Bantwal Rahiman Murder: ಬಂಟ್ವಾಳ ರಹಿಮಾನ್ ಹಂತಕರ ಬಂಧನ: ಸ್ಫೋಟಕ ಅಂಶ ಬಿಚ್ಚಿಟ್ಟ ಎಸ್ಪಿ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಅಬ್ದುಲ್ ರಹಿಮಾನ್ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಅವರು ಪ್ರಕಟಣೆ ಹೊರಡಿಸಿ ಪ್ರಮುಖ ಆರೋಪಗಳ ಬಂಧನದ ಬಗ್ಗೆ ಖಚಿತಪಡಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದು, ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಮಂಗಳೂರು, (ಮೇ 29): ಬಂಟ್ವಾಳದಲ್ಲಿ (Bantwal) ಅಬ್ದುಲ್ ರಹಿಮಾನ್ (Abdul Rahiman) ಬರ್ಬರ ಹತ್ಯೆ ಪ್ರಕರಣದ ಮೂವರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಯವಲ್ಲಿ ಯಶಸ್ವಿಯಾಗಿದ್ದಾರೆ. ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಕನಪಾಡಿಯಲ್ಲಿ ಆರೋಪಿಗಳ ಬಂಧನವಾಗಿದೆ. ಬಂಟ್ವಾಳದ ದೀಪಕ್(21), ಪೃಥ್ವಿರಾಜ್(21), ಚಿಂತನ್(19) ಬಂಧಿತ ಪ್ರಮುಖ ಆರೋಪಿಗಳಾಗಿದ್ದಾರೆ. ಇನ್ನು ಈ ಪ್ರಮುಖ ಆರೋಪಿಗಳ ಬಂಧನದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಅವರು ಮಾಧ್ಯಮ ಪ್ರಕಟಣೆ ಹೊರಡಿಸಿ ಖಚಿತಪಡಿಸಿದ್ದಾರೆ.
ಬಂಧಿತರಾಗಿರುವ ಮೂವರು ಈ ಹತ್ಯೆಯಲ್ಲಿ ನೇರವಾಗಿ ಭಾಗಿಯಾಗಿದ್ದಾರೆ. ಇನ್ನು ಬೈಕಿನಲ್ಲಿ ಬಂದು ಅಬ್ದುಲ್ ರಹಿಮಾನ್ ಮೇಲೆ ಹಲ್ಲೆ ಮಾಡಿದ ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮಂಗಳೂರಿನಲ್ಲಿ ಕಾಂಗ್ರೆಸ್ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಆರೋಪಿಗಳ ಪತ್ತೆಯಾಗಿ ಬಂಟ್ವಾಳ ಡಿವೈಎಸ್ಪಿ ವಿಜಯ ಪ್ರಸಾದ್ ಅವರನ್ನು ತನಿಖಾಧಿರಿಯನ್ನಾಗಿ ನೇಮಿಸಲಾಗಿತ್ತು. ಆರೋಪಿಗಳ ಪತ್ತೆಗಾಗಿ ಅವರ ನೇತೃತ್ವದಲ್ಲಿ ಐದು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಕನಪಾಡಿ ಎಂಬಲ್ಲಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಬಂಧಿಸಲಾಗಿದ್ದು,.ವಿಚಾರಣೆ ನಡೆಸಲಾಗುತ್ತಿದೆ. ಉಳಿದ ಆರೋಪಿಗಳ ಪತ್ತೆ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.
ಕಟ್ಟಡದ ಕೆಲಸಕ್ಕೆ ತುರ್ತಾಗಿ ಒಂದು ಲೋಡ್ ಮರಳು ತರುವಂತೆ ಅಬ್ದುಲ್ ರಹಿಮಾನ್ ಗೆ ದೀಪಕ್ ಕರೆ ಮಾಡಿದ್ದ. ಮರಳನ್ನ ಪಿಕಪ್ ವಾಹನದಲ್ಲಿ ತಂದು ಇಳಿಸುವಾಗ ಅಬ್ದುಲ್ ರಹಿಮಾನ್ ಮೇಲೆ ಹಲ್ಲೆ ನಡೆದಿತ್ತು. ಬೈಕಿನಲ್ಲಿ ಬಂದ ಇಬ್ಬರು ತಲವಾರಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಕೊಲೆ ಸಂಚಿನಲ್ಲಿ ಬಂಧಿತ ಆರೋಪಿಗಳು ನೇರವಾಗಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಬ್ದುಲ್ ರಹಿಮಾನ್ ಕೊಲೆ ಮತ್ತು ಜೊತೆಗಾರ ಕಲಂದರ್ ಕಾಫಿ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಮಧಿಸಿದಂತೆ ಬಂಟ್ವಾಳ ಗ್ರಾಮಾಂತರಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣದಲ್ಲಿ 15 ಮಂದಿಯ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗಾಯಗೊಂಡಿದ್ದ ಕಲಂದರ್ ಶಫಿ ಮಾಹಿತಿ ಮೇರೆಗೆ ನಿಸಾರ್ ಎಂಬವರ ದೂರಿನಡಿ ಪರಿಚಯಸ್ಥರೇ ಆಗಿರುವ ದೀಪಕ್ ಸೇರಿ 15 ಮಂದಿ ವಿರುದ್ಧ ಎಫ್‌ಐಆರ್ ಆಗಿತ್ತು.



