ ಪರಿಗಣಿಸಿ, ಪ್ರಾಮಾಣಿಕ ಪ್ರಯತ್ನದಲ್ಲಿ ತೊಡಗಿಕೊಂಡೆ.‘ ಸ್ವಾಮಿ ಪೊನ್ನಾಚಿ

ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ: ಪ್ರಾಮಾಣಿಕ ಅಭಿವ್ಯಕ್ತಿಯೇ ಸೃಜನಶೀಲತೆ: ಸ್ವಾಮಿ ಪೊನ್ನಾಚಿ
ಸ್ವಾಮಿ ಪೊನ್ನಾಚಿ
Follow us
ಶ್ರೀದೇವಿ ಕಳಸದ
|

Updated on:Mar 13, 2021 | 11:41 AM

ಕಥೆಗಾರ ಸ್ವಾಮಿ ಪೊನ್ನಾಚಿ ಅವರು 2020ರ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಈ ಸಂದರ್ಭದಲ್ಲಿ ‘ಟಿವಿ9 ಕನ್ನಡ ಡಿಜಿಟಲ್’​ನೊಂದಿಗೆ ತಾನೇಕೆ ಬರೆಯುತ್ತೇನೆ, ಸೃಜನಶೀಲ ಬರೆವಣಿಗೆ ಎಂದರೆ ಏನು ಎನ್ನುವುದನ್ನು ಹಂಚಿಕೊಂಡಿದ್ದಾರೆ. ಹಾಗೆಯೇ ಕಥೆಗಾರರಾದ ಶಾಂತಿ ಕೆ. ಅಪ್ಪಣ್ಣ ಮತ್ತು ಲೇಖಕಿ ಮಂಜುಳಾ ಗೋನಾಳ, ತಮಗಿಷ್ಟವಾದ ಸ್ವಾಮಿಯವರ ಎರಡು ಕಥೆಗಳ ಬಗ್ಗೆ ಬರೆದಿದ್ದಾರೆ. 

ನನ್ನ ತಂದೆ ನಾಟಕದ ಮಾಸ್ಟರ್. ಅವರು ನಾಟಕಗಳಿಗೆ ಹಾಡುಗಳನ್ನು ರಚಿಸುತ್ತಿದ್ದುದನ್ನು ನೋಡಿಯೋ ಅಥವಾ ಚಿಕ್ಕಂದಿನಲ್ಲಿ ಓದುತಿದ್ದ ಬಾಲಮಂಗಳ, ಬಾಲಮಿತ್ರಾ ಮುಂತಾದ ಪುಸ್ತಕಗಳ ಪ್ರಭಾವದಿಂದಲೋ ನನಗೂ ಅಂಥದ್ದೇನಾದರೂ ಬರೆಯಬೇಕು ಅನ್ನಿಸುತ್ತಿತ್ತು. ಮುಂದೆ ತೇಜಸ್ವಿ, ಲಂಕೇಶ್, ಆಲನಹಳ್ಳಿ,  ದೇವನೂರು ಮುಂತಾದವರನ್ನು ಓದಿಕೊಂಡಾಗ ಅರೆ ಇದು ನಮ್ಮೂರಿನ ಸಂಗತಿ ಇದ್ದ ಹಾಗೆ ಇದೆಯಲ್ಲ ಅನ್ನಿಸಿ, ನಾನೂ ಬರೆಯಬಲ್ಲೆ ಎಂಬ ಆತ್ಮವಿಶ್ವಾಸ ಮೂಡಿತು. ನಮ್ಮೂರ ಭೌಗೋಳಿಕ ಪರಿಸರ, ಸಾಮಾಜಿಕ ಸನ್ನಿವೇಶಗಳು ಪೂರಕವಾಗಿಯೇ ಇದ್ದುದರಿಂದ ಕಥಾ ಬರೆವಣಿಗೆಗೆ ಸಹಜವಾಗಿಯೇ ತೆರೆದುಕೊಂಡೆ.

