AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಟು ಗೋವಾ: ಮಧುಚಂದ್ರಕ್ಕೆ ಕರೆದೊಯ್ದು ಪ್ರೇಯಿಸಿ ಹತ್ಯೆಗೈದ ಪ್ರಿಯಕರ

ಬೆಂಗಳೂರು ಮೂಲದ ಯುವತಿ ಗೋವಾದಲ್ಲಿ ಕೊಲೆಯಾಗಿದ್ದಾಳೆ. ಕೊಲೆ ಮಾಡಿದ ಆರೋಪಿಯನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ಯುವತಿ ಮತ್ತು ಕೊಲೆ ಮಾಡಿದ ಆರೋಪಿ ಪ್ರೇಮಿಗಳಾಗಿದ್ದರು ಎಂದು ತಿಳಿದುಬಂದಿದೆ. ಪ್ರೇಮ ಸಂಬಂಧದಲ್ಲಿ ಮನಸ್ತಾಪದಿಂದ ಈ ಕೃತ್ಯ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ, ಕೊಲೆ ಹಿಂದಿನ ಅಸಲಿ ಕಾರಣ ಹೊರಬರಬೇಕಿದೆ.

ಬೆಂಗಳೂರು ಟು ಗೋವಾ: ಮಧುಚಂದ್ರಕ್ಕೆ ಕರೆದೊಯ್ದು ಪ್ರೇಯಿಸಿ ಹತ್ಯೆಗೈದ ಪ್ರಿಯಕರ
ಕೊಲೆಯಾದ ರೋಶನಿ, ಆರೋಪಿ ಸಂಜಯ್ ಕೇವಿನ್
ಸಂಜಯ್ಯಾ ಚಿಕ್ಕಮಠ
| Updated By: ವಿವೇಕ ಬಿರಾದಾರ|

Updated on: Jun 18, 2025 | 9:21 PM

Share

ಹುಬ್ಬಳ್ಳಿ, ಜೂನ್​ 18: ಇದೊಂದು ವಿಚಿತ್ರ ಪ್ರಕರಣ. ಬೆಂಗಳೂರು (Bengaluru) ಮೂಲದ ಯುವತಿ ಗೋವಾದಲ್ಲಿ (Goa) ಕೊಲೆಯಾಗಿದ್ದಾಳೆ. ಕೊಲೆ ಮಾಡಿದ ಆರೋಪಿ ಕೂಡ ಬೆಂಗಳೂರು ನಿವಾಸಿಯಾಗಿದ್ದಾನೆ. ಆದರೆ, ಆರೋಪಿ ಸಿಕ್ಕಿಬಿದ್ದಿದ್ದು ಹುಬ್ಬಳ್ಳಿಯಲ್ಲಿ (Hubballi). ಪ್ರೀತಿಸಿದ ಹುಡಗಿಯ ಕತ್ತುಸೀಳಿ ಕೊಲೆ ಮಾಡಿದ ಪ್ರಿಯಕರ ಹುಬ್ಬಳ್ಳಿ ಪೊಲೀಸರ ಕೈಯಲ್ಲಿ ಲಾಕ್ ಆಗಿದ್ದಾನೆ. ಬೆಂಗಳೂರಿನ ಲಿಂಗರಾಜಪುರ ಬಡಾವಣೆಯ ಡಾನ್ ಬಾಸ್ಕೋ ಶಾಲೆ ಸಮೀಪ ವಾಸವಾಗಿದ್ದ 22 ವರ್ಷದ ರೋಶನಿ ಗೋವಾದಲ್ಲಿ ಬರ್ಬರವಾಗಿ ಕೊಲೆಯಾಗಿದ್ದಾರೆ.

ಗೋವಾ ರಾಜ್ಯದ ಪೋಂಡಾ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರತಾಪನಗರ ಬಳಿಯಿರುವ ಅರಣ್ಯ ಪ್ರದೇಶದಲ್ಲಿ ಜೂನ್ 16 ರಂದು ರೋಶನಿ ಶವ ಸಿಕ್ಕಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಗೋವಾ ಪೊಲೀಸರು, ರೋಶನಿ ಹಿನ್ನೆಲೆ ಕಲೆಹಾಕಲು ಆರಂಭಿಸಿದರು. ಆಗ, ಕೆಲ ದಿನಗಳ ಹಿಂದಷ್ಟೇ ರೋಶನಿ ತಾನು ವಾಸವಾಗಿರುವ ಲಿಂಗರಾಜಪುರ ಬಡಾವಣೆಯ ನಿವಾಸಿಯಾಗಿದ್ದ ಸಂಜಯ್ ಕೇವಿನ್ ಎಂಬುವನ ಜೊತೆ ಗೋವಾಕ್ಕೆ ಬಂದಿರುವ ವಿಚಾರ ಗೊತ್ತಾಗಿದೆ.

