AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಕ್ಷಿಣ ಕನ್ನಡ ಜಿಲ್ಲೆಯಿಂದ ಪುತ್ತಿಲ, ಭರತ್ ಕುಮ್ಡೇಲು, ಮಹೇಶ್ ಶೆಟ್ಟಿ ತಿಮರೋಡಿ ಸೇರಿ 36 ಜನರ ಗಡೀಪಾರಿಗೆ ಪ್ರಕ್ರಿಯೆ ಶುರು

ಕೋಮುದಳ್ಳುರಿಯಿಂದ ಬೆಂದು ಹೋಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸರು ಹೊಸ ಅಸ್ತ್ರ ಝಳಪಿಸಿದ್ದಾರೆ. ಪ್ರಚೋದನಕಾರಿ ಭಾಷಣದ ವಿರುದ್ಧ ಸಮರ ಸಾರಿರುವ ಖಾಕಿ ಪಡೆ ಹಿಂದೂ, ಮುಸ್ಲಿಂ ಸೇರಿದಂತೆ 36 ಮುಖಂಡರ ಗಡೀಪಾರಿಗೆ ಪ್ರಕ್ರಿಯೆ ಆರಂಭಿಸಿದೆ. ಹಿಂದೂ ನಾಯಕರಾದ ಪುತ್ತಿಲ, ಭರತ್ ಕುಮ್ಡೇಲು, ಮಹೇಶ್ ಶೆಟ್ಟಿ ಹೆಸರು ಕೂಡ ಗಡೀಪಾರಾಗುವವರ ಲಿಸ್ಟ್​​ನಲ್ಲಿದೆ.

ದಕ್ಷಿಣ ಕನ್ನಡ ಜಿಲ್ಲೆಯಿಂದ ಪುತ್ತಿಲ, ಭರತ್ ಕುಮ್ಡೇಲು, ಮಹೇಶ್ ಶೆಟ್ಟಿ ತಿಮರೋಡಿ ಸೇರಿ 36 ಜನರ ಗಡೀಪಾರಿಗೆ ಪ್ರಕ್ರಿಯೆ ಶುರು
ಮಂಗಳೂರಿನಲ್ಲಿ ಪೊಲೀಸ್ ಡ್ರಿಲ್
ಪೃಥ್ವಿರಾಜ್​ ಬಿ.ಯು. ಮಂಗಳೂರು
| Edited By: |

Updated on: Jun 03, 2025 | 7:30 AM

Share

ಮಂಗಳೂರು, ಜೂನ್ 3: ದಕ್ಷಿಣ ಕನ್ನಡ (Dakshina Kannadaಜಿಲ್ಲೆಯಲ್ಲಿ ಸಂಭವಿಸಿದ ಸಾಲು ಸಾಲು ಕೊಲೆಗಳು ಸರ್ಕಾರವನ್ನು ಬಡಿದೆಬ್ಬಿಸಿದ್ದು, ಬಂಟ್ವಾಳದ ಅಬ್ದುಲ್ ರಹಿಮಾನ್ ಹತ್ಯೆ ಬಳಿಕ ಜಿಲ್ಲೆಯ ಪೊಲೀಸ್ ವ್ಯವಸ್ಥೆಗೆ ಮೇಜರ್ ಸರ್ಜರಿ ಆಗಿದೆ. ಹೊಸದಾಗಿ ಅಧಿಕಾರ ಸ್ವೀಕರಿಸಿರುವವರು ಆಪರೇಷನ್ ಆರಂಭಿಸಿದ್ದಾರೆ. ಸರಣಿ ಕೊಲೆಗಳಿಂದ ಪ್ರಕ್ಷುಬ್ಧಗೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಕೋಮು ಪ್ರಚೋದನೆ ನೀಡುತ್ತಿದ್ದವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. 15 ಮುಸ್ಲಿಮರೂ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಒಟ್ಟು 36 ಜನರ ಗಡೀಪಾರಿಗೆ ಪ್ರಕ್ರಿಯೆ ಆರಂಭವಾಗಿದೆ. ಗಡೀಪಾರು ಪಟ್ಟಿಯಲ್ಲಿ ಬಿಜೆಪಿ ಮುಖಂಡ ಅರುಣ್ ಪುತ್ತಿಲ, ಭರತ್ ಕುಮ್ಡೇಲು, ಮಹೇಶ್ ಶೆಟ್ಟಿ ತಿಮರೋಡಿ ಹೆಸರಿದೆ. ಬಂಟ್ವಾಳ ನಗರ, ಬಂಟ್ವಾಳ ಗ್ರಾಮಾಂತರ, ಪುತ್ತೂರು ನಗರ, ಪುತ್ತೂರು ಗ್ರಾಮಾಂತರ, ವಿಟ್ಲ, ಸುಳ್ಯ, ಬೆಳ್ಳಾರೆ ಬೆಳ್ತಂಗಡಿ, ಪುಂಜಾಲಕಟ್ಟೆ, ಕಡಬ ಹಾಗೂ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ 36 ಜನ ಗಡೀಪಾರಿನ ಪಟ್ಟಿಯಲ್ಲಿದ್ದಾರೆ.

