Poetry; ಅವಿತಕವಿತೆ : ಅದು ಯಾಕೆ ಬೆಕ್ಕು ಮಾತ್ರ ಇನ್ನೂ ಕಳ್ಳಬೆಕ್ಕು?

ಸಂಗೀತಗಾರನಿಗೆ ನೀನೇಕೆ ಹಾಡುತ್ತಿ ಅಂತ ಯಾರೂ ಕೇಳುವುದಿಲ್ಲ. ಸಚಿನ್ ತೆಂಡುಲ್ಕರನನ್ನು ಯಾರೂ ನೀನೇಕೆ ಕ್ರಿಕೆಟ್ ಆಡುತ್ತೀಯ ಅಂತ ಕೇಳುವುದಿಲ್ಲ.  ನಟ ನಟಿಯರನ್ನೂ ನೀವು ನಟನೆಯಲ್ಲದೆ ಬೇರೇನು ಮಾಡುತ್ತಿದ್ದಿರಿ ಅಂತ ಕೇಳುತ್ತಾರೆ. ಅದು ಯಾಕೆ ಬರಹಗಾರನಿಗೆ ಮಾತ್ರ ನೀನೇಕೆ ಬರೆಯುತ್ತೀಯಾ ಅಥವಾ ನಾನೇಕೆ ಬರೆಯುತ್ತೇನೆ ಅನ್ನುವ ಪ್ರಶ್ನೆ ಎದುರಾಗುತ್ತದೆಯೋ ಗೊತ್ತಿಲ್ಲ. ಈ ಪ್ರಶ್ನೆಗೆ ನಾನೂ ಈ ಮೊದಲು ಏನೇನೊ ಉತ್ತರ ಹುಡುಕುವ ಅಥವಾ ಪ್ರಚಲಿತ ಉತ್ತರಗಳನ್ನು ಗಂಟುಹಾಕಿಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಇತ್ತೀಚೆಗೆ ಅದರ ಬಗ್ಗೆ ವೀಶೇಷವಾಗಿ ಏನೂ ಯೋಚಿಸುವುದಿಲ್ಲ. ಕವಿತೆಗಳು ಬಂದಿವೆ. ಬರೆದಿರುವೆ. ಓದಿ ಸ್ಪಂದಿಸಿದರೆ ಸಂತೋಷ. ಕವಿತೆ ಎಂಬುದು ನನಗೆ ವಿವರಣೆಗೆ ಮೀರಿದ ಅನುಭವದ ರುಚಿ.‘ ವಿಕ್ರಮ ಹತ್ವಾರ

Poetry; ಅವಿತಕವಿತೆ : ಅದು ಯಾಕೆ ಬೆಕ್ಕು ಮಾತ್ರ ಇನ್ನೂ ಕಳ್ಳಬೆಕ್ಕು?
ವಿಕ್ರಮ ಹತ್ವಾರ
Follow us
ಶ್ರೀದೇವಿ ಕಳಸದ
|

Updated on:Mar 21, 2021 | 10:47 AM

ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಈಗಿಲ್ಲಿ ಕವಿ ವಿಕ್ರಮ ಹತ್ವಾರ ಅವರ ಕವಿತೆಗಳು ನಿಮ್ಮ ಓದಿಗೆ. ಇಂದು ಇವರ ‘ಮೆಟ್ರೋ ಝೆನ್​’ ಕವನ ಸಂಕಲನ ಅಂಕಿತ ಪುಸ್ತಕದಿಂದ ಬಿಡುಗಡೆಗೊಳ್ಳುತ್ತಿದೆ. 

ಪರಿಕಲ್ಪನೆ : ಶ್ರೀದೇವಿ ಕಳಸದ

ಕಾವ್ಯವೆಂದರೆ ಯಾವುದೋ ಪೂರ್ವನಿಶ್ಚಿತ ಆಲೋಚನೆಯನ್ನು ಭಾಷೆಯಲ್ಲಿ ಹೇಳಿಮುಗಿಸುವ ಕೆಲಸವಲ್ಲ, ಅದು ಆಲೋಚನೆಯನ್ನು ಕಟ್ಟುವ ಒಂದು ಪ್ರಯತ್ನ. ಅಥವಾ, ಇಂಥ ಭಾವವು ಇಂಥವರಿಗೆ ಇಂಥಿಂಥ ಬಗೆಯಲ್ಲಿ ಮುಟ್ಟಲಿ ಎಂದೂ ಯೋಚಿಸಿ ನಿರ್ಮಿಸುವಂಥದಲ್ಲ, ಹಠಾತ್ತನೆ ಮೂಡುವ ಭಾವಗಳನ್ನು ಹಿಡಿಯಲು ಕಸರತ್ತು ನಡೆಸುತ್ತಲೇ, ಅದರ ಅಪೂರ್ಣತೆಯು ಇನ್ನೊಬ್ಬರ ಓದಿನಲ್ಲಿ ಪೂರ್ಣಗೊಂಡೀತೇ ಎಂಬ ಹಂಬಲ.

