ಮಂಗಳೂರು: ಕಲ್ಲಡ್ಕ ಪ್ರಭಾಕರ ಭಟ್ ಸೇರಿ ಹಿಂದೂ ಸಂಘಟನೆಯ 15 ಕಾರ್ಯಕರ್ತರ ವಿರುದ್ಧ ಎಫ್ಐಆರ್
ಮಂಗಳೂರಿನಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಈ ಮಧ್ಯೆ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಸೇರಿ 15 ಹಿಂದೂ ಸಂಘಟನೆ ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇತ್ತ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ರಾತ್ರೋರಾತ್ರಿ ಸಂಘಟನೆ ಮುಖಂಡರ ಮನೆಗಳಿಗೆ ಭೇಟಿ ನೀಡಿದ್ದಾರೆ. ಇದಕ್ಕೆ ಮುಖಂಡರ ಆಕ್ಷೇಪ ವ್ಯಕ್ತವಾಗಿದೆ.

ಮಂಗಳೂರು, ಜೂನ್ 02: ಸಾಲು ಸಾಲು ಹತ್ಯೆಗಳಿಂದ ಕಡಲತಡಿ ಮಂಗಳೂರು (Mangaluru) ಕಾದ ಕುಲುಮೆಯಂತಾಗಿದೆ. ಸುಹಾಸ್ ಶೆಟ್ಟಿ ಕೊಲೆಗೆ ಪ್ರತೀಕಾರವಾಗಿ ಅಬ್ದುಲ್ ರಹಿಮಾನ ಕೊಲೆ ನಡೆದಿದೆ ಎಂಬ ಆರೋಪ ಕೋಮು ಸಾಮರಸ್ಯ ಕದಡುವಂತೆ ಮಾಡಿದೆ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ರನ್ನು ಬದಲಿಸಬೇಕು ಅಂತಾ ಸ್ಥಳೀಯ ಕಾಂಗ್ರೆಸ್ ಮುಸ್ಲಿಂ ಮುಖಂಡರು ಪಟ್ಟುಹಿಡಿದಿದ್ದರು. ಬಳಿಕ ಮಂಗಳೂರಿಗೆ ಭೇಟಿ ನೀಡಿದ್ದ ಸಚಿವ, ಪ್ರಚೋದನಕಾರಿ ಭಾಷಣ ಮಾಡುವವರನ್ನು ಮಟ್ಟಹಾಕ್ತೀವಿ ಎಂದಿದ್ದರು. ಇದೆಲ್ಲದರ ಮಧ್ಯೆ ಇದೀಗ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಸೇರಿದಂತೆ 15 ಜನ ಹಿಂದೂ ಸಂಘಟನೆ ಕಾರ್ಯಕರ್ತರ ವಿರುದ್ಧ ಎಫ್ಐಆರ್ (FIR) ದಾಖಲಾಗಿದೆ.
ಪ್ರಚೋದನಾತ್ಮಕವಾಗಿ ಹೇಳಿಕೆ: ಕಲ್ಲಡ್ಕ ಪ್ರಭಾಕರ ಭಟ್ ಮೇಲೆ FIR
ಸುಹಾಸ್ ಶೆಟ್ಟಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪ್ರಚೋದನಾತ್ಮಕವಾಗಿ ಹೇಳಿಕೆ ನೀಡಿದ ಆರೋಪದಡಿ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಮೇಲೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಮೇ 12ರಂದು ಬಂಟ್ವಾಳದ ಕಾವಳಪಡೂರು ಗ್ರಾಮದ ಮದುವೆ ಪ್ಯಾಲೇಸ್ ಹಾಲ್ನಲ್ಲಿ ಸುಹಾಸ್ ಶೆಟ್ಟಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆದಿತ್ತು. ಈ ವೇಳೆ ಸಮಾಜದ ಸ್ವಾಸ್ಥ್ಯ ಕೆಡುವುದು ಮತ್ತು ಗುಂಪುಗಳ ನಡುವೆ ದ್ವೇಷ ಬಿತ್ತುವಂತೆ ಕಲ್ಲಡ್ಕ ಪ್ರಭಾಕರ ಭಟ್ ಪ್ರಚೋದನಕಾರಿ ಹೇಳಿಕೆ ನೀಡಿರುವ ಆರೋಪ ಕೇಳಿಬಂದಿದೆ. ಹೀಗಾಗಿ ಬಿಎನ್ಎಸ್ 353(2)ರಡಿ ಪ್ರಕರಣದಡಿ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ: ಸುದ್ದಿಗೋಷ್ಠಿಯಲ್ಲಿ ಮಾತಾಡುವಾಗ ಅಡಚಣೆ ಮಾಡುತ್ತಿದ್ದ ಮುಸ್ಲಿಂ ಯುವಕನನ್ನು ಹೊರಹಾಕುವಂತೆ ಹೇಳಿದ ಗುಂಡೂರಾವ್
