Corona Warriors : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ : ವೈದ್ಯಸಿಬ್ಬಂದಿಗೆ ಹತ್ತು ಕೈಗಳನ್ನು ದಯಪಾಲಿಸು ದೇವರೇ

‘ಕೊರೋನಾ ಮೊದಲ ಅಲೆ ಬಂದಾಗ ತಬ್ಲೀಗಿಗಳಿಂದ ಬಂದಿತು ಎನ್ನುವ ಮಾತುಗಳು ತಮ್ಮ ತಮ್ಮ ಅನುಕೂಲಕ್ಕೆ. ಯಾವಾಗಲೂ ವ್ಯವಸ್ಥೆ ಜನರ ನಡುವೆ ವೈಷಮ್ಯ ಹುಟ್ಟಿಸುವ ಪ್ರಚೋದನಕಾರಿ ಮಾತುಗಳನ್ನೇ ಆಡುತ್ತದೆ. ಜನರ ನೋವಿಗೆ ಮಿಡಿಯಬೇಕಾದ ಸಂದರ್ಭದಲ್ಲೂ ಜಾತಿ-ಧರ್ಮಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುವ ಪ್ರಭುತ್ವ ಯಾವಾಗಲೂ ಜನವಿರೋಧಿಯೇ ಸರಿ.’ ಡಾ. ರಾಘವೇಂದ್ರ ಎಫ್​. ಎನ್​.

Corona Warriors : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ : ವೈದ್ಯಸಿಬ್ಬಂದಿಗೆ ಹತ್ತು ಕೈಗಳನ್ನು ದಯಪಾಲಿಸು ದೇವರೇ
ಬಳ್ಳಾರಿಯ ವಿಮ್ಸ್​ ಕೋವಿಡ್ ನೋಡಲ್ ಅಧಿಕಾರಿ ಡಾ. ರಾಘವೇಂದ್ರ ಎಫ್​. ಎನ್​.
Follow us
ಶ್ರೀದೇವಿ ಕಳಸದ
|

Updated on:May 18, 2021 | 3:40 PM

ನಮ್ಮ ಒಂದು ಧ್ವನಿ ಲಕ್ಷಾಂತರ ಧ್ವನಿಗಳನ್ನು ಪ್ರತಿನಿಧಿಸುತ್ತಿರುತ್ತದೆ. ಮರ್ಯಾದೆ, ವ್ಯವಸ್ಥೆ ಎನ್ನುವ ಮಹಾಸಂಕೋಲೆಯನ್ನು ಕಳಚಿ ಮುಕ್ತವಾಗಿ ಸಂಕಟಗಳನ್ನು ಹೊರಹಾಕುವುದನ್ನು ಕಲಿಯದಿದ್ದರೆ, ನಾವಷ್ಟೇ ಅಲ್ಲ ನಮ್ಮ ಮುಂದಿನ ಪೀಳಿಗೆಯವರು ಉಸಿರಾಡುವುದೂ ಕಷ್ಟವಾಗುತ್ತದೆ; ಸಹನೆಯೇ ನಮ್ಮ ಮೂಲಗುಣ, ಕೆಲಸವೇ ದೇವರು, ಕುಟುಂಬವೇ ಪ್ರಧಾನ ಅಸ್ತಿತ್ವ ಎಂದು ಸಾರಿಕೊಂಡು ಬಂದ ಮಹಾನ್ ದೇಶ ನಮ್ಮದು. ಆದರೆ ಇದನ್ನು ಜೀವನದೊಂದಿಗೆ ಜೀವವನ್ನೂ ಒತ್ತೆ ಇಡುವಂಥ ಪರಿಸ್ಥಿತಿಯಲ್ಲಿರುವ ಆರೋಗ್ಯ ಸೇವಾಕ್ಷೇತ್ರಗಳಲ್ಲಿರುವವರ ದೃಷ್ಟಿಯಲ್ಲಿ ಯೋಚಿಸಿ. ಗಂಟಲಿನ ಪಡಕಗಳತನಕ ಬಂದುಕುಳಿತ ನೋವುಗಳಿಗೆ ಸಮಸ್ಯೆಗಳಿಗೆ ಮುಕ್ತಿ ಕೊಟ್ಟರೆ ಮಾತ್ರ ಮುಂದಿನ ಹೆಜ್ಜೆಗಳನ್ನಿಡಲು ತ್ರಾಣ ದಕ್ಕುವುದು, ವಾಸ್ತವ ಸಂಗತಿಗಳಿಗೆ ಪರಿಹಾರ ಸಿಗುವುದು. ಈ ಹಿನ್ನೆಲೆಯಲ್ಲಿ ರೂಪಿಸಿರುವ ‘ಟಿವಿ9 ಕನ್ನಡ ಡಿಜಿಟಲ್ : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ’ ಸರಣಿಯಲ್ಲಿ ವೈದ್ಯರುಗಳ, ಶುಶ್ರೂಷಕರ, ಪ್ರಯೋಗಾಲಯ ಸಿಬ್ಬಂದಿ, ಸಹಾಯಕರ… ಹೀಗೆ ಆರೋಗ್ಯ ಸೇವಾಕ್ಷೇತ್ರಗಳಲ್ಲಿರುವವರ ಬದುಕು ಬವಣೆ ಮತ್ತು ಅಂತರಂಗದ ತುಣುಕುಗಳು ಇಲ್ಲಿರುತ್ತವೆ.

