Ripped Jeans; ತಿರತ್ ಸಿಂಗ್ ಅವರಿಗೊಂದು ಪತ್ರ : ಸ್ವರ್ಗದಿಂದ ನೇರಪ್ರಸಾರದಲ್ಲಿ ಝಾನ್ಸೀಯಜ್ಜಿಯೊಂದಿಗೆ ಸೌರಭಾ
‘ಮೊಣಕಾಲ ಮೇಲೆ ನಿಂತ ಲೂಸ್ ಲೂಸ್ ಚಡ್ಡಿ, ದೊಗಳೆ ಟೀ ಶರ್ಟ್ ಅಜ್ಜಿಗೆ ಹಿತವೆನಿಸಿರಬೇಕು. ಬೊಚ್ಚು ಬಾಯಗಲ ಮಾಡಿ ನಕ್ಕರು ಸಂತೃಪ್ತಿಯಿಂದ. ಇದನ್ನೊಮ್ಮೆ ನಾನಾ ಸಾಹೇಬನಿಗೂ, ತಾತ್ಯಾನಿಗೂ ತೋರಿಸಬೇಕು. ಆ ಮುದುಕರು ಪಾಪ ಕಚ್ಚೆ ಪಂಚೆಯಲ್ಲೇ ಇದ್ದಾರೆ ಅಜ್ಜಿಯ ಕಣ್ಣಲ್ಲಿ ತುಂಟತನ. ನಿಮ್ ಉತ್ತರಾಖಂಡದ ಮುಖ್ಯಮಂತ್ರಿಗೆ ಫೋನ್ ಮಾಡಿ ಹೇಳಬೇಕು, ಇಂತಾದ್ದಕ್ಕೆಲ್ಲಾ ನನ್ ಹೆಸ್ರು ತರಬಾರದು ಅಂತ. ಇವತ್ತಿಗೂ ತಾತ್ಯಾನ ಕಾಲದ ಕಚ್ಚೆಯನ್ನೇ ಹಾಕಿಕೊಳ್ಳಿ, ಪ್ಯಾಂಟು ಶರಟು ಹಾಕಬೇಡಿ ಅಂತ ಇವರಿಗೆ ಹೇಳಿದ್ರೆ ಹೇಗಿರತ್ತೆ?’ ಸೌರಭಾ ಕಾರಿಂಜೆ
ನೀವೀಗ ಬಸ್ಸೋ, ರೈಲೋ, ವಿಮಾನವೋ ಏನೋ ಒಂದು ಏರಿ ಕುಳಿತುಕೊಳ್ಳುತ್ತೀರಿ. ನಿಮ್ಮ ಅಕ್ಕಪಕ್ಕದವರ ಬಗ್ಗೆ ಮನುಷ್ಯ ಸಹಜ ಕುತೂಹಲದ ನೋಟ ಹರಿಸುತ್ತೀರಿ; ನಿಮ್ಮದು ಯಾವ ಊರು, ಏನು ಕೆಲಸ, ಎಲ್ಲಿಗೆ ಹೊರಟಿದ್ದೀರಿ… ಸಾಗಿದ ಮಾತು ಎಲ್ಲಿಂದೆಲ್ಲಿಗೆ ಬಂದು ನಿಲ್ಲುತ್ತದೆ ಅಥವಾ ತುಂಡರಿಸಿಕೊಳ್ಳುತ್ತದೆ ಎನ್ನುವುದು ನಿಮ್ಮ ನಿಮ್ಮ ಗುಣ, ಸ್ವಭಾವ, ಅಭಿರುಚಿ, ಆಸಕ್ತಿ ಮತ್ತು ದೃಷ್ಟಿಕೋನಗಳ ಮೇಲೆ ನಿಲ್ಲುತ್ತದೆ. ಸಿಕ್ಕ ಒಂದು ಸಮಾನ ತಂತು ಸಹಜವಾಗಿ ಸಂಧಿಸಿದರೆ ಪ್ರಯಾಣ ಚೇತೋಹಾರಿ. ಇಲ್ಲವಾದರೆ ಇಳಿದ ಮೇಲೆ ಅವರ್ಯಾರೋ ನಾವ್ಯಾರೋ. ಅದು ಅಷ್ಟಕ್ಕೇ ಮುಗಿದರೆ ಸರಿ. ಆದರೆ ಸಹಪ್ರಯಾಣಿಕರು ಇಳಿದು ಹೋದಮೇಲೆಯೂ ಅವರ ವೈಯಕ್ತಿಕ ಸಂಗತಿ ಅಥವಾ ಅಭಿಲಾಷೆಗಳ ಬಗ್ಗೆ ಅನವಶ್ಯಕವಾಗಿ ನೀವು ‘ಕತ್ತರಿ’ಯಾಡಿಸಿದರೆ? ಇದು ಮಾನವೀಯತೆಯೇ, ಸಂಸ್ಕಾರವೇ?
