AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಠ ಮಾಡುತ್ತೆಂದು ಮಗುವಿನ ಮುಖ,ಅಂಗಾಲಿಗೆ ಬರೆ: ಛೇ..ಹೆತ್ತವಳಿಂದ ಇದೆಂಥಾ ಕೃತ್ಯ..

ಹುಬ್ಬಳ್ಳಿಯ ಮೂರು ವರ್ಷದ ಮಗುವಿನ ಅಂಗಾಲು, ಮೊಣಕಾಲು, ಮುಖ, ಕೈ ಸೇರಿದಂತೆ ಅನೇಕ ಕಡೆ ಗಾಯಗಳಾಗಿವೆ. ಪುಟ್ಟ ಮಗುವಿಗೆ ಆಗಿರುವ ಗಾಯಗಳನ್ನು ನೋಡಿದರೇ ಕಲ್ಲು ಹೃದಯ ಸಹ ಕರಗುತ್ತದೆ. ಇದು ಆಟವಾಡಲು ಹೋಗಿ ಬಿದ್ದು ಗಾಯ ಮಾಡಿಕೊಂಡಿರುವುದಲ್ಲ, ಹೆತ್ತ ತಾಯಿಯೇ ಬರೆ ಹಾಕಿರುವುದು. ಇದು ಅಚ್ಚರಿಯಾದರೂ ಸತ್ಯ. ಇಲ್ಲಿದೆ ವಿವರ

ಹಠ ಮಾಡುತ್ತೆಂದು ಮಗುವಿನ ಮುಖ,ಅಂಗಾಲಿಗೆ ಬರೆ: ಛೇ..ಹೆತ್ತವಳಿಂದ ಇದೆಂಥಾ ಕೃತ್ಯ..
ಮಗುವಿನ ಕಾಲಿಗೆ ಬರೆ ಹಾಕಿದ ತಾಯಿ
ಸಂಜಯ್ಯಾ ಚಿಕ್ಕಮಠ
| Edited By: |

Updated on:Jun 17, 2025 | 7:53 PM

Share

ಹುಬ್ಬಳ್ಳಿ, ಜೂನ್​ 17: ಜಗತ್ತಿನಲ್ಲಿ ಕೆಟ್ಟ ಮಕ್ಕಳಿರಬಹುದು, ಆದರೆ ಕೆಟ್ಟ ತಾಯಿ ಇರಲ್ಲ ಅಂತಾರೆ. ಆದರೆ, ಹುಬ್ಬಳ್ಳಿಯ (Hubballi) ಟಿಪ್ಪು ನಗರದಲ್ಲಿ ವಾಸವಾಗಿರುವ ತಾಯಿಯೊಬ್ಬಳು, ತಾನೇ ಹೆತ್ತ ಮಗುವಿಗೆ ಬರೆ ಹಾಕಿದ್ದಾಳೆ. ತಾಯಿಯ ಈ ಕೃತ್ಯಕ್ಕೆ ಮೂರು ವರ್ಷದ ಮಗು ನರಳಾಡುತ್ತಿದೆ. ಟಿಪ್ಪು ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿರುವ ಅನುಷಾ ಎಂಬುವರು, ತನ್ನ ಮೂರು ವರ್ಷದ ಗಂಡು ಮಗುವಿನ ಮೈಮೇಲೆ ಕಾದ ಕಬ್ಬಿಣದ ಸಲಾಕೆಯಿಂದ ಬರೆ ಹಾಕಿದ್ದಾಳೆ.

ನಗರದ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅನುಷಾ, ಕಳೆದ ಕೆಲ ದಿನಗಳಿಂದ ಮೇಲಿಂದ ಮೇಲೆ ಮಗುವಿನ ಪಾದ, ಮೊಣಕಾಲು, ಮುಖ, ಕುತ್ತಿಗೆ ಸೇರಿದಂತೆ ಅನೇಕ ಕಡೆ ಬರೆ ಹಾಕಿದ್ದಾಳೆ. ಮಗು ನರಳಾಡುತ್ತಿರುವುದನ್ನು ನೋಡಿದ ಸ್ಥಳೀಯರು, ಹಳೆ ಹುಬ್ಬಳ್ಳಿ ಠಾಣೆ ಪೊಲೀಸರಿಗೆ ಮತ್ತು ಮಕ್ಕಳ ಕಲ್ಯಾಣ ಸಮೀತಿಯವರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಮಕ್ಕಳ ಕಲ್ಯಾಣ ಸಮಿತಿ ಸಿಬ್ಬಂದಿ ಮಗುವನ್ನು ಕಿಮ್ಸ್​ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ.

