ಬಂದಾಳ ಬಂದಾಳ ಸವದತ್ತಿ ಎಲ್ಲವ್ವ ಬಂದಾಳ ಬೆಂಗಳೂರಿಗೆ…

ಕೊರೋನಾ ಸಮಯದಲ್ಲಿ ಅವತರಿಸಿದ ಈ 'ಎಲ್ಲವ್ವ'ನನ್ನು ನೋಡಲು ಇಂದೇ ಸಂಜೆ ಸಂಸ ಬಯಲುರಂಗಮಂದಿರಕ್ಕೆ ಬಂದುಬಿಡಿ. ಅದಕ್ಕಿಂತ ಮೊದಲು ಜಾನಪದ ಗಾಯಕಿಯೊಬ್ಬರು ಈ ಏಕವ್ಯಕ್ತಿ ಪ್ರದರ್ಶನದ ಕೇಂದ್ರಬಿಂದುವಾಗಿದ್ದು ಹೇಗೆ ಎನ್ನುವುದನ್ನು ಇಲ್ಲಿ ಓದಿ.

ಬಂದಾಳ ಬಂದಾಳ ಸವದತ್ತಿ ಎಲ್ಲವ್ವ ಬಂದಾಳ ಬೆಂಗಳೂರಿಗೆ...
‘ಉಧೋ ಉಧೋ ಎಲ್ಲವ್ವ‘ ಏಕವ್ಯಕ್ತಿ ಪ್ರದರ್ಶನದಲ್ಲಿ ಕಲಾವಿದೆ ಸವಿತಾ.
ಶ್ರೀದೇವಿ ಕಳಸದ | Shridevi Kalasad

| Edited By: Ayesha Banu

Jan 08, 2021 | 8:28 AM

ಪ್ರೇಕ್ಷಕ ದೇವ ದೇವತೆಯರೇ,
ಪ್ರೇಕ್ಷಕ ಭಕ್ತ ಭಕ್ತೆಯರೇ
ಮ್ಯಾಲಿಂದ ಕೆಳಗೆ ಇಳ್ದು ಬಂದವರೇ
ಕೆಳಗಿಂದ ಮ್ಯಾಲೆ ಹೋಗೋಕೆ ಸಿದ್ಧರಾಗಿರೋ ಜನಗಳೇ
ಭೂಮಿ ಮ್ಯಾಲೆ ನೆಲಸಿರೋ ಧರೆಗೆ ದೊಡ್ದವರೇ
ನಾನೀಗ, ನಾಲ್ಗೆ ನುಡುಸ್ದಂಗೆ, ಮನ್ಸು ಆಡುಸ್ದಂಗೆ ಕತಿ ಹೇಳ್ತೀನಿ.
ಹೇಳೋಕಾದಷ್ಟು ಹೇಳ್ತೀನಿ, ಮರ್ತೊದ್ರೆ ಬೈಕೋಬ್ಯಾಡ್ರಿ ಮತ್ತ.
ಯಾಕಂದ್ರೆ ಇದು ಯೋಳೋ ಕತಿ, ಬರ್ದಿರೋ ಕತಿ ಒಟ್ಟಾ ಅಲ್ಲ ನೋಡ್ರಿ.
ಗಮನ ಇಟ್ಕೊಂಡು ಕೇಳ್ರಿ, ಗೆಪ್ತಿ ಇಟ್ಕೊಂಡು ಬಾಳ್ರಿ. ಇಲ್ಲ ಗಪ್ಪ ಸುಮ್ನೆ ಕುಂತು ಬಿಡ್ರಿ.
ಯಾರ ಕಥೆ ಅಂತೀರಾ?
ಅರಮನೆ, ಸಾಮ್ರಾಜ್ಯದ ಕಥೆ ಯೋಳಿ ಯೋಳಿ
ಅವರಿವರ ಕಥೆ ಕೇಳಿ ಕೇಳೀ ಸಾಕಾಗೋಗದೆ.
ನಮ್ದೆ ಕಥೆ ಯೋಳೋದು ವೈನಾಗಿರ್ತದೆ.  ಅಂದ್ರೆ ನಮ್ಮ ಹೆಣ್ಮಕ್ಕಳ ಕಥೇನಾ ಯೋಳೋದು ಕೇಳೋದು ಯಾವ ಕಾಲದಲ್ಲಿ ಮೊದ್ಲು ಮಾಡವ್ರೆ ಯೋಳಿ?
ಅದ್ಕೆ,
ಅಕಾಸದಿಂದ ಭೂಮಿ ತಂಕ ಅವಳ ಮಹಿಮೆ ಚಾಚ್ಕೊಂಡಿರೊ ಎಲ್ಲರ ಅವ್ವ ಎಲ್ಲವ್ವನ ಕತೆ ಯೋಳ್ತೀನಿ, ಏಳು ಕೊಳ್ಳದ ಹೆಣ್ಣು ಮಗಳ ಕಥೆ ಯೋಳ್ತೀನಿ
ನೀವೆಲ್ಲ ನಿಮ್ಮ ಗ್ಯಾನನಾ ಅತ್ತಾಗೆ ಇತ್ತಾಗೆ ಹೋಗಾಕೆ ಬುಡ್ದೆ ಯಲ್ಲವ್ವನ ಕಥೆ ಕೇಳಿ.