ಉತ್ತರಾಖಂಡದ ಮಾನ್ಯ ಮುಖ್ಯಮಂತ್ರಿ ತಿರತ್ ಸಿಂಗ್ ಅವರೇ, ನಮ್ಮ ದೇಶದ ಯುವಜನತೆ Ripped Jean (ಹರಿದ ಜೀನ್ಸ್) ತೊಡುವ ಬಗ್ಗೆ ನೀವು ನಿಮ್ಮ ಅಭಿಪ್ರಾಯ ಹೇಳಿದ್ದೀರಿ. ನಮ್ಮ ಬರಹಗಾರರು ಅನುಭವಿಸಿದ ಗಳಿಗೆಗಳಿಗೆ ಜಾರಿ ವಾಸ್ತವಕ್ಕೆ ಬಂದು ನಿಮಗೆ ಪತ್ರಸ್ಪಂದನ ಮಾಡಿದ್ದಾರೆ.
ಪರಿಕಲ್ಪನೆ : ಶ್ರೀದೇವಿ ಕಳಸದ
ಝಾನ್ಸೀ ರಾಣಿ ಲಕ್ಷ್ಮೀಬಾಯಿ ಸೀರೆಯಲ್ಲೇ ಯುದ್ಧ ಮಾಡಲಿಲ್ಲವೇ? ಹೀಗಂತ ರಾವತರು ಕೇಳಿದ್ದೇ ತಡ, ಲೇಖಕಿ ಸೌರಭಾ ಕಾರಿಂಜೆ ಸ್ವರ್ಗಕ್ಕೆ ಜಿಗಿದು ಅವರೊಂದಿಗೆ ನಡೆಸಿದ ಸಂಭಾಷಣೆಯನ್ನಿಲ್ಲಿ ವರದಿ ಒಪ್ಪಿಸಿದ್ದಾರೆ.
ನಮಸ್ಕಾರ,
ರಾಣಿ ಲಕ್ಷ್ಮಿಯಜ್ಜಿಗೆ ನಾನು ಪ್ರತಿಮೆಗಳಲ್ಲಿ ಕಂಡದ್ದಕ್ಕಿಂತ ಬಹಳ ವಯಸ್ಸಾಗಿತ್ತು. ಆದರೂ ರಾಣಿಯ ಎಲ್ಲಾ ಚಹರೆಗಳು, ಗಾಂಭೀರ್ಯ. ಕಂಡ ತಕ್ಷಣ ಕೈ ಮುಗಿದೆ.
“ಏನ್ ನಡೀತಾ ಇದೆ ಅಲ್ಲಿ?” ಅಜ್ಜಿ ಕಂಡದ್ದೇ ಮಾತಿಗೆ ಮೊದಲಿಟ್ಟರು.
“ಎಲ್ಲಿ?” ಅರೆಗಳಿಗೆ ನಾನು ತಬ್ಬಿಬ್ಬು.
“ಅದೇ ನಿಮ್ ದೇಶದಲ್ಲಿ, ಅಲ್ಲಲ್ಲ, ನಮ್ಮ ದೇಶದಲ್ಲಿ” ಅಜ್ಜಿಯ ಮುಖದಲ್ಲಿ ಅಣಕವಿತ್ತು.
“ಅದೇ ಮಾಮೂಲಿ, ಭ್ರಷ್ಟಾಚಾರ, ಬೆಲೆಯೇರಿಕೆ, ಬಡವರ ಕಷ್ಟ..”
