AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದೂ ಕಾರ್ಯಕರ್ತರ ಮನೆಗೆ ಪೊಲೀಸ್​ ಭೇಟಿ: ದೊಡ್ಡ ಮಟ್ಟದ ಪ್ರತಿಭಟನೆಯ ಎಚ್ಚರಿಕೆ, ವಿಹೆಚ್​ಪಿ

ದಕ್ಷಿಣ ಕನ್ನಡದಲ್ಲಿ ನಡೆದ ಸರಣಿ ಹತ್ಯೆಗಳ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಹತೋಟಿಗೆ ತರಲು ಪೊಲೀಸರು ಆರ್‌ಎಸ್‌ಎಸ್ ಮತ್ತು ಸಂಘ ಪರಿವಾರದ ಮುಖಂಡರ ಮನೆಗಳಿಗೆ ತಡರಾತ್ರಿ ಭೇಟಿ ನೀಡುತ್ತಿದ್ದಾರೆ. ಈ ಕ್ರಮಕ್ಕೆ ಬಿಜೆಪಿ ಮತ್ತು ವಿಶ್ವ ಹಿಂದೂ ಪರಿಷತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿವೆ. ಪೊಲೀಸರು ಯಾವುದೇ ಕೇಸ್ ಇಲ್ಲದೆ ದಾಳಿ ನಡೆಸಿರುವುದು ಸರಿಯಲ್ಲ ಎಂದು ಆರೋಪಿಸಲಾಗಿದೆ. ಬಲಪಂಥೀಯ ಸಂಘಟನೆಗಳು ದೊಡ್ಡ ಪ್ರತಿಭಟನೆಗೆ ಎಚ್ಚರಿಕೆ ನೀಡಿವೆ.

ಹಿಂದೂ ಕಾರ್ಯಕರ್ತರ ಮನೆಗೆ ಪೊಲೀಸ್​ ಭೇಟಿ: ದೊಡ್ಡ ಮಟ್ಟದ ಪ್ರತಿಭಟನೆಯ ಎಚ್ಚರಿಕೆ, ವಿಹೆಚ್​ಪಿ
ಹಿಂದೂ ಮುಂಖಡರ ಮನೆಗೆ ಪೊಲೀಸ್​ ಭೇಟಿ
ಪೃಥ್ವಿರಾಜ್​ ಬಿ.ಯು. ಮಂಗಳೂರು
| Edited By: |

Updated on: Jun 03, 2025 | 4:39 PM

Share

ಮಂಗಳೂರು, ಜೂನ್​ 03: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಸಂಭವಿಸಿದ ಸರಣಿ ಹತ್ಯೆಗಳು ಸರ್ಕಾರವನ್ನು ಬಡಿದೆಬ್ಬಿಸಿದೆ. ಸರಣಿ ಕೊಲೆಗಳಿಂದ ಪ್ರಕ್ಷುಬ್ಧಗೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸರು (Dakshina Kannada Police) ಕಾರ್ಯಾಚರಣೆ ಆರಂಭಿಸಿದ್ದಾರೆ. ಕೋಮು ಪ್ರಚೋದನೆ ನೀಡುತ್ತಿದ್ದವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ. ತಡರಾತ್ರಿ ಆರ್​ಎಸ್​ಎಸ್ ಹಾಗೂ ಸಂಘ ಪರಿವಾರದ ನಾಯಕರ ಮನೆಗಳಿಗೆ ಪೊಲೀಸರು ಭೇಟಿ ನೀಡಿ, ಜಿಪಿಎಸ್ ಆಧಾರಿತ ಫೋಟೋ ಸಂಗ್ರಹಿಸಿ ತೆರಳುತ್ತಿದ್ದಾರೆ. ಪೊಲೀಸರ ಈ ನಡೆಗೆ ಆಕ್ರೋಶಗೊಂಡಿರುವ ಸಂಘ ಪರಿವಾರದ ಕಾರ್ಯಕರ್ತರು ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.