ಅದ್ಕೂ ಮುಂಚೆ ಎಲ್ರೂ ಸೇರಿ ಯಲ್ಲವ್ವನ ಪಾದಕ್ಕೆ ಒಂದಪ ಉಘೇ ಅನ್ನಿ.

ಬೆಂಗಳೂರಿನ ಬನಶಂಕರಿಯ ‘ಅವ್ವ’ ರಂಗಮಂದಿರದಲ್ಲಿ ಈಗಾಗಲೇ ಎರಡು ಪ್ರದರ್ಶನಗಳನ್ನು ಮುಗಿಸಿದ ‘ಉಧೋ ಉಧೋ ಎಲ್ಲವ್ವ’ ಏಕವ್ಯಕ್ತಿ ಪ್ರದರ್ಶನ ಇಂದು ಸಂಜೆ 6.30ಕ್ಕೆ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದಲ್ಲಿ ಮರುಪ್ರದರ್ಶನಗೊಳ್ಳಲಿದೆ. ಜನವರಿ 3 ರಿಂದ 18ರವರೆಗೆ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲುರಂಗಮಂದಿರದಲ್ಲಿ ‘ಯುವರಂಗ’ ಮತ್ತು ‘ಸವಿರಂಗ’ ಸಂಸ್ಥೆಗಳ ಆಶ್ರಯದಲ್ಲಿ ಆಯೋಜನೆಗೊಂಡಿರುವ ‘ಯುವ ರಂಗ ನಾಟಕೋತ್ಸವ 2021’ ಅಂಗವಾಗಿ ಈ ನಾಟಕ ನಡೆಯಲಿದೆ. ನಾಟಕಕಾರ ಬೇಲೂರು ರಘುನಂದನ ರಚಿಸಿರುವ ಈ ನಾಟಕವನ್ನು ಕೃಷ್ಣಮೂರ್ತಿ ಕವತ್ತಾರ ನಿರ್ದೇಶಿಸಿದ್ದಾರೆ. ಜಾನಪದ ಗಾಯಕಿ ಸವಿತಾ, ಈ ಏಕವ್ಯಕ್ತಿ ಪ್ರದರ್ಶನದ ಮೂಲಕ ರಂಗನಟಿಯಾಗಿ ಹೊಮ್ಮಿದ್ದು ವಿಶೇಷ.