ಗೋವಾದಲ್ಲಿ ಮದುವೆಯಾಗಲು ನಿರ್ಧರಿಸಿದ್ದ ಪ್ರೇಮಿಗಳು

ರೋಶನಿ ಮತ್ತು ಸಂಜಯ್ ಕೇವಿನ್ ಪರಸ್ಪರ ಪ್ರೀತಿಸುತ್ತಿದ್ದರಂತೆ. ಮದುವೆಯಾಗಲು ಇಬ್ಬರು ನಿರ್ಧರಿಸಿದ್ದರಂತೆ. ಗೋವಾದಲ್ಲಿಯೇ ಮದುವೆಯಾಗಲು ನಿರ್ಧರಿಸಿ ಇಬ್ಬರು ಕೆಲ ದಿನಗಳ ಹಿಂದೆ ಗೋವಾಕ್ಕೆ ಬಂದಿದ್ದರಂತೆ. ಆದರೆ, ಗೋವಾದಲ್ಲಿ ಇಬ್ಬರ ನಡುವೆ ಯಾವುದೋ ಕಾರಣಕ್ಕೆ ಮನಸ್ತಾಪವಾಗಿದೆ. ಇದೇ ಕಾರಣದಿಂದ, ಪ್ರಿಯಕರ ಸಂಜಯ್ ಕೆವಿನ್ ಪ್ರೇಯಸಿ ರೋಶನಿಯನ್ನು ಕತ್ತು ಸೀಳಿ ಕೊಲೆ ಮಾಡಿ, ಗೋವಾ ಹೊರವಲಯದ ಅರಣ್ಯ ಪ್ರದೇಶದಲ್ಲಿ ಶವ ಬಿಸಾಡಿ ಪರಾರಿಯಾಗಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಗೋವಾದ ಪೋಂಡಾ ಪೊಲೀಸರು, ತನಿಖೆ ಆರಂಭಿಸಿದರು. ಗೋವಾದಲ್ಲಿ ಕೊಲೆ ಮಾಡಿದ್ದ ಆರೋಪಿ, ಹುಬ್ಬಳ್ಳಿಯಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ರೋಶನಿಯನ್ನು ಕೊಲೆ ಮಾಡಿರುವ ಆರೋಪ ಹೊತ್ತಿರುವ ಸಂಜಯ್ ಕೆವಿನ್, ಹುಬ್ಬಳ್ಳಿಯಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಇದನ್ನೂ ಓದಿ
Image
ಕೊನೆಗೂ ಹುಬ್ಬಳ್ಳಿ ವಿವಾದಿತ ಈದ್ಗಾ ಮೈದಾನದ ಕಂಪೌಂಡ್ ತೆರವು
Image
ಪತಿ ಮನೆಯಿಂದ ಮಗಳನ್ನು ಎತ್ತಿಕೊಂಡು ಹೋದ ಹೆತ್ತವರು, ಮುಂದೇನಾಯ್ತು?
Image
ಒಬ್ಬ ವ್ಯಕ್ತಿ ಹೆಸರಲ್ಲಿ ಐದಾರು ಸಿಮ್: ಪಾಕ್ ಪರ ಕೃತ್ಯಕ್ಕೆ ಬಳಸಿರುವ ಶಂಕೆ
Image
ಹುಬ್ಬಳ್ಳಿ​: ನುಡಿದಂತೆ ನಡೆಯದ ಸರ್ಕಾರ, ಕುಟುಂಬಕ್ಕೆ ಬಾರದ ಪರಿಹಾರ

ಆರೋಪಿ ಬಲೆಗೆ ಬಿದ್ದಿದ್ದು ಹೇಗೆ?

