AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರಿನಲ್ಲಿ ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ

ಮಂಗಳೂರಿನಲ್ಲಿ ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ

ರಮೇಶ್ ಬಿ. ಜವಳಗೇರಾ
|

Updated on:May 29, 2025 | 6:33 PM

Share

ಮಂಗಳೂರಿನಲ್ಲಿ ಮುಸ್ಲಿಂ ಯುವಕನ ಕೊಲೆ ಪ್ರಕರಣದ ತನಿಖೆ ತೀವ್ರಗೊಂಡಿದೆ. ಇತ್ತ ಮುಸ್ಲಿಂ ಮುಖಂಡರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಇನ್ನು ಕಾಂಗ್ರೆಸ್​ ನಲ್ಲಿದ್ದ ಕೆಲ ಮುಖಂಡರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 15 ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್​ಗೆ ರಾಜೀನಾಮೆ ಸಲ್ಲಿಸಿದ್ದಾರೆ. ರಹಿಮಾನ್ ಸಾವಿಗೆ ನ್ಯಾಯ ಸಿಗೋವರೆಗೂ ಪಕ್ಷದ ಯಾವುದೇ ಚಟುವಟಿಕೆಯಲ್ಲಿ ಭಾಗಿಯಾಗಲ್ಲ ಎಂದು ಹೇಳಿದ್ದಾರೆ.

ಮಂಗಳೂರು, (ಮೇ 29): ಬಂಟ್ವಾಳದಲ್ಲಿ ಅಬ್ದುಲ್ ರಹಿಮಾನ್ ಕೊಲೆ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಶಾಂತಿ ಕದಡುವಂತೆ ಮಾಡಿದೆ. ಜಿಲ್ಲೆಯಾದ್ಯಂತ ಬೂದಿಮುಚ್ಚಿದ ಕೆಂಡದಂತಾ ಸ್ಥಿತಿ ಇದೆ. ಈ ಮಧ್ಯೆ ರಹಿಮಾನ್ ಕೊಲೆ ಬಳಿಕ ಸರ್ಕಾರದ ಕಾರ್ಯವೈಖರಿ ಬಗ್ಗೆ ಜಿಲ್ಲೆಯ ಮುಸ್ಲಿಂ ಮುಖಂಡರು ಅಸಮಾಧಾನ ಹೊರಹಾಕ್ತಿದ್ದಾರೆ. ಅಷ್ಟೇಅಲ್ಲ, ಕಾಂಗ್ರೆಸ್​​ನ ಅಲ್ಪ ಸಂಖ್ಯಾತ ಘಟಕ ಸೇರಿದಂತೆ ಕೆಲ ಮುಖಂಡರು ಕಾಂಗ್ರೆಸ್ ಪಕ್ಷದ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.

ಮಂಗಳೂರಿನ ಶಾದಿ ಮಹಲ್​ ನಲ್ಲಿ ಸಭೆ ನಡೆದಿದ್ದು, ಮೊದಲಿಗೆ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಅವರು ಸಾಮೂಹಿಕ ರಾಜೀನಾಮೆಯಿಂದ ಹಿಂದೆ ಸರಿದಿದ್ದಾರೆ. ಸಿಎಂ ಸಿದ್ದರಾಮಯ್ಯ ಸೂಚನೆ ಹಿನ್ನೆಲೆಯಲ್ಲಿ ಒಂದು ವಾರ ಮುಂದೂಡುವುದಾಗಿ ಹೇಳಿದ್ದಾರೆ. ಈ ಹೇಳಿಕೆ ಬೆನ್ನಲ್ಲೇ ನೆರೆದಿದ್ದ ಮುಸ್ಲಿಮರು ಆಕ್ರೋಶಗೊಂಡಿದ್ದು, ಸಭೆ ರಣಾಂಗಣವಾಗಿ ಮಾರ್ಪಟ್ಟಿತ್ತು. ಅಲ್ಲದೇ ರಾಜೀನಾಮೆ ಕೊಡಲೇ ಬೇಕು ಎಂದು ಪಟ್ಟು ಹಿಡಿದಿದ್ದಕ್ಕೆ ಮುಖಂಡರು ಮಣಿದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಅಶ್ರಫ್, ಪಾಣೆ ಮಂಗಳೂರು ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟದ ಅಧ್ಯಕ್ಷ ಉಬೈದುಲ್ಲಾ ಕೊಳಕೆ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ NSUI ಉಪಾಧ್ಯಕ್ಷ ಸಲ್ಮಾನ್ ಫಾರೀಶ್, ವಿಟ್ಲದ ಯುವ ಕಾಂಗ್ರೆಸ್ ಅಧ್ಯಕ್ಷ ಸಮದ್, ಬೆಳ್ತಂಗಡಿ ನಗರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅನ್ಸಾಪ್ ಕರಾಯ ಸೇರಿದಂತೆ 15 ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್​ಗೆ ರಾಜೀನಾಮೆ ಸಲ್ಲಿಸಿದ್ದಾರೆ. ರಹಿಮಾನ್ ಸಾವಿಗೆ ನ್ಯಾಯ ಸಿಗೋವರೆಗೂ ಪಕ್ಷದ ಯಾವುದೇ ಚಟುವಟಿಕೆಯಲ್ಲಿ ಭಾಗಿಯಾಗಲ್ಲ ಎಂದು ಹೇಳಿದ್ದಾರೆ.

ರಾಜೀನಾಮೆ ಜೊತೆಗೆ ಗೃಹ ಸಚಿವ ಪರಮೇಶ್ವರ್, ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಬದಲಾವಣೆಗೂ ಪಟ್ಟು ಹಿಡಿದಿದ್ದಾರೆ. ರಾಜ್ಯದ ಪ್ರಭಾವಿ ಮುಸ್ಲಿಂ ನಾಯಕರ ಮೂಲಕ ಸಿಎಂ ಡಿಸಿಎಂಗೂ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.

Published on: May 29, 2025 06:27 PM