ವಿಕ್ರಮ ಹತ್ವಾರ ಅವರ ಪದ್ಯಗಳನ್ನು ಓದಿದಾಗ, ಕಾವ್ಯವನ್ನು ಕುರಿತ ಈ ಆಲೋಚನೆಗಳು ಮೇಲೆದ್ದು ಬರುವ ಮೂಲಕವೇ ನನಗೂ ಅವರಿಗೂ ನಡುವೆ ಒಂದು ಸಂಪರ್ಕ ಏರ್ಪಟ್ಟಿತು. ಅವರ ಒಂದು ಕವನವೇ ಹೇಳಿರುವಂತೆ, ಅದೊಂದು ಆಡುಮಣೆಯ ಆಟ; ಅಥವಾ ಇನ್ನೊಂದು ಸಾಲು ಹೇಳುವಂತೆ ಕ್ಷಣಿಕಗಳ ಮೆರವಣಿಗೆಯೊಳಗೇ ಅಪರೂಪಕ್ಕೆ ಕಂಡು ದಂಗುಬಡಿಸುವ ಶಾಶ್ವತದ ಆಕಾಂಕ್ಷೆ. ಅಥವಾ, ಅವರದ್ದೇ ಇನ್ನೊಂದು ಮಾತು – ಅದು ಹೆಸರಿಲ್ಲದ ನಂಬರಿನಿಂದ ಬರುವ ಒಂದು ಕರೆ. ಅದು ತಾಗಿಯೇಬಿಡುತ್ತದೆ ಎಂಬುದು ಖಾತ್ರಿಯಿಲ್ಲವಾದರೂ ಒಮ್ಮೆ ತಾಗಿದರೆ, ಆಗ ವ್ಯಾಪ್ತಿಪ್ರದೇಶದ ಹೊರಗಿರುವ ಇನ್ನೊಂದು ಮನಸ್ಸನ್ನು ಅಚಾನಕ್ಕಾಗಿ ಸಂಧಿಸುವ ಅವಕಾಶ. ಹಾಗೆ ಸಂಧಿಸಿದರೆ, ಅವರದೇ ಇನ್ನೊಂದು ಕವಿತೆ ಉಪಮಿಸುವಂತೆ, ನಡುರಾತ್ರಿಯ ಹೊತ್ತು ಫುಟ್-ಪಾತಿನ ಮೇಲೆ ನಡೆಯುವ ಇಬ್ಬರು ಹುಚ್ಚರ ನಡುವಿನ ಸಂವಾದ. ಅದು ಅವರಿಬ್ಬರ ಭವಿಷ್ಯವನ್ನು ಬದಲಿಸಬಲ್ಲ ಒಂದು ವ್ಯವಹಾರವೂ ಆಗಬಹುದು, ಅಥವಾ, ಸುಮ್ಮನೆ ಕೈಕಾಲಾಡಿಸುತ್ತ ಹೊತ್ತು ಕಳೆದದ್ದೂ ಆಗಬಹುದು. ವಿಕ್ರಮ ಅವರ ಕಾವ್ಯವೆಂಬುದು ಸಂಯೋಗದ ಸಂಭವನೀಯತೆಯನ್ನು ಸದಾ ತೆರೆದಿಟ್ಟುಕೊಂಡ ಖಾಯಂ ವಿರಹ. ಅಕ್ಷರ ಕೆ.ವಿ. 

‘ಆ ಮಾತು ಬೇರೆ’ ಎನ್ನುತ್ತೇವಲ್ಲ ಅಂಥ ಬೇರೆ ಮಾತುಗಳ ತಣ್ಣನೆಯ ಉಸಿರು ಇಲ್ಲಿನ ಕವಿತೆಗಳಲ್ಲಿ ತಾಕುತ್ತಿದೆ. ವಿಕ್ರಮ ಕವಿತೆಗಳು ಒಳ-ಹೊರಗೆ ತುಯ್ಯುತ್ತಿವೆ. ಈ ತುಯ್ದಾಟ ನಮ್ಮನ್ನೂ ಇದ್ದಲ್ಲಿ ಇರಗೊಡುವುದಿಲ್ಲ. ಲಕ್ಷ್ಮೀಶ ತೋಳ್ಪಾಡಿ

***

ಆಡುಮಣೆ

ವರ್ಷಗಳ ಬಳಿಕ ಸಿಕ್ಕ ಗೆಳೆಯ ಆದಂತಿರಲಿಲ್ಲ ತುಂಬ ಹಳೆಯ ದೂರವಿರುವಂತೆ ನಡುವಯಸ್ಸಿನ ಗೆರೆ ಮರೆಯಾಗಿದ್ದವು ಕೂದಲ ನೆರೆ ಕಂಡೊಡನೆ ಅಪ್ಪುಗೆ ಕುಂದಿರಲಿಲ್ಲ ಅಕ್ಕರೆ ಅದೇ ನಗು ಅದೇ ಬಿರುಸು ನೇರ ಬೆನ್ನು ಕೊಂಕು ಮಾತು ನೀಲಿ ಕಣ್ಣು ಪೋಲಿ ನೋಟ ನಿರಾಳ ನಡಿಗೆ ಅದೆ ಅದೆ ಸೆಟೆದೆದೆ ಎದುರಾದೆವು ಮತ್ತೊಮ್ಮೆ ಇನ್ನೂ ನಿಂತಿರುವ ಹಾಗೆ ಕಾಲೇಜಿನೆದುರೆ

ಮಾತಿಗೆ ಮಾತು ಬೆರೆತು ಖಾಲಿಯಾದಂತೆ ಗ್ಲಾಸು ತುಂಬಿ ಬಂದಿತು ನೆನಪು ಅವನು ಹೇಳಿದ ಕೆಲ ಘಟನೆಗಳು ನೆನಪಾಗಲಿಲ್ಲ ನನ್ನವು ಹೊಳೆಯಲಿಲ್ಲ ಅವನಿಗೆ ಮುದ್ರೆಯೊತ್ತಿದ್ದ ಮುಖಕ್ಕೆ ಹೆಸರು ಸಿಗಲಿಲ್ಲ ಕೇಳಿದ ಕೆಲ ಹೆಸರುಗಳಿಗೆ ಮುಖವಿರಲಿಲ್ಲ ಒಬ್ಬರ ಸ್ಮೃತಿ ಮತ್ತೊಬ್ಬರ ವಿಸ್ಮೃತಿ ಯ ಪ್ರತಿಫಲಿಸಿ ಭಯ, ಅನುಮಾನ, ಮುಜುಗರ ಒಂದೊಂದು ಖಾಲಿ ಜಾಗ ಕಂಡಾಗಲೂ ಪೇಚಾಡಿದೆವು ಬಿಟ್ಟ ಸ್ಥಳ ತುಂಬಲು

ಕಾದು, ಹುಡುಕಿ, ಹಿಡಿದು ಅಂತೂ ಸಿಕ್ಕಿತು ಇಬ್ಬರಿಗೂ ಎರಡು ಸೀಟಿನ ಒಂದೇ ಆಡುಮಣೆ ನಾನೊಂದು ಬದಿ ಅವನೊಂದು ಬದಿ ನನ್ನ ನೆನಪಿನಲಿ ಅವನ ಮೇಲೆತ್ತಿ ಅವನ ನೆನಪಿನ ಒತ್ತಿನಲಿ ನನ್ನ ಮೇಲೆತ್ತಿ ಕಾಲದ ದಿಣ್ಣೆಯ ಮೇಲೆ ಓಲಾಡಿದೆವು ಬೇಡವೆಂದು ತಳ್ಳಿದರೂ ಕೊನೆಗೆ ಅದೇ ಹುಡುಗಿಯ ಜಾಡು ಹಿಡಿದೆವು ಅವನಿಗೆ ಹೇಗೋ ತಿಳಿಯದು ನನಗೊಂದೆ ಉರುಲು ಸುತ್ತುವುದು- ಇದರಲಿ ಎಷ್ಟು ಮಾತುಗಳು ಈ ಮೊದಲು ಸಿಕ್ಕಾಗಲೂ ಆಡಿರುವಂಥದು?

ಇನ್ನೆಂದು ಬರುವುದೋ ಹಾಲೆಂಡಿನಿಂದ ಈ ಬಾರಿ ಬಿಲ್ಲು ತನಗಿರಲಿ ಎಂದ ಟಿಪ್ಪು ಇಲ್ಲಿ ಯಾವ ಲೆಕ್ಕ ಕೇಳಿ ಎಣಿಸಿ ಇಟ್ಟ ರೊಕ್ಕ

avitha kavithe

ವಿಕ್ರಮ ಹತ್ವಾರ ಕೈಬರಹದೊಂದಿಗೆ

ಸಂಗೀತಗಾರನಿಗೆ ನೀನೇಕೆ ಹಾಡುತ್ತಿ ಅಂತ ಯಾರೂ ಕೇಳುವುದಿಲ್ಲ. ಸಚಿನ್ ತೆಂಡುಲ್ಕರನನ್ನು ಯಾರೂ ನೀನೇಕೆ ಕ್ರಿಕೆಟ್ ಆಡುತ್ತೀಯ ಅಂತ ಕೇಳುವುದಿಲ್ಲ.  ನಟ ನಟಿಯರನ್ನೂ ನೀವು ನಟನೆಯಲ್ಲದೆ ಬೇರೇನು ಮಾಡುತ್ತಿದ್ದಿರಿ ಅಂತ ಕೇಳುತ್ತಾರೆ. ಅದು ಯಾಕೆ ಬರಹಗಾರನಿಗೆ ಮಾತ್ರ ನೀನೇಕೆ ಬರೆಯುತ್ತೀಯಾ ಅಥವಾ ನಾನೇಕೆ ಬರೆಯುತ್ತೇನೆ ಅನ್ನುವ ಪ್ರಶ್ನೆ ಎದುರಾಗುತ್ತದೆಯೋ ಗೊತ್ತಿಲ್ಲ. ಈ ಪ್ರಶ್ನೆಗೆ ನಾನೂ ಈ ಮೊದಲು ಏನೇನೊ ಉತ್ತರ ಹುಡುಕುವ ಅಥವಾ ಪ್ರಚಲಿತ ಉತ್ತರಗಳನ್ನು ಗಂಟುಹಾಕಿಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಇತ್ತೀಚೆಗೆ ಅದರ ಬಗ್ಗೆ ವೀಶೇಷವಾಗಿ ಏನೂ ಯೋಚಿಸುವುದಿಲ್ಲ. ಕವಿತೆಗಳು ಬಂದಿವೆ. ಬರೆದಿರುವೆ. ಓದಿ ಸ್ಪಂದಿಸಿದರೆ ಸಂತೋಷ. ಕವಿತೆ ಎಂಬುದು ನನಗೆ ವಿವರಣೆಗೆ ಮೀರಿದ ಅನುಭವದ ರುಚಿ.

ಮೊದಲ ನೋಟ

ಅಶಾಂತ ಸಂತೆಗಳಲಿ ನಿಶಾಂತ ರಾತ್ರಿಗಳಲಿ ಸುಳಿವಿರದೆ ಸಂಧಿಸಿರುವೆ ಆಗಾಗ ಅಲ್ಲಲ್ಲಿ

ತಿಳಿತಿಳಿದೂ ಅಳುಕಿನಲಿ ಕಣ್ಣು ತಪ್ಪಿಸುವ ಆಟವಿರದೆ ಇರದೆ ಎದೆ ಕಳಕುವ ಬಿಡಿಗಣ್ಣ ಇರಾದೆ ಒದಗಿಬಂದ ಒಂದು ಆಕಸ್ಮಿಕ ಕ್ಷಣ – ನಿನ್ನ ಕಣ್ಣಿರುವಿನಲಿ ನಾನು ನನ್ನ ಕಣ್ಣಿರುವಿನಲಿ ನೀನು ನಮಗೆ ನಾವೇ ಎದುರಾಗಿ ನಿಶ್ಚಲ ನಿಂತೆವು ಮಿಲಿಯ ಸಂವತ್ಸರ ಹಿಂದಿನ ಮಿಲನದಾಲಸ ರೆಪ್ಪೆಗಳ ಮೇಲೇರಿ ಈ ಗಳಿಗೆಯಲಿ ಹಾಕಿ ಒಂದು ಮುಳುಗು ಇನ್ನೆಂದೂ ನಮ್ಮ ಕಣ್ಣುಗಳು ಕೂಡಲಿಲ್ಲ ಮೊದಲ ನೋಟವೇ ಕೊನೆಯದೂ

ಶಾಶ್ವತದ ಆಕಾಂಕ್ಷೆಯನು ಮೆಟ್ಟಿ ಸಾಗಿದೆ ಇಂಥ ನೂರಾರು ಕ್ಷಣಿಕಗಳ ಮೆರವಣಿಗೆ

avitha kavithe

ವಿಕ್ರಮ ಹತ್ವಾರ ಅವರ ಪುಸ್ತಕಗಳು

ಕಳ್ಳಬೆಕ್ಕು

ಕಾಳುಗಳ ಒಣಹಾಕಿ ಕಾಯುತ್ತ ಕುಳಿತಾಗ ಮೂಲೆಯಲಿ ಕಂಡಿತೊಂದು ಮಲಗಿರುವ ಬೆಕ್ಕು ಕಣ್ಣ ಮುಚ್ಚಿತ್ತು ಹಾಲು ಕುಡಿವಾಗಿನ ಹಾಗೆ ನಿದ್ದೆಯೆಂಬುದೂ ಬೆಕ್ಕಿಗೆ ಬರಿಯ ಸೋಗೆ

ನಾಯಿ ಕಸಿದು ತಿಂದರೂ ದನ ಹದ್ದು ಮೀರಿ ಮೇಯ್ದರೂ ಗುಬ್ಬಿ ಕಾಗೆ ಪಾರಿವಾಳಗಳು ಹೆಕ್ಕಿ ಒಯ್ದರೂ ಕವಿಗಳು ನಿಡುಗಾಲದಿಂದ ಬೆಕ್ಕಿನ ಕುರಿತು ಏನೆಲ್ಲ ಬರೆಯುತಿದ್ದರೂ ಅದು ಯಾಕೆ ಬೆಕ್ಕು ಮಾತ್ರ ಇನ್ನೂ ಕಳ್ಳಬೆಕ್ಕು?

ಕುತೂಹಲವೇ ಇರದಂತೆ ಸುಮ್ಮನೆ ಮಲಗಿದೆ ನಾನಿರದಿದ್ದರೂ ಕದಿಯುತಿರಲಿಲ್ಲ ಎಂಬಂತೆ. ತಿಳಿದಿದೆಯೇ ಅವುಗಳಿಗೆ ಇದು ಕಳ್ಳತನ ಇದು ಅಲ್ಲ ಎಂದು? ಯಾರು ನೋಡಿದರೇನು ನೋಡದಿದ್ದರೇನು – ಅಷ್ಟು ಹತ್ತಿರದಲಿ ಬಾಗಿದಾಗ ಹಾಲಿನ ಬಿಳಿ ಬಿಸಿಲಿನಂತೆ ಚುಚ್ಚಿ ಕುಡಿಯುತಿರಬಹುದು ಬೆಕ್ಕು ಕಣ್ಣ ಮುಚ್ಚಿ

***

ಪರಿಚಯ : ‘ಇದೇ ಇರಬೇಕು ಕವಿತೆ’, ‘ಅಕ್ಷೀ ಎಂದಿತು ವೃಕ್ಷ!’ ಎಂಬ ಕವನ ಸಂಕಲನ, ‘ಝೀರೋ ಮತ್ತು ಒಂದು’, ‘ಹಮಾರಾ ಬಜಾಜ್’ ಎಂಬ ಕಥಾ ಸಂಕಲನ, ‘ನೀ ಮಾಯೆಯೊಳಗೋ..’ ಎಂಬ ಪ್ರಬಂಧ ಸಂಕಲನ ಪ್ರಕಟಗೊಂಡಿದೆ. ಸಂಸೃತಿ ಚಿಂತನೆ, ವಿಮರ್ಶೆ, ಸಂಗೀತ, ಸಿನಿಮಾಗಳಲ್ಲಿ ಆಸಕ್ತಿ. ಇವರ ಕತೆಯೊಂದು ‘ನಿರುತ್ತರ’ ಎಂಬ ಸಿನಿಮಾ ಆಗಿ ರೂಪಾಂತರಗೊಂಡಿದೆ. ‘ಪ್ರಕೃತಿ’ ಪ್ರಕಾಶನದ ಮೂಲಕ ಪುಸ್ತಕ ಪ್ರಕಟನೆಯಲ್ಲಿ ತೊಡಗಿದ್ದಾರೆ. ‘ಝೀರೋ ಮತ್ತು ಒಂದು’ ಕಥಾ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ 2016ನೇ ಸಾಲಿನ ಯುವ ಪುರಸ್ಕಾರ ದೊರೆತಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ‘ಅರಳು ಸಾಹಿತ್ಯ’ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದಾರೆ. ಇವರ ಕತೆ-ಕವನಗಳು ಹಲವು ಪತ್ರಿಕೆಗಳ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿವೆ.

ಇದನ್ನೂ ಓದಿ : Poetry; ಅವಿತಕವಿತೆ: ಥಣಾರನೆ ಕೋಲ್ಮಿಂಚು ಕುಳಿಯೊಳಗೆ ಬೆಳಕು

Published On - 10:42 am, Sun, 21 March 21

ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