ನನ್ನ ಪ್ರಕಾರ ಸೃಜನಶೀಲ ಬರೆವಣಿಗೆ ಎಂದರೆ ಸಹಜ ನೈಜ ಪ್ರಾಮಾಣಿಕ ಅಭಿವ್ಯಕ್ತಿ. ನಿತ್ಯಸತ್ಯವಾಗಿರುವ ಸಂಗತಿಗಳಿಗೆ ರಸಾನುಭವ ಒದಗಿಸುವ ಲಯಬದ್ದ ರೂಪ. ಅದು ಸಹೃದಯರಿಗೆ ತಲುಪುವಂತಿರಬೇಕು. ವರದಿಯಂತೆ ಒಪ್ಪಿಸಿದರೆ ಅದು ಸೃಜನಶೀಲ ಬರೆವಣಿಗೆಯಾಗಲಾರದು. ಮೊದಲು ನಾನು ಬರೆದದ್ದು ಕವಿತೆಗಳನ್ನು.  ಆದರೆ ತೇಜಸ್ವಿ ಕಥೆಗಳನ್ನು ಓದುವಾಗ ನನಗರಿವಿಲ್ಲದೆ ಹಳ್ಳಿಗಾಡಿನ ಸಂಗತಿಗಳು ನನ್ನನ್ನು ಕಾಡತೊಡಗಿ, ಇವುಗಳಿಗೆ ಏನಾದರೂ ಮಾಡಬೇಕಲ್ಲ ಎನ್ನಿಸಿ ಕಥೆ ಬರೆಯಲು ಶುರುಮಾಡಿದೆ. ಕಥಾ ವಸ್ತುಗಳಿಗೆ ಹುಡುಕಾಟವೇ ಇರಲಿಲ್ಲ, ಊರೆನ್ನುವುದು ರೋಚಕ ಸಂಗತಿಗಳನ್ನು ಮೊಗೆಮೊಗೆದು ಕೊಡುತ್ತದೆಯಾದ್ದರಿಂದ ಕಥಾಪ್ರಕಾರವೇ ಅಪ್ಯಾಯಮಾನ ಎನ್ನಿಸಿತು.

ಮೊದಲು ರಾಧಾದೇವಿ, ಸಾಯಿಸುತೆ ಇಂಥವರ ಕಾದಂಬರಿಗಳನ್ನು ಸಿಕ್ಕಾಪಟ್ಟೆ ಓದುತಿದ್ದೆ. ಸಾಹಿತ್ಯ ಅಂದರೆ ಇವಷ್ಟೇ ಎನ್ನುವ ತಿಳಿವಳಿಕೆಯಲ್ಲೇ ಇದ್ದೆ. ಆ ಪ್ರಕಾರ ಒಂದು ಕಾದಂಬರಿಯನ್ನೂ ಬರೆದಿದ್ದೆ. ಆದರೆ ಯಾವಾಗ ಗೆಳೆಯ ಆರೀಫ್ ರಾಜ ಮೈಸೂರಿನಲ್ಲಿ ಸಹಪಾಠಿಯಾಗಿ ಸಿಕ್ಕರೋ ಅಲ್ಲಿಂದ ಸಾಹಿತ್ಯದ ಬಗ್ಗೆ ಇದ್ದ ಒಂದೊಂದೇ ಭ್ರಮೆಗಳು ಒಡೆಯುತ್ತಾ ಗಟ್ಟಿ ಬರಹ ಅಂದರೇನು ಎನ್ನುವುದು ಅರಿವಾಯಿತು. ಆಗಿನಿಂದ ಬರೆವಣಿಗೆಯನ್ನು ಗಂಭೀರವಾಗಿ ಪರಿಗಣಿಸಿ, ಪ್ರಾಮಾಣಿಕ ಪ್ರಯತ್ನದಲ್ಲಿ ತೊಡಗಿಕೊಂಡೆ. ಅನೇಕರು ನನ್ನ ಕಥೆಗಳನ್ನು ಮೆಚ್ಚಿಕೊಂಡರು.