ಪೊಲೀಸರು ಸೋಮವಾರ ರಾತ್ರಿ ಆರ್​ಎಸ್​ಎಸ್​ ಪ್ರಾಂತ ಪ್ರಮುಖ ನಾ. ಸೀತಾರಾಂ ಸುಳ್ಳ ಅವರ ಮನೆಗೆ ತೆರಳಿ ವಿಚಾರಣೆ ನಡೆಸಿದ್ದಾರೆ. ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಸಿಇಓ ಲಕ್ಷಿ ಪ್ರಸಾದ್, ಉಪ್ಪಿನಂಗಡಿಯ ವಿದ್ಯಾವರ್ಧಕ ಸಂಘದ ಸಂಚಾಲಕಿ ಯು ಜಿ ರಾಧಾ, ಪುತ್ತೂರಿನ ವಿಹೆಚ್​ಪಿ ಮಾಜಿ ಉಪಾಧ್ಯಕ್ಷರ ಮನೆಗೆ ತೆರಳಿ ವಿಚಾರಣೆ ನಡೆಸಿದ್ದಾರೆ.

ಪೊಲಿಸರ ಈ ನಡೆಯನ್ನು ಬಿಜೆಪಿ ಖಂಡಿಸಿದ್ದು, ಯಾವುದೇ ಕೇಸ್​ಗಳು ಇಲ್ಲದೆ ಇದ್ದರೂ ತಡರಾತ್ರಿ ಮನೆಗೆ ತೆರಳಿ ವಿಚಾರಣೆ ನಡೆಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಪೊಲೀಸರ ಕ್ರಮದ ವಿರುದ್ಧ ಕೋರ್ಟ್ ಮೆಟ್ಟಿಲೇರಲು ತಿರ್ಮಾನಿಸಿದೆ.

ಇದನ್ನೂ ಓದಿ
Image
ಪ್ರಚೋದನಕಾರಿ ಭಾಷಣ ಕೇಸ್​: ಕಲ್ಲಡ್ಕ ಪ್ರಭಾಕರ ಭಟ್​ಗೆ ಬಿಗ್​ ರಿಲೀಫ್
Image
ತಲವಾರು, ಕತ್ತಿ ಝಳಪಿಸಿ ಹತ್ಯೆಯ ಮಾತುಗ ಆಡಿದವರ ಮೇಲೆ ಕ್ರಮ ಏಕಿಲ್ಲ? ಬಿಜೆಪಿ
Image
ಪುತ್ತೂರು: ಬಿಜೆಪಿ ಮುಖಂಡ ಅರುಣ್ ಪುತ್ತಿಲಗೆ ಗಡೀಪಾರು ನೋಟಿಸ್
Image
ಪ್ರಭಾಕರ ಭಟ್ ಸೇರಿ ಹಿಂದೂ ಸಂಘಟನೆಯ 15 ಕಾರ್ಯಕರ್ತರ ವಿರುದ್ಧ ಎಫ್​ಐಆರ್​​​

ಪ್ರತಿಭಟನೆಯ ಎಚ್ಚರಿಕೆ ನೀಡಿದ ವಿಹೆಚ್​ಪಿ

ಹಿಂದೂ ಸಂಘಟನೆಗಳ ಮುಖಂಡರನ್ನು ಗಡಿಪಾರು ಮಾಡಲು ಮುಂದಾಗಿರುವ ಪೊಲೀಸ್​ ಇಲಾಖೆಯ ತೀರ್ಮಾನವನ್ನು ವಿಶ್ವ ಹಿಂದೂ ಪರಿಷತ್ ಖಂಡಿಸಿದೆ. ರಾಷ್ಟ್ರೀಯತೆ, ಧರ್ಮದ ಪರವಾಗಿ ಕೆಲಸ ಮಾಡುವವರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಬಲಪಂಥೀಯ ಸಂಘಟನೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡವರನ್ನೇ ಗುರಿಯಾಗಿಸಲಾಗಿದೆ. ಬಲಪಂಥೀಯ ಸಂಘಟನೆ ಸಕ್ರಿಯ ಕಾರ್ಯಕರ್ತರ ಮೇಲೆ‌ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಕಾರ್ಯಕರ್ತರ ಮನೆಗೆ ಪೊಲೀಸರು ತಡರಾತ್ರಿ ತೆರಳಿ ಕಿರುಕುಳ ನೀಡುವುದು ಸರ್ವೇ ಸಾಮಾನ್ಯವಾಗಿದೆ. ಪೊಲೀಸ್ ರಾಜ್ ವ್ಯವಸ್ಥೆಯ ಧಮನಕಾರಿ‌ ನೀತಿಯ ಬಗ್ಗೆ ಉತ್ತರ ಭಾರತದ ಉದಾಹರಣೆ ನೀಡುತ್ತಿದ್ದೆವು. ಅಂತಹ ಧಮನಕಾರಿ ವ್ಯವಸ್ಥೆ‌ ಈಗ ಕರಾವಳಿ ಭಾಗದಲ್ಲಿ ಶುರುವಾಗಿದೆ ಅಂತ ಅನಿಸುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್​ನ ದಕ್ಷಿಣ ಪ್ರಾಂತ ಮುಖಂಡ ಸುನಿಲ್ ಕೆ.ಆರ್ ಆಕ್ರೋಶ ವ್ಯಕ್ತಪಡಿಸಿದರು.

