ಸುಹಾಸ್ ಶೆಟ್ಟಿ ಕೊಲೆ ಕೇಸ್: ಆರೋಪಿ ಅಬ್ದುಲ್ ರಜಾಕ್ ಬಂಧನ
ಮಂಗಳೂರಿನ ಬಜ್ಪೆಯಲ್ಲಿ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅಬ್ದುಲ್ ರಜಾಕ್ ಎಂಬಾತನನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿಗಳೊಂದಿಗೆ ಸೇರಿ ಹತ್ಯೆಗೆ ಸಂಚು ರೂಪಿಸಿದ್ದನು ಎಂಬ ಆರೋಪ ಕೇಳಿಬಂದಿದೆ. ಅಬ್ದುಲ್ ರಜಾಕ್ ಪ್ರಮುಖ ಆರೋಪಿ ಮುಜಾಮಿಲ್‌ನ ತಂದೆಯಾಗಿದ್ದಾನೆ. ಈ ಕೊಲೆಗೆ ಮೂರು ತಿಂಗಳ ಮುಂಚೆಯೇ ಸಂಚು ರೂಪಿಸಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.

ಮಂಗಳೂರು, ಜೂನ್ 03: ಮಂಗಳೂರು (Mangaluru) ನಗರದ ಬಜ್ಪೆ ಬಳಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ (Suhas Shetty) ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೋರ್ವ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಜ್ಪೆ ಶಾಂತಿಗುಡ್ಡೆ ನಿವಾಸಿ ಅಬ್ದುಲ್ ರಜಾಕ್ (59) ಬಂಧಿತ ಆರೋಪಿ. ಅಬ್ದುಲ್ ರಜಾಕ್ ಪ್ರಮುಖ ಆರೋಪಿಗಳ ಜೊತೆ ಸೇರಿ ಹತ್ಯೆಗೆ ಸಂಚು ರೂಪಿಸಿರುವುದು ಮತ್ತು ತಲೆಮರೆಸಿಕೊಳ್ಳಲು ಸಹಾಯ ಮಾಡಿದ್ದ ಎಂಬ ಆರೋಪ ಕೇಳಿಬಂದಿದೆ. ಅಬ್ದುಲ್ ರಜಾಕ್ ಈ ಪ್ರಕರಣದ ಪ್ರಮುಖ ಆರೋಪಿ ಮುಜಾಮಿಲ್‌ನ ತಂದೆಯಾಗಿದ್ದಾನೆ. ಪುತ್ರ ಮುಜಾಮಿಲ್, ಅಳಿಯ ನೌಷಾದ್ ಜೊತೆ ಸೇರಿ ಸುಹಾಸ್ ಶೆಟ್ಟಿ ಕೊಲೆಗೆ ಅಬ್ದುಲ್ ರಜಾಕ್ ಸಂಚು ರೂಪಿಸಿದ್ದಾನೆ ಎಂಬ ಆರೋಪಿವಿದೆ.
ಸುಹಾಸ್ ಶೆಟ್ಟಿ ಕೊಲೆ
ಕಳೆದ ಗುರುವಾರ (ಮೇ.01) ದಂದು ರಾತ್ರಿ ಮಂಗಳೂರು ನಗರದ ಬಜ್ಪೆ ಬಳಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯವರನ್ನು ಬರ್ಬರವಾಗಿ ತಲ್ವಾರಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿರುವ ಪೊಲೀಸರು ತೀವ್ರಗತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ.
3 ತಿಂಗಳ ಹಿಂದೆಯೇ ಸುಹಾಸ್ ಕೊಲೆಗೆ ಸಿದ್ಧವಾಗಿತ್ತು ಸ್ಕೆಚ್
ಸುಹಾಸ್ ಶೆಟ್ಟಿ ಕೊಲೆಗೆ ಮೂರು ತಿಂಗಳ ಹಿಂದೆಯೇ ಸಂಚು ಹೂಡಲಾಗಿತ್ತು. ಜನವರಿಯಲ್ಲೇ ಸಫ್ವಾನ್ ತಂಡಕ್ಕೆ ಫಾಜಿಲ್ (ಪ್ರವೀಣ್ ನೆಟ್ಟಾರು ಕೊಲೆಗೆ ಪ್ರತೀಕಾರವಾಗಿ ಹತ್ಯೆಗೊಳಗಾಗಿದ್ದ ಯುವಕ) ತಮ್ಮ ಆದಿಲ್ 3 ಲಕ್ಷ ರೂಪಾಯಿ ಹಣ ಕೊಟ್ಟಿದ್ದನು. ಕೃತ್ಯಕ್ಕಾಗಿ ಒಂದು ಪಿಕ್ ಅಪ್ ವಾಹನ, ಸ್ವಿಫ್ಟ್ ಕಾರ್ ಬಳಕೆ ಮಾಡಿದ್ದನು. ಅಕಸ್ಮಾತ್ ಸುಹಾಸ್ ಶೆಟ್ಟಿ ತಪ್ಪಿಸಿಕೊಂಡರೆ ಪ್ಲಾನ್ ಬಿಯನ್ನೂ ರೆಡಿ ಮಾಡಿಕೊಳ್ಳಲಾಗಿತ್ತು ಎಂಬುದು ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ.
ಇದನ್ನೂ ಓದಿ: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳ ಬಂಧನ
PFI ಕೈವಾಡ ಶಂಕೆ
ಸುಹಾಸ್ ಶೆಟ್ಟಿ ಹತ್ಯೆ ಹಿಂದೆ ಪಿಎಫ್ಐ ನೇರ ಕೈವಾಡವಿದೆ ಎಂದ ವಿಎಚ್ಪಿ ಮುಖಂಡ ಶರಣ್ ಪಂಪ್ವೆಲ್ ಕೂಡ ಆರೋಪಿಸಿದ್ದರು. ಮಂಗಳೂರಿನಲ್ಲಿ ‘ಟಿವಿ9’ ಜತೆ ಮಾತನಾಡಿದ ಅವರು, ಈ ಹಿಂದೆ ನಡೆದ ಹಿಂದೂ ನಾಯಕರ ಹತ್ಯೆಗೂ ಇದಕ್ಕೂ ಸಾಮ್ಯತೆ ಇದೆ. ತರಬೇತಿ ಪಡೆದುಕೊಂಡು ಈ ಹತ್ಯೆ ಮಾಡಿದ್ದಾರೆ. ಆರೋಪಿ ಸಫ್ವಾನ್ ಪಿಎಎಫ್ಐ ಕಾರ್ಯಕರ್ತನ ಮನೆಯಲ್ಲಿದ್ದ ಎಂದಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:12 pm, Tue, 3 June 25