“ಅದಲ್ಲ ಕಣೇ ತಂಗಮ್ಮ, ನನ್ ಹೆಸರು ಎತ್ತಿದ್ದಾನಂತೆ ನಮ್ಮ ಉತ್ತರಾಖಂಡದ ಮುಖ್ಯಮಂತ್ರಿ?” ಅಜ್ಜಿಯ ಬಾಯಲ್ಲಿ ವೀಳ್ಯದೆಲೆ.
“ಓಹ್ ಅದಾ? ಇದ್ದದ್ದೇ, ಅವರವರು ಮಾಡೋ ಅವಾಂತರಗಳನ್ನು ಸಮರ್ಥಿಸೋಕೆ ಚರಿತ್ರೆಯಿಂದ ಯಾರನ್ನಾದರೂ ಎಳೆದು ತರೋದು.” ನಾನು ಉದಾಸೀನವಾಗೇ ಅಂದೆ. ಆದರೆ ಕುತೂಹಲದ್ದೇ ಮೇಲುಗೈಯಾಯಿತು.
“ಅಲ್ಲ ಅಜ್ಜಿ, ನೀವ್ ನಿಜ್ವಾಗ್ಲೂ ಸೀರೆ ಉಟ್ಕೊಂಡೇ ಯುದ್ಧ ಮಾಡಿದ್ದಾ?”
“ಆವಾಗಿನ ಕಾಲ ಹಾಗೇ ಇತ್ತಲ್ಲ ಸೀರೆ ಬಿಟ್ಟು ಇನ್ನೇನಿತ್ತು ನಮಗೆ? ನಿಂದೊಳ್ಳೆ ಪ್ರಶ್ನೆ” ಅಜ್ಜಿ ಇನ್ನೂ ಸೀರೆಯಲ್ಲೇ ಇದ್ದರು.
ಬೇಸಗೆಯ ಬೆವರಿಗೆ ಸೆರಗಲ್ಲೇ ಗಾಳಿ ಹಾಕುತ್ತಾ ಕೂತಿದ್ದರು. ಸ್ವರ್ಗದಲ್ಲೂ ಸೆಖೆ!
“ಈಗ ನೋಡು ಮೈಯೆಲ್ಲಾ ಬೆವರುಗುಳ್ಳೆ ಎದ್ದಿದೆ. ಈ ವಯಸ್ಸಿಗೆ ಈ ಸೀರೆ ಭಾರ ಅನಿಸೋಕೆ ಶುರು ಆಗಿದೆ.” ಅಜ್ಜಿ ನನ್ನ ಮುಂದೆ ಕೆರೆದುಕೊಳ್ಳುವುದು ತಮ್ಮ ರಾಜಗಾಂಭೀರ್ಯಕ್ಕೆ ಧಕ್ಕೆ ಎಂಬಂತೆ ಹಲ್ಲುಕಚ್ಚಿ ಕೂತಿದ್ದರು.
“ನನ್ ಶಾರ್ಟ್ಸ್ ಒಂಚೂರು ಹಾಕ್ಕೊಂಡು ನೋಡಿ ಈಗ” ಅಳುಕುತ್ತಲೇ ಬ್ಯಾಗಿಂದ ತೆಗೆದುಕೊಟ್ಟೆ. ಅಜ್ಜಿ ಯಾವ ಹಿಂಜರಿಕೆ ಇಲ್ಲದೆ ಉತ್ಸಾಹದಿಂದ ಧರಿಸಿಕೊಂಡರು.
ಮೊಣಕಾಲ ಮೇಲೆ ನಿಂತ ಲೂಸ್ ಲೂಸ್ ಚಡ್ಡಿ, ದೊಗಳೆ ಟೀ ಶರ್ಟ್ ಅಜ್ಜಿಗೆ ಹಿತವೆನಿಸಿರಬೇಕು. ಬೊಚ್ಚು ಬಾಯಗಲ ಮಾಡಿ ನಕ್ಕರು ಸಂತೃಪ್ತಿಯಿಂದ.
