Corona Warriors: ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ ; ಅಮೆರಿಕದ ಪರದೆ ಬದುಕಿನ ಒಳಹೊರಗೆ

‘ನಮ್ಮನಮ್ಮದೇ ಪ್ರೋಟೋಕಾಲುಗಳನ್ನು ಮಾಡಿಕೊಂಡೆವು. ಕೆಮ್ಮಿದಲ್ಲಿ ಕಫ ಆರಡಿ ಚಿಮ್ಮುವುದಿಲ್ಲ, ಹಾಗಾಗಿ ಸುರಕ್ಷಾ ಉಡುಗೆಗಳನ್ನು ಧರಿಸುವ ಅವಶ್ಯಕತೆಯಿಲ್ಲ. ಆದರೆ ನೆಬ್ಯುಲೈಜರ್ ಮಾಡಿದಾಗ, ಕೃತಕ ಉಸಿರಾಟಕ್ಕೆಂದು ಗಂಟಲಿಗೆ ಟ್ಯೂಬು ಹಾಕಿದಾಗ, ಸರಿಯಾದ ಸುರಕ್ಷಾ ಉಡುಗೆಗಳನ್ನು ಧರಿಸಬೇಕು. ಸರಿಯಾದ ಸುರಕ್ಷಾ ಉಡುಗೆಗಳು ಎಂದರೇನು? ಎನ್-95 ಮಾಸ್ಕ್ ಧರಿಸಿದಲ್ಲಿ ಒಮ್ಮೆ ಧರಿಸಿದ್ದನ್ನು ಮತ್ತೆ ಧರಿಸಬಹುದೇ? ಯಾವುದಕ್ಕೂ ಯಾರ ಬಳಿಯೂ ಸರಿಯಾದ ಉತ್ತರವಿಲ್ಲ.’ ಡಾ. ಗುರುಪ್ರಸಾದ ಕಾಗಿನೆಲೆ

Corona Warriors: ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ ; ಅಮೆರಿಕದ ಪರದೆ ಬದುಕಿನ ಒಳಹೊರಗೆ
ಡಾ. ಗುರುಪ್ರಸಾದ ಕಾಗಿನೆಲೆ
Follow us
ಶ್ರೀದೇವಿ ಕಳಸದ
| Updated By: Digi Tech Desk

Updated on:May 14, 2021 | 1:21 PM

ನಮ್ಮ ಒಂದು ಧ್ವನಿ ಲಕ್ಷಾಂತರ ಧ್ವನಿಗಳನ್ನು ಪ್ರತಿನಿಧಿಸುತ್ತಿರುತ್ತದೆ. ಮರ್ಯಾದೆ, ವ್ಯವಸ್ಥೆ ಎನ್ನುವ ಮಹಾಸಂಕೋಲೆಯನ್ನು ಕಳಚಿ ಮುಕ್ತವಾಗಿ ಸಂಕಟಗಳನ್ನು ಹೊರಹಾಕುವುದನ್ನು ಕಲಿಯದಿದ್ದರೆ, ನಾವಷ್ಟೇ ಅಲ್ಲ ನಮ್ಮ ಮುಂದಿನ ಪೀಳಿಗೆಯವರು ಉಸಿರಾಡುವುದೂ ಕಷ್ಟವಾಗುತ್ತದೆ; ಸಹನೆಯೇ ನಮ್ಮ ಮೂಲಗುಣ, ಕೆಲಸವೇ ದೇವರು, ಕುಟುಂಬವೇ ಪ್ರಧಾನ ಅಸ್ತಿತ್ವ ಎಂದು ಸಾರಿಕೊಂಡು ಬಂದ ಮಹಾನ್ ದೇಶ ನಮ್ಮದು. ಆದರೆ ಇದನ್ನು ಜೀವನದೊಂದಿಗೆ ಜೀವವನ್ನೂ ಒತ್ತೆ ಇಡುವಂಥ ಪರಿಸ್ಥಿತಿಯಲ್ಲಿರುವ ಆರೋಗ್ಯ ಸೇವಾಕ್ಷೇತ್ರಗಳಲ್ಲಿರುವವರ ದೃಷ್ಟಿಯಲ್ಲಿ ಯೋಚಿಸಿ. ಗಂಟಲಿನ ಪಡಕಗಳತನಕ ಬಂದುಕುಳಿತ ನೋವುಗಳಿಗೆ ಸಮಸ್ಯೆಗಳಿಗೆ ಮುಕ್ತಿ ಕೊಟ್ಟರೆ ಮಾತ್ರ ಮುಂದಿನ ಹೆಜ್ಜೆಗಳನ್ನಿಡಲು ತ್ರಾಣ ದಕ್ಕುವುದು, ವಾಸ್ತವ ಸಂಗತಿಗಳಿಗೆ ಪರಿಹಾರ ಸಿಗುವುದು. ಈ ಹಿನ್ನೆಲೆಯಲ್ಲಿ ರೂಪಿಸಿರುವ ‘ಟಿವಿ9 ಕನ್ನಡ ಡಿಜಿಟಲ್ : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ’ ಸರಣಿಯಲ್ಲಿ ವೈದ್ಯರುಗಳ, ಶುಶ್ರೂಷಕರ, ಪ್ರಯೋಗಾಲಯ ಸಿಬ್ಬಂದಿ, ಸಹಾಯಕರ ಹೀಗೆ ಆರೋಗ್ಯ ಸೇವಾಕ್ಷೇತ್ರಗಳಲ್ಲಿರುವವರ ಬದುಕು ಬವಣೆ ಮತ್ತು ಅಂತರಂಗದ ತುಣುಕುಗಳು ಇಲ್ಲಿರುತ್ತವೆ.

ತುಣುಕುಗಳು ಎಂದು ಹೇಳಲು ಕಾರಣವಿದೆ; ನಮಗಾದ ಅನ್ಯಾಯ, ನೋವು ನಿರೀಕ್ಷೆಗಳನ್ನು ವ್ಯಕ್ತಪಡಿಸಿ ರಾತ್ರೋರಾತ್ರಿಯೇ ಪರಿಹಾರೋಪಾಯಗಳನ್ನು ಪಡೆದುಕೊಳ್ಳುವಂಥ ಅಭಿವೃದ್ಧಿ ಹೊಂದಿದ ದೇಶದಲ್ಲಿ ನಾವಿನ್ನೂ ಇಲ್ಲ. ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿಯ ದುಡಿಮೆಯಲ್ಲಿ ಹತ್ತಾರು ಕೈಗಳು ಹೇಗೆ ಉಣ್ಣುತ್ತಿವೆಯೋ ಹಾಗೆ ವ್ಯವಸ್ಥೆಯ ಪರಿಧಿಯಲ್ಲಿ ದೊಡ್ಡ ದೊಡ್ಡ ತಿಮಿಂಗಲಗಳು ಸ್ವಾರ್ಥದ ಬಾಯಿಗಳನ್ನು ತೆರೆದಿಟ್ಟುಕೊಂಡೇ ಈಜಾಡುತ್ತಿವೆ, ಇಂಥ ಸಂಕಷ್ಟಮಯ ಸಂದರ್ಭದಲ್ಲಿಯೂ. ಹೀಗಿರುವಾಗ ಸಾಕಷ್ಟು ವಿಷಯಗಳನ್ನು ಅದುಮಿಟ್ಟುಕೊಂಡೇ ಬದುಕುವ ಅನಿವಾರ್ಯ ಹಲವರಿಗಿದೆ ಬಂದೊದಗಿದೆ. ಆದರೂ ಸಂವೇದನಾಶೀಲ, ಪ್ರಾಮಾಣಿಕ ಮನಸ್ಸುಗಳು ತಮ್ಮ ಮನಸಿನ ಮಾತುಗಳನ್ನು ಹಂಚಿಕೊಳ್ಳಲು ಇಲ್ಲಿ ಪ್ರಯತ್ನಿಸಿದ್ದಾರೆ. ಸಾಮಾಜಿಕ ಕಳಕಳಿಯುಳ್ಳ ಇನ್ನೂ ಕೆಲವರು ಇತರರ ಒಳತೋಟಿಗಳನ್ನು ಅಕ್ಷರಕ್ಕೆ ಹಿಡಿದಿಡಲು ಸಹಾಯ ಮಾಡಿದ್ದಾರೆ. ಓದುಗರಾದ ನಿಮಗೂ ನಿಮ್ಮ ನಿಮ್ಮ ಊರುಗಳಲ್ಲಿ ಸಾರ್ವಜನಿಕ ಸೇವಾಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರ ಆಂತರ್ಯಕ್ಕೆ ಅಕ್ಷರಗಳ ಮೂಲಕ ಧ್ವನಿಯಾಗುವ ಅವಕಾಶವೂ ಇಲ್ಲಿದೆ. ಇ ಮೇಲ್ : tv9kannadadigital@gmail.com

