ನಾನೆಂಬ ಪರಿಮಳದ ಹಾದಿಯಲಿ: ನನಗ ನನ್ನ ಅಸ್ತಿತ್ವ ಮುಖ್ಯ ಗಂಡನ ಪಗಾರ ಅಲ್ಲ…

‘ಎಮ್​ಡಿ ಮಾಡಿದ ಮ್ಯಾಲೆ ಲೆಕ್ಚರರ್ ಆಗಬಹುದಿತ್ತು ಆದ್ರ ನನಗ ಜನರ ನಡಕ ಇರಬೇಕು ಅನ್ನೋ ಇಚ್ಛಾ ಭಾಳ ಇತ್ತು. ಹಂಗಾಗಿ ನಾನು ಮತ್ ದವಾಖಾನಿ ಸುರು ಮಾಡಿದೆ. ನನಗ ಮಕ್ಕಳ ಆಗೂಕಿಂತ ಮೊದ್ಲ ನಾ ಅನುಭವಿಸಿದ ನೋವು ಸಂಕಟ ಗೊತ್ತಿತ್ತಲ್ಲ, ಹಂಗಾಗಿ ಮಕ್ಕಳು ಇಲ್ಲಂತ ಬಂದಾವ್ರಿಗೆ ಅರ್ಥ ಮಾಡ್ಕೊಂಡು ಟ್ರೀಟ್​ಮೆಂಟ್ ಮಾಡಾಕ ಅನುಕೂಲ ಆಕ್ಕೋತ ಹೊಂಟಿತು. ‘ನೋಡ್ರಿ ಮೇಡಂ, ನಿಮ್ಮ ಕೈಗುಣದಿಂದ ಹುಟ್ಟಿದ ಕೂಸಿದು!’ ಅಂತ ಅವರು ತೋರಸ್ತಾರಲ್ಲಾ, ಆ ಖುಷಿ ತೃಪ್ತಿ ಹೇಳಾಕ ಆಗದಂಥಾದ್ದು.’ ಡಾ. ಶಕುಂತಲಾ ಪಾಟೀಲ

ನಾನೆಂಬ ಪರಿಮಳದ ಹಾದಿಯಲಿ: ನನಗ ನನ್ನ ಅಸ್ತಿತ್ವ ಮುಖ್ಯ ಗಂಡನ ಪಗಾರ ಅಲ್ಲ...
ಡಾ. ಶಕುಂತಲಾ ಪಾಟೀಲ
Follow us
|

