Corona Warriors : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ ; ಆಶಾತಾಯಂದಿರ ಎದೀಗೆ ಹೊಟ್ಟೀಗೆ ಬೇಕಾಗಿರೂದು ಚಪ್ಪಾಳಿ, ಘಂಟಿ ಸಪ್ಪಳಲ್ರೀ…

ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಇಸ್ಲಾಂಪೂರದ ಯುವಕ ಉಮರ್ ಫಾರೂಕ್; ನಾನೊಬ್ಬ ಆಶಾ ಕಾರ್ಯಕರ್ತೆಯ ಮಗ. ನಾನೂ ಈ ಸರಣಿಗೆ ಬರೆಯುತ್ತೇನೆ, ಆದರೆ ನನ್ನ ತಾಯಿಯ ಹೆಸರು ಹಾಕಬೇಡಿ ಅಧಿಕಾರಿಗಳು ತೊಂದರೆ ಮಾಡಿದರೆ? ಎಂದು ವಾರದ ಹಿಂದೆ ವಿನಂತಿಸಿಕೊಂಡ. ಆದರೆ ನಿನ್ನೆಯಷ್ಟೇ, ನನ್ನ ಹೆಸರೂ ಹಾಕಿ ನನ್ನ ತಾಯಿಯ ಫೋಟೋ ಕೂಡ ಹಾಕಿ. ಏಕೆಂದರೆ ಇದು ನನ್ನ ತಾಯಿಯೊಬ್ಬಳ ಅಳಲಲ್ಲ ಎಂದ. ನಮ್ಮ ಯುವಸಮೂಹಕ್ಕೆ ಇಷ್ಟು ಅಂತಃಕರಣ, ಪ್ರಜ್ಞೆ ಇದ್ದರೆ ಸಾಕು. ಇಂಥ ಯಾವೆಲ್ಲ ಹಳ್ಳಿಗಳಲ್ಲಿ ಕೊರೋನಾ ಯೋಧರು ಸ್ವರಕ್ಷಣೆಗೂ ಮೂಲಸೌಕರ್ಯವಿಲ್ಲದೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನುವುದನ್ನು ಜನಪ್ರತಿನಿಧಿಗಳು ಅವಶ್ಯ ಗಮನಿಸಬೇಕು. ಇಂದು ನಮ್ಮ ಜೀವ ನಮ್ಮ ಕೈಗಳಲ್ಲಿಲ್ಲ ಪರಸ್ಪರರ ಉಸಿರಿನಲ್ಲಿದೆ!

Corona Warriors : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ ; ಆಶಾತಾಯಂದಿರ ಎದೀಗೆ ಹೊಟ್ಟೀಗೆ ಬೇಕಾಗಿರೂದು ಚಪ್ಪಾಳಿ, ಘಂಟಿ ಸಪ್ಪಳಲ್ರೀ...
ಕಾರ್ಯನಿರತ ಆಶಾ ಕಾರ್ಯಕರ್ತೆ ರಾಬಿಯಾ ಬೇಗಮ್
Follow us
|

Updated on:May 15, 2021 | 2:13 PM

ನಮ್ಮ ಒಂದು ಧ್ವನಿ ಲಕ್ಷಾಂತರ ಧ್ವನಿಗಳನ್ನು ಪ್ರತಿನಿಧಿಸುತ್ತಿರುತ್ತದೆ. ಮರ್ಯಾದೆ, ವ್ಯವಸ್ಥೆ ಎನ್ನುವ ಮಹಾಸಂಕೋಲೆಯನ್ನು ಕಳಚಿ ಮುಕ್ತವಾಗಿ ಸಂಕಟಗಳನ್ನು ಹೊರಹಾಕುವುದನ್ನು ಕಲಿಯದಿದ್ದರೆ, ನಾವಷ್ಟೇ ಅಲ್ಲ ನಮ್ಮ ಮುಂದಿನ ಪೀಳಿಗೆಯವರು ಉಸಿರಾಡುವುದೂ ಕಷ್ಟವಾಗುತ್ತದೆ; ಸಹನೆಯೇ ನಮ್ಮ ಮೂಲಗುಣ, ಕೆಲಸವೇ ದೇವರು, ಕುಟುಂಬವೇ ಪ್ರಧಾನ ಅಸ್ತಿತ್ವ ಎಂದು ಸಾರಿಕೊಂಡು ಬಂದ ಮಹಾನ್ ದೇಶ ನಮ್ಮದು. ಆದರೆ ಇದನ್ನು ಜೀವನದೊಂದಿಗೆ ಜೀವವನ್ನೂ ಒತ್ತೆ ಇಡುವಂಥ ಪರಿಸ್ಥಿತಿಯಲ್ಲಿರುವ ಆರೋಗ್ಯ ಸೇವಾಕ್ಷೇತ್ರಗಳಲ್ಲಿರುವವರ ದೃಷ್ಟಿಯಲ್ಲಿ ಯೋಚಿಸಿ. ಗಂಟಲಿನ ಪಡಕಗಳತನಕ ಬಂದುಕುಳಿತ ನೋವುಗಳಿಗೆ ಸಮಸ್ಯೆಗಳಿಗೆ ಮುಕ್ತಿ ಕೊಟ್ಟರೆ ಮಾತ್ರ ಮುಂದಿನ ಹೆಜ್ಜೆಗಳನ್ನಿಡಲು ತ್ರಾಣ ದಕ್ಕುವುದು, ವಾಸ್ತವ ಸಂಗತಿಗಳಿಗೆ ಪರಿಹಾರ ಸಿಗುವುದು. ಈ ಹಿನ್ನೆಲೆಯಲ್ಲಿ ರೂಪಿಸಿರುವ ‘ಟಿವಿ9 ಕನ್ನಡ ಡಿಜಿಟಲ್ : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ’ ಸರಣಿಯಲ್ಲಿ ವೈದ್ಯರುಗಳ, ಶುಶ್ರೂಷಕರ, ಪ್ರಯೋಗಾಲಯ ಸಿಬ್ಬಂದಿ, ಸಹಾಯಕರ ಹೀಗೆ ಆರೋಗ್ಯ ಸೇವಾಕ್ಷೇತ್ರಗಳಲ್ಲಿರುವವರ ಬದುಕು ಬವಣೆ ಮತ್ತು ಅಂತರಂಗದ ತುಣುಕುಗಳು ಇಲ್ಲಿರುತ್ತವೆ.