* ಲೇಖಕ, ಕಾದಂಬರಿಕಾರ ಡಾ. ಗುರುಪ್ರಸಾದ್ ಕಾಗಿನೆಲೆ ಅವರು ಮಿನೆಸೊಟಾದ ರಾಚೆಸ್ಟರ್‌ನಲ್ಲಿದ್ದಾರೆ. ನಾರ್ತ್ ಮೆಮೊರಿಯಲ್ ಆಸ್ಪತ್ರೆಯ ಎಮರ್ಜೆನ್ಸಿ ಮೆಡಿಸಿನ್ ವಿಭಾಗದಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಒಂದೂ ಮುಕ್ಕಾಲು ವರ್ಷದ ಕೋವಿಡ್ ವರದಿಯನ್ನಿಲ್ಲಿ ನೀಡಿದ್ದಾರೆ. * ವೈದ್ಯನಾಗಿ, ಮುಖ್ಯವಾಗಿ ತುರ್ತು ಚಿಕಿತ್ಸಾ ವೈದ್ಯನಾಗಿ ಇಂತ ಒಂದು ಸಂದರ್ಭ ನನ್ನ ಜೀವಿತದಲ್ಲಿ ಬರುತ್ತದೆ ಎಂದು ನಾನು ಅಂದುಕೊಂಡಿರಲೇ ಇಲ್ಲ. 2020 ನೆಯ ಇಸವಿ ಫೆಬ್ರವರಿಯಲ್ಲಿ ನಾನು ಭಾರತದಿಂದ ವಾಪಸ್ಸು ಅಮೆರಿಕಕ್ಕೆ ಬಂದಿದ್ದೆ. ವಾಪಸ್ಸು ಬರಬೇಕಾದರೇ ವಿಮಾನ ನಿಲ್ದಾಣಗಳಲ್ಲಿ ಏನೋ ದುಗುಡದ ವಾತಾವರಣ. ಎಲ್ಲರೂ ಮಾಸ್ಕ್ ಧರಿಸಿ ಕೂತಿದ್ದರು. ಆಗಿನ್ನೂ ಎಲ್ಲೆಡೆ ಮಾಸ್ಕ್ ಕಡ್ಡಾಯವಾಗಿರಲಿಲ್ಲ. ಕೋವಿಡ್ ಅನ್ನುವ ಕಾಯಿಲೆ ಇನ್ನೂ ವೂಹಾನ್, ಇಟಲಿ ಮತ್ತು ಇರಾಕಿಗೆ ಮಾತ್ರ ಸೀಮಿತವಾಗಿತ್ತು. ಅಮೆರಿಕಾದಲ್ಲಿ ಇನ್ನೂ ಒಂದೆರಡು ರಾಜ್ಯಗಳಲ್ಲಿ ಈ ತರದ ರೋಗಲಕ್ಷಣಗಳಿರುವ ಕೆಲ ರೋಗಿಗಳು ಕೆಲಕಡೆ ಕಾಣಿಸಿಕೊಂಡಿದ್ದರು. ಆದರೆ ಇದು ಇಂಥದ್ದೇ ಕಾಯಿಲೆ ಎಂದು ಹೇಳಲು ಎಲ್ಲೆಡೆ ಕೋವಿಡ್ ಟೆಸ್ಟುಗಳು ಇರಲಿಲ್ಲ.

ಫೆಬ್ರವರಿ ತಿಂಗಳಲ್ಲಿ ನಾನಿರುವ ಮಿನೆಸೊಟಾ ಎಂಬ ಶೀತಪ್ರದೇಶದಲ್ಲಿ ಕೆಮ್ಮು, ನೆಗಡಿ, ಶ್ವಾಸಕೋಶದ ಸೋಂಕು, ಇವೆಲ್ಲ ಸಹಜ. ಆದರೆ 2020ರಲ್ಲಿ ಮಾಮೂಲಿ ಇನ್‍ಫ್ಲುಯೆಂಜ ಇರಬಹುದೆನ್ನುವ ರೋಗಿಗಳೆಲ್ಲ ಇದ್ದಕಿದ್ದಂತೆ ನೋಡನೋಡತ್ತಿದ್ದಂತೆ ನಮ್ಮ ಕಣ್ಣಮುಂದೆಯೇ ತೀವ್ರ ಅಸ್ವಸ್ಥರಾಗಿ ಕೃತಕ ಉಸಿರಾಟ ಅವಶ್ಯವಾಗಿ ತೀರಿಕೊಂಡೂ ಬಿಟ್ಟರು. ನಾನು ಆಗ ತಾನೇ ಪ್ರವಾಸ ಮಾಡಿದ್ದರಿಂದ ನನಗೂ ಕೊಂಚ ನೆಗಡಿ, ಕೆಮ್ಮು ಆಗಿತ್ತು. ತುರ್ತು ಚಿಕಿತ್ಸಾ ವಿಭಾಗದಲ್ಲಿ ನನ್ನ ಜತೆ ಕೆಲಸ ಮಾಡುತ್ತಿದ್ದ ಕೆಲ ಸಹಕೆಲಸಗಾರರಿಗೂ ಅದೇ ತರದ ಇರುಸುಮುರುಸು. ರೋಗಿಗಳೂ, ದಾದಿಯರೂ ಮತ್ತು ವೈದ್ಯರೂ ಮೂಗು ಸುರಿಸಿಕೊಂಡು ಕೆಲಸ ಮಾಡುತ್ತಿದ್ದೆವು. ಕಣ್ಣ ಮುಂದೆ ನಮ್ಮ ಹಾಗೇ ಸಣ್ಣದಾಗಿ ಕೆಮ್ಮು, ಜ್ವರ ಕಾಣಿಸಿಕೊಂಡ ರೋಗಿಗಳು ಕೆಲವೇ ದಿನಗಳಲ್ಲಿ ನಮ್ಮಗಳ ಕಣ್ಣ ಮುಂದೆಯೇ ತೀವ್ರ ಅಸ್ವಸ್ಥರಾಗಿ ತೀರಿಕೊಂಡಾಗ ನಮ್ಮಗಳಿಗೂ ಆ ತರದ ಕಾಯಿಲೆ ಬಂದರೆ ನಮಗೇನಾಗಬಹುದು ಎಂಬ ಅಳುಕು. ಆದರೆ, ಇದು ನಾವೇ ಆಯ್ದುಕೊಂಡ ಕೆಲಸ. ಜತೆಗೆ ಕಣ್ಣ ಮುಂದೆ ಜನ ಸಾಯುತ್ತಿದ್ದಾಗ ನಮ್ಮ ಕೆಲಸದಿಂದ ಹಿಂದೆ ಸರಿಯಲೂ ಆಗದು.

