Russia-Ukraine War: ಯುದ್ಧ ಶುರುವಾದಾಗಿನಿಂದ ಅತಿ ದೊಡ್ಡ ದಾಳಿ; ರಾತ್ರೋರಾತ್ರಿ ಉಕ್ರೇನ್ ಮೇಲೆ 479 ಡ್ರೋನ್ ಹಾರಿಸಿದ ರಷ್ಯಾ
ಉಕ್ರೇನ್ ಮೇಲೆ ರಷ್ಯಾ 479 ಡ್ರೋನ್‌ಗಳನ್ನು ಹಾರಿಸಿದೆ. ಶಾಂತಿ ಮಾತುಕತೆ ಸ್ಥಗಿತಗೊಂಡ ನಂತರ ದೊಡ್ಡ ದಾಳಿ ನಡೆಸಲಾಗಿದೆ. ಇದಕ್ಕೆ ಪ್ರತಿಯಾಗಿ ಉಕ್ರೇನ್ ಎರಡು ರಷ್ಯಾದ ವಿಮಾನಗಳನ್ನು ಹೊಡೆದುರುಳಿಸಿದೆ. ರಷ್ಯಾ ಸುಮಾರು 500 ಡ್ರೋನ್‌ಗಳನ್ನು ಹಾರಿಸಿದೆ ಎಂದು ಉಕ್ರೇನ್ ಹೇಳಿಕೊಂಡಿದೆ. ಇದು 3 ವರ್ಷಗಳ ಯುದ್ಧದ ಅತಿದೊಡ್ಡ ರಾತ್ರೋರಾತ್ರಿ ಡ್ರೋನ್ ಬಾಂಬ್ ದಾಳಿ ಎನ್ನಲಾಗಿದೆ. ಸ್ಥಗಿತಗೊಂಡ ಶಾಂತಿ ಮಾತುಕತೆಗಳ ನಡುವೆ ರಷ್ಯಾದಿಂದ ಉಕ್ರೇನ್ ಮೇಲೆ 479 ಡ್ರೋನ್‌ಗಳು ಮತ್ತು 20 ಕ್ಷಿಪಣಿಗಳನ್ನು ಹಾರಿಸಲಾಗಿದೆ.

ಕೈವ್, ಜೂನ್ 9: ರಷ್ಯಾ ಮತ್ತು ಉಕ್ರೇನ್ (Russia-Ukraine War) ನಡುವೆ ಯುದ್ಧ ಶುರುವಾಗಿ 3 ವರ್ಷಗಳೇ ಕಳೆದಿವೆ. ಈ ಎರಡೂ ದೇಶಗಳ ನಡುವೆ ಶಾಂತಿ ಸ್ಥಾಪನೆಗೆ ಹಲವು ದೇಶಗಳು ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸಿದರೂ ದಾಳಿಗಳು ಮಾತ್ರ ನಿಲ್ಲುತ್ತಿಲ್ಲ. ಮೂರು ವರ್ಷಗಳ ಹಿಂದೆ ಯುದ್ಧ ಪ್ರಾರಂಭವಾದಾಗಿನಿಂದ ಉಕ್ರೇನ್ ಮೇಲೆ ರಷ್ಯಾ ಇದೀಗ ಅತಿದೊಡ್ಡ ಡ್ರೋನ್ ದಾಳಿಯನ್ನು (Drone Attack) ಮಾಡಿದೆ. ರಷ್ಯಾ ರಾತ್ರೋರಾತ್ರಿ 479 ಡ್ರೋನ್‌ಗಳನ್ನು ಹಾರಿಸಿದೆ ಎಂದು ಉಕ್ರೇನ್‌ನ ವಾಯುಪಡೆ ಇಂದಯ (ಜೂನ್ 9) ತಿಳಿಸಿದೆ. ಡ್ರೋನ್‌ಗಳ ಜೊತೆಗೆ, ದೇಶದ ವಿವಿಧ ಪ್ರದೇಶಗಳ ಕಡೆಗೆ ವಿವಿಧ ರೀತಿಯ 20 ಕ್ಷಿಪಣಿಗಳನ್ನು ಸಹ ಹಾರಿಸಲಾಗಿದೆ.