“ಇದನ್ನೊಮ್ಮೆ ನಾನಾ ಸಾಹೇಬನಿಗೂ, ತಾತ್ಯಾನಿಗೂ ತೋರಿಸಬೇಕು. ಆ ಮುದುಕರು ಪಾಪ ಕಚ್ಚೆ ಪಂಚೆಯಲ್ಲೇ ಇದ್ದಾರೆ ಇನ್ನೂ” ಅಜ್ಜಿಯ ಕಣ್ಣಲ್ಲಿ ತುಂಟತನ.
“ನಾವು ಚಿಕ್ಕವರಿದ್ದಾಗ ಇವೆಲ್ಲ ಇದ್ದಿದ್ದರೆ ಕುದುರೆ ಸವಾರಿಗೆ, ಮಲ್ಲಕಂಬಕ್ಕೆ, ಎಲ್ಲ ಅಡಾವುಡಿಗೆ ಎಷ್ಟು ಅನುಕೂಲವಾಗುತ್ತಿತ್ತು” ಲೊಚಗುಟ್ಟಿದರು.
“ಇದ್ದಿದ್ದರೆ ಇಂತಾ ಬಟ್ಟೆ ಎಲ್ಲ ಹಾಕಿಕೊಳ್ಳುತ್ತಿದ್ರಾ ಅಜ್ಜಿ?” ನಾನು ಖಚಿತಪಡಿಸಿಕೊಳ್ಳಲು ಕೇಳಿದೆ.
“ಪ್ರಯತ್ನ ಅಂತೂ ಮಾಡುತ್ತಿದ್ದೆ.” ಅಜ್ಜಿ ಕಣ್ಣು ಮಿಟುಕಿಸಿ ಮುಂದುವರೆಸಿದರು.
“ನಿಮ್ ಉತ್ತರಾಖಂಡದ ಮುಖ್ಯಮಂತ್ರಿಗೆ ಫೋನ್ ಮಾಡಿ ಹೇಳಬೇಕು, ಇಂತಾದ್ದಕ್ಕೆಲ್ಲಾ ನನ್ ಹೆಸ್ರು ತರಬಾರದು ಅಂತ. ಅಲ್ಲ, ನಾನು ಸೀರೆಯಲ್ಲೇ ಯುದ್ಧ ಮಾಡಿದೆ ಸರಿ, ಹಾಗಂತ ಇವತ್ತಿನ ಹೆಣ್ಣುಮಕ್ಕಳು ಬಟ್ಟೆ ಹೇಗೆ ಹಾಕಿಕೊಳ್ಳಬೇಕು, ಅದು ಎಲ್ಲಿ ಹರಿದಿರಬೇಕು, ಎಲ್ಲಿ ಹರಿದಿರಬಾರದು ಅಂತ ಇವರು ನಿರ್ಧರಿಸೋದಾ? ಇವತ್ತಿಗೂ ತಾತ್ಯಾನ ಕಾಲದ ಕಚ್ಚೆಯನ್ನೇ ಹಾಕಿಕೊಳ್ಳಿ, ಪ್ಯಾಂಟು ಶರಟು ಹಾಕಬೇಡಿ ಅಂತ ಇವರಿಗೆ ಹೇಳಿದ್ರೆ ಹೇಗಿರತ್ತೆ? ಹಾಗೇ ತಾನೇ? ಉಡುಪು ಅನ್ನೋದು ಕಾಲಕ್ಕೆ, ಅನುಕೂಲಕ್ಕೆ ತಕ್ಕಂತೆ ಬದಲಾಗೋ ಅಂತದ್ದು. ಹೆಣ್ಣುಮಕ್ಕಳಲ್ಲಿನ ಬದಲಾವಣೆಗಳಂದರೆ ಯಾಕಿಷ್ಟು ಭಯವೋ ಇವರಿಗೆ.”
