Ripped Jeans; ತಿರತ್ ಸಿಂಗ್ ಅವರಿಗೊಂದು ಪತ್ರ: ಬಾಲಾ ಹೋಗಿ ಬಾಚಿ ಬಂತು ಡುಂ ಡುಂ!

‘ಮಗಳು ಸ್ಕೂಲ್ ಮುಗಿಸಿ ಲೂನಾ ಹತ್ತಿ ಬರುವಾಗ ಇಳಿಜಾರಿನಲ್ಲಿ ಅವಳ ಉದ್ದನೆಯ ಸ್ಕರ್ಟ್ ಗಾಲಿಗೆ ಅಕಸ್ಮಾತ್ ಸುತ್ತಿಕೊಂಡಿತು. ಒಮ್ಮೆಲೆ ವೇಗದಲ್ಲಿದ್ದ ಗಾಡಿ ಎರಡು ಸುತ್ತು ಮೆಲ್ಲನೇ ಸುತ್ತಿ ಗಕ್ಕನೇ ನಿಂತಾಗಲೇ ಗೊತ್ತಾದದ್ದು ಮುಂದೆ ಇಂಚಿನಷ್ಟು ಕೂಡ ಸರಿಯದಂತೆ ಸ್ಕರ್ಟ್ ಗಾಲಿಯನ್ನು ಸುತ್ತಿಕೊಂಡಿತ್ತು. ಹಿಂದೂ ಹೋಗಲು ಬಾರದೇ, ಮುಂದಕ್ಕೂ ಚಲಿಸುವ ಸಾಧ್ಯತೆಯಿಲ್ಲದೇ ರಸ್ತೆಯ ನಡುಮಧ್ಯದಲ್ಲಿ ಸಿಕ್ಕಿ ಬಿದ್ದಿದ್ದಳು. ಪಕ್ಕದ ಮನೆಯವರು ನೋಡಿ, ಸ್ಕರ್ಟ್ ವಿಮೋಚನೆಗೆ ಪ್ರಯತ್ನಿಸಿದರೂ ಫಲಿತಾಂಶ ಶೂನ್ಯ. ಕೊನೆಗೆ ಉಪಾಯಗಾಣದೇ ಕತ್ತರಿಯೊಂದನ್ನು ತಂದು, ಗಾಲಿಗುಂಟ ಸ್ಕರ್ಟ್ ಕತ್ತರಿಸಿ ಅದಕ್ಕೆ ಮುಕ್ತಿ ಕೊಟ್ಟದ್ದಾಯಿತು.‘ ಕೃಷ್ಣಾ ಕೌಲಗಿ

Ripped Jeans; ತಿರತ್ ಸಿಂಗ್ ಅವರಿಗೊಂದು ಪತ್ರ: ಬಾಲಾ ಹೋಗಿ ಬಾಚಿ ಬಂತು ಡುಂ ಡುಂ!
ಕೃಷ್ಣಾ ಕೌಲಗಿ
Follow us
ಶ್ರೀದೇವಿ ಕಳಸದ
|