ತುಣುಕುಗಳು ಎಂದು ಹೇಳಲು ಕಾರಣವಿದೆ; ನಮಗಾದ ಅನ್ಯಾಯ, ನೋವು ನಿರೀಕ್ಷೆಗಳನ್ನು ವ್ಯಕ್ತಪಡಿಸಿ ರಾತ್ರೋರಾತ್ರಿಯೇ ಪರಿಹಾರೋಪಾಯಗಳನ್ನು ಪಡೆದುಕೊಳ್ಳುವಂಥ ಅಭಿವೃದ್ಧಿ ಹೊಂದಿದ ದೇಶದಲ್ಲಿ ನಾವಿನ್ನೂ ಇಲ್ಲ. ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿಯ ದುಡಿಮೆಯಲ್ಲಿ ಹತ್ತಾರು ಕೈಗಳು ಹೇಗೆ ಉಣ್ಣುತ್ತಿವೆಯೋ ಹಾಗೆ ವ್ಯವಸ್ಥೆಯ ಪರಿಧಿಯಲ್ಲಿ ದೊಡ್ಡ ದೊಡ್ಡ ತಿಮಿಂಗಲಗಳು ಸ್ವಾರ್ಥದ ಬಾಯಿಗಳನ್ನು ತೆರೆದಿಟ್ಟುಕೊಂಡೇ ಈಜಾಡುತ್ತಿವೆ, ಇಂಥ ಸಂಕಷ್ಟಮಯ ಸಂದರ್ಭದಲ್ಲಿಯೂ. ಹೀಗಿರುವಾಗ ಸಾಕಷ್ಟು ವಿಷಯಗಳನ್ನು ಅದುಮಿಟ್ಟುಕೊಂಡೇ ಬದುಕುವ ಅನಿವಾರ್ಯ ಹಲವರಿಗಿದೆ ಬಂದೊದಗಿದೆ. ಆದರೂ ಸಂವೇದನಾಶೀಲ, ಪ್ರಾಮಾಣಿಕ ಮನಸ್ಸುಗಳು ತಮ್ಮ ಮನಸಿನ ಮಾತುಗಳನ್ನು ಹಂಚಿಕೊಳ್ಳಲು ಇಲ್ಲಿ ಪ್ರಯತ್ನಿಸಿದ್ದಾರೆ. ಸಾಮಾಜಿಕ ಕಳಕಳಿಯುಳ್ಳ ಇನ್ನೂ ಕೆಲವರು ಇತರರ ಒಳತೋಟಿಗಳನ್ನು ಅಕ್ಷರಕ್ಕೆ ಹಿಡಿದಿಡಲು ಸಹಾಯ ಮಾಡಿದ್ದಾರೆ. ಓದುಗರಾದ ನಿಮಗೂ ನಿಮ್ಮ ನಿಮ್ಮ ಊರುಗಳಲ್ಲಿ ಕೊರೋನಾ ಯೋಧರಾಗಿ ಕೆಲಸ ಮಾಡುತ್ತಿರುವವರ ಆಂತರ್ಯಕ್ಕೆ ಅಕ್ಷರಗಳ ಮೂಲಕ ಧ್ವನಿಯಾಗುವ ಅವಕಾಶವೂ ಇಲ್ಲಿದೆ. ಇ ಮೇಲ್ : tv9kannadadigital@gmail.com