ಕರ್ನಾಟಕದ ಶಕ್ತಿ ದೇವತೆಗಳ ಪೈಕಿ ಎಲ್ಲಮ್ಮನದು ಧಾರ್ಮಿಕ ವ್ಯಕ್ತಿತ್ವ. ಪುರಾಣ, ಮಹಾಕಾವ್ಯ ಮೊದಲುಗೊಂಡು ರೇಣುಕೆ-ಪರಶುರಾಮನ ಕಥೆ ಭಿನ್ನ ಭಿನ್ನ ನೆಲೆಗಳಲ್ಲಿ ನಿರೂಪಣೆಗೊಂಡಿದೆ. ಈ ಹಿನ್ನೆಲೆಯಲ್ಲಿ ಯಕ್ಷಗಾನ, ದೊಡ್ಡಾಟ, ಸಂಶೋಧನೆ, ನಾಟಕ, ಭಕ್ತಿಗೀತೆ, ಜನಪದಗೀತೆಗಳ ಧ್ವನಿಮುದ್ರಿಕೆಗಳ ಮೂಲಕ ಬಹುಮುಖಿಯಾಗಿ ಕನ್ನಡದ ಸಾಹಿತ್ಯ ಮತ್ತು ಸಾಂಸ್ಕೃತಿಕ ಜಗತ್ತನ್ನು ಈ ಕಥಾನಕ ಆವರಿಸಿದೆ.

ದೇಸಿಶಕ್ತಿಯನ್ನು ನಂಬಿ ಜನಪದವನ್ನೇ ತನ್ನ ದಾರಿ ಎಂದು ಮಹತ್ವಾಕಾಂಕ್ಷೆಯ ಕನಸುಗಳನ್ನು ಕಟ್ಟಿಕೊಂಡು ಹುಟ್ಟಿಕೊಂಡ ರಂಗತಂಡ ಸವಿರಂಗ. ಇದನ್ನು ಹುಟ್ಟುಹಾಕಿದವರು ಜಾನಪದ ಗಾಯನ ಕ್ಷೇತ್ರದಲ್ಲಿ ಸವಿತಕ್ಕ ಎಂದೇ ಖ್ಯಾತರಾಗಿರುವ ಸವಿತಾ. ಇವರು ‘ಸವಿತಕ್ಕನ ಅಳ್ಳಿ ಬ್ಯಾಂಡು’, ‘ಅಕ್ಕ ಸೌಂಡ್ಸ್’, ‘ಸವಿಗಾನ’ ಪರಿಕಲ್ಪನೆಯಲ್ಲಿ ಪ್ರಯೋಗ ಮಾಡಿದವರು. ‘ನಾನು ಇಪ್ಪತ್ತು ವರ್ಷಗಳ ಕಾಲ ಜಾನಪದ ಗಾಯಕಿಯಾಗಿದ್ದವಳು. ಅಪರೂಪಕ್ಕೆ ಕಲಾವಿದರ ಗೈರಿನಲ್ಲಿ ‘ಬಿಟ್ಟುಹೋದ ಜಾಗ’ ತುಂಬಿ ಅಭಿನಯಿಸಿದ್ದು ಬಿಟ್ಟರೆ ನನಗೂ ನಟನೆಯ ಸಾಮರ್ಥ್ಯ ಇದೆ ಎಂಬ ಅರಿವೇ ಇರಲಿಲ್ಲ. ಪೂರ್ಣಪ್ರಮಾಣದಲ್ಲಿ ಒಬ್ಬ ನಟಿಯಾಗಿ ರಂಗದ ಮೇಲೆ ಬಂದಿದ್ದು ಈ ಪ್ರದರ್ಶನದ ಮೂಲಕವೇ.’ ಎನ್ನುವ ಅವರು ಆಕಸ್ಮಿಕವಾಗಿ ಹೇಗೆ ಈ ಅವಕಾಶಕ್ಕೆ ತೆರೆದುಕೊಂಡರು ಎನ್ನುವುದನ್ನೂ ಹಂಚಿಕೊಳ್ಳುತ್ತಾರೆ.