ಯುದ್ಧ ಪ್ರಾರಂಭವಾದ ನಂತರದ ಅತಿದೊಡ್ಡ ವೈಮಾನಿಕ ದಾಳಿಯಲ್ಲಿ, ರಷ್ಯಾ ಉಕ್ರೇನ್ ಮೇಲೆ ರಾತ್ರಿಯಿಡೀ 479 ಡ್ರೋನ್‌ಗಳು ಮತ್ತು 20 ಕ್ಷಿಪಣಿಗಳನ್ನು ಹಾರಿಸಿದೆ ಎಂದು ಉಕ್ರೇನಿಯನ್ ವಾಯುಪಡೆ ತಿಳಿಸಿದೆ. ಉಕ್ರೇನ್ ವಾಯುಪಡೆಯ ಪ್ರಕಾರ ಉಕ್ರೇನ್‌ನ ವಾಯು ರಕ್ಷಣಾ ವ್ಯವಸ್ಥೆಗಳು 277 ಡ್ರೋನ್‌ಗಳು ಮತ್ತು 19 ಕ್ಷಿಪಣಿಗಳನ್ನು ತಡೆಹಿಡಿದವು. ಕೇವಲ 10 ಸ್ಪೋಟಕಗಳು ಮಾತ್ರ ತಮ್ಮ ಉದ್ದೇಶಿತ ಗುರಿಗಳನ್ನು ಹೊಡೆದವು. ಈ ಘಟನೆಯಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಮುಸ್ಲಿಂ ರಾಷ್ಟ್ರಗಳಿಗೂ ಗೊತ್ತಾಗೋಯ್ತು ಪಾಕ್ ಬುದ್ಧಿ, ಎಚ್ಚರಿಕೆ ರವಾನೆ
ಉಕ್ರೇನ್ ತನ್ನ 1,000 ಕಿಲೋಮೀಟರ್ ಮುಂಚೂಣಿಯಲ್ಲಿ ವಿಶೇಷವಾಗಿ ಪೂರ್ವ ಮತ್ತು ಈಶಾನ್ಯ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಒತ್ತಡವನ್ನು ಎದುರಿಸುತ್ತಿರುವಾಗ ರಷ್ಯಾದಿಂದ ಬೃಹತ್ ದಾಳಿ ನಡೆದಿದೆ. ಕೆಲವು ಪ್ರದೇಶಗಳಲ್ಲಿ ಯುದ್ಧಭೂಮಿಯ ಪರಿಸ್ಥಿತಿ ತುಂಬಾ ಕಷ್ಟಕರವಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಭಾನುವಾರ ರಾತ್ರಿ ಒಪ್ಪಿಕೊಂಡಿದ್ದರು.
ರಷ್ಯಾದ ಪ್ರದೇಶದ ವಾಯುನೆಲೆಗಳ ಮೇಲೆ ಉಕ್ರೇನ್ ನಡೆಸಿದ ಇತ್ತೀಚಿನ ಡ್ರೋನ್ ದಾಳಿಯ ನಂತರ ರಷ್ಯಾ ತನ್ನ ದಾಳಿಗಳನ್ನು ತೀವ್ರಗೊಳಿಸಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ರಿವ್ನೆಯಲ್ಲಿ ಡಬ್ನೋ ವಾಯುನೆಲೆಯ ಮೇಲಿನ ದಾಳಿ ಸೇರಿದಂತೆ ಉಕ್ರೇನಿಯನ್ ಮಿಲಿಟರಿ ಮೂಲಸೌಕರ್ಯದ ಮೇಲೆ ರಷ್ಯಾ ದಾಳಿ ನಡೆಸಿದೆ. ರಷ್ಯಾದ ನಿಜ್ನಿ ನವ್ಗೊರೊಡ್ ಪ್ರದೇಶದ ಸವಾಸ್ಲೇಕಾ ವಾಯುನೆಲೆಯಲ್ಲಿ ವಿಶೇಷ ಕಾರ್ಯಾಚರಣೆ ಪಡೆಗಳು ಎರಡು ರಷ್ಯಾದ ಫೈಟರ್ ಜೆಟ್‌ಗಳನ್ನು ಹೊಡೆದವು ಎಂದು ಉಕ್ರೇನ್‌ನ ಸೇನೆ ಹೇಳಿಕೊಂಡಿದೆ. ರಷ್ಯಾ ಸರ್ಕಾರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ: 2026ರ ಏಪ್ರಿಲ್‌ನಲ್ಲಿ ಬಾಂಗ್ಲಾದೇಶದಲ್ಲಿ ಚುನಾವಣೆ; ಮುಹಮ್ಮದ್ ಯೂನಸ್ ಘೋಷಣೆ
ಇದರ ನಡುವೆ ಉಕ್ರೇನ್ ದೀರ್ಘ-ಶ್ರೇಣಿಯ ಡ್ರೋನ್‌ಗಳನ್ನು ಬಳಸಿಕೊಂಡು ರಷ್ಯಾದ ಪ್ರದೇಶದೊಳಗೆ ದಾಳಿ ಮಾಡುವುದನ್ನು ಮುಂದುವರೆಸಿದೆ. ರಷ್ಯಾದ ರಕ್ಷಣಾ ಸಚಿವಾಲಯವು ರಾತ್ರಿಯಿಡೀ 7 ಪ್ರದೇಶಗಳಲ್ಲಿ 49 ಉಕ್ರೇನಿಯನ್ ಡ್ರೋನ್‌ಗಳನ್ನು ಹೊಡೆದುರುಳಿಸಿದೆ ಎಂದು ವರದಿ ಮಾಡಿದೆ. ಆದರೆ, ಎರಡು ಡ್ರೋನ್‌ಗಳು ಚುವಾಶಿಯಾದಲ್ಲಿ ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಗಳನ್ನು ತಯಾರಿಸುವ ಸ್ಥಾವರವನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾದವು. ವೊರೊನೆಜ್‌ನಲ್ಲಿ 25 ಡ್ರೋನ್‌ಗಳನ್ನು ತಡೆಹಿಡಿಯಲಾಗಿದೆ ಎಂದು ವರದಿಯಾಗಿದೆ.
ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಪ್ರಾರಂಭವಾದಾಗಿನಿಂದ 12,000ಕ್ಕೂ ಹೆಚ್ಚು ಉಕ್ರೇನಿಯನ್ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