ಕೋವಿಡ್‍ನ ಮೊದಲ ದಿನಗಳಲ್ಲಿ ನಾವೆದುರಿಸಿದ್ದ ಸಮಸ್ಯೆಗಳು ಹಲವು. ನಾವು ನೋಡುತ್ತಿರುವ ರೋಗಿಗೆ ಕೋವಿಡ್ ಇದೆಯೋ ಇಲ್ಲವೋ ಎಂದೂ ಗೊತ್ತಾಗುತ್ತಿರಲಿಲ್ಲ. ಏಕೆಂದರೆ ಮಾಡುವುದಕ್ಕೆ ಟೆಸ್ಟುಗಳು ಲಭ್ಯವಿರಲಿಲ್ಲ. ಕೋವಿಡ್‍ನ ಮೊದಲ ದಿನಗಳಲ್ಲಿ ರಾಜ್ಯ ಆರೋಗ್ಯ ಇಲಾಖೆ ಮತ್ತು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್​ನಿಂದ ಬಂದ ಆದೇಶ- ಚೀನಾ, ಇರಾಕ್ ಮತ್ತು ಇಟಲಿಯ ಭಾಗಕ್ಕೆ ಪ್ರವಾಸ ಹೋಗಿದ್ದ ಅಥವಾ ಆ ಭಾಗದಿಂದ ಅಮೆರಿಕ ನೋಡಲು ಬಂದಿರುವ ಪ್ರವಾಸಿಗಳಿಗೆ ಕೆಮ್ಮು, ಜ್ವರ, ನೆಗಡಿ ಬಂದು ಅವರು ಆಸ್ಪತ್ರೆಗೆ ಬಂದಲ್ಲಿ ಅವರನ್ನು ಪ್ರತ್ಯೇಕವಾದ ರೂಮಿನಲ್ಲಿರಿಸಿ ಕೋವಿಡ್ ಟೆಸ್ಟಿಗೆಂದು ಮೂಗಿನಿಂದ ಸ್ವಾಬ್ ತೆಗೆದು ಕೇಂದ್ರ ಪ್ರಯೋಗಾಲಯಕ್ಕೆ ಕಳಿಸಿ ಆ ವ್ಯಕ್ತಿಗೆ ಸೌಮ್ಯ ಅಥವಾ ಸಾಧಾರಣ ಸ್ವರೂಪದ ಕೋವಿಡ್ ಇದ್ದಲ್ಲಿ ಅವರನ್ನು ಮನೆಯಲ್ಲಿ ಕ್ವಾರಂಟೈನ್ ಮಾಡಿಕೊಳ್ಳಿ ಎಂದು ಫೋನ್ ನಂಬರ್ ಇಸಕೊಂಡು ಕಳಿಸುತ್ತಿದ್ದೆವು. ಆಸ್ಪತ್ರೆಗೆ ಭರ್ತಿಯಾಗುವಷ್ಟು ಹುಷಾರಿಲ್ಲದಿದ್ದಲ್ಲಿ ಆಸ್ಪತ್ರೆಗೆ ಭರ್ತಿ ಮಾಡಿಕೊಂಡು ಅವರಿಗೆ ಹೆಚ್ಚುವರಿ ಆಮ್ಲಜನಕ, ಕೃತಕ ಉಸಿರಾಟ ಈ ರೀತಿಯ ಹಲವಾರು ಜೀವ ಉಳಿಸುವ ಚಿಕಿತ್ಸೆಯನ್ನು ಕೊಡುತ್ತಿದ್ದೆವೇ ಹೊರತು ಬೇರೇನೂ ಪ್ರತ್ಯೇಕವಾದ ಚಿಕಿತ್ಸೆ ಕೊಡಲು ಸಾಧ್ಯವಾಗುತ್ತಿರಲಿಲ್ಲ. ಚಿಕಿತ್ಸೆಗಳೂ ಇರಲಿಲ್ಲ.