ponnachi

ಗೆಳೆಯ, ಕವಿ ಆರೀಫ್ ರಾಜಾ ಅವರೊಂದಿಗೆ ಪೊನ್ನಾಚಿ

ಸಮಾಜದ ಸ್ಥಾಪಿತ ಸಂಪ್ರದಾಯದ ಕುರಿತ ವ್ಯಂಗ್ಯ -ಶಾಂತಿ ಕೆ. ಅಪ್ಪಣ್ಣ

‘ದೇವರಿಗೆ ಸ್ವಲ್ಪ ಟೇಸ್ಟಾಗೇ ಮಾಡಬೇಕು ಅಲ್ಲವಾ… ಉಪ್ಪು ಸಪ್ಪೆ ಜಾಸ್ತಿಯಾದರೆ ದೇವರು ಊಟ ಮಾಡ್ತಾನಾ’ ಅಂತ ತಿರುಗಿ ಅವರ ಬಾಯಿ ಮುಚ್ಚಿಸೋನು. ಸೋಮವಾರ, ಶುಕ್ರವಾರಗಳಂದು ಪೂಜೆಗಿಂತ ಮೊದಲು ನಾಯಿ ಬೆಕ್ಕುಗಳಿಗೆ ಊಟ ಹಾಕದೆ ಒಪ್ಪೊತ್ತಾದರೂ ಮಡಿ ಎನ್ನುತ್ತಾ ಐನೋರು ಪೂಜೆ ಪುನಸ್ಕಾರ ಅಂತ ತಲೆ ಕೆಡಿಸಿಕೊಂಡಿದ್ದರೆ ಕಣ್ಣೆದುರು ಕಾಣುವ ಆ ಮೂಕ ಪ್ರಾಣಿಗಳೇ ದೇವರು ಅಂತ ವಾದಿಸಿ ಬಸವ ಅವಕ್ಕೆ ಅನ್ನ ಹಾಕಿ ಹಿರಿಯರ ಕೆಂಗಣ್ಣಿಗೆ ಗುರಿಯಾಗಿಬಿಡುತ್ತಿದ್ದ. ತನ್ನ ಇತರೇ ಜಾತಿಯ ಸ್ನೇಹಿತರಿಗೆ ಪ್ಲಾಸ್ಟಿಕ್ಕು ಲೋಟದಲ್ಲಿ ಟೀ, ಕಾಫೀ ಕೊಟ್ಟರೆ ಅವರಿಗೂ ತನ್ನಂತೆಯೇ ಸ್ಟೀಲು ಲೋಟದಲ್ಲಿ ಕೊಡಬೇಕೆಂದು ಅಮ್ಮನ ಬಳಿ ಜಗಳವಾಡುತ್ತಿದ್ದ. ತನ್ನ ಸ್ನೇಹಿತರ ಮನೆಯಲ್ಲಿಬೇಕೆಂತಲೇ ಊಟ ಮಾಡಿ ಬರುತ್ತಿದ್ದ. ಇಂಥಾ ದೊಡ್ಡ ಸಂಪ್ರದಾಯಸ್ಥರ ಮನೆಯಲ್ಲಿ ಇಂಥಾ ನೀತಿಗೆಟ್ಟ ಮಗ ಹುಟ್ಟಬಾರದಿತ್ತು ಎಂಬುದು ಕೆಲವರ ಅಭಿಪ್ರಾಯವಾದರೆ; ಬೆಂಗ್ಳೂರು ಮೈಸೂರು ಕಂಡಿದ್ದ ಕೆಲವರು ಅವನ ಮಾಡುವುದರಲ್ಲಿ ಯಾವ ತಪ್ಪೂ ಇಲ್ಲ. ನ್ಯಾಯವಾಗೇ ಕೇಳುತ್ತಿದ್ಧಾನೆ ಎಂದು ತಮ್ಮಲ್ಲೇ ವಾದ ವಿವಾದಗಳನ್ನು ಮಾಡಿಕೊಳ್ಳುತ್ತಿದ್ದರು.                                                                                                                                        (ಸ್ವಾಮೀಜಿಯ ಪಾದವೂ ಹೆಣದ ತಲೆಯೂ, ‘ಧೂಪದ ಮಕ್ಕಳು’)