Updated on:Feb 02, 2021 | 5:39 PM

ಅಮ್ಮನಾಗುತ್ತಿದ್ದಂತೆ ತೆರೆದುಕೊಳ್ಳುವ ಪುಳಕ ಆವರಿಸಿಕೊಳ್ಳುವ ಜವಾಬ್ದಾರಿಗಳಲ್ಲಿ ನಿನ್ನೆಗಳ ವಜ್ಜೆಯೂ ಇರುತ್ತದೆ ನಾಳೆಗಳ ಆತಂಕವೂ ಸೇರಿರುತ್ತದೆ. ಆದರೂ ಒಂದೊಂದನ್ನೇ ಕೂಡಿಕಳೆದು ಅಷ್ಟಷ್ಟೇ ಒಳಗೊಳಗೆ ಚಿಗಿತುಕೊಂಡು ಮಾಗುವ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವು ಕಂಡುಕೊಳ್ಳುವ ಪ್ರಯತ್ನ ನಿರಂತರ ಸಾಗಿರುತ್ತದೆ. ಬಯಸಿದ್ದು ಉಡಿಗೆ ಬಂದು ಬೀಳಲು ಇಲ್ಲಿ ಯಾವ ದೇವರೂ ಪ್ರತ್ಯಕ್ಷನಾಗಿ ವರ ನೀಡಲಾರ, ಹಾಗೆಯೇ ಕೈಹಿಡಿದು ಮುನ್ನಡೆಸಲಾರ. ನಮ್ಮ ಆಸಕ್ತಿಗಳಿಗೆ, ಆಕಾಂಕ್ಷೆಗಳಿಗೆ, ಹಂಬಲಗಳಿಗೆ ಅನುಗುಣವಾಗಿ ಒಳಗೊಳ್ಳುವ ನಿರಂತರ ಪ್ರಯತ್ನದಲ್ಲೇ ನಾವು ದೇವರನ್ನು ಕಾಣುವುದು. ಹೀಗಿರುವಾಗ ಎಲ್ಲರ ಮಧ್ಯೆಯೂ ನಾವು ನಾವಾಗಿ ಇರುವುದು, ನಮಗೂ ಒಂದು ವ್ಯಕ್ತಿತ್ವವಿದೆ, ಅಸ್ತಿತ್ವವಿದೆ ಎಂಬ ಎಚ್ಚರದೊಂದಿಗೆ ಚಲಿಸುವ ಹಾದಿ ಕೇವಲ ಹೂಹಾದಿಯೇ ಆಗಿರಲು ಸಾಧ್ಯವಾದೀತಾದರೂ ಹೇಗೆ? ಬೆರಳೆಣಿಕೆಯಷ್ಟು ಹೆಣ್ಣುಮಕ್ಕಳು ಈ ವಿಷಯದಲ್ಲಿ ಅದೃಷ್ಟವಂತರು. ಉಳಿದವರು? ಇರುವುದೊಂದೇ ಬದುಕು. ಎಡರುತೊಡರುಗಳನ್ನು ಬಿಡಿಸಿಕೊಂಡೇ ಸಾಗಬೇಕೆಂದರೆ ಚೂರಾದರೂ ಆಸರೆ ಬೇಕು ಹೆಚ್ಚು ಮನೋಬಲ ಬೇಕು. ಈ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ಗುರುತಿಸಿಕೊಂಡ ಹೆಣ್ಣುಮಕ್ಕಳನ್ನು ‘ನಾನೆಂಬ ಪರಿಮಳದ ಹಾದಿಯಲಿ’ ಸರಣಿಯಲ್ಲಿ ಪಾಲ್ಗೊಳ್ಳುವಂತೆ ಟಿವಿ9 ಕನ್ನಡ ಡಿಜಿಟಲ್ ಕೇಳಿಕೊಂಡಾಗ ಖುಷಿಯಿಂದ ತಮ್ಮ ಅನುಭವದ ಬುತ್ತಿಗಳನ್ನು ಬಿಚ್ಚಿಟ್ಟರು. ಓದುತ್ತಾ ಓದುತ್ತಾ ನಿಮಗೂ ಏನಾದರೂ ಹಂಚಿಕೊಳ್ಳಬೇಕೆನ್ನಿಸಿದಲ್ಲಿ ಖಂಡಿತ ಬರೆಯಿರಿ. tv9kannadadigital@gmail.com

ಪರಿಕಲ್ಪನೆ: ಶ್ರೀದೇವಿ ಕಳಸದ

ಬೆಂಗಳೂರಿನಲ್ಲಿ ಆಯುರ್ವೇದ ವೈದ್ಯೆಯಾಗಿರುವ ಡಾ. ಶಕುಂತಲಾ ಪಾಟೀಲ ಅವರು ಸ್ವಲ್ಪ ಹೊತ್ತು ಸ್ಟೆತೆಸ್ಕೋಪ್ ಬದಿಗಿಟ್ಟು ತಮ್ಮನ್ನು ತಾವು ಹಿಂದಿರುಗಿ ನೋಡಿದಾಗ…

ನಾನು ಹುಟ್ಟಿ ಬೆಳೆದದ್ದು ಬಿಜಾಪುರದಾಗ. ಅಪ್ಪಾ ಮೆಡಿಕಲ್ ಆಫೀಸರ್. ಅವ್ವ ಗೃಹಿಣಿ. ಇಬ್ರೂ ಆದರ್ಶವಾದಿಗಳು. ನಮ್ಮನ್ನೂ ಹಂಗ ಬೆಳೆಸಿದರು. ಐದು ಮಂದಿ ಮಕ್ಕಳೊಳಗ ನಾ ನಡುವಿನಾಕಿ. ಜೀವನದಾಗ ಓದೂದ ದೊಡ್ಡದು ಅನಕೊತ ಬೆಳದಕೀ ನಾನು.