Corona Virus

ಸಾಂದರ್ಭಿಕ ಚಿತ್ರ

ಆದರೆ ನಮಗೆ ಗೊತ್ತಿಲ್ಲದಿದ್ದುದು ಹಲವಾರು. ಈ ರೋಗ ಗಾಳಿಯಿಂದ ಹರಡುತ್ತದೆಯೋ, ಕಫದ ಹನಿಗಳಿಂದ ಹರಡುತ್ತದೆಯೋ, ಈ ಕಫದ ಹನಿಗಳು ರೋಗಿ ಕೆಮ್ಮಿದಾಗ ಎಷ್ಟು ಕಾಲ ಆಸ್ಪತ್ರೆಯ ಹಾಸಿಗೆ, ಪೀಠೋಪಕರಣಗಳ ಹೊರತಲದಲ್ಲಿರುತ್ತವೆ. ಹಾಗೆ ಇದ್ದಲ್ಲಿ ಪ್ರತಿ ರೋಗಿಯ ರೂಮಿಗೆ ಹೋಗಬೇಕಾದರೆ ಎಲ್ಲ ತರದ ಸುರಕ್ಷಾ ಕವಚಗಳನ್ನು ತೊಟ್ಟು ಹೋಗಬೇಕಾ? ನೂರಾರು ರೋಗಿಗಳು ಕೆಮ್ಮುತ್ತಿರುವಾಗ ಪ್ರತಿರೂಮಿಗೆ ಹೋಗಬೇಕಾದರೆ ಈ ರೀತಿಯ ಸುರಕ್ಷಾ ಉಡುಗೆಗಳನ್ನು ಬದಲಾಯಿಸಿ ಹೋಗಲು ಸಮಯವಿರುವುದಿಲ್ಲ. ಇನ್ನೂ ಹೆಚ್ಚೆಂದರೆ ರೋಗಿ ಏಕ್‍ದಂ ಉಸಿರು ನಿಲ್ಲಿಸಿದರೆ ನಾವು ಇದುವರೆಗೆ ಕಲಿತದ್ದ ‘ರೋಗಿ ಮೊದಲು’ ಎಂಬ ಹಿಪಾಕ್ರಟೀಕ್ ಪ್ರಮಾಣವನ್ನು ಪಕ್ಕಕ್ಕಿಟ್ಟು ನಾವು ಮೊದಲು ಸುರಕ್ಷಾ ಕವಚ ಧರಿಸಿ ನಂತರ ರೋಗಿಯ ಎದೆಯ ಗೂಡನ್ನು ಒತ್ತುವ, ಗಂಟಲಿಗೆ ಟ್ಯೂಬು ಹಾಕಿ ಕೃತಕ ಉಸಿರಾಟಕ್ಕೆ ಅನುವು ಮಾಡುವ ಚಿಕಿತ್ಸೆಗಳನ್ನು ಮಾಡಬೇಕು. ಅದೂ ಒಬ್ಬನೇ ಮಾಡಲಾಗುವುದೇ? ಇಡೀ ತಂಡ ಸಿದ್ಧವಾಗಬೇಕು. ಇಡೀ ತಂಡಕ್ಕೆ ಸುರಕ್ಷಾ ಉಡುಗೆಗಳನ್ನು ಪೂರೈಸಲು ಆಸ್ಪತ್ರೆ ಇನ್ನೂ ತಯ್ಯಾರಾಗಿಲ್ಲ, ಯಾಕೆಂದರೆ ಅಷ್ಟೊಂದು ಲಭ್ಯವಿಲ್ಲ. ಹಾಗಾಗಿ ಅದರಲ್ಲಿಯೂ ಚೌಕಾಶಿ.

ಏನು ಮಾಡುವುದು? ನಮ್ಮನಮ್ಮದೇ ಪ್ರೋಟೋಕಾಲುಗಳನ್ನು ಮಾಡಿಕೊಂಡೆವು. ಕೆಮ್ಮಿದಲ್ಲಿ ಕಫ ಆರಡಿ ಚಿಮ್ಮುವುದಿಲ್ಲ, ಹಾಗಾಗಿ ಸುರಕ್ಷಾ ಉಡುಗೆಗಳನ್ನು ಧರಿಸುವ ಅವಶ್ಯಕತೆಯಿಲ್ಲ. ಆದರೆ ನೆಬ್ಯುಲೈಜರ್ ಮಾಡಿದಾಗ, ಕೃತಕ ಉಸಿರಾಟಕ್ಕೆಂದು ಗಂಟಲಿಗೆ ಟ್ಯೂಬು ಹಾಕಿದಾಗ, ಸರಿಯಾದ ಸುರಕ್ಷಾ ಉಡುಗೆಗಳನ್ನು ಧರಿಸಬೇಕು. ಸರಿಯಾದ ಸುರಕ್ಷಾ ಉಡುಗೆಗಳು ಎಂದರೇನು? ಎನ್-95 ಮಾಸ್ಕ್ ಧರಿಸಿದಲ್ಲಿ ಒಮ್ಮೆ ಧರಿಸಿದ್ದನ್ನು ಮತ್ತೆ ಧರಿಸಬಹುದೇ? ಯಾವುದಕ್ಕೂ ಯಾರ ಬಳಿಯೂ ಸರಿಯಾದ ಉತ್ತರವಿಲ್ಲ. ದಿನನಿತ್ಯ ಬದಲಾಗುವ ಆದೇಶಗಳು. ಇವತ್ತಿದ್ದ ಆದೇಶ ನಾಳೆಯಿಲ್ಲ. ಎಲ್ಲೆಡೆ ಭಯ, ಆತಂಕ, ಮಾಧ್ಯಮಗಳಲ್ಲಿ ನೋಡಿದರೆ ದಿನೇ ದಿನೇ ಏರುತ್ತಿರುವ ಸಾವಿನ ಸಂಖ್ಯೆ, ದಿನೇದಿನೇ ಏರುತ್ತಿರುವ ಸೋಂಕಿತರ ಸಂಖ್ಯೆ.