ಸಂಜಯ್ ಕೆವಿನ್ ಜೂನ್ 16 ರಂದು ಹುಬ್ಬಳ್ಳಿ ನಗರದ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ, ಪೊಲೀಸರ ಕಣ್ಣಿಗೆ ಬಿದ್ದಿದ್ದಾನೆ. ಅನುಮಾನಗೊಂಡ ಪೊಲೀಸರು ಸಂಜಯ್​ ಕೇವಿನ್​ನನ್ನು​ ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಆಗ, ಸಂಜಯ್ ಕೆವಿನ್, ತಾನು ಮೂಲತಃ ಬೆಂಗಳೂರು ನಿವಾಸಿ ಎಂದು ಹೇಳಿದ್ದಾನೆ. ಇನ್ನೊಂದಡೆ, ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದ ಪೋಂಡಾ ಪೊಲೀಸರಿಗೆ, ಆರೋಪಿ ಸಂಜಯ್ ಕೆವಿನ್​ನ ಮೊಬೈಲ್ ಟವರ್ ಲೊಕೇಶನ್ ಹುಬ್ಬಳ್ಳಿಯಲ್ಲಿ ತೋರಿಸುತ್ತಿತ್ತು. ಹೀಗಾಗಿ, ಆತನ ಬಗ್ಗೆ ಹುಬ್ಬಳ್ಳಿ ಪೊಲೀಸರಿಗೆ ಪೋಂಡಾ ಪೊಲೀಸರು ಮಾಹಿತಿ ನೀಡಿದ್ದಾರೆ.

ಆಗ, ಬೆಂಡಿಗೇರಿ ಪೊಲೀಸರು ಸಂಜಯ್ ಕೆವಿನ್​ನನ್ನು ಹಿಡಿದು ಠಾಣೆಯಲ್ಲಿ ಕೂರಿಸಿಕೊಂಡಿರುವ ಬಗ್ಗೆ ಪೋಂಡಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಹುಬ್ಬಳ್ಳಿಗೆ ಆಗಮಿಸಿದ ಪೋಂಡಾ ಪೊಲೀಸರು, ಆರೋಪಿ ಸಂಜಯ್ ಕೆವಿನ್​ನನ್ನು ಬಂಧಿಸಿ, ಗೋವಾಕ್ಕೆ ಕರೆದುಕೊಂಡು ಹೋಗಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್, “ಸಂಜಯ್ ಕೆವಿನ್​ನನ್ನು ಬೆಂಡಿಗೇರಿ ಪೊಲೀಸರು ವಶಕ್ಕೆ ಪಡಿದಿದ್ದರು. ಆತ ಕೊಲೆ ಮಾಡಿರುವ ಬಗ್ಗೆ ಗೋವಾ ಪೊಲೀಸರು ಮಾಹಿತಿ ನೀಡಿದ್ದರು. ಆರೋಪಿಯನ್ನು ಈಗಾಗಲೇ ಗೋವಾ ಪೊಲೀಸರಿಗೆ ನೀಡಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಹಠ ಮಾಡುತ್ತೆಂದು ಮಗುವಿನ ಮುಖ,ಅಂಗಾಲಿಗೆ ಬರೆ: ಛೇ..ಹೆತ್ತವಳಿಂದ ಇದೆಂಥಾ ಕೃತ್ಯ..

ಪ್ರೀತಿಸಿದ ಹುಡುಗಿಯನ್ನು ಕೊಲೆ ಮಾಡಿ, ತಲೆ ಮರೆಸಿಕೊಂಡಿದ್ದ ಆರೋಪಿ ಹುಬ್ಬಳ್ಳಿಯಲ್ಲಿ ಸಿಕ್ಕಿಬಿದ್ದಿದ್ದಾನೆ. ಗೋವಾ ಪೊಲೀಸರಿಗೆ ಆರೋಪಿ ಹಸ್ತಾಂತರ ಮಾಡಿರುವುದರಿಂದ, ಅಲ್ಲಿನ ಪೊಲೀಸರು ಕೊಲೆ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹ ಮಾಡುತ್ತಿದ್ದಾರಂತೆ. ತನಿಖೆ ಪೂರ್ಣಗೊಂಡ ಬಳಿಕ ರೋಶನಿ ಕೊಲೆಗೆ ಅಸಲಿ ಕಾರಣವೇನು ಎಂಬುವುದು ಗೊತ್ತಾಗಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