ತುಣುಕುಗಳು ಎಂದು ಹೇಳಲು ಕಾರಣವಿದೆ; ನಮಗಾದ ಅನ್ಯಾಯ, ನೋವು ನಿರೀಕ್ಷೆಗಳನ್ನು ವ್ಯಕ್ತಪಡಿಸಿ ರಾತ್ರೋರಾತ್ರಿಯೇ ಪರಿಹಾರೋಪಾಯಗಳನ್ನು ಪಡೆದುಕೊಳ್ಳುವಂಥ ಅಭಿವೃದ್ಧಿ ಹೊಂದಿದ ದೇಶದಲ್ಲಿ ನಾವಿನ್ನೂ ಇಲ್ಲ. ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿಯ ದುಡಿಮೆಯಲ್ಲಿ ಹತ್ತಾರು ಕೈಗಳು ಹೇಗೆ ಉಣ್ಣುತ್ತಿವೆಯೋ ಹಾಗೆ ವ್ಯವಸ್ಥೆಯ ಪರಿಧಿಯಲ್ಲಿ ದೊಡ್ಡ ದೊಡ್ಡ ತಿಮಿಂಗಲಗಳು ಸ್ವಾರ್ಥದ ಬಾಯಿಗಳನ್ನು ತೆರೆದಿಟ್ಟುಕೊಂಡೇ ಈಜಾಡುತ್ತಿವೆ, ಇಂಥ ಸಂಕಷ್ಟಮಯ ಸಂದರ್ಭದಲ್ಲಿಯೂ. ಹೀಗಿರುವಾಗ ಸಾಕಷ್ಟು ವಿಷಯಗಳನ್ನು ಅದುಮಿಟ್ಟುಕೊಂಡೇ ಬದುಕುವ ಅನಿವಾರ್ಯ ಹಲವರಿಗಿದೆ ಬಂದೊದಗಿದೆ. ಆದರೂ ಸಂವೇದನಾಶೀಲ, ಪ್ರಾಮಾಣಿಕ ಮನಸ್ಸುಗಳು ತಮ್ಮ ಮನಸಿನ ಮಾತುಗಳನ್ನು ಹಂಚಿಕೊಳ್ಳಲು ಇಲ್ಲಿ ಪ್ರಯತ್ನಿಸಿದ್ದಾರೆ. ಸಾಮಾಜಿಕ ಕಳಕಳಿಯುಳ್ಳ ಇನ್ನೂ ಕೆಲವರು ಇತರರ ಒಳತೋಟಿಗಳನ್ನು ಅಕ್ಷರಕ್ಕೆ ಹಿಡಿದಿಡಲು ಸಹಾಯ ಮಾಡಿದ್ದಾರೆ. ಓದುಗರಾದ ನಿಮಗೂ ನಿಮ್ಮ ನಿಮ್ಮ ಊರುಗಳಲ್ಲಿ ಕೊರೋನಾ ಯೋಧರಾಗಿ ಕೆಲಸ ಮಾಡುತ್ತಿರುವವರ ಆಂತರ್ಯಕ್ಕೆ ಅಕ್ಷರಗಳ ಮೂಲಕ ಧ್ವನಿಯಾಗುವ ಅವಕಾಶವೂ ಇಲ್ಲಿದೆ. ಇ ಮೇಲ್ : tv9kannadadigital@gmail.com

ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಇಸ್ಲಾಂಪೂರದ ಯುವಕ ಉಮರ್ ಫಾರೂಕ್; ನಾನೊಬ್ಬ ಆಶಾ ಕಾರ್ಯಕರ್ತೆಯ ಮಗ. ನಾನೂ ಈ ಸರಣಿಗೆ ಬರೆಯುತ್ತೇನೆ, ಆದರೆ ನನ್ನ ತಾಯಿಯ ಹೆಸರು ಹಾಕಬೇಡಿ ಅಧಿಕಾರಿಗಳು ತೊಂದರೆ ಮಾಡಿದರೆ? ಎಂದು ವಾರದ ಹಿಂದೆ ವಿನಂತಿಸಿಕೊಂಡ. ಆದರೆ ನಿನ್ನೆಯಷ್ಟೇ, ನನ್ನ ಹೆಸರೂ ಹಾಕಿ ನನ್ನ ತಾಯಿಯ ಫೋಟೋ ಕೂಡ ಹಾಕಿ. ಏಕೆಂದರೆ ಇದು ನನ್ನ ತಾಯಿಯೊಬ್ಬಳ ಅಳಲಲ್ಲ ಎಂದ. ನಮ್ಮ ಯುವಸಮೂಹಕ್ಕೆ ಇಷ್ಟು ಅಂತಃಕರಣ, ಪ್ರಜ್ಞೆ ಇದ್ದರೆ ಸಾಕು. ಇಂಥ ಯಾವೆಲ್ಲ ಹಳ್ಳಿಗಳಲ್ಲಿ ಕೊರೋನಾ ಯೋಧರು ಸ್ವರಕ್ಷಣೆಗೂ ಮೂಲಸೌಕರ್ಯವಿಲ್ಲದೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನುವುದನ್ನು ಜನಪ್ರತಿನಿಧಿಗಳು ಅವಶ್ಯ ಗಮನಿಸಬೇಕು. ಇಂದು ನಮ್ಮ ಜೀವ ನಮ್ಮ ಕೈಗಳಲ್ಲಿಲ್ಲ ಪರಸ್ಪರರ ಉಸಿರಿನಲ್ಲಿದೆ!

