ಪ್ರಚೋದನಕಾರಿ ಭಾಷಣ ಕೇಸ್: ಹೈಕೋರ್ಟ್ನಿಂದ ಕಲ್ಲಡ್ಕ ಪ್ರಭಾಕರ ಭಟ್ಗೆ ಬಿಗ್ ರಿಲೀಫ್
ಪ್ರಚೋದನಾತ್ಮಕ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ಬಿಗ್ ರಿಲೀಫ್ ನೀಡಿದೆ. ಬಂಧನ ಸೇರಿದಂತೆ ಯಾವುದೇ ಒತ್ತಡದ ಕ್ರಮ ಕೈಗೊಳ್ಳದಂತೆ ನ್ಯಾಯಾಲಯ ಆದೇಶಿಸಿದೆ. ಜೂನ್ 10ಕ್ಕೆ ಮುಂದಿನ ವಿಚಾರಣೆ ನಿಗದಿಯಾಗಿದೆ. ಈ ಪ್ರಕರಣ ಬಂಟ್ವಾಳದಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ನೀಡಿದ ಭಾಷಣಕ್ಕೆ ಸಂಬಂಧಿಸಿದೆ.

ಮಂಗಳೂರು, ಜೂನ್ 02: ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ (Kalladka Prabhakar Bhat) ಅವರಿಗೆ ಹೈಕೋರ್ಟ್ (High Court) ಬಿಗ್ ರಿಲೀಫ್ ನೀಡಿದೆ. ಕಲ್ಲಡ್ಕ ಪ್ರಭಾಕರ ಭಟ್ ಅವರ ವಿರುದ್ಧ ಬಂಧನ ಸಹಿತ ಯಾವುದೇ ಒತ್ತಡದ ಕ್ರಮ ಕೈಗೊಳ್ಳದಂತೆ ನ್ಯಾ.ಕೃಷ್ಣಕುಮಾರ್ ಅವರಿದ್ದ ಹೈಕೋರ್ಟ್ನ ಏಕಸದಸ್ಯ ಪೀಠ ಆದೇಶ ಹೊರಡಿಸಿ, ಜೂನ್ 10ಕ್ಕೆ ವಿಚಾರಣೆ ಮುಂದೂಡಿದ್ದಾರೆ. ಕಲ್ಲಡ್ಕ ಪ್ರಭಾಕರ ಭಟ್ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಾಡಿಸಿದರು.
ಪ್ರಕರಣ ರದ್ದು ಕೋರಿ ಕಲ್ಲಡ್ಕ ಪ್ರಭಾಕರ ಭಟ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದರು. “ಭಾಷಣ ಮಾಡಿದ ಹಲವು ದಿನಗಳ ಬಳಿಕ ದುರುದ್ದೇಶದಿಂದ ಎಫ್ಐಆರ್ ದಾಖಲಿಸಲಾಗಿದೆ ಎಂದು ಕಲ್ಲಡ್ಕ ಪ್ರಭಾಕರ ಭಟ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾ.ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಹೈಕೋರ್ಟ್ ಪೀಠ, ಪೊಲೀಸರ ವಿಚಾರಣೆಗೆ ಅರ್ಜಿದಾರರು ಸಹಕರಿಸಬೇಕು. ಹೈಕೋರ್ಟ್ ಅನುಮತಿ ಇಲ್ಲದೇ ದೋಷಾರೋಪಪಟ್ಟಿ ಸಲ್ಲಿಸುವಂತಿಲ್ಲ. ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಮಧ್ಯಂತರ ಆದೇಶ ನೀಡಿದೆ.
ಪ್ರಚೋದನಾತ್ಮಕವಾಗಿ ಹೇಳಿಕೆ ಆರೋಪದಡಿ FIR
ಮೇ 12ರಂದು ಬಂಟ್ವಾಳದ ಕಾವಳಪಡೂರು ಗ್ರಾಮದ ಮದುವೆ ಪ್ಯಾಲೇಸ್ ಹಾಲ್ನಲ್ಲಿ ಸುಹಾಸ್ ಶೆಟ್ಟಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆದಿತ್ತು. ಈ ವೇಳೆ ಸಮಾಜದ ಸ್ವಾಸ್ಥ್ಯ ಕೆಡುವುದು ಮತ್ತು ಗುಂಪುಗಳ ನಡುವೆ ದ್ವೇಷ ಬಿತ್ತುವಂತೆ ಕಲ್ಲಡ್ಕ ಪ್ರಭಾಕರ ಭಟ್ ಪ್ರಚೋದನಕಾರಿ ಹೇಳಿಕೆ ನೀಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಮೇಲೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ 353(2)ರಡಿ ಪ್ರಕರಣದಡಿ ಎಫ್ಐಆರ್ ದಾಖಲಾಗಿದೆ.
ಯಾರೆಲ್ಲಾ ವಿರುದ್ಧ ಎಫ್ಐಆರ್?
ಪ್ರಮೋದ್ ರೈ ನಂದುಗುರಿ, ತಿಲಕ್ ನಂದುಗುರಿ, ಮೋಹನ ಕೆರೆಕೋಡಿ, ಚಂದ್ರಶೇಖರ ನೂಜಿಬಾಳ್ತಿಲ, ಮಹೇಶ್ ಕುಟ್ರುಪ್ಪಾಡಿ, ಡೀಕಯ್ಯ ನೂಜಿಬಾಳ್ತಿಲ, ಸುಜಿತ್ ಕುಟ್ರುಪ್ಪಾಡಿ, ಶರತ್ ನಂದುಗುರಿ, ಶ್ರೇಯತ್, ನಂದುಗುರಿ, ಉಮೇಶ್ ನೂಜಿಬಾಳ್ತಿಲ, ರಾದಾಕೃಷ್ಣ. ಕೆ, ಜಯಂತ್ ಮತ್ತು ಇತರೆ ಮೂವರ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ: ಬಿಜೆಪಿ ಮುಖಂಡ ಅರುಣ್ ಪುತ್ತಿಲ ಗಡೀಪಾರಿಗೆ ನೋಟಿಸ್
ಸಾಲು ಸಾಲು ಹತ್ಯೆಗಳಿಂದ ಕಡಲತಡಿ ಮಂಗಳೂರು ಕಾದ ಕುಲುಮೆಯಾದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ರಾತ್ರೋರಾತ್ರಿ ಕಡಬ ತಾಲೂಕಿನ ವಿಹೆಚ್ಪಿ ಸಂಘಟನೆ ಮುಖಂಡರ ಮನೆಗಳಿಗೆ ಭೇಟಿ ನೀಡಿ, ಜಿಪಿಎಸ್ ಫೋಟೋ ತೆಗೆದು ಸಂಘಟನೆ ಮುಖಂಡರ ಮಾಹಿತಿ ಸಂಗ್ರಹಿಸಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:37 pm, Mon, 2 June 25