ಈ  ಕಥೆ ಮೂರ್ತಿ ಮತ್ತು ಆತನ ಗೆಳೆಯ ಪೋಲಿ ಬಸವನ ಸುತ್ತ ಹೆಣೆದಿರುವ ಕಥೆಯಾದರೂ, ಇದು ಒಂದು ಊರು, ಅಲ್ಲಿನ ಸಂಪ್ರದಾಯ, ರೀತಿ ರಿವಾಜು, ಮನುಷ್ಯನ ನಂಬಿಕೆ, ತಮ್ಮ ಅನುಕೂಲಕ್ಕನುಗುಣವಾಗಿ ರೂಪಿಸಿಕೊಂಡಿರುವ ನ್ಯಾಯ, ಗೆಳೆತನ, ಬಂಡಾಯ ಎಲ್ಲವನ್ನೂ ಒಳಗೊಂಡಿರುವ ಕಥೆ. ಬಸವ ಸಂಪ್ರದಾಯಸ್ಥ ಮನೆತನದಲ್ಲಿ ಹುಟ್ಟಿ ಬೆಳೆದವನಾದರೂ ಅರ್ಥಹೀನವೆನಿಸುವ ಅನೇಕ ಸ್ಥಾಪಿತ ಸಂಪ್ರದಾಯಗಳನ್ನು ನಂಬಿಕೆಗಳನ್ನು ಪ್ರಶ್ನಿಸುತ್ತ ಬೆಳೆದ ಎಂಬ ಕಾರಣಕ್ಕಾಗಿಯೇ ಊರಿನವರಿಂದ ಪೋಲಿ ಬಸವ ಎಂಬ ಬಿರುದನ್ನೂ ಪಡೆದುಕೊಂಡವನು. ಅಂಥ ಹುಡುಗ ಕಾಲಾಂತರದಲ್ಲಿ, ತನಗಿಷ್ಟವಿಲ್ಲದಿದ್ದರೂ ಊರಿನ ಮಠಕ್ಕೆ ಅಧಿಪತಿಯಾಗಬೇಕಾದ ಒಂದು ಸಂದಿಗ್ಧ ಪರಿಸ್ಥಿತಿಗೆ ಪಕ್ಕಾಗುವುದು ಈ ಕತೆಯ ದುರಂತ. ಮೊದಮೊದಲಿಗೆ ಒಪ್ಪದೇ ಇದ್ದರೂ, ಕಡೆಗೆ ಮನೆಯವರ, ಗೆಳೆಯನ ಒತ್ತಾಯಕ್ಕೆ ಮಣಿದು ಪಟ್ಟವನ್ನು ಒಪ್ಪಿಕೊಳ್ಳುವ ಬಸವ, ಮಠದ ಸ್ವಾಮಿಯಾಗುತ್ತಾನೆಂದು ತಿಳಿದೊಡನೆಯೇ ಊರವರು ಸಲ್ಲಿಸುವ ಮುಖಮರ್ಯಾದೆಗೆ ಅಚ್ಚರಿಗೊಳ್ಳುವುದೂ, ಒಂದೆಡೆ ಪುಳಕಗೊಳ್ಳುವುದೂ ಮತ್ತೊಂದೆಡೆ ರೇಜಿಗೆಗೊಳಗಾಗುವುದೂ ಅವನೊಳಗಿನ ಸಂದಿಗ್ಧತೆಯನ್ನು ದಟ್ಟವಾಗಿ ಕಾಣಿಸುತ್ತದೆ.

ಕೊನೆಗೂ ಒತ್ತಾಯಕೆ ಮಣಿದು ಪಟ್ಟವನ್ನು ಒಪ್ಪಿಕೊಂಡು ಕಾಲದ ಗತಿಯೊಂದಿಗೆ ಹೆಜ್ಜೆ ಹಾಕಲುಪಕ್ರಮಿಸುವ ಬಸವಸ್ವಾಮಿಗಳು ತನ್ನ ಗೆಳೆಯನ ತಂದೆಯ ಸಾವಿನಲ್ಲಿ ದಫನ ಕಾರ್ಯ ನೆರವೇರಿಸಲು ಬಂದವರು, ಹೆಣದ ಮುಖನೋಡಿ ಭಯಭೀತರಾಗಿ ತಲೆತಿರುಗಿ ಬೀಳುವುದು ಈ ಕತೆಯ ವ್ಯಂಗ್ಯ. ಹಾಗೆ ತಲೆತಿರುಗಿ ಬೀಳುವುದು ಒಂದೆಡೆ ತನ್ನ ಅಸಹಾಯಕತೆಯನ್ನೂ ಮತ್ತೊಂದೆಡೆ ದಣಿದು ಬಸವಳಿದ ಮೌನ ಪ್ರತಿಭಟನೆಯನ್ನೂ, ಮತ್ತೊಂದೆಡೆ ಸ್ವಾಮಿಯಾಗಿ ಎಲ್ಲದರ ಮೇಲಿನ ‌ಮೋಹ ತೊರೆದವನಂತೆ ಕಂಡರೂ, ತನ್ನದೇ ಗೆಳೆಯನ ತಂದೆಯ ಪಾರ್ಥಿವ ಶರೀರದ ತಲೆಯ ಮೇಲೆ ಕಾಲಿರಿಸಬೇಕಾದ ಸಂದರ್ಭ ಬಂದಾಗ ಮನಸ್ಸು ಜಾಗೃತವಾಗಿಬಿಡುತ್ತದೆ. ಬಸವನೆಂಬ ಬಂಡಾಯದ ಹುಡುಗ ತನಗಿಷ್ಟವಿಲ್ಲದೇ ಪಟ್ಟವನ್ನು ಹೇರಿಕೊಂಡು ಹೊರಜಗತ್ತಿಗೆ ಶಾಂತ, ಗಂಭೀರ ಮುಖವನ್ನು ತೋರ್ಪಡಿಸಿದರೂ ತನ್ನೊಳಗೆ ಎಷ್ಟೊಂದು ವಿಚಲಿತನೂ, ಅಶಾಂತನೂ, ಅಳ್ಳೆದೆಯವನೂ ಆಗಿದ್ದನೆಂಬ ವಾಸ್ತವ ಚಿತ್ರಣವನ್ನು ಕತೆಗಾರರು ಸರಳ ನಿರೂಪಣೆಯಲ್ಲಿ ಓದುಗರಿಗೆ ತಲುಪಿಸಿದ್ದಾರೆ. ಮೈಸೂರು ಕೊಳ್ಳೇಗಾಲ‌ ಭಾಗದ ಆಡುಭಾಷೆಯ ಸೊಗಡು, ಅಲ್ಲಿಯ ಪರಿಸರ, ಜನರ ಮನಸ್ಥಿತಿ ಒಟ್ಟಾರೆಯಾಗಿ ಸಮಾಜದ ಸ್ಥಾಪಿತ ಸಂಪ್ರದಾಯದ ಕುರಿತ ತನ್ನ ವ್ಯಂಗ್ಯವನ್ನೂ ವಿಷಾದವನ್ನೂ ಪ್ರಸ್ತುತಪಡಿಸುತ್ತದೆ.