*

ನೋಡ್ರಿ, ಮೊದ್ಲ ಹೇಳ್ಬಿಡ್ತೀನಿ ಬಾಗಲಕೋಟ ಜಿಲ್ಲಾ ಇಳಕಲ್ ತಾಲೂಕಿನ ಇಸ್ಲಾಂಪೂರ ಅನ್ನೋ ಒಂದ್ ಸಣ್ ಊರಿನ ಆಶಾ ಕಾರ್ಯಕರ್ತೆಯ ಮಗಾ ನಾನು. ನಮ್ಮವ್ವನ ಹೆಸ್ರು ರಾಬಿಯಾ ಬೇಗಮ್ ಅಂತ. ನಮ್ಮವ್ವ ಹನ್ನೊಂದ್ ವರ್ಷದಿಂದ ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡಾಕತ್ಯಾರ. ಈ ಆರೋಗ್ಯ ಇಲಾಖೆ ಅನ್ನೋದು ದೊಡ್ಡ್ ಆಲದಮರ ಇದ್ದಂಗ. ಆ ಮರದ ಬೇರುಗಳಾ ಈ ಆಶಾ ಕಾರ್ಯಕರ್ತೆಯರು. ಊರಿನ ಜಡ್ಡಾ ಜಾಪತ್ರಿ ನಿಭಾಯಿಸೋ ಇವರದು ಒಂಥರಾ ಮೌನಕ್ರಾಂತಿ.

ಈಗ ನಾ ಹೇಳಾಕತ್ತಿದ್ದ ನಮ್ಮವ್ವನ ನೋವು ಅಷ್ಟ ಅಲ್ರಿ. ಇದು ಈ ರಾಜ್ಯದ ಸಾವಿರಾರು ಆಶಾ ಕಾರ್ಯಕರ್ತೆಯರ ಪರ ದನಿ ಅನ್ಕೋರಿ. ನಮ್ಮವ್ವ ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡಾಕ ಇಂತಿಷ್ಟ ಅಂತ ಏನ್ ಟೈಮ್ ಇಲ್ರಿ. ರಾತ್ರಿಯಂದ್ರ ರಾತ್ರಿ, ಹಗಲಂದ್ರ ಹಗ್ಲು ಡ್ಯೂಟಿಗೆ ಹೋಗ್ತಾಳ. “ಹೊಟ್ಟಿ ಬ್ಯಾನಿ ಚಾಲು ಆಗೈತಿ” ಅಂತ ಬಸುರಿ ಹೆಂಗ್ಸಿನ ಮನಿಯವರು ಫೋನ್ ಮಾಡಿದ್ರ ಅದು ನಡರಾತ್ರ್ಯಾಗಾದ್ರೂ ಎದ್ದು ಹೋಗಿ ಆ್ಯಂಬುಲೆನ್ಸ್ ಕರಿಸಿ ದವಾಖಾನಿಗೆ ಕರ್ಕೊಂಡ್ ಹೋಗ್ತಾಳ್ರಿ. ಕೂಸು ಹುಟ್ಟೂದರಿಂದ ಹಿಡಿದು ಅದರ ಆರೈಕಿ, ಪೌಷ್ಟಿಕತಿ ಬಗ್ಗೆ ತಿಳಿವಳಿಕೆ ಹೇಳಾಕ ಬಿಸಲನ್ನೂಹಂಗಿಲ್ಲ ಮಳಿ ಚಳಿ ಅನ್ನೂಹಂಗಿಲ್ಲ ಹೊಂಟಬಿಡ್ತಾಳ್ರಿ. ಮಲೇರಿಯಾ, ಚಿಕೂನ್ ಗುನ್ಯಾ, ಡೆಂಗ್ಯೂ ತಡಿಗಟ್ಟಾಕ ನಮ್ಮವ್ವ ಬಾಗಲಕೋಟದ ಉರಿಬಿಸಲಾಗ ಮನಿಮನಿ ಅಡ್ಯಾಡಿ ಕಷ್ಟ ಪಟ್ಟಿದ್ದು ನಮ್ಗ್ ಮಾತ್ರ ಅರ್ಥ ಆಗತೈತ್ರಿ. ನಮ್ಮವ್ವಗೂ ಮನಿ, ಸಂಬಂಧಿಕರು, ಸಂಸಾರ ಅಂತ ಎಲ್ಲಾ ಐತ್ರಿ. ಆದ್ರೂ ಅವ್ರು ಸಂಬಂಧಿಕರ ಯಾವ ಕಾರ್ಯಕ್ರಮಕ್ಕೂ ಹೋಗಂಗೂ ಇಲ್ಲ, ಬರಾಂಗೂ ಇಲ್ರಿ. ದಿನಾ ಮನಿಮನಿಗೆ ಹೋಗಿ ಸರ್ವೇ ಮಾಡೋದು, ಗುಳಿಗಿ ಕೊಡೋದು, ಗರ್ಭಿಣಿ ಹೆಂಗಸರತಾಕ ಹೋಗಿ ಮಾತಾಡ್ಸಿ ಬರೋದು ದಿನಾ ಇದಾ ಆಕೈತ್ರಿ. ತಿಂಗಳ್ದಾಗ ನಾಕೈದು ಬಾರಿ ಲಾರ್ವಾ ಸರ್ವೇ ಮಾಡ್ಬೇಕು. ದಿನಾ ಮನಿಮನಿಗ್ ಹೋಗಿ ಎಲ್ಲಾ ಪಾತ್ರಿ ಸಾಮಾನು ಸ್ವಚ್ಛ ಅದಾವ ಇಲ್ಲ ಅಂತ ನೋಡಿ ಸ್ವಚ್ಛ ಮಾಡಿಸಿ ಬರ್ಬೇಕು.