ಮೆಡಿಕಲ್ (ಆಯುರ್ವೇದ) ಓದೂದು ಮುಗುದ ಮ್ಯಾಲೆ ಮುದ್ದೇಬಿಹಾಳದ ಜಗದೀಶ ಅವ್ರ ಜೊತೀಗಿ ಮದ್ವಿ ಆಯ್ತು. ಸ್ಥಿತಿವಂತ ಕುಟುಂಬ. ಆದ್ರ ಅತ್ತೀಯವರು ಮಾತ್ರ  ಓದಿದವರಲ್ಲ, ಹಳೇ ಕಾಲದವರು ಬೇರೆ. ಸೊಸಿ ಅಂದ್ರ ಹಿಂಗ ಇರಬೇಕು ಅಂತ ಅವರ ವಿಚಾರ. ಹಿಂಗ ಅಂದ್ರ ಹೆಂಗಂತ ನಿಮಗ ಗೊತ್ತಾತಲ್ಲ? ಆದ್ರ ನಾ ಬೆಳದಿದ್ದು ವಾತಾವರಣಕ್ಕೂ ಇಲ್ಲಿಗೂ ಭಾಳ ವ್ಯತ್ಯಾಸ ಇತ್ತು. ಹಿಂಗಾಗಿ ಮನಿ, ದವಾಖಾನಿ ಸಂಭಾಳಸೂದ್ರಾಗ ಸುಸ್ತ ಆಕ್ಕಿತ್ತು. ತವರ ಮನ್ಯಾಗ ನಾ ಸೂಕ್ಷ್ಮ ಸ್ವಭಾವದವಳು ಅಂತ ಏನಂದ್ರ ಏನೂ ಅಂತಿರಲಿಲ್ಲ. ಆದ್ರ ಮುಂದ ಅದ ನನ್ನ ದೌರ್ಬಲ್ಯ ಆಗತೈತಿ ಅಂತ ಆಗ ನನಗ ತಿಳದಿರಲಿಲ್ಲ. ಜೀವನದ ಉಳಿ ಪೆಟ್ಟು ಬಿದ್ದಂಗ ಜೀವನ ಏನು ಅನ್ನುದು ಅರ್ಥ ಆಗಕತ್ತಿತು. ಅದರಿಂದ ನಾ ಭಾಳ ಕಲ್ತೆ. ಆದ್ರ ಒಂದೊಂದು ಸಲ ಅನಸ್ತೈತಿ, ಅದರಿಂದ ನಾ ಪುಡಿಪುಡಿ ಆದ್ನೊ ಇಲ್ಲಾ ಮೂರ್ತಿ ಆದ್ನೊ? ನನಗ ಅನಿಸಿದ್ದು ಏನಂದರ ಸಾಲಿ ಪಾಠದ ಜೊತಿ ಜೀವನದ ಪಾಠ ಮಕ್ಕಳಿಗೆ ಒಂದು ಕೈ ಜಾಸ್ತಿನೇ ಹೇಳಿ ಕೊಡುದು ಚಲೊ ಅಂತ. ಇಲ್ಲಿಕ್ಕಂದ್ರ ಜೀವನ ಪಾಠ ಕಲಿಸಿದ್ರ ಭಾಳ ಕೆಟ್ಟ ಕಲಸ್ತೈತಿ‌.