“ಜೀನ್ಸ್ ತೊಂದರೆ ಇಲ್ಲ, ಹರಿದ ಜೀನ್ಸ್ ತೊಂದರೆ ಅಂತೆ” ಕತೆಗಳಲ್ಲಿ-ಸಿನಿಮಾಗಳಲ್ಲಿ ಮಾತ್ರ ಕೇಳಿದ್ದ ಅಜ್ಜಿಯ ಖಂಡತುಂಡ ಮಾತುಗಳನ್ನು ಕೇಳಲು ನನಗೊಂದಿಷ್ಟು ಹುಕಿ. ಒಗ್ಗರಣೆ ಹಾಕಿಯೇ ಹಾಕಿದೆ. ಪಟಪಟವೆಂದರು ಅಜ್ಜಿ.
“ಹರಿದದ್ದೋ ಮುರಿದದ್ದೋ ಅವರವರಿಗೆ ಬೇಕಾದ ಬಟ್ಟೆ ಅವರವರು ಹಾಕಲಿ ಬಿಡು. ಇವರಿಗ್ಯಾಕೆ ಅದರ ಚಿಂತೆ? ಇಷ್ಟಕ್ಕೂ ಬಟ್ಟೆಯಲ್ಲಿ ಅಡಗೋಕೆ ಸಂಸ್ಕೃತಿ ಅಂದರೆ ಇಲಿಮರಿಯಾ? ಹರಿಯುವ ನೀರು ಅದು, ಕಟ್ಟಿಹಾಕೋಕೆ ಹೊರಡೋದು ಮೂರ್ಖತನ.
ತಂದೆಯಾಗಿ ಮಾತಾಡಿದ್ದು ಅಂತಾರಲ್ಲ, ತಂದೆಯಾದವನು ಹೇಗಿರಬೇಕು, ಎಷ್ಟು ಪ್ರೋತ್ಸಾಹಿಸಬೇಕು ನಮ್ ಹೆಣ್ಣುಮಕ್ಕಳನ್ನು ಅಂತ ಗೊತ್ತಿಲ್ಲವೇ? ನಮ್ಮ ಕಾಲಕ್ಕೇ ನಮ್ಮ ತಂದೆಯವರಿಗೆ ಇದ್ದ ಮುಕ್ತತೆ ಇವರಿಗೆ ಈ ಶತಮಾನದಲ್ಲಿ ಇಲ್ಲ. ಕಾಲವೇನು ಹಿಂದೆ ಹಿಂದೆ ಹೋಗ್ತಾ ಇದೆಯಾ? ಏನೂಂತ ಈ ಜನಗಳನ್ನು ಚುನಾಯಿಸಿ ಪೀಠದ ಮೇಲೆ ಕೂರಿಸಿದ್ದೀರೋ”
ಅಜ್ಜಿ ಎಲ್ಲಾ ಪತ್ರಿಕೆಗಳನ್ನೂ ಓದಿ ರೊಚ್ಚಿಗೆದ್ದಂತಿತ್ತು.
“ಹೂಂ ಅಜ್ಜಿ, ಫೋನ್ ಮಾಡದೆ ಇರಬೇಡಿ ರಾವತರಿಗೆ.” ಅಂತಂದು ನಾನು ಮಾತು ಮುಗಿಸಿದೆ.
***
ಪರಿಚಯ : ಸೌರಭಾ ಕಾರಿಂಜೆ ಮೂಲತಃ ದಕ್ಷಿಣ ಕನ್ನಡದವರು. ಎಂಜಿನಿಯರಿಂಗ್ ಓದಿ ಬೆಂಗಳೂರಿನ ಒಂದು ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಓದು, ಬರಹ, ಪ್ರವಾಸ, ಬ್ಯಾಡ್ಮಿಂಟನ್, ಅಡುಗೆ, ಯೋಗ ಇವರ ಆಸಕ್ತಿಯ ಕ್ಷೇತ್ರಗಳು. ಇವರ ಕತೆಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು ಕೆಲವು ಬಹುಮಾನವನ್ನೂ ಗಳಿಸಿವೆ.
ಇದನ್ನೂ ಓದಿ : Ripped Jeans; ತಿರತ್ ಸಿಂಗ್ ಅವರಿಗೊಂದು ಪತ್ರ: ಬಾಲಾ ಹೋಗಿ ಬಾಚಿ ಬಂತು ಡುಂ ಡುಂ!
Published On - 5:03 pm, Sat, 20 March 21