ಇನ್ನ ಕೊರೊನಾ ಅನ್ನೋ ವೈರಸ್ ಬಂದ್ಮ್ಯಾಗಂತೂ ಈ ಆಶಾ ಕಾರ್ಯಕರ್ತೆಯರ ಕಷ್ಟ ಹೇಳೂಕೇಳೂ ಹಂಗಿಲ್ಲ.  ನಾವ್ ಕೊರೊನಾ ಪೇಷಂಟ್ ಅಂತ ಕೇಳಿದ್ರ ಕಿಲೋಮೀಟರ್ ದೂರ ಹೋಗಿ ನಿಂದರ್ತೀವಿ, ಆದ್ರ ಇವ್ರು ಆ ಪೇಷಂಟ್ಗಳ ಜೊತಿಗೆ ಆರೈಕಿ ಮಾಡ್ಕೊಂಡ್ ಇರ್ಬೇಕಾಗೈತ್ರಿ. ಈ ಕೊರೊನಾ ಅನ್ನೋ ರೋಗ ಪೇಷಂಟ್ಗಳಿಗೆ ಅಷ್ಟ ಅಲ್ಲ, ಇದು ಡಾಕ್ಟ್ರು ನರ್ಸುಗಳಿಗೂ ಅಂಟುತ್ತ ಅನ್ನೋದು ಎಲ್ರಿಗೂ ಗೊತ್ತಿದ್ದನ. ನಮ್ ದೇಶ್ದಾಗೂ ಬಾಳಷ್ಟ ಮಂದಿ ಡಾಕ್ಟ್ರು, ನರ್ಸುಗಳು ಕೊರೊನಾ ಬಂದು ಸತ್ತಿದ್ದೂ ಗೊತ್ತೈತಿ. ಹಿಂಗೀರ್ಬೇಕಾದ್ರ ಆಶಾ ಕಾರ್ಯಕರ್ತೆಯರು ಈ ರೋಗದ ವಿರುದ್ಧ ಹೋರಾಡಾಕ ಸುರಕ್ಷಿತ ಉಪಕರಣಗಳು ಬೇಕಿಲ್ರಿ? ಆದ್ರ ಕೊರೊನಾ ವಾರಿಯರ್ಸ್ ಅಂತ ಕರಿಯೋ ಆಶಾಗಳಿಗೆ ಏನೂ ಕೊಟ್ಟಿಲ್ರಿ. ಕೈಗೆ ಗ್ಲೌಜು, ಮಾಸ್ಕು, ಸ್ಯಾನಿಟೈಸರ್ ಸತೇ ಇವ್ರ ರೊಕ್ಕಾ ಕೊಟ್ಟ್ ತಗೋಬೇಕು. ಇವನ್ನೆಲ್ಲಾ ಹೆಂಗ್ ಬಳಸಬೇಕ್ ಅಂತ ಟ್ರೈನಿಂಗ್ ಸತೇ ಕೊಟ್ಟಿಲ್ರಿ.

nimma dhwanige namma dhwaniyu

ಇಸ್ಲಾಂಪೂರದ ದ್ಯಾಮವ್ವನ ಗುಡಿಯೊಳಗೆ ಲಸಿಕೆ ಕೊಡುತ್ತಿರುವ ಆರೋಗ್ಯ ಕಾರ್ಯಕರ್ತರು.

ದಿನಾ ಮನಿಮನಿಗೆ ಹೋಗ್ಬೇಕು. ಕೋವಿಡ್ ಬಗ್ಗೆ ತಿಳವಳಿಕಿ ಹೇಳ್ಬೇಕು. ಬ್ಯಾರೇ ಊರಿಗಿ ದುಡ್ಯಾಕ ಹೋದೋರು ಯಾರರ ಊರಿಗಿ ವಾಪಾಸ್ ಬಂದಾರೇನ್ ಅಂತ ನೋಡ್ಬೇಕು. ಬಂದಿದ್ರ ಅವರಿಗೆ ಕೋವಿಡ್ ಟೆಸ್ಟ್ ಮಾಡ್ಸಿ, ಕ್ವಾರಂಟೈನ್ ಮಾಡ್ಸಿ ಮನಿ ಬಿಟ್ಟ್ ಎಲ್ಲೂ ಹೊರಗ್ ಹೋಗದಂಗ ಕಾಯ್ಬೇಕು. ಊರಾಗ ಸ್ವಲ್ಪ್ ಮಂದಿ ಇವ್ರ್ ಮಾತ್ ಕೇಳಂಗಾ ಇಲ್ರಿ. “ನೀವ್ ಆಶಾಗಳು ಆ ದವಾಖಾನಿ, ಈ ದವಾಖಾನಿ ಅಂತ ಅಡ್ಯಾಡಿ ಬಂದಿರ್ತೀರಿ. ಅಲ್ಲಿಂದ ನೀವಾ ಜಡ್ಡು ಹಚ್ಕೊಂಡ್ ಬಂದು ನಮ್ಗೂ ಹಂಚ್ತೀರಿ. ನಮ್ಮ ಓಣಿಗೆ, ನಮ್ ಮನಿಗೆ ಇನ್ಮ್ಯಾಗ ಬರ್ಬ್ಯಾಡ ಹೋಗ್ರಿ” ಅಂತ ಗದರಿಸ್ತಾರ್ರಿ. ಇನ್ನ್ ಕೆಲ್ವು ಅಜ್ಜಾ, ಅಜ್ಜಿಗಳು “ಸುಮ್ ಹೋಗ್ರವ, ನಮಗ್ಯಾವ ಜಡ್ಡು ಬರತೈತಿ. ಇಂತಹ ಜಡ್ಡು ನಮ್ಮ್ ಜೀವ್ನದಾಗ ಭಾಳ್ ನೋಡಿಬಿಟ್ಟೇವಿ” ಅಂತೇಳಿ ಇವ್ರ್ ಮಾತ್ ಒಟ್ಟ ಕೇಳಂಗಿಲ್ರಿ.