ಅಷ್ಟರಾಗ ನನ್ನ ಜೊತಿನ ಮದ್ವಿ ಆದ ನೆಗೆಣ್ಣಿಗೆ ಕೂಸು ಹುಟ್ತು ನೋಡ್ರಿ, ಆತು‌ ಅವತ್ತಿಂದ ನನಗ ಎಲ್ಲಾರು, ‘ಇಕಿಗೆ ಮಕ್ಕಳ ಆಗತಾವೊ ಇಲ್ಲೊ’ ಅಂತ, ನಮ್ಮ ಅತ್ತೀಯೊರ್ನ ಒಬ್ಬರನ ಬಿಟ್ಟು ಸುತ್ತುಮುತ್ತಲೀನ ಮಂದಿ ಎಲ್ಲಾ ಅನ್ನಾಕ ಸುರು ಮಾಡಿದ್ರು. ಬರೇ ಎರಡ ವರ್ಷದಾಗ ಬಂಜಿ ಅನ್ನೋ ಪಟ್ಟ ಕಟ್ಟಿಬಿಟ್ಟ್ರು ನನ್ನ ಹಣೀಗೆ. ದೇವರ ದಯದಿಂದ ಮೂರು ವರ್ಷದ ಅಂತರದಾಗ ನನಗ ಇಬ್ಬರ ಮಕ್ಕಳಾದ್ರು. 

ಅತಂತ್ರ ಬದುಕು. ಮಗಳು ನಿಹಾರಿಕಾ ಹುಟ್ಟಿದ ಮ್ಯಾಲೆ ಮುಂಬೈಗೆ ಮನಿಯವರ ಕೆಲಸದ ಸಲುವಾಗಿ ಅಂತ ಹೋದ್ವಿ. ಅಕ್ಕ ಮತ್ತ ಮಾಮರು ತಂದಿ ತಾಯಿ ಜಾಗಾದಾಗ ನಿಂತು ಆಸರೆ ಆದ್ರು. ಮೀರಾ ರೋಡಿನ್ಯಾಗ ಮನಿ ಮಾಡಿದ್ವಿ. ಮೊದ್ಲ್ ಇದ್ದ ಮಾನಸಿಕ ತುಮುಲಗಳೆಲ್ಲ ಅಲ್ಲಿ ಕವನ ರೂಪದಾಗ ಹೊರಗ ಬಂದು. ಮನಸ್ಸು ನಿರಾಳ ಆತು. ಮಗಳಿನ್ನಾ ಆಗ ದೀಡು ವರ್ಷದ ಕೂಸು. ಎರಡು ಬಸ್ಸು ಬದಲಿಸಿ ಅಕಿನ್ನ ಕರ್ಕೊಂಡು ಹೋಗಿ ದಹಿಸರ್​ದಾಗಿದ್ದ ಅಕ್ಕನ ಮನ್ಯಾಗ ಬಿಟ್ಟು ಅಲ್ಲೇ ಸಮೀಪದಾಗಿದ್ದ ದವಾಖಾನಿಗೆ ಹೋಗ್ತಿದ್ದೆ. ಅವ್ವ ನಮ್ಮ ಹೈರಾಣ ನೊಡಲಾರ್ದ ಬಿಜಾಪುರಕ್ಕ ನನ್ನ ಮಗಳ್ನ ಕರ್ಕೊಂಡು ಹೋದ್ಲು‌. ಮುಂದ ಆರು ತಿಂಗಳದಾಗ ದಹಿಸರ್​ಗೆ ನಾವು ಮನಿ ಶಿಫ್ಟ್​ ಮಾಡಿದಾಗ ಮಗಳ್ನ ಕರ್ಕೊಂಡು ಬರೂನ ಅಂತ ಬಿಜಾಪುರಕ್ಕ ಹೋದಾಗ, ಮಗಳು ಸ್ವಲ್ಪ ಹೊತ್ತು ನನ್ನ ಸುಮ್ಮನ ದಿಟ್ಟಿಸಿ ನೋಡಿ, ಅಪ್ಪಿಕೊಂಡಾಕಿ ಮತ್ತ ಬಿಡ್ಲೇ ಇಲ್ಲ. ಮತ್ತ ಕಳಕೊಂಡಿದ್ದನ್ನೆಲ್ಲಾ ನಾ ವಾಪಸ್ ಪಡಕೊಂಡ್ನೇನೋ ಅಂತ ಅನಸೋ ಸುಖಾ ಅದು. ಮುಂದ ಮಕ್ಕಳ್ನ ಬಿಟ್ಟ ಇರುವ ಪ್ರಸಂಗ ಬರಲಿಲ್ಲ. ಸಮಾಧಾನದ ವಿಷ್ಯ ಅದು.