Updated on:Mar 20, 2021 | 5:17 PM

ನೀವೀಗ ಬಸ್ಸೋ, ರೈಲೋ, ವಿಮಾನವೋ ಏನೋ ಒಂದು ಏರಿ ಕುಳಿತುಕೊಳ್ಳುತ್ತೀರಿ. ನಿಮ್ಮ ಅಕ್ಕಪಕ್ಕದವರ ಬಗ್ಗೆ ಮನುಷ್ಯ ಸಹಜ ಕುತೂಹಲದ ನೋಟ ಹರಿಸುತ್ತೀರಿ; ನಿಮ್ಮದು ಯಾವ ಊರು, ಏನು ಕೆಲಸ, ಎಲ್ಲಿಗೆ ಹೊರಟಿದ್ದೀರಿ… ಸಾಗಿದ ಮಾತು ಎಲ್ಲಿಂದೆಲ್ಲಿಗೆ ಬಂದು ನಿಲ್ಲುತ್ತದೆ ಅಥವಾ ತುಂಡರಿಸಿಕೊಳ್ಳುತ್ತದೆ ಎನ್ನುವುದು ನಿಮ್ಮ ನಿಮ್ಮ ಗುಣ, ಸ್ವಭಾವ, ಅಭಿರುಚಿ, ಆಸಕ್ತಿ ಮತ್ತು ದೃಷ್ಟಿಕೋನಗಳ ಮೇಲೆ ನಿಲ್ಲುತ್ತದೆ. ಸಿಕ್ಕ ಒಂದು ಸಮಾನ ತಂತು ಸಹಜವಾಗಿ ಸಂಧಿಸಿದರೆ ಪ್ರಯಾಣ ಚೇತೋಹಾರಿ. ಇಲ್ಲವಾದರೆ ಇಳಿದ ಮೇಲೆ ಅವರ್ಯಾರೋ ನಾವ್ಯಾರೋ. ಅದು ಅಷ್ಟಕ್ಕೇ ಮುಗಿದರೆ ಸರಿ. ಆದರೆ ಸಹಪ್ರಯಾಣಿಕರು ಇಳಿದು ಹೋದಮೇಲೆಯೂ ಅವರ ವೈಯಕ್ತಿಕ ಸಂಗತಿ ಅಥವಾ ಅಭಿಲಾಷೆಗಳ ಬಗ್ಗೆ ಅನವಶ್ಯಕವಾಗಿ ನೀವು ‘ಕತ್ತರಿ’ಯಾಡಿಸಿದರೆ? ಇದು ಮಾನವೀಯತೆಯೇ, ಸಂಸ್ಕಾರವೇ?

ಉತ್ತರಾಖಂಡದ ಮಾನ್ಯ ಮುಖ್ಯಮಂತ್ರಿ ತಿರತ್ ಸಿಂಗ್ ಅವರೇ, ನಮ್ಮ ದೇಶದ ಯುವಜನತೆ Ripped Jean (ಹರಿದ ಜೀನ್ಸ್​) ತೊಡುವ ಬಗ್ಗೆ ನೀವು ನಿಮ್ಮ ಅಭಿಪ್ರಾಯ ಹೇಳಿದ್ದೀರಿ. ನಮ್ಮ ಬರಹಗಾರರು ಅನುಭವಿಸಿದ ಗಳಿಗೆಗಳಿಗೆ ಜಾರಿ ವಾಸ್ತವಕ್ಕೆ ಬಂದು ನಿಮಗೆ ಪತ್ರಸ್ಪಂದನ ಮಾಡಿದ್ದಾರೆ.  

ಪರಿಕಲ್ಪನೆ : ಶ್ರೀದೇವಿ ಕಳಸದ

ಬೆಂಗಳೂರಿನಲ್ಲಿ ವಾಸಿಸುತ್ತಿರುವ ಧಾರವಾಡ ಮೂಲದ ನಿವೃತ್ತ ಶಿಕ್ಷಕಿ, ಲೇಖಕಿ ಕೃಷ್ಣಾ ಕೌಲಗಿಯವರ ಪತ್ರ. 

ನಮಸ್ಕಾರ,

ಅದು 1956ನೇ ಇಸ್ವಿ. ಕೇವಲ ಹತ್ತು ವರುಷದ ನಮ್ಮಂಥವರಿಗೆ ಸುತ್ತಲಿನ ಜಗತ್ತನ್ನು ಅರಿಯುವ ಅಭಿಲಾಷೆ. ಆದರೆ ಶಿಸ್ತುಬದ್ಧ, ಕಟ್ಟುನಿಟ್ಟಿನ ಜೀವನಶೈಲಿಯನ್ನು ಅನುಸರಿಸುತ್ತಿದ್ದ ಆ ಕಾಲದಲ್ಲಿ ಕಾಣಸಿಗುತ್ತಿದ್ದುದು ಮಾತ್ರ ಏಕತಾನತೆಯ ಬದುಕಿನ ರೀತಿ. ಒಂದು ಧೋತರ, ಅಂಗಿ ಗಂಡಸರಿಗಾದರೆ ‘ಕಿರಗಿ’ ಎಂದು ಕರೆಯುತ್ತಿದ್ದ ‘ಹತ್ತಿಯ ಸೀರೆಗಳು ಹೆಂಗಸರಿಗೆ. ಅವುಗಳಿಗೂ ಕೂಡ ಅಲ್ಲಿ, ಇಲ್ಲಿ ಅಷ್ಟಿಷ್ಟು ಹರಿದವುಗಳೂ ಇರುವ ಸಾಧ್ಯತೆ ಇರುತ್ತಿದ್ದುದೂ ಸಾಮಾನ್ಯ ಸಂಗತಿ. ಅಂಥ ವೇಳೆಯಲ್ಲಿ ಹೆಣ್ಣು ಮಕ್ಕಳು ಜೀವವನ್ನೇ ಅಂಗೈಯಲ್ಲಿ ಒತ್ತೆಯಿಟ್ಟು, ಹಿಡಿಯಾಗಿ ಹೊರಗಿನವರಿಂದ ಮರ್ಯಾದೆ ಉಳಿಸಿಕೊಳ್ಳುವ ವ್ಯರ್ಥ ಪ್ರಯತ್ನ ನಡೆಸುವುದು ಸುಲಭವಾಗಿ ನೋಡಲು ಸಿಗುತ್ತಿತ್ತು. ಕುಪ್ಪುಸಗಳೂ ಎಲ್ಲಿಯಾದರೂ ಎಳೆಬಿಟ್ಟು ಹೋಗಿ ಅಕಸ್ಮಾತ್ ಗೊತ್ತಿಲ್ಲದೇ ಹೋದರಂತೂ ಇತರರ ಹಾಸ್ಯ, ಹಿರಿಯರ ಕೆಂಗಣ್ಣಿಗೆ ಗುರಿಯಾಗಬೇಕಿತ್ತು.