ಒಟ್ಟ ನೋಡ್ರಿ… ನೌಕ್ರಿ ಮಾಡೋ ಹೆಣ್ಮಕ್ಕಳಿಗೂ ಭಾಳ್ ಸಮಸ್ಯೆ ಇರ್ತಾವ್ರಿ. ದಿನದಿನಕ್ಕೂ ಅವ್ರಿಗೆ ಹೊಸಾ ಸಮಸ್ಯೆಗಳು ಬರ್ತಿರ್ತಾವ್ರಿ. ಸಮಾಜನೂ ಎದ್ರಿಸಬೇಕು. ತಮ್ಮನ್ನೂ ತಾವನ ಕಾಪಾಡ್ಕೋಬೇಕು. ತಮ್ಮತನಾನೂ ಉಳ್ಸ್ಕೊಬೇಕು. ಇಷ್ಟೆಲ್ಲಾ ಮಾಡೂದ್ರಾಗ ಮನಿ ಅನ್ನೂದು, ಮನ್ಯಾಗಿನ ಮಂದಿ ಅನ್ನೂದು? ಮತ್ ಅವರ ವಿರುದ್ಧನ ನಿಂತಬಿಡ್ತೇತ್ರಿ ಎಷ್ಟೋ ಸಲ. ಹೆಂಗಂತ್ರಿ ಇದೆಲ್ಲಾ? ಇದೆಲ್ಲಾ ನಮ್ಮ ದೇಶದಾಗ ಯಾವಾಗ ಸರಿ ಹೊಕ್ಕೇತ್ರಿ? ತಿಂಗಳ್ದಾಗ ಕಮ್ಮಿ ಅಂದ್ರು ಹತ್ತು ಸತೇ ದವಾಖಾನಿಗೆ ಹೋಗಿ ಬರ್ಬೇಕು. ಮೇಲಾಧಿಕಾರಿಗಳಿಂದ ಬೈಸ್ಕೊಬೇಕು. ಕೆಲವೊಂದು ಕಡೆ ಕಿರುಕುಳ ಸಹಿಸ್ಕೊಬೇಕು. ಪಗಾರ ಹೆಚ್ಚಿಗೆ ಮಾಡ್ರಿ ಅಂತ ಕೇಳಿದ್ರ “ಕೆಲ್ಸ ಇಷ್ಟ ಇದ್ರ ಮಾಡ್ರಿ, ಇಲ್ದಿದ್ರ ಬಿಟ್ಹೋಗ್ರಿ” ಅಂತಿದ್ರು. ಈಗ 3,500 ಗೌರವಧನ ಕೊಡಾಕತ್ತಿದ್ದ ಮ್ಯಾಗ “3,500 ಪಗಾರ ಬರಾತೇತಿಲ್ ಸುಮ್ಮ್ ಕೆಲ್ಸ ಮಾಡ್ರಿ” ಅಂತ ಗದ್ರಿಸಿ ಮೂವತ್ ಸಾವ್ರದ ಕೆಲ್ಸ ಮಾಡಿಸ್ಕೊತಾರಿ. ಇಂಥಾ ಆಶಾ ಕಾರ್ಯಕರ್ತರ ನೌಕ್ರಿಗೆ ಶ್ರೀಮಂತ್ರು ಯಾರರ ಹೋಗ್ತಾರೇನ್ರಿ? ಎಲ್ಲಾ ಆಶಾ ಕಾರ್ಯಕರ್ತೆಯರು ಇರಾವ್ರೆಲ್ಲಾ ಬಡವ್ರನ. ಡ್ಯೂಟಿ ಮಾಡಿ ಬಂದಾಗ ಅವ್ರಿಗೆ ಸಪ್ರೇಟ್ ರೂಮ್, ಸಪ್ರೇಟ್ ಬಾತ್ರೂಮ್ ಅಂತ ಏನಿರಲ್ರಿ. ಎಲ್ಲಾ ಮನಿಯವರ ಜೊತಿ ಸೇರಿನ ಇರಬೇಕಾಕ್ಕೇತ್ರಿ. ಹಿಂಗಾಗಿ ಈಕಡಿ ದವಾಖಾನಿಗೂ ಹೋಗ್ಬೇಕು. ಆಕಡಿಗೆ ಊರಾಗ ಮನಿಮನಿ ಅಂತ ತಿರುಗಾಡ್ಬೇಕು. ಹಿಂಗಿದ್ದಾಗ ಅವ್ರು ಎಷ್ಟು ಸೇಫ್ ಇರ್ತಾರ? ಅವ್ರ ಮನಿಯವರು ಎಷ್ಟು ಸೇಫ್ ಇರ್ತಾರ? ಅವ್ರು ಸೇಫ್ಟಿಗೆ ಅಂತ ಸರ್ಕಾರ ಇನ್ನಾದ್ರೂ ಮಾಸ್ಕ್, ಗ್ಲೌಜು, ಸ್ಯಾನಿಟೈಸರ್, ಪಿಪಿಇ ಕಿಟ್ ಕೊಡಾಕ್ ಮನ್ಸ್ ಮಾಡ್ಬೇಕ್ರಿ.