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಕೊಲೆಗಳು ಹಿನ್ನೆಲೆ ರಾತ್ರೋರಾತ್ರಿ ಹಿಂದೂ ಸಂಘಟನೆ ಮುಖಂಡರ ಮನೆಗಳಿಗೆ ನೂತನ ಎಸ್ಪಿ ಭೇಟಿ ನೀಡಿದ್ದಾರೆ. ಹೀಗಾಗಿ ಪೊಲೀಸರು ಮಧ್ಯರಾತ್ರಿ ಮನೆಗೆ ಆಗಮಿಸುತ್ತಿದ್ದಾರೆ ಅಂತಾ ಕಾರ್ಯಕರ್ತರು ಆರೋಪಿಸಿದ್ದಾರೆ. ಪೊಲೀಸರ ಈ ನಡೆ ವಿರೋಧಿಸಿ ಠಾಣೆ ಎದುರು ಹಾಜರಾಗಿದ್ದಕ್ಕೆ ಎಫ್ಐಆರ್ ದಾಖಲಿಸಲಾಗಿದೆ. ಯಾವುದೇ ಪೂರ್ವಾನುಮತಿ ಪಡೆಯದೇ ಅಕ್ರಮವಾಗಿ ಗುಂಪು ಕಟ್ಟಿಕೊಂಡು ಕಡಬ ಠಾಣೆಯ ಮುಂಭಾಗದಲ್ಲಿ ಕಾನೂನು ಬಾಹಿರವಾಗಿ ಪ್ರತಿಭಟನೆ ನಡೆಸಿರುತ್ತಾರೆ ಅಂತ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಯಾರೆಲ್ಲಾ ವಿರುದ್ಧ ಎಫ್ಐಆರ್?
ಪ್ರಮೋದ್ ರೈ ನಂದುಗುರಿ, ತಿಲಕ್ ನಂದುಗುರಿ, ಮೋಹನ ಕೆರೆಕೋಡಿ, ಚಂದ್ರಶೇಖರ ನೂಜಿಬಾಳ್ತಿಲ, ಮಹೇಶ್ ಕುಟ್ರುಪ್ಪಾಡಿ, ಡೀಕಯ್ಯ ನೂಜಿಬಾಳ್ತಿಲ, ಸುಜಿತ್ ಕುಟ್ರುಪ್ಪಾಡಿ, ಶರತ್ ನಂದುಗುರಿ, ಶ್ರೇಯತ್, ನಂದುಗುರಿ, ಉಮೇಶ್ ನೂಜಿಬಾಳ್ತಿಲ, ರಾದಾಕೃಷ್ಣ. ಕೆ, ಜಯಂತ್ ಮತ್ತು ಇತರೆ ಮೂವರ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ: ಕ್ರಿಮಿನಲ್ಗಳಿಗೆ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಖಡಕ್ ಎಚ್ಚರಿಕೆ
ಇನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ರಾತ್ರೋರಾತ್ರಿ ಕಡಬ ತಾಲೂಕಿನ ವಿಹೆಚ್ಪಿ ಸಂಘಟನೆ ಮುಖಂಡರ ಮನೆಗಳಿಗೆ ಭೇಟಿ ನೀಡಿ, ಜಿಪಿಎಸ್ ಫೋಟೋ ತೆಗೆದು ಸಂಘಟನೆ ಮುಖಂಡರ ಮಾಹಿತಿ ಸಂಗ್ರಹಿಸುವ ಮೂಲಕ ಎಲ್ಲರ ಮೇಲೆ ಹದ್ದಿನಕಣ್ಣಿಟ್ಟಿದ್ದಾರೆ.
ಹೋರಾಟ ಅನಿವಾರ್ಯವೆಂದ ಪ್ರಮೋದ್ ರೈ
ಈ ಬಗ್ಗೆ ದಕ್ಷಿಣ ಕನ್ನಡ ವಿಹೆಚ್ಪಿ ಜಿಲ್ಲಾ ಸಹ ಕಾರ್ಯದರ್ಶಿ ಪ್ರಮೋದ್ ರೈ ಹೇಳಿಕೆ ನೀಡಿದ್ದು, ರಾತ್ರೋರಾತ್ರಿ ಪೊಲೀಸರು ಆಗಮಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾತ್ರಿ ವೇಳೆ ಮನೆಗಳಿಗೆ ದಿಢೀರ್ ಭೇಟಿ ನೀಡಿ ಅಪರಾಧಿಗಳಂತೆ ಬಿಂಬಿಸಿದ್ದಾರೆ. ಇದರಿಂದ ನಮ್ಮ ಕುಟುಂಬಸ್ಥರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:11 am, Mon, 2 June 25