ವೈಯಕ್ತಿಕವಾಗಿ ತೊಂದರೆಯಾದದ್ದು ಎಂದರೆ ದಿನ ಬೆಳಗಾದರೆ ಕೋವಿಡ್ ರೋಗಿಗಳನ್ನು ಆರೈಕೆ ಮಾಡುವ ನಾವುಗಳು ಮನೆಗೆ ಬಂದಾಗ ಮನೆಯಲ್ಲಿರುವ ನಮ್ಮ ಕುಟುಂಬದವರಿಗೆ ಈ ಸೋಂಕನ್ನು ಅಂಟಿಸುವುದಿಲ್ಲ ಎನ್ನುವುದೇನು ಗ್ಯಾರಂಟಿ. ಮನೆಗೆ ಬರುವಾಗಲೇ, ಮುಂಬಾಗಿಲಿನಲ್ಲೇ ಹಾಕಿದ್ದ ಬಟ್ಟೆಯನ್ನೆಲ್ಲ ತೆಗೆದು ಬೇರೆಡೆ ಇಟ್ಟು ಸ್ನಾನ ಮಾಡಿ ಶುಚಿಯಾದರೂ ಏನೋ ಆತಂಕ. ವ್ಯಾಪಕವಾಗಿ ಕೋವಿಡ್ ಇದ್ದ ನ್ಯೂಯಾರ್ಕಿನಲ್ಲಿ ತಮ್ಮ ಕುಟುಂಬದವರಿಗೆ ಸೋಂಕು ತಗುಲುತ್ತದೆ ಎಂದು ಗಂಡ ಹೆಂಡಿರು ಪ್ರತ್ಯೇಕ ಕೋಣೆಗಳಲ್ಲಿ ಮಲಗಹತ್ತಿದರಂತೆ. ವೈದ್ಯಕೀಯ ಸಮುದಾಯದಲ್ಲಿ ಇದು ಬಹಳ ದೊಡ್ಡ ಆತಂಕವಾಗಿಬಿಟ್ಟಿತು.

ನಮ್ಮ ಮನೆಯಲ್ಲಿ ಮಕ್ಕಳಿಗೆ ಮನೆಯಿಂದಲೇ ಶಾಲೆ, ಹೆಂಡತಿಗೆ ಮನೆಯಿಂದಲೇ ಕೆಲಸ. ನಾನೊಬ್ಬನೇ ಹೊರಗೆ ಆಸ್ಪತ್ರೆಗೆ ಹೋಗಿ ಬರುತ್ತಿದ್ದೆ. ಮನೆಯಲ್ಲಿ ಯಾರಿಗಾದರೂ ಕೆಮ್ಮು, ಗಂಟಲು ಕೆರೆತ ಬಂದರೂ ನನ್ನಿಂದ ಬಂತಾ, ನಾನು ರೋಗಲಕ್ಷಣಗಳಿಲ್ಲದ ಸೋಂಕಿತನೇ ಎಂಬ ಅನುಮಾನ. ನಾನು ಕೂಡ ನಿರ್ಧರಿಸಿದೆ. ಮನೆಯಲ್ಲಿ ನನ್ನನ್ನು ಪ್ರತ್ಯೇಕಿಸಿಕೊಳ್ಳುತ್ತೇನೆ ಎಂದು. ಊಟ ಬೇರೆ ತಟ್ಟೆಯಲ್ಲಿ, ಕಾಫಿ ಬೇರೆ ಲೋಟದಲ್ಲಿ. ಮಲಗುವುದು ಬೇರೆ ಹಾಸಿಗೆಯಲ್ಲಿ. ಸ್ನಾನ ಬೇರೆ ಬಾತ್‍ರೂಮಿನಲ್ಲಿ. ನನ್ನ ಈ ಆಗಿನ ವರ್ತನೆಗೆ ಯಾವ ಆಧಾರವೂ ಇಲ್ಲದಿದ್ದರೂ ನನ್ನ ಕುಟುಂಬಕ್ಕೆ ನನ್ನಿಂದ ಏನಾದರೂ ಸೋಂಕು ಹರಡಿದರೆ ಹೇಗೆ ಎನ್ನುವ ಅನುಮಾನದಲ್ಲಿ ಸುಮಾರು ಮೂರು ತಿಂಗಳು ನಾನು ಪ್ರತ್ಯೇಕವಾಗಿಯೇ ಇದ್ದೆ.

ಇದರ ಜತೆಗೆ ಎಲ್ಲ ಬಂದ್. ಹೋಟೆಲು, ರೆಸ್ಟರೆಂಟುಗಳು, ಥಿಯೇಟರುಗಳು, ಸಿನೆಮಾ ಹಾಲುಗಳು, ಸ್ನೇಹಿತರ ಮನೆಗಳಿಗೆ ಹೋಗುವ ಹಾಗಿಲ್ಲ. ಕೆಲಸ, ಮನೆ, ಓದು, ಬರಹ-ಹೀಗೇ ಜೀವನ ನಡೆದಿತ್ತು. ಇನ್ನೊಂದು ವಿಚಿತ್ರವಾದ ಹೊಡೆತವಾದದ್ದು ಅಂದರೆ ಗುರುತಿದ್ದ ಸ್ನೇಹಿತರು, ಸಂಬಂಧಿಕರು ಕೆಲಸ ಕಳಕೊಂಡದ್ದು. ಇದು ಬರೇ ಕೆಲಸ ಕಳಕೊಂಡಿದ್ದಷ್ಟೇ ಅಲ್ಲ. ಕೋವಿಡ್ ಅವರ ಜೀವನದ ಗತಿಯನ್ನೇ ಬದಲಿಸಿತು. ಕೆಲಸ ಕಳಕೊಂಡವರಿಗೆ ಬೇರೆಡೆ ಕೆಲಸ ಸಿಗುವ ಸಂಭವವೇ ಇಲ್ಲ. ಬೆಂಗಳೂರಿನಲ್ಲಿದ್ದ ಅನೇಕ ಬಂಧುಗಳು, ಸ್ನೇಹಿತರು ಅವರವರ ಊರಿಗೆ ಗುಳೇ ಹೋದರು. ಅಮೆರಿಕಾದಲ್ಲಿ ಕೆಲಸದ ಮೇಲೆ ಬಂದವರು ವೀಸಾದ ಮೇಲೆ ಇದ್ದವರು ಕೆಲಸ ಕಳಕೊಂಡ ಮೇಲೆ ವಾಪಸ್ಸು ಭಾರತಕ್ಕೆ ಹೋಗಬೇಕು. ಹೋಗಲೂ ಆಗದು. ಸಂಬಳವಿಲ್ಲದೆ ಜೀವನ ಸಾಗದು. ಅಮೆರಿಕಾದಲ್ಲಿ ಸರಕಾರ ಕೊಡುವ ಪರಿಹಾರವನ್ನು ನಂಬಿ ಜೀವನ ನಡೆಸುವ ಪಾಡು ಬಂದದ್ದು ಕೆಲವರಿಗೆ.