ಹೋದ್ವರ್ಷ ದೇಶ್ದಾಗ ಅದ ಕೊರೊನಾ ಶುರು ಆಗಿತ್ರಿ. ಅವಾಗ ನಮ್ಗ ಕೊರೊನಾ ಬಗ್ಗೆ ಅಷ್ಟ್ ತಿಳವಳಿಕಿನೂ ಇರ್ಲಿಲ್ಲ. ಟಿವಿ ನೋಡಿ ಅಂಜಿಕಿ ಬರ್ತಿತ್ತು. ಕೊರೊನಾ ಬಂದ್ರಾ ಸತ್ತಾ ಹೊಕ್ಕಾರಾ ಅಂದ್ಕೊಂಡಿದ್ವಿ. ಹೊರಗ ಹೋದ್ರ ಜಳಕ ಮಾಡಿನ ಮನಿಯೊಳಗ ಬರ್ಬೇಕಿತ್ತು. ದಿನಾ ನಮ್ಮವ್ವ ಡ್ಯೂಟಿಗೆ ಹೋಗದ್ರಿಂದ ನಮ್ಗೆಲ್ಲಾ ಭಾಳ ಅಂಜಿಕಿ ಆಗ್ತಿತ್ತು. ಇದ್ರಿಂದ ನಮಗ್ಯಾರಿಗೂ ತ್ರಾಸ್ ಆಗೋದ್ ಬ್ಯಾಡಂತ ನನಗ ಮತ್ ನನ್ ಇಬ್ರ ತಂಗೀರಿಗೆ ಸಂಬಂಧಿಕರ ಊರಿಗಿ ಕಳ್ಸಿದ್ರು. ಮನ್ಯಾಗ ನಮ್ಮವ್ವ ಮತ್ ನಮ್ಮಪ್ಪ ಇಬ್ರಾ ಇರ್ತಿದ್ರು. ಒಂದಿನ ನಮ್ಮವ್ವ ದವಾಖಾನಿಗೆ ಹೋಗಿ ಮನಿಗ್ ವಾಪಾಸ್ ಬರೋದು ಲೇಟ್ ಆಗಿತ್ತು. ಮೊದ್ಲ ನಮ್ಮಪ್ಪ ಹ್ಯಾಂಡಿಕ್ಯಾಪ್ಟ್. ನಮ್ಮವ್ವ ಮನಿಗ ಬಂದಾಗ ಜಳಕ ಮಾಡಾಕ ನೀರ್ ಕಾಸಿ ಕೊಡೋರು ಯಾರೂ ಇಲ್ಲ. ಅಡಿಗಿ ಮಾಡಾಕೂ ಯಾರೂ ಇಲ್ಲ. ಅವತ್ತೊಂದಿನ ರಾತ್ರಿ ಪೂರ್ತಿ ಅವ್ವ, ಅಪ್ಪ ಉಪ್ವಾಸ ಮಕ್ಕೊಂಬಿಟ್ರು. ನಮ್ಮವ್ವಗ ಮನಿಯೊಳಗ ಬರಾಕೂ ಆಗಿರ್ಲಿಲ್ಲ.