ನಮ್ಮ ಮಾಮಾರಿಗಿ ಆರಾಮ ಇಲ್ಲಂತ ಮುಂಬೈಯಿಂದ ಬೆಂಗಳೂರಿಗೆ ಬಂದ್ವಿ. ಮತ್ತ ಜೀವನ ಇನ್ನೊಂದು ಮಗ್ಗಲ ತೊಗೊಂತು. ಇಲ್ಲಿ ಕ್ಲಿನಿಕ್​ ಗೆ ಹೋದಾಗ ಮಕ್ಕಳ ನೋಡ್ಕೊಳಕ್ಕಂತ ಕೆಲಸದವರ ಹತ್ತರ ಬಿಟ್ಟು ಹೋಗತಿದ್ದೆ. ಮಕ್ಕಳಿಗೆ ನಾ ಬೇಕಿತ್ತು. ಆದ್ರ ನನ್ನ ಅಸ್ತಿತ್ವ ಉಳಸ್ಕೊಳ್ಳಾಕ ನನಗ ಕೆಲಸ ಬೇಕಿತ್ತು. ಗಂಡ ಇಂಜಿನಿಯರ್ ಅದಾನ, ಕೈತುಂಬ ಪಗಾರ ಬರ್ತತಿ. ಮಕ್ಕಳ್ನ ಅತ್ತಿಮಾವನ್ನ ನೋಡ್ಕೊಂಡು ಸುಮ್ನಿರ್ಬಾರ್ದಾ ಮನ್ಯಾಗ? ಅಂತಿದ್ರು, ಅಲ್ಲೊಬ್ರು, ಇಲ್ಲೊಬ್ರು, ಆದ್ರ ನನಗ ನನ್ನ ಕೆಲಸ ಅಂದ್ರ ಭಾಳ ಪ್ರೀತಿ. ನಾ ಇಷ್ಟಪಟ್ಟು ಮಾಡು ಕೆಲ್ಸಈ ಡಾಕ್ಟರ್ಕಿ. ಬಿಡಾಕ ಎಳ್ಳಷ್ಟೂ ಮನಸಿರ್ಲಿಲ್ಲ. ಆದ್ರ ಮಕ್ಕಳು, ‘ಅಮ್ಮ ಕ್ಲಿನಿಕ್​ಗೆ ಹೋಗಬೇಡ ಪ್ಲೀಸ್’ ಅಂದಾಗ ಅವ್ರಿಂದ ಬಿಡಸ್ಕೊಂಡು ಹೋಗುಮುಂದ ಹೊಟ್ಟ್ಯಾಗ ಸಂಕಟಾನೂ ಆಗತಿತ್ತು. ದ್ವಂದ್ವ ಕಾಡಾಕ ಚಾಲೂ ಆಕ್ಕಿತ್ತು. ಎಷ್ಟೋ ಸಲ ಈಗೂ ಆ ಗಿಲ್ಟ್​ ಕಾಡತೇತಿ. 