coronavirus

ಸಾಂದರ್ಭಿಕ ಚಿತ್ರ

ಈ ಕೋವಿಡ್ ಕಾಲದಲ್ಲಿಆದ ಇನ್ನೊಂದು ಬೆಳವಣಿಗೆ ಆದದ್ದು ಆಸ್ಪತ್ರೆಯಲ್ಲಿ ಬೇರೆಲ್ಲ ಕಾಯಿಲೆಯಿಂದ ಭರ್ತಿಯಾಗುವವರ ಸಂಖ್ಯೆ ಗಣನೀಯವಾಗಿ ಕಮ್ಮಿಯಾದದ್ದು. ಕೋವಿಡ್ ಬರದಂತೆ ತಡೆಯಲು ಕೈಗೊಂಡ ಮುಂಜಾಗರೂಕತಾ ಕ್ರಮಗಳು ನಿಧಾನವಾಗಿ ಕೆಲಸಮಾಡತೊಡಗಿತು. ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾದಿಟ್ಟುಕೊಳ್ಳುವುದರಿಂದ ಹಾಗೂ ಮಕ್ಕಳೆಲ್ಲ ಪ್ಲೇಹೌಸಿಗೆ, ಡೇಕೇರಿಗೆ ಹೋಗದೇ ಇದ್ದುದರಿಂದ ಚಿಕ್ಕಮಕ್ಕಳಿಗೆ ಬರುವ ಸಣ್ಣ ಪುಟ್ಟ ಕಾಯಿಲೆಗಳು ಕೂಡ ಬರದೇ ಹೋದವು. ವಯಸ್ಸಾದವರು, ವೃದ್ಧಾಶ್ರಮದಲ್ಲಿ ಇದ್ದವರಲ್ಲಿ ನ್ಯುಮೋನಿಯಾ, ಶ್ವಾಸಕೋಶದ ಸೋಂಕು ಇತರೆ ಕಾಯಿಲೆಗಳಿಗೆ ಹೆಚ್ಚು ಕಾಣಿಸಿಕೊಳ್ಳುತ್ತದೆ. ಆದರೆ ಅವರನ್ನು ಕೂಡ ಯಾರೂ ಭೇಟಿ ಮಾಡಲು ಹೋಗದೇ ಇದ್ದುದರಿಂದ ಮತ್ತು ಕಡ್ಡಾಯವಾಗಿ ಮಾಸ್ಕು ಧರಿಸಬೇಕಾಗಿದ್ದರಿಂದ ಅವರಿಗೂ ಯಾವ ಸೋಂಕೂ ಬರದೇ ಹೋಯಿತು. ಮಕ್ಕಳು ಹೊರಗೆ ಆಟ ಅಡದೇ ಇದ್ದು, ಯಾರೂ ಬಿದ್ದು ಕೈಕಾಲು ಮುರಕೊಳ್ಳಲಿಲ್ಲ. ಪ್ರವಾಸ ಹೋಗದೇ ಇದ್ದುದರಿಂದ ಅಪಘಾತಗಳು ಕಮ್ಮಿಯಾದವು. ಒಟ್ಟು ಮನುಷ್ಯ ಹೊರಹೋಗದೇ, ಪ್ರವಾಸ ಮಾಡದೇ, ಮಕ್ಕಳು ಆಟವಾಡದೇ, ಮದುವೆ, ನಾಮಕರಣ, ಮುಂಜಿ ಇತರೇ ಯಾವ ಕಾರ್ಯಕ್ರಮಗಳೂ ಇಲ್ಲದೇ ಮನೆಯಲ್ಲಿಯೇ ಕೂತರೆ ಯಾರಿಗೂ ಯಾವ ಕಾಯಿಲೆಯೂ ಇಲ್ಲ. ಒಂದು ಆರೋಗ್ಯವಂತ ಸಮಾಜ ಸೃಷ್ಟಿಯಾಯಿತು. ಆದರೆ ಈ ಸಮಾಜದಲ್ಲಿ ಮನುಷ್ಯರು ಒಬ್ಬರನ್ನೊಬ್ಬರು ನೋಡಿ ಒಟ್ಟಿಗೆ ಕೂತು ಮಾತಾಡುವಂತಿರಲಿಲ್ಲ. ಮಕ್ಕಳು ಶಾಲೆಗೆ ಹೋಗುತ್ತಿರಲಿಲ್ಲ. ಅಪ್ಪ, ಅಮ್ಮಂದಿರು ಮನೆಯಲ್ಲಿಯೇ ಕೂತು ಕೆಲಸ ಮಾಡುತ್ತಿದ್ದರು. ಮನುಷ್ಯರ ಸಂವಹನಕ್ಕೆ ಮಾಸ್ಕ್ ಅಥವಾ ಕಂಪ್ಯೂಟರಿನ ಪರದೆ ಅಡ್ಡವಾಗಿತ್ತು. ಒಟ್ಟು ಸಮಾಜ ಆರೋಗ್ಯಕರವಾದದ್ದು ವೈದ್ಯರುಗಳು, ನರ್ಸುಗಳಿಗೆ ಕೆಲಸ ಇಲ್ಲದೆ ಕೆಲವು ಈ ಸಿಬ್ಬಂದಿಗಳೂ ಕೆಲಸ ಕಳೆದುಕೊಳ್ಳುವಂತಾಯಿತು ಅಥವಾ ಸಂಬಳದಲ್ಲಿ ಕಡಿತವಾಯಿತು.