ಈಗಿನಂತೆ ಆಗ ನಡುವಿನ ಭಾಗವೂ ಕಾಣುವಂತಿರಲಿಲ್ಲ. ಹೈನೆಕ್, ಉದ್ದ ತೋಳುಗಳು, ಸೊಂಟ ದಾಟಿ ಬಂದ ನಿಲುವು. ಮುಖ, ಕೈಗಳು, ಪಾದಗಳನ್ನು ಬಿಟ್ಟರೆ ಬೇರಾವ ಭಾಗಗಳು ಕಾಣುವಂತೆ ಬಟ್ಟೆ ತೊಡುವುದು ಅಕ್ಷಮ್ಯ ಅಪರಾಧವೆನಿಸುತ್ತಿದ್ದ ಕಾಲಮಾನವದು. ನಂತರ ಸ್ವಲ್ಪ ಸುಧಾರಣೆಯಾಗಿ ಕೆಲ ನಿಯಮಗಳು ಸಡಿಲಗೊಂಡರೂ ಅದೂ ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಮಾತ್ರ. ನಮ್ಮದು ಕುಗ್ರಾಮ. ಇತರೆ ಕಡೆಗಳಲ್ಲಿ ಫ್ಯಾಶನ್ ಎಂದು ಗಣನೆಯಾಗಿ ಅದೆಲ್ಲ ಹಳತು ಎಂದಾದ ಮೇಲೆಯೇ ಹಳ್ಳಿಯಲ್ಲಿ ಅವು ಸ್ವೀಕೃತವಾಗುತ್ತಿದ್ದುದೇ ಜಾಸ್ತಿ. ೮೦ರ ದಶಕದಲ್ಲಿ ಅಷ್ಟಿಷ್ಟು ಬದಲಾವಣೆ ಕಂಡರೂ ಹಿರಿಯರ ಹದ್ದಿನ ಕಣ್ಣು ತಪ್ಪಿಸಿ, ಮೀರಿ ಹೋಗುವಂತಿರಲಿಲ್ಲ.