ಡಾ. ರಾಘವೇಂದ್ರ. ಎಫ್. ಎನ್. ಅವರು ಬಳ್ಳಾರಿಯ ವಿಜಯನಗರ ಇನ್​ಸ್ಟಿಟ್ಯೂಟ್​ ಆಫ್ ಮೆಡಿಕಲ್ ಸೈನ್ಸ್ (ವಿಮ್ಸ್​) ನ ವೈದ್ಯಕೀಯ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂಲತಃ ಹುಬ್ಬಳ್ಳಿಯವರಾದ ಇವರು ಫಿಜಿಷಿಯನ್ ಕೂಡ. ಪ್ರಸ್ತುತ ವಿಮ್ಸ್​ನಲ್ಲಿ ಕೋವಿಡ್ ನೋಡಲ್ ಅಧಿಕಾರಿಯಾಗಿಯಾಗಿದ್ದಾರೆ. ಸಾಹಿತ್ಯ ಇವರ ಆಸಕ್ತಿ. ‘ರಾಘುಯಿಸಂ’ ಪ್ರಕಟಿತ ಕವನ ಸಂಕಲನ. ‘ಚಿಪ್ಪಿನಲ್ಲಿ ಮುತ್ತುಗಳು’ ಕಥಾ ಸಂಕಲನ ಇಂಗ್ಲಿಷಿಗೂ ಅನುವಾದಗೊಂಡಿದೆ. ಉಸಿರಾಡಲೂ ಪುರುಸೊತ್ತಿಲ್ಲದ ಹೊತ್ತಿನಲ್ಲಿ ಅವರ ಸಮಯೋಚಿತ ವಿಚಾರಗಳಿಗೆ ಮನದ ಮಾತುಗಳಿಗೆ ಅಕ್ಷರ ರೂಪು ನೀಡಿದ್ದಾರೆ ಹಂಪಿ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಸಂಶೋಧನಾ ವಿದ್ಯಾರ್ಥಿನಿ ಮಂಜುಳಾ ಎ.

* ಡ್ಯೂಟಿ ಮುಗಿಸಿ ಬಂದು ಊಟ ಮಾಡ್ತಿದ್ದೆ. ಈ ಕೋವಿಡ್ ಡ್ಯೂಟಿ ಶುರು ಆದಾಗಿಂದ ಊಟಕ್ಕೂ ನಿದ್ದೆಗೂ ಸಮಯ ಗೊತ್ತೇ ಆಗುವುದಿಲ್ಲ. ಊಟ ಮುಗಿಸಿ ಎದ್ದೇಳುವುದಕ್ಕೆ ಸರಿಯಾಗಿ ಬಾಗಿಲು ಬಡೆದ ಶಬ್ದ. ನೋಡಿದರೆ ಪಕ್ಕದ ಮನೆಯ ಗಂಡ ಹೆಂಡತಿ ಮಗಳು. ಹೇಗಾದರೂ ಮಾಡಿ ಬೆಡ್​ ಕೊಡಿಸಿ. ನನ್ನ ಹೆಂಡತಿಗೆ ಪಾಸಿಟಿವ್ ಬಂದಿದೆ. ಎಂಬಿಬಿಎಸ್ ಓದೋ ಹುಡುಗಿ, ಅವಳ ಕಣ್ಣಲ್ಲೂ ಅಸಹಾಯಕ ನೋಟ. ಹೆಂಡತಿಗೆ ಏನಾಗುತ್ತೊ ಏನೋ ಅನ್ನೋ ಆತಂಕದಲ್ಲಿರೋ ಗಂಡ. ಎರಡು ದಿನಗಳ ನಂತರ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಆಯಿತು. ಉಸಿರಾಟದ ಸಮಸ್ಯೆ ಆಗಿ ನನ್ನ ಕಣ್ಣ ಮುಂದೆಯೇ ಜೀವ ಹೋಗುತ್ತಿದೆ. ಉಳಿಯಲಾರರು ಎನ್ನುವ ಸತ್ಯದ ಜೊತೆಗೆ ಉಳಿಸಿಕೊಳ್ಳಲು ಆಗದ ಅಸಹಾಯಕತೆ. ಕೊನೆಗೆ ತೀರಿಕೊಂಡರು.

ಇಂಥ ಘಟನೆಗಳು ನಮ್ಮನ್ನು ಕಾಡುತ್ತಲೇ ಇರುತ್ತವೆ. ದಿನಬೆಳಗಾದರೆ ಮುಖ ನೋಡುವ ತಂದೆ-ಮಗಳನ್ನು ಹೇಗೆ ಸಮಾಧಾನ ಮಾಡಲಿ? ಎರಡು ದಿನಗಳ ನಂತರ ಅವರೇ ನಮ್ಮ ಮನೆಗೆ ಬಂದರು. ಸರ್, ನೀವು ತುಂಬಾ ಸಹಾಯ ಮಾಡಿದಿರಿ. ಆದರೂ ಅವಳ ಆಯುಷ್ಯ ಗಟ್ಟಿ ಇರಲಿಲ್ಲ ತುಂಬಾ ಥ್ಯಾಂಕ್ಸ್ ಎನ್ನುವಾಗ ನನ್ನ ಬಾಯಿಂದ ಎಲ್ಲರ ಹಾಗೆ ಐ ಆಮ್ ಸಾರಿ ಎನ್ನುವುದು ಗೊತ್ತಿಲ್ಲದೇ ಬಂದಿತ್ತು. ನಾನು ಕನ್ಸಲ್ಟ್ ಫಿಜಿಷಿಯನ್ ಆಗಿರೋದರಿಂದ ಕ್ಯಾನ್ಸರ್ ಮತ್ತು ಬೇರೆ ಬೇರೆ ಕಾಯಿಲೆಗಳ ಎಲ್ಲಾ ರೋಗಿಗಳನ್ನು ನೋಡುತ್ತಿರುತ್ತೀನಿ. ಆದರೆ ಈಗ ಈ ಕೊರೋನಾ ಕಾರಣದಿಂದ ಮನಸ್ಸು ಗಟ್ಟಿ ಮಾಡಿಕೊಳ್ಳದೇ ಧೈರ್ಯ ತೆಗೆದುಕೊಳ್ಳದೆ ಚಿಕಿತ್ಸೆಗೆ ಭಯಪಟ್ಟು ಸಾವಿಗೀಡಾಗುವ ದೃಶ್ಯಗಳು ಹೆಚ್ಚು ವಿಚಲಿತರನ್ನಾಗಿ ಮಾಡುತ್ತಿವೆ.

nimma dhwanige namma dhwaniyu

ಕೋವಿಡ್​ನಿಂದ ಗುಣವಾದ ರೋಗಿಗಳು ಮನೆಗೆ ಹೊರಡುವ ಮುನ್ನ…

ಇಂಥ ಒತ್ತಡದ ದುರಿತ ಕಾಲದ ಪರಿಸ್ಥಿತಿಯಲ್ಲೂ ಮುಗುಳು ನಗುತ್ತ ರೋಗಿಗಳನ್ನು ಮಾತನಾಡಲು ಸಾಧ್ಯವಾಗಿದೆಯೆಂದರೆ ಅದು ಬೆಳೆಸಿಕೊಂಡ ತಾಳ್ಮೆಯ ಫಲ. ಹಾಗೆ ನೋಡಿದರೆ, 1918ರಲ್ಲೇ ಸ್ಪ್ಯಾನಿಷ್ ಫ್ಲೂ ಬಂದಿತ್ತು. ಆಗ 5ಕೋಟಿ ಜನ ಸತ್ತಿದ್ದರು. ಸಂಪರ್ಕ ಕ್ರಾಂತಿ ಈಗಿನಷ್ಟು ತೀವ್ರವಾಗಿರಲಿಲ್ಲ. ಒಂದು ಪತ್ರ ಇಲ್ಲವೆ ಟೆಲಿಗ್ರಾಂ ಮೂಲಕವೇ ತಿಳಿಸಬೇಕಾಗುತ್ತಿತ್ತು. ಆಗ ಜನ ಮುಂಜಾಗ್ರತೆ ವಹಿಸುತ್ತಿದ್ದರು. ಈಗ ಈ ಕ್ಷಣಕ್ಕೆ ಪ್ರತಿಕ್ರಿಯೆ ಕೊಟ್ಟುಬಿಡುತ್ತೇವೆ, ಅದನ್ನು ಅಷ್ಟೇ ವೇಗದಲ್ಲಿ ಜಗತ್ತಿನ ಮುಂದೆ ಇಡುತ್ತೇವೆ, ಒಳ್ಳೆಯ ವಿಚಾರ ಆಲೋಚನೆಗಳನ್ನು ಜನರ ಮುಂದೆ ಇಡುವುದು ಬೇರೆ, ನಕಾರಾತ್ಮಾಕ ವಿಷಯಗಳನ್ನು ತಿಳಿಯಪಡಿಸುವ ರೀತಿ ಬೇರೆ. ನನಗೆ ಕೊರೋನಾ ಪಾಸಿಟಿವ್ ಬಂದಿತು, ಹೇಗೆ ಅಂತ ನಾವು ಸಾಮಾಜಿಕ ಜಾಲತಾಣಗಳಲ್ಲಿ ಸ್ಟೇಟಸ್ ಹಾಕುವುದಕ್ಕಿಂತ ಈ ಸಂದರ್ಭದಲ್ಲಿ ಧೈರ್ಯಗೆಡದೇ ನಿಗಾ ವಹಿಸಬೇಕಾದ ಕೆಲಸಗಳ ಬಗ್ಗೆ, ತೆಗೆದುಕೊಳ್ಳಬೇಕಾದ ಮಾತ್ರೆ, ಮುಂಜಾಗ್ರತಾ ಕ್ರಮದ ಬಗ್ಗೆ ಹೇಳಬೇಕು. ಇಂಥದನ್ನೆಲ್ಲ ಯಾರೂ ಮಾಡದೇ ಇರುವ ಕಾರಣ ಪರಿಸ್ಥಿತಿಗಿಂತ ಜನರ ಮಾನಸಿಕ ಸ್ಥಿತಿ ಹದಗೆಡುತ್ತಿದೆ. ಕೊರೋನಾ ಬಂದು ಸಾಯುವವರಿಗಿಂತ ಆತ್ಮಸ್ಥೈರ್ಯ ಕಳೆದುಕೊಂಡು ಜನ ಸಾಯುತ್ತಿದ್ದಾರೆ.