ponnachi

ದೇವನೂರು ಮಹಾದೇವರೊಂದಿಗೆ ಪೊನ್ನಾಚಿ

ಅವಳ ಆಯ್ಕೆಯ ಹಾದಿಯಲ್ಲಿಯೂ ಸಮಾಧಾನವಿಲ್ಲ

-ಮಂಜುಳ ಗೋನಾಳ

‘ಬೆಳಕಿನ ಚುಕ್ಕಿ ಮರೆಯಾಗುತ್ತಿರುವಂತೆ ಒಮ್ಮೆ ಅವಳ ಸ್ಮೃತಿಪಟಲದಲ್ಲಿ ಹಿಂದಿನ ಘಟನೆಗಳು ನೆನಪಿಗೆ ಬರತೊಡಗಿದವು. ಅಕ್ಕರೆಯ ಪ್ರೀತಿ ತೋರಿದ ತಂದೆ-ತಾಯಿ, ಗುರುದೇವ, ತನ್ನನ್ನು ಬಯಸಿದ ಕೌಶಿಕ ಮಹಾರಾಜ, ಕಾಮುಕನಂತೆ ವರ್ತಿಸಿದ ಸನ್ಯಾಸಿ ಮುಂತಾದವರು ಕಣ್ಮುಂದೆ ಬಂದರು. ತಂದೆ-ತಾಯಿ ಬದುಕಿದ್ದಾರೋ ಹೇಗೋ? ರಾಜನ ಕತೆ ಏನಾಯಿತೋ? ಭಟರನ್ನು ಬಿಟ್ಟು ಹುಡುಕಿ ಹುಡುಕಿ ಸುಸ್ತಾದನೋ ಹೇಗೋ? ಪಾಪ ಅವನು ಮಾಡಿದ ತಪ್ಪಾದರೂ ಏನು? ಬಯಸಿದ್ದು ತಪ್ಪೇ?’                                                                                                                                                                      (ಅಕ್ಕ ಅವನು ಸಿಕ್ಕಿದನೇ?, ‘ಧೂಪದ ಮಕ್ಕಳು’)