ಸರ್ಕಾರದ ನಿರ್ಧಾರಕ್ಕೆ ಅರುಣ್ ಪುತ್ತಿಲ ಆಕ್ರೋಶ ಹೊರಹಾಕಿದ್ದು, ನಾನು ಯಾವುದೇ ಕಾರಣಕ್ಕೂ ಗಡೀಪಾರು ಆದೇಶ ಸ್ವೀಕರಿಸಲ್ಲ ಎಂದಿದ್ದಾರೆ.

ಪ್ರಚೋದನಕಾರಿ ಭಾಷಣ ಆರೋಪ ಕೇಸ್: ಕಲ್ಲಡ್ಕ ಪ್ರಭಾಕರ್ ಭಟ್​ಗೆ ರಿಲೀಫ್

ಮೇ 12ರಂದು ಆರ್​ಎಸ್​​ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಬಂಟ್ವಾಳದ ಗ್ರಾಮಾಂತರ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಲಾಗಿತ್ತು. ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ ಪ್ರಭಾಕರ ಭಟ್​ಗೆ ರಿಲೀಫ್ ಸಿಕ್ಕಿದೆ. ಬಂಧನ ಸಹಿತ ಯಾವುದೇ ಒತ್ತಡದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಆದೇಶ ನೀಡಿದೆ. ಇದು ಹಿಂದೂ ಹೋರಾಟಗಾರರ ದಮನಿಸುವ ಕೆಲಸ ಅಂತಾ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.

ಇದನ್ನೂ ಓದಿ
Image
ಪ್ರಚೋದನಕಾರಿ ಭಾಷಣ ಕೇಸ್​: ಕಲ್ಲಡ್ಕ ಪ್ರಭಾಕರ ಭಟ್​ಗೆ ಬಿಗ್​ ರಿಲೀಫ್
Image
ತಲವಾರು, ಕತ್ತಿ ಝಳಪಿಸಿ ಹತ್ಯೆಯ ಮಾತುಗ ಆಡಿದವರ ಮೇಲೆ ಕ್ರಮ ಏಕಿಲ್ಲ? ಬಿಜೆಪಿ
Image
ಪುತ್ತೂರು: ಬಿಜೆಪಿ ಮುಖಂಡ ಅರುಣ್ ಪುತ್ತಿಲಗೆ ಗಡೀಪಾರು ನೋಟಿಸ್
Image
ಪ್ರಭಾಕರ ಭಟ್ ಸೇರಿ ಹಿಂದೂ ಸಂಘಟನೆಯ 15 ಕಾರ್ಯಕರ್ತರ ವಿರುದ್ಧ ಎಫ್​ಐಆರ್​​​