ಎಮ್​ಡಿ ಸಹಪಾಠಿಗಳೊಡನೆ ಡಾ. ಶಕುಂತಲಾ

ಕ್ಲಿನಿಕ್ಕು, ಮಕ್ಕಳು, ಮನೀ, ಅತ್ತಿ, ಮಾಮಾರ ಜವಾಬ್ದಾರಿ ಎಲ್ಲಾ ಸಂಭಾಳಸೂದರಾಗ ಎಷ್ಟೋ ಸಲ ಸ್ವಲ್ಪ ಹೊತ್ತು ರೆಸ್ಟ್ ಮಾಡಾಕೂ ನಾ ಟೈಮ್​ ತಗ್ಯಾಕ ಆಗತಿರಲಿಲ್ಲ. ನಾ ಎಲ್ಲೋ ಕಳದು ಹೋದ್ಯಾ ಅಂತ ಅನಸಾಕ ಸುರು ಆಯ್ತು. ಸಾಕಷ್ಟು ಸುಸ್ತು ಆಗತಿತ್ತು. ಜೀವನ  ಸಾಕಷ್ಟು ತ್ಯಾಗ ಕೇಳತೈತಿ. ನಮಗ ಸೇರ್ಲಿ ಬಿಡ್ಲಿ ತಿಳದು ತಿಳದು ಅದರ ತಾಳಕ್ಕ ಕುಣಿಬೇಕಾಗಿ ಬರತೈತಿ. ಮಿಕ್ಕಿಬಿಟ್ಟಿತ್ತು ನನಗ. ಆಗ ಅಕ್ಕ ನನ್ನನ್ನ Land mark  forum ಕೋರ್ಸ್ ಮಾಡು ಅಂತ ಅಲ್ಲಿ ಸೇರಿಸಿದ್ಲು. ಅಲ್ಲಿ ನನಗ ಏನು ಬೇಕಂತ ಸ್ಪಷ್ಟ ಆಯಿತು‌. ಎಮ್​ಡಿ ಮಾಡಬೇಕಂತ ಭಾಳ ದಿನದ್ದು ಆಸೆ ಇತ್ತು. ಆದರ ಡಿಗ್ರಿ ಮುಗ್ಯೂದಕ್ಕನ ಮದಿವಿ ಆಗಿದ್ರಿಂದ ಎಮ್​ಡಿ ಮಾಡೂದು ಆಗಿರಲಿಲ್ಲ. ಈಗ ಆ ಅವಕಾಶ ಕೂಡಿ ಬಂತು. ಮತ್ತ ಮಾಧವ ಫೋರಮ್ ಕೋಚಿಂಗ್ ತಗೊಂಡು ರೆಗ್ಯೂಲರ್ ಹುಡುಗರ ಜೋಡಿ ಸಿಇಟಿ ಬರೀಬೇಕಿತ್ತು ಬರದೆ. ನಾ ಒಬ್ಬಾಕಿನ ಅಲ್ಲಿ ದೊಡ್ಡಾಕಿ! ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದೊಳಗ ಎಮ್​ಡಿ ಸೀಟ್​ ಸಿಕ್ತು. ರಸಶಾಸ್ತ್ರ ವಿಷಯ (ಖನಿಜ ಮತ್ತು ಗಿಡಮೂಲಿಕೆಗಳಿಂದ ಔಷಧಿ ತಯಾರಿ‌ಕೆ – ಫಾರ್ಮಸಿ) ಆರಸ್ಕೊಂಡೆ. ಕಾಲೇಜ್​ ಕ್ಯಾಂಪಸ್​ನ್ಯಾಗ ಇಷ್ಟ ವಯಸ್ಸು ಆದ ಮೇಲೆ ರೆಗ್ಯೂಲರ್ ಸ್ಟೂಡೆಂಟ್ಸ್​ ಜೊತಿ ಕಾಂಪಿಟ್ ಮಾಡಿ ಸೀಟು ತೊಗೊಂಡಾಳ ಅನ್ನೂ ವಿಷಯ ಸ್ವಲ್ಪ ಕಾಲ ಕೇಳಿ ಬರತಿತ್ತು‌. ಮದವಿಗೆ ಮೊದ್ಲ ಓದೂದುಕ್ಕೂ ಈಗ ಓದುದುಕ್ಕೂ, ಭಾಳ ಪರಕ ಆಗತೈತಿ. ಈಗ ಕಲಿಕಿ ಜೋಡ ಜವಾಬ್ದಾರಿ ಇತ್ತು‌. ಹೈರಾಣ ಆಗತಿತ್ತ ಖರೇ‌, ಆದ್ರ ಮನಸಿಗೆ ಇಷ್ಟ ಇದ್ದದ್ದು ಕಷ್ಟ ಅನ್ಸೂದಿಲ್ಲಲ್ಲ. ಮಕ್ಕಳು ಮತ್ತ ಮನಿಯವರ ಸಹಕಾರ ಚಲೊ ಸಿಕ್ತು. ಮಕ್ಕಳು ಆವಾಗ ಆರು ಎಂಟನೇ ಕ್ಲಾಸು. ಮಗಳು, ಅಷ್ಟ ಸಣ್ಣ ವಯಸ್ಸಿಗೆ ನನಗ ಭಾಳ ಸಹಾಯ ಮಾಡ್ತಿದ್ಲು. ಎಷ್ಟೋ ಸಲಾ ಆಕೀನ ನನಗ ತಾಯಿ ಆದ್ಲು ಅಂತ ಅನಸತೈತಿ. 