ವಿಶ್ವ ಹಿಂದೂ ಪರಿಷತ್ ಈ ವ್ಯವಸ್ಥೆಯನ್ನ ಖಂಡಿಸುತ್ತೆ. ಇದು ಮುಂದುವರೆದರೆ ದೊಡ್ಡ ಮಟ್ಟದ ಪ್ರತಿಭಟನೆ ನಡೆಯಲಿದೆ. ಪೊಲೀಸ್ ಇಲಾಖೆ,‌ ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ವಿಶ್ವ ಹಿಂದೂ ಪರಿಷತ್ ಮುಖಂಡ ಸುನಿಲ್‌ ಕೆಆರ್​​  ಎಚ್ಚರಿಕೆ ನೀಡಿದರು.

ಎಸ್​ಪಿಯನ್ನು ಭೇಟಿ ಮಾಡಿದ ಬಿಜೆಪಿ ನಿಯೋಗ

ಹಿಂದೂ ಕಾರ್ಯಕರ್ತರನ್ನು ಗಡಿಪಾರು ಮಾಡಲು ದಕ್ಷಿಣ ಕನ್ನಡ ಜಿಲ್ಲೆ ಪೊಲೀಸರು ತಯಾರಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಡಾ.ವೈ.ಭರತ್ ಶೆಟ್ಟಿ ನೇತೃತ್ವದಲ್ಲಿ ಬಿಜೆಪಿ ನಿಯೋಗ ಮಂಗಳವಾರ (ಜೂ.03) ಮಂಗಳೂರು ಪೊಲೀಸ್​ ಆಯುಕ್ತ ಸುಧೀರ್ ರೆಡ್ಡಿ ಹಾಗೂ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿತು.

ಭೇಟಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಾಸಕ ಡಾ.ವೈ.ಭರತ್ ಶೆಟ್ಟಿ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಾವು ನಿಮ್ಮ ಜೊತೆ ಇದ್ದೇವೆ ಎಂದು ಹೇಳಿದ್ದೇವೆ. ಸಂಪೂರ್ಣ ಸಹಕಾರ ನೀಡುತ್ತೇವೆ. ಎಲ್ಲ ರೀತಿಯ ತನಿಖೆಯಲ್ಲಿ, ಎಲ್ಲ ರೀತಿಯ ಕಾರ್ಯ ಚಟುವಟಿಕೆಯಲ್ಲಿ ಯಾವುದೇ ರೀತಿಯ ರಾಜಕೀಯ ಹಸ್ತಕ್ಷೇಪ ಇಲ್ಲದ ರೀತಿಯಲ್ಲಿ ನೀವು ಇಲಾಖೆಯನ್ನು ನಡೆಸಬೇಕೆಂಬ ನಮ್ಮ ಕೋರಿಕೆ ಅವರ ಮುಂದೆ ಇಟ್ಟಿದ್ದೇವೆ ಎಂದು ಹೇಳಿದರು.

