ಸಿಂಗಾಪುರ ಹಡಗಿನಲ್ಲಿ ಅಗ್ನಿ ಅವಘಡ: ಭಾರತೀಯ ನೌಕಾಪಡೆಯಿಂದ ರಕ್ಷಣೆ, ಗಾಯಾಳುಗಳು ಮಂಗಳೂರಿಗೆ ಶಿಫ್ಟ್
ಶ್ರೀಲಂಕಾದಿಂದ ಮುಂಬೈಗೆ ಬರುತ್ತಿದ್ದ ಸಿಂಗಾಪುರದ ಕಂಟೈನರ್ ಹಡಗಿನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಭಾರತೀಯ ನೌಕಾಪಡೆಯು ರಕ್ಷಣಾ ಕಾರ್ಯಾಚರಣೆಗೆ ದೌಡಾಯಿಸಿದೆ. ನೌಕಾಪಡೆ 18 ಜನರನ್ನು ರಕ್ಷಿಸಿದೆ, 4 ಜನ ಕಾಣೆಯಾಗಿದ್ದಾರೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಮಂಗಳೂರಿಗೆ ಕರೆತರಲಾಗುತ್ತಿದೆ. ಇಂಡಿಯನ್ ಕೋಸ್ಟ್ ಗಾರ್ಡ್ ಶೋಧ ಕಾರ್ಯ ನಡೆಸುತ್ತಿದೆ.

ಮಂಗಳೂರು, ಜೂನ್ 09: ಶ್ರೀಲಂಕಾದ ಕೊಲಂಬೊದಿಂದ ಮುಂಬೈಗೆ ಬರುತ್ತಿದ್ದ ಸಿಂಗಾಪುರದ ಕಂಟೈನರ್ ಹಡಗಿನಲ್ಲಿ (Singapore container ship) ಅಗ್ನಿ ಅವಘಡ ಸಂಭವಿಸಿದ್ದು, ಭಾರತೀಯ ನೌಕಾಪಡೆ (Indian Navy) ರಕ್ಷಣಾ ಕಾರ್ಯಾಚರಣೆಗೆ ದೌಡಾಯಿಸಿದೆ. ಅಗ್ನಿ ಅವಘಡದಿಂದ ಗಾಯಗೊಂಡವರನ್ನು ಚಿಕಿತ್ಸೆಗಾಗಿ ನೌಕಾಪಡೆಯ INS ಸೂರತ್ ಹಡಗಿನಲ್ಲಿ ಮಂಗಳೂರಿಗೆ (Mangaluru) ಕರೆತರಲಾಗುತ್ತಿದೆ. ಕೇರಳದ ಬೇಪೋರ್ ಕಡಲ ತೀರದಿಂದ 78 ನಾಟಿಕಲ್ ಮೈಲ್ಸ್ ದೂರದ ಆಳ ಸಮುದ್ರದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಸಿಂಗಾಪುರದ MV ವಾನ್ ಹೈ 503 ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಹಡಗಿನಲ್ಲಿದ್ದ 22 ಮಂದಿ ಸಿಬ್ಬಂದಿಗಳ ಪೈಕಿ 18 ಜನ ಸಿಬ್ಬಂದಿಯನ್ನು ಭಾರತೀಯ ನೌಕಾ ಪಡೆಯ ಭಾರತ್ ನೇವಿ ಶಿಪ್ INS ಸೂರತ್ನ ಯೋಧರು ರಕ್ಷಿಸಿದ್ದಾರೆ. ಇನ್ನು, ಹಡಗಿನಲ್ಲಿದ್ದ ನಾಲ್ವರು ಸಿಬ್ಬಂದಿ ಕಣ್ಮರೆಯಾಗಿದ್ದಾರೆ. ಕಣ್ಮರೆಯಾದ ಸಿಬ್ಬಂದಿಗಳಿಗಾಗಿ ಇಂಡಿಯನ್ ಕೋಸ್ಟ್ ಗಾರ್ಡ್ ರಾಜದೂತ್ ಶೋಧ ಕಾರ್ಯ ನಡೆಸುತ್ತಿದೆ. ಹಡಗಿನಲ್ಲಿ ಹೊತ್ತಿಕೊಂಡಿರುವ ಬೆಂಕಿಯನ್ನು ಇಂಡಿಯನ್ ಕೋಸ್ಟ್ ಗಾರ್ಡ್ ಶಿಪ್ ICGS ಸಚೇತ್ ಮತ್ತು ICGS ಸಮುದ್ರ ಪ್ರೆಹರಿ ಜಂಟಿಯಾಗಿ ನಂದಿಸುವ ಕಾರ್ಯದಲ್ಲಿ ತೊಡಗಿವೆ.
ಇದನ್ನೂ ಓದಿ: ಮಂಗಳೂರಿಗೆ ಬಂತಾ ಇಂಡೋನೇಷ್ಯಾದ ಗುಲಾಬಿ ಬಣ್ಣದ ಎಳನೀರು?
ಹಡಗಿನಲ್ಲಿದ್ದ ಚೀನಾದ ಎಂಟು, ತೈವಾ್ನ ನಾಲ್ಕು, ಮ್ಯಾನ್ಮಾರ್ ನಾಲ್ಕು ಮತ್ತು ಇಂಡೋನೇಷಿಯಾದ ಇಬ್ಬರು ಸಿಬ್ಬಂದಿ ಇದ್ದರು. ಘಟನೆಯಲ್ಲಿ ಗಾಯಗೊಂಡ ಹಡಗಿನ ಸಿಬ್ಬಂದಿಗಳ ಚಿಕಿತ್ಸೆಗಾಗಿ ಭಾರತೀಯ ನೌಕಾಪಡೆಯು ಮಂಗಳೂರಿಗೆ ಕರೆತರುತ್ತಿದೆ.