ಮೊದಲ ಅಲೆ ಬಂದಾಗಲೂ ನಾನು ಬಳ್ಳಾರಿ ಜಿಲ್ಲೆಯ ಕೋವಿಡ್ ನೋಡಲ್ ಆಫೀಸರ್ ಆಗಿದ್ದೆ. ಈಗಲೂ ಅದೇ ಕೆಲಸ. ಡ್ಯೂಟಿಗೆ ನಿಗದಿತ ಸಮಯವಂತಿಲ್ಲ. ವಿಮ್ಸ್​ನಲ್ಲಿ 141 ರೋಗಿಗಳನ್ನು ನೋಡಿಕೊಳ್ಳುತ್ತಿದ್ದೀನಿ. ಜನ ಪ್ರಾರಂಭದ ಹಂತದಲ್ಲಿ ಕೊರೋನಾ ಟೆಸ್ಟ್ ಮಾಡಿಸಿ ಅಂದರೆ ಮಾಡಿಸುತ್ತಿರಲಿಲ್ಲ. ಸರ್, ಒಂದು ನಿಮಿಷ ಬಂದೆ ಎಂದು ಹೇಳಿದವರು ಬೇರೆ ಡಾಕ್ಟರ್ ಕ್ಯಾಬಿನ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ನೆನ್ನೆ ಐಸ್ಕ್ರೀಮ್ ತಿಂದಿದ್ದೆ. ಅದಕ್ಕೆ ಸ್ವಲ್ಪ ಶೀತ, ತಲೆನೋವು. ಇಷ್ಟಕ್ಕೆ ರಾಘವೇಂದ್ರ ಸರ್, ಟೆಸ್ಟ್ ಮಾಡಿಸು ಎಂದು ಭಯ ಪಡಿಸುತ್ತಾರೆ ಎನ್ನುವ ಮಾತುಗಳು ಬೇರೆ. ಎರಡು ಮೂರು ದಿನ ಬಿಟ್ಟು ಅದೇ ವ್ಯಕ್ತಿ, ನಿಮ್ಮ ಮಾತು ಕೇಳಲಿಲ್ಲ ವೆಂಟಿಲೇಟರ್ ವಾರ್ಡ್ ಸಿಗುತ್ತಿಲ್ಲ ಎಂಬ ಅಳಲು ತೋಡಿಕೊಳ್ಳುವುದು.