‘ನವೆಂಬರಿನಲ್ಲಿ ಒಂದು ಕಾರ್ಯಕ್ರಮದಲ್ಲಿ ನಾನು ಹಾಡುವಾಗ ಕವತ್ತಾರ ಮತ್ತು ರಘುನಂದನ ಅವರೂ ಇದ್ದರು. ಒಂದು ವಾರದ ನಂತರ, ಜನಪದ ಹಾಡುಗಳನ್ನೇ ಒಳಗೊಂಡ ಏಕವ್ಯಕ್ತಿ ಪ್ರದರ್ಶನ ಮಾಡಬೇಕು ಎಂದುಕೊಂಡಿದ್ದೇವೆ ನೀವು ಅದರ ಭಾಗವಾಗಬೇಕು ಎಂದು ಅವರುಗಳು ಕೇಳಿಕೊಂಡರು. ಆಗ ಗಾಯಕಿಯಾಗಿ ನಾನು ನಟನೆಯನ್ನು ನಿಭಾಯಿಸಲು ಸಾಧ್ಯವೇ ಎನ್ನಿಸಿ ಸುಮ್ಮನುಳಿದೆ. ಆಗ ಕವತ್ತಾರ ಅವರು, ಅಭಿನಯಿಸಬೇಡಿ ಅನುಭವಿಸಿ ಎಂದು ಧೈರ್ಯ ತುಂಬಿದರು. ಧ್ವನಿ ಎನ್ನುವುದು ನನ್ನ ಕಂಫರ್ಟ್​ ಝೋನ್. ಹಾಗಾಗಿ ಈ ಅವಕಾಶ ನನ್ನ ಕಂಠಕ್ಕೆ ಸಿಕ್ಕ ಗೌರವ ಎನ್ನಿಸಿ ಈ ಬಗ್ಗೆ ಯೋಚಿಸಲಾರಂಭಿಸಿದೆ. ನಂತರ ಈ ನಾಟಕದ ರಚನೆಗಿಳಿಯುವ ಮುನ್ನ ರಘುನಂದನ ಅವರು ಸವದತ್ತಿಗೆ ಹೋಗಿ ಎಲ್ಲಮ್ಮನ ಕ್ಷೇತ್ರದರ್ಶನವನ್ನು ಮಾಡಿಕೊಂಡು ಬಂದ ವಿಷಯ ತಿಳಿಯಿತು. ನನ್ನೊಳಗಿನಿಂದ ಈ ಪಾತ್ರವನ್ನು ಹೊರಗೆಡಹಲು ಇವರೆಲ್ಲ ಎಷ್ಟು ಶ್ರದ್ಧೆ ವಹಿಸುತ್ತಿದ್ದಾರೆ ಎನ್ನಿಸಿತು. ಕೈಗೆ ಸ್ಕ್ರಿಪ್ಟ್​ ಬರುತ್ತಿದ್ದಂತೆ ಬೆಳಗ್ಗೆ ಅಡುಗೆ ಮಾಡಿಟ್ಟು ಇಡೀ ದಿನ ನಾಟಕದ ಅಭ್ಯಾಸದಲ್ಲಿ ತೊಡಗಿಕೊಳ್ಳುವುದು ನನ್ನ ದಿನಚರಿಯಾಯಿತು.’