ನಮ್ಮವ್ವನ ಜೊತಿ ಕೆಲ್ಸ ಮಾಡೋ ಇನ್ನೊಬ್ಬ ಕಾರ್ಯಕರ್ತರ ಜೀವನ ಹೆಂಗ್ ನಡೀತೇತಿ ಗೊತ್ರಿ? ಅವ್ರ್ ಗಂಡ ಸಾಲಿ ಮಾಸ್ತರ. ಇಬ್ರ ಮಕ್ಳು. ಡ್ಯೂಟಿಗೆ ಹೋಗೂ ಮೊದ್ಲೇಕ ಮನಿ ಹ್ವಾರೇ ಎಲ್ಲಾ ಮಾಡಿ ಮುಗಸಬೇಕು. ಮಕ್ಳನ್ನ ರೆಡಿ ಮಾಡಿ ಸಾಲಿಗೆ ಕಳಿಸಬೇಕು. ಆಕಸ್ಮಾತ್ ಹೆರಿಗೆ ಅಂತಾವು ಅರ್ಜೆಂಟ್ ಕೆಲ್ಸ ಬಂದಾಗ ಮನಿ ಕೆಲ್ಸ ಬಿಟ್ಟ್ ಬಸುರಿ ಹೆಂಗಸರನ್ನ ದವಾಖಾನಿಗೆ ಕರ್ಕೊಂಡ್ ಹೋದ್ರ, ವಾಪಾಸ್ ಮನಿಗ್ ಬಂದಾಗ ಗಂಡನಿಂದ ಬೈಸ್ಕೊಬೇಕು. ರಾತ್ರಿ ಅತ್ತಿಮಾವನ ಕಿರಿಕಿರಿ ಸಹಿಸ್ಕೊಬೇಕು. “ನೀನು ಅದನರ ಮಾಡು, ಇಲ್ಲಾಂದ್ರ ಇದನರ ಮಾಡು. ಮನಿ ಕೆಲ್ಸಾ ಮಾಡಾಕ ಆಗ್ಲಿಲ್ಲ ಅಂದ್ರ ದವಾಖಾನಿಗೆ ಹೋಗೋದ್ ಬಿಟ್ಟ್ಬಿಡು. ನೀ ದುಡ್ದು ನಮಗೇನ್ ಹಾಕೂದ್ ಬ್ಯಾಡಾ. ಸುಮ್ಮ್ ಮನಿ ಕೆಲ್ಸ ಮಾಡ್ಕೊಂಡ್ ಬಿದ್ದಿರು” ಅಂತೆಲ್ಲಾ ಬೈಸ್ಕೋತಾನ ಇರ್ಬೇಕ್ರಿ. ಅದರಾಗೂ ನಮ್ಮ ಉತ್ತರ ಕರ್ನಾಟಕದೊಳಗ ಗಂಡು, ಗಂಡಿನಮನಿ ಅಹಂಕಾರಾ ತಣಸೂದ್ರಾಗ ಹೆಣ್​ಮಕ್ಕಳ ಬಾಳೆ ನಾಶ ಆಕ್ಕೇತ್ರಿ. ಯಾರೂ ಅರ್ಥ ಮಾಡ್ಕೋಳೂದಿಲ್ಲಲ್ರಿ ದುಡಿಯೂ ತಾಯಿಗೋಳ್ನ? ಅವರ ಅನೂತನೂ ನೋಡ್ಕೊಂಡ್ರ ನಾಳಿ ನಮ್ಮನೀಗನ ಏಳ್ಗಿ ಆಕ್ಕೇತಿ ಅನ್ನೂ ಅರೂವ್ ಇಲ್ಲಂದ್ರ ಹೆಂಗಂತ?

nimma dhwanige namma dhwaniyu

ಮಕ್ಕಳ ಆರೋಗ್ಯ ಪರೀಕ್ಷಿಸುತ್ತಿರುವ ರಾಬಿಯಾ

ಪ್ರತಿಯೊಬ್ಬರ ಜೀವಕ್ಕೂ ಕಿಮ್ಮತ್ತೈತಿ. ಅದರಾಗ ಈ ಆಶಾ ಕಾರ್ಯಕರ್ತೆಯರ ಜೀವಕ್ಕನೂ ಈಗ ಹೆಚ್ ಕಿಮ್ಮತ್ತೈತಿ. ಒಳಗೂ ಹೊರಗೂ ಅಂತ ಇಪ್ಪತ್ನಾಕ್ ತಾಸ ಕೆಲಸಾ ಮಾಡಾತಾರು. ಮನ್ಯಾಗಿನ ಮಂದಿ, ಮಕ್ಳು ಮರಿ ಅವರ್ನ ಕಾಯ್ಕೋಂಡ ಕುಂಡ್ರಾತಾರು. ಹಿಂಗೀರ್ಬೇಕಾದ್ರ ಬ್ಯಾರೇ ಊರಿನ ದವಾಖಾನಿಗೆ ಹೋಗ್ಬೇಕಂದ್ರೂ ತಮ್ಮ ರೊಕ್ಕದಾಗ ಬಸ್ ಚಾರ್ಜ್ ಕೊಟ್ಟ್ ಹೋಗೂದಂದ್ರ ಹೆಂಗ್ರಿ? ಅವ್ರಿಗೆ ಸಿಗೋ ನಾಕೈದು ಸಾವ್ರ ಪಗಾರದಾಗ ಏನ್ ಉಳಿತೈತ್ರಿ? ಕೊರೊನಾ ವಾರಿಯರ್ಸ್ ಅಂತೇಳಿ ಚಪ್ಪಾಳಿ ತಟ್ಟಿ, ಘಂಟಿ ಬಾರ್ಸಿದ್ರ ಅವ್ರ್ ಹಸ್ದಿರಾ ಹೊಟ್ಟಿಗ್ ಅನ್ನ ಆಗಂಗಿಲ್ರಿ. ಅವ್ರ ಸ್ವಾಭಿಮಾನದ ಜೀವ್ನಕ್ಕ ಸ್ಫೂರ್ತಿ ಆಗಲ್ರಿ. ಇನ್ನ್ಮ್ಯಾಗಾದ್ರೂ ಅವ್ರು ಒಂದು ಜೀವ ಮತ್ತ ಅವ್ರಿಗೂ ಒಂದ್ ಜೀವ್ನ ಐತಿ ಅಂತ ತಿಳ್ದು ಮಾಸ್ಕ್, ಸ್ಯಾನಿಟೈಸರ್, ಪಿಪಿಇ ಕಿಟ್, ಕೈಗೆ ಗ್ಲೌಜು ಕೊಟ್ಟು ಜೊತಿಗಿ ಪಗಾರ ಜಾಸ್ತಿ ಮಾಡಿದ್ರ ಸರ್ಕಾರ ಭಾಳ್ ಉಪಕಾರ ಮಾಡಿದಂಗ ಅಕ್ಕೈತ್ರಿ.

