ದಕ್ಷಿಣ ಕನ್ನಡದಲ್ಲಿ ಕೋಮು ಕಿಡಿ ಹಚ್ಚಿದವರಿಗೆ ಪೊಲೀಸ್ ಶಾಕ್, ತಿದ್ಕೋತೀವಿ ಎಂದ ಆರೋಪಿಗಳು
ಕಡಲನಗರಿ ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಹದಬದಿಗೆ ತರಲು ಪೊಲೀಸರು ಟಫ್ ರೂಲ್ಸ್ ಜಾರಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮನಬಂದಂತೆ ಗೀಚುತ್ತಿದ್ದವರನ್ನು ಹೆಡೆಮುರಿ ಕಟ್ಟಿದ ಪೊಲೀಸರು ಆರೋಪಿಗಳಿಂದಲೇ ಜಾಗೃತಿ ಟ್ರೋಲ್ ಮಾಡಿದ್ದಾರೆ. ವೀರಾಧಿ ವೀರರಂತೇ ಹಾರಾಡಿದವರು ಈಗ ಪೊಲೀಸರ ಡ್ರಿಲ್‌ಗೆ ಕಣ್ಣೀರು ಹಾಕಿದ್ದಾರೆ.

ಮಂಗಳೂರು, (ಜೂನ್ 08): ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಸರಿ ದಾರಿಗೆ ತರಲು ಪೊಲೀಸ್ ಇಲಾಖೆ ಸರ್ವ ಪ್ರಯತ್ನ ನಡೆಸುತ್ತಿದೆ. ನೂತನ ಎಸ್ಪಿ ಮತ್ತು ಕಮೀಷನರ್‌ರವರ ರಫ್ & ಟಫ್ ನಡೆಗೆ ಕಿಡಿಗೇಡಿಗಳು ಕಂಗಾಲಾಗಿದ್ದಾರೆ. ಎಲ್ಲೋ ಕೂತು ಮಂಗಳೂರಿನಲ್ಲಿ ಕೋಮು ವೈಷಮ್ಯ (communal violence ) ಹುಟ್ಟು ಹಾಕಲು ಸಾಮಾಜಿಕ ಜಾಲತಾಣದಲ್ಲಿ (Social Media) ಮನಬಂದಂತೆ ಗೀಚುತ್ತಿದ್ದವರಿಗೆ ಪೊಲೀಸರು ಶಾಕ್ ನೀಡಿದ್ದಾರೆ. ಸೌದಿ ಅರೇಬಿಯಾದಲ್ಲಿದ್ದು ಮಂಗಳೂರಿನಲ್ಲಿ ವೈಷಮ್ಯ ಸೃಷ್ಠಿಸಿದ ಕಿಡಿಗೇಡಿಗಳನ್ನು ಬಂಧಿಸಿ ಸಖತ್ ಟ್ರೀಟ್ಮೆಂಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಸಂದೇಶ ಹರಿಬಿಟ್ಟಿದ್ದ ಉಡುಪಿಯ ಮಹಮ್ಮದ್ ಅಸ್ಲಾಂ, ಸುರತ್ಕಲ್ ಇಡ್ಯಾ ಗ್ರಾಮದ ಚೇತನ್, ಚೇಳಾರ್‍ನ ನಿತಿನ್ ಅಡಪ, ಫರಂಗಿಪೇಟೆ ಅರ್ಕುಳ ನಿವಾಸಿ ರಿಯಾಝ್, ಹಳೆಯಂಗಡಿ ನಿವಾಸಿ ಗುರುಪ್ರಸಾದ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಪ್ರಚೋದನಕಾರಿ ಸಂದೇಶ ಹರಿಯಬಿಟ್ಟಿದ್ದ ಆರೋಪಿಗಳನ್ನೇ ಟ್ರೋಲ್ ಮಾಡುವ ಮೂಲಕ ಮಂಗಳೂರು ಪೊಲೀಸರು ವಿಭಿನ್ನ ಪ್ರಯೋಗ ಮಾಡಿದ್ದಾರೆ. ಆರೋಪಿಗಳಿಂದಲೇ ತಪ್ಪಾಯ್ತು ತಿದ್ಕೋತೀವಿ ಅಂತಾ ಹೇಳಿಸಿದ್ದಾರೆ. ಆರೋಪಿಗಳನ್ನು ಕ್ರಮವಾಗಿ ನಿಲ್ಲಿಸಿ ಕೈಮುಗಿಸಿ ಕ್ಷಮೆ ಕೇಳಿಸಿದ್ದಾರೆ. ಅದರಲ್ಲೂ ಝಾಕೀರ್ ಎಂಬಾತ ರಹೀಂ ಕೊಲೆಗೆ ಒಂದಕ್ಕೆರಡು ಎಂಬಂತೆ ಪ್ರತೀಕಾರದ ವಿಡಿಯೋ ಹಾಕಿದ್ದ. ಆದರೆ ಪೊಲೀಸರ ಟ್ರೀಟ್ಮೆಂಟ್ ಗೆ ಹೆದರಿ ಕಣ್ಣೀರು ಹಾಕಿ ಇನ್ಮುಂದೆ ಈ ತರ ಮಾಡಲ್ಲ ಅಂತಾ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆಯಿಂದ ಪುತ್ತಿಲ, ಭರತ್ ಕುಮ್ಡೇಲು, ಮಹೇಶ್ ಶೆಟ್ಟಿ ತಿಮರೋಡಿ ಸೇರಿ 36 ಜನರ ಗಡೀಪಾರಿಗೆ ಪ್ರಕ್ರಿಯೆ ಶುರು
ಸೋಷಿಯಲ್ ಮೀಡಿಯಾದಲ್ಲಿ ಪ್ರತೀಕಾರದ, ಪ್ರಚೋದನಕಾರಿ ಮೆಸೇಜ್ ಹಾಕುವವರ ವಿರುದ್ಧ ಮಂಗಳೂರು ಪೊಲೀಸರು ಹದ್ದಿನ ಕಣ್ಣಟ್ಟಿದ್ದಾರೆ. ಈ ಬಗ್ಗೆ ಮಾನಿಟರ್ ಮಾಡಲು ವಿಶೇಷ ತಂಡವನ್ನು ರಚಿಸಲಾಗಿದೆ. ವಿವಿಧ ಪೇಜ್ ಗಳನ್ನು ಸೃಷ್ಟಿಸಿ ಪ್ರಚೋದನಕಾರಿ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದವರಿಗೆ ಪೊಲೀಸ್ ಪವರ್ ತೋರಿಸಲಾಗಿದೆ. ವಿವಿಧ ಪೇಜ್‌ಗಳ ಐವರು ಅಡ್ಮಿನ್‌ಗಳನ್ನು ಪೊಲೀಸರು ಬಂಧಿಸಿದ್ದು ಇನ್ನೂ ಐವರಿಗಾಗಿ ಬಲೆ ಬೀಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕಿಡಿಹೊತ್ತಿಸುವ ಬಹುತೇಕರು ಗಲ್ಫ್ ರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದು,ಅವರಿಗೂ ಮಂಗಳೂರು ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ವಾರ್ನಿಂಗ್ ನೀಡಿದ್ದಾರೆ.
ಒಟ್ಟಿನಲ್ಲಿ ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆಗೆ ಸವಾಲಾಗಿದ್ದ ಸೋಷಿಯಲ್ ಮೀಡಿಯಾ ಉತ್ತರಕುಮಾರರಿಗೆ ಮಂಗಳೂರಿಗ ಖಾಕಿ ಬಿಸಿ ಮುಟ್ಟಿಸಿದೆ. ಎಲ್ಲೇ ಅಡಗಿದ್ರೂ ಹಿಡಿಯದೇ ಬಿಡಲ್ಲ ಅಂತಾ ಕುಡ್ಲ ಖಾಕಿ ಅಬ್ಬರಿಸಿದೆ.







