IPL 2025: ದೋಸೆ, ಇಡ್ಲಿ, ಸಾಂಬಾರ್, ಚಟ್ನಿ.. RCB ಆಟಗಾರನನ್ನು ಗೇಲಿ ಮಾಡಿದ CSK; ವಿಡಿಯೋ
RCB vs CSK IPL 2025: ಆರ್ಸಿಬಿ ಮತ್ತು ಸಿಎಸ್‌ಕೆ ನಡುವಿನ ಐಪಿಎಲ್ 2025 ಪಂದ್ಯದಲ್ಲಿ ಆರ್ಸಿಬಿ ಆಟಗಾರ ಜಿತೇಶ್ ಶರ್ಮಾ ಅವರು ಔಟ್ ಆದ ನಂತರ ಚೆನ್ನೈ ಅಭಿಮಾನಿಗಳು ಅವರನ್ನು "ದೋಸೆ, ಇಡ್ಲಿ, ಸಾಂಬಾರ್, ಚಟ್ನಿ" ಹಾಡಿಂದ ಗೇಲಿ ಮಾಡಿದರು. ಇದು ಜಿತೇಶ್ ಶರ್ಮಾ ಅವರು ಚೆನ್ನೈ ಬಗ್ಗೆ ಮಾಡಿದ್ದ ಹಾಸ್ಯದ ಪ್ರತಿಕ್ರಿಯೆಯಾಗಿದೆ.

ಐಪಿಎಲ್‌ನಲ್ಲಿ (IPL 2025) ಆರ್ಸಿಬಿ ಹಾಗೂ ಸಿಎಸ್‌ಕೆ (RCB vs CSK) ನಡುವಿನ ಕಾಳಗವೆಂದರೆ ಅದು ಅಭಿಮಾನಿಗಳಿಗೆ ಹಬ್ಬದೂಟವಿದ್ದಂತೆ. ಉಭಯ ತಂಡಗಳಿಂದ ಸಿಡಿಯುವ ಪ್ರತಿಯೊಂದು ಸಿಕ್ಸರ್, ಬೌಂಡರಿಗಳು ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತದೆ. ಇದೀಗ ನಡೆಯುತ್ತಿರುವ 2025 ರ ಐಪಿಎಲ್ನ 8ನೇ ಪಂದ್ಯವೂ ಇದಕ್ಕೆ ಸಾಕ್ಷಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 197 ರನ್ ಕಲೆಹಾಕಿತು. ತಂಡದ ಪರ ನಾಯಕ ರಜತ್ ಅರ್ಧಶತಕ ಸಿಡಿಸಿದರೆ, ಫಿಲ್ ಸಾಲ್ಟ್ ಹಾಗೂ ಟಿಮ್ ಡೇವಿಡ್ ಕೂಡ ಉತ್ತಮ ಕೊಡುಗೆ ನೀಡಿದರು. ಇದು ಒಂದೆಡೆಯಾದರೆ, ಮತ್ತೊಂದೆಡೆ ಆರ್ಸಿಬಿ ಆಟಗಾರನನ್ನು ಚೆನ್ನೈ ಮೈದಾನದಲ್ಲಿ ಗೇಲಿ ಮಾಡಿದ ಪ್ರಸಂಗವೂ ನಡೆಯಿತು.
ಜಿತೇಶ್ರನ್ನು ಗೇಲಿ ಮಾಡಿದ ಡಿಜೆ
ಅಷ್ಟಕ್ಕೂ ನಡೆದಿದ್ದೇನೆಂದರೆ, ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 15.2 ಓವರ್‌ಗಳಲ್ಲಿ 145 ರನ್‌ಗಳಿಗೆ ತನ್ನ ಐದನೇ ವಿಕೆಟ್ ಕಳೆದುಕೊಂಡಿತು. ಹೀಗಾಗಿ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾ 6 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬಂದರು. ಆದರೆ ಅವರು ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗಲಿಲ್ಲ. ಕೇವಲ 6 ಎಸೆತಗಳನ್ನು ಎದುರಿಸಿದ ಜಿತೇಶ್ 12 ರನ್ ಗಳಿಸಿ ಖಲೀಲ್ ಅಹ್ಮದ್‌ಗೆ ಬಲಿಯಾದರು. ಅವರು ಔಟ್ ಆದ ನಂತರ ಪೆವಿಲಿಯನ್‌ಗೆ ಹಿಂತಿರುಗುತ್ತಿದ್ದಾಗ ಕ್ರೀಡಾಂಗಣದಲ್ಲಿ ಡಿಜೆ, ದೋಸೆ, ಇಡ್ಲಿ, ಸಾಂಬಾರ್, ಚಟ್ನಿ ಹಾಡನ್ನು ನುಡಿಸುವ ಮೂಲಕ ಜಿತೇಶ್ರನ್ನು ಗೇಲಿ ಮಾಡಲು ಪ್ರಯತ್ನಿಸಿದರು. ಹಾಡು ನುಡಿಸಲು ಪ್ರಾರಂಭಿಸುತ್ತಿದ್ದಂತೆ, ಕ್ರೀಡಾಂಗಣದಲ್ಲಿ ನೆರೆದಿದ್ದ ಸಿಎಸ್‌ಕೆ ಅಭಿಮಾನಿಗಳು ಕೂಗಲು ಪ್ರಾರಂಭಿಸಿದರು.
DJ playing ‘Dosa, Sambhar, Chutney, Chutney’ when Jitesh Sharma got out. pic.twitter.com/cTBde6hFB2
— Mufaddal Vohra (@mufaddal_vohra) March 28, 2025
ಸಾಕಷ್ಟು ವೈರಲ್ ಆಗಿದ್ದ ಜಿತೇಶ್ ಹಾಡು
ವಾಸ್ತವವಾಗಿ ಡಿಜೆ, ದೋಸೆ, ಇಡ್ಲಿ, ಸಾಂಬಾರ್, ಚಟ್ನಿ ಹಾಡನ್ನು ನುಡಿಸಲು ಹಿಂದಿರುವ ಕಾರಣವೆಂದರೆ, ಪಂದ್ಯಕ್ಕಾಗಿ ಬೆಂಗಳೂರಿನಿಂದ ಚೆನ್ನೈಗೆ ಪ್ರಯಾಣಿಸುವ ವೇಳೆ ಜಿತೇಶ್ ಶರ್ಮಾ ಬಳಿ, ಚೆನ್ನೈ ಎಂದರೆ ನಿಮಗೆ ಏನು ನೆನಪಿಗೆ ಬರುತ್ತದೆ ಎಂಬ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ್ದ ಜಿತೇಶ್, ‘ದೋಸೆ, ಇಡ್ಲಿ, ಸಾಂಬಾರ್, ಚಟ್ನಿ’ ಹಾಡಿನ ಮೂಲಕ ಚೆನ್ನೈ ಅಭಿಮಾನಿಗಳನ್ನು ಗೇಲಿ ಮಾಡಿದ್ದರು. ಅದಕ್ಕಾಗಿಯೇ ಜಿತೇಶ್ ಈ ಪಂದ್ಯದಲ್ಲಿ ಔಟಾದಾಗ ಡಿಜೆ ಈ ಹಾಡನ್ನು ನುಡಿಸುವ ಮೂಲಕ ಗೇಲಿ ಮಾಡಿದರು.
They ain’t holding back 😭😭 pic.twitter.com/Hk7oxO4De3
— Suprvirat (@ishantraj51) March 25, 2025
ಪಂದ್ಯ ಹೀಗಿದೆ
ಪಂದ್ಯದ ವಿಚಾರಕ್ಕೆ ಬರುವುದಾದರೆ.. ಈ ಸುದ್ದಿಯನ್ನು ಬರೆಯುವ ವೇಳೆಗೆ 197 ರನ್ಗಳ ಗುರಿ ಬೆನ್ನಟ್ಟಿರುವ ಸಿಎಸ್‌ಕೆ ಸೋಲಿನ ಸುಳಿಗೆ ಸಿಲುಕಿಕೊಂಡಿದೆ. ತಂಡ ಈಗಾಗಲೇ ಪ್ರಮುಖ 6 ವಿಕೆಟ್‌ಗಳನ್ನು ಕಳೆದುಕೊಂಡಿದ್ದು, 14 ಓವರ್ಗಳ ಮುಕ್ತಾಯಕ್ಕೆ ಕೇವಲ 88 ರನ್ ಕಲೆಹಾಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:52 pm, Fri, 28 March 25