ಈ ಹಿಂದೆ ಎಲ್ಲ ಪೊಲೀಸ್ ಠಾಣೆಗಳು, ಪೊಲೀಸ್​ ಆಯುಕ್ತರ ಕಚೇರಿಗಳು, ಎಸ್​ಪಿ ಕಚೇರಿ ಕಾಂಗ್ರೆಸ್​ನ ಕಚೇರಿಯಂತೆ ನಾಯಕರುಗಳು ನಡೆಸುತ್ತಿದ್ದರು. ಅದಕ್ಕೆ ಆಸ್ಪದ ಕೊಡಬಾರದು. ನ್ಯಾಯಯುತವಾಗಿ ಏನು‌ ಮಾಡಬೇಕು ಅದನ್ನ ಮಾಡಿ. ಗೋ ಹತ್ಯೆ, ಗೋ ಕಳ್ಳ ಸಾಗಾಣಿಕೆ, ಡ್ರಗ್ಸ್, ಲವ್ ಜಿಹಾದ್​ಗಳಿಗೆ ಕಡಿವಾಣ ಹಾಕಿದರೆ ಮಾತ್ರ ಕಾನೂನು ಸುವ್ಯವಸ್ಥೆ ಕಂಟ್ರೋಲ್​ಗೆ ತರಬಹುದು ಎಂದು ಅವರಿಗೆ ಹೇಳಿದ್ದೇವೆ ಎಂದರು.

ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆಯಿಂದ ಪುತ್ತಿಲ, ಭರತ್ ಕುಮ್ಡೇಲು, ಮಹೇಶ್ ಶೆಟ್ಟಿ ತಿಮರೋಡಿ ಸೇರಿ 36 ಜನರ ಗಡೀಪಾರಿಗೆ ಪ್ರಕ್ರಿಯೆ ಶುರು

ಕಲ್ಲಡ್ಕ ಪ್ರಭಾಕರ್ ಭಟ್ ಅವರ ಮೇಲೆ ಕೇಸ್ ಹಾಕಿ ವಾಕ್ ಸ್ವಾತಂತ್ರ್ಯವನ್ನು ಕಸಿಯುವಂತಹ ಪ್ರಯತ್ನ ಸರ್ಕಾರ ಮಾಡಿದೆ. ನಾವು ಅದಕ್ಕೆ ನಮ್ಮ ವಿರೋಧ ವ್ಯಕ್ತಪಡಿಸಿದ್ದೇವೆ. ಗಡಿಪಾರು ಮಾಡಿದ ಲಿಸ್ಟ್​ನಲ್ಲಿ ನಟೋರಿಯಸ್ ಮುಸ್ಲಿಮರ ಹೆಸರಿಲ್ಲ. ಈ ಲಿಸ್ಟ್​ ಅನ್ನು ಕಾಂಗ್ರೆಸ್​ನ ನಾಯಕರೇ ಅಧಿಕಾರಿಗಳ ಜೊತೆ ಕೂತು ಮಾಡಿದ್ದಾರೆ. ಈ ಲಿಸ್ಟ್ ತಯಾರು ಮಾಡಲು ಸುಮಾರು‌ ಎರಡು ತಿಂಗಳು ಸಮಯ ತೆಗೆದುಕೊಂಡಿರಬಹುದು ಎಂದು ವಾಗ್ದಾಳಿ ಮಾಡಿದರು.

ರಾಜಕೀಯ ಹಸ್ತಕ್ಷೇಪ ಮಾಡದೆ ಪೊಲೀಸರಿಗೆ ಮುಕ್ತ ಅವಕಾಶ ನೀಡಿದರೇ ಕಾನೂನು ಸುವ್ಯವಸ್ಥೆ ಆಗುತ್ತದೆ. ಯಾವುದೇ ಕೇಸ್​ನಲ್ಲಿ ಇಲ್ಲದ, ಸಮಾಜ ಸೇವೆಯಲ್ಲಿ ತೊಡಗಿದ ಹಿರಿಯರ ಮನೆಗೆ ರಾತ್ರಿ ಹೋಗೋದು ಸರಿಯಲ್ಲ. ಈ ರೀತಿ ಮುಂದುವರಿದರೆ ನಾವು ಸುಮ್ಮನೆ ಕೂರುವ ಮಾತಿಲ್ಲ ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