ಪ್ರೀತಿಗೆ ಪೋಷಕರೇ ವಿಲನ್: ಪತಿ ಮನೆಯಿಂದ ಮಗಳನ್ನು ಎತ್ತಿಕೊಂಡು ಹೋದ ಹೆತ್ತವರು, ಮುಂದೇನಾಯ್ತು?
ಪತಿಯ ಮನೆಯಲ್ಲಿದ್ದ ಪತ್ನಿಯನ್ನು ಪೋಷಕರು ಬಲವಂತವಾಗಿ ಕರೆದುಕೊಂಡು ಹೋದ ಘಟನೆ ಶನಿವಾರ (ಜೂ.14) ರಾತ್ರಿ ಹುಬ್ಬಳ್ಳಿಯಲ್ಲಿ ನಡೆದಿದೆ. ಪ್ರೇಮ ವಿವಾಹವಾಗಿದ್ದ ಜೋಡಿ ಪೋಷಕರ ವಿರೋಧದಿಂದಾಗಿ ಬೇರ್ಪಟ್ಟಿದ್ದರು. ಆದರೆ, ನವನಗರ ಪೊಲೀಸರ ಮಧ್ಯಪ್ರವೇಶದಿಂದಾಗಿ ಜೋಡಿ ಮತ್ತೆ ಒಂದಾಗಿದ್ದಾರೆ. ಹಾಕಿದ್ದರೆ ಏನಿದು ಪ್ರಕರಣ? ಇಲ್ಲಿದೆ ವಿವರ.

ಹುಬ್ಬಳ್ಳಿ, ಜೂನ್ 15: ಪ್ರೇಮ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ ಪೋಷಕರು ಪತಿಯ ಮನೆಯಲ್ಲಿದ್ದ ಮಗಳನ್ನು ಬಲವಂತವಾಗಿ ಕರೆದುಕೊಂಡು ಹೋಗಿರುವ ಘಟನೆ ಹುಬ್ಬಳ್ಳಿಯ (Hubballi) ಸದಾಶಿವನಗರದಲ್ಲಿ ನಡೆದಿದೆ. ಆದರೆ, ನವನಗರ ಠಾಣೆ ಪೊಲೀಸರ (Navanagar Police Station) ಮಧ್ಯ ಪ್ರವೇಶದಿಂದ ಪ್ರಕರಣ ಸುಖಾಂತ್ಯ ಕಂಡಿದೆ. ಸುಷ್ಮಿತಾ (ಹೆಸರು ಬದಲಾಯಿಸಲಾಗಿದೆ) ಮತ್ತು ನಿರಂಜನ ಒಂದಾಗಿದ್ದಾರೆ.
ಸುಷ್ಮಿತಾ ಮತ್ತು ನಿರಂಜನ್ದ್ದು 5 ವರ್ಷದ ಪ್ರೀತಿ
ನಿರಂಜನ್ ಕ್ಯಾಬ್ ಡ್ರೈವಿಂಗ್ ಜೊತೆಗೆ ಓಎಪ್ಕಿ ಕೇಬಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸುಷ್ಮಿತಾ ಮತ್ತು ನಿರಂಜನ್ ಕುಟುಂಬ ಐದು ವರ್ಷಗಳ ಹಿಂದೆ ಹುಬ್ಬಳ್ಳಿಯ ರೇಣುಕಾ ನಗರದಲ್ಲಿ ವಾಸವಾಗಿದ್ದರು. ಒಂದೇ ಏರಿಯಾದಲ್ಲಿ ಇದ್ದಿದ್ದರಿಂದ ಸುಷ್ಮಿತಾ ಮತ್ತು ನಿರಂಜನ ಒಬ್ಬರೊನ್ನೊಬ್ಬರು ನೋಡಿದ್ದರು. ಆದರೆ, ಇಬ್ಬರ ನಡುವೆ ಪರಿಚಯ ಇರಲಿಲ್ಲ. ಆದರೆ, ಇನ್ಸ್ಟಾಗ್ರಾಂನಲ್ಲಿ ಪರಿಯವಾಗಿದ್ದು, ಮೆಸೆಜ್ಗಳು ವಿನಿಮಯವಾಗಿವೆ. ಪರಸ್ಪರ ಸ್ನೇಹಿತರಾಗಿದ್ದ ನಿರಂಜನ್ ಮತ್ತು ಸುಷ್ಮಿತಾ ನಂತರ ಪ್ರೇಮಿಗಳಾಗಿದ್ದಾರೆ. ಈ ವಿಷಯ ಸುಷ್ಮಿತಾ ಮನೆಯವರಿಗೆ ಗೊತ್ತಾಗಿದೆ.
ಇಬ್ಬರ ಜಾತಿ ಬೇರೆ ಬೇರೆಯಾಗಿದ್ದು ಮತ್ತು ಸಾಮಾಜಿಕ ಸ್ಥಾನಮಾನಗಳಲ್ಲಿ ವ್ಯತ್ಯಾಸವಿದ್ದರಿಂದ ಸುಷ್ಮಿತಾ ಮನೆಯವರು ಪ್ರೀತಿಗೆ ವಿರೋಧಿಸಿದ್ದಾರೆ. ಅಲ್ಲದೆ, ಸುಷ್ಮಿತಾರಿಗೆ ಹೆತ್ತವರು ಬೇರಡೆ ಮದುವೆ ಮಾಡಲು ಮುಂದಾಗಿದ್ದಾರೆ. ಆದರೆ, ತಾನು ಮದುವೆಯಾದರೇ ನಿರಂಜನ್ ಅವರನ್ನೇ ಆಗುತ್ತೇನೆ ಅಂತ ಸುಷ್ಮಿತಾ ಹಠ ಹಿಡಿದಿದ್ದಾರೆ. ನಂತರ ಸುಷ್ಮಿತಾ ತವರು ಮನೆ ಬಿಟ್ಟು ಬಂದಿದ್ದು, ತನ್ನನ್ನು ಮದುವೆಯಾಗುವಂತೆ ಸುಷ್ಮಿತಾ ಪ್ರಿಯಕರ ನಿರಂಜನ್ರ ದುಂಬಾಲು ಬಿದಿದ್ದಾರೆ.
ಆಗ, ನಿರಂಜನ್ ಮತ್ತು ಸುಷ್ಮಿತಾ ಗದಗನಲ್ಲಿ ರಿಜಿಸ್ಟರ್ ಮದುವೆಯಾಗಿದ್ದಾರೆ. ಇತ್ತ ಸುಷ್ಮಿತಾ ಮನೆಯವರು ಹುಬ್ಬಳ್ಳಿಯ ನವನಗರ ಠಾಣೆಯಲ್ಲಿ ಮಿಸ್ಸಿಂಗ್ ದೂರು ದಾಖಲಿಸಿದ್ದಾರೆ. ಒಂದುವರೆ ತಿಂಗಳು ಕಾಲ ಬೇರಡೆ ಇದ್ದ ಈ ಜೋಡಿ ನಂತರ ನವನಗರ ಠಾಣೆಗೆ ಬಂದಿದ್ದಾರೆ. ಆಗ ಸುಷ್ಮಿತಾ ಪೋಷಕರು, ಆಕೆಯ ತಾಯಿಗೆ ಆರೋಗ್ಯ ಸರಿಯಿಲ್ಲ ಕೆಲ ದಿನಗಳ ಕಾಲ ಇಟ್ಟುಕೊಂಡು ಕಳುಹಿಸುತ್ತೇವೆ ಅಂತ ಹೇಳಿ ಕರೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ: ಪ್ರೀತಿ ಕೊಂದ ಕೊಲೆಗಾರ 6 ತಿಂಗಳ ಬಳಿಕ ಸಿಕ್ಕಿಬಿದ್ದ: ಹಂತಕನ ಹೆಡೆಮುರಿ ಕಟ್ಟಿದ್ದೇ ರೋಚಕ
ಆದರೆ, ಕಳೆದ ಎರಡು ವರ್ಷದಿಂದ ಸುಷ್ಮಿತಾ ಎಲ್ಲಿದ್ದಾಳೆ ಅಂತ ನಿರಂಜನ್ಗೆ ಸಹ ಗೊತ್ತಿರಲಿಲ್ಲ. ಇನ್ನು, ನಿರಂಜನ್ ರೇಣುಕಾ ನಗರ ಬಿಟ್ಟು ಸದಾಶಿವ ನಗರಕ್ಕೆ ಬಂದು ವಾಸವಾಗಿದ್ದಾರೆ. ಶನಿವಾರ (ಜೂ.14) ಸುಷ್ಮಿತಾ ನಿರಂಜನ ಅವರ ಮನೆಗೆ ಬಂದಿದ್ದಾರೆ. ಇದು ಗೊತ್ತಾಗುತ್ತಿದ್ದಂತೆ ಸುಷ್ಮಿತಾ ಹೆತ್ತವರು, ನಿರಂಜನ್ ಮನೆಗೆ ಬಂದು ಸುಷ್ಮಾರಿಗೆ ಥಳಿಸಿ ಕರೆದುಕೊಂಡು ಹೋಗಿದ್ದಾರೆ.
ಪ್ರೀತಿಸಿ ಮದುವೆಯಾಗಿದ್ದ ಜೋಡಿ, ಬದುಕು ಕಟ್ಟಿಕೊಳ್ಳಬೇಕು ಅನ್ನುವಾಗಲೇ ಸುಷ್ಮಿತಾ ಮನೆಯವರು ಇಬ್ಬರನ್ನು ದೂರ ಮಾಡಿದ್ದಾರೆ. ಆದರೂ ಹೆತ್ತವರ ವಿರೋಧ ಲೆಕ್ಕಿಸದೆ ತಾನು ನಿರಂಜನ ಜೊತೆಯೇ ಬದಕುತ್ತೇನೆ ಅಂತ ಸುಷ್ಮಿತಾ ಬಂದಿದ್ದು ಹೆತ್ತವರ ಆಕ್ರೋಶಕ್ಕೆ ಕಾರಣವಾಗಿದೆ. ಗಂಡನ ಮನೆಯಲ್ಲಿ ಕುಳಿತಿದ್ದ ಸುಷ್ಮಿತಾರನ್ನು ಎತ್ತಿಕೊಂಡು ಹೋಗಿದ್ದಾರೆ. ಇದನ್ನು ತಡೆಯಲು ಹೋದ ನಿರಂಜನಗೆ, ಈಕೆಯ ತಂಟೆಗೆ ಬಂದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಅಂತ ಸುಷ್ಮಿತಾ ಪೋಷಕರು ಬೆದರಿಕೆ ಹಾಕಿದ್ದಾರೆ.
ರಕ್ಷಣೆಗಾಗಿ ಸುಷ್ಮಿತಾ ಪತಿ ನಿರಂಜನ ನವನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿದರು. ಇನ್ನು ಸುಷ್ಮಿತಾರನ್ನು ಎತ್ತಿಕೊಂಡು ಹೋಗುವ ವಿಡಿಯೋ ಎಲ್ಲಡೆ ವೈರಲ್ ಆಗ್ತಿದ್ದಂತೆ ಸುಷ್ಮಿತಾ ಹೆತ್ತವರನ್ನು ಮತ್ತು ನಿರಂಜನನನ್ನು ಠಾಣೆಗೆ ಕರೆಸಿಕೊಂಡ ನವನಗರ ಪೊಲೀಸರು, ಇಬ್ಬರ ವಿಚಾರಣೆ ನಡೆಸಿದರು. ಇಬ್ಬರ ಪೋಷಕರೊಂದಿಗೆ ಪೊಲೀಸರು ಮಾತನಾಡಿದ್ದಾರೆ. ಈ ವೇಳೆ ಸುಷ್ಮಿತಾ ಪೋಷಕರು ಅಳಿಯ ನಿರಂಜನ ಮನೆಗೆ ಕಳುಹಿಸಲು ಒಪ್ಪಿಕೊಂಡಿದ್ದಾರೆ. ಹೀಗಾಗಿ, ಯಾವುದೇ ದೂರನ್ನು ದಾಖಲಿಸಲಿಲ್ಲ. ನಿರಂಜನ ಪತ್ನಿ ಸುಷ್ಮಿತಾರನ್ನು ತನ್ನ ಜೊತೆ ಕರೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ: 50 ಕೋಟಿ ರೂ.ಸಾಲ ಕೊಡಿಸುವುದಾಗಿ ಮಹಿಳೆಗೆ ಕೋಟಾ ನೋಟು ಕೊಟ್ಟ ಮಹಮ್ಮದ್
ಸದ್ಯ ನವನಗರ ಠಾಣೆಯಲ್ಲಿ ಪ್ರಕರಣ ಸುಖ್ಯಾಂತ ಕಂಡಿದೆ. ಹೆತ್ತವರು, ನಾವು ಸುಷ್ಮಿತಾ ಮತ್ತು ನಿರಂಜನ ತಂಟೆಗೆ ಹೋಗುವುದಿಲ್ಲ ಅಂತ ಪೊಲೀಸರ ಮುಂದೆ ಹೇಳಿದ್ದಾರೆ. ಹೀಗಾಗಿ, ಹೆತ್ತವರ ವಿರೋಧದಿಂದ ಪ್ರೀತಿಸಿ ದೂರವಾಗಿದ್ದ ಜೋಡಿ, ಇದೀಗ ಮತ್ತೆ ಒಂದಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:20 pm, Sun, 15 June 25