ಇದನ್ನೂ ಓದಿ : Corona Warriors : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ : ಸರಸಕ್ಕೋ ವಿನೋದಕ್ಕೋ ಇರುವ ಪಾತ್ರಧಾರಿಗಳಲ್ಲ ಶುಶ್ರೂಷಕಿಯರೆಂದರೆ

Published On - 1:20 pm, Sat, 15 May 21

ತಾಜಾ ಸುದ್ದಿ
‘ವಿನೋದ್​ಗೆ ಅದೇ ಹೇಳ್ತೀನಿ..’: ಲೀಲಾವತಿ ನಿಧನಕ್ಕೆ ಶಿವಣ್ಣ ಪ್ರತಿಕ್ರಿಯೆ
‘ವಿನೋದ್​ಗೆ ಅದೇ ಹೇಳ್ತೀನಿ..’: ಲೀಲಾವತಿ ನಿಧನಕ್ಕೆ ಶಿವಣ್ಣ ಪ್ರತಿಕ್ರಿಯೆ
ಅಮ್ಮ ನನ್ನನ್ನು ಒಂಟಿಯಾಗಿಸಿ ಹೋಗಿಬಿಟ್ಟಳು! ವಿನೋದ್ ರಾಜ್ ಆಕ್ರಂದನ
ಅಮ್ಮ ನನ್ನನ್ನು ಒಂಟಿಯಾಗಿಸಿ ಹೋಗಿಬಿಟ್ಟಳು! ವಿನೋದ್ ರಾಜ್ ಆಕ್ರಂದನ
ಸರ್ವವಸ್ವವೇ ಆಗಿದ್ದ ತಾಯಿ ಅಗಲಿಕೆ: ವಿನೋದ್ ರಾಜ್ ದುಃಖತಪ್ತ ಮಾತುಗಳು
ಸರ್ವವಸ್ವವೇ ಆಗಿದ್ದ ತಾಯಿ ಅಗಲಿಕೆ: ವಿನೋದ್ ರಾಜ್ ದುಃಖತಪ್ತ ಮಾತುಗಳು
ಪ್ರತಿಭಟನೆಗೆ ಅಡ್ಡಿಪಡಿಸುವ ಪೊಲೀಸರು ನಮಗೆ ಅನ್ನ ನೀಡುತ್ತಾರೆಯೇ? ಶಾಲಾ ಬಾಲಕ
ಪ್ರತಿಭಟನೆಗೆ ಅಡ್ಡಿಪಡಿಸುವ ಪೊಲೀಸರು ನಮಗೆ ಅನ್ನ ನೀಡುತ್ತಾರೆಯೇ? ಶಾಲಾ ಬಾಲಕ
ತಾಳಿ ಕಟ್ಟಿಸಿಕೊಳ್ಳಲು ಒಲ್ಲೆನೆಂದ ಯುವತಿಗೆ ರೂ. 4.70 ಲಕ್ಷ ವಧುದಕ್ಷಿಣೆ?
ತಾಳಿ ಕಟ್ಟಿಸಿಕೊಳ್ಳಲು ಒಲ್ಲೆನೆಂದ ಯುವತಿಗೆ ರೂ. 4.70 ಲಕ್ಷ ವಧುದಕ್ಷಿಣೆ?
ಬೆಂಗಳೂರಲ್ಲಿ ಅನಾಮತ್ತಾಗಿ ಉರುಳಿದ ಸೆಲ್ ಪೋನ್ ಟವರ್, ಪ್ರಾಣಹಾನಿ ಇಲ್ಲ
ಬೆಂಗಳೂರಲ್ಲಿ ಅನಾಮತ್ತಾಗಿ ಉರುಳಿದ ಸೆಲ್ ಪೋನ್ ಟವರ್, ಪ್ರಾಣಹಾನಿ ಇಲ್ಲ
ಸಿದ್ದರಾಮಯ್ಯ ಸಿಎಂ ಆದರೆ ಬರ ಯಡಿಯೂರಪ್ಪ ಆದರೆ ಅತಿವೃಷ್ಟಿ: ಜ್ಞಾನೇಂದ್ರ
ಸಿದ್ದರಾಮಯ್ಯ ಸಿಎಂ ಆದರೆ ಬರ ಯಡಿಯೂರಪ್ಪ ಆದರೆ ಅತಿವೃಷ್ಟಿ: ಜ್ಞಾನೇಂದ್ರ
ಉಡುಪಿ ಕಾರ್ಟೂನ್ ಹಬ್ಬಕ್ಕೆ ವಿಭಿನ್ನವಾಗಿ ಶುಭ ಕೋರಿದ ಮರಳು ಶಿಲ್ಪ ಕಲಾವಿದ
ಉಡುಪಿ ಕಾರ್ಟೂನ್ ಹಬ್ಬಕ್ಕೆ ವಿಭಿನ್ನವಾಗಿ ಶುಭ ಕೋರಿದ ಮರಳು ಶಿಲ್ಪ ಕಲಾವಿದ
ಬೆಂಗಳೂರಿನಲ್ಲಿ ಕಟ್ಟಡ ಸಹಿತ ಧರೆಗುರುಳಿದ ಮೊಬೈಲ್ ಟವರ್, ವಿಡಿಯೋ ಇಲ್ಲಿದೆ
ಬೆಂಗಳೂರಿನಲ್ಲಿ ಕಟ್ಟಡ ಸಹಿತ ಧರೆಗುರುಳಿದ ಮೊಬೈಲ್ ಟವರ್, ವಿಡಿಯೋ ಇಲ್ಲಿದೆ
ಬಿಗ್ ಬಾಸ್​ನಲ್ಲಿ ಹದಗೆಟ್ಟಿತು ವರ್ತೂರು ಸಂತೋಷ್​-ತನಿಷಾ ಫ್ರೆಂಡ್​ಶಿಪ್
ಬಿಗ್ ಬಾಸ್​ನಲ್ಲಿ ಹದಗೆಟ್ಟಿತು ವರ್ತೂರು ಸಂತೋಷ್​-ತನಿಷಾ ಫ್ರೆಂಡ್​ಶಿಪ್