ಕಾಲೇಜನ್ಯಾಗ ಎಲ್ಲಾ ಸ್ಪೋರ್ಟ್ಸ್​, ಕಲ್ಚರ್ ಇವೆಂಟ್​ನೊಳಗ ಭಾಗವಹಿಸಿದ್ತಿದ್ದೆ. ನನ್ನನ್ನ ನೋಡಿ ಉಳದಾವ್ರು ಭಾಗವಹಿಸ್ತಿದ್ರು. ಅಲ್ಲಿರೋ ಕ್ಲಾಸ್​ಮೇಟ್ಸ್​ ಭಾಳ ಸಹಕಾರ ಕೊಟ್ಕೋತ ಬಂದ್ರು. ಉಷಾ ಅನ್ನೂ ಹುಡಗಿ ಕಂಪ್ಯೂಟರ್ ಕಲಿಸಿದರ, ಶಿಲ್ಪಾ, ವೈಶಾಲಿ, ಕಾಶೀನಾಥ, ರಾಜು, ಗೊಪಾಲಕೃಷ್ಣ, ದಿವ್ಯಾ, ಲೋಕೇಶ, ಗದಗ ಮತ್ತ ಶೋಭಾ ಹೀರೆಮಠ ಮೇಡಂ, ಶ್ರೀನಿವಾಸ ಸರ್ ಭಾಳ ಸಹಾಯ ಮಾಡಿದ್ರು. ನಾನು ಎಮ್​ಡಿ ಫೈನಲ್​ ಇಯರ್ ಇದ್ದಾಗ ಮಗಳು ಎಸ್​ಎಸ್​ಎಲ್​ಸಿ. ಇಬ್ಬರೂ ಜೊತೀಗೆ ಕುಂತು ಓದತಿದ್ವಿ. ಮೂರು ತಿಂಗಳದಾಗ ಮೊದ್ಲ ಕಳಕೊಂಡಿದ್ದ ಮಕ್ಕಳ ಒಡನಾಟ, ಸ್ವಲ್ಪನರ ಸಿಕ್ಕಂಗಾಗಿ ನಿರಾಳ ಅನ್ನಸ್ತು.   

ಎಮ್​ಡಿ ಆದಮೇಲೆ ಎಲ್ಲಾರೂ ಕಾಲೇಜನಾಗ ಲೆಕ್ಚರರ್ ಆಗಿ ಸೇರ್ಕೊ ಅಂದ್ರು. ಆದ್ರ ನನಗ ಜನರ ನಡುವ ಇದ್ದು ಜನ ನೋವು ಸಂಕಟಕ್ಕ ಸ್ಪಂದಿಸಬೇಕು ಅನ್ನೋ ಇಚ್ಛಾ ಭಾಳ ಇತ್ತು. ಹಂಗಾಗಿ ನಾನು ಮತ್ ದವಾಖಾನಿ ಸುರು ಮಾಡಿದೆ. ಮೊದ್ಲ ಮಕ್ಕಳ ಆಗಲಾರದಾಗ ನಾ ಅನುಭವಿಸಿದ ನೋವು, ಈಗ ನಾನು ಮಕ್ಕಳು ಇಲ್ಲಂತ ಬಂದವರ ನೋವು ಅರ್ಥ ಮಾಡ್ಕೊಂಡು ಅವರ ನೋವು ಸ್ಪಂದಸಾಕ ಅನಕೂಲ ಆಗತೈತಿ. ಈ ನಿಟ್ಟಿನೊಳಗ ಟ್ರೀಟ್​ಮೆಂಟ್ ಮಾಡಾಕ ಅನಕೂಲ ಆಗತೈತಿ. ಮುಂದ ಮಕ್ಕಳ ಆದ ಮ್ಯಾಲೆ ಅವ್ರು ಬಂದು, ‘ನೋಡ್ರಿ ಮೇಡಂ, ನಿಮ್ಮ ಕೈಗುಣದಿಂದ ಹುಟ್ಟಿದ ಕೂಸಿದು! ಅಂತ ತೋರಸಿದಾಗ ಆಗೂ ಖುಶೀ ಮತ್ತ ತೃಪ್ತಿ ಹೇಳಾಕ ಆಗೂದಿಲ್ಲ. ನನ್ನ ತಮ್ಮನ್ನ ನುಂಗಿ ನೀರು ಕುಡ್ದಿರೊ ಕ್ಯಾನ್ಸರ್ ಮ್ಯಾಲೆ ನನಗ ಭಾಳ ಸಿಟ್ಟೈತಿ. ಅದನ್ನ ಮಟ್ಟ ಹಾಕಬೇಕು ಅನ್ನು ಕಿಚ್ಚು ಎದ್ಯಾಗ ಐತಿ. ಅದಕ್ಕ ಇನ್ನೊಂದಿಷ್ಟು ಮಂದಿ ಆಯುರ್ವೇದದ ಡಾಕ್ಟರ್​ಗೋಳನ್ನ ಸೇರಸ್ಕೊಂಡು ಅದರ ಬಗ್ಗೆ ಕೆಲ್ಸಾ ಮಾಡಾಕತ್ತೀನಿ. ಇವತ್ತಲ್ಲ ನಾಳೆ ಅದಕ್ಕ ಮಾನ್ಯತಾ ಸಿಕ್ಕು ಭಾಳಮಂದಿಗೆ ಅನುಕೂಲ ಆಗೂವಂಗಾದ್ರ ಸಾಕು. 

ಶಕುಂತಲಾ ಅವರ ಕವನ…

ನಿನ್ನಂತಾಗ ಬಯಸೆ

ಅವರಮ್ಮನ ಹೋಲಿಕೆ! ಎಷ್ಟೊಂದು ಸಂಭ್ರಮಿಸಿದ್ದೆ.

ಪಥದ ನೋವರಿಯದೆ ಆದರ್ಶ ಕೋಟೆಯೊಳಗೆ ಹರಕೆಯ ಕುರಿಯಾಗಿಸಿ ಸಂಸಾರ ಸಂಪ್ರದಾಯದ ಶಿಲುಬೆ ಮಾತೃದೇವೋಭವ ಪೂಜೆ ಮುಸುಕಿನ ಗುದ್ದಿನ ಚೀತ್ಕಾರಕ್ಕೆ ಮಂದಹಾಸದ ಲೇಪ

ಅನಾದರದ ಹಸಿ ಹಸಿ ಗಾಯ ಭೂಮಿ ಹೋಲಿಕೆಯ ಭಾರ ಇಣುಕಿದ ಗೂಡುಗಳಲೆಲ್ಲಾ ನಿನ್ನ ಪ್ರತಿಬಿಂಬಗಳೆ

ಈಗ ನಿನ್ನಂತಾಗ ಬಯಸೆ.

ನಾನೆಂಬ ಪರಿಮಳದ ಹಾದಿಯಲಿ: ಬೊಂಬೆಯನ್ನು ದೂರ ಎಸೆದು ಕೇಳಿದೆ, ಕೇಳಿಸಿತೆ ಸಿಡಿದ ಸದ್ದು?

Published On - 5:17 pm, Tue, 2 February 21

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