ಹಿಂದೂ ಮುಖಂಡರ ಮನೆಗಳಿಗೆ ಮಧ್ಯರಾತ್ರಿ ಪೊಲೀಸ್ ಭೇಟಿ

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅರುಣ್ ರಾತ್ರೋರಾತ್ರಿ ಹಿಂದೂ ಸಂಘಟನೆಗಳ ಮುಖಂಡರ ಮನೆಗೆ ಭೇಟಿ ನೀಡಿದ್ದಾರೆ. ಜಿಪಿಎಸ್ ಟ್ರ್ಯಾಕರ್ ಮೂಲಕ ಹದ್ದಿನ ಕಣ್ಣಿಟ್ಟಿದ್ದಾರೆ. ಇದನ್ನು ವಿರೋಧಿಸಿ ವಿಹೆಚ್​​ಪಿ ಮುಖಂಡರು, ಕಡಬ ಪೊಲೀಸ್ ಠಾಣೆ ಬಳಿ ಬಂದಿದ್ದಾರೆ. ನಮ್ಮನ್ನು ಅಪರಾಧಿಗಳಂತೆ ಬಿಂಬಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಮಧ್ಯರಾತ್ರಿ ಮನೆಗೆ ಪೊಲೀಸರು ಬರುತ್ತಿರುವುದನ್ನು ಆಕ್ಷೇಪಿಸಿ, ವಿಹೆಚ್​​ಪಿ ಮುಖಂಡರು ಠಾಣೆ ಬಳಿ ತೆರಳಿದ್ದಾರೆ. ಇದೇ ವೇಳೆ, ಪೂರ್ವಾನುಮತಿ ಪಡೆಯದೇ ಅಕ್ರಮವಾಗಿ ಗುಂಪು ಕಟ್ಟಿಕೊಂಡು ಬಂದಿದ್ದಾರೆ ಎಂದು 15 ಹಿಂದೂ ಕಾರ್ಯಕರ್ತರ ಮೇಲೆ ಎಫ್​ಐಆರ್ ದಾಖಲಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗುತ್ತಿರುವ ಬೆಳವಣಿಗೆ ಕೇಸರಿ ನಾಯಕರನ್ನು ಕೆರಳಿಸಿದೆ.

ದಕ್ಷಿಣ ಕನ್ನಡದಲ್ಲಿ ಕೆರಳಿಸುವ ಪ್ರಕ್ರಿಯೆಯನ್ನು ಸರ್ಕಾರವೇ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಟೀಕಿಸಿದ್ದಾರೆ. ದಕ್ಷಿಣ ಕನ್ನಡವನ್ನು ದಕ್ಷಿಣ ಕಾಶ್ಮೀರ ಮಾಡಿಕೊಳ್ಳಲು ಹೊರಟಿದ್ದಾರೆ. ಹೀಗಾಗಿ ಹಿಂದೂಗಳನ್ನು ಗುರಿ ಮಾಡಲಾಗುತ್ತಿದೆ ಎಂದು ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ. ಮತ್ತೊಂದೆಡೆ, ಬಿಜೆಪಿ ನಾಯಕರ ಆರೋಪಕ್ಕೆ ಗೃಹ ಸಚಿವ ಪರಮೇಶ್ವರ್ ತಿರುಗೇಟು ಕೊಟ್ಟಿದ್ದಾರೆ.

ಇದನ್ನೂ ಓದಿ: ಮಂಗಳೂರು: ಕಲ್ಲಡ್ಕ ಪ್ರಭಾಕರ ಭಟ್ ಸೇರಿ ಹಿಂದೂ ಸಂಘಟನೆಯ 15 ಕಾರ್ಯಕರ್ತರ ವಿರುದ್ಧ ಎಫ್​ಐಆರ್​​​

ಕೊಲೆಗೆ ಕೊಲೆಯಿಂದಲೇ ಉತ್ತರ ಎಂದು ಹಿಂದೂ ಹಾಗೂ ಮುಸ್ಲಿಂ ಯುವಕರ ಸಾಲು ಸಾಲು ಹತ್ಯೆಯಿಂದ ಕರಾವಳಿ ರಕ್ತಸಿಕ್ತವಾಗಿದೆ. ಸದ್ಯ ಪೊಲೀಸರು ಗಡಿಪಾರು ಅಸ್ತ್ರ ಪ್ರಯೋಗಿಸಿದ್ದು, ಇದು ಇನ್ಯಾವ ತಿರುವು ಪಡೆಯುತ್ತದೆಯೀ ಕಾದು ನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