‘ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಮೂಲಧ್ವನಿ ಏನಿದೆಯೋ ಆ ಮೂಲಕವೇ ಎಲ್ಲಾ ಹಾಡುಗಳು ಹೊಮ್ಮಬೇಕು ಎಂದಾಗ ಹೆಚ್ಚೆಚ್ಚು ಉತ್ಸಾಹ ಬರತೊಡಗಿತು. ಕೆಲವು ಹಾಡುಗಳಿಗೆ ಕವತ್ತಾರ ಅವರು ಏಳೆಂಟು ಸಲ ಸಂಗೀತ ಸಂಯೋಜನೆ ಮಾಡಿ ಒಂದೊಂದು ಹಾಡನ್ನೂ ಹತ್ತತ್ತು ಸಲ ಹಾಡಿಸಿದ್ದಿದೆ. ಅದು ಮನಸ್ಫೂರ್ತಿಯಾಗಿ ಹೊಮ್ಮದಿದ್ದಾಗ ಬೇರೆ ಸಂಯೋಜನೆ ಮಾಡಿದ್ದೂ ಇದೆ. ಇಪ್ಪತ್ತು ವರ್ಷಗಳಿಂದ ಹಾಡಿಕೊಂಡು ಬಂದವಳಿಗೆ ಹದಿನೆಂಟು ಪುಟಗಳ ಸ್ಕ್ರಿಪ್ಟ್​ಅನ್ನು ಒಂದೂ ಕಾಲು ಗಂಟೆಯ ತನಕ  ರಂಗದ ಮೇಲೆ ಒಪ್ಪಿಸುವುದು ದೊಡ್ಡ ಸವಾಲು ಅನ್ನಿಸಿತು. ಆದರೂ ಮನಸಿಟ್ಟು ತೊಡಗಿಕೊಂಡೆ. ತಿಂಗಳುಗಟ್ಟಲೆ ಸಾಗಿದ ಈ ತಾಲೀಮಿನಲ್ಲಿ ನನ್ನನ್ನು ನಾನು ಖಾಲೀ ಹಾಳೆಯಂತೆ ಭಾವಿಸಿಕೊಂಡೆ. ಒಂದೊಂದು ಕಲಿಕೆಯೂ ಹಾಳೆಯ ಮೇಲಿನ ಚುಕ್ಕೆಯಂತೆ ಭಾಸವಾಗಿ ಕೊನೆಗೊಂದು ಚೆಂದದ ಚಿತ್ರವಾಯಿತು. ಹೀಗೆ ಈ ಅನುಭವ ಮತ್ತು ನಾಟಕದಿಂದ ಪ್ರೇರಣೆಗೊಂಡ ನಾನೀಗ ಶಾಶ್ವತವಾಗಿ ರಂಗಭೂಮಿಯ ವಿದ್ಯಾರ್ಥಿನಿಯಾಗಿ ತೊಡಗಿಕೊಳ್ಳಲು ನಿರ್ಧರಿಸಿದ್ದೇನೆ. ಒಟ್ಟಾರೆಯಾಗಿ ನನಗನ್ನಿಸಿದ್ದು ಕಲೆ ಎನ್ನುವುದು ಅಂತರ್ಗತ. ’

ನಾಟಕಕಾರ ಬೇಲೂರು ರಘುನಂದನ, ನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ.

ನಾಟಕದ ರಚನೆಕಾರ ಬೇಲೂರು ರಘುನಂದನ, ‘ಈ ನಾಟಕದ ಎಲ್ಲವ್ವ ಜನಪದ ಮೂಲಗಳಿಂದ ಹೆಕ್ಕಿ ತೆಗೆದ ಎಲ್ಲೆರೆಲ್ಲರ ಅವ್ವ. ಈ ನಾಟಕ ಸಂಗೀತ ಪ್ರಧಾನವಾದ ಜಾನಪದೀಯ ಹಾಡು ಹಬ್ಬ. ಮಾತು ಹಾಡಾಗುವ, ಹಾಡೇ ಮಾತಾಗುವ ಬೆರಗು ಇದರ ವೈಶಿಷ್ಟ್ಯ. ಇಲ್ಲಿ ಎಲ್ಲವ್ವನ ಅಂತರಂಗದಿಂದ ಹೊಮ್ಮುವ ಪ್ರಶ್ನೆಗಳೆಲ್ಲವೂ ಲೋಕದ ಹೆಣ್ಣುಗಂಡುಗಳಿಗೆ ಸಂಬಂಧಿಸಿದವು. ನಾಟಕದೊಳಗೆ ಅದು ಕ್ರಮಿಸುವ ರೀತಿ ಪ್ರೇಕ್ಷಕರ ಆತ್ಮವಿಮರ್ಶೆಗೆ ದಾರಿ ಮಾಡಿಕೊಡುವಂಥದ್ದು. ಹಾಗಾಗಿ ಇದು ಈ ತನಕ ಎಲ್ಲವ್ವನ ಕುರಿತಾಗಿ ಜನಪ್ರಿಯಗೊಂಡ ಕಥನಗಳನ್ನು ಹೊರತುಪಡಿಸಿದ ಹುಡುಕಾಟದಲ್ಲಿ ಈ ನಾಟಕ ಅರಳಿದೆ. ಎಲ್ಲವ್ವನ ಬದುಕು ಮತ್ತು ಮಾನಸಿಕ ತೊಳಲಾಟಗಳೇ ನಾಟಕದ ಕೇಂದ್ರ ಶಕ್ತಿ’ ಎನ್ನುತ್ತಾರೆ.

