ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು, ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾದ ಕಿಮ್ಸ್
ಹುಬ್ಬಳ್ಳಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಗೂಡ್ಸ್ ವಾಹನ ಲಾರಿಗೆ ಡಿಕ್ಕಿ ಹೊಡೆದು ನಾಲ್ವರು ಸಿಲುಕಿಕೊಂಡಿದ್ದರು. ಈ ವೇಳೆ, ಮೊಹಮದ್ ಸಮಿ, ಅತಿಕ್ ಮತ್ತು ಕಪೀಲ್ ಎಂಬ ಮೂವರು ಯುವಕರು ತಮ್ಮ ಧೈರ್ಯದಿಂದ ನಾಲ್ವರನ್ನು ರಕ್ಷಿಸಿದ್ದಾರೆ. ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕರ ಮಾನವೀಯತೆಗೆ ಗಾಯಾಳುಗಳ ಕುಟುಂಬಸ್ಥರು ಧನ್ಯವಾದ ತಿಳಿಸಿದ್ದಾರೆ.
ಹುಬ್ಬಳ್ಳಿ, ಮಾರ್ಚ್ 28: ರಸ್ತೆ ಅಪಘತಾದಲ್ಲಿ ಗಾಯಗೊಂಡಿದ್ದವರ ಪ್ರಾಣ ಉಳಿಸುವ ಮೂಲಕ ಮೂಲಕ ಮೂವರು ಯುವಕರು ಮಾನವೀಯತೆ ಮೆರೆದಿದ್ದಾರೆ. ಸಂಜಯ್, ಸಂತೋಷ್ ಗೌರೀಶ್ ಹಾಗೂ ಆಲರೀಕ್ ಗಾಯಗೊಂಡವರು. ಮೊಹಮದ್ ಸಮಿ, ಅತಿಕ್ ಹಾಗೂ ಕಪೀಲ್ ನಾಲ್ವರ ಪ್ರಾಣ ಉಳಿಸಿದವರು. ಗಾಯಗೊಂಡವರನ್ನು ಹುಬ್ಬಳ್ಳಿಯ (Hubballi) ಕಿಮ್ಸ್ ಆಸ್ಪತ್ರೆಗೆ (Kims Hospital) ದಾಖಲಿಸಲಾಗಿದೆ. ಶುಕ್ರವಾರ (ಮಾ.28) ಬೆಳಗಿನ ಜಾವ 5 ಗಂಟೆ ಸುಮಾರಿಗೆ ಹುಬ್ಬಳ್ಳಿಯಿಂದ ಹೊನ್ನಾವರಕ್ಕೆ ಹೊರಟಿದ್ದ ಗೂಡ್ಸ್ ವಾಹನ ಅಂಚಟಗೇರಿ ಬಳಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ವಾಹನದಲ್ಲಿ ನಾಲ್ವರೂ ಸಿಲುಕಿ ಹಾಕಿಕೊಂಡಿದ್ದರು.
ಈ ವೇಳೆ, ಇದೇ ದಾರಿಯಲ್ಲಿ ಹೊರಟಿದ್ದ ಮೊಹಮದ್ ಸಮಿ, ಅತಿಕ್ ಹಾಗೂ ಕಪೀಲ್ ನಾಲ್ವರು ಯುವಕರು ಅವರನ್ನು ವಾಹನದೊಳಗಿನಿಂದ ಹೊರ ತೆಗೆದು ರಕ್ಷಿಸಿದ್ದಾರೆ. ಸಕಾಲಕ್ಕೆ ಆಂಬ್ಯುಲೆನ್ಸ್ ಬಾರದ ಹಿನ್ನೆಲೆಯಲ್ಲಿ ಕೊನೆಗೆ ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದರು. ಪ್ರಾಣ ಉಳಿಸಿದ ಮೂವರು ಯುವಕರನ್ನು ತಬ್ಬಿಕೊಂಡು ಗಾಯಗೊಂಡವರ ಪೋಷಕರು ಕಣ್ಣೀರು ಹಾಕಿ, ಧನ್ಯವಾದ ತಿಳಿಸಿದರು. ಈ ಮೂಲಕ ಕಿಮ್ಸ್ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಯಿತು.