AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಕಡೆಯಿಂದ ಮೋದಿ ಯುದ್ಧ ನಿಲ್ಲಿಸಿದರು; ವರಸೆ ಬದಲಿಸಿದ ಟ್ರಂಪ್

ಭಾರತ-ಪಾಕಿಸ್ತಾನದ ಸಂಘರ್ಷವನ್ನು ನಿಲ್ಲಿಸುವ ಹೇಳಿಕೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಛರಿಸಿದ್ದಾರೆ. ಪ್ರಧಾನಿ ಮೋದಿ ನಮಗೆ ಯಾರ ಮಧ್ಯಸ್ಥಿಕೆಯೂ ಬೇಕಾಗಿಲ್ಲ ಎಂಬ ಸ್ಪಷ್ಟನೆ ನೀಡಿದ್ದರೂ ಡೊನಾಲ್ಡ್ ಟ್ರಂಪ್ 'ನಾನು ಪಾಕಿಸ್ತಾನವನ್ನು ಪ್ರೀತಿಸುತ್ತೇನೆ, ಮೋದಿ ಅದ್ಭುತ ವ್ಯಕ್ತಿ. ನಾನೇ ಎರಡು ಪ್ರಮುಖ ರಾಷ್ಟ್ರಗಳ ನಡುವಿನ ಪರಮಾಣು ಯುದ್ಧವನ್ನು ನಿಲ್ಲಿಸಿದ್ದು' ಎಂಬ ಹೇಳಿಕೆ ನೀಡಿದ್ದಾರೆ. ಆದರೆ, ಈ ಬಾರಿ, ಭಾರತದೊಳಗೆ ಪ್ರಧಾನಿ ಮೋದಿ ಯುದ್ಧ ನಿಲ್ಲಿಸಲು ಕ್ರಮ ವಹಿಸಿದರು ಎಂದು ಟ್ರಂಪ್ ವರಸೆ ಬದಲಿಸಿದ್ದಾರೆ.

ಭಾರತದ ಕಡೆಯಿಂದ ಮೋದಿ ಯುದ್ಧ ನಿಲ್ಲಿಸಿದರು; ವರಸೆ ಬದಲಿಸಿದ ಟ್ರಂಪ್
Modi Trump
ಸುಷ್ಮಾ ಚಕ್ರೆ
|

Updated on:Jun 18, 2025 | 10:48 PM

Share

ನವದೆಹಲಿ, ಜೂನ್ 18: ಭಾರತ (India) ಮತ್ತು ಪಾಕಿಸ್ತಾನ (Pakistan) ಎರಡೂ ದೇಶಗಳ ಸೇನೆಗಳ ನಡುವಿನ ನೇರ ಮಾತುಕತೆಯ ನಂತರ ಮಿಲಿಟರಿ ದಾಳಿಯನ್ನು ನಿಲ್ಲಿಸಿ ಕದನವಿರಾಮ (Ceasefire) ಘೋಷಿಸಲಾಗಿದೆ. ಭಾರತ ಎಂದಿಗೂ ಮೂರನೇ ದೇಶದ ಮಧ್ಯಸ್ಥಿಕೆಯನ್ನು ಬಯಸಿಲ್ಲ, ಮುಂದೆ ಬಯಸುವುದೂ ಇಲ್ಲ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರಿಗೆ ಮಂಗಳವಾರ ರಾತ್ರಿ ದೂರವಾಣಿ ಕರೆಯಲ್ಲಿ ಹೇಳಿದ್ದರು. ಆದರೆ, ಅದಾಗಿ ಒಂದೇ ದಿನದೊಳಗೆ ಡೊನಾಲ್ಡ್ ಟ್ರಂಪ್ ಮತ್ತೆ ಭಾರತ-ಪಾಕಿಸ್ತಾನದ ಯುದ್ಧವನ್ನು ನಾನೇ ನಿಲ್ಲಿಸಿದ್ದು ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಈ ಬಾರಿ ಕೊಂಚ ವರಸೆ ಬದಲಿಸಿರುವ ಡೊನಾಲ್ಡ್ ಟ್ರಂಪ್, ಭಾರತದ ಕಡೆಯಿಂದ ಮೋದಿ ಯುದ್ಧ ನಿಲ್ಲಿಸಿದರು. ನಾನು ಹೊರಗಿನಿಂದ ಯುದ್ಧ ನಿಲ್ಲಿಸಿದೆ ಎಂಬ ಮಾತುಗಳನ್ನಾಡಿದ್ದಾರೆ.

ಕಾಶ್ಮೀರದ ಮಾರಕ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕೆಲವು ವಾರಗಳ ನಂತರ, ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಮಿಲಿಟರಿ ಸಂಘರ್ಷವನ್ನು ನಿಲ್ಲಿಸುವ ತಮ್ಮ ಹೇಳಿಕೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಪುನರುಚ್ಚರಿಸಿದ್ದಾರೆ. ಇಂದು ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, ಪ್ರಧಾನಿ ನರೇಂದ್ರ ಮೋದಿಯವರನ್ನು “ಅದ್ಭುತ ವ್ಯಕ್ತಿ” ಎಂದು ಬಣ್ಣಿಸಿದ್ದಾರೆ. ಹಾಗೇ, ಅಮೆರಿಕ ಮತ್ತು ಭಾರತ ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳುತ್ತವೆ ಎಂದು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ತಪ್ಪು ತಿಳೀಬೇಡಿ ನಿಮ್ಮ ಸಹಕಾರ ಬೇಕು ಆದ್ರೆ ಮಧ್ಯಸ್ಥಿಕೆ ಬೇಡ: ಟ್ರಂಪ್​ಗೆ ಮೋದಿ ಹೇಳಿದ್ದೇನು?

ಇನ್ನೂ ಮುಂದುವರೆದ ಅವರು, “ನಾನು ಯುದ್ಧವನ್ನು ನಿಲ್ಲಿಸಿದೆ. ನಾನು ಪಾಕಿಸ್ತಾನವನ್ನು ಪ್ರೀತಿಸುತ್ತೇನೆ. ಭಾರತದ ಪ್ರಧಾನಿ ಮೋದಿ ಅದ್ಭುತ ವ್ಯಕ್ತಿ. ನಾನು ನಿನ್ನೆ ರಾತ್ರಿ ಅವರೊಂದಿಗೆ ಮಾತನಾಡಿದೆ. ನಾವು ಭಾರತದ ಮೋದಿಯೊಂದಿಗೆ ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳಲಿದ್ದೇವೆ. ನಾನೇ ಪಾಕಿಸ್ತಾನ ಮತ್ತು ಭಾರತದ ನಡುವಿನ ಯುದ್ಧವನ್ನು ನಿಲ್ಲಿಸಲು ಮುಂದಾದೆ. ಬಹಳ ಪ್ರಭಾವಶಾಲಿಯಾದ ಮೋದಿ ಭಾರತದ ಒಳಗಿನಿಂದ ಯುದ್ಧ ನಿಲ್ಲಿಸಿದರು. ನಾನು ಹೊರಗಿನಿಂದ ನಿಲ್ಲಿಸಿದೆ” ಎಂದು ಟ್ರಂಪ್ ಹೇಳಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ನಿರ್ಣಾಯಕ ಹಂತದಲ್ಲಿ ಮಧ್ಯಪ್ರವೇಶಿಸಿ, ದೊಡ್ಡ ಸಂಘರ್ಷವನ್ನು ತಡೆಯಲು ನಾನು ಸಹಾಯ ಮಾಡಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.

ಆದರೆ, ಈ ಹೇಳಿಕೆಯಿಂದ ಡೊನಾಲ್ಡ್ ಟ್ರಂಪ್ ಅವರೇ ಮಧ್ಯಸ್ಥಿಕೆ ವಹಿಸಿ ಯುದ್ಧ ನಿಲ್ಲಿಸಿದ್ದು ಎಂದು ಕೇಂದ್ರ ಸರ್ಕಾರದ ಮೇಲೆ ದಾಳಿ ನಡೆಸುತ್ತಿದ್ದ ವಿಪಕ್ಷಗಳ ಆರೋಪಕ್ಕೆ ಉತ್ತರ ಸಿಕ್ಕಂತಾಗಿದೆ. ಡೊನಾಲ್ಡ್ ಟ್ರಂಪ್ ಅವರೇ ಭಾರತದೊಳಗೆ ಮೋದಿ ಯುದ್ಧ ನಿಲ್ಲಿಸುವ ಕ್ರಮ ಕೈಗೊಂಡರು ಎಂದು ಒಪ್ಪಿಕೊಂಡಿದ್ದಾರೆ.

ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನು ಊಟಕ್ಕೆ ಶ್ವೇತಭವನಕ್ಕೆ ಆಹ್ವಾನಿಸಿದ ಬಗ್ಗೆ ಕೇಳಿದ ಪ್ರಶ್ನೆಗೆ, ಪಾಕಿಸ್ತಾನದ ಕಡೆಯಿಂದ ಯುದ್ಧವನ್ನು ನಿಲ್ಲಿಸುವಲ್ಲಿ ಅವರು (ಮುನೀರ್) ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ. “ಪಾಕಿಸ್ತಾನದ ಕಡೆಯಿಂದ ಯುದ್ಧವನ್ನು ತಡೆಯುವಲ್ಲಿ ಈ ವ್ಯಕ್ತಿ ಅತ್ಯಂತ ಪ್ರಭಾವಶಾಲಿಯಾಗಿದ್ದರು” ಎಂದು ಡೊನಾಲ್ಡ್ ಟ್ರಂಪ್ ಮುನೀರ್ ಅವರನ್ನು ಉದ್ದೇಶಿಸಿ ಹೇಳಿದ್ದಾರೆ.

ಇದನ್ನೂ ಓದಿ: ನಮ್ಮ ಮೇಲೆ ಅಟ್ಯಾಕ್ ಮುಂದುವರೆಸಿದರೆ ಪಾಕಿಸ್ತಾನದಿಂದ ಇಸ್ರೇಲ್ ಮೇಲೆ ಪರಮಾಣು ದಾಳಿ; ಇರಾನ್ ಎಚ್ಚರಿಕೆ

ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸುವ ನಿರ್ಧಾರವನ್ನು ಎರಡೂ ಕಡೆಯ ಸೇನೆಗಳ ನಡುವಿನ ಮಾತುಕತೆಯ ಸಮಯದಲ್ಲಿ ನೇರವಾಗಿ ತೆಗೆದುಕೊಳ್ಳಲಾಗಿದೆ. ನಮಗೆ ಯಾವುದೇ ಮಧ್ಯಸ್ಥಿಕೆ ಬೇಕಾಗಿರಲಿಲ್ಲ, ಮುಂದೆಯೂ ಬೇಕಾಗಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷರಿಗೆ ಹೇಳಿದ ಕೆಲವೇ ಗಂಟೆಗಳ ನಂತರ ಟ್ರಂಪ್ ಅವರ ಈ ಹೇಳಿಕೆಗಳು ಬಂದಿವೆ.

ಟ್ರಂಪ್-ಮೋದಿ ಫೋನ್ ಕರೆ:

ಮಂಗಳವಾರ ರಾತ್ರಿ ನಡೆದ 35 ನಿಮಿಷಗಳ ಫೋನ್ ಸಂಭಾಷಣೆಯಲ್ಲಿ, ಭಾರತ ಎಂದಿಗೂ ಮಧ್ಯಸ್ಥಿಕೆಯನ್ನು ಒಪ್ಪಿಕೊಂಡಿಲ್ಲ ಮತ್ತು ಎಂದಿಗೂ ಮಧ್ಯಸ್ಥಿಕೆಯನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಪ್ರಧಾನಿ ಮೋದಿ ಟ್ರಂಪ್‌ಗೆ ತಿಳಿಸಿದ್ದಾರೆ. ಏಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಯೋತ್ಪಾದನೆಯ ವಿರುದ್ಧ ಕ್ರಮ ಕೈಗೊಳ್ಳುವ ತನ್ನ ದೃಢನಿಶ್ಚಯವನ್ನು ಭಾರತ ಇಡೀ ಜಗತ್ತಿಗೆ ತಿಳಿಸಿದೆ ಎಂದು ಪ್ರಧಾನಿ ಟ್ರಂಪ್‌ಗೆ ತಿಳಿಸಿದ್ದಾರೆ.

ಮೇ 10ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಿಲ್ಲಿಸಲಿದೆ, ಕದನವಿರಾಮಕ್ಕೆ ಎರಡೂ ದೇಶಗಳು ಒಪ್ಪಿದೆ ಎಂದು ಮೊದಲು ಘೋಷಿಸಿದವರು ಡೊನಾಲ್ಡ್ ಟ್ರಂಪ್. ಅಂದಿನಿಂದ, ಟ್ರಂಪ್ ಭಾರತ ಮತ್ತು ಪಾಕಿಸ್ತಾನ ನಡುವಿನ ಹೋರಾಟವನ್ನು ನಿಲ್ಲಿಸುವಂತೆ ಮಾಡಿದ್ದೇನೆ, ಈ ಪ್ರಯತ್ನಗಳಲ್ಲಿ ಎರಡೂ ದೇಶಗಳೊಂದಿಗಿನ ವ್ಯಾಪಾರವನ್ನು ನಿಲ್ಲಿಸುವ ಬೆದರಿಕೆಯನ್ನು ಬಳಸಿದ್ದೇನೆ ಎಂದು ಪದೇ ಪದೇ ಹೇಳಿಕೊಂಡಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 9:25 pm, Wed, 18 June 25