ವಿರೋಧಾಭಾಸ ನೋಡಿ, ಒಂದು ಪುಟ್ಟ ಮಾಸ್ಕು ಧರಿಸಿ ಎಲ್ಲ ಮನೆಯಲ್ಲಿ ಕೂತಿದ್ದರೆ ನಮಗೆ ಕೋವಿಡ್ ಇರಲಿ ಬೇರೆ ಸೋಂಕಿನ ಕಾಯಿಲೆಗಳೂ ಬರುವುದಿಲ್ಲ. ಹಾಗೇ ವೈದ್ಯರ ಅವಶ್ಯಕತೆಯೂ ಇರುವುದಿಲ್ಲ. ಆದರೆ ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ನೋಡಬೇಕು ಎಂದರೆ ಜೂಮ್ ಅಥವಾ ಗೂಗಲ್ ಮೀಟ್ ಬೇಕು. ಒಬ್ಬರ ಕೈಯನ್ನು ಇನ್ನೊಬ್ಬರು ಕುಲುಕುವಂತಿಲ್ಲ. ಮಕ್ಕಳು ಹೈಫೈ ಮಾಡುವಂತಿಲ್ಲ. ಸ್ನೇಹಿತರು ತಬ್ಬಿಕೊಳ್ಳುವಂತಿಲ್ಲ. ಎಲ್ಲ ಮಡಿಮಡಿ ಪ್ರಪಂಚ. ಸ್ವಲ್ಪ ದಿನದ ನಂತರ ಜನಕ್ಕೆ ಸಾಕಾಗಿ ಥ್ಯಾಂಕ್ಸ್​ಗಿವಿಂಗ್, ಕ್ರಿಸ್‍ಮಸ್ ಎಂದು ಊರೂರು ತಿರುಗಿದ ತಕ್ಷಣ ಎರಡನೇ ಅಲೆಯ ಹೊಡೆತ. ದಿನಕ್ಕೆ ಲಕ್ಷಾಂತರ ಜನಕ್ಕೆ ಸೋಂಕು. ಸಾವಿರಾರು ಮಂದಿ ಸಾವು. ಮತ್ತೆ ಸಾಮಾಜಿಕ ಅಂತರ, ಮಾಸ್ಕು.

ಕೆಲಕಾಲದ ನಂತರ ಲಸಿಕೆ ಈ ಕೆಟ್ಟ ಮಾರಿಯ ವಿರುದ್ಧ ಆಶಾದಾಯಕವಾಗಿ ಬಂದಿದೆ. ಒಬ್ಬರನ್ನೊಬ್ಬರು ನೋಡದ, ಮೈ ಮುಟ್ಟದ, ಹರಟೆ ಹೊಡೆಯದ, ಮಕ್ಕಳು ಕೆಮ್ಮದ, ಸೀನದ ಒಂಟಿ ಆರೋಗ್ಯಕರ ಪ್ರಪಂಚ ಮತ್ತು ಹೊರಗೆ ಹೋದ ತಕ್ಷಣ ಕೆಮ್ಮು, ಉಸಿರಾಟಕ್ಕೆ ತೊಂದರೆ, ಆಸ್ಪತ್ರೆ ಭರ್ತಿ, ಐಸಿಯು, ವೆಂಟಿಲೇಟರ ರೋಗಗ್ರಸ್ತ ಪ್ರಪಂಚಗಳೆಂಬ ಎರಡೇ ಎರಡರ ನಡುವ ಆಯ್ಕೆ ಮಾಡಿಕೊಳ್ಳುವ ಅನಿವಾರ್ಯತೆಯನ್ನು ನಮ್ಮಿಂದ ದೂರಮಾಡುವ ಆಶಾಕಿರಣವಾಗಿ ಬಂದಿದೆ.

ಇದನ್ನೂ ಓದಿ :Health Workers: ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ ; ಇಡೀ ಊರಿಗೆ ಬಂದದ್ದು ತನಗೆ ಬರಲಿಕ್ಕಿಲ್ಲ ಎಂಬ ಭಾವನೆ ಇನ್ನೂ ಹಲವರಲ್ಲಿದೆ

Published On - 11:08 am, Thu, 13 May 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