ಇದು ಒಂದು ಕಡೆ ಆದರೆ, ಪಿಪಿಇ ಕಿಟ್ ಹಾಕಿಕೊಂಡು ಹೋಗುವ ಹಿಂಸೆ ಹೇಳತೀರದು ನಮ್ಮ ಜೀವವನ್ನು ಒತ್ತೆ ಇಟ್ಟು ಕೆಲಸ ಮಾಡಬೇಕಾಗುತ್ತದೆ. ಒಂದು ರೌಂಡ್ಗೆ ಹೋಗಲು ತಗಲುವ ಸಮಯ ಎರಡರಿಂದ ಮೂರು ಗಂಟೆ. ಪಿಪಿಇ ಕಿಟ್ ಹಾಕಿಕೊಳ್ಳಲು ಪ್ರೋಟೋಕಾಲ್ ಇರುತ್ತದೆ. ಹೀಗೇ ಹಾಕಿಕೊಳ್ಳಬೇಕು, ಹೀಗೇ ತೆಗೆಯಬೇಕು. ಐ.ಸಿ.ಯು. ನಲ್ಲಿ ಹೋಗುವಾಗ ಡಬಲ್ ಪಿಪಿಇ ಕಿಟ್ ಹಾಕಿಕೊಳ್ಳಬೇಕು. ಇದಕ್ಕೆ ಡೂಮಿಂಗ್ ಮತ್ತೆ ಡೂಪಿಂಗ್ ಮಾಡುವುದು ಎನ್ನುತ್ತಾರೆ. ಆಗ ಮೈ ತುಂಬಾ ಜಾಗೂರಕರಾಗಿರಬೇಕು ಅಪ್ಪಿ-ತಪ್ಪಿ ಮಾಸ್ಕ್ ತಗೆಯೋ ಹಾಗಿಲ್ಲ, ಉಸಿರಾಡೋ ಹಾಗಿಲ್ಲ. ಪಿಪಿಇ ಕಿಟ್ ತಗೆಯುವಾಗಲೂ ಅಷ್ಟೇ ಅಜಾಗೂರಕತೆಯಿಂದ ಬಟ್ಟೆ ಮುಟ್ಟಿ, ಕಣ್ಣು, ಬಾಯಿ ಇತರೇ ಅಂಗಗಳನ್ನು ಮುಟ್ಟಿಕೊಂಡರೆ ಸರಿ ಹೋಯಿತು! ನಮ್ ಜೊತೆ ರೋಗಿಗಳ ಪಲ್ಸ್ ರೇಟ್ ಚೆಕ್ ಮಾಡಲು, ಶುಗರ್ ಲೆವೆಲ್ ಚೆಕ್ ಮಾಡಲು ಒಂದು ತಂಡವೇ ಇರುತ್ತದೆ. ಇದೆಲ್ಲದಕ್ಕಿಂತ ಹೆಚ್ಚಿನ ಕೆಲಸ ಪಾಪ ಡಿ-ಗ್ರೂಪ್ ನೌಕರರು ಮಾಡುತ್ತಿರುತ್ತಾರೆ. ಅವರ ಸುತ್ತಮುತ್ತ ಕರ್ಟನ್ ಬದಲಾಯಿಸುವುದು, ಬೆಡ್, ಟಾಯ್ಲೆಟ್​ ಕ್ಲೀನಿಂಗ್… ಇಂಥ ಪ್ರತಿಯೊಂದು ಕೆಲಸ ಮಾಡಿ, ಅದೇ ವಾರ್ಡಿನಿಂದ ಹೊರಬಂದು ಪಿಪಿಇ ಕಿಟ್ ತಗೆಯುವಾಗಲೇ ಐಸಿಯುನಲ್ಲಿರುವ ರೋಗಿಯ ಸ್ಥಿತಿ ಏರುಪೇರಾಗಿಬಿಟ್ಟಿರುತ್ತದೆ. ಆಕ್ಸಿಜನ್​ ಸಹಾಯದಿಂದಲೂ ಉಸಿರಾಡುವುದು ಅಸಾಧ್ಯವಾಗುವ ಸ್ಥಿತಿಗೆ ತಲುಪಿಬಿಟ್ಟಿರುತ್ತಾರೆ.

ಇನ್ನು ಆಗಷ್ಟೇ ಪಿಪಿಇ ಕಿಟ್ ಬಿಚ್ಚಿದಾಗ ಕರೆ ಬರುತ್ತದೆ. ಹಾಗೇ ಹೋಗುವ ಹಾಗಿಲ್ಲ. ಎಲ್ಲ ಹಾಕಿಕೊಂಡು ಹೋಗಲು ಐದು ನಿಮಿಷವಾದರೂ ಬೇಕು. ಆಗ ನಮ್ಮ ಪರಿಸ್ಥಿತಿ ವಿವರಿಸಲೂ ಅಸಾಧ್ಯ. ಅಕಸ್ಮಾತ್ ಆ ರೋಗಿ ಸತ್ತು ಹೋದರೆ, ಐದು ನಿಮಿಷ ಮುಂಚೆ ಬಂದಿದ್ದರೆ ಉಳಿಯುತ್ತಿದ್ದ. ಅನ್ಯಾಯವಾಗಿ ಸಾಯಿಸಿದಿರಿ. ನಿಮ್ಮಂತಹವರು ಡಾಕ್ಟರೇ ಆಗಬಾರದು ಎಂಬ ಶಭಾಷ್​ಗಿರಿ. ಮೊದಲು ಕೆಲಸದಿಂದ ತೆಗೆಯಬೇಕು ಎನ್ನುವ ಬೈಗುಳಗಳ ಬಿರುದು ಬಾವಲಿಗಳು. ಬೆವರಿಳಿಸಿಕೊಂಡು ಯಾವುದನ್ನೂ ಲೆಕ್ಕಿಸದೇ ನಿಸ್ವಾರ್ಥವಾಗಿದ್ದು, ಎರಡೆರೆಡು ದಿನ ಮನೆಗೂ ಹೋಗದೆ ಕೆಲಸ ಮಾಡಿದಾಗಲೂ ನಮ್ ಪರಿಸ್ಥಿತಿ ಹೀಗೇ. ಇದು ಆರಂಭ. ಇನ್ನೂ ಬೇರೆಬೇರೆ ದೇಶಗಳಲ್ಲಿ ಮೂರನೇ ಮೂರನೇ ಅಲೆ ಪ್ರಾರಂಭವಾಗಿದೆ. ಎರಡನೇ ಅಲೆಯ ಸಮಯದಲ್ಲಿ ನಾವು ತುರ್ತು ಗಮನ ಹರಿಸದಿದ್ದರೆ ಮೂರನೇ ಅಲೆಯಲ್ಲಿ ಪರಿಸ್ಥಿತಿ ಭಯಂಕರವಾಗಿರುತ್ತದೆ. ಈಗಿನಿಂದಲೇ ಜಾಗರೂಕರಾದಷ್ಟೂ ಪರಿಣಾಮಗಳಲ್ಲಿ ಇಳಿತವಿರುತ್ತದೆ.