ಈ ಕಥೆ ನನಗೆ ಬಹಳ ಇಷ್ಟವಾದದ್ದು. ಹುಡುಕುವ ಪ್ರಕ್ರಿಯೆ ಅನ್ನುವುದು ನಿಲ್ಲದ ಕ್ರಿಯೆ, ಅಷ್ಟಕ್ಕೂ ಅವನು ಯಾರು? ಎಂಬ ಪ್ರಶ್ನೆ ಕಥೆಯ ಶೀರ್ಷಿಕೆ ಗಮನಿಸುವಾಗಲೇ ಓದುಗರಲ್ಲಿ ಮೂಡುತ್ತದೆ. ಅದರ ಮೂಲಕವೇ ನಮ್ಮ ಕಥನ ಕುತೂಹಲವನ್ನು ಹೆಚ್ಚಿಸುತ್ತದೆ. ಈ ಮೂಲಕ ಕಥೆಯು ಸಮಕಾಲೀನ ಹೆಣ್ಣು ಗಂಡಾಳ್ವಿಕೆಯಿಂದ ನಿರ್ಮಿತವಾದ ಅವಳ ಲೋಕವನ್ನು ಧ್ವನಿಸುತ್ತದೆ. ತನಗೆ ಬೇಕಾದ ಹಾದಿಯನ್ನೇ ಅವಳು ಆಯ್ಕೆ ಮಾಡಿಕೊಂಡರೂ ಅವಳ ಮನಸ್ಸಿಗೆ ಸಮಾಧಾನ ಸಿಗದು. ಸ್ತ್ರೀತ್ವ ನೋಟದಿಂದಾಗಿ ಈ ಕಥೆ ಇಷ್ಟವಾಗುತ್ತದೆ. ಇಲ್ಲಿ ಭಾಷೆ ಎನ್ನುವುದು ಕಥೆ ಹೇಳಲಷ್ಟೇ ಸೀಮಿತವಾಗದೆ, ಒಂದು ಕಾಲಘಟ್ಟದ ಸಮುದಾಯದ ಜನರ ಸಂಸ್ಕೃತಿಯನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ. ಸಂಪ್ರದಾಯಗಳ ಮಧ್ಯೆ ತೊಳಲಾಡುವ ಹೆಣ್ಣಿನ ಮನಸ್ಸನ್ನು ಪೊನ್ನಾಚಿಯವರು ಬಹಳ ಮಾರ್ಮಿಕವಾಗಿ ಹಿಡಿದಿಟ್ಟಿದ್ದಾರೆ.

ponnachi

ಛಂದ ಪುಸ್ತಕ ಬಹುಮಾನ ಸ್ವೀಕರಿಸುತ್ತಿರುವ ಸಂದರ್ಭ

ಪರಿಚಯ : ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕು ಪೊನ್ನಾಚಿ ಗ್ರಾಮದಲ್ಲಿ 1986 ರಲ್ಲಿ ಸ್ವಾಮಿಯವರ ಜನನ. ಪ್ರಾಥಮಿಕ ಶಿಕ್ಷಣವೂ ಅಲ್ಲಿಯೇ. ಕೊಳ್ಳೇಗಾಲ ಮತ್ತು ಮೈಸೂರಿನಲ್ಲಿ ಉನ್ನತ ವ್ಯಾಸಂಗ. ಪ್ರಸ್ತುತ ಚಾಮರಾಜನಗರ ಜಿಲ್ಲೆ ಯಳಂದೂರಿನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. 2015ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಧನ ಸಹಾಯದಲ್ಲಿ ಸಾವೊಂದನ್ನು ಬಿಟ್ಟು’ ಮೊದಲ ಕವನ ಸಂಕಲನ ಪ್ರಕಟ. ಇದು ಬೇಂದ್ರೆ ಗ್ರಂಥ ಬಹುಮಾನಕ್ಕೆ ಭಾಜನ. 2018ರಲ್ಲಿ ‘ಧೂಪದ ಮಕ್ಕಳು’ ಕಥಾಸಂಕಲನದ ಹಸ್ತಪ್ರತಿಗೆ ಹಾನಗಲ್ಲಿನ ಕನ್ನಡ ಯುವಜನ ಕ್ರಿಯಾ ಸಮಿತಿಯವರಿಂದ ‘ಪಾಪು ಕಥಾ ಪುರಸ್ಕಾರ’ ಮತ್ತು ‘ಛಂದ ಪುಸ್ತಕ’ ಬಹುಮಾನ. ಬೆಳಗಾವಿಯ ಬಸವರಾಜ ಕಟ್ಟೇಮನಿ ಪ್ರತಿಷ್ಠಾನದಿಂದ ‘ಯುವ ಸಾಹಿತ್ಯ ಪ್ರಶಸ್ತಿ’, ಬೆಂಗಳೂರಿನ ಬೇಂದ್ರೆ ಪ್ರತಿಷ್ಠಾನದ ಶಾ. ಬಾಲುರಾವ್ ಯುವಪ್ರಶಸ್ತಿ.

ಇದನ್ನೂ ಓದಿ : ToTo Award 2021; ಪತ್ರಕರ್ತೆ ಅಮೂಲ್ಯಾಳಿಗೆ ಒಂದು ಲಕ್ಷ ಮೊತ್ತದ ಟೊಟೊ ಪುರಸ್ಕಾರ

Published On - 11:32 am, Sat, 13 March 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