ನನಗಿನ್ನೂ ನೆನಪಿದೆ. ನನ್ನ ಕೊನೆಯ ಮಗಳು ಎಸ್.ಎಸ್.ಎಲ್.ಸಿ ಇದ್ದಾಗಿನ ಘಟನೆ. ಸ್ಕೂಲ್ ಮುಗಿಸಿ ಲೂನಾ ಹತ್ತಿ ಬರುವಾಗ ಇಳಿಜಾರಿನಲ್ಲಿ ಅವಳ ಉದ್ದನೆಯ ಸ್ಕರ್ಟ್ ಗಾಲಿಗೆ ಅಕಸ್ಮಾತ್ ಸುತ್ತಿಕೊಂಡಿತು. ಒಮ್ಮೆಲೆ ವೇಗದಲ್ಲಿದ್ದ ಗಾಡಿ ಎರಡು ಸುತ್ತು ಮೆಲ್ಲನೇ ಸುತ್ತಿ ಗಕ್ಕನೇ ನಿಂತಾಗಲೇ ಗೊತ್ತಾದದ್ದು ಮುಂದೆ ಇಂಚಿನಷ್ಟು ಕೂಡ ಸರಿಯದಂತೆ ಸ್ಕರ್ಟ್ ಗಾಲಿಯನ್ನು ಸುತ್ತಿಕೊಂಡಿತ್ತು. ಹಿಂದೂ ಹೋಗಲು ಬಾರದೇ, ಮುಂದಕ್ಕೂ ಚಲಿಸುವ ಸಾಧ್ಯತೆಯಿಲ್ಲದೇ ರಸ್ತೆಯ ನಡುಮಧ್ಯದಲ್ಲಿ ಸಿಕ್ಕಿ ಬಿದ್ದಿದ್ದಳು. ಪಕ್ಕದ ಮನೆಯವರು ನೋಡಿ, ಸ್ಕರ್ಟ್ ವಿಮೋಚನೆಗಾಗಿ ಪ್ರಯತ್ನಿಸಿದರೂ ಫಲಿತಾಂಶ ಶೂನ್ಯ. ಜೊತೆಗೆ ಸತತವಾಗಿ ಹೋಗಿ ಬರುವವರೆದುರ ಎದುರು ಒಂದು ರೀತಿಯ ಅಪಮಾನ. ಕೊನೆಗೆ ಉಪಾಯಗಾಣದೇ ಕತ್ತರಿಯೊಂದನ್ನು ತಂದು, ಗಾಲಿಗುಂಟ ಸ್ಕರ್ಟ್ ಕತ್ತರಿಸಿ ಅದಕ್ಕೆ ಮುಕ್ತಿ ಕೊಟ್ಟದ್ದಾಯಿತು. ಆದರೆ ಹರಿದ ಬಟ್ಟೆಯಲ್ಲಿ ತಿರುಗಾಡುವದು ಆಗ ಇನ್ನೂ ಫ್ಯಾಷನ್ ಆಗಿರಲಿಲ್ಲ. ಅವಳಿಗೆ ಸಹಾಯ ಮಾಡಿದವರ ಮನೆಗೇ ಹೋಗಿ ನಾಲ್ಕೈದು ಪಿನ್ನುಗಳನ್ನು ಪಡೆದು ಕತ್ತರಿಸಿದ ಅಂಚಿನಗುಂಟ ಹಾಕಿ, ಆ ಭಾಗ ಕಾಣದಂತೆ ಮನೆಗೆ ಬಂದದ್ದೊಂದು ಇಂದಿಗೂ ಕಣ್ಮುಂದಿದೆ.

ಆ ಘಟನೆ ಈಗೇನಾದರೂ ಆಗಿದ್ದರೆ ಒಂದು ಬದಿಯಲ್ಲಿ ಗೋಲಾಕಾರದಲ್ಲಿ ಸ್ಕರ್ಟ್ ಕತ್ತರಿಸಿ ಧರಿಸುವುದು Overnight fashion ಆಗಿ ಮಾರ್ಪಟ್ಟಿರುತ್ತಿತ್ತೋ ಏನೋ. ಹರಿದ ಬಟ್ಟೆ ಧರಿಸುವುದು ಭಿಕ್ಷೆ ಬೇಡುವವರ ಹೀನಸ್ಥಿತಿ ಎಂದು ತಿಳಿಯುವ ಕಾಲವೊಂದಿತ್ತು. ನಂತರ ತೋಳಿಲ್ಲದ, ಬೆನ್ನಿಲ್ಲದ, ಪೂರ್ಣ ಭುಜಗಳಿಲ್ಲದ ಬ್ಲೌಸುಗಳ ಬಳಕೆ ಬಂದವು. ಈಗ ಹರಿದ ಬಟ್ಟೆಗಳನ್ನಲ್ಲ, ಹೊಸ ಬಟ್ಟೆಗಳನ್ನೇ ಹರಿದು ಧರಿಸುವ Trend ಶುರುವಾಗಿದೆ. ನಾನದನ್ನು ಟೀಕಿಸುತ್ತಿಲ್ಲ. ಬದಲಾದ ಉಡುಪುಗಳ ಧಾರಣ ಶೈಲಿಯ ಬಗ್ಗೆ ಮಾತ್ರ ನನ್ನ ಅನಿಸಿಕೆ. ಜೀವನದಲ್ಲಿ ಯಾವುದೂ ಶಾಶ್ವತವಲ್ಲ ಎಂಬುದನ್ನು ಕಾಣುತ್ತಲೇ ಬಂದಿದ್ದೇವೆ. ಇಂದಿನದು ನಾಳೆಗೆ ಹಳತಾಗುವ ವೇಗದ ಬದುಕು ನಮ್ಮದು. ಕೆಲವೇ ದಿನಗಳಲ್ಲಿ ಇದರ ಸ್ಥಾನವನ್ನು ಮತ್ತಾವುದೋ ಪಡೆದುಕೊಳ್ಳುತ್ತದೆ. ಆ Fashion ನ ನಿಲುವು ಒಪ್ಪದವರ ಅನಿಸಿಕೆ, ಟೀಕೆ, ಟಿಪ್ಪಣಿಗಳು ಕೆಲಕಾಲ ಹರಿದಾಡುತ್ತವೆ. ಕೆಲಕಾಲ ಸದ್ದು ಮಾಡಿ ನೇಪಥ್ಯಕ್ಕೆ ಸರಿದು ಹೊಸದೊಂದು ರೀತಿಗೆ, ಹೊಸದೊಂದು ನೀತಿಗೆ ದಾರಿ ಮಾಡಿ ಜಾಗ ಖಾಲಿ ಮಾಡುತ್ತವೆ. ಅದು ಹರಿಯುವ ನದಿಯಿದ್ದಂತೆ. ಬೀಸುವ ಗಾಳಿಯಂತೆ. ಮುಂದೆ ಮುಂದೆ ನಿರಂತರವಾಗಿ ಚಲಿಸುವ ಕಾಲಚಕ್ರವಿದ್ದಂತೆ. ಅವುಗಳ ಮೇಲೆ ಯಾರದೇ, ಯಾವುದೇ ಜೋರು ನಡೆಯದು.

ಸುಮ್ಮಸುಮ್ಮನೆ ಜೋರು ಮಾಡಿದರೆ, ಅಸಮಂಜಸವಾದುದನ್ನು ಹೇರಲು ನೋಡಿದರೆ, ಮೂಲೆಸೇರಿ ಸದಾ ವಟಗುಡುವ ಅಡಗೂಲಜ್ಜಅಜ್ಜಿಯಂದಿರು ಎಂಬ ಹಣೆಪಟ್ಟಿ ಕಟ್ಟಿಕೊಳ್ಳಬೇಕಾಗುತ್ತದೆ. ಚಲಾವಣೆಯಿಲ್ಲದ ಚಿಲ್ಲರೆ ನಾಣ್ಯಗಳಾಗಿ ಅಟ್ಟ ಸೇರೋದು ಬೇಡ ಅಲ್ಲವೆ ರಾವತ್ವ ಅವರೇ

***

ಪರಿಚಯ: ಕೃಷ್ಣಾ ಕೌಲಗಿಯವರು ಈತನಕ ಮುನ್ನೂರು ರೇಡಿಯೋ ಕಾರ್ಯಕ್ರಮಗಳಲ್ಲಿ ಭಾಗಿ. ‘ಚೌಚೌಪದಿ’, ‘ಆಣೆಕಲ್ಲುಗಳು’ ಕವನ ಸಂಕಲನಗಳು, ‘ನೀರಮೇಲೆ ಅಲೆಯ ಉಂಗುರ’ ಲಘುಬರಹಗಳ ಸಂಕಲನ ಪ್ರಕಟಗೊಂಡಿವೆ. ‘ತುಂತುರು ಇಲ್ಲಿ ನೀರ ಹಾಡು’ ಲಘುಬರಹಗಳ ಸಂಕಲನ ಸದ್ಯದಲ್ಲೇ ಪ್ರಕಟಗೊಳ್ಳಲಿದೆ.

ಇದನ್ನೂ ಓದಿ : Ripped Jeans;ತಿರತ್​ ಸಿಂಗ್ ರಾವತ್ ಅವರಿಗೊಂದು ಪತ್ರ: ಹೆಣ್ಣುಮಕ್ಕಳ ಆರೋಗ್ಯ ಮತ್ತು ಶಿಕ್ಷಣ ಸಮಾನತೆಯ ಬಗ್ಗೆ ಯೋಚಿಸಬೇಕೆನ್ನಿಸುತ್ತಿಲ್ಲವೆ? 

Published On - 4:08 pm, Sat, 20 March 21

ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್