ಪ್ರೇಕ್ಷಕ ಧರ್ಮ ಮತ್ತು ಸೃಜನಶೀಲತೆ ಎಂಬ ಕಲಾ ಮೀಮಾಂಸೆಯ ಮೂಲಕವೇ ತನ್ನೊಳಗಿನ ಕಲಾವಿದನನ್ನು ಕಂಡುಕೊಂಡು ಆ ಮೂಲಕ ಕನ್ನಡ ರಂಗಭೂಮಿಗೆ ಸಾಕಷ್ಟು ಹೊಸ ಕಲಾವಿದರನ್ನು ಪರಿಚಯಿಸುತ್ತಾ ಬಂದಿರುವ ರಂಗನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ, ‘ಎಲ್ಲವ್ವ ಅದ್ಭುತ ಶಕ್ತಿ ಇರುವಂಥ ಹೆಂಗಸು. ಈ ಮೂಲಕ ಜನರ ಮನಸ್ಸಿನಲ್ಲಿ ದೈವವಾಗಿ ನೆಲೆನಿಂತಾಕೆ. ಈ ಕಥನವನ್ನು ದೃಶ್ಯಕ್ಕೆ ತರುವಾಗ ಎಲ್ಲಾ ರಂಗಸಾಧ್ಯತೆಗಳನ್ನಿಟ್ಟುಕೊಂಡೇ ತಂದಿದ್ದೇನೆ. ಮೂವತ್ತು ಹಾಡುಗಳನ್ನು ಒಳಗೊಂಡ ಈ ನಾಟಕಕ್ಕೆ ನಾನು ಕಂಡಂಥ ದಕ್ಷಿಣ ಕನ್ನಡದ ಭೂತಾರಾಧನೆ, ಭಜನೆ, ಭೂತಕೋಲ ಈ ಎಲ್ಲ ಶಕ್ತಿಯನ್ನು ಕೇಂದ್ರೀಕರಿಸಿಕೊಂಡು ಅದರ ಮೂಲಕ ಸಂಗೀತವನ್ನು ಸಂಯೋಜನೆ ಮಾಡಿದ್ದೇನೆ. ಎಲ್ಲಾ ಜಾನಪದ ದೇವತೆಗಳ ಒಳಗೆ ಒಂದು ಸಾಮ್ಯತೆ ಇದೆ. ದೌರ್ಜನ್ಯ, ಅವಮಾನ, ಮಕ್ಕಳಿಂದ ದೂರವಾಗುವುದು, ಮಕ್ಕಳು ತಾಯಿಯಿಂದ ದೂರವಾಗುವಂಥದ್ದು ಹೀಗೆ. ಅಂದರೆ ಇಲ್ಲಿ ಸಂತೃಪ್ತಭಾವ ಬಹಳ ಕಡಿಮೆ. ಹಾಗಾಗಿ ಒಂದು ಹಂತದಲ್ಲಿ ಆರಾಧನೆ ಎನ್ನುವುದು ಸಾಮಾಜಿಕ ದೃಷ್ಟಿಯಿಂದ ಹೊರತು ವೈಯಕ್ತಿಕ ದೃಷ್ಟಿಯಿಂದ ಅಲ್ಲ ಎನ್ನಿಸುತ್ತದೆ. ಮೌಖಿಕ ಪರಂಪರೆಯ ಇರುವ ಈ ಕಥಾನಕವನ್ನು ನಮಗೆ ಸಿಕ್ಕ ಸಾಧ್ಯತೆಗಳಡಿ ಆರಾಧನಾ ರಂಗಭೂಮಿಯ ಚೌಕಟ್ಟಿನಲ್ಲಿ ನಿರ್ದೇಶಿಸುವ ಪ್ರಯತ್ನವನ್ನು ಮಾಡಿದ್ದೇನೆ’ ಎನ್ನುತ್ತಾರೆ.

ಸಂಜೆಹೊತ್ತಿಗೆ ಮನಸ್ಸು ಮಾಡಿದರೆ ನೀವೂ ಈ ಎಲ್ಲಮ್ಮನನ್ನು ತುಂಬಿಕೊಳ್ಳಬಹುದು.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada