ಪಾಕಿಸ್ತಾನ ಹಾರಿಸಿದ್ದ 600ಕ್ಕೂ ಹೆಚ್ಚು ಡ್ರೋನ್‌ಗಳನ್ನು ಹೊಡೆದುರುಳಿಸಿದ ಭಾರತೀಯ ಸೇನೆ
ಭಾರತವು ಸುಧಾರಿತ ವಾಯು ರಕ್ಷಣಾ ವ್ಯವಸ್ಥೆಗಳನ್ನು ಬಳಸಿಕೊಂಡು ಪಾಕಿಸ್ತಾನ ಹಾರಿಸಿದ 600ಕ್ಕೂ ಹೆಚ್ಚು ಡ್ರೋನ್‌ಗಳನ್ನು ಹೊಡೆದುರುಳಿಸಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ನಡುವೆಯೂ ಪಾಕಿಸ್ತಾನ ಹಾರಿಸಿದ 600ಕ್ಕೂ ಹೆಚ್ಚು ಡ್ರೋನ್‌ಗಳನ್ನು ಭಾರತೀಯ ಸೇನೆಯು ತಟಸ್ಥಗೊಳಿಸಿದೆ ಎಂದು ಮೂಲಗಳು ತಿಳಿಸಿವೆ. ಭಾರತದ ಆಪರೇಷನ್ ಸಿಂಧೂರ್ ಮೂಲಕ 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಮತ್ತು 600ಕ್ಕೂ ಹೆಚ್ಚು ಪಾಕಿಸ್ತಾನಿ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ.

ನವದೆಹಲಿ. ಮೇ 16: ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam Terror Attack) ಉಗ್ರರಿಂದ ನಡೆದ ಪ್ರವಾಸಿಗರ ಕ್ರೂರ ಹತ್ಯೆಗೆ ಪ್ರತಿಕ್ರಿಯೆಯಾಗಿ ಭಾರತೀಯ ಸಶಸ್ತ್ರ ಪಡೆಗಳು ಆಪರೇಷನ್ ಸಿಂಧೂರ್ (Operation Sindoor) ಅನ್ನು ಪ್ರಾರಂಭಿಸಿದವು. ಈ ಕಾರ್ಯಾಚರಣೆಯು ಪಾಕಿಸ್ತಾನದ ಪ್ರದೇಶದೊಳಗಿನ ಹಲವು ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡಿತು. ಭಾರತೀಯ ಪಡೆಗಳು 9 ಸ್ಥಳಗಳಲ್ಲಿ 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ಯಶಸ್ವಿಯಾಗಿ ತಟಸ್ಥಗೊಳಿಸಿದವು. ನಂತರ ಪಾಕಿಸ್ತಾನದಿಂದ ಹತಾಶ ಪ್ರತೀಕಾರದ ಪ್ರಯತ್ನ ನಡೆಯಿತು. ಅದು ಭಾರತೀಯ ಮಿಲಿಟರಿ ಸ್ಥಾಪನೆಗಳನ್ನು ಹೊಡೆಯುವ ಗುರಿಯನ್ನು ಹೊಂದಿರುವ ಡ್ರೋನ್‌ಗಳ ಗುಂಪನ್ನು ಬಿಡುಗಡೆ ಮಾಡಿತು. ಅವುಗಳಲ್ಲಿ ಹಲವು ಟರ್ಕಿಶ್ ನಿರ್ಮಿತ ಡ್ರೋನ್ಗಳಾಗಿದ್ದವು. ಆದರೆ, ಈ ಪ್ರಯತ್ನಗಳನ್ನು ಭಾರತದ ವಾಯು ರಕ್ಷಣಾ ವ್ಯವಸ್ಥೆಗಳು ಪರಿಣಾಮಕಾರಿಯಾಗಿ ವಿಫಲಗೊಳಿಸಿದವು.
ಭಾರತೀಯ ಸೇನೆ ಹಾಗೂ ವಾಯುಪಡೆಗಳು ಪಾಕಿಸ್ತಾನದ 600ಕ್ಕೂ ಹೆಚ್ಚು ಡ್ರೋನ್‌ಗಳನ್ನು ಹೊಡೆದುರುಳಿಸಿವೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ. ಮಾನವರಹಿತ ವೈಮಾನಿಕ ಬೆದರಿಕೆಗಳ ಅಲೆಯನ್ನು ಎದುರಿಸಲು 1,000ಕ್ಕೂ ಹೆಚ್ಚು ಬಂದೂಕು ವ್ಯವಸ್ಥೆಗಳು ಮತ್ತು ಸುಮಾರು 750 ಕಿರು ಮತ್ತು ಮಧ್ಯಮ ಶ್ರೇಣಿಯ ಕ್ಷಿಪಣಿಗಳನ್ನು ನಿಯೋಜಿಸಲಾಗಿತ್ತು. ಭಾರತೀಯ ಸೇನೆಯು ಪಾಕಿಸ್ತಾನದ ಗಡಿಯಾಚೆಯಿಂದ ಕೂಡ ಪ್ರತಿದಾಳಿ ನಡೆಯುವುದನ್ನು ನಿರೀಕ್ಷಿಸಿತ್ತು. ಹೀಗಾಗಿ, ಗಡಿಯಲ್ಲಿ ಜಂಟಿ ವಾಯು ರಕ್ಷಣಾ ಕೇಂದ್ರವನ್ನು ಸ್ಥಾಪಿಸಲಾಯಿತು. ಅಲ್ಲಿ ಭಾರತೀಯ ವಾಯುಪಡೆ ಮತ್ತು ಭಾರತೀಯ ಸೇನೆಯು ಡ್ರೋನ್ ದಾಳಿಯನ್ನು ಹಿಮ್ಮೆಟ್ಟಿಸಲು ಮತ್ತು ಪ್ರಮುಖ ಕಾರ್ಯತಂತ್ರದ ಸ್ವತ್ತುಗಳನ್ನು ರಕ್ಷಿಸಲು ಒಗ್ಗಟ್ಟಿನಿಂದ ಕೆಲಸ ಮಾಡಿದವು.
ಇದನ್ನೂ ಓದಿ: ಕೇವಲ 23 ನಿಮಿಷದಲ್ಲಿ ಪಾಕಿಸ್ತಾನದ ಭಯೋತ್ಪಾದಕರ ಸರ್ವನಾಶ; ಐಎಎಫ್ ಸಾಧನೆಗೆ ರಾಜನಾಥ್ ಸಿಂಗ್ ಶ್ಲಾಘನೆ
ಭಾರತದ ಯುದ್ಧತಂತ್ರದ ಭಾಗವಾಗಿ ಪಾಕಿಸ್ತಾನ ಪಡೆಗಳನ್ನು ದಾರಿ ತಪ್ಪಿಸಲು ಮಿಲಿಟರಿ ಯುದ್ಧ ಡ್ರೋನ್‌ಗಳನ್ನು ಹೋಲುವ ನಕಲಿ ವಿಮಾನಗಳನ್ನು ಭಾರತೋಯ ವಾಯುಪಡೆ ನಿಯೋಜಿಸಿತು. ಭಾರತೀಯ ಯುದ್ಧ ವಿಮಾನಗಳು ತಮ್ಮ ವಾಯುಪ್ರದೇಶವನ್ನು ಪ್ರವೇಶಿಸುತ್ತಿವೆ ಎಂದು ತಪ್ಪಾಗಿ ಭಾವಿಸಿದ ಪಾಕಿಸ್ತಾನವು ತನ್ನ ವಾಯು ರಕ್ಷಣಾ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಿತು. ತಾನೇ ತನ್ನ ನಿರ್ಣಾಯಕ ಮಿಲಿಟರಿ ಸ್ವತ್ತುಗಳ ಸ್ಥಳಗಳನ್ನು ಬಹಿರಂಗಪಡಿಸಿತು. ಈ ಗುಪ್ತಚರ ಮಾಹಿತಿಯನ್ನು ಬಂಡವಾಳ ಮಾಡಿಕೊಂಡು, ಭಾರತವು ಬ್ರಹ್ಮೋಸ್ ಕ್ಷಿಪಣಿ ದಾಳಿಗಳನ್ನು ಪ್ರಾರಂಭಿಸಿತು. ಅದು ಪಾಕಿಸ್ತಾನದ ಪ್ರಮುಖ ವಾಯುನೆಲೆಗಳನ್ನು ಧ್ವಂಸಗೊಳಿಸಿತು. ಪಾಕಿಸ್ತಾನವು ಅನಿರೀಕ್ಷಿತವಾಗಿ ನಡೆದ ಈ ದಾಳಿಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ: ಆಪರೇಷನ್ ಸಿಂಧೂರ ಪ್ರಧಾನಿ ಮೋದಿಯ ದೃಢ ರಾಜಕೀಯ ಇಚ್ಛಾಶಕ್ತಿಯ ಪ್ರತಿಬಿಂಬ; ಗೃಹ ಸಚಿವ ಅಮಿತ್ ಶಾ
ಈ ಕಾರ್ಯಾಚರಣೆಯ ಸಮಯದಲ್ಲಿ 11 ಪಾಕಿಸ್ತಾನಿ ವಾಯುನೆಲೆಗಳು ಭಾರೀ ಹಾನಿಯನ್ನು ಅನುಭವಿಸಿವೆ ಎಂದು ಭಾರತೀಯ ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಪಾಕಿಸ್ತಾನವು ತನ್ನ ಹಾನಿಗೊಳಗಾದ ಮೂಲಸೌಕರ್ಯವನ್ನು ದುರಸ್ತಿ ಮಾಡಲು ಸಾರ್ವಜನಿಕವಾಗಿ ಟೆಂಡರ್‌ಗಳನ್ನು ನೀಡಿರುವುದರಿಂದ ವಿನಾಶದ ಪ್ರಮಾಣವು ಸ್ಪಷ್ಟವಾಗಿದೆ. ಇದು ಭಾರತದ ಹೇಳಿಕೆಯನ್ನು ಪರೋಕ್ಷವಾಗಿ ದೃಢೀಕರಿಸುತ್ತದೆ. ಪಾಕಿಸ್ತಾನದ ಮಾಜಿ ಏರ್ ಮಾರ್ಷಲ್ ಒಬ್ಬರು ಭಾರತವು ಹೆಚ್ಚು ಕಾರ್ಯತಂತ್ರದ ಭೋಲಾರಿ ವಾಯುನೆಲೆಯಲ್ಲಿ AWACS ವ್ಯವಸ್ಥೆಯನ್ನು ನಾಶಪಡಿಸಿದೆ ಎಂದು ಒಪ್ಪಿಕೊಂಡಿದ್ದಾರೆ. ಸಿಂಧ್ ಮುಖ್ಯಮಂತ್ರಿ ಕೂಡ ಆಪರೇಷನ್ ಸಿಂಧೂರ್‌ನಲ್ಲಿ ಭಾರತದ ನಿಲುವನ್ನು ಮೌನವಾಗಿ ಒಪ್ಪಿಕೊಂಡಿದ್ದು, ಭೋಲಾರಿ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ಭಾರತೀಯ ವಾಯುದಾಳಿಗಳು ನಡೆಸಿವೆ ಎಂದು ದೃಢಪಡಿಸಿದ್ದಾರೆ. ಇದರಿಂದಾಗಿ 6 ವಾಯುಪಡೆಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದಿದ್ದಾರೆ.
ಭಾರತದ ಎಚ್ಚರಿಕೆ:
ಭುಜ್ ವಾಯುನೆಲೆಯಲ್ಲಿ ಇಂದು ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದ್ದಾರೆ. “ನೀವು ನೋಡಿದ್ದು ಕೇವಲ ಟ್ರೇಲರ್ ಆಗಿತ್ತು. ಸಮಯ ಬಂದಾಗ ನಾವು ಪೂರ್ಣ ಸಿನಿಮಾವನ್ನು ತೋರಿಸುತ್ತೇವೆ” ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