ತಾನೇ ಹೆತ್ತಿರುವ ಮಗುವಿಗೆ, ತಾಯಿ ಈ ರೀತಿ ಬರೆಹಾಕಲು ಕಾರಣ, ಮಗು ಮಾತು ಕೇಳದೆ ಇರುವುದಂತೆ. ಈ ಬಗ್ಗೆ ಮಗುವನ್ನು ಮಾತನಾಡಿಸಿದ್ದ ಸ್ಥಳೀಯರು, ತನ್ನ ತಾಯಿಯೇ ತನಗೆ ಬರೆ ಹಾಕಿದ್ದಾಳೆ. ಆಕೆಯ ಮಾತು ಕೇಳದೆ ಇದ್ದಿದ್ದಕ್ಕೆ ಈ ರೀತಿ ಮಾಡಿದ್ದಾಳೆ ಅಂತ ಮಗು ಹೇಳಿದೆ.

ಇದನ್ನೂ ಓದಿ
Image
ಕೊನೆಗೂ ಹುಬ್ಬಳ್ಳಿ ವಿವಾದಿತ ಈದ್ಗಾ ಮೈದಾನದ ಕಂಪೌಂಡ್ ತೆರವು
Image
50 ಕೋಟಿ ರೂ.ಸಾಲ ಕೊಡಿಸುವುದಾಗಿ ಮಹಿಳೆಗೆ ಕೋಟಾ ನೋಟು ಕೊಟ್ಟ ಮಹಮ್ಮದ್
Image
ಸಮಾಜ ಸೇವೆಯಲ್ಲಿ ವಿದ್ಯಾರ್ಥಿಗಳು: ಸ್ವಂತ ಹಣದಲ್ಲಿ ರಸ್ತೆ ದುರಸ್ಥಿ
Image
ನಾಯಿ ಕೊಡೆಗಳಂತೆ ಹುಟ್ಟುತ್ತಿರುವ ಪಿಜಿಗಳಿಗೆ ಜಿಲ್ಲಾಡಳಿತ ಲಗಾಮು

ಮಗು ಹಠ ಮಾಡುತ್ತೆ, ಮಾತು ಕೇಳಲ್ಲ ಅಂತ ಸಿಟ್ಟಿಗೆದ್ದ ತಾಯಿ, ಮಗುವಿನ ಮೇಲೆಯೇ ರಾಕ್ಷಸಿ ಪ್ರವೃತ್ತಿ ತೋರಿಸಿದ್ದಾಳೆ. ಹೆತ್ತವರಿಂದಲೂ ದೂರವಿರುವ ಅನುಷಾ, ಪತಿಯಿಂದ ಕೂಡ ದೂರವಾಗಿದ್ದಾಳೆ. ಸದ್ಯ ಅನುಷಾಳ ವಿರುದ್ಧ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು, ಹಳೆ ಹುಬ್ಬಳ್ಳಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇದನ್ನೂ ಓದಿ: ಪ್ರೀತಿಗೆ ಪೋಷಕರೇ ವಿಲನ್: ಪತಿ ಮನೆಯಿಂದ ಮಗಳನ್ನು ಎತ್ತಿಕೊಂಡು ಹೋದ ಹೆತ್ತವರು, ಮುಂದೇನಾಯ್ತು?

ಹಳೆ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ನಂತರ ಅನುಷಾ ಈ ರೀತಿ ಮಾಡಲು ಅಸಲಿ ಕಾರಣ ಗೊತ್ತಾಗಲಿದೆ. ಆದರೆ, ಮಕ್ಕಳು ತಪ್ಪು ಮಾಡಿದಾಗ ಹೆತ್ತವರು ಬುದ್ದಿ ಹೇಳುವುದು, ನಾಲ್ಕೇಟು ಹೊಡೆಯುವುದು ಸಾಮಾನ್ಯ. ಆದರೆ, ಕಾದ ಕಬ್ಬಿಣದಿಂದ ಬರೆ ಹಾಕಿ, ರಾಕ್ಷಸಿ ಕೃತ್ಯ ಎಸಗಿರುವ ಅನುಷಾ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:53 pm, Tue, 17 June 25