ಕೊರೋನಾ ಮೊದಲ ಅಲೆ ಬಂದಾಗ ತಬ್ಲೀಗಿಗಳಿಂದ ಬಂದಿತು ಎನ್ನುವ ಮಾತುಗಳು ತಮ್ಮ ತಮ್ಮ ಅನುಕೂಲಕ್ಕೆ. ಯಾವಾಗಲೂ ವ್ಯವಸ್ಥೆ ಜನರ ನಡುವೆ ವೈಷಮ್ಯ ಹುಟ್ಟಿಸುವ ಪ್ರಚೋದನಕಾರಿ ಮಾತುಗಳನ್ನೇ ಆಡುತ್ತದೆ. ಜನರ ನೋವಿಗೆ ಮಿಡಿಯಬೇಕಾದ ಸಂದರ್ಭದಲ್ಲೂ ಜಾತಿ-ಧರ್ಮಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುವ ಪ್ರಭುತ್ವ ಯಾವಾಗಲೂ ಜನವಿರೋಧಿಯೇ ಸರಿ. ಕೊರೋನಾ ಸಮುದಾಯಗಳಲ್ಲಿ ಹರಡುತ್ತಿದೆ. ಮನೆಗಳಿಗೆ ವೈದ್ಯರು ಹೋಗಲು ಕಷ್ಟದ ಪರಿಸ್ಥಿತಿ. ಸದ್ಯಕ್ಕೆ ಮದುವೆ ಆಗದ ನಾನು ಮೂಲತಃ ಹುಬ್ಬಳಿ ನಿವಾಸಿ. ವಯಸ್ಸಾದ ಅಮ್ಮನನ್ನು ಅಕ್ಕನ ಮನೆಗೆ ಕಳಿಸಿದ್ದೇನೆ. ಸಾಂಕ್ರಾಮಿಕ ರೋಗ ಬಂದಾಗ ಹೆಚ್ಚು ಒತ್ತಡ ಅನುಭವಿಸುವವರು ಸರ್ಕಾರಿ ವೈದ್ಯರು. ಇಂಜೆಕ್ಷನ್​ನಿಂದ ಹಿಡಿದು ಆಕ್ಸಿಜನ್, ಬೆಡ್, ಆ್ಯಂಬುಲೆನ್ಸ್​, ಮಿನಿಸ್ಟರ್​ಗಳ ಭೇಟಿ, ಡಿಸಿ ಮೀಟಿಂಗ್ ಎಲ್ಲವನ್ನು ಮುಗಿಸಿ, ಆಯಾ ದಿನ ಚೇತರಿಸಿಕೊಂಡ ರೋಗಿಗಳ ಸಂಖ್ಯೆ, ದಾಖಲಾದ ರೋಗಿಗಳ ಸಂಖ್ಯೆ ಎಲ್ಲವನ್ನೂ ದಿನದಿಂದ ದಿನಕ್ಕೆ ಇಲಾಖೆಯ ವೆಬ್‍ಸೆಟಿನಲ್ಲಿ ಅಪ್​ಲೋಡ್ ಮಾಡಬೇಕು. ಮತ್ತೆ ಎಲ್ಲರಿಂದ ಬೈಸಿಕೊಂಡು ಏನೂ ಆಗದಂತೆ ನಗುಮುಖದಿಂದ ರೋಗಿಗಳನ್ನು ನೋಡಬೇಕು.

nimma dhwaige namma dhwaniyu

ಇದರ ನಡುವೆ ಈ ರೆಮಿಡಿಸಿವರ್ ಇಂಜೆಕ್ಷನ್ ಪೂರೈಕೆ ಹೆಚ್ಚಬೇಕಿದೆ. ಪಾಸಿಟಿವ್ ಅಂದ ತಕ್ಷಣ ಈ ಇಂಜೆಕ್ಷನ್ ಕೊಡಿ ಎಂದು ಕೇಳುತ್ತಾರೆ. ಸ್ಟಾಕ್ ಇಲ್ಲವೆಂದರೆ ನಾವೇ ತರುತ್ತೇವೆ ಎಂದು ತಯಾರಾಗುತ್ತಾರೆ. ಕೆಲವೊಂದು ಔಷಧಿಗಳು ರೋಗಿಯ ಪ್ರಾಣಕ್ಕೂ ಅಪಾಯವಾಗುವ ಸಾಧ್ಯತೆ ಇರುತ್ತದೆ. ಆಗ ವೈದ್ಯರೇ ಹೊಣೆ. ಹಾಗಾಗಿ ಇಂಥ ಎಂಜೆಕ್ಷನ್​ಗಳನ್ನು ಸ್ವಂತ ಇಚ್ಛೆಯಿಂದ ತೆಗೆದುಕೊಳ್ಳುತ್ತಿದ್ದೇವೆ ಎಂದು ರೋಗಿಗಳಿಂದ ಪತ್ರ ಬರೆಯಿಸಿಕೊಳ್ಳಬೇಕಾಗುತ್ತದೆ. ಸಕಾಲಕ್ಕೆ ರೋಗಿಗಳಿಗೆ ಬೆಡ್​, ಚಿಕಿತ್ಸೆ ಸಿಗಬೇಕು ಎನ್ನುವ ಕಾರಣಕ್ಕೆ ವಾಟ್ಸಾಪ್ ಗ್ರೂಪ್ ಅನುಕೂಲವಾಗಿದೆ. ಬಳ್ಳಾರಿಯ ಯಾವ ಮೂಲೆಯ ಆರೋಗ್ಯಾಧಿಕಾರಿಯೂ ಐಸಿಯೂ, ಐಸೋಲೇಷನ್ ವಾರ್ಡ್​ಗಳು ಬೇಕು ಎಂದ ತಕ್ಷಣ ಮಾಹಿತಿಯನ್ನು ಹಂಚಿಕೊಳ್ಳುವಂಥ ರೂಢಿ ಇದೆ. ಸಿ.ಟಿ ಸ್ಕ್ಯಾನ್, ಎಕ್ಸರೇ ಪರೀಕ್ಷೆ ಮಾಡಿ ಕೆಲವೊಂದು ವಿಚಾರಗಳನ್ನು ಹಂಚಿಕೊಳ್ಳಲು ಸೋಷಿಯಲ್ ಮೀಡಿಯಾಗಳು ಸಹಾಯಕ ಆಗಿವೆ.

ಕೊರೋನಾ ವಾಸಿಯಾಗುವ ಒಂದು ಸಾಂಕ್ರಾಮಿಕ ರೋಗವಷ್ಟೇ. ಹಾಗಾಗಿ ಕರೋನಾ ಬಂದ ತಕ್ಷಣ ಭಯಪಡುವುದು, ಆತ್ಮಹತ್ಯೆಗೆ ಪ್ರಯತ್ನಿಸುವುದು, ಖಿನ್ನತೆಗೆ ಜಾರುವುದು ಮಾಡುವುದು ಬೇಡ, ರೋಗಿಗಳ ಸಂಖ್ಯೆ ತೋರಿಸುವ ಬದಲು ಈ ದಿನ ಗುಣಮುಖರಾದವರ ಪ್ರಮಾಣ ತೋರಿಸಿ, ಈ ನಿಟ್ಟಿನಲ್ಲಿ ಮಾಧ್ಯಮಗಳು ಧೈರ್ಯ ತುಂಬುವ ನಿಟ್ಟಿನಲ್ಲಿ ಆಪ್ತಸಲಹೆ ನೀಡುವ ಕೆಲಸಗಳಲ್ಲಿ ಹೆಚ್ಚು ತೊಡಗಿಕೊಳ್ಳಬೇಕಾಗಿದೆ.

nimma dhwanige namma dhwaniyu

ನಿರೂಪಣೆ : ಮಂಜುಳಾ ಎಚ್.

ಇದನ್ನೂ : Corona Warriors : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ : ‘ಸ್ವತಃ ವೈದ್ಯೆಯಾಗಿಯೂ ಆ್ಯಂಬುಲೆನ್ಸ್ ಹಿಂದೆ ಹುಚ್ಚಿಯಂತೆ ಓಡಿದ್ದೆ’ 

Published On - 3:00 pm, Tue, 18